ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

127ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ 'ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ' ಗೋಮ್ಸ್‌

Published 3 ಆಗಸ್ಟ್ 2023, 8:57 IST
Last Updated 3 ಆಗಸ್ಟ್ 2023, 8:57 IST
ಅಕ್ಷರ ಗಾತ್ರ

ಬ್ರೆಜಿಲ್‌: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ನಂಬಲಾದ ಬ್ರೆಜಿಲ್‌ ಮೂಲದ ಜೋಸ್ ಪಾಲಿನೊ ಗೋಮ್ಸ್, 127ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ನ್ಯೂಯಾರ್ಕ್‌ ಪೋಸ್ಟ್‌ ವರದಿ ಮಾಡಿದೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಗೋಮ್ಸ್‌ ತಮ್ಮ ನಿವಾಸ ಪೆಡ್ರಾ ಬೊನಿಟಾದಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಬದುಕಿದ್ದರೆ ಇಂದು (ಆಗಸ್ಟ್‌ 4) ಅವರು 128ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಗೋಮ್ಸ್‌ ಅವರ ಮದುವೆಯ ಪ್ರಮಾಣ ಪತ್ರದ ಪ್ರಕಾರ, ಅವರು ಆಗಸ್ಟ್ 4, 1895 ಜನಿಸಿದ್ದರು. ತಮ್ಮ ಜೀವಿತಾವಧಿಯಲ್ಲಿ ಮಹಾಯುದ್ಧ ಮತ್ತು ಕೋವಿಡ್‌ ಎರಡನ್ನೂ ಕಣ್ಣಾರೆ ಕಂಡ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸರಳತೆಯೇ ಗೋಮ್ಸ್‌ ಜೀವನದ ಗುಟ್ಟು

ಗೋಮ್ಸ್ ಅವರ ಮೊಮ್ಮಗಳಾದ ಎಲಿಯನ್ ಫೆರೇರಾ ಪ್ರಕಾರ ಗೋಮ್ಸ್‌ ಒಬ್ಬ ಸರಳ ವ್ಯಕ್ತಿ. ಯಾವಾಗಲೂ ವಿನಮ್ರತೆಯಿಂದ ಇರುತ್ತಿದ್ದರು. ನೈಸರ್ಗಿಕವಾಗಿ ಸಿಗುತ್ತಿದ್ದ ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು. ಕೋಳಿ–ಕುರಿ ಸಾಕಾಣೆ ಅವರ ಇಷ್ಟದ ವೃತ್ತಿ. ಮದ್ಯ ಸೇವನೆ ಅಭ್ಯಾಸವಿದ್ದರೂ ಅದನ್ನು ಮಿತಿಯಲ್ಲಿಡುತ್ತಿದ್ದರು ಎಂದು ಹೇಳಿದ್ದಾರೆ.

ವಿಶ್ವದ ಹಿರಿಯ ವ್ಯಕ್ತಿ ಪಟ್ಟದಲ್ಲಿಯೇ ಗೊಂದಲ

ವಿಶ್ವದ ಹಿರಿಯ ವ್ಯಕ್ತಿ ಎಂಬ ಬಿರುದಿನಲ್ಲಿಯೇ ಭಾರಿ ಗೊಂದಲವಿದೆ. ಗೋಮ್ಸ್‌ ಅವರ ಕುಟುಂಬಕ್ಕೂ ಈ ಬಗ್ಗೆ ಸ್ಷಷ್ಟನೆ ಇಲ್ಲ. ಗಿನ್ನೆಸ್‌ ದಾಖಲೆ ಪ್ರಕಾರ 116 ವರ್ಷದ ಮಾರಿಯಾ ಬ್ರನ್ಯಾಸ್ ಮೊರೆರ್ 'ವಿಶ್ವದ ಹಿರಿಯ ಜೀವಂತ ವ್ಯಕ್ತಿ' ಎಂದು ಹೇಳಿದರೆ, ವಿಶ್ವದ ಅತ್ಯಂತ ಹಿರಿಯ ಪುರುಷ ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಮೋರಾ(114) ಎಂದು ತಿಳಿಸಿದೆ.

'ಈ ಬಗ್ಗೆ ನಮಗೂ ಗೊಂದಲವಿದೆ. ಅವರು 100 ವರ್ಷಕ್ಕಿಂತ ಮೇಲಿನವರು ಎನ್ನುವುದರಲ್ಲಿ ಅನುಮಾನವಿಲ್ಲ. ಅವರ ಮರಣ ಪ್ರಮಾಣ ಪತ್ರದಲ್ಲಿ ಎಷ್ಟು ವರ್ಷವೆಂದು ದಾಖಲಿಸಲಾಗುತ್ತದೆ ಎಂದು ನೋಡಬೇಕಿದೆ' ಎಂದು ಎಲಿಯನ್ ಫೆರೇರಾ ಸ್ಥಳೀಯ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT