ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಣ ಮತ್ತು ಪರಿಣಾಮಕಾರಿ ಪ್ರಜಾತಂತ್ರ

ಶಿಕ್ಷಣದ ಸುಧಾರಣೆಗೆ ರಾಜಕಾರಣಿಗಳನ್ನು ಹೊಣೆ ಮಾಡದಿದ್ದರೆ ಹೇಗೆ?
Last Updated 17 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ನೀವೀಗ 18 ವಯಸ್ಸಿನವರಿರಬಹುದು, ತಕ್ಷಣ ಉದ್ಯೋಗ ಪಡೆಯುವುದಕ್ಕೆ ಅನುಕೂಲವಾಗುವ ಕೋರ್ಸು ಲಭ್ಯವಿರುವ ಕಾಲೇಜಿನ ಪ್ರವೇಶಕ್ಕೆ ಹಾತೊರೆಯುತ್ತಿರಬಹುದು ಅಥವಾ ಯುವ ತಂದೆ-ತಾಯಂದಿರಾಗಿದ್ದು, ನಿಮ್ಮ ಮಗುವಿನ ಶಾಲಾ ಪ್ರವೇಶದ ಬಗ್ಗೆ ಚಡಪಡಿಸುತ್ತಿರಬಹುದು. ಅಥವಾ ನೀವು ಮಧ್ಯವಯಸ್ಕರಾಗಿದ್ದು, ನಿಮ್ಮ ಮಕ್ಕಳ ಶಿಕ್ಷಣಕ್ಕೆ ತೆರಬೇಕಿರುವ ಭಾರಿ ಫೀಸನ್ನು ಹೊಂದಿಸುವ ಹೋರಾಟದಲ್ಲಿ ನಲುಗಿರಬಹುದು ಇಲ್ಲವೇ ಅವರು ಏನನ್ನು ಕಲಿಯುತ್ತಿದ್ದಾರೆ ಎಂಬ ಅನಿಶ್ಚಿತತೆಯಲ್ಲಿ ದುಗುಡಪಡುತ್ತಿರಬಹುದು.

ಅಥವಾ ನೀವು ಬದುಕಿನ ಸಂಜೆಯಲ್ಲಿದ್ದು, ಶಿಕ್ಷಣ ಕಲ್ಪಿಸಿದ ಅನುಕೂಲದಿಂದಾಗಿ ಇಕ್ಕಟ್ಟು ಓಣಿಯ ಸಣ್ಣ ಮನೆಯಿಂದ ಒಳ್ಳೆಯ ಸೌಲಭ್ಯದ ಉತ್ತಮ ಮನೆಗೆ ಸ್ಥಳಾಂತರವಾಗಿರುವುದನ್ನು ಮತ್ತು ನಿಮ್ಮ ಇಬ್ಬರು ಮಕ್ಕಳೂ ಲಕ್ಷಗಟ್ಟಲೆ ಸಂಬಳ ಎಣಿಸುವಂಥ ಉತ್ತಮ ಸ್ಥಿತಿಗೆ ಬಂದಿರುವುದನ್ನು ಮೆಲುಕು ಹಾಕುತ್ತಿರಬಹುದು. ನೀವು ಈ ಯಾವುದೇ ಗುಂಪಿಗೆ ಸೇರದೇ ಇರುವವರಾಗಿರಬಹುದು. ಆದರೆ, ಶಿಕ್ಷಣವು ಉತ್ತಮ ಸಮಾಜ ಮತ್ತು ಪರಿಣಾಮಕಾರಿ ಪ್ರಜಾತಂತ್ರಕ್ಕೆ ಅಡಿಗಲ್ಲಾಗಿದೆ ಎಂಬುದನ್ನು ಅರಿತಿರುವ ಯಾವುದೇ ವಯಸ್ಸಿನ ನಾಗರಿಕನಾಗಿರಬಹುದು. ಭಾರತದ ಇಂದಿನ ಶಿಕ್ಷಣದ ಸ್ಥಿತಿಗತಿಯ ಬಗ್ಗೆ ಚಿಂತಾಕ್ರಾಂತರಾಗಿರಲೂಬಹುದು.

ನೀವು ಯಾರೇ ಆಗಿದ್ದರೂ, ನಿಮಗೂ ಈ ದೇಶಕ್ಕೂ ಶಿಕ್ಷಣ ಅತ್ಯಂತ ಮಹತ್ವದ ವಿಷಯ ಎಂಬುದು ನಿಮಗೆ ತಿಳಿದಿದೆ. ಹೀಗಿದ್ದೂ, ಈ ಸಂಗತಿಯನ್ನು ನೀವು ಮತ ಚಲಾಯಿಸುವಾಗ ಮರೆಯುವುದೇಕೆ? ರಾಜಕಾರಣಿಗಳನ್ನು ಶಿಕ್ಷಣಕ್ಕೆ ಹೊಣೆಗಾರರನ್ನಾಗಿ ಮಾಡದಿದ್ದರೆ ನಮ್ಮ ಶಿಕ್ಷಣ ಸುಧಾರಿಸುವುದಾದರೂ ಹೇಗೆ? ಈ ದೇಶವನ್ನು ಆಳಬಯಸುವ ಜನರು, ಶಿಕ್ಷಣದ ಕುರಿತು ಏನು ಕೆಲಸ ಮಾಡುತ್ತಾರೆ ಎಂಬುದರ ಮೇಲೆ ನೀವು ಅವರಿಗೆ ಮಾನ್ಯತೆ ನೀಡಿದ್ದೀರಿ ಅಥವಾ ತಿರಸ್ಕರಿಸಿದ್ದೀರಿ ಎಂದು ತಿಳಿಯುವುದಾದರೂ ಹೇಗೆ?

ನಮಗೆ ನಮ್ಮ ಬಗ್ಗೆ ಸಂಪೂರ್ಣ ತಿಳಿವಳಿಕೆ ಇಲ್ಲ. ಹಾಗಾಗಿ ‘ಜಾಣ ಭಾರತೀಯ ಮತದಾರ’ ಎಂಬ ಸ್ತುತಿ ನಾವು ಏನು ಆಗಬೇಕಿದೆಯೋ ಅದಕ್ಕೆ ಸಲ್ಲುವ ಗೌರವವೇ ಹೊರತು ಈಗ ನಾವಿರುವ ಸ್ಥಿತಿಗೆ ಸಂದಿರುವುದಲ್ಲ. ನಿಜ ಏನೆಂದರೆ, ಚುನಾವಣೆಯ ಸಂದರ್ಭದಲ್ಲಿ ತೀರ್ಮಾನ ಕೈಗೊಳ್ಳಬೇಕಾದಾಗ ನಾವು ಅರೆ-ತಾರ್ಕಿಕ, ಅರೆ-ಭಾವುಕ ಹಾಗೂ ಹಠಾತ್ ಪ್ರವೃತ್ತಿಯವರಾಗಿ ಬಿಡುತ್ತೇವೆ. ಜೀವನದ ಮೇಲೆ ಆಡಳಿತದಿಂದ ಆಗಿರುವ ಪರಿಣಾಮಗಳ ವಸ್ತುನಿಷ್ಠ ಮೌಲ್ಯಮಾಪನದ ಮೂಲಕ ನಮ್ಮ ನಿರ್ಧಾರದ ಒಂದು ಭಾಗ ರೂಪುಗೊಳ್ಳುತ್ತದೆ; ಇನ್ನೊಂದು ಭಾಗ ನಮ್ಮ ಅಸ್ಮಿತೆ ಮತ್ತು ಆದಿಮ ಭೀತಿಗಳನ್ನು ಬಡಿದೆಬ್ಬಿಸುವ ಭಾವುಕತೆಗಳಿಗೆ ಬಲಿಯಾಗಿಬಿಡುತ್ತದೆ; ಮತ್ತೂ ಒಂದು ಭಾಗ ನಮ್ಮ ಈ ಕ್ಷಣದ ಸ್ಥಿತಿ-ಗತಿ ಮತ್ತು ಸಾಮಾಜಿಕ ಆಯಾಮಗಳಿಂದ ನಿಚ್ಚಳಗೊಳ್ಳುತ್ತದೆ. ನಿರ್ಧಾರದ ಸಂದರ್ಭಗಳಲ್ಲಿ ಮುಮ್ಮಿದುಳು ಮತ್ತು ಮಿದುಳಿನ ಅಮಿಗ್ದಾಲಾ-ಹಿಪ್ಪೊಕ್ಯಾಂಪಸ್‍ಗಳು ನಿರಂತರ ಜಟಾಪಟಿಯಲ್ಲಿರುತ್ತವೆ. ನಾವು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಆಯ್ಕೆಗೆ ಮುಂದಾಗುವಾಗಲೂ ಈ ಪ್ರಕ್ರಿಯೆ ಜಾರಿಯಲ್ಲಿರುತ್ತದೆ. ಇದು ಮಾನವ ಸಹಜ ರೀತಿಯ ಮತಚಲಾವಣೆಯ ವೈಜ್ಞಾನಿಕ ವಿಶ್ಲೇಷಣೆ. ಹೀಗಿರುವಾಗ ‘ಜಾಣ ಮತದಾರ’ ಎಂಬುದು ವಾಸ್ತವಕ್ಕೆ ಹೊರತಾದ ಕಲ್ಪನೆಯಾಗಿಯೇ ನಿಲ್ಲುತ್ತದೆ.

ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಪ್ರಯತ್ನಪೂರ್ವಕವಾಗಿ ರೂಢಿಸಿಕೊಳ್ಳಬಹುದು ಎಂಬುದು ನಮ್ಮ ಒಳಅರಿವು ಅಷ್ಟೇ ಅಲ್ಲ, ಅದಕ್ಕೆ ವೈಜ್ಞಾನಿಕ ಸಂಶೋಧನೆಗಳ ಬೆಂಬಲವೂ ಇದೆ. ನಾವೇನು ಮಾಡಬೇಕಿದೆ ಎಂಬುದರ ಪಟ್ಟಿ ಮತ್ತು ಹಾಕಿಕೊಂಡ ಚೌಕಟ್ಟು ನಿರ್ಧಾರ ಕೈಗೊಳ್ಳಲು ನಮಗೆ ನೆರವಾಗುತ್ತವೆ. ಯಾರಿಗೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸಲು ನೆರವಾಗುವ ಒಂದು ಪರಿಶೀಲನಾ ಪಟ್ಟಿ ಇಲ್ಲಿ ಇದೆ.

ಒಂದು, ಶಿಕ್ಷಣಕ್ಕೆ ಯಾವ ಪಕ್ಷದಿಂದ ಯಾವ ಬಗೆಯ ಮಹತ್ವ ಕೊಡಲಾಗಿದೆ ಎಂಬುದರ ಮೌಲ್ಯಮಾಪನ. ಪ್ರಣಾಳಿಕೆಯಲ್ಲಿ ಶಿಕ್ಷಣಕ್ಕೆ ಎಷ್ಟು ಒತ್ತು ಕೊಡಲಾಗಿದೆ? ಅವರ ಪ್ರಮುಖ ನಾಯಕರು ತಮ್ಮ ಚುನಾವಣಾ ಭಾಷಣಗಳಲ್ಲಿ ಶಿಕ್ಷಣದ ಬಗ್ಗೆ ಪ್ರಸ್ತಾಪಿಸುತ್ತಾರೆಯೇ? ಅದನ್ನವರು ಅಡಿಗಡಿಗೆ ಹೇಳುತ್ತಾರೆಯೇ? ‘ಲ್ಯಾಪ್‌ಟಾಪ್‌ ಕೊಡುತ್ತೇವೆ’ ಎಂಬುದು ಕ್ಷುಲ್ಲಕ; ಅದು ಶಿಕ್ಷಣವಲ್ಲ. ‘ನಾವು ಶಿಕ್ಷಣಕ್ಕೆ ತುಂಬ ಬದ್ಧರು’ ಎಂಬ ಸವೆದ ಮಾತುಗಳೂ ಪ್ರಯೋಜನವಿಲ್ಲ.

ಎರಡು, ಶಿಕ್ಷಣವನ್ನು ಕುರಿತು ಪಕ್ಷಗಳ ಮೂಲಭೂತ ದೃಷ್ಟಿಕೋನ ಮತ್ತು ವಿಧಾನಗಳು ಯಾವುವು ಎಂಬುದರ ಮೌಲ್ಯಮಾಪನ. ಅವರ ಬದ್ಧತೆ ಶಿಕ್ಷಣದ ಮೇಲಿನ ಸರ್ಕಾರದ ವೆಚ್ಚವನ್ನು ವಾಸ್ತವಿಕತೆಯ ಮೇಲೆ ಅಂದಾಜಿಸಿ ಈಗಿರುವುದನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳುವಂತಿದೆಯೇ? ಅವರು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ, ಆ ದಿಕ್ಕಿನಲ್ಲಿ ಹಣ ಹೂಡಿಕೆ ಮಾಡಲು ಕಟಿಬದ್ಧರಾಗಿರುವರೇ? ಪ್ರತೀ ಮಗುವೂ, ಯುವಕನೂ ಉನ್ನತ ಶಿಕ್ಷಣ ಪಡೆಯುವುದನ್ನು ಖಾತರಿಪಡಿಸುವಂತಿದೆಯೇ? ‘ಪ್ರತೀ ಮಗು ಮತ್ತು ಯುವಕ-ಯುವತಿಯೂ’ ಎಂಬುದು ಇಲ್ಲಿ ನಿರ್ಣಾಯಕ. ಉನ್ನತ ಗುಣಮಟ್ಟ ಎಂಬುದಷ್ಟೇ ಇಲ್ಲಿ ಮುಖ್ಯವಲ್ಲ, ಸಮಾನತೆಯನ್ನು ಸಾಧಿಸುವುದು ಕೂಡ ಗುಣಮಟ್ಟವನ್ನು ಉತ್ತಮಪಡಿಸಿದಂತೆಯೇ.

ಮೂರು, ಈ ಪಕ್ಷಗಳು ಕಳೆದ 5-10 ವರ್ಷಗಳಲ್ಲಿ ನಡೆದು ಬಂದ ದಾರಿಯನ್ನು ಅವಲೋಕಿಸುವುದು. ಪ್ರಮುಖ ಪಕ್ಷಗಳಲ್ಲಿ ಬಹುತೇಕವು ಕೇಂದ್ರದಲ್ಲಿ ಇಲ್ಲ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವವು ಅಥವಾ ಇದ್ದವೇ ಆಗಿವೆ. ಅವರ ಆಡಳಿತದ ಅವಧಿಯಲ್ಲಿ ಶೈಕ್ಷಣಿಕ ಸುಧಾರಣೆ ಮಾಡಿದ್ದಾರೆಯೇ? ಮುಖ್ಯವಾಗಿ ನಾವು ನೋಡಬೇಕಿರುವುದು, ಸರ್ಕಾರಿ ಶಾಲೆ ಮತ್ತು ಕಾಲೇಜುಗಳ ಪ್ರತೀ ವಿದ್ಯಾರ್ಥಿಯ ಬದುಕು ಮತ್ತು ಕಲಿಕೆಯನ್ನು ಉತ್ತಮಪಡಿಸುವುದಕ್ಕೆ ಅವರು ಏನನ್ನು ಮಾಡಿದ್ದಾರೆ?

ನಾಲ್ಕು, ನೀವು ಆಯ್ಕೆ ಮಾಡಬೇಕಿರುವ ಅಭ್ಯರ್ಥಿಗಳ ಮೌಲ್ಯಮಾಪನ- ಅವರಲ್ಲಿರುವ ವಿವೇಕದ ಮೂಲಕ. ಅಂದರೆ ಅವರು ಹೊಂದಿರುವ ಶೈಕ್ಷಣಿಕ ಪದವಿಗಳ ಆಧಾರದ ಮೇಲಲ್ಲ. ಅವರು ಪ್ರಾಮಾಣಿಕರಾಗಿದ್ದಾರೆಯೇ ಎಂಬುದು ಮುಖ್ಯ.

ಐದು, ಸಾರ್ವಜನಿಕ ಶಿಕ್ಷಣವನ್ನು ಹೇಗೆ ಸುಧಾರಿಸುತ್ತಾರೆ ಎಂದು ಅವರ ಕೈ ಹಿಡಿದು ಪ್ರಶ್ನಿಸಿ. ಸರ್ಕಾರಿ ಸಂಸ್ಥೆಗಳನ್ನು ಸುಧಾರಿಸಿದ್ದೇ ಆದರೆ ಎಲ್ಲ ಸಂಸ್ಥೆಗಳನ್ನೂ ಸುಧಾರಿಸಿದಂತೆಯೇ. ಅವರ ಕ್ಷೇತ್ರದ ಕೆಲವು ಸಂಗತಿಗಳನ್ನು ಇರಿಸಿಕೊಂಡೇ ಅವರನ್ನು ಪ್ರಶ್ನಿಸಿ. ಅಲ್ಲಿ ಎಷ್ಟು ಅಂಗನವಾಡಿಗಳಿವೆ, ಶಾಲೆಗಳಿವೆ ಮತ್ತು ಕಾಲೇಜುಗಳಿವೆ? ಇವು ಪರಿಣತ ಶಿಕ್ಷಕರನ್ನು ಯಾವಾಗ ಪಡೆಯಲಿವೆ? ಅವರು ಕೊಡುವ ಯಾವುದೇ ಸಬೂಬಿಗೂ ಸೊಪ್ಪುಹಾಕದಿರಿ. ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯ ಎಂದು ಅವರು ಹೇಳಬಹುದು. ಇಂಥ ವಿಷಯದಲ್ಲಿ ಗಮನಾರ್ಹ ಬದಲಾವಣೆ ತರಲು ಸಂಸದರಿಗೆ ಸಾಧ್ಯ ಎಂಬುದು ವಾಸ್ತವ. ಅವರು ಆಡಳಿತಪಕ್ಷದವರಾಗಿದ್ದರೆ ಶಿಕ್ಷಣಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಲೇಬೇಕು. ಅವರು ಏನೂ ಮಾಡಿಲ್ಲ ಎಂದಾದರೆ ನಿಷ್ಠುರವಾಗಿಯೇ ಹೊರಗೆ ಕಳಿಸಿ. ಅವರ ಕರ್ತವ್ಯವನ್ನು ಈಡೇರಿಸಿದ್ದರೆ ಅವರಿಗೇ ಮತ ಹಾಕಿ.

ಈ ಪಟ್ಟಿ ನಿಮಗೆ ಇಷ್ಟವಾಗದಿದ್ದರೆ ನಿಮ್ಮದೇ ಪಟ್ಟಿ ಮಾಡಿಕೊಳ್ಳಿ. ಅದರ ಪ್ರಕಾರವೇ ಯಾರಿಗೆ ಮತ ಹಾಕಬೇಕು ಎಂಬುದನ್ನು ನಿರ್ಧರಿಸಿ. ನಿಮಗೆ, ನಿಮ್ಮ ಕುಟುಂಬಕ್ಕೆ, ಗೆಳೆಯರಿಗೆ, ಸಮುದಾಯಕ್ಕೆ ಮತ್ತು ದೇಶಕ್ಕೆ ಶಿಕ್ಷಣ ಅತ್ಯಂತ ಮುಖ್ಯವಾದ ವಿಚಾರ ಎಂಬುದನ್ನು ಮಾತ್ರ ಮರೆಯದಿರಿ. ಚುನಾವಣೆಯ ಒಂದು ಸಂದರ್ಭದಲ್ಲಿ ಮಾತ್ರ ರಾಜಕಾರಣಿಗಳು ನಿಮ್ಮ ಬೇಡಿಕೆಯನ್ನು ಆಲಿಸುತ್ತಾರೆ. ಶಿಕ್ಷಣಕ್ಕೆ ಅವರು ಹೊಣೆಗಾರರಾಗುವಂತೆ ಒತ್ತಾಯಪೂರ್ವಕವಾಗಿಯೇ ಮಾಡಿ.

ಅನುರಾಗ್ ಬೆಹರ್
ಅನುರಾಗ್ ಬೆಹರ್

ಲೇಖಕ: ಅಜೀಂ ಪ್ರೇಮ್‌ಜೀ ವಿಶ್ವವಿದ್ಯಾಲಯದ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT