ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಸತ್ತೆಗೆ ವಿದ್ಯಾರ್ಥಿ ಸಂಘದಿಂದ ಬಲ?

ನೇತಾರರನ್ನು ವಿಶ್ಲೇಷಿಸುವ ವಿವೇಕವನ್ನು ವಿದ್ಯಾರ್ಥಿ ದೆಸೆಯಿಂದಲೇ ಜಾಗೃತಗೊಳಿಸಬೇಕು
Last Updated 11 ಏಪ್ರಿಲ್ 2019, 20:27 IST
ಅಕ್ಷರ ಗಾತ್ರ

ಹದಿನೇಳನೆಯ ಸಾರ್ವತ್ರಿಕ ಚುನಾವಣೆಯ ಹೊಸ್ತಿಲಿನಲ್ಲಿದ್ದೇವೆ. ಭಾರತೀಯ ಚುನಾವಣಾ ಆಯೋಗವು ಚುನಾವಣಾ ಸಾಕ್ಷರತೆ (ಸ್ವೀಪ್) ಎನ್ನುವ ಜನಾಂದೋಲನ ರೂಪಿಸಿದೆ. ಇದು ಮತದಾನದ ಕುರಿತು ಜಾಗೃತಿ ಮೂಡಿಸುವ ಪ್ರಚಾರ ಕಾರ್ಯಕ್ರಮ. ಈ ಕಾರ್ಯದಲ್ಲಿ ಕೈಜೋಡಿಸುವಂತೆ ಆಯೋಗವು ವಿದ್ಯಾವಂತ ಯುವ ಸಮುದಾಯವನ್ನು ಒತ್ತಾಯಿಸಿದೆ.

ಕಳೆದ ಎಪ್ಪತ್ತು ವರ್ಷಗಳ ಚುನಾವಣಾ ಪ್ರಣೀತ ಪ್ರಜಾಪ್ರಭುತ್ವದ ಪ್ರಯಾಣವು ಹಲವು ಪಾಠಗಳನ್ನು ಕಲಿಸಿದೆ. ಪ್ರಜಾಪ್ರಭುತ್ವದ ಹಬ್ಬ ಎಂದು ಬಿಂಬಿತವಾಗಿರುವ ಚುನಾವಣೆಗಳನ್ನು ಜಾತಿ, ಧರ್ಮ ಮತ್ತು ಹಣದ ಬಲ ನಿರಂತರವಾಗಿ ಭ್ರಷ್ಟಗೊಳಿಸಿರುವ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಮತದಾನವನ್ನು ಅಧಿಕಾರ ಪ್ರತಿಷ್ಠಾಪಿಸುವ ಪವಿತ್ರ ಕಾರ್ಯವೆಂದು ಕರೆದು ಅಪವಿತ್ರಗೊಳಿಸಲಾಗಿದೆ. ಉತ್ಸಾಹ ಮತ್ತು ಕುತೂಹಲದಿಂದ ಮತದಾನದಲ್ಲಿ ಭಾಗಿಯಾಗಬೇಕಿದ್ದ ವಿದ್ಯಾವಂತ ಯುವಜನರು ಚುನಾವಣೆಗಳ ಬಗ್ಗೆ ನಿರುತ್ಸಾಹಿಗಳಾಗಿ
ದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನದಿಂದ ದೂರ ಉಳಿಯುತ್ತಿದ್ದಾರೆ ಕೂಡ. ದೇಶದ ಭವಿಷ್ಯದ ಹೊಣೆ ಹೊರಬೇಕಿದ್ದ ಯುವ ಸಮುದಾಯದ ಇಂತಹ ವರ್ತನೆ ಆಘಾತಕಾರಿ. ಯುವಜನರನ್ನು ಚುನಾವಣೆಗಳಿಂದ ದೂರ ಉಳಿಸುತ್ತಿರುವ ಸಂಗತಿಗಳು ಗುಟ್ಟಿನವೇನೂ ಅಲ್ಲ. ಭಾರತದಲ್ಲಿ ಚುನಾವಣೆ ಆದರ್ಶಗಳು ಪಾಲನೆಯಾಗುವುದು ಪುಸ್ತಕಗಳಲ್ಲಿ ಮಾತ್ರ ಎಂಬುದನ್ನು ಯುವಜನ ಕಂಡುಕೊಂಡಿದ್ದಾರೆ ಎಂಬ ಮಾತನ್ನು ಬೇಸರದಿಂದಲೇ ಹೇಳಬೇಕು. ಒಂದು ಕಾಲದಲ್ಲಿ ಊಳಿಗಮಾನ್ಯ ಕುಟುಂಬಗಳ ಹಿತಾಸಕ್ತಿ ಕಾಯುತ್ತಿದ್ದ ಚುನಾವಣೆಗಳೀಗ ಹಣವಂತರ ಅಖಾಡವಾಗಿ ಪರಿವರ್ತಿತವಾಗಿವೆ. ಕರ್ನಾಟಕದಲ್ಲಿ ಇದು ಜುಗುಪ್ಸೆ ಹುಟ್ಟಿಸುವಂತಿದೆ.

ಸಾಮಾಜಿಕ ನ್ಯಾಯವನ್ನು ಪಾಲಿಸುವ ವಚನವಿತ್ತವರು ರಕ್ತಸಂಬಂಧಗಳ ಸುಳಿಗೆ ಸಿಲುಕಿದ್ದಾರೆ. ಜನಹಿತವನ್ನು ನಿರ್ಲಕ್ಷಿಸಿ ‘ರಾಷ್ಟ್ರಭಕ್ತಿ’ಯನ್ನು ಬಂಡವಾಳ ಮಾಡಿಕೊಂಡಿರುವ ಪಕ್ಷಗಳು ತಮ್ಮ ವಾರಸುದಾರರಿಗೆ ಪಟ್ಟ ಕಟ್ಟಲು ಮುಂದಾಗಿವೆ. ರಾಜಕೀಯ ನಾಯಕರ ಭಾಷೆ ಮತ್ತು ಆಲೋಚನೆಗಳ ಬಡತನವನ್ನು ಗಮನಿಸಿದರೆ, ಯಾವ ಸಂವೇದನಾಶೀಲರಿಗಾದರೂ ಈ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಉತ್ಸಾಹ ಮೂಡುವುದಿಲ್ಲ. ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳು ನಿರ್ಭೀತ ಹಾಗೂ ಮುಕ್ತ ಅಭಿವ್ಯಕ್ತಿಯ ಮತದಾನದ ಭರವಸೆಯನ್ನು ಇಲ್ಲವಾಗಿಸಿವೆ. ಇದರ ಪರಿಣಾಮವಾಗಿಯೇ ಯುವ ಮತದಾರರ ಮತ ಚಲಾವಣೆಯ ಪ್ರಮಾಣ ನಿರಂತರವಾಗಿ ಕುಸಿಯುತ್ತಿದೆ.

ಈ ನಿರಾಸಕ್ತಿ ಪ್ರಜಾಪ್ರಭುತ್ವಕ್ಕೆ ಒದಗುತ್ತಿರುವ ಗಂಡಾಂತರದ ಸೂಚನೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, ಮತದಾನ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಲು ಚುನಾವಣಾ ಆಯೋಗವು ಶಾಲಾ ಕಾಲೇಜುಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆಯೋಗದ ಪ್ರಚಾರ ಕಾರ್ಯಕ್ರಮಗಳ ಹೇರಿಕೆಯು ‘ಯುದ್ಧ ಬಂದಾಗ ಶಸ್ತ್ರಾಭ್ಯಾಸ ಮಾಡಿದರು’ ಎಂಬ ಗಾದೆಯನ್ನು ನೆನಪಿಗೆ ತರುತ್ತಿದೆ. ಪ್ರಜಾಪ್ರಭುತ್ವದ ಬೇರುಗಳು ಬಲವಾಗಲು ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಳವಾಗಲೇ ಬೇಕು ಹಾಗೂ 2014ರ ಸಾರ್ವತ್ರಿಕ ಚುನಾವಣೆಯ ಮತದಾನದ ಪ್ರಮಾಣವಾದ ಶೇಕಡ 66.38ನ್ನು 2019ರಲ್ಲಿ ಮೀರಬೇಕು ಎನ್ನುವ ಗುರಿಯನ್ನು ಹೊಂದಿದೆ.

ಯುವ ಸಮುದಾಯ ಮತದಾನದಲ್ಲಿ ತೋರುವ ನಿರಾಸಕ್ತಿಗೂ, ಚುನಾವಣಾ ಪ್ರಕ್ರಿಯೆಗಳನ್ನು ವಿದ್ಯಾರ್ಥಿಗಳಿಗೆ ಪರೋಕ್ಷವಾಗಿ ಕಲಿಸುತ್ತಿದ್ದ ವಿದ್ಯಾರ್ಥಿ ಸಂಘಗಳನ್ನು ಎರಡು ದಶಕಗಳ ಹಿಂದೆ ಸರ್ಕಾರಗಳು ರದ್ದು ಮಾಡಿರುವುದಕ್ಕೂ ಸಂಬಂಧವಿರುವ ಹಾಗೆ ಭಾಸವಾಗುತ್ತಿದೆ. ಆದರೆ ಈ ಅಂಶವನ್ನು ಆಯೋಗ ಈವರೆಗೂ ಗಮನಿಸದೇ ಇರುವುದು ಅಚ್ಚರಿಯ ಸಂಗತಿ. ಸ್ವಾತಂತ್ರ್ಯಾನಂತರದ ಮೊದಲ ಚುನಾವಣೆಗಳ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಅಧಿಕ ಸಂಖ್ಯೆಯ ಅನಕ್ಷರಸ್ಥ ಪ್ರಜೆಗಳಿಗೆ ಮನವರಿಕೆ ಮಾಡಿಕೊಡುವುದು ಕಷ್ಟದ ಕೆಲಸವಾಗಿತ್ತು. ಚುನಾವಣೆಯ ತಿಳಿವಳಿಕೆಯನ್ನು ಯುವಜನರಲ್ಲಿ ಮೂಡಿಸಲು, ಶೈಕ್ಷಣಿಕ ಪಠ್ಯಗಳ ಭಾಗವಾಗಿ ಶಾಲಾಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸುವ ಪ್ರಯೋಗ ಜಾರಿಗೆ ಬಂದಿತು. ಪ್ರತಿ ಶಿಕ್ಷಣ ಸಂಸ್ಥೆಯೂ ತನ್ನ ವಿದ್ಯಾರ್ಥಿಗಳಿಗೆ ಚುನಾವಣೆ ಪ್ರಕ್ರಿಯೆಗಳನ್ನು ಪರಿಚಯಿಸುವ ವಿದ್ಯಾರ್ಥಿ ಸಂಘಗಳನ್ನು ಸ್ಥಾಪಿಸುತ್ತಿತ್ತು. ಈ ಪ್ರಕ್ರಿಯೆಯಿಂದ ವಿದ್ಯಾರ್ಥಿಗಳು ಮತದಾರರಾಗಿ ವೋಟಿನ ಹಕ್ಕನ್ನು ಪಡೆಯುವ ವೇಳೆಗೆ, ಅವರಿಗೆ ವೋಟಿನ ಮಹತ್ವ ಮತ್ತು ಮತದಾನದ ಪ್ರಕ್ರಿಯೆಗಳು ಮನನವಾಗುತ್ತಿದ್ದವು.

ಭಾರತದಲ್ಲಿ ಕಲಿಕೆ ಮತ್ತು ಅದಕ್ಕೆ ಪೂರಕವಾದ ಅನುಭವ ಜತೆಗೂಡಿದ ಸಂದರ್ಭಗಳು ಬಹಳ ವಿರಳ. ಅಂತಹ ವಿರಳ ಯೋಜನೆಗಳಲ್ಲಿ ವಿದ್ಯಾರ್ಥಿ ಸಂಘಗಳ ಸ್ಥಾಪನೆಯೂ ಒಂದು. ಪ್ರಜಾಪ್ರಭುತ್ವದ ಮೂಲತತ್ವಗಳನ್ನು ಕಲಿಕೆಯ ಜೊತೆಜೊತೆಯಲ್ಲಿ ಪರಿಚಯಿಸುವ ವೇದಿಕೆಯನ್ನು ವಿದ್ಯಾರ್ಥಿ ಸಂಘಗಳು ಸೃಷ್ಟಿಸುತ್ತಿದ್ದವು.ಪ್ರಜಾಪ್ರಭುತ್ವದ ವ್ಯವಸ್ಥೆಯ ಆದರ್ಶ ಸ್ಥಿತಿಯಲ್ಲಿ ಮತದಾನದ ಮೂಲಕ ಪ್ರತಿನಿಧಿಗೆ ಅಧಿಕಾರ ನೀಡುವ ಪ್ರಜೆಯೇ ತನ್ನ ಪ್ರತಿನಿಧಿಯ ಕಾರ್ಯವೈಖರಿಯನ್ನು ವಿಶ್ಲೇಷಣೆಗೆ ಒಳಪಡಿಸುವ ವಿವೇಕವನ್ನು ಹೊಂದಿರಬೇಕು. ಇಂತಹ ಎಚ್ಚರದ ಸಾಮಾಜಿಕ ವ್ಯವಸ್ಥೆಯನ್ನು ನಿಜಗೊಳಿಸಲು ಉದ್ದೇಶಿತ ಮತದಾರರನ್ನು ವಿದ್ಯಾರ್ಥಿ ದೆಸೆಯಿಂದಲೂ ತರಬೇತುಗೊಳಿಸುವುದು ಅಗತ್ಯ.

ಹೀಗೆ ಅಸ್ತಿತ್ವಕ್ಕೆ ತಂದ ವಿದ್ಯಾರ್ಥಿ ಸಂಘಗಳು ಈ ಆಶಯ ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಎರಡು ರೀತಿಯ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದವು. ನಾಯಕರಾಗಲು ಬಯಸುವವರಿಗೆ ಚುನಾವಣೆ ಪ್ರಕ್ರಿಯೆಗಳಾದ ಉಮೇದುವಾರಿಕೆಯ ಅರ್ಜಿ ಸಲ್ಲಿಕೆ, ಪ್ರಣಾಳಿಕೆ ಸಿದ್ಧಗೊಳಿಸುವುದು, ಭಾಷಣ ಮಾಡುವುದು, ಮತ ಸೆಳೆಯಲು ತಂತ್ರ ರೂಪಿಸುವುದು ಇತ್ಯಾದಿ ತರಬೇತಿ ಸಿಗುತ್ತಿತ್ತು. ಮತದಾರರಾಗಿ ಮಾತ್ರ ಉಳಿಯುವ ವಿದ್ಯಾರ್ಥಿಗಳಿಗೂ ಚುನಾವಣಾ ಪ್ರಕ್ರಿಯೆಯ ಈ ಎಲ್ಲಾ ಆಯಾಮಗಳು ಅನುಭವಜನ್ಯವಾಗುತ್ತಿದ್ದವು. ಇಂದು ಯಾವುದನ್ನು ಚುನಾವಣಾ ಆಯೋಗ ಆಂದೋಲನವಾಗಿ ಪ್ರಚಾರ ಮಾಡುತ್ತಿದೆಯೋ, ಅಂದು ಅದು ಶೈಕ್ಷಣಿಕ ಕಲಿಕೆಯ ಭಾಗವಾಗಿಯೇ ದಕ್ಕುತ್ತಿತ್ತು.

ಆದರೆ, ರಾಜಕೀಯ ಪಕ್ಷಗಳು ‘ಯುವ ಘಟಕ’ಗಳನ್ನು ಸ್ಥಾಪಿಸುವ ಮೂಲಕ ಶೈಕ್ಷಣಿಕ ವಿದ್ಯಾರ್ಥಿ ಸಂಘಗಳಿಗೂ ತಮ್ಮ ಜಾತಿ ಮತ್ತು ಶಕ್ತಿ ರಾಜಕಾರಣದ ಸೋಂಕನ್ನು ಹಚ್ಚಿದವು. ಇಂಥ ಕೈವಾಡದಿಂದ ವಿದ್ಯಾರ್ಥಿ ಸಂಘಗಳು ಎಂಬತ್ತರ ದಶಕದಲ್ಲಿ ಹಿಂಸಾತ್ಮಕವಾದ ಕೆಲಸಗಳಲ್ಲಿ ತೊಡಗಿದ ಉದಾಹರಣೆಗಳಿವೆ. ಹಲವು ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿದವು. ಈ ಕಾರಣಗಳಿಂದ 1989ರಲ್ಲಿ ಕರ್ನಾಟಕ ಸರ್ಕಾರ ವಿದ್ಯಾರ್ಥಿ ಸಂಘಗಳನ್ನು ವಿವೇಕರಹಿತವಾಗಿ ರದ್ದು ಮಾಡುವ ಆದೇಶ ಹೊರಡಿಸಿತು. ಎಪ್ಪತ್ತು ಮತ್ತು ಎಂಬತ್ತರ ದಶಕಗಳಲ್ಲಿ ಕ್ರಿಯಾಶೀಲವಾಗಿದ್ದ ವಿದ್ಯಾರ್ಥಿ ಸಂಘಗಳು ಸದನದ ಹೊರಗೆ ವಿರೋಧ ಪಕ್ಷಗಳ ಹಾಗೇ ಸರ್ಕಾರದ ಕಾರ್ಯಕ್ರಮಗಳಿಗೆ ಪ್ರತಿಕ್ರಿಯಿಸುತ್ತಿದ್ದ ಘಟನೆಗಳು ಚರಿತ್ರೆಯ ಪುಟ ಸೇರಿವೆ.

ಆಳುವ ಸರ್ಕಾರಗಳು ವಿದ್ಯಾರ್ಥಿಗಳ ಮುಷ್ಕರಗಳಿಗೆ ಮಣಿದು ಹಲವು ಆದೇಶಗಳನ್ನು ಹಿಂಪಡೆದ ಉದಾಹರಣೆಗಳೂ ಉಂಟು. ಕ್ರಮೇಣ ರಾಜಕೀಯ ಪಕ್ಷಗಳು ವಿದ್ಯಾರ್ಥಿ ಸಂಘಗಳನ್ನು ಪ್ರಾಯೋಜಿಸುವ ಮೂಲಕ ವಿದ್ಯಾರ್ಥಿ ಸಂಘಗಳ ಪ್ರಜಾಸತ್ತಾತ್ಮಕ ಆಶಯಗಳನ್ನು ಜಾತಿ ಮತ್ತು ತೋಳ್ಬಲದ ಮೂಲಕ ನಿಯಂತ್ರಿಸತೊಡಗಿದವು. ತೊಂಬತ್ತರ ದಶಕದ ನಂತರ ವಿದ್ಯಾರ್ಥಿ ಸಂಘಗಳ ಗೈರುಹಾಜರಿಯ ಪರಿಣಾಮ, ರಿಯಲ್ ಎಸ್ಟೇಟ್ ಶಕ್ತಿಗಳು ಯುವ ನಾಯಕತ್ವವನ್ನು ರೂಪಿಸುವ ತಾಣಗಳಾಗಿರುವುದು ಪ್ರಜಾಸತ್ತೆಯ ಆಶಯಗಳ ಶೈಥಿಲ್ಯದ ಲಕ್ಷಣವಾಗಿದೆ. ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್‍ಸನ್ ಅವರು ಹೇಳುವಂತೆ ‘ಪ್ರತಿ ತಲೆಮಾರು ಕೂಡ ಒಂದು ಹೊಸ ರಾಷ್ಟ್ರ’ ಎಂಬ ಅರಿವನ್ನು ವಾಸ್ತವಗೊಳಿಸುವ ನಿಟ್ಟಿನಲ್ಲಿ ಸರ್ಕಾರವು ವಿದ್ಯಾರ್ಥಿ ಸಂಘಗಳನ್ನು ಪುನರಾರಂಭಿಸುವುದು ಇಂದಿನ ತುರ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT