ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ

Last Updated 19 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಣಜಿ: ಭಾರತದ 48ನೆಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಆತಿಥ್ಯಕ್ಕೆ ಗೋವಾ ರಾಜಧಾನಿ ಪಣಜಿ ಸನ್ನದ್ಧವಾಗಿದೆ. ಚಿತ್ರೋತ್ಸವದ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಪಣಜಿಯಲ್ಲಿ ನಡೆಯುತ್ತಿರುವ 14ನೆಯ ಚಿತ್ರೋತ್ಸವ ಇದು.

ಚಿತ್ರಗಳ ಪ್ರದರ್ಶನ ನಡೆಯುವ ಐನಾಕ್ಸ್‌ ಕಾಂಪ್ಲೆಕ್ಸ್‌, ಕಲಾ ಅಕಾಡೆಮಿ ಮತ್ತು ಚಿತ್ರೋತ್ಸವದ ಕೇಂದ್ರ ಸ್ಥಾನವಾದ ಗೋವಾ ಮೆಡಿಕಲ್‌ ಕಾಲೇಜಿನ ಹಳೆಯ ಕಟ್ಟಡಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಚಿತ್ರೋತ್ಸವದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳು ಪಣಜಿ ಹೊರವಲಯ ಗೋವಾ ವಿಶ್ವ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿವೆ. ಸೋಮವಾರ (ನ.20) ಸಂಜೆ 5 ಗಂಟೆಗೆ ಹಿಂದಿ ಚಿತ್ರರಂಗದ ಹಿರಿಯ ನಟ ಶಾರುಖ್‌ ಖಾನ್‌ ಚಿತ್ರೋತ್ಸವ ಉದ್ಘಾಟಿಸುವರು. ಸಮಾರಂಭದಲ್ಲಿ ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹ, ಕೇಂದ್ರ ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ, ಮುಖ್ಯಮಂತ್ರಿ ಮನೋಹರ ಪರೀಕರ್‌, ನಟ ಸಲ್ಮಾನ್‌ ಖಾನ್‌ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು.

ಸಮಾರಂಭದ ನಂತರ ಇರಾನ್‌ ದೇಶದ ಖ್ಯಾತ ನಿರ್ದೇಶಕ ಮಜೀದ್‌ ಮಜಿದಿ ನಿರ್ದೇಶನದ ಭಾರತೀಯ ಚಿತ್ರ  'ಬಿಯಾಂಡ್‌ ದ ಕ್ಲೌಡ್‌' ಉದ್ಘಾಟನಾ ಚಿತ್ರವಾಗಿ ಪ್ರದರ್ಶನಗೊಳ್ಳಲಿದೆ. ಕೆನಡಾ ಚಿತ್ರೋತ್ಸವದ ಫೋಕಸ್‌ ದೇಶವಾಗಿದ್ದು, ಆ ದೇಶದ ಕೆಲವು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಮೃತರಾದ ಭಾರತೀಯ ಚಿತ್ರರಂಗದ ಗಣ್ಯರಾದ ನಟ ಓಂ ಪುರಿ, ಅಸ್ಸಾಮಿ ಚಿತ್ರ ನಿರ್ದೇಶಕ ಅಬ್ದುಲ್‌ ಮಜೀದ್‌, ಹಿರಿಯ ನಟ ಟಾಮ್‌ ಆಲ್ಟರ್‌,  ಹಿಂದಿ ನಟಿ ರೀಮಾ ಲಾಗೂ, ತಮಿಳು ನಟಿ ಜಯಲಲಿತಾ, ಹಿಂದಿ ಚಿತ್ರ ನಿರ್ದೇಶಕ ಕುಂದನ್‌ ಶಾ, ತೆಲುಗು ನಿರ್ದೇಶಕ ದಾಸರಿ ನಾರಾಯಣರಾವ್‌, ಬೆಂಗಾಲಿ ಚಿತ್ರ ಛಾಯಾಗ್ರಾಹಕ ರಮಾನಂದ್‌ ಸೆನ್‌ಗುಪ್ತ ಅವರಿಗೆ ಚಿತ್ರೋತ್ಸವದಲ್ಲಿ ಗೌರವ ಸಲ್ಲಿಸಿ ಅವರ ಚಿತ್ರಗಳ ವಿಶೇಷ ಪ್ರರ್ದಶನ ಹಮ್ಮಿಕೊಂಡಿದೆ.

ಕೆನಡಾದ ಚಿತ್ರ ನಿರ್ದೇಶಕ ಅಟೋಮ್‌ ಇಗೋಯಾನ್‌  ಮತ್ತು ನಟ ಅಮಿತಾಬ್‌ ಬಚ್ಚನ್‌ ಅವರಿಗೆ ಅವರ ಜೀವಮಾನದ ಸಾಧನೆಗಾಗಿ ಭಾರತೀಯ ಚಲನ ಚಿತ್ರ ಶತಮಾನೋತ್ಸವ ಪ್ರಶಸ್ತಿಗಳನ್ನು ಈ ಚಿತ್ರೋತ್ಸವದಲ್ಲಿ ಪ್ರದಾನ ಮಾಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT