ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಸಂವಿಧಾನಕ್ಕೆ ಅಪಚಾರ: ದಾಖಲೆ ಪುಡಿಪುಡಿ

ಈ ವಿದ್ಯಮಾನಗಳು ಸಂವಿಧಾನ ಬದಲಾವಣೆಯ ನಿಧಾನಗತಿ ವಿಧಾನಗಳಲ್ಲವೇ?
Published 4 ಮೇ 2024, 1:10 IST
Last Updated 4 ಮೇ 2024, 1:10 IST
ಅಕ್ಷರ ಗಾತ್ರ

ಸಂವಿಧಾನದ ಆಶಯಗಳಿಗೆ ಅಪಚಾರ ಎಸಗುವುದು, ಸಂವಿಧಾನದ ನಿಯಮಗಳನ್ನು ವಾಮಮಾರ್ಗದ ಮೂಲಕ ಉಲ್ಲಂಘಿಸುವುದು, ಸಂವಿಧಾನದ ನೀತಿಯನ್ನು ಗಾಳಿಗೆ ತೂರುವುದು ಅಥವಾ ತಿರುಚುವುದು ಕೂಡ ಸಂವಿಧಾನ ಬದಲಾವಣೆಯ ಪರೋಕ್ಷ ವಿಧಾನಗಳೆಂದು ಭಾವಿಸುವುದರಲ್ಲಿ ವಿವೇಕವಿದೆ. ಕನಿಷ್ಠಪಕ್ಷ ಇಂಥಪ್ರಕರಣಗಳನ್ನು ಸಂವಿಧಾನ ಬದಲಾವಣೆ ಪ್ರಕ್ರಿಯೆಯ ಆರಂಭಿಕ ಹಂತಗಳು ಎಂದು ಪರಿಗಣಿಸುವುದರಲ್ಲಂತೂ ಸತ್ಯಾರ್ಥವಿದೆ. ಈ ಬೆಳವಣಿಗೆಗಳು ಪ್ರಜಾಪ್ರಭುತ್ವದ ಬುನಾದಿ ಹಾಗೂ ಸಂವಿಧಾನ ಪ್ರತಿಪಾದಿಸುವ ಸಾಮಾಜಿಕ ನ್ಯಾಯ ಪರಿಕಲ್ಪನೆಯ ಮೂಲ ಸ್ವರೂಪವನ್ನೂ ಏರುಪೇರಾಗಿಸುವ ಮನಃಸ್ಥಿತಿ ಒಳಗೊಂಡಿರುವುದನ್ನು ವಿಶೇಷವಾಗಿ ಗಮನಿಸಬೇಕಾಗಿದೆ.

ಇದನ್ನು ಮುಂದಿಟ್ಟು ಪ್ರಚಲಿತ ವಿದ್ಯಮಾನಗಳನ್ನು ಅವಲೋಕಿಸಿದರೆ, ‘ಪ್ರಜಾಪ್ರಭುತ್ವ ಅತಂತ್ರದಲ್ಲಿದೆ’,
‘ಸಂವಿಧಾನ ಬದಲಾವಣೆ ಆಗಲಿದೆ’ ಎಂಬ ಕೂಗುಗಳನ್ನು ಭವಿಷ್ಯದ ಅಪಾಯಗಳೆಂದು ಉದಾಸೀನ ಮಾಡುವ ಔದಾರ್ಯಕ್ಕೆ ಅವಕಾಶ ಇಲ್ಲವೆಂಬುದು ಎದ್ದು ಕಾಣುತ್ತದೆ. ಸಂವಿಧಾನ ಬದಲಾವಣೆ ಪ್ರಕ್ರಿಯೆಯ ಸುಳಿವುಗಳು ದಶಕಗಳ ಕಾಲ ಸತತ ಆಳ್ವಿಕೆ ನಡೆಸಿದ ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಬಳಿಯೇ ಕರೆದೊಯ್ಯುವುದು ಸುಳ್ಳಲ್ಲ. ಸಂವಿಧಾನದ 356ನೇ ವಿಧಿಯ ದುರುಪಯೋಗ ಮತ್ತು ತನಿಖಾ ಸಂಸ್ಥೆಗಳ ದುರ್ಬಳಕೆ ವಿಷಯದಲ್ಲಿ ಕೇಂದ್ರದಲ್ಲಿನ ಕಾಂಗ್ರೆಸ್‌ ಆಳ್ವಿಕೆಯು ದಾಖಲೆಯನ್ನೇ ನಿರ್ಮಿಸಿದೆ. ‘ಸಂವಿಧಾನ ಬದಲಾವಣೆ’ಯ ಈಗಿನ ರೀತಿ ಆಗಿನ ಪ್ರಯತ್ನಗಳ ವಿಕೃತ, ವಿಸ್ತೃತ ಅವತಾರ ಎಂಬುದೂ ಅಷ್ಟೇ ನಿಜ.

ಬಿಜೆಪಿಯ ಈಗಿನ ಆಡಳಿತದಲ್ಲಿ ಕಾಂಗ್ರೆಸ್ಸಿನ ಹಳೆಯ ದಾಖಲೆಗಳೆಲ್ಲಾ ಪುಡಿಪುಡಿಯಾಗಿ, ಪ್ರಜಾತಂತ್ರ ಮತ್ತು ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಹೊಸ ಮಾದರಿಯ ಅಸ್ತ್ರಗಳು ಹುಟ್ಟಿಕೊಂಡಿವೆ. ಚುನಾವಣೆಯಲ್ಲಿ ಬಹುಮತ ಪಡೆಯುವ ತಾಪತ್ರಯವೇ ಇಲ್ಲದೆ ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿಯುವ ತಂತ್ರಗಾರಿಕೆಯಲ್ಲಿ ಸ್ಥಳೀಯ ಬಿಜೆಪಿ ನಾಯಕತ್ವ ಹಲವು ಬಾರಿ ಯಶಸ್ವಿಯಾಗಿದೆ! ಯಾರೂ ಊಹಿಸದಿದ್ದ ವಿನೂತನ ಮಾದರಿಯಾದ ‘ಆಪರೇಷನ್ ಕಮಲ’ ಅಂತೂ ಕರ್ನಾಟಕಕ್ಕೆ ಕಳಂಕಪ್ರಾಯವಾಗಿ ಇಂದಿಗೂ ಪ್ರಚಲಿತದಲ್ಲಿದೆ. ಇದು ‘ಆಪರೇಷನ್ ಹಸ್ತ’ ಪ್ರಯೋಗಕ್ಕೂ ಪ್ರೇರಣೆ, ಸಮರ್ಥನೆ ಒದಗಿಸಿರುವುದು ವಿಪರ್ಯಾಸವೇ ಸರಿ.

ಈ ವಿಷಯದಲ್ಲಿ ಬಿಜೆಪಿಯ ರಾಷ್ಟ್ರಮಟ್ಟದ ಸಾಧನೆ ಕಡಿಮೆಯೇನಲ್ಲ; ಪಕ್ಷದ ನಮ್ಮ ರಾಜ್ಯ ನಾಯಕತ್ವದ ಸಾಧನೆಯನ್ನು ಮೀರಿಸುವಲ್ಲಿ ಬಹಳಷ್ಟು ಸಫಲವಾಗಿದೆ. ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ರಾತ್ರೋರಾತ್ರಿ ಸರ್ಕಾರಗಳನ್ನು ಬದಲಿಸುವ ಮೂಲಕ ‘ಸಂವಿಧಾನ ಬದಲಾವಣೆ’ಯನ್ನು ಒಂದು ಪ್ರಕ್ರಿಯೆಯಾಗಿ ಜಾರಿಯಲ್ಲಿಟ್ಟಿದೆ. ಈ ದಿಸೆಯಲ್ಲಿ ಬಿಜೆಪಿಯ ಆರ್ ಆ್ಯಂಡ್‌ ಡಿ
ವಿಭಾಗದ ಕ್ರಿಯಾಶೀಲತೆ, ಸೃಜನಾತ್ಮಕತೆ ಮತ್ತು ದಕ್ಷತೆಗೆ ಸರಿಸಾಟಿಯೇ ಇದ್ದಂತಿಲ್ಲ!

ಗುಜರಾತ್ ರಾಜ್ಯದ ಸೂರತ್ ಹಾಗೂ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರಗಳಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳನ್ನು ಕಂಡು, ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆ ತಮ್ಮ ಜೀವಂತಿಕೆಯನ್ನು ಖಾತರಿಪಡಿಸಿಕೊಳ್ಳಲು ತೊಡೆ ಚಿವುಟಿಕೊಳ್ಳುವಂತಾಗಿದೆ.

ಸೂರತ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಕಾಂಗ್ರೆಸ್‌ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವೂ ಅಮಾನ್ಯವಾಗಿದೆ. ಈ ಅಭ್ಯರ್ಥಿಗಳ ನಾಲ್ಕೂ ಸೆಟ್‌ ನಾಮಪತ್ರಗಳು ತಿರಸ್ಕೃತಗೊಳ್ಳಲು ಕಾರಣ, ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದವರ ಹಿಂದೆಗೆತ. ಸೂಚಕರು ಅಫಿಡವಿಟ್‌ನಲ್ಲಿ ಮಾಡಿದ ಸಹಿ ತಮ್ಮದಲ್ಲ ಎಂದು ನಿರಾಕರಣೆ ಮಾಡಿದ್ದಾರೆ. ಆನಂತರ ಕಣದಲ್ಲಿದ್ದ ಇತರ ಏಳು ಜನ ಸ್ವತಂತ್ರ ಅಭ್ಯರ್ಥಿಗಳು ಮತ್ತು ಬಿಎಸ್‌ಪಿಯ ಪ್ಯಾರೇಲಾಲ್ ಭಾರ್ತಿ ಸ್ಪರ್ಧಾಕಣದಿಂದ ಹಿಂದೆ ಸರಿದಿದ್ದರಿಂದ ಬಿಜೆಪಿ ಅಭ್ಯರ್ಥಿ ಮುಕೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

‘ಈ ಗೆಲುವು 400 ಸ್ಥಾನಗಳನ್ನು ಗೆಲ್ಲುವ ಗುರಿಯ ಮೊದಲ ಗರಿ’ ಎಂದು ಬಿಜೆಪಿ ಸಂಭ್ರಮಿಸಿದೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಸೂರತ್ ಬೆಳವಣಿಗೆಗಳು ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಸೂಚಿಸುತ್ತವೆ. ನಮ್ಮ ಚುನಾವಣೆಗಳು, ನಮ್ಮ ಪ್ರಜಾಪ್ರಭುತ್ವ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಲ್ಲಾ ಅಪಾಯದಲ್ಲಿವೆ’ ಎಂದು ಎಚ್ಚರಿಸಿದ್ದಾರೆ.

ಗುಜರಾತ್‌ನ ಸೂರತ್ ಪ್ರಕರಣದ ನಂತರ ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್‌ ಕಾಂತಿ ಬಮ್ ಅವರು ಮತದಾನಕ್ಕೆ ಒಂದು ವಾರ ಇರುವಂತೆ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಇಂದೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಶಂಕರ್ ಲಾಲ್ವಾನಿ ವಿರುದ್ಧ ಅಕ್ಷಯ್ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದರು. ನಾಮಪತ್ರ ವಾಪಸ್ ಪಡೆದ ಬಳಿಕ ಅವರು ಬಿಜೆಪಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಅವರಿಗೆ ಬಿಜೆಪಿಯ ಮಹಾನ್‌ ನಾಯಕರು ಸ್ವಾಗತ ಕೋರಿದ್ದಾರೆ. ತಂತ್ರಗಾರಿಕೆ ರೂಪಿಸಿ, ಅದರಂತೆ ಕೊನೆಯ ದಿನದಂದೇ ನಾಮಪತ್ರ ಹಿಂಪಡೆಯುವಂತೆ ಮಾಡಲಾಗಿದೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.

ಇಂದೋರ್‌ನ ನ್ಯಾಯಾಲಯವೊಂದರಲ್ಲಿ ಅಕ್ಷಯ್ ಮತ್ತು ಅವರ ತಂದೆ ವಿರುದ್ಧ 2007ರಲ್ಲಿ ದಾಖಲಾಗಿದ್ದ ಭೂವಿವಾದವೊಂದರ ವಿಚಾರಣೆ ನಡೆಯುತ್ತಿದೆ. ಈ ವರ್ಷದ ಏಪ್ರಿಲ್ ಐದರಂದು ದೂರುದಾರರಾದ ಯೂನಿಸ್ ಪಟೇಲ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಪ್ರಕರಣದಲ್ಲಿ ಐಪಿಸಿಯ ಸೆಕ್ಷನ್ 307 (ಕೊಲೆ ಯತ್ನ) ಆರೋಪವನ್ನೂ ಸೇರಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದರು. ಅದಕ್ಕೆ ನ್ಯಾಯಾಲಯವು 24ರಂದು ಸಮ್ಮತಿ ಸೂಚಿಸಿತ್ತು. ಇದು ಇಂದೋರಿನಲ್ಲಿ ಕಣದಿಂದ ಹಿಂದೆ ಸರಿದ ಕಾಂಗ್ರೆಸ್ ಹುರಿಯಾಳಿನ ಹಿನ್ನೆಲೆ.

ಇನ್ನು, ಬಿಜೆಪಿ ಹೇಳಿಕೊಳ್ಳುವ ‘ತಂತ್ರಗಾರಿಕೆ’ ಸಹಜವಾಗಿಯೇ ಹಲವು ಬಗೆಯ ವ್ಯಾಖ್ಯಾನಗಳಿಗೆ ಆಸ್ಪದ ಮಾಡಿಕೊಡುತ್ತದೆ. ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನೆತ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಅಭ್ಯರ್ಥಿಗಳನ್ನು ಪುಸಲಾಯಿಸುವುದು, ನಾಮಪತ್ರ ಹಿಂಪಡೆಯುವಂತೆ ಒತ್ತಡ ಹೇರುವುದು, ಅವರನ್ನು ಹಾಗೂ ಸೂಚಕರನ್ನು ಬೆದರಿಸುವುದು ನಡೆಯುತ್ತಿದೆ. ಇದು ಭಾರತದ ಪ್ರಜಾಪ್ರಭುತ್ವಕ್ಕೆ ಬೆದರಿಕೆ’ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ತಾಂತ್ರಿಕ ಕಾರಣವೆಂದೋ ವೈಯಕ್ತಿಕ ನಿಲುವೆಂದೋ ಕಾಣಬಹುದಾದ ಈ ಪ್ರಸಂಗಗಳ ಒಳಾಂಗಣದಲ್ಲಿ ಇರುವ ಆತಂಕಕಾರಿ ‘ತಂತ್ರಗಾರಿಕೆ’ ಗುರುತಿಸಲು ವಿಶೇಷ ಕಣ್ಣೇನೂ ಬೇಕಿಲ್ಲ.

ಯಾವುದೇ ಸೋಲನ್ನು ಸ್ವೀಕರಿಸುವ, ಸಹಿಸಿಕೊಳ್ಳುವ ಮತ್ತು ನಿರ್ವಹಿಸುವ ಜಾಣತನವನ್ನೇ ಕಳೆದುಕೊಂಡ ಸಮಾಜದಲ್ಲಿ ನಾವಿದ್ದೇವೆ. ಇದರಲ್ಲಿ ರಾಜಕಾರಣಿಗಳು ಮತ್ತು ರಾಜಕಾರಣ ಬಹಳ ಮುಂದು. ಅಂತೆಯೇ ಚುನಾವಣೆಯ ಗೆಲುವಿಗಾಗಿ ಎಲ್ಲದಕ್ಕೂ ಸೈ ಎನ್ನುವ ಮನಃಸ್ಥಿತಿ ಸುತ್ತಲಿನ ಎಲ್ಲ ಆಗುಹೋಗುಗಳನ್ನೂ ಲಾಭಕ್ಕೆ ಎಳಸುತ್ತದೆ. ಸಮಾಜ, ಸಂವಿಧಾನ, ನೀತಿಸಂಹಿತೆ ಮಾತ್ರವಲ್ಲ, ಕನಿಷ್ಠ ನೈತಿಕತೆಯನ್ನು ಕೂಡ ಮರೆಯಾಗಿಸ ಬಲ್ಲದು ಅಧಿಕಾರದ ವಾಂಛೆ. ಅದರ ಪರಿಣಾಮವಾಗಿ ವಿದ್ಯಾರ್ಥಿನಿ ನೇಹಾಳ ಬರ್ಬರ ಕೊಲೆ, ಹಾಸನದ ಪೆನ್‌ಡ್ರೈವ್ ಅಂತಹ ಪ್ರಕರಣಗಳು ಅಧಿಕಾರದಾಹಿ ಪಕ್ಷಗಳಿಗೆ ಕರುಳು ಕಿವುಚುವ ಸಂಗತಿಗಳಾಗುವ ಬದಲು ಗೆಲುವು ಅವುಚುವ ತಂತ್ರಗಳಾಗಿ ಒದಗಿಬರುತ್ತವೆ.

‘ಮೂರನೇ ಅವಧಿಗೆ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾಯಿಸುವ ಮತ್ತು ಮೀಸಲಾತಿಯನ್ನು ರದ್ದುಗೊಳಿಸುವ ಉದ್ದೇಶವನ್ನು ಬಿಜೆಪಿ ಹೊಂದಿದೆ’ ಎಂಬ ಕಾಂಗ್ರೆಸ್ ಆರೋಪವನ್ನು ಅಲ್ಲಗಳೆದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೊನೆಗೂ ಜನಮಾನಸದ ಅನುಮಾನ ಕುರಿತು ಸ್ಪಷ್ಟ ಸಂದೇಶ ನೀಡಲು ಪ್ರಯತ್ನಿಸಿದ್ದಾರೆ. ಆದರೆ ಉತ್ತರ ಕನ್ನಡ ಕ್ಷೇತ್ರ ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ನಿರಂತರ ನೀಡಿದ ‘ಸಂವಿಧಾನ ಬದಲಾವಣೆ’ ಹೇಳಿಕೆಗಳು ಸುಲಭವಾಗಿ ಅಳಿಸಿ ಹೋಗುವಂತಹವಲ್ಲ. ಅಷ್ಟಕ್ಕೂ ಇವೆಲ್ಲಾ ಸಂವಿಧಾನವನ್ನು ಇಡಿಯಾಗಿ ಬದಲಿಸುವ, ಉಳಿಸುವ ಮಾತುಗಳು ಮತ್ತು ಸ್ಪಷ್ಟೀಕರಣಗಳು. ಆದರೆ ಪ್ರಸ್ತುತ ಚಾಲನೆಯಲ್ಲಿರುವ, ನಿಧಾನವಾಗಿ, ವ್ಯವಸ್ಥಿತವಾಗಿ ಮತ್ತು ಇಂಚಿಂಚಾಗಿ ಸಂವಿಧಾನದ ಆಶಯ, ಗುರಿ ಬದಲಿಸುವ ಪ್ರಕ್ರಿಯೆ ಬಗ್ಗೆ ಮತದಾರರೇ ಮನದಾಳದಿಂದ ಮಾತನಾಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT