ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯೊಳಗೆ ಮಹಿಳಾ ಮೀಸಲು ಜಾರಿಗೆ ಕಾಂಗ್ರೆಸ್ ಪಟ್ಟು: ಕೇಂದ್ರಕ್ಕೆ SC ನೋಟಿಸ್

Published 22 ಜನವರಿ 2024, 12:59 IST
Last Updated 22 ಜನವರಿ 2024, 12:59 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಯಲ್ಲಿ 3ನೇ ಒಂದು ಭಾಗವನ್ನು ಮಹಿಳೆಯರಿಗೆ ಮೀಸಲಿಡುವ ನಾರಿ ಶಕ್ತಿ ವಂದನಾ–2023 ಕಾಯ್ದೆಯನ್ನು ಚುನಾವಣೆಗೂ ಮೊದಲೇ ಜಾರಿಗೆ ತರಲು ಆದೇಶಿಸುವಂತೆ ಕೋರಿರುವ ಕಾಂಗ್ರೆಸ್ ಮುಖಂಡರ ಅರ್ಜಿಗೆ 2 ವಾರದೊಳಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸೋಮವಾರ ಸೂಚಿಸಿದೆ.

ನ್ಯಾ. ಸಂಜೀವ್ ಖನ್ನಾ ಹಾಗೂ ನ್ಯಾ. ದೀಪಂಕರ್ ದತ್ತಾ ಅವರಿದ್ದ ಪೀಠದ ಮುಂದೆ ವಾದ ಮಂಡಿಸಿದ ಕೇಂದ್ರ ಪರ ವಕೀಲ ಕನು ಅಗರ್ವಾಲ್ ಅವರು, ‘ಅರ್ಜಿಗೆ ಪ್ರತಿಕ್ರಿಯಿಸಲು ಕಾಲಾವಕಾಶ ಅಗತ್ಯ’ ಎಂದು ಕೋರಿದರು. ಅರ್ಜಿದಾರರಾದ ಜಯಾ ಠಾಕೂರ್ ಪರ ವಕೀಲ ವಿಕಾಸ್ ಸಿಂಗ್ ಅವರು, ‘ಸಾರ್ವತ್ರಿಕ ಚುನಾವಣೆಗೂ ಪೂರ್ವದಲ್ಲಿ ಕಾಯ್ದೆ ಜಾರಿಗೆ ತರುವಂತೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದರು.

ನ್ಯಾಯಾಲಯವು ನಿರ್ದೇಶನ ನೀಡಲು ಸಾಧ್ಯವಿಲ್ಲ. ಹೀಗಾಗಿ ಈ ಕುರಿತಂತೆ ಕೇಂದ್ರದ ಪ್ರತಿಕ್ರಿಯೆ ಬರುವವರೆಗೂ ಕಾಯುವಂತೆ ನ್ಯಾ. ಖನ್ನಾ ಹೇಳಿದರು.

ಇದೇ ವಿಷಯವಾಗಿ ಅರ್ಜಿ ಸಲ್ಲಿಸಲು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಪೀಠವನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, ಇದು ಹೊಸ ವಿಷಯವಾದ್ದರಿಂದ, ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರು ಇರುವ ಪೀಠದ ಎದುರು ಅರ್ಜಿ ಸಲ್ಲಿಸುವಂತೆ ಸೂಚಿಸಿದರು.

ಜ. 16ರಂದು ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಕೇಂದ್ರ ಪರ ವಕೀಲರು ಗೈರಾಗಿದ್ದರಿಂದ ಜ. 22ಕ್ಕೆ ವಿಚಾರಣೆ ಮುಂದೂಡಲಾಗಿತ್ತು. 

ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಬಹುಮತದೊಂದಿಗೆ ಮತ್ತು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕಾರಗೊಂಡಿತು. ಇದರ ಅನ್ವಯ ಮುಂದಿನ 15 ವರ್ಷಗಳವರೆಗೆ ಕಾಯ್ದೆ ಜಾರಿಯಲ್ಲಿರಲಿದೆ. ಇದನ್ನು ಅಗತ್ಯವಿದ್ದಲ್ಲಿ ಈ ಅವಧಿಯನ್ನು ವಿಸ್ತರಿಸುವ ಅಧಿಕಾರ ಸಂಸತ್ತಿಗೆ ಇದೆ.

ವಿರೋಧ ಪಕ್ಷಗಳು ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಗೆ ಒಳ ಮೀಸಲಾತಿ ನೀಡುವಂತೆ ಒತ್ತಾಯಿಸಿದರು. ಜತೆಗೆ ಹಿಇಂದುಳಿದ ವರ್ಗಗಳಿಗೂ ಮೀಸಲಾತಿ ವಿಸ್ತರಿಸುವಂತೆ ಒತ್ತಾಯಿಸಿದ್ದರು. ಮಾಹಿತಿ ಪ್ರಕಾರ ಲೋಕಸಭೆಯಲ್ಲಿ ಒಟ್ಟು ಮಹಿಳಾ ಸಂಸದರ ಸಂಖ್ಯೆ ಶೇ 15 ಮಾತ್ರ. ಹಲವು ರಾಜ್ಯಗಳ ವಿಧಾನಸಭೆಯಲ್ಲಿ ಈ ಸಂಖ್ಯೆ ಶೇ 10ಕ್ಕಿಂತಲೂ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT