ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ: ವಿರಾಮವಿಲ್ಲದ ಶಿಕ್ಷಣ ಶಿಕ್ಷೆಯಾದೀತು

ಪಠ್ಯಬೋಧನೆಯ ಕಲಿಕೆಯು ಅನುಭವಿಸುವುದಾಗದೆ ‘ಮುಗಿಸುವ’ ಪರಿಕಲ್ಪನೆಯಾಗಿ ಬದಲಾಗಿದೆ
Published 18 ಜನವರಿ 2024, 22:51 IST
Last Updated 18 ಜನವರಿ 2024, 22:51 IST
ಅಕ್ಷರ ಗಾತ್ರ

ದಿನದಲ್ಲಿ ಸ್ವಲ್ಪ ಹೊತ್ತಾದರೂ ನಿರಾಳವಾಗಿ ಇರಬೇಕು ಎಂದು ಅನಿಸದವರು ಬಹುಶಃ ಯಾರೂ ಇರಲಾರರು. ಈ ವಿಚಾರವನ್ನು ನಿದ್ದೆಗೆ ಅನ್ವಯಿಸದೇ ನೋಡಬೇಕು. ನಿದ್ದೆಯಲ್ಲಿ ಸಚೇತನ ಮನಸ್ಸು ಕ್ರಿಯಾಶೀಲವಾಗಿ ಇರುವುದಿಲ್ಲ. ಸಚೇತನ ಮನಸ್ಸು ಕ್ರಿಯಾಶೀಲವಾಗಿದ್ದಾಗ ದೇಹ ಮತ್ತು ಮನಸ್ಸಿಗೆ ಸಿಗುವ ವಿಶ್ರಾಂತಿಯು ಮುಂದೆ ಹೆಚ್ಚು ಕೆಲಸ ಮಾಡುವುದಕ್ಕೂ ಮಾಡುವ ಕೆಲಸದಲ್ಲಿ ಹೆಚ್ಚು ದಕ್ಷತೆಯನ್ನು ತರುವುದಕ್ಕೂ ಪ್ರೇರಕವಾಗಿರುತ್ತದೆ. ಅಲ್ಲದೆ, ವ್ಯಾವಹಾರಿಕವಾಗಿ ಮಾಡಲೇಬೇಕಾದ ಕೆಲಸವನ್ನು ಮಾಡಿದ ನಂತರ ಸಿಗುವ ವಿಶ್ರಾಂತಿಯು ವೈಯಕ್ತಿಕವಾಗಿ ಸೃಜನಶೀಲ ಚಿಂತನೆ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ಉತ್ತೇಜನಕಾರಿಯಾಗಿರುತ್ತದೆ. ಕಾರ್ಮಿಕ ಕಾಯ್ದೆಗಳೂ ವಿಶ್ರಾಂತಿಯ ಅವಧಿಯನ್ನು ಪರಿಗಣಿಸುತ್ತವೆ.‌ ಮಕ್ಕಳ ಹಕ್ಕುಗಳಲ್ಲಿ ಮಕ್ಕಳ ವಿಶ್ರಾಂತಿಯ ಹಕ್ಕು ಮತ್ತು ಆಟವಾಡುವ ಹಕ್ಕುಗಳೆರಡೂ ಸೇರಿಕೊಳ್ಳುತ್ತವೆ.

ಆದರೆ, ಯಾವುದೇ ಘಟಕವನ್ನು ದಿನದ 24 ಗಂಟೆಗಳೂ ಯಾವ ಯಾವ ರೀತಿಯಲ್ಲಿ ಬಳಸಿ ಉಪಯೋಗವನ್ನು ಪಡೆಯಬೇಕು ಎನ್ನುವಂತಹ ಯೋಜನೆಗಳು ಜಾಗತೀಕರಣ ನಂತರದ ಆರ್ಥಿಕ ಸಿದ್ಧಾಂತಗಳ ಧೋರಣೆಯಾಗಿದೆ. ಇಂದಿನ ಶಿಕ್ಷಣವು ಈ ಧೋರಣೆಯನ್ನು ಬಹಳಷ್ಟು ಪ್ರಭಾವಿಸಿದೆ. ಅಂತಹ ಪ್ರಭಾವದ ಭಾಗವಾಗಿಯೇ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಡೆಯುವ ಗರಿಷ್ಠ ಅಂಕಗಳಷ್ಟೇ ಶಿಕ್ಷಣದ ಗುರಿ ಎಂದು ವ್ಯಾವಹಾರಿಕವಾಗಿ ಎಲ್ಲರೂ ಒಪ್ಪಿಕೊಳ್ಳುವ ಪರಿಸ್ಥಿತಿಯೂ ಬಂದಾಗಿದೆ. ಆಗ, ನಿರಾಳರಾಗಿದ್ದಾಗ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಗಳಿಸುವ ಜ್ಞಾನವು ಶೈಕ್ಷಣಿಕವಾಗಿ ಪರಿಗಣನೆಗೇ ಒಳಪಡುವುದಿಲ್ಲ.

ಶಿಕ್ಷಣದ ಔದ್ಯಮೀಕರಣ ನಡೆಯುವ ಮೊದಲು, ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಅಧ್ಯಾಪಕರಿಗೆ ಬೋಧನಾ ಅವಧಿಯನ್ನು ಹಂಚಿಕೆ ಮಾಡುವಾಗ, ಎರಡು ಬೋಧನಾ ಅವಧಿಗಳ ನಡುವೆ ಒಂದು ವಿರಾಮದ ಅವಧಿ ದೊರೆಯುವಂತೆ ಆದ್ಯತೆಯನ್ನು ನೀಡಿ ವೇಳಾಪಟ್ಟಿ  ನಿಗದಿಪಡಿಸಲಾಗುತ್ತಿತ್ತು. ತರಗತಿ ನಡೆಸುವ ಎರಡು ಅವಧಿಗಳ ನಡುವೆ ಒಂದು ವಿರಾಮದ ಅವಧಿ ಏಕೆ? ಅದು ಎಲ್ಲಾದರೂ ತಿರುಗಾಡಿಕೊಂಡು ಬರಲು ಇರುವ ಅವಧಿಯಲ್ಲ. ಅದೂ ಕೆಲಸದ ಅವಧಿಯೇ ಆಗಿರುತ್ತದೆ. ಆ ಸಮಯವು ಮುಂದಿನ ತರಗತಿಯಲ್ಲಿ ಪಠ್ಯ ವಿಷಯವನ್ನು ಯಾವ ರೀತಿ ವಿದ್ಯಾರ್ಥಿಗೆ ತಲುಪಿಸಬೇಕು, ಕಲಿಕಾ ಕ್ರಮವನ್ನು ಹೇಗೆ ನಿರ್ವಹಿಸಬೇಕು ಎಂಬಂತಹ ಬೋಧನಾ ಸಿದ್ಧತೆಗಳನ್ನು ಮಾಡಿಕೊಳ್ಳಲು ಇರುವ ಅವಧಿಯಾಗಿರುತ್ತದೆ.

ಈಗ, ಸಿದ್ಧತೆ ಮಾಡಿಕೊಂಡು ತರಗತಿಗೆ ಹೋಗಬೇಕು ಎಂಬ ಚಿಂತನೆ ಇದೆ. ಆದರೆ ಸಿದ್ಧತೆ ಮಾಡಿಕೊಳ್ಳಲು ಸಮಯವನ್ನು ಒದಗಿಸಿಯೇ ವೇಳಾಪಟ್ಟಿ ತಯಾರಿಸಬೇಕು ಎಂಬ ಚಿಂತನೆ ಬಹುತೇಕ ಹೊರಟುಹೋಗಿದೆ. ಇದರ ಜೊತೆ ಜೊತೆಗೆ ಬೋಧಕರ ಕಾರ್ಯ ಒತ್ತಡಗಳು ಹೆಚ್ಚಾಗಿರುವುದರಿಂದ, ಶಾಲಾ ಕಾಲೇಜುಗಳಲ್ಲಿ ಇರುವ ಅವಧಿಯಲ್ಲಿ ಬೋಧನಾ ಸಿದ್ಧತೆ ಮಾಡಿಕೊಳ್ಳಲು ಸಮಯ ಬಹುಮಟ್ಟಿಗೆ ಲಭ್ಯವಾಗುವುದಿಲ್ಲ. ಏನಿದ್ದರೂ ಮನೆಯಲ್ಲಿಯೇ ಸಿದ್ಧತೆ ಮಾಡಿಕೊಂಡು ಬರಬೇಕು. ಮನೆಗೆ ಹೋದಾಗ ಮನೆಗೆ ಸಂಬಂಧಿಸಿದ ಹಲವು ಕೆಲಸ ಕಾರ್ಯಗಳಿರುತ್ತವೆ. ಅದರಲ್ಲೂ ಮಹಿಳೆಯರಿಗೆ ಮನೆವಾರ್ತೆಯ ಕೆಲಸ ಇನ್ನೂ ಜಾಸ್ತಿ ಇರುತ್ತದೆ. ಕೊನೆಗೆ, ‘ಪಾಠ ಬೋಧನೆಗೆ ಸಿದ್ಧತೆ’ ಎಂಬ ಪರಿಕಲ್ಪನೆಯು ಔಪಚಾರಿಕ ಪರಿಕಲ್ಪನೆಯಾಗಿಯಷ್ಟೇ ಉಳಿದುಕೊಳ್ಳುತ್ತದೆ.

ಸ್ವಾರಸ್ಯದ ಸಂಗತಿ ಎಂದರೆ, ಇಂದಿನ ಶೈಕ್ಷಣಿಕ ಗುರಿಯನ್ನು ಈಡೇರಿಸಲು ಪಾಠ ಬೋಧನೆ ಸಿದ್ಧತೆಯ ಅಗತ್ಯವೂ ಇಲ್ಲ. ಆದರೆ ಅಂಕಗಳನ್ನು ಗಳಿಸುವ ಏಕಮಾತ್ರ ಉದ್ದೇಶದ ಶಿಕ್ಷಣದಲ್ಲಿ ಪ್ರಶ್ನೋತ್ತರಗಳ ಅಭ್ಯಾಸ ಮಾತ್ರ ನಡೆಯಬೇಕಾದ್ದು. ಆಗ ಪ್ರಶ್ನೋತ್ತರಗಳ ಒಂದು ದಾಖಲೆಯನ್ನು ಮಾತ್ರ ಸಿದ್ಧಪಡಿಸಿಕೊಂಡರೆ ಸಾಕಾಗುತ್ತದೆ. ಉಳಿದ ಬೋಧನಾ ಸಿದ್ಧತೆಗಳ ಅಗತ್ಯವೇ ಇರುವುದಿಲ್ಲ!

ಅಧ್ಯಾಪಕರಿಗೆ ರಜೆ ಜಾಸ್ತಿ ಇದೆ ಎಂಬ ಭಾವನೆ ಸಾರ್ವತ್ರಿಕವಾಗಿ ಇದೆ. ದಸರಾ ಮತ್ತು ಬೇಸಿಗೆ ರಜೆಯ ವಿಷಯಕ್ಕೆ ಸೀಮಿತವಾಗಿ ಈ ಅಭಿಪ್ರಾಯ ನಿಜವೂ ಹೌದು. ಆದರೆ ಆಡಳಿತಾತ್ಮಕ‌ ಜವಾಬ್ದಾರಿಗಳು ರಜೆಯಲ್ಲೂ ಇರುತ್ತವೆ. ಚುನಾವಣಾ ಕಾರ್ಯ, ತರಬೇತಿ, ಶಾಲೆಗೆ ಮಕ್ಕಳನ್ನು ಕರೆತರಲು ನಡೆಸುವ ಕ್ಷೇತ್ರ ಕಾರ್ಯ, ಪ್ರವೇಶ ಅರ್ಜಿಯ ವಿತರಣೆ, ಪ್ರವೇಶ ಪರೀಕ್ಷೆಯ ನಿರ್ವಹಣೆ, ಪ್ರವೇಶ ದಾಖಲೆಗಳ ರಚನೆಯಂತಹ ಹಲವು ಕಾರ್ಯಗಳು ರಜೆಯಲ್ಲೂ ಇರುತ್ತವೆ. ಎರಡೂವರೆ ದಶಕಗಳ ಹಿಂದೆ ಆಡಳಿತಾತ್ಮಕ ಕಾರ್ಯಗಳೇ ಕಡಿಮೆ ಇದ್ದಾಗ ದೊರೆಯುತ್ತಿದ್ದ ರಜೆಯ ವಿರಾಮ ಈಗ ಅಧ್ಯಾಪಕರಿಗೆ ಇಲ್ಲ. ಅದರಿಂದಾಗಿ ರಜೆಯ ಅವಧಿಯಲ್ಲೂ ಅಧ್ಯಾಪಕರು ಸಣ್ಣ ಸಣ್ಣ ಪ್ರವಾಸ ಕೈಗೊಳ್ಳುವುದು, ನಿರಾಳರಾಗುವುದು, ಅಂತಹ ಅನುಭವಗಳನ್ನು ಶೈಕ್ಷಣಿಕವಾಗಿ ಬಳಸುವುದು ಎಲ್ಲ ಈಗ ಸಾಧ್ಯವಾಗದ ವಿಚಾರವಾಗಿದೆ. ದೊರೆಯುವ ಸಾಂದರ್ಭಿಕ ರಜೆಯನ್ನು ಪಡೆದಾಗಲೂ ತರಗತಿಯಿಂದ ಹೊರಗಿರಬಹುದೇ ವಿನಾ ನಿರಾಳವಾಗಿರಲು ಸಾಧ್ಯವಿಲ್ಲ. ಬರೀ ಗಳಿಕೆಯ ರಜೆ ಅಥವಾ ಶಿಶುಪಾಲನೆಯ ರಜೆ, ವೇತನರಹಿತ ರಜೆ, ಪೋಷಕತ್ವದ ರಜೆಯಂಥವುಗಳನ್ನು ಪಡೆದಾಗ ಮಾತ್ರ ಶಾಲಾ ಜವಾಬ್ದಾರಿಗಳಿಂದ ಒಂದಷ್ಟು ನಿರಾಳರಾಗಿರಲು ಸಾಧ್ಯವಾಗುತ್ತದೆ.

ಮಕ್ಕಳ ವಿಚಾರಕ್ಕೆ ಬಂದರೆ, ಶಾಲಾ ಅವಧಿಯಲ್ಲಿ ಪ್ರತಿಭಾ ಪ್ರದರ್ಶನದ ಸಿದ್ಧತೆಗಳು, ಚಟುವಟಿಕೆ, ಯೋಜನಾ ಕಾರ್ಯ, ವಿವಿಧ ಸಂಘ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳು, ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳ ತರಬೇತಿ ಪಡೆಯುವುದು, ಪ್ರದರ್ಶಿಸುವುದು, ಬಹುಮಾನ, ಕ್ರೀಡಾ ಸ್ಪರ್ಧೆಗಳು, ಅಂತರ್‌ಶಾಲಾ, ತಾಲ್ಲೂಕು, ಜಿಲ್ಲಾ, ರಾಜ್ಯ ಮಟ್ಟದ ಕಾರ್ಯಕ್ರಮಗಳು, ಪರೀಕ್ಷಾ ಸಿದ್ಧತೆಗಳು ಎಂದಾಗುತ್ತವೆ. ಇದರ ಜೊತೆಗೆ ಬೆಳಿಗ್ಗೆ, ಸಂಜೆ ಜಿಮ್, ಯೋಗ, ಸಂಗೀತ, ನೃತ್ಯದಂತಹ ಐಚ್ಛಿಕ ಕಲಿಕಾ ತರಗತಿಗಳು ಇರುತ್ತವೆ. ರಾತ್ರಿಯಾದರೆ ಅಂಕಗಳಿಗಾಗಿ ಓದುವುದು ಇರುತ್ತದೆ.‌

ಬೇಸಿಗೆ ರಜೆಗೆ ಬಂದರೆ ಬೇಸಿಗೆ ಶಿಬಿರಗಳು, ಮಕ್ಕಳಿಗಾಗಿ ವಿವಿಧ ಯೋಜನೆಗಳು, ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಾಗಿನ ತರಬೇತಿಗಳು... ಹೀಗೆ ಯಾವುದೋ ಒಂದರಲ್ಲಿ ನಿರಂತರ ತೊಡಗಿಕೊಳ್ಳುವಿಕೆ ಇರುತ್ತದೆ. ಔಪಚಾರಿಕ ಪಠ್ಯವಸ್ತು ಇಲ್ಲ ಎನ್ನುವುದನ್ನು ಬಿಟ್ಟರೆ ಈ ರೀತಿಯ ಬೇಸಿಗೆ ರಜೆಯ ಕಾರ್ಯಕ್ರಮಗಳಲ್ಲೂ ‘ಹೋಂ ವರ್ಕ್’ಗಳು ಇರುತ್ತವೆ! ಮಕ್ಕಳಿಗೆ ಆಟವಾಡಲು ವ್ಯವಸ್ಥೆಗಳಿವೆ. ಆದರೆ ಅವರು ಯಾವಾಗ ಯಾವ ಆಟವನ್ನು ಆಡಬೇಕು ಎನ್ನುವುದನ್ನು ಕೋಚ್‌ಗಳು ನಿರ್ಧರಿಸುತ್ತಾರೆ. ಅಂದರೆ, ಸ್ವತಂತ್ರವಾಗಿ ಯೋಚಿಸಿ ತನ್ನಿಷ್ಟದಂತೆ ತೊಡಗಿಕೊಂಡು ಅನುಭವವನ್ನು ಪಡೆದು ಅದರಿಂದ ಸೃಜನಶೀಲವಾಗಿ ಬೆಳೆಯಲು ಮಕ್ಕಳಿಗೆ ಅವಕಾಶ ಲಭ್ಯವಿಲ್ಲ.‌

ಎಲ್ಲವೂ ಇವೆ. ಆದರೆ ಎಲ್ಲವೂ ಯಾರಿಂದಲೋ ನಿರ್ದೇಶಿಸಲ್ಪಟ್ಟು ಯಾಂತ್ರಿಕವಾಗಿ ನಡೆಸಲ್ಪಡುತ್ತವೆ. ಸ್ವಇಚ್ಛೆಯಿಂದ ಸ್ವತಂತ್ರ ಚಿಂತನೆಯ ಮೂಲಕ ವಿಕಾಸಗೊಳ್ಳಲು ಅಧ್ಯಾಪಕರಿಗೂ ಅವಕಾಶವಿಲ್ಲ. ಸರ್ಕಾರಿ ಶಾಲೆಗಳಾದರೆ ಸಿಬ್ಬಂದಿ ಕೊರತೆ, ಖಾಸಗಿ ಶಾಲೆಗಳಾದರೆ ಸಿಬ್ಬಂದಿಯ ಮೇಲಿನ ಅತಿಯಾದ ನಿಯಂತ್ರಣದ ಹೇರಿಕೆಗಳು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡವಿಲ್ಲದ ಒಂದು ಸ್ಥಿತಿಯೇ ಇಲ್ಲದಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತವೆ. ಈ ರೀತಿಯ ಒತ್ತಡ ಸಾರ್ವಜನಿಕ ಜೀವನದಲ್ಲೂ ಇದೆ. ಒಂದು ಮದುವೆ ಸಮಾರಂಭಕ್ಕೆ ಹೋದಾಗಲೂ ಮದುವೆ ಮುಗಿಸಿ, ಆಚೆ ಮನೆಯವನ ಗೃಹ ಪ್ರವೇಶಕ್ಕೂ ಹೋಗಿ, ಅಲ್ಲಿಂದ ತಹಶೀಲ್ದಾರ್‌ ಕಚೇರಿಗೆ ಹೋಗಿ ದಾಖಲೆ ಪಡೆದು ಸಹಾಯಕ ಆಯುಕ್ತರಲ್ಲಿಗೆ ತಲುಪಿಸಿ, ಸಂಜೆ ದೇವಸ್ಥಾನದ ಜಾತ್ರೆಗೆ ಹಾಜರಾಗಿ ಬರುವುದು ಎನ್ನುವ ಲೆಕ್ಕಾಚಾರದಲ್ಲೇ ಎಲ್ಲವನ್ನೂ ಮುಗಿಸುವುದೇ ವಿನಾ ಮಾನಸಿಕ ನಿರಾಳ ಸ್ಥಿತಿಯಲ್ಲಿ ಮದುವೆಯಲ್ಲಿ ಭಾಗವಹಿಸಿ ನಿಧಾನವಾಗಿ ಬಂದರಾಯಿತು ಎನ್ನುವ ಸ್ಥಿತಿಯಲ್ಲಿ ಯಾರೂ ಇಲ್ಲ. ವ್ಯವಸ್ಥೆ ಹೀಗಾದಾಗ ಅಲ್ಲಿ, ‘ಮುಗಿಸುವುದು’ ಎನ್ನುವ ಪರಿಕಲ್ಪನೆಗೆ ಮಾತ್ರ ಮಹತ್ವವಿರುವುದೇ ಹೊರತು ‘ಅನುಭವಿಸುವ’ ಪರಿಕಲ್ಪನೆಗೆ ಯಾವ ಮಹತ್ವವೂ ಇರುವುದಿಲ್ಲ.

ಆದರೆ ಸೃಜನಶೀಲ ಚಟುವಟಿಕೆಗಳು ಕ್ರಿಯೆ ಮತ್ತು ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ದೊರೆಯುವ ಅನುಭವಗಳಿಂದ ಬೆಳೆಯುತ್ತವೆ. ಪೂರ್ಣವಾಗಿ ನಿರಾಳರಾಗಿದ್ದು, ಇಷ್ಟಬಂದಂತೆ ಚಟುವಟಿಕೆಗಳನ್ನು ಕೈಗೆತ್ತಿಕೊಂಡಾಗ ನಡೆಯುವ ಪರಿಪೂರ್ಣ ತೊಡಗಿಕೊಳ್ಳುವಿಕೆಯಲ್ಲಿ ಸಿಗುವ ಆನಂದ ಮತ್ತು ಅನುಭವಗಳು ಶೈಕ್ಷಣಿಕ ಸನ್ನಿವೇಶದಲ್ಲಿ ತುಂಬ ಮಹತ್ವವನ್ನು ಹೊಂದಿರುತ್ತವೆ. ಅದಕ್ಕಾಗಿ ಶೈಕ್ಷಣಿಕ ಸಂದರ್ಭದಲ್ಲಿ ಪ್ರತ್ಯೇಕ ಧೋರಣೆಗಳ ಜಾರಿಯ ಅಗತ್ಯವಿದೆ.‌

ಮಕ್ಕಳಿಗಿರುವ ವಿಶ್ರಾಂತಿಯ ಹಕ್ಕು ಎಂಬುದು ಬಯಸಿದಂತೆ ವಿಶ್ರಾಂತಿಯ ಹಕ್ಕು ಎಂಬರ್ಥದಲ್ಲಿ, ಆಟವಾಡುವ ಹಕ್ಕು ಎಂಬುದು ಇಷ್ಟಬಂದದ್ದನ್ನು ಆಟವಾಡುವ ಹಕ್ಕು ಎಂಬರ್ಥದಲ್ಲಿ ಮರುನಿರೂಪಣೆ ಆಗಬೇಕಾಗುತ್ತದೆ. ಸಿಬ್ಬಂದಿಯ ವಿರಾಮದ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇರಬೇಕಾಗುತ್ತದೆ. ಈಗಿನ ವಿರಾಮರಹಿತ ಸ್ಥಿತಿಯನ್ನು ಬದಲಿಸಲು ಏನಾದರೊಂದು ಮಾಡದೇ ಇದ್ದರೆ ಶಿಕ್ಷಣವು ಸಂವೇದನಾರಹಿತ ಯಂತ್ರಮಾನವರ ಕೇಂದ್ರವಾಗುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT