ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಕಾಲಕ್ಕೆ ಕಾದಂಬರಿ ಪ್ರಕಾರವೇ ಶ್ರೇಷ್ಠ

ಸಾಹಿತ್ಯ ಸಂಗತ
Last Updated 5 ಜನವರಿ 2013, 19:59 IST
ಅಕ್ಷರ ಗಾತ್ರ

ಆತ್ಮೀಯರಿಗೆ `ನಾ ದಾ' ಎಂದೇ ಪರಿಚಿತರಾದ ಕವಿ, ಕಾದಂಬರಿಕಾರ, ಅನುವಾದಕ, ಅಂಕಣಕಾರ  ಡಾ. ನಾ. ದಾಮೋದರ ಶೆಟ್ಟಿ ಅವರು, ಸಾಹಿತ್ಯದ ಓದು ಹಾಗೂ ಒಡನಾಟ ಕುರಿತಂತೆ `ಸಾಹಿತ್ಯ ಪುರವಣಿ' ಕೇಳಿದ ಪ್ರಶ್ನೆಗಳಿಗೆ ನೀಡಿರುವ ಉತ್ತರಗಳು

*ಸಾಹಿತ್ಯ, ರಂಗಭೂಮಿ - ಹೀಗೆ ವಿವಿಧ ಕ್ಷೇತ್ರಗಳಲ್ಲಿ  ತೊಡಗಿಕೊಂಡಿರುವ ನಿಮಗೆ ಸಾಹಿತ್ಯದ ನಂಟು ಬೆಳೆದದ್ದು ಹೇಗೆ?
ಆರು ದಶಕದ ಹಿಂದಿನ ಮಾತು. ಹಳ್ಳಿ ಪರಿಸರದ ನೇಕಾರ ಕುಟುಂಬದಲ್ಲಿ ಜನಿಸಿದ ನನ್ನ ಸುತ್ತ ವಿದ್ಯಾವಂತರಿರಲಿಲ್ಲ. ನನ್ನ ಓರ್ವ ಹಿರಿಯ ಸಹೋದರ ಕುಂಬ್ಳೆ ಸುಂದರರಾವ್ ಅದಾಗಲೇ ಯಕ್ಷಗಾನ ವಲಯದಲ್ಲಿ ಹೆಸರುಮಾಡಿದ್ದರು. ಅವರ ಆಸಕ್ತಿ ನಿಮಿತ್ತವಾಗಿ ಮನೆಗೆ ದಿನಪತ್ರಿಕೆ ಬರುತ್ತಿತ್ತು. ಪುರಾಣ ಸಂಬಂಧವಾದ ಕೆಲವಾರು ಪುಸ್ತಕಗಳೂ ಬರುತ್ತಿದ್ದುವು.

ಕುಂಟೋಬಿಲ್ಲೆ, ಲಗೋರಿ, ಬಚ್ಚ, ಕುಟ್ಟಿದೊಣ್ಣೆ ಆಟಗಳೇ ನಮ್ಮ ರಜಾಕಾಲಕ್ಷೇಪಕ್ಕಿದ್ದ ಆಸ್ತಿ. ಅದು ಬಿಟ್ಟರೆ ಪುಸ್ತಕವಷ್ಟೇ ಗತಿ. ಊರಿಗೆ ಬರುತ್ತಿದ್ದ ಯಕ್ಷಗಾನ ಗಂಜಿಮೇಳಗಳ ಆಟವನ್ನು ರಾತ್ರಿಯಿಡೀ ನೋಡುತ್ತಿದ್ದೆವು. ಮರುದಿನ ನಾವು ಮಕ್ಕಳೇ ಸೇರಿ ಹಲಸಿನ ಎಲೆಯ ಕಿರೀಟ ಧರಿಸಿ, ಎಣ್ಣೆಯ ಖಾಲಿ ಡಬ್ಬಕ್ಕೆ ಚೆಂಡೆ ಬಾರಿಸಿ, ಆ ಆಟಗಳನ್ನು ಅನುಕರಿಸುತ್ತಿದ್ದೆವು. ಪರಿಣಾಮವಾಗಿ ಮನಸ್ಸಿನಲ್ಲಿ ನೆಲೆಗೊಳ್ಳುತ್ತಿದ್ದ ಪುರಾಣದ ಕತೆಗಳು, ಆಗಿನ ಒಂದಾಣೆ ಮಾಲೆ ಸಂಚಿಕೆಗಳಲ್ಲಿ ಪ್ರಕಟಗೊಳ್ಳತ್ತಿದ್ದ ಸರಳ ನಾಟಕಗಳು, ಅಣ್ಣ ಯಕ್ಷಗಾನದಲ್ಲಿ ಧರಿಸುತ್ತಿದ್ದ ಶ್ರಿಕೃಷ್ಣ, ಕರ್ಣ ಮೊದಲಾದ ಸಾತ್ವಿಕಪಾತ್ರಗಳು - ಇವೆಲ್ಲವುಗಳ ಪರಿಣಾಮವಾಗಿ ಸಾಹಿತ್ಯ ಹಾಗೂ ರಂಗಭೂಮಿಯತ್ತ  ಆಸಕ್ತಿ ಮೂಡಿತು. ಮೇಲಾಗಿ ನನ್ನ ಅಪ್ಪ ನಾಟಕದಲ್ಲಿ ಅಭಿನಯಿಸಿದ್ದನ್ನು ನೋಡಿದ ಮಸುಕು ನೆನಪು.

*ಯಾವ ಸಾಹಿತ್ಯ ಅಥವಾ ಸಾಹಿತ್ಯ ಕೃತಿಗಳು ನಿಮ್ಮ ಮೇಲೆ ತೀರಾ ಪ್ರಭಾವ ಬೀರಿವೆ? ಅದು ಅಥವಾ ಅವು ನಿಮ್ಮ ಬದುಕು, ಸಾಹಿತ್ಯವನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿದೆ ಅನ್ನಿಸಿದೆಯೆ?
ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಎನ್. ನರಸಿಂಹಯ್ಯ ಹಾಗೂ ಬಿ.ಕೆ ಸುಂದರರಾಜ್ ಅವರ ಪತ್ತೇದಾರಿ ಕಾದಂಬರಿಗಳನ್ನು ಓದುವ ಚಟಕ್ಕೆ ಬ್ದ್ದಿದೆ. ಓದುವ ಆಸಕ್ತಿಯನ್ನು ನನ್ನಲ್ಲಿ ಹುಟ್ಟುಹಾಕಿದ್ದೇ ಆ ಕಾದಂಬರಿಗಳು. ಅದೇ ಹೊತ್ತಿಗೆ `ಚಂದಮಾಮ' ಹಾಗೂ `ಬಾಲಮಿತ್ರ' ಸಂಚಿಕೆಗಳ ದಾಸನೂ ಆದೆ. ನಾನು ಕಾಲೇಜಿಗೆ ತಲುಪುವ ವೇಳೆಗಾಗಲೇ ನವ್ಯದ ಗಾಳಿ ಹರಡತೊಡಗಿತ್ತು. ಆ ` ಸ್ಕೂಲ್' ನ ಪರಿಪೂರ್ಣ ಅರಿವು ಸಾಧ್ಯವಾಗದಿದ್ದರೂ ತಿಳಿದುಕೊಳ್ಳುವ ಕುತೂಹಲವಿತ್ತು. ಕನ್ನಡ ಐಚ್ಛಿಕ ವಿದ್ಯಾರ್ಥಿ ನಾನು; ತಿಳಿದುಕೊಳ್ಳದಿದ್ದರೆ ಹೇಗೆ? ಅನಂತಮೂರ್ತಿ ಅವರ `ಸಂಸ್ಕಾರ' ಓದಿದೆ. ಆ ಜಾಡು ಹಿಡಿದು ಲಂಕೇಶರನ್ನೂ ಓದತೊಡಗಿದೆ. ಅಡಿಗರು ಕಷ್ಟವಾದರೂ ಗುರುಗಳಾದ ಕೆ.ವಿ. ತಿರುಮಲೇಶರು ಇಷ್ಟವಾದರು. ನವೋದಯದ ರಚನೆಗಳು ಬಹಿರಂಗ; ನವ್ಯದ್ದು ಅಂತರಂಗ ಎನ್ನಿಸಿತು. ಸಣ್ಣಕತೆ ಹಾಗೂ ಕವನಗಳು ಒಂದೊಂದಾಗಿ ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಳ್ಳತೊಡಗಿದುವು. ನನ್ನೊಳಗೆ ನನಗೇ ಅರಿಯದ ಹಾಗೆ ಪುಟ್ಟ ಸಾಹಿತಿಯೊಬ್ಬ ಹುಟ್ಟಿಕೊಂಡ. ನವ್ಯ ಸಾಹಿತ್ಯದ ಒಡನಾಟ ಗಟ್ಟಿಗೊಂಡದ್ದು ಹೀಗೆ.

*ನಿಮ್ಮ ಪ್ರಕಾರ ಅತ್ಯುತ್ತಮ ಸಾಹಿತ್ಯ ಪ್ರಕಾರ ಎಂದರೆ ಯಾವುದು?
ಆಧುನಿಕ ಕಾಲಘಟ್ಟದಲ್ಲಿ ಕಾದಂಬರಿಯು ಓದುಗರನ್ನು, ವಿಮರ್ಶಕರನ್ನು ಒಳಗೊಂಡ ಹಾಗೆ ಬೇರಾವ ಸಾಹಿತ್ಯ ಪ್ರಕಾರವೂ ಒಳಗೊಳ್ಳಲಿಲ್ಲ. ಒಳ್ಳೆಯ ಸಾಹಿತ್ಯ ಕೃತಿಯೊಂದು ಮಹಾಕಾವ್ಯವೇ ಆಗಬೇಕಾಗಿಲ್ಲ; ಅದು ಫಲಿತಗೊಳ್ಳುವುದು ಓದುಗನ ಮನಸ್ಸಿನಲ್ಲಿ. ಮುದ್ರೆ ಪಡೆಯುವುದು ವಿಮರ್ಶಕನ ದಾಖಲಾತಿಯಲ್ಲಿ.

ಕುವೆಂಪು ರಚಿಸಿದ ಎರಡು ಕಾದಂಬರಿಗಳು ಮಹತ್ತನ್ನೂ ಬೃಹತ್ತನ್ನೂ ಒಳಗೊಂಡು ಶ್ರೇಷ್ಠ ಕೃತಿಗಳೆನಿಸಿದುವು ಎಂದಮಾತ್ರಕ್ಕೆ ಎಲ್ಲರೂ ಬೃಹತ್ತಾಗಿ ಬರೆದು ಶಹಭಾಸ್‌ಗಿರಿ ಪಡೆಯಲೆತ್ನಿಸುವುದು ಅರ್ಥಹೀನ. ವಸ್ತು ಬಯಸುವಷ್ಟು ವಿಸ್ತಾರವನ್ನು ಕಾದಂಬರಿ ಪಡೆಯಬೇಕೇ ಹೊರತು ಹೇರಿಕೆಯ ಬೃಹತ್ತನ್ನಲ್ಲ. ಅದ್ಯಾಕೊ ಗೊತ್ತಿಲ್ಲ; ನಮ್ಮ ಶ್ರೇಷ್ಠ ಕಾದಂಬರಿಕಾರರೆಲ್ಲ ಬೃಹತ್ತಿನ ಕಡೆಗೆ ಚಲಿಸಿ ಓದುಗರನ್ನು ಒಂದೇ ಸಮನೆ ಕಳೆದುಕೊಳ್ಳತೊಡಗಿದ್ದಾರೆ. ಇಷ್ಟಾಗಿಯೂ ಈ ಕಾಲಕ್ಕೆ ಕಾದಂಬರಿ ಪ್ರಕಾರವೇ ಶ್ರೇಷ್ಠ.

*ಯಾವ ಸಾಹಿತ್ಯ ಕೃತಿ ನಿಮಗೆ ಇಷ್ಟ?
ಮಲಯಾಳದಲ್ಲಿ ಎಂ. ಮುಕುಂದನ್ ಬರೆದ  `ದೇವರ ವಿಕರಾಳಗಳು' ಎಂಬ ಕಾದಂಬರಿ ನಾನು ನನ್ನ ಜೀವಿತಾವಧಿಯಲ್ಲಿ ಓದಿದ ಅದ್ಭುತ ಕಾದಂಬರಿ. ಮೂಲದ  `ದೈವತ್ತಿನ್ಡೆ ವಿಕೃತಿಗಳ್'  ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ವಿಜೇತ ಕೃತಿ. ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಅವಕಾಶ ನನಗೆ ಸಿಕ್ಕಿತ್ತು. ಶಿವರಾಮ ಕಾರಂತ, ಕುವೆಂಪು, ಚಿತ್ತಾಲ, ಕಂಬಾರ, ಲಂಕೇಶ, ಅನಂತಮೂರ್ತಿಯಾದಿಗಳಿಗಿಂತ ನನ್ನನ್ನು ಇಂದಿನವರೆಗೆ ಹಿಡಿದಿಟ್ಟ ಕಾದಂಬರಿಯೆಂದರೆ `ದೇವರ ವಿಕರಾಳಗಳೆ'. ನೈಜತೆಯನ್ನು ಕಾಲ್ಪನಿಕತೆಯೊಂದಿಗೆ ಮಿಳಿತಗೊಳಿಸಿ ರಚಿಸಿದ ಈ ಕಾದಂಬರಿಯಲ್ಲಿ ಹಳ್ಳಿಯ ದಟ್ಟ ಬದುಕಿದೆ, ಕಮ್ಯೂನಿಸಂನ ಮುಂದುವರಿದ ಮುಖವಿದೆ, ದಿಢೀರನೆ ಬಂದೊದಗಿದ ವಸಾಹತೋತ್ತರ ಬದುಕಿನ ಕಾರ್ಪಣ್ಯವಿದೆ. ಏನಿದೆ ಮತ್ತು ಏನಿಲ್ಲ!

*ಈಗ ಏನನ್ನು ಓದುತ್ತಿದ್ದೀರಿ? ಬರೆಯುತ್ತಿದ್ದೀರಿ?
ಇನ್ಯಾವುದೇ ಕೆಲಸದ ಜಂಜಡವಿಲ್ಲದೆ ಓದಬೇಕೆಂಬ ಆಸೆ ಈಡೇರುವುದು ಬಲು ಕಷ್ಟ. ಈಗ ಹೆಚ್ಚಾಗಿ ಓದುವುದು ಯಾವುದೋ ವಿಚಾರಣ ಸಂಕಿರಣಕ್ಕೆ ಪತ್ರಿಕೆ ಸಿದ್ಧತೆ ಮಾಡುವ ಸಂದರ್ಭದಲ್ಲಿ, ಮುನ್ನುಡಿ ಅಥವಾ ಬೆನ್ನುಡಿ ಬರೆಯುವ ಸಂದರ್ಭದಲ್ಲಿ.

ಇತ್ತೀಚೆಗೆ ಓದಿದ ಒಂದು ಉತ್ತಮ ಕಾದಂಬರಿ ಬೊಳುವಾರರ  `ಸ್ವಾತಂತ್ರ್ಯದ ಓಟ'.  ಓದಿಸಿಕೊಂಡು ಹೋಗುವ ಅಪಾರ ಶಕ್ತಿ ಉಳ್ಳ ಕಾದಂಬರಿ. ಒಂದೇ ಒಂದು ಆಕ್ಷೇಪವೆಂದರೆ ಅದನ್ನು ಓದಿಮುಗಿಸಲು ಇಡಿಯಾಗಿ ಒಂದು ವಾರ ತೆಗೆದುಕೊಂಡೆ. ಅದನ್ನು ಬಿಡಿಬಿಡಿ ಕಾದಂಬರಿಗಳಾಗಿ ಬರೆಯುತ್ತಿದ್ದರೆ ಪ್ರವಾಸದ ಸಂದರ್ಭದಲ್ಲಿ, ಆಸ್ಪತ್ರೆಯಲ್ಲಿ ಟೋಕನ್ ತೆಗೆದು ಕುಳಿತಿದ್ದಾಗ - ಓದಬಹುದಾಗಿತ್ತು. ಸಮಯದ ಸದುಪಯೋಗವೂ ಆಗುತ್ತಿತ್ತು.

ಇನ್ನು ನನ್ನ ಬರವಣಿಗೆ: `ಸರದಿ'  ನನ್ನ ಈ ಹಿಂದಿನ ಕಾದಂಬರಿ. ಅದರ ಮುಂದುವರಿಕೆಯಂತೆ ತೋರುವ, ಆದರೆ ಭಿನ್ನ ಕಥಾಪಾತ್ರಗಳಿಂದ ಕೂಡಿದ, ಸ್ತ್ರೀ ಸಂವೇದನೆಯನ್ನೊಳಗೊಂಡ ಕಾದಂಬರಿಯೊಂದು ಸಿದ್ಧಗೊಳ್ಳುತ್ತಲಿದೆ. ಈ ನಡುವೆ ಮಲಯಾಳದ ಯು.ಎ. ಕಾದರ್‌ರ ಪ್ರಶಸ್ತಿ ಪುರಸ್ಕೃತ  `ತೃಕ್ಕೊಟ್ಟೂರು ನಾವೆಲ್ಲಗಳ'ನ್ನು ಕೇಂದ್ರ ಸಾಹಿತ್ಯ ಅಕಾಡೆಮಿಗೆ ಅನುವಾದಿಸಿ ಕೊಟ್ಟೆ. ಡಿ.ಕೆ. ಚೌಟರ  `ಮೂರು ಹೆಜ್ಜೆ ಮೂರುಲೋಕ'(ತುಳು ಮೂಲ), ಜಿ. ಶಂಕರಪಿಳ್ಳೆ ಅವರ `ಹತ್ತು ಮಕ್ಕಳ ನಾಟಕಗಳು' ಕನ್ನಡಕ್ಕೆ ಅನುವಾದಿಸಿ ಪ್ರಕಟಣೆಗೆ ಸಿದ್ಧಗೊಳಿಸಿದ್ದೇನೆ. ವರ್ಷಗಳಿಂದ ಬರೆಯದೆ ಇದ್ದ ಸಣ್ಣ ಕಥಾ ಪ್ರಕಾರದ ಕೃಷಿ ಮತ್ತೆ ಪ್ರಾರಂಭವಾಗಿದೆ.

*ವಿಮರ್ಶಕರ ಉತ್ಸಾಹದಿಂದ ಕೆಲವು ಪುಸ್ತಕಗಳು ಹೆಚ್ಚಿನ ಮನ್ನಣೆ ಪಡೆಯುತ್ತಿವೆ ಅನ್ನಿಸುತ್ತಿದೆಯೆ? ಹಾಗೆ ಮನ್ನಣೆ ಪಡೆಯದೆ ಹಿನ್ನೆಲೆಗೆ ಸರಿದ ಯಾವುದಾದರೂ ಪುಸ್ತಕದ ಬಗ್ಗೆ ಹೇಳಲು ಸಾಧ್ಯವೆ?
ಎಷ್ಟೋ ವೇಳೆ ಜನಪ್ರಿಯತೆಯ ಮಾನದಂಡ ಯಾವುದು ಎಂಬುದೇ ಅರಿವಿಗೆ ಬರುವುದಿಲ್ಲ. ಲಘು ಧಾಟಿಯ ಬರವಣಿಗೆಗಳು ಜನರ ಕೈಸೇರುವ ಹಾಗೆ ಗಂಭೀರ ಬರವಣಿಗೆ ಕೈಸೇರುವುದಿಲ್ಲ. ಸೇರಿದರೂ ಶೋಕೇಸಿನ ಪಾಲಾಗುತ್ತದೆ. ಆದರೆ ವಿಮರ್ಶಕರ ಮೂಲಕವೇ ಒಂದು ಕೃತಿ ಗೆಲ್ಲುತ್ತದೆ ಎಂದು ತೀರ್ಮಾನಿಸುವುದಕ್ಕೆ ಬರುವುದಿಲ್ಲ. ಕಾಸರವಳ್ಳಿಯವರ ಚಲನಚಿತ್ರ ಪ್ರೇಕ್ಷಕರನ್ನು ತಲುಪಲಿಲ್ಲ, ವಿಮರ್ಶಕರು ಮೆಚ್ಚಿದ್ದಾರೆ - ಎಂದ ಮಾತ್ರಕ್ಕೆ ಅದು ಶ್ರೇಷ್ಠವಲ್ಲ ಎನ್ನಲಾಗದು. ಅಂತಿಮ ತೀರ್ಪು ಪ್ರೇಕ್ಷಕನದ್ದೇ ಆದರೂ ಇಲ್ಲಿ ಅದು ಹುಸಿಯಾಗುತ್ತದೆ.

ಮನ್ನಣೆ ಎನ್ನುವ ಮಾತನ್ನು ವಿಶ್ಲೇಷಿಸುವುದು ಹೇಗೆ? ಒಂದು ಕೃತಿಯನ್ನು ಶ್ರೇಷ್ಠ ಎನ್ನುವುದು ಯಾವಾಗ? ಯಾವಾತನ ಕೃತಿ ಜನಸಾಮಾನ್ಯರ ಮಟ್ಟಕ್ಕೆ ಏರುವುದು ಸಾಧ್ಯವಾಗುತ್ತದೋ ಆತನ ಕೃತಿಯನ್ನು ಶ್ರೇಷ್ಠ ಎನ್ನಬಹುದು. ಆದರೆ ಕಾರ್ನಾಡರ ನಾಟಕಗಳು ಜನಸಾಮಾನ್ಯರನ್ನು ತಲುಪುತ್ತಿವೆಯೆ? ಅನಂತಮೂರ್ತಿಯವರ ಕಾದಂಬರಿಗಳು? ಅಡಿಗರ ಕವನ?- ಹೀಗಾಗಿ ಈ ಪ್ರಶ್ನೆಯನ್ನು ಇಲ್ಲಿಗೆ ಬಿಟ್ಟುಬಿಡೋಣ.

*ಅಧ್ಯಾಪಕರಾಗಿಯೂ ಕೆಲಸಮಾಡಿದವರು ನೀವು. ಕಲಿಸುವುದಕ್ಕಾಗಿ ಅಗತ್ಯವಾದ ಅಕಾಡೆಮಿಕ್ ಓದು ಹಾಗೂ ಸ್ವಂತ ಖುಷಿಯ ಓದನ್ನು ಹೇಗೆ ನೋಡುತ್ತೀರಿ?
ಪಾಠಾಧಾರಿತ ಪಠ್ಯಕ್ರಮದಲ್ಲಿ ಹೊಸತನವನ್ನು  ಹುಡುಕಿಕೊಂಡು ಹೋಗುವ ನಡೆಯೊಂದಿದೆ. ಪ್ರತಿ ಬಾರಿಯೂ ಹೇಳಿದ್ದನ್ನೇ ಹೇಳಲಾಗದು. ತರಗತಿಯಲ್ಲಿ ಕುತೂಹಲದಾಯಕತೆಯನ್ನು ಬಯಸುವ ವಿದ್ಯಾರ್ಥಿಗಳಿದ್ದರೆ ಅವರ ಕುತೂಹಲಕ್ಕೆ ತಣ್ಣೀರೆರೆಚುವ ಪರಿಸ್ಥಿತಿ ತಂದಿಡಕೂಡದು. ಹಾಗಾದಾಗ ಅಧ್ಯಾಪಕ ಸೋಲುತ್ತಾನೆ. ಈ ಪ್ರಜ್ಞೆಯೇ ಒಳ್ಳೆಯ ಅಧ್ಯಾಪಕನನ್ನು ಸೃಷ್ಟಿಸುವುದು.

ಇನ್ನು ಸ್ವಂತ ಖುಷಿ.. ಅದು ವೈಯಕ್ತಿಕ ವಿಚಾರ. ಖುಷಿ  ಸಿಕ್ಕಿಯೇ ಬಿಡುತ್ತದೆ ಎಂದು ಯಾರೂ ಪುಸ್ತಕವನ್ನು ಓದುವುದಿಲ್ಲ. ಓದುವಾಗ ಖುಷಿ ಸಿಕ್ಕರೆ ಒಳ್ಳೆಯದು. ಸಿಗದಿದ್ದರೆ ಅದೂ ಒಳ್ಳೆಯದೆ. ಓದಿಯೇ ಗೊತ್ತಾಗಬೇಕು; ಯಾವುದು ಓದಬೇಕಾದದ್ದು, ಯಾವುದು ಓದಬಾರದ್ದು ಎಂಬುದು. ಒಂದೆಂದರೆ ಇಲ್ಲಿ ಆಯ್ಕೆಗೆ ಅವಕಾಶವಿದೆ. ತರಗತಿಯಲ್ಲಾದರೆ ಸಿಲೆಬಸ್‌ಗೆ ಬದ್ಧರಾಗಲೇಬೇಕು.

*ವಿವಿಧ ಮಾಧ್ಯಮಗಳ ಸಂಗಮದ ಸದ್ಯದ ಸಂದರ್ಭದಲ್ಲಿ  ಸಾಹಿತ್ಯದ ಓದಿನ ವಾತಾವರಣ ಕುರಿತಂತೆ ನಿಮ್ಮ ಅನಿಸಿಕೆ.
ಸಾಹಿತ್ಯದ ಓದಿಗೆ ಸಹಸ್ರಮಾನಗಳ ಇತಿಹಾಸವಿದೆ. ನಾಟಕದ ಕುರಿತೂ ಇದೇ ಮಾತನ್ನು ನಾವು ಹೇಳುತ್ತೇವೆ. ಇತರ ಮಾಧ್ಯಮಗಳಲ್ಲಿ ಹೆಚ್ಚಿನವು ಕಳೆದ ಐದಾರು ದಶಕಗಳಿಂದೀಚೆಗೆ ಜಾರಿಗೆ ಬಂದವುಗಳು. ಇಷ್ಟುಕಾಲ ಸಾಹಿತ್ಯ ಉಳಿದುಕೊಂಡು ಬಂದದ್ದು ಹೌದಾಗಿದ್ದರೆ ಇನ್ನೂ ಉಳಿಯುತ್ತದೆ. ತನ್ನಷ್ಟಕ್ಕೆ ತಾನೆ ಬದುಕುವ ಶಕ್ತಿಯುಳ್ಳ ಯಾವುದಾದರೂ ಸರಿಯೆ; ಅವು ಉಳಿದೇ ಉಳಿಯುತ್ತವೆ. ಏರುಪೇರುಗಳು ಸ್ವಾಭಾವಿಕ. ಕೃತಕವೆನ್ನಿಸುವವುಗಳೆಲ್ಲ  ಕ್ಷಣಿಕ ಆಕರ್ಷಣೆಯಿಂದ ಕೂಡಿರುತ್ತವೆ. ಹೊಸ ಮಾಧ್ಯಮಗಳಲ್ಲಿ ಹಳತು ಸಾಯುವುದು, ಹೊಸತು ಹುಟ್ಟುವುದು ಅಥವಾ ಹಳತರ ಮುಂದುವರಿದ ರೂಪ ಅಸ್ತಿತ್ವಕ್ಕೆ ಬಂದು ಹಳತನ್ನು ಹಿಂದಕ್ಕೆ ತಳ್ಳುವುದು ಸರ್ವ ಸಾಮಾನ್ಯ. ಸಾಹಿತ್ಯ ಹಾಗಲ್ಲ; ಅಂದಿನ ಪಂಪರನ್ನರು ಇಂದಿನ ಮರು ಓದಿಗೂ ಸಲ್ಲುತ್ತಾರೆ, ಮುಂದೆಯೂ ಅಷ್ಟೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT