ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ | ಪ್ರಶ್ನೋತ್ತರ ಅಭ್ಯಾಸ ಮತ್ತು ಫಲಿತಾಂಶ

ಮಕ್ಕಳ ಕಲಿಕಾ ಸಾಮರ್ಥ್ಯವನ್ನೇ ಕುಂಠಿತಗೊಳಿಸುವಂತಿದೆ ನಮ್ಮ ಶಿಕ್ಷಣ ವ್ಯವಸ್ಥೆ
Published 20 ನವೆಂಬರ್ 2023, 0:30 IST
Last Updated 20 ನವೆಂಬರ್ 2023, 0:30 IST
ಅಕ್ಷರ ಗಾತ್ರ

ಯಾವುದೇ ಕಲಿಕೆ ಪರಿಪೂರ್ಣ ಅನ್ನಿಸಿಕೊಳ್ಳಬೇಕಾದರೆ ಶೇಕಡ 100ರಷ್ಟು ಕಲಿಕಾ ಸಾಧನೆಯನ್ನೇ ಹೊಂದಿರಬೇಕು ಎಂಬುದು ತಾತ್ವಿಕವಾಗಿ ಸರಿ. ಅಂತಹ ಗುರಿ ಸಾಧನೆಯಲ್ಲಿ ಕಲಿಕೆಯ ಸಮಗ್ರ ಮೌಲ್ಯಮಾಪನ ನಡೆಯಬೇಕಾಗುತ್ತದೆ. ಆದರೆ, ಪ್ರಸ್ತುತ ಪರೀಕ್ಷಾ ಪದ್ಧತಿಯು ‘ಸಮಗ್ರ ಮೌಲ್ಯಮಾಪನ’ವನ್ನು ಮಾಡುವು ದಿಲ್ಲ. ಸದ್ಯಕ್ಕೆ ಎಲ್ಲ ವಿದ್ಯಾರ್ಥಿಗಳೂ ಉತ್ತೀರ್ಣರಾ
ಗುವುದು ಮುಖ್ಯವಾಗಿದೆ.‌ ಇಂತಹ ಸ್ಥಿತಿಯಲ್ಲಿ, ಶಿಕ್ಷಣೋದ್ಯ ಮವು ತನ್ನ ಸಾಧನೆಯನ್ನು ಸಾಬೀತುಪಡಿಸಲು, ಸಮಸ್ತ ವಿದ್ಯಾರ್ಥಿಗಳೂ ನೂರಕ್ಕೆ ನೂರರಷ್ಟು ಅಂಕಗಳನ್ನು ಪಡೆ ಯುವುದೇ ಅತ್ಯುತ್ತಮ ಗುಣಮಟ್ಟ ಎನ್ನುವ ಸ್ಥಿತಿಗೆ ಶಿಕ್ಷಣ ವ್ಯವಸ್ಥೆಯನ್ನು ತಲುಪಿಸಿದರೆ ಯಾವ ಆಶ್ಚರ್ಯವೂ ಇಲ್ಲ.

ಸದ್ಯಕ್ಕೆ ಸಾರ್ವತ್ರಿಕ ಆದರ್ಶದ ಮಾನದಂಡವಾಗಿ ರುವ ನೂರಕ್ಕೆ ನೂರರಷ್ಟು ಉತ್ತೀರ್ಣತೆಯ ಪರಿ ಕಲ್ಪನೆಯು ‘ಕಲಿಕೆ’ಯನ್ನು ಅರ್ಥಹೀನಗೊಳಿಸುತ್ತಿರುವ ಕೆಲವು ಉದಾಹರಣೆಗಳನ್ನು ನೋಡೋಣ.

ಎಂಬತ್ತು ಕಿ.ಮೀ. ವೇಗದಲ್ಲಿ ಸಾಗುವ ವಾಹನವನ್ನು ಸ್ವಲ್ಪ ಬೇಗ ತಲುಪಲಿಕ್ಕಾಗಿ ನೂರು ಕಿ.ಮೀ. ವೇಗದಲ್ಲಿ ಓಡಿಸಬಹುದು. ಆದರೆ 160 ಕಿ.ಮೀ. ವೇಗದಲ್ಲಿ ಓಡಿಸಲು ಸಾಧ್ಯವೇ? ನಮ್ಮ ‘ನೂರು ಶೇಕಡ’ ಗುಣಮಟ್ಟದ (?) ಹಲವು ಶಾಲೆಗಳಲ್ಲಿ ಇದು ಸಾಧ್ಯವಾಗುತ್ತದೆ. ಮೊದಮೊದಲು, ಮಾರ್ಚ್ ತಿಂಗಳಿಗೆ ಪೂರ್ಣಗೊಳಿಸ ಬೇಕಾದ ಪಾಠಗಳನ್ನು ಫೆಬ್ರುವರಿಗೇ ಪೂರ್ಣಗೊಳಿಸಿ ನಂತರ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸುವ ಪದ್ಧತಿ ಅಘೋಷಿತವಾಗಿ ಜಾರಿಗೆ ಬಂತು. ಅದೀಗ ಮುಂದುವರಿದು, ಕೆಲವೆಡೆ ಅಕ್ಟೋಬರ್- ನವೆಂಬರ್‌ನಲ್ಲಿ ಪಾಠಗಳನ್ನು ಪೂರ್ಣಗೊಳಿಸಬೇಕು ಎಂಬ ಪರಿಕಲ್ಪನೆಯಾಗಿ, ಇನ್ನೂ ಅತಿಯಾದ ಹೆಸರಾಂತ ಶಾಲೆಗಳಲ್ಲಿ ಆಗಸ್ಟ್‌ಗೇ ಪಾಠಗಳನ್ನು ಪೂರ್ಣಗೊಳಿಸಿ ನಂತರ ಪರೀಕ್ಷೆಗೆ ಸಿದ್ಧಪಡಿಸುವ ಪದ್ಧತಿಯಾಗಿ ಚಲಾವಣೆಯ
ಲ್ಲಿದೆ. ಹತ್ತು ತಿಂಗಳಿನಲ್ಲಿ ಪೂರ್ಣಗೊಳಿಸಬೇಕಾದ ಪಠ್ಯ ವಸ್ತುವನ್ನು ಮೂರೇ ತಿಂಗಳಲ್ಲಿ ಪೂರ್ಣಗೊಳಿಸುವುದು!

ಪಿ.ಯು.ಸಿ. ವಿಜ್ಞಾನ ಕಾಲೇಜುಗಳಲ್ಲಿ ಭಾಷಾ ಪಠ್ಯ ಗಳನ್ನು ಆಗಸ್ಟ್‌ಗೇ ಮುಗಿಸಿ ಉಳಿದ ತಿಂಗಳುಗಳಲ್ಲಿ ಭಾಷಾ ಬೋಧನೆಯ ಅವಧಿಯನ್ನು ಐಚ್ಛಿಕ ವಿಷಯಗಳ ಕಲಿಕೆ, ನೀಟ್ ತರಬೇತಿಯಂತಹವುಗಳಿಗಾಗಿ ಬಳಸುವ ಪದ್ಧತಿಯಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ, ಚಿತ್ರಕಲೆಯಂಥ ತರಗತಿಗಳು ಗಣಿತ ತರಗತಿಗಳಾಗಿ ಪರಿವರ್ತನೆಯಾಗುವ ಸ್ಥಿತಿಯಾದರೆ, ಪದವಿಪೂರ್ವ ಶಿಕ್ಷಣದಲ್ಲಿ ಭಾಷಾ ತರಗತಿಗಳು ದೈಹಿಕ ಶಿಕ್ಷಣ ತರಗತಿಗೆ ಸಮಾನವಾಗಿ ಪರಿಗಣಿಸಲ್ಪಟ್ಟು, ಗಣಿತ, ಭೌತಶಾಸ್ತ್ರದಂತಹ ತರಗತಿಗಳಾಗಿ ಪರಿವರ್ತನೆ ಆಗುತ್ತವೆ.

ಆಗಸ್ಟ್‌ನಲ್ಲಿ ಪಾಠವನ್ನು ಮುಗಿಸಿದ ನಂತರದ ಹಂತ ಇನ್ನೂ ವಿಚಿತ್ರವಾಗಿ ಇರುತ್ತದೆ. ನೋಟ್ಸ್ ಕೊಡುವ ಅಥವಾ ಬರೆಸುವ ಪದ್ಧತಿಗಳಿಲ್ಲ, ಇದ್ದರೂ ‘ದಾಖಲೆ’ಗಾಗಿ ಸಾಂಕೇತಿಕ ರೀತಿಯದ್ದಾಗಿರುತ್ತವೆ. ಬದಲಿಗೆ, ಪರೀಕ್ಷೆಯಲ್ಲಿ ಬರಬಹುದಾದ ಪ್ರಶ್ನೆ ಮತ್ತು ಉತ್ತರಗಳ ಮುದ್ರಿತ ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ.‌ ಇಡೀ ವರ್ಷ ಇದನ್ನೇ ಅಭ್ಯಾಸ ಮಾಡಿಸುವುದು. ಅಭ್ಯಾಸದಲ್ಲೂ ತರಹೇವಾರಿ ಪದ್ಧತಿಗಳಿ ರುತ್ತವೆ. ಓದಿಸುವುದು, ಬಾಯಿಪಾಠ ಮಾಡಿಸುವುದು ಮತ್ತು ಬರೆಸುವುದು. ಬರೆದಾಗ ಒಂದೇ ಒಂದು ಸ್ಪೆಲಿಂಗ್‌ ದೋಷ ಉಂಟಾಗದ ಹಾಗೆ ಮಾಡಲು ಆಗುತ್ತದೆ. ಸಮಸ್ಯೆ ಏನೆಂದರೆ, ವಿದ್ಯಾರ್ಥಿಗಳು ಪ್ರಶ್ನೆಗೆ ಉತ್ತರವಾಗಿ ಸ್ಪೆಲಿಂಗ್ ಬರೆಯುತ್ತಾರೆ. ಆದರೆ ಒಂದು ವಾಕ್ಯವೊ, ಪದವೊ ಮರೆತುಹೋದರೆ, ವಿಚಾರ ಗೊತ್ತಿದ್ದರೂ ಅದನ್ನು ವಾಕ್ಯ ಮಾಡಿ ಬರೆಯುವುದು ಹೇಗೆ ಎಂದು ಗೊತ್ತಿಲ್ಲದೆ ಬಳಲುತ್ತಾರೆ.

ಪರೀಕ್ಷೆಗಾಗಿ ಅಭ್ಯಾಸ ಮಾಡಿಸುವ ಪ್ರಕ್ರಿಯೆಯಲ್ಲಿ ಆಗಿಂದಾಗ್ಗೆ ನಡೆಸುವ ಅಭ್ಯಾಸ ಪರೀಕ್ಷೆ
ಗಳಲ್ಲಿ ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸಿ ಬರೆದರೆ ಅಂಕಗಳನ್ನು ಕಳೆಯುವ ಪದ್ಧತಿಯೂ ಇದೆ.‌ ಒದಗಿಸಲಾಗಿ ರುವ ಮುದ್ರಿತ ಸಾಮಗ್ರಿಯಲ್ಲಿ ಇದ್ದ ಹಾಗೆಯೇ ಬರೆಯ ಬೇಕು ಎಂದು ಒತ್ತಾಯಿಸಲಾಗುತ್ತದೆ.‌ ಅಂದರೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ಯೋಚಿಸುವ ಹಾಗೂ ಇಲ್ಲ, ತಾವೇ ವಾಕ್ಯ ರಚನೆ ಮಾಡುವ ಹಾಗೂ ಇಲ್ಲ. ಇದನ್ನು ಕಲಿಕಾ ವ್ಯವಸ್ಥೆ ಎಂಬ ಹೆಸರಿನಿಂದ ಕರೆಯಲಾಗುತ್ತದೆ ಮಾತ್ರವಲ್ಲ ಅತ್ಯಂತ ಗುಣಮಟ್ಟದ ಶಿಕ್ಷಣ ಎಂದೂ ಘೋಷಿಸಲಾಗುತ್ತದೆ. ಏಕೆಂದರೆ ಅಲ್ಲಿ ನೂರು ಶೇಕಡ ಫಲಿತಾಂಶ ಬಂದಿರುತ್ತದೆ!

ಹೀಗಿರುತ್ತಾ, ಇಂತಹ ಫಲಿತಾಂಶಕ್ಕಾಗಿ ವಿದ್ಯಾರ್ಥಿ ಗಳಿಗೂ ಅಧ್ಯಾಪಕರಿಗೂ ತರಬೇತಿ ಕಾರ್ಯಾಗಾರ
ಗಳನ್ನೂ ಆಯೋಜಿಸುವ ವ್ಯವಸ್ಥೆ ಇರುತ್ತದೆ. ನಿಜವಾಗಿ ಅಧ್ಯಾಪಕರಿಗೆ ತರಬೇತಿ ಬೇಕಾಗುವುದು ಉತ್ತಮ ಗುಣಮಟ್ಟದ ಬೋಧನೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ. ವಿದ್ಯಾರ್ಥಿಗಳಿಗೆ ತರಬೇತಿ ಬೇಕಾಗು ವುದು ಸಮರ್ಥವಾಗಿ ಅಧ್ಯಯನ ನಡೆಸುವುದು ಹೇಗೆ, ತಮ್ಮ ಮಾನಸಿಕ ಸ್ಥಿರತೆಯನ್ನು, ಭಾವನಾತ್ಮಕ ನಿಯಂತ್ರಣ ವನ್ನು ಹೇಗೆ ಸಾಧಿಸಿಕೊಳ್ಳಬೇಕು ಎಂಬುದರ ಬಗ್ಗೆ. ಅಧ್ಯಯನ ನಡೆಸುವಾಗ ಸ್ವತಂತ್ರ ಚಿಂತನೆ, ತಾರ್ಕಿಕ ಸಾಮರ್ಥ್ಯ, ವಿಮರ್ಶಾ ಸಾಮರ್ಥ್ಯ, ಜ್ಞಾನದ ಅನ್ವಯಗಳೆಲ್ಲ ಸೇರಿಕೊಳ್ಳುತ್ತವೆ. ಆದರೆ ‘ನೂರು ಶೇಕಡ’ ಶಿಕ್ಷಣದಲ್ಲಿ ಅಧ್ಯಾಪಕರಿಗೆ ಬೋಧನಾ ಕೌಶಲವೂ ಬೇಡ, ವಿದ್ಯಾರ್ಥಿಗಳಿಗೆ ಅಧ್ಯಯನ ಕೌಶಲವೂ ಬೇಡ. ಒಂದು ರಾಶಿ ಪ್ರಶ್ನೋತ್ತರಗಳನ್ನು ಇರಿಸಿಕೊಳ್ಳುವುದು, ಅವುಗಳನ್ನು ಮಾತ್ರ ಓದುವುದು, ಬರೆಯುವುದು, ಬರೆದದ್ದು ಮುದ್ರಿತ ಸಾಮಗ್ರಿಯಲ್ಲಿ ಇದ್ದ ಹಾಗೇ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಿ ತಿದ್ದುವುದು- ಇಷ್ಟೇ ಪ್ರಕ್ರಿಯೆ ನಡೆಯುವುದು.‌

ಇದನ್ನಷ್ಟೇ ಮಾಡಲು ಯಾವ ತರಬೇತಿಯ ಅಗತ್ಯವೂ ಅಧ್ಯಾಪಕರಿಗಾಗಲೀ ವಿದ್ಯಾರ್ಥಿಗಳಿ
ಗಾಗಲೀ ಬೇಕಾಗುವುದಿಲ್ಲ. ನಿಜವಾಗಿ ಡಿ.ಇಡಿ., ಬಿ.ಇಡಿ. ಮಾಡಿದ ಅಧ್ಯಾಪಕರ ಅವಶ್ಯಕತೆಯೂ ಇರುವುದಿಲ್ಲ. ವಿದ್ಯಾರ್ಥಿಗಳು ಓದಿ ಬರೆದು ಅಭ್ಯಾಸ ಮಾಡುತ್ತಾರೆಯೋ ಇಲ್ಲವೋ ಎಂದು ನೋಡಿಕೊಳ್ಳಲು ಒಬ್ಬ ಮನುಷ್ಯ ಇದ್ದರೆ ಸಾಕಾಗುತ್ತದೆ.

ಸಮರ್ಪಕವಾದ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಶ್ನೋತ್ತರ ಗಳನ್ನು ರಾಶಿ ಹಾಕಿಕೊಂಡು ಅಭ್ಯಾಸ ಮಾಡಿಸುವ ಪದ್ಧತಿಯ ಅವಶ್ಯಕತೆ ಇರುವುದು ಕಲಿಕೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳಿಗೆ ಮಾತ್ರ. ಶಿಕ್ಷಣ ಎಂದರೆ ಅಲ್ಲಿ ಶೋಧಕ ಪ್ರವೃತ್ತಿ, ಸ್ವತಂತ್ರ ಚಿಂತನೆ, ನೈತಿಕ ಪ್ರಜ್ಞೆ, ಭಾಷೆಯ ವಿಕಾಸ, ವರ್ತನೆಯಲ್ಲಿ ಸುಧಾರಣೆ, ಜ್ಞಾನವನ್ನು ಅನ್ವಯಿಸಿಕೊಳ್ಳುವ ಸಾಮರ್ಥ್ಯ, ಭಾವನಾತ್ಮಕ ಸಮಸ್ಥಿತಿಯ ಸಾಧನೆ, ಸ್ವತಂತ್ರವಾಗಿ ಭಾಷೆಯ ಪ್ರಯೋಗ ದಂತಹ ಅನೇಕ ಅಂಶಗಳು ಬರುತ್ತವೆ. ಪಠ್ಯವಸ್ತು ಇದನ್ನೆಲ್ಲ ಸಾಧಿಸಲು ಇರುವ ಮಾಧ್ಯಮ ಅಷ್ಟೆ; ಶಾಸ್ತ್ರೀಯ ಸಂಗೀತಗಾರನಿಗೆ ಪದಗಳು ಇದ್ದ ಹಾಗೆ. ಸಂಗೀತಗಾರನಿಗೆ ಪದಗಳು ರಾಗವನ್ನು ಧ್ವನಿಯಲ್ಲಿ ಹೊರಡಿಸಲು ಇರುವ ಸಾಧನವಷ್ಟೇ ವಿನಾ ಪದಗಳ ಅರ್ಥಗಳು ಅವನಿಗೆ ಮುಖ್ಯವಲ್ಲ. ಅದೇರೀತಿ ವಿದ್ಯಾರ್ಥಿಗಳಿಗೆ ಪಠ್ಯವಸ್ತುವು ಸಾಮರ್ಥ್ಯಗಳನ್ನು ಸಾಧಿಸಲು‌ ಇರುವ ಮಾಧ್ಯಮವಷ್ಟೆ; ಪಠ್ಯವಸ್ತುವೇ ಪ್ರಧಾನವಲ್ಲ.

ಆದರೆ ಎಲ್ಲ ವಿದ್ಯಾರ್ಥಿಗಳ ಆಸಕ್ತಿಗಳ ಕ್ಷೇತ್ರವನ್ನೇ ಮಾಧ್ಯಮವಾಗಿ ಇರಿಸಿಕೊಂಡು (ಉದಾ: ಮೀನು ಹಿಡಿಯುವುದು, ಮರ ಹತ್ತುವುದು...) ಬೋಧನೆಯನ್ನು ನಡೆಸುವ ಔಪಚಾರಿಕ ಶಿಕ್ಷಣ ನಮ್ಮ ಬಳಿ ಇಲ್ಲ. ಅದನ್ನು ಮಾಡುವುದೂ ಸುಲಭವಿಲ್ಲ. ಆಗ, ಇರುವ ಶಿಕ್ಷಣ ವ್ಯವಸ್ಥೆಯ ಪಠ್ಯವನ್ನು ಗ್ರಹಿಸಲಾಗದ ವಿದ್ಯಾರ್ಥಿಗಳು ಸರಿಸುಮಾರು ಶೇ 10ರಿಂದ 20ರಷ್ಟು ಇರುತ್ತಾರೆ.‌ ಇವರಿಗೆ ಕಲಿಕಾ ಸಾಧನೆ ಆಗದಿದ್ದರೂ ಉತ್ತೀರ್ಣರಾದರೂ ಆಗಲಿ ಎಂಬ ಉದ್ದೇಶದಿಂದ ಪ್ರಶ್ನೋತ್ತರಗಳ ಅಭ್ಯಾಸವನ್ನು ಮಾಡಿಸಬೇಕು.‌ ಹಿಂದೆಲ್ಲ, ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಟ್ಯೂಷನ್‌ಗೆ ಕಳಿಸುತ್ತಿದ್ದರು. ಅದು ಇದೇ ವ್ಯವಸ್ಥೆ.

ಆದರೆ, ನಮ್ಮ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ, ಚೆನ್ನಾಗಿ ಕಲಿಕಾ ಸಾಧನೆಯನ್ನು ಮಾಡಬಲ್ಲ ವಿದ್ಯಾರ್ಥಿಗಳನ್ನೂ ಆಗಸ್ಟ್‌ಗೇ ಪಾಠ ಮುಗಿಸಿ ಪ್ರಶ್ನೋತ್ತರಗಳ ಅಭ್ಯಾಸ ಮಾಡುವ ಪದ್ಧತಿಗೆ ಒಳಪಡಿಸಲಾಗುತ್ತಿದೆ. ಆ ಮೂಲಕ ಅವರ ಕಲಿಕಾ ಸಾಮರ್ಥ್ಯವನ್ನು ಕುಂಠಿತಗೊಳಿಸಿ ಅವರ ಪ್ರತಿಭೆಯನ್ನು ನಾಶ ಮಾಡಲಾಗುತ್ತಿದೆ. ಇದರರ್ಥ ನೂರು ಶೇಕಡ ಫಲಿತಾಂಶ ಬೇಡವೆಂದಲ್ಲ. ಆದರೆ ಅದು ಕಲಿಕೆ ನಡೆದದ್ದರ ಪರಿಣಾಮವಾಗಿ ವಿದ್ಯಾರ್ಥಿಯ ಕಲಿಕಾ ದಕ್ಷತೆಯಿಂದ ಬರುವ ಫಲಿತಾಂಶವಾಗಬೇಕೇ ವಿನಾ ಶಾಲೆಯನ್ನು ಜೈಲಿನಂತೆ ಪರಿವರ್ತಿಸಿ ಪ್ರಶ್ನೋತ್ತರ ಗಳ ಅಭ್ಯಾಸದ ಹಿಂಸೆಯಿಂದ ಬರುವ ಫಲಿತಾಂಶವಾಗ ಬಾರದು. ಆದ್ದರಿಂದ, ಆಗಸ್ಟ್‌ಗೆ ಪಾಠ ಮುಗಿಸಿ ಅಭ್ಯಾಸ ಮಾಡಿಸುವುದಲ್ಲ, ಕನಿಷ್ಠ ಫೆಬ್ರುವರಿವರೆಗಾದರೂ ಪಾಠ ಮಾಡಿ, ಪಾಠಗಳು ತಾನಾಗಿ ಪೂರ್ಣಗೊಳ್ಳು ವಂತೆ ಆಗಬೇಕು ಎಂಬ ಚಿಂತನೆ ಸಮಾಜದಲ್ಲಿ ಬೆಳೆಯಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT