ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿಜೀವಿಗಳು ಮತ್ತು ನೈತಿಕತೆ

ಬರಹಗಾರರ ಹೊಣೆಗಾರಿಕೆ ನೈತಿಕವಾದದ್ದೇ ಹೊರತು ಸಂಘರ್ಷ ಹುಟ್ಟುಹಾಕುವ ಬಗೆಯದಲ್ಲ
Last Updated 30 ಏಪ್ರಿಲ್ 2019, 18:30 IST
ಅಕ್ಷರ ಗಾತ್ರ

ಬರಹಗಾರರ ಬೌದ್ಧಿಕ ಜವಾಬ್ದಾರಿ ಬಗೆಗೆ ಜಗತ್ತಿನಾದ್ಯಂತಬಹಳಷ್ಟು ಚರ್ಚೆಗಳು ನಡೆದಿವೆ. ಸಮಾಜ ಮತ್ತು ಸಂಸ್ಕೃತಿ ಅಥವಾ ಮನುಷ್ಯನ ವಿಕಾಸದ ಬಗ್ಗೆ ಯೋಚಿಸುವವರನ್ನು ಸಾಮಾನ್ಯವಾಗಿ ನಾವು ‘ಚಿಂತಕರು’ ಅಥವಾ ‘ಬುದ್ಧಿಜೀವಿಗಳು’ ಎಂದು ಕರೆಯುತ್ತೇವೆ. ಆದರೆ, ಇಂದು ಇಂತಹ ಚಿಂತಕರನ್ನು ಅಪಹಾಸ್ಯದ ವಸ್ತು ಎಂದು ಪರಿಗಣಿಸಲಾಗುತ್ತಿದೆ. ಈಗಿನ ರಾಜಕೀಯ ಸ್ಥಿತಿ ಮತ್ತು ಪ್ರಭುತ್ವದ ಪ್ರಾಬಲ್ಯ ಇದಕ್ಕೆ ಕಾರಣ ಎನ್ನಬಹುದು.

ಚಿಂತಕರ ಬಗ್ಗೆ ವ್ಯಂಗ್ಯ, ಅಣಕು ಹಾಗೂ ಅವರ ಚಾರಿತ್ರ್ಯ ಹರಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಚಿಂತಕರ ಬದ್ಧತೆಯು ಮೂದಲಿಕೆಯ ವಿಷಯವಾಗಿದೆ. ಚಿಂತಕರಿಗೆ ಅಂಟಿಕೊಂಡಿರುವ ನಕಾರಾತ್ಮಕ ಅರ್ಥವನ್ನು ಹೋಗಲಾಡಿಸುವುದು ದುಸ್ತರವಾಗಿದೆ. ಏಕೆಂದರೆ ಇದು ಯಾವುದೋ ಒಂದು ಗುಂಪಿನಲ್ಲಿ ಅಥವಾ ಕೆಲವು ಗುಂಪುಗಳಲ್ಲಿ ಮಾತ್ರತಲೆ ಎತ್ತಿರುವ ಧೋರಣೆ ಅಲ್ಲ. ಬದಲಾಗಿ, ಬುದ್ಧಿಜೀವಿಗಳು ಎನ್ನುವ ವರ್ಗಕ್ಕೆ ಅಂಟಿರುವ ಸಾಮಾಜಿಕ ಕಳಂಕ. ಈ ಕಳಂಕಕ್ಕೆ ಜಗತ್ತಿನಾದ್ಯಂತದೊಡ್ಡ ಚರಿತ್ರೆಯೇ ಇದೆ. ಒಂದು ಕಾಲದಲ್ಲಿ ವೈಚಾರಿಕ, ಪ್ರಗತಿಪರ ಹಾಗೂ ಸಮಾಜಮುಖಿ ಮನೋಭಾವವನ್ನು ಹೊಂದಿದ್ದ ವ್ಯಕ್ತಿಗಳನ್ನು ಸಮಾಜವಿರೋಧಿಗಳನ್ನಾಗಿ ಬಿಂಬಿಸುವ ಹುನ್ನಾರ ನಡೆಯಿತು. ಸ್ಥಾಪಿತ ಧರ್ಮಗಳು ಈ ಹುನ್ನಾರದ ಹಿಂದೆ ಇದ್ದವು. ತದನಂತರ ಧರ್ಮ ಮತ್ತು ಪ್ರಭುತ್ವ ಒಟ್ಟಾಗಿ ಈ ಹುನ್ನಾರವನ್ನೇ ಮುಂದುವರಿಸಿಕೊಂಡು ಬಂದವು. ಈಗ ಪ್ರಜಾತಂತ್ರ ವ್ಯವಸ್ಥೆಯಲ್ಲಿಯೂ ಇಂತಹ ಷಡ್ಯಂತ್ರಗಳಿಗೆ ಯಾವುದೇ ಕೊರತೆಯಿಲ್ಲ ಅನ್ನುವುದಕ್ಕೆ ನಮ್ಮೆದುರು ಅನೇಕ ನಿದರ್ಶನಗಳಿವೆ.

ಸಮುದಾಯಗಳ ಏಕತೆಯನ್ನು ಕಾಪಾಡುವ ಹಾಗೂ ಸತ್ಯವನ್ನು ಜನರಿಗೆ ಮನವರಿಕೆ ಮಾಡುವ ಬರಹಗಾರರ ನೈತಿಕತೆಯನ್ನು ಅಪಮಾನಿಸುವುದಕ್ಕೆ ಬೇಕಾಗಿರುವ ಎಲ್ಲ ಬಗೆಯ ಹುನ್ನಾರಗಳ ಜಾಲವನ್ನು ಪ್ರಭುತ್ವವು ರೂಪಿಸುತ್ತದೆ. ಸತ್ಯ ಮತ್ತು ನ್ಯಾಯದ ಬಗೆಗೆಬುದ್ಧಿಜೀವಿಗಳು ಹೊಂದಿರುವ ಬದ್ಧತೆಯನ್ನು
ಪ್ರಶ್ನಿಸುವುದಕ್ಕಿಂತ, ಅಂತಹದ್ದೊಂದು ಬೌದ್ಧಿಕ ಚಟುವಟಿಕೆಯನ್ನೇ ನಿರಾಕರಿಸುವ ಕ್ರಮವನ್ನು ಇಲ್ಲಿ ನೋಡುತ್ತೇವೆ. ಬುದ್ಧಿಜೀವಿಗಳು ಅಧಿಕಾರಸ್ಥರ ವಿರುದ್ಧದ ದನಿ ಮಾತ್ರವಾಗದೇ, ಜನರ ಪರವಾದ ದನಿಯಾಗಿ ಹೇಗೆ ಮತ್ತು ಏನನ್ನು ಯೋಚಿಸುತ್ತಾರೆ, ಅದಕ್ಕೆ ಪ್ರತಿಯಾಗಿ ಧರ್ಮ ಮತ್ತು ಪ್ರಭುತ್ವಗಳು ಒಡ್ಡುವ ಸವಾಲುಗಳು, ಸೃಷ್ಟಿಸುವ ಬಿಕ್ಕಟ್ಟುಗಳು ಎಂತಹವು ಎನ್ನುವುದನ್ನು ಇಲ್ಲಿ ಯೋಚಿಸುವ ಅಗತ್ಯವಿದೆ. ಬರಹಗಾರರ ಹೊಣೆಗಾರಿಕೆ ನೈತಿಕವಾದದ್ದೇ ಹೊರತು ಕೇವಲ ಸಂಘರ್ಷವನ್ನೋ, ವಾಗ್ವಾದವನ್ನೋ ಹುಟ್ಟುಹಾಕುವ ಬಗೆಯಲ್ಲ.

ಕೆಲವು ಚಿಂತಕರನ್ನು ಈಚೆಗೆ ಬಂಧಿಸಿದ ಸರ್ಕಾರದ ಕ್ರಮವನ್ನು ಈ ಹಿನ್ನೆಲೆಯಲ್ಲಿ ನೋಡುವ ಅಗತ್ಯ ಇದೆ. ಇವರಲ್ಲಿ ದಲಿತಪರ ಚಿಂತಕರು, ಅಂಬೇಡ್ಕರ್‌ವಾದಿಗಳು ಮತ್ತು ಮಾರ್ಕ್ಸ್‌ವಾದಿಗಳು ಇದ್ದರು. ಇವರಿಗೆ ‘ನಗರ ನಕ್ಸಲ್‌’ ಎಂಬ ಹಣೆಪಟ್ಟಿ ಕಟ್ಟಲಾಯಿತು. ಇವರಿಗೆ ನಕ್ಸಲರ ಬಗ್ಗೆ ಸಹಾನುಭೂತಿ ಇದೆ ಮತ್ತು ಭೀಮಾ ಕೋರೆಗಾಂವ್‌ ನಲ್ಲಿ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ಕೊಟ್ಟವರು ಇವರೇ ಎಂದೂ ಆರೋಪಿಸಲಾಯಿತು. ಸತ್ಯಾಂಶವು ತನಿಖೆಯಿಂದ ಸಾಬೀತಾಗಬೇಕಿದೆ. ಒಂದು ವೇಳೆ ಇವು ಹೆಣೆದ ಕತೆಗಳೇ ಆಗಿದ್ದರೆ ಮತ್ತು ಸಮಾಜವು ಅವುಗಳನ್ನು ನಂಬಿಬಿಟ್ಟರೆ, ಜನರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಬಿಕ್ಕಟ್ಟುಗಳು ಕಲ್ಪಿತ ಕತೆಗಳಾಗಿಬಿಡಬಹುದು.

ಸಮೂಹಗಳ ಸಮ್ಮತಿಯನ್ನು ರೂಪಿಸುವುದಕ್ಕೆ ಬೇಕಾದ ಕಥಾವಸ್ತು, ವಿನ್ಯಾಸ ಹಾಗೂ ನಿರೂಪಣೆಗಳನ್ನು ಸರ್ಕಾರವು ಅತ್ಯಂತ ಜಾಣ್ಮೆಯಿಂದ ರೂಪಿಸುತ್ತದೆ ಮತ್ತು ನಿರೂಪಿಸುತ್ತದೆ. ಸಮುದಾಯಗಳ ಬಗೆಗಿನ ಕಾಳಜಿಗಳು, ಆಯಾ ಸಮುದಾಯದ ಜನರ ಪರವಾದ ನಿಲುವುಗಳು ಎನ್ನುವುದು ಸರ್ಕಾರಕ್ಕೆ ಅರ್ಥವೇ ಆಗುವುದಿಲ್ಲ. ಇದನ್ನು ಅರ್ಥೈಸಿಕೊಳ್ಳುವ ಇರಾದೆಯೂ ಅದಕ್ಕಿರುವುದಿಲ್ಲ. ಹಾಗಾಗಿ ಸಮುದಾಯಗಳ ಪ್ರಗತಿ, ಸ್ವಾಸ್ಥ್ಯವನ್ನು ಕಾಪಾಡುವ ತುಡಿತವನ್ನು ಹೊಂದಿದವರು ಅತ್ಯಂತ ವಿಲಕ್ಷಣ ವ್ಯಕ್ತಿಗಳಾಗಿ ಕಾಣುತ್ತಾರೆ. ಸಮೂಹ ಮತ್ತು ಸರ್ಕಾರದ ನಡುವಣ ನೈತಿಕ ಮಧ್ಯವರ್ತಿಗಳಾಗಿ ಕೆಲಸ ಮಾಡುವವರು ಚಿಂತಕರು ಎನ್ನುವ ವಾಸ್ತವವೇ ಇಲ್ಲಿ ಗೈರಾಗಿರುತ್ತದೆ. ಸ್ವಾರ್ಥ, ಸ್ವಜನಪಕ್ಷಪಾತ, ಜಾತೀಯತೆ, ಕೋಮುವಾದದ ಪರವಾಗಿರುವವರು, ಅಸ್ಪೃಶ್ಯತೆಯನ್ನು ಆಚರಿಸುವವರು, ಗೋರಕ್ಷಣೆಯ ಹೆಸರಿನಲ್ಲಿ ಸಮಾಜ ದಲ್ಲಿ ಹಿಂಸೆಯನ್ನು ಉತ್ಪಾದಿಸುವವರನ್ನು ದೇಶಭಕ್ತರು, ದೇಶಪ್ರೇಮಿಗಳು ಎಂದು ಬಣ್ಣಿಸಲಾಗುತ್ತದೆ. ಬಲ ಪಂಥೀಯ ವಿಚಾರಧಾರೆ ಇವತ್ತು ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಜಾಗತಿಕ ವಿದ್ಯಮಾನವಾಗಿದೆ.

ಬುದ್ಧಿಜೀವಿಗಳೆಂದರೆ ಎಡಪಂಥೀಯರು, ವಾಮಪಂಥದವರು ಎಂದು ದೂರುವವರು, ‘ಬುದ್ಧಿಜೀವಿ’ ಎಂಬ ಪದವನ್ನೇ ಒಂದು ಬೈಗುಳವನ್ನಾಗಿ ಪರಿವರ್ತಿಸಿ ಬಳಸುತ್ತಿದ್ದಾರೆ. ಸಮಾಜಗಳ ಒಳಿತಿಗಾಗಿ ಹೋರಾಟ, ಚಳವಳಿಗಳನ್ನು ಹಮ್ಮಿಕೊಳ್ಳುವ ಸಂವೇದನಾಶೀಲ, ಸಂಯಮದಿಂದ ವರ್ತಿಸುವ ನೈಜ ಬುದ್ಧಿಜೀವಿಗಳು ಇಲ್ಲವೇ ಬರಹಗಾರರ ಬಳಗವನ್ನು ಮೂದಲಿಸುವ ಪರಿಪಾಟ ಇವತ್ತು ಇನ್ನೂ ಹೆಚ್ಚಾಗಿದೆ. ಕಾನೂನಿನ ಚೌಕಟ್ಟಿನಲ್ಲಿ ನಡೆಯುವ ಹೋರಾಟಗಳನ್ನು ಕಾನೂನುಬಾಹಿರವೆಂದು ಆರೋಪಿಸಲಾಗುತ್ತದೆ. ಇದು ಅಭಿವ್ಯಕ್ತಿಯನ್ನೇ ಅಸಾಧ್ಯವಾಗಿಸುತ್ತದೆ.

ಇಲ್ಲಿ ಎರಡು ಸವಾಲುಗಳು ಎದುರಾಗುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನಬದ್ಧ ಹಕ್ಕಾಗಿದ್ದರೂ ಅದನ್ನು ಒಂದು ಹಕ್ಕಾಗಿ ಮರುಪಡೆಯುವುದು, ಆ ಮೂಲಕ ನಾವು ಮಂಡಿಸುವ ವಿಚಾರಗಳ ಸತ್ಯಾಸತ್ಯತೆ ಏನು ಎಂಬುದನ್ನು ಮನವರಿಕೆ ಮಾಡುವುದು ಮೊದಲನೇ ಸವಾಲು. ಎರಡನೆಯದಾಗಿ, ಲೋಕದ ಡೊಂಕನ್ನು ತಿದ್ದಬೇಕು ಎಂಬ ನೈತಿಕ ಹೊಣೆ ಹೊತ್ತವರು, ತಾವು ಈ ಸಮಾಜದ ಏಳ್ಗೆಗಾಗಿಯೇ ಹೋರಾಡುತ್ತೇವೆ ಅನ್ನುವುದನ್ನು ಸಾಬೀತುಪಡಿಸುವ ಜರೂರಿದೆ. ಏಕೆಂದರೆ, ಬದುಕಿಗೂ ಮತ್ತು ನೈತಿಕತೆಗೂ ನಡುವೆ ಇರಬಹುದಾದ ಸಂಬಂಧ ಎಂತಹದು ಎಂಬುದನ್ನೂ ಸಮೂಹಗಳಿಗೆ ಮನವರಿಕೆ ಮಾಡಬೇಕಾಗುತ್ತದೆ. ಬದುಕಿಗೆ ಸಂಬಂಧಿಸಿದ ಪ್ರತೀ ವಿದ್ಯಮಾನದ ‘ಸತ್ಯದರ್ಶನ’ವನ್ನು ಮಾಡಿಸುವುದು ಬುದ್ಧಿಜೀವಿಗಳ, ಬರಹಗಾರರ ಜವಾಬ್ದಾರಿಯಾಗಿದೆ. ಇವರನ್ನು ನೈತಿಕ ಮಧ್ಯವರ್ತಿಗಳು ಎಂದು ಚಾಮ್‍ಸ್ಕಿ ಬಣ್ಣಿಸಿದ್ದಾನೆ. ಬುದ್ಧಿಜೀವಿಗಳ ವರ್ತನೆ ಸಂಯಮದಿಂದ ಇರಬೇಕು, ಅದು ಹದ್ದುಮೀರಬಾರದು ಎನ್ನುವ ಎಚ್ಚರಿಕೆಯನ್ನು ಚಾಮ್‍ಸ್ಕಿ ಕೊಡುತ್ತಾನೆ.

ಬಲಪಂಥೀಯರು ನೈತಿಕತೆಯನ್ನು ತಿರಸ್ಕರಿಸಿದ್ದಾರೆ ಎಂದು ಆರೋಪಿಸುತ್ತಲೇ, ಬುದ್ಧಿಜೀವಿಗಳು ಕೆಲವರು ನೈತಿಕತೆಯ ಎಲ್ಲೆಯನ್ನು ಮೀರಿ ವರ್ತಿಸಿದ ನಿದರ್ಶನಗಳು ಇವೆ. ಸೇಡಿಗೆ ಪ್ರತಿಸೇಡು ಬುದ್ಧಿಜೀವಿಗಳ ಹೊಣೆಗಾರಿಕೆಯಲ್ಲ. ಸಮೂಹಗಳ ಮೇಲೆ ನಡೆಯುತ್ತಿರುವ ಹಿಂಸೆಯನ್ನು ಖಂಡಿಸುವ, ವಿರೋಧಿಸುವ ಬಗೆಗಳನ್ನು ನೈತಿಕ ನೆಲೆಗಟ್ಟಿನ ಮೇಲೆಯೇ ನಿರ್ಧರಿಸಬೇಕು. ಅಂದರೆ, ಸತ್ಯವನ್ನೇ ಹೇಳಬೇಕು, ಜನರ ಬದುಕಿಗೆ ಜರೂರಾಗಿರುವ ವಿಚಾರಗಳನ್ನು ಹೇಳಬೇಕು ಮತ್ತು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಬದಲಾವಣೆ ತರಬಲ್ಲವರಿಗೆ ಇದನ್ನು ಮನವರಿಕೆ ಮಾಡಿಕೊಡಬೇಕು.

ನೈತಿಕ ಹೊಣೆಗಾರಿಕೆಯ ಈ ಮೂರು ಅಂಶಗಳನ್ನು ಚಾಮ್‍ಸ್ಕಿ ಗುರುತಿಸುತ್ತಾನೆ. ಸಮಾಜದ ಒಳಿತಿಗಾಗಿ ಬದಲಾವಣೆ ತರಬಲ್ಲ ಜನರಿಗೆ ಸತ್ಯಾಂಶವನ್ನು ತಿಳಿಸುವ ಹೊಣೆಗಾರಿಕೆಯೂ ಬುದ್ಧಿಜೀವಿಗಳದ್ದೇ ಆಗಿರುತ್ತದೆ. ಜನರಿಗೆ ಸತ್ಯವನ್ನು ಹೇಳುವುದಲ್ಲ, ಬದಲಾಗಿ ಜನರೊಟ್ಟಿಗೆ ಸತ್ಯವನ್ನು ಹೇಳಬೇಕು. ಸಮುದಾಯಗಳನ್ನು ಕ್ರಿಯಾಶೀಲಗೊಳಿಸುವ ವೈಚಾರಿಕ ಆಂದೋಲನಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವೆಂಬ ಗ್ರಹಿಕೆಯನ್ನು ಸಮೂಹಗಳಲ್ಲಿ ನೆಲೆಗೊಳಿಸುವುದು ಕೂಡ ಬುದ್ಧಿಜೀವಿಗಳ ಹೊಣೆಗಾರಿಕೆಯೇ ಆಗಿರುತ್ತದೆ. ಸತ್ಯ
ವನ್ನು ಹೇಳುವುದು ಆತ್ಮಸಂತೃಪ್ತಿಗಾಗಿಯಲ್ಲ, ಬದುಕಿನ ಒಳಿತಿಗಾಗಿ ಎಂಬ ಹೊಣೆಗಾರಿಕೆಯನ್ನು ಅರಿಯುವುದೇ ಬುದ್ಧಿಜೀವಿಗಳ ನೈತಿಕತೆಯಾಗಿದೆ.

ಲೇಖಕ: ಪ್ರಾಧ್ಯಾಪಕ, ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT