ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ತನ್ನನ್ನು ನಂಬುವಂತೆ ಕೋರಿದ ಸರ್ಕಾರ!

ಚುನಾವಣಾ ಬಾಂಡ್ ವ್ಯವಸ್ಥೆಯು ಭ್ರಷ್ಟಾಚಾರವನ್ನು ಕಾನೂನುಬದ್ಧವಾಗಿಸುತ್ತದೆ
Published 17 ನವೆಂಬರ್ 2023, 20:24 IST
Last Updated 17 ನವೆಂಬರ್ 2023, 20:24 IST
ಅಕ್ಷರ ಗಾತ್ರ

ಚುನಾವಣಾ ಬಾಂಡ್‌ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2018ರ ಜನವರಿಯಲ್ಲಿ ಜಾರಿಗೆ ತಂದರು. ಇದಕ್ಕಾಗಿ ಕೆಲವು ಕಾನೂನುಗಳನ್ನು ರೂಪಿಸಲಾಯಿತು. ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ ರಾಜ್ಯಸಭೆಯಲ್ಲಿ ಆಗ ಬಹುಮತ ಇಲ್ಲವಾಗಿದ್ದ ಕಾರಣ, ರಾಜ್ಯಸಭೆಯ ಅನುಮೋದನೆಯ ಅಗತ್ಯವನ್ನು ತಪ್ಪಿಸಲು ಇವನ್ನು ‘ಹಣಕಾಸು ಮಸೂದೆ’ಗಳು ಎಂದು ಕರೆಯಲಾಯಿತು. ಈ ಯೋಜನೆಯ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ.

ಈ ಯೋಜನೆಯ ಅಡಿಯಲ್ಲಿ ಯಾವುದೇ ವ್ಯಕ್ತಿ ಯಾವುದೇ ಪ್ರಮುಖ ಪಕ್ಷಕ್ಕೆ ₹1,000ಕ್ಕಿಂತ ಹೆಚ್ಚಿನ ದೇಣಿಗೆ ನೀಡಬಹುದು. ಪಕ್ಷವು ದೇಣಿಗೆ ನೀಡಿದವನ ಹೆಸರನ್ನು, ದೇಣಿಗೆ ನೀಡಿದವರು ಕೂಡ ತಾವು ದೇಣಿಗೆ ನೀಡಿದ್ದು ಯಾರಿಗೆ ಎಂಬುದನ್ನು ಬಹಿರಂಗಪಡಿಸಬೇಕಿಲ್ಲ. ದೇಶದ ಯಾವುದೇ ಪ್ರಮುಖ ಪಕ್ಷಕ್ಕೆ ಚುನಾವಣಾ ಬಾಂಡ್ ಮೂಲಕ ಎಷ್ಟು ಬೇಕಿದ್ದರೂ ದೇಣಿಗೆ ನೀಡಬಹುದು.

ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಅನರ್ಹ ವ್ಯಕ್ತಿಯೊಬ್ಬರಿಗೆ ದೊಡ್ಡ ಮೊತ್ತದ ಗುತ್ತಿಗೆಯೊಂದನ್ನು ನೀಡಬಹುದು. ಇದಕ್ಕೆ ಪ್ರತಿಯಾಗಿ ಸಂಬಂಧಪಟ್ಟ ರಾಜಕೀಯ ಪಕ್ಷಕ್ಕೆ ಗುತ್ತಿಗೆದಾರನು ಚುನಾವಣಾ ಬಾಂಡ್ ಮೂಲಕ ‘ಲಂಚ’ ನೀಡಬಹುದು. ಆದರೆ ಈ ಭ್ರಷ್ಟಾಚಾರವನ್ನು ಗುರುತಿಸಲು ಸಾರ್ವಜನಿಕವಾಗಿ ಯಾರಿಂದಲೂ ಆಗದು. ಹೀಗಾಗಿ, ಚುನಾವಣಾ ಬಾಂಡ್ ವ್ಯವಸ್ಥೆಯು ಭ್ರಷ್ಟಾಚಾರವನ್ನು ಕಾನೂನುಬದ್ಧವಾಗಿಸುತ್ತದೆ. ಆ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ನು ಕೆಲಸಕ್ಕೆ ಬಾರದ್ದನ್ನಾಗಿ ಮಾಡುತ್ತದೆ. ಇಂಥದ್ದೊಂದು ಸಾಧ್ಯತೆಯನ್ನು ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳೂ ಪ್ರಸ್ತಾ‍ಪಿಸಿದರು. ಆದರೆ ಸರ್ಕಾರವು ತನ್ನಲ್ಲಿ ವಿಶ್ವಾಸ ಇರಿಸುವಂತೆ, ಆಧಾರರಹಿತ ಊಹೆಗಳಿಗೆ ಮಾನ್ಯತೆ ನೀಡದಂತೆ ಹೇಳಿತು.

ದೇಶದ ಪ್ರಥಮ ಲೋಕಸಭಾ ಚುನಾವಣೆಯ ನಂತರದಲ್ಲಿ, ರಾಜಕೀಯ ದೇಣಿಗೆಗಳು ಹಾಗೂ ಅಭ್ಯರ್ಥಿಗಳು ಮಾಡುವ ವೆಚ್ಚವನ್ನು ನಿಯಂತ್ರಿಸಲು ಹಲವು ಕಾನೂನುಗಳನ್ನು ರೂಪಿಸಲಾಗಿದೆ. ಆದರೆ, ಪಕ್ಷಗಳು ಮಾಡುವ ವೆಚ್ಚವನ್ನು ನಿಯಂತ್ರಿಸಲು ಯಾವುದೇ ಕಾನೂನು ಇರಲಿಲ್ಲ. 2021–22ನೇ ಹಣಕಾಸು ವರ್ಷದಲ್ಲಿ ತಾನು ₹1,033 ಕೋಟಿಯನ್ನು ಚುನಾವಣಾ ಬಾಂಡ್ ಮೂಲಕ ಪಡೆದಿರುವುದಾಗಿ ಬಿಜೆಪಿ ತಿಳಿಸಿದೆ. ಅದೇ ವರ್ಷದಲ್ಲಿ ಪಕ್ಷವು ₹645 ಕೋಟಿಯನ್ನು ಚುನಾವಣಾ ವೆಚ್ಚದ ರೂಪದಲ್ಲಿ ಖರ್ಚು ಮಾಡಿದೆ. ಇದರಲ್ಲಿ ಅಭ್ಯರ್ಥಿಗಳಿಗೆ ನೀಡಿರುವ ಹಣಕಾಸಿನ ನೆರವು ₹ 146 ಕೋಟಿಯೂ ಸೇರಿದೆ. ಹಣಕಾಸಿನ ನೆರವು ಅಂದರೇನು? ಯಾರಿಗೂ ತಿಳಿದಿಲ್ಲ.

ಚುನಾವಣಾ ಬಾಂಡ್ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಬಿಜೆಪಿ ಭಾರಿ ಪ್ರಯೋಜನ ಪಡೆದಿದೆ. ಅದು ಇಲ್ಲಿಯವರೆಗೆ ಚುನಾವಣಾ ಬಾಂಡ್‌ ಮೂಲಕ ₹ 5,000 ಕೋಟಿಗಿಂತ ಹೆಚ್ಚು ಹಣ ಪಡೆದಿದೆ. ಕಾಂಗ್ರೆಸ್ ಪಕ್ಷವು ಸರಿಸುಮಾರು ₹ 1,000 ಕೋಟಿ ಪಡೆದಿದೆ. ವ್ಯಕ್ತಿಯೊಬ್ಬ ತಾನು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಪಕ್ಷಗಳಿಗೆ ನೀಡುವುದು ಏಕೆ ಎಂಬುದನ್ನು ತಿಳಿಯಲು ಸಾರ್ವಜನಿಕರು ಬಯಸುತ್ತಾರೆ. ಭಾರಿ ಮೊತ್ತವನ್ನು ಪಕ್ಷಗಳಿಗೆ ದೇಣಿಗೆ ನೀಡುವವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ‘ಭ್ರಷ್ಟಾಚಾರ’ ಎಸಗಿದ್ದಾನೆ ಎಂದು ಸಾಬೀತು ಮಾಡಲು ಆಗದಿದ್ದರೂ, ಭಾರಿ ಮೊತ್ತದ ದೇಣಿಗೆಗೆ ಇದ್ದ ಪ್ರೇರಣೆ ಏನು ಎಂಬುದನ್ನು ತಿಳಿಯಲು ಜನರಿಗೆ ಅವಕಾಶ ಇರಬೇಕು. 

2002ರಲ್ಲಿ ನೀಡಿದ ಮಹತ್ವದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌, ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವವರು ತಮ್ಮ ಕ್ರಿಮಿನಲ್ ಹಿನ್ನೆಲೆ, ಸಂಪತ್ತಿನ ವಿವರ, ಶೈಕ್ಷಣಿಕ ಅರ್ಹತೆಯನ್ನು ಬಹಿರಂಗಪಡಿಸಬೇಕು ಎಂದು ಹೇಳಿತು. ಆದಾಯ ತೆರಿಗೆ ವಿವರ ಸಲ್ಲಿಸದಿದ್ದ ಕಾರಣಕ್ಕೆ ಬಿಜೆಪಿ, ಕಾಂಗ್ರೆಸ್ ಮತ್ತು ಇತರ ಕೆಲವು ಪಕ್ಷಗಳ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವುದಕ್ಕೆ ಸುಪ್ರೀಂ ಕೋರ್ಟ್‌ 1997ರಲ್ಲಿ ಆದೇಶಿಸಿತ್ತು. 1975ರಲ್ಲಿ ಕೋರ್ಟ್, ಪಕ್ಷ ಮಾಡುವ ಯಾವುದೇ ವೆಚ್ಚವನ್ನು ಅಭ್ಯರ್ಥಿಯ ವೆಚ್ಚವಾಗಿ ಪರಿಗಣಿಸಬೇಕು ಎಂದು ಹೇಳಿತ್ತು. ಇದಕ್ಕೆ ಸಂಸತ್ತು ಪ್ರತಿರೋಧ ತೋರಿದಾಗ, ಪಕ್ಷಗಳ ವೆಚ್ಚವನ್ನು ಅಭ್ಯರ್ಥಿಯ ವೆಚ್ಚವಾಗಿ ಪರಿಗಣಿಸಬಾರದು ಎಂದಾದಲ್ಲಿ ಪಕ್ಷಗಳು ತಮ್ಮ ಲೆಕ್ಕಪತ್ರವನ್ನು ವಾರ್ಷಿಕ ತಪಾಸಣೆಗೆ ಒಳ‍ಪಡಿಸಬೇಕು, ಆದಾಯ ತೆರಿಗೆ ವಿವರವನ್ನು ಸಲ್ಲಿಸಬೇಕು ಎಂದು ಹೇಳಿತು. ಪಾರದರ್ಶಕತೆಯ ರಕ್ಷಣೆಯಲ್ಲಿ ಇಷ್ಟು ಕಠಿಣವಾಗಿದ್ದ ಸುಪ್ರೀಂ ಕೋರ್ಟ್‌, ಅಪಾರದರ್ಶಕವಾದ ಚುನಾವಣಾ ಬಾಂಡ್ ಯೋಜನೆಯು 2018ರಿಂದಲೂ ನಡೆದು ಬರುವುದಕ್ಕೆ ಅವಕಾಶ ಕೊಟ್ಟಿದೆ.

ಬಾಂಡ್ ವ್ಯವಸ್ಥೆಯನ್ನು ಕೇಂದ್ರವು ಹಲವು ವಾದಗಳ ಮೂಲಕ ಸಮರ್ಥಿಸಿಕೊಂಡಿದೆ. ಬಹುತೇಕ ವಾದಗಳು ಕ್ಷುಲ್ಲಕವಾಗಿವೆ. ದೇಣಿಗೆ ನೀಡಿದವರ ವಿವರ ಬಹಿರಂಗವಾದರೆ, ಅವರ ವಿರುದ್ಧ ರಾಜಕೀಯ ಪಕ್ಷಗಳು ಹಗೆ ತೀರಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ. ಹಾಗೆ ಮಾಡುವ ಸಾಮರ್ಥ್ಯ ಇರುವುದು ಆ ರಾಜಕೀಯ ಪಕ್ಷದ ನೇತೃತ್ವದ ಸರ್ಕಾರಕ್ಕೆ ಅಥವಾ ಪೊಲೀಸರಿಗೆ ಮಾತ್ರ. ಆದರೆ ಸರ್ಕಾರ, ಪೊಲೀಸರು ಹಾಗೆ ಮಾಡಿದಲ್ಲಿ ಕೋರ್ಟ್‌ ಮಧ್ಯಪ್ರವೇಶಿಸಬಹುದು. ಅಪಾರದರ್ಶಕತೆಗೆ ಇದು ಸಮರ್ಥನೆ ಆಗಲಾರದು. ರಾಜಕೀಯ ಪಕ್ಷಗಳಿಗೆ ದೊಡ್ಡ ಮೊತ್ತ ನೀಡುವವರ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಬಹುದು ಎಂದು ಸರ್ಕಾರ ವಾದಿಸಿದೆ. ಆದರೆ, ಅದು ಕೂಡ ಬೋಗಸ್ ಸಮರ್ಥನೆ. ಟಾಟಾ ಹಾಗೂ ಬಿರ್ಲಾ ಸಮೂಹಗಳು, ರಾಜಕೀಯ ಪಕ್ಷಗಳಿಗೆ ಬಹಿರಂಗವಾಗಿ ದೇಣಿಗೆ ನೀಡಿವೆ. ಈ ಸಮೂಹಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದರ ಬಗ್ಗೆ ಯಾವತ್ತಿಗೂ ದೂರು ಹೇಳಿಲ್ಲ.

ಚುನಾವಣಾ ಬಾಂಡ್‌ಗಳ ಬಗ್ಗೆ ತನಗೂ ಗೊತ್ತಿರುವುದಿಲ್ಲ ಎಂದು ಕೇಂದ್ರ ಹೇಳಿದೆ. ಇದು ಸಂಪೂರ್ಣ ಸುಳ್ಳು. ಬಾಂಡ್‌ ನೀಡುವ ಎಸ್‌ಬಿಐ, ಕೇಂದ್ರ ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯುತ್ತದೆ. ದೇಣಿಗೆ ನೀಡುವವರ ಕೆವೈಸಿ ದಾಖಲೆ ಪಡೆಯಲಾಗುತ್ತದೆ, ಕಾನೂನುಬದ್ಧ ಹಣ ಮಾತ್ರ ದೇಣಿಗೆಯಾಗಿ ಬರುತ್ತದೆ ಎಂದು ವಾದಿಸಲಾಗಿದೆ. ಆದರೆ, ಕೆವೈಸಿ ದಾಖಲೆ ಸಲ್ಲಿಸಿದ ಮಾತ್ರಕ್ಕೆ ದೇಣಿಗೆ ನೀಡುವವನ ಬಳಿ ಇರುವ ಹಣ ಸಕ್ರಮವಾದುದು ಎನ್ನಲಾಗದು. ವಿದೇಶಿ ಕಂಪನಿಗಳು ಭಾರತದಲ್ಲಿ ದೇಣಿಗೆ ನೀಡುವ ಉದ್ದೇಶದಿಂದಲೇ ಖಾಸಗಿ ಕಂಪನಿ ಆರಂಭಿಸಿ, ಅದರ ಮೂಲಕ ಬಾಂಡ್‌ ರೂಪದಲ್ಲಿ ಎಷ್ಟು ಮೊತ್ತವನ್ನು ಬೇಕಿದ್ದರೂ ನೀಡಬಹುದು.

ದೇಣಿಗೆ ನೀಡುವವರಿಂದ ಎಷ್ಟೇ ಮೊತ್ತವನ್ನು ಪಕ್ಷಗಳು ಗುಟ್ಟಾಗಿ ಪಡೆದರೂ ಅದರಲ್ಲಿ ಭ್ರಷ್ಟಾಚಾರ ನಡೆದಿರಬಹುದು ಎಂಬ ಅನುಮಾನವನ್ನು ಜನ ಹೊಂದಬಾರದು ಎನ್ನುವ ದೃಷ್ಟಿಕೋನವೊಂದನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸಂಸತ್ತಿನ ಮೂಲಕ ಜನರ ಮೇಲೆ ಹೇರಿದೆ. ಈಗ ಸರ್ಕಾರವು ಈ ದೃಷ್ಟಿಕೋನವನ್ನು ಒಪ್ಪಿಕೊಳ್ಳಬೇಕು ಎಂದು ಕೋರ್ಟನ್ನು ಕೂಡ ಕೋರಿದೆ. ಸರ್ಕಾರವು ಈ ರೀತಿಯಾಗಿ ತನ್ನನ್ನು ನಂಬುವಂತೆ ಈ ಹಿಂದೆ ಕೋರಿದ್ದು 1975–77ರ ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮಾತ್ರ! ಆಗ ಸುಪ್ರೀಂ ಕೋರ್ಟ್‌ ಈ ವಾದವನ್ನು ಒಪ್ಪಿಕೊಂಡಿತ್ತು ಕೂಡ.

ಆದರೆ ನಂತರದಲ್ಲಿ, ಜೆ.ಸಿ. ಶಾ ಆಯೋಗವು ಆಂತರಿಕ ಆಕ್ರಮಣದ ಬಗ್ಗೆ ಇಂದಿರಾ ಗಾಂಧಿ ಅವರು ಹೇಳಿದ್ದು ಸಂಪೂರ್ಣವಾಗಿ ಆಧಾರರಹಿತ ಎಂದು ಹೇಳಿತು. ಕೇಂದ್ರ ಗೃಹ ಸಚಿವಾಲಯಕ್ಕೆ ಆಂತರಿಕ ಆಕ್ರಮಣದ ಬಗ್ಗೆ ಯಾವುದೇ ರಾಜ್ಯದಿಂದ ಯಾವ ಸಂದೇಶವೂ ರವಾನೆ ಆಗಿರಲಿಲ್ಲ. ತುರ್ತು ಪರಿಸ್ಥಿತಿ ಅವಧಿಯಲ್ಲಿ ಪೊಲೀಸರು 1.14 ಲಕ್ಷ ಜನರನ್ನು ಬಂಧಿಸಿದರು. ಅವರೆಲ್ಲ ಇಂದಿರಾ ಅವರ ರಾಜಕೀಯ ವಿರೋಧಿಗಳಾಗಿದ್ದರು. ಸರ್ಕಾರವನ್ನು ನಂಬಬೇಕು ಹಾಗೂ ಕಠಿಣ ಪ್ರಶ್ನೆಗಳನ್ನು ಕೇಳಬಾರದು ಎಂದು ಹಿಂದಿನ ಬಾರಿ ಸರ್ಕಾರ ಕೋರಿದ್ದಾಗ, ದೇಶಕ್ಕೆ ಬಹಳ ದೊಡ್ಡ ಕೆಡುಕು ಆಗಿತ್ತು. ಈ ಬಾರಿ ಮೋದಿ ನೇತೃತ್ವದ ಸರ್ಕಾರ ಕೂಡ, ಸರ್ಕಾರವನ್ನು ನಂಬುವಂತೆ, ಚುನಾವಣಾ ಬಾಂಡ್ ಯೋಜನೆಯನ್ನು ಎತ್ತಿಹಿಡಿಯುವಂತೆ ಕೋರಿದೆ.

ವಕೀಲನಾಗಿ ಈ ಲೇಖಕನ ಮಾತು ಇದು: ಚುನಾವಣಾ ಬಾಂಡ್ ಯೋಜನೆಯ ಬಗ್ಗೆ ಸರ್ಕಾರದ ವಾದ ಆಲಿಸಿರುವ ನ್ಯಾಯಮೂರ್ತಿಗಳಿಗೆ ಕೇಂದ್ರವನ್ನು ನಂಬಬೇಕು ಎಂದು ಅನ್ನಿಸಿದ್ದರೆ, ಹಾಗೆ ಮಾಡಲು ಅವರು ಸ್ವತಂತ್ರರು. ಆದರೆ ಅವರ ವೈಯಕ್ತಿಕ ವಿಶ್ವಾಸವನ್ನು ಜನರ ಮೇಲೆ ಹೇರಿದರೆ ಅದು ತಪ್ಪಾಗುತ್ತದೆ.

ಲೇಖಕ ಕೆ.ವಿ. ಧನಂಜಯ ಸುಪ್ರೀಂ ಕೋರ್ಟ್‌ ವಕೀಲ

ಕೆ.ವಿ. ಧನಂಜಯ

ಕೆ.ವಿ. ಧನಂಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT