ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ವರ್ಥ ನಾಮ ‘ಸ್ನೇಹ ಸಂಗಮ’

Last Updated 14 ಜನವರಿ 2014, 19:30 IST
ಅಕ್ಷರ ಗಾತ್ರ

ಮೂವತ್ತೆಂಟು ವರ್ಷಗಳ ಹಿಂದೆ, ಬೆಂಗಳೂರಿನಲ್ಲೊಂದು ಮನೆ ಮಾಡಬೇಕೆಂದು ತೀರ್ಮಾನಿಸಿದ ನನ್ನ ಪತಿ ಹಾಗೂ ಅವರ ಗೆಳೆಯ ಚಿಕ್ಕಮಗಳೂರಿನಲ್ಲಿ ಒಟ್ಟಿಗೆ ನಡೆಸು ತ್ತಿದ್ದ ಮರದ ವ್ಯಾಪಾರವನ್ನು, ಬೆಂಗಳೂರಿಗೂ ವಿಸ್ತರಿಸಿಕೊಂಡು, ನಂತರ ಎರಡು ಮನೆಗಳನ್ನು ನಿರ್ಮಿಸಿ ಬೆಂಗಳೂರಿಗೆ ಸಂಸಾರ ಸಮೇತ ಬರಲು ತೀರ್ಮಾನಿಸಿದರು.

ಇಬ್ಬರ ಸಂಸಾರಕ್ಕೂ ಸೂಕ್ತವಾದ ರೀತಿಯಲ್ಲಿಯೇ ಒಂದೇ ತರಹದ (ಅವಳಿ ಮಕ್ಕಳ ಹಾಗೆ) ಎರಡು ಮನೆಗಳು ನಿರ್ಮಾಣಗೊಂಡವು. ಯಾವುದರಲ್ಲೂ  ಸೂಜಿಮೊನೆಯಷ್ಟೂ ವ್ಯತ್ಯಾಸವಿಲ್ಲದಂತೆ ಎರಡೂ ಕಟ್ಟಡಗಳ ಕೆಲಸವೂ ಸುಸೂತ್ರವಾಗಿ ಮುಗಿಯಿತು. ಇನ್ನೇನಿದ್ದರೂ ಗೃಹ ಪ್ರವೇಶ ಮತ್ತು ಮನೆಗೆ ಹೆಸರಿಡುವ ಸಮಯ.

ನಮ್ಮ ವ್ಯಾಪಾರದ ಪಾಲುದಾರರ ಹಿರಿಯ ಮಗ ಬಿ.ಸೋಮಶೇಖರ ಅವರು ಮೈಸೂರಿನ ಕಾಲೇ ಜೊಂದರಲ್ಲಿ, ಕನ್ನಡದ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಮನೆಗೆ ಹೆಸರಿಡುವ ವೇಳೆ ನಮ್ಮೆಲ್ಲರೊಡನೆ ಅವರು ಚರ್ಚಿಸಿದರು.ಆಗ ಅವರು ಹೇಳಿದ್ದೇನೆಂದರೆ ‘ಈ ಎರಡೂ ಮನೆಗಳಲ್ಲಿ ನಿಮ್ಮಿಬ್ಬರ ಸ್ನೇಹವೂ ಸಂಗಮವಾಗಿರಲಿ. ಬಹಳ ವರ್ಷಗಳಿಂದ ಜತೆಯಾಗಿಯೇ ವ್ಯಾಪಾರ ಮಾಡುತ್ತಾ ಬಂದಿದ್ದೀರಿ. ಯಾವ ವಿಚಾರಕ್ಕೂ ಮನ ಸ್ತಾಪ ಬಂದಿಲ್ಲ, ಸ್ನೇಹದಿಂದಲೇ ವಹಿವಾಟು ಸಾಗು ತ್ತಿದೆ. ಇದು ಹೇಗೆ ಹೊಂದಾಣಿಕೆಯಾಗುತ್ತಿದೆಯೋ ದೇವರೆ ಬಲ್ಲಾ. ನೀವಿಬ್ಬರೂ ಬೇರೆ ಬೇರೆ ಮತ ದವರು. ಜಾತಿ ಎಂಬುದು ಕೂಡ ನಿಮ್ಮಿಬ್ಬರ ಸ್ನೇಹ, ವ್ಯವಹಾರಕ್ಕೆ ಒಂದು ದಿನವೂ ಅಡ್ಡಿ ಮಾಡಿಲ್ಲ. ಆದ್ದರಿಂದ ನಿಮ್ಮಿಬ್ಬರ ಸ್ನೇಹದ ಕುರುಹಾಗಿ ಈ  ಮನೆ ‘ಸ್ನೇಹ ಸಂಗಮ’ ಎಂದೇ ಹೆಸರಾಗಿರಲಿ’ ಎಂದು ಸಲಹೆ ನೀಡಿದರು.

ಇತ್ತ ನನ್ನ ಅತ್ತೆ ಮತ್ತು ಮಾವ ಬಹಳ ಮಡಿ ವಂತರು. ಸದಾ ಪೂಜೆ, ಪುನಸ್ಕಾರ, ವ್ರತಗಳಲ್ಲಿ ನಿರತರಾಗಿರುವಂತಹವರು. ಹಾಗಾಗಿ, ದೇವರ ಹೆಸರು ಅದರಲ್ಲೂ ಮನೆ ದೇವರಾದ ಶ್ರೀಕಂಠೇಶ್ವರನ ಹೆಸರಿಡುವಂತೆ ಸೂಚಿಸಲು ಅವರು ಆಲೋ ಚಿಸಿದ್ದರು.
ಆದರೆ ಎರಡೂ ಮನೆಗಳಿಗೂ ಸ್ನೇಹಕ್ಕೆ ಅನ್ವರ್ಥ ವಾಗುವಂತೆ ‘ಒಂದೇ ಹೆಸರು’ ಇಡುವುದೆಂದು ತೀರ್ಮಾನವಾಗಿದೆ ಎಂದಾಗ ಹಿರಿಯರಿಬ್ಬರೂ ‘ಹಾಗೆ ಆಗಲಿ’ ಎಂದು ಹೇಳಿ ಶುಭ ಹಾರೈಸಿದರು.

ಸ್ನೇಹಿತರಿಬ್ಬರ ಮನೆಗಳ ಆಕಾರ, ಬಣ್ಣ, ವಿನ್ಯಾಸ ವಷ್ಟೇ ಅಲ್ಲ, ಹೆಸರೂ ಒಂದೇ ಬಗೆಯದಾಯಿತು. ಅಷ್ಟೇ ಅಲ್ಲ, ಎರಡೂ ಮನೆಗಳ ಮುಂದಿನ ಕೈ ತೋಟ ದಲ್ಲೂ ಒಂದೇ ತರಹದ ಗಿಡಗಳು ನಳನಳಿಸ ಲಾರಂಭಿಸಿದವು.

ಗೃಹ ಪ್ರವೇಶ ಸಮಾರಂಭಕ್ಕೆ ಬಂದಿದ್ದ ಬಂಧು ಮಿತ್ರರೆಲ್ಲರಿಗೂ ಎರಡೂ ಮನೆಗಳತ್ತ ಕುತೂಹಲದ ನೋಟ. ಅವರೆಲ್ಲರಿಗೂ ‘ಸ್ನೇಹ ಸಂಗಮ’ ಎಂಬ ಮನೆಗಳ ಹೆಸರಿನ ಅರ್ಥವನ್ನು ತಿಳಿಸಿಕೊಡುವುದಂತೂ ನಮಗೆಲ್ಲರಿಗೂ ಬಹಳ ಸಂತಸ ತರುವ ಕೆಲಸವೇ ಆಗಿತ್ತು.
ನಿಜಕ್ಕೂ ಅಂದು ಶುಭಗಳಿಗೆಯಲ್ಲಿಟ್ಟ ಆ ಹೆಸರಿನ ಅರ್ಥದಂತೆಯೇ ಇಂದಿಗೂ ಕೂಡ ಇಬ್ಬರ ಸ್ನೇಹವೂ ಹಾಗೆ ಗಟ್ಟಿಯಾಗಿದೆ. ಎರಡೂ ಕುಟುಂಬಗಳ ಮೈತ್ರಿ ಬಂಧವೂ ಮುಂದುವರಿದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT