ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ ಕಾಳ್ಗಿಚ್ಚು: ಮುಂದುವರಿದ ನಂದಿಸುವ ಕಾರ್ಯ

Published 28 ಏಪ್ರಿಲ್ 2024, 13:44 IST
Last Updated 28 ಏಪ್ರಿಲ್ 2024, 13:44 IST
ಅಕ್ಷರ ಗಾತ್ರ

ಡೆಹ್ರಾಡೂನ್‌: ಉತ್ತರಾಖಂಡದ ಅರಣ್ಯ ಪ್ರದೇಶಗಳಲ್ಲಿ ವ್ಯಾಪಿಸಿರುವ ಕಾಳ್ಗಿಚ್ಚನ್ನು ವಾಯುಪಡೆಯ ಹೆಲಿಕಾಪ್ಟರ್‌ ನೆರವಿನಿಂದ ನಂದಿಸುವ ಕಾರ್ಯಾಚರಣೆ ಎರಡನೇ ದಿನವಾದ ಭಾನುವಾರವೂ ಮುಂದುವರಿದಿದ್ದು, ಹಲವು ಪ್ರದೇಶಗಳಲ್ಲಿ ಬೆಂಕಿಯನ್ನು ನಂದಿಸಲಾಗಿದೆ. 

ನೈನಿತಾಲ್‌, ಹಲ್ದ್‌ವಾನಿ ಮತ್ತು ರಾಮನಗರ ಅರಣ್ಯ ವಿಭಾಗಗಳಲ್ಲಿ ಕಾಳ್ಗಿಚ್ಚು ತೀವ್ರವಾಗಿದ್ದು, ನಂದಿಸುವ ಕಾರ್ಯವೂ ಚುರುಕಿನಿಂದ ನಡೆಯುತ್ತಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರು ಶನಿವಾರ ರಾತ್ರಿ ಕುಮಾನ್‌ ಪ್ರದೇಶದಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಕಾರ್ಯಾಚರಣೆಗೆ ವಾಯುಪಡೆಯ ಹೆಲಿಕಾಪ್ಟರ್‌ ನಿಯೋಜಿಸಿದ ಬಳಿಕ ನೈನಿತಾಲ್‌ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಕಾಳ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿದೆ ಎಂದು ಅವರು ಹೇಳಿದ್ದಾರೆ.

ಭಾರತೀಯ ವಾಯುಪಡೆಯ ಎಂಐ–17 ಹೆಲಿಕಾಪ್ಟರ್‌ ಅನ್ನು ಬೆಂಕಿ ನಂದಿಸುವ ಕಾರ್ಯಕ್ಕೆ ಬಳಸಲಾಗುತ್ತಿದೆ. ಬೆಂಕಿ ವ್ಯಾಪಿಸಿರುವ ಪೈನ್ಸ್‌, ಭೂಮಿಯಾಧರ್, ನಾರಾಯಣ ನಗರ, ಭವಾಲಿ, ರಾಮಗಢ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ನೆರವಿನಿಂದ ನೀರು ಸಿಂಪಡಿಸಲಾಗುತ್ತಿದೆ. ಭೀಮ್‌ತಾಲ್ ಕೆರೆಯಿಂದ ಈ ನೀರನ್ನು ಹೆಲಿಕಾಪ್ಟರ್‌ ಸಂಗ್ರಹಿಸುತ್ತಿದೆ. ಒಂದು ಬಕೆಟ್‌ ಸುಮಾರು 5,000 ಲೀಟರ್‌ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ.

ರಾಜ್ಯದ ವಿವಿಧೆಡೆಯ ಅರಣ್ಯದಲ್ಲಿ ಕಾಳ್ಗಿಚ್ಚು ವ್ಯಾಪಿಸಿರುವ 31 ಪ್ರಕರಣಗಳು ಶುಕ್ರವಾರ ವರದಿಯಾಗಿದ್ದು, 33.34 ಹೆಕ್ಟರ್‌ ಅರಣ್ಯಭೂಮಿ ನಾಶವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT