ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಟಿ.ಎನ್‌.ವಾಸುದೇವಮೂರ್ತಿ ಲೇಖನ: ಅಕಟಕಟಾ ಶಬ್ದದ ಲಜ್ಜೆಯ ನೋಡಾ...

ಬೈಗುಳಗಳ ಮೂಲಕ ಒಣಪ್ರತಿಷ್ಠೆ ಕಾಪಾಡಿಕೊಳ್ಳಬಹುದು, ಜನರಿಗೆ ಬಿಟ್ಟಿ ಮನರಂಜನೆಯನ್ನೂ ನೀಡಬಹುದು!
Last Updated 29 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

‘ನಿರಕ್ಷರಕುಕ್ಷಿಗಳ ಪೈಕಿ ರಾಜಕೀಯ ನಿರಕ್ಷರಕುಕ್ಷಿ ಪರಮ ಮೂರ್ಖನಾಗಿರುತ್ತಾನೆ. ಏಕೆಂದರೆ ಅವನು ಏನನ್ನೂ ಆಲಿಸಲಾರ, ಏನನ್ನೂ ನುಡಿಯಲಾರ, ಯಾವುದರಲ್ಲೂ ಪಾಲ್ಗೊಳ್ಳಲಾರ. ಅವನಿಗೆ ಬದುಕಿನ ಮೌಲ್ಯ ಹಾಗಿರಲಿ; ಅಕ್ಕಿ, ಬೇಳೆ, ಮನೆಬಾಡಿಗೆ, ಇಂಧನ, ಔಷಧ ಮುಂತಾದ ದೈನಂದಿನ ಅಗತ್ಯಗಳ ಬೆಲೆಯಾಗಲಿ, ಈ ಮಾರುಕಟ್ಟೆ ಧಾರಣೆಗಳು ರಾಜಕೀಯ ನಿರ್ಧಾರಗಳನ್ನು ಅವಲಂಬಿ ಸಿರುತ್ತವೆ ಎಂಬ ಸಂಗತಿಯಾಗಲಿ ಗೊತ್ತಿರುವುದಿಲ್ಲ. ಅವನು ತಾನು ರಾಜಕೀಯ ಚರ್ಚೆಗಳನ್ನು ದ್ವೇಷಿಸುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಷ್ಟು ತಿಳಿಗೇಡಿತನ ಬೆಳೆಸಿಕೊಂಡಿರುತ್ತಾನೆ. ತನ್ನ ರಾಜಕೀಯ ಅಜ್ಞಾನದಿಂದಾ ಗಿಯೇ ಸಮಾಜದಲ್ಲಿ ವೇಶ್ಯಾಲಯಗಳು, ಅನಾಥಾ ಲಯಗಳು, ಭ್ರಷ್ಟಾಚಾರದ ಅಡ್ಡೆಗಳು ಸ್ಥಾಪನೆಯಾಗುತ್ತಿವೆ ಎಂಬ ತಿಳಿವಳಿಕೆಯೂ ಅವನಿಗಿರುವುದಿಲ್ಲ’ ಎಂದು ಜರ್ಮನ್‌ ನಾಟಕಕಾರ ಬ್ರೆಕ್ಟ್‌ ತನ್ನ ಲೇಖನವೊಂದರಲ್ಲಿ ಬರೆದಿದ್ದಾನೆ.

ಆದರೆ, ಇಂದು ಕರ್ನಾಟಕದ ರಾಜಕಾರಣದ ಬಗ್ಗೆ ಯಾರಾದರೂ ಗಂಭೀರವಾಗಿ ಮಾತುಕತೆ ನಡೆಸಲಾರಂಭಿಸಿದರೆ ಅಂತಹವನು ‘ಪ್ರಜ್ಞಾವಂತ’ ಎನಿಸಿಕೊಳ್ಳುವ ಬದಲು ನಗೆಗೀಡಾಗುವ ಸಂಭವವಿದೆ. ನಮ್ಮ ರಾಜ ಕಾರಣಿಗಳು ಹಗುರವಾದ ಮಾತುಗಳಲ್ಲಿ, ಜಾತಿವಾದಿ ನಿಂದನೆಗಳಲ್ಲಿ, ಅಭಿರುಚಿಹೀನವಾದ ಬೈಗುಳಗಳಲ್ಲಿ ಪೈಪೋಟಿಗೆ ನಿಂತಿರುವಂತಿದೆ.

ಸಾಮಾನ್ಯ ಉಪಚುನಾವಣೆಗೂ ಅನೈತಿಕವಾಗಿ ಸಂಪಾದಿಸಿದ ಭ್ರಷ್ಟ ಹಣವನ್ನು ಸುರಿಯಬಲ್ಲ ಲೂಟಿಕೋರರೇ ಎಲ್ಲ ರಾಜಕೀಯ ಪಕ್ಷಗಳಲ್ಲೂ ತುಂಬಿರುವಾಗ, ಅಂತಹವರಿಂದ ಸದಭಿರುಚಿಯ ಮಾತುಕತೆ, ಸಂವಾದವನ್ನು ನಿರೀಕ್ಷಿಸುವುದು ವ್ಯರ್ಥ. ಅಧಿಕಾರ ವಹಿಸಿಕೊಂಡ ಪಕ್ಷದ ದೃಢ ಸಂಕಲ್ಪದಿಂದ ಮಾತ್ರ ಒಂದು ಶುದ್ಧವಾದ, ಭ್ರಷ್ಟಾಚಾರ ರಹಿತವಾದ ರಾಜಕೀಯ ವಾತಾವರಣ ನಿರ್ಮಾಣ ಸಾಧ್ಯ. ಅಂಥ ವಾತಾವರಣದಲ್ಲಿ ಒಂದು ಅರ್ಥಪೂರ್ಣ ಚರ್ಚೆ, ಸಂವಾದ ನಡೆಯಬಹುದು. ಹಣ, ಅಧಿಕಾರವನ್ನು ಹೊಂದುವುದೇ ಎಲ್ಲ ನಾಯಕರಿಗೂ ಮೊದಲ ಆದ್ಯತೆ ಯಾಗಿರುವಾಗ ತತ್ವ– ಸಿದ್ಧಾಂತ ಆಧರಿಸಿದ ಚರ್ಚೆ ಸಾಧ್ಯವಿಲ್ಲ.

ಅಧಿಕಾರ ವಹಿಸಿಕೊಂಡವರು ಪ್ರಜೆಗಳಲ್ಲಿ ‘ಈತ ನಮ್ಮೆಲ್ಲರ ಪ್ರತಿನಿಧಿ’ ಎಂಬ ನಂಬಿಕೆಯನ್ನು ಮೂಡಿಸಬೇಕಾಗುತ್ತದೆ. ಆದರೆ ಚುನಾವಣೆಗಳು ಬಂದಾಗ ಸರ್ಕಾರ ವನ್ನು ಪ್ರತಿನಿಧಿಸುವ ಮುಖ್ಯಮಂತ್ರಿ, ಪ್ರಧಾನಮಂತ್ರಿ ತಮ್ಮ ಕರ್ತವ್ಯವನ್ನು ಮರೆತು ತಾವು ನಂಬಿರುವ ರಾಜಕೀಯ ಪಕ್ಷ, ಪ್ರಣಾಳಿಕೆಗಳ ಪ್ರಚಾರಕರಂತೆ ವರ್ತಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ನಾಡಿನ ರಾಜಕಾರಣಕ್ಕೆ ದಿಕ್ಕು ದೆಸೆ ತೋರಿಸಬೇಕಾದ ನಾಡಿನ ಹಿರಿಯ ನಾಯಕರೊಬ್ಬರು ಮೊನ್ನೆ ದಿನ ‘ನಾನು ನನ್ನ ಆಯುಷ್ಯದ ಕೊನೆಯ ಘಟ್ಟದಲ್ಲಿದ್ದೇನೆ, ಮತಭಿಕ್ಷೆ ನೀಡಿ ನನ್ನನ್ನು ಉದ್ಧರಿಸಿ’ ಎಂದು ದೈನ್ಯಭಾವದಿಂದ ಬೇಡಿಕೊಳ್ಳುತ್ತಿದ್ದರು. ಅವರ ಈ ದೀನವಾಕ್ಯಗಳು ನಮ್ಮ ರಾಜ ಕಾರಣದ ದುರ್ಭಿಕ್ಷ ಕಾಲಕ್ಕೆ ಹಿಡಿದ ಕೈಗನ್ನಡಿಯಾಗಿವೆ. ನಾಯಕನಾದವನು ಅನುಯಾಯಿಯನ್ನು ಮುನ್ನಡೆಸುವ ಬದಲು ಅನುಯಾಯಿಯನ್ನೇ ಅನುಸರಿಸುವ, ಅನು ಯಾಯಿಯ ಮುಲಾಜಿನಲ್ಲೇ ಕೊನೆತನಕ ಇದ್ದುಬಿಡಲು ಬಯಸುವ ಕಾಲಘಟ್ಟದಲ್ಲಿ ನಾವಿದ್ದೇವೆ.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಿದ್ದಾಯಿತು, ಈಗ ನಮ್ಮ ರಾಜಕಾರಣಿಗಳು ಜಾತಿಯ ಹೆಸರಿನಲ್ಲಿ ಕೀಳುಮಟ್ಟದ ಭಾಷೆ, ಬೈಗುಳಗಳನ್ನು ಬಳಸಲಾರಂಭಿಸಿ ದ್ದಾರೆ. ಭಾವೋದ್ರೇಕಕ್ಕೊಳಗಾದಾಗ ನಮಗರಿವಿಲ್ಲದೆಯೇ ನಮ್ಮ ಬಾಯಿಂದ ಅವಹೇಳನದ ಹಗುರವಾದ ಮಾತುಗಳು ಬರಬಹುದು. ಅಂತಹ ಸಂದರ್ಭದಲ್ಲಿ ಮರುಕ್ಷಣವೇ ನಮಗೆ ಪಶ್ಚಾತ್ತಾಪವಾಗುತ್ತದೆ. ಆದರೆ ಇವರ ಬಾಯಿಂದ ಬರುತ್ತಿರುವ ಮಾತುಗಳು ಇಂತಹ ಭಾವೋದ್ರೇಕದ ಮಾತುಗಳಲ್ಲ. ಆದ್ದರಿಂದ ಇವರಲ್ಲಿ ಪಶ್ಚಾತ್ತಾಪದ ಲಕ್ಷಣಗಳೂ ಕಾಣಿಸುತ್ತಿಲ್ಲ. ಮತ್ತೊಬ್ಬನನ್ನು ನಿಂದಿಸಿ ಬಳಿಕ ಪಶ್ಚಾತ್ತಾಪಪಡದೇ ಸಂತೃಪ್ತಿ ಪಟ್ಟುಕೊಳ್ಳುವುದು ವಿಕೃತಿಯಾಗಿದೆ.

ನಾಡಿನ ಯುವಜನ ಜಾತಿವಾದ, ಕೋಮುವಾದದ ಪ್ರೇರಣೆಯಿಂದ ಹಿಂಸಾರಭಸಮತಿಗಳಾಗಿ ಬೆಳೆಯುತ್ತಿರುವಾಗ, ನಾಯಕರೆನಿಸಿಕೊಂಡವರು ಸಂಯಮ, ಸಮಸ್ಥಿತಿ ಯನ್ನು ಕಾಯ್ದುಕೊಳ್ಳುವ ಮಾರ್ಗಗಳನ್ನು ತೋರಿಸಬೇಕಲ್ಲದೇ ಆ ಹಿಂಸಾರಭಸಮತಿಗೆ ಹೊರದಾರಿಗಳನ್ನು ತೋರಿಸಬಾರದು. ಸಾರ್ವಜನಿಕ ಜೀವನ ಅತ್ಯಂತ ಪವಿತ್ರವಾದ ಜೀವನಶೈಲಿಯೆಂದು ಮಹಾತ್ಮ ಗಾಂಧಿ ನಂಬಿದ್ದರು. ಗಾಂಧಿಯ ಈ ನಂಬಿಕೆ ‘ಒಬ್ಬ ಸಾರ್ವಜನಿಕ ವ್ಯಕ್ತಿಯ ಒಂದೊಂದು ಮಾತು, ಕೃತಿ, ಆಲೋಚನೆಯೂ ಸಾಮಾನ್ಯ ಸಾರ್ವಜನಿಕರ ಮೇಲೆ ಪ್ರಭಾವ ಬೀರುತ್ತವೆ. ಅವನನ್ನೇ ಸಾಮಾನ್ಯನೂ ಅನುಸರಿಸುತ್ತಾನೆ’ (ಗೀತೆ– 3.21) ಎಂಬ ಗೀತಾವಾಕ್ಯದಿಂದ ಪ್ರೇರೇಪಿತವಾಗಿತ್ತು.

ಸೈದ್ಧಾಂತಿಕ ಕಾರಣಕ್ಕೆ ವಾದ– ಪ್ರತಿವಾದನಡೆಸುತ್ತೇವೆ, ಪರಸ್ಪರರು ಬೈದಾಡಿಕೊಳ್ಳುತ್ತೇವೆ, ವ್ಯಕ್ತಿಗತ ಸಂಬಂಧದಲ್ಲಿ ಸ್ನೇಹಭಾವದಿಂದಲೇ ಇರುತ್ತೇವೆ ಎಂದು ನಮ್ಮ ನಾಯಕರು ಸಮಜಾಯಿಷಿ ನೀಡಬಹುದು. ಆದರೆ ಸಾರ್ವಜನಿಕ ಸಭೆ– ಸಮಾರಂಭ ಗಳಲ್ಲಿ, ಚುನಾವಣಾ ಪ್ರಚಾರದಂತಹ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಾಗುತ್ತದೆ. ತಾವು ಯಾವುದೇ ಮಾದರಿ ಹಾಕಿಕೊಟ್ಟರೂ ಅನುಯಾಯಿಗಳು ಅದನ್ನು ಅತಿರೇಕಕ್ಕೆ ಕೊಂಡೊಯ್ಯುತ್ತಾರೆ ಎಂಬ ಎಚ್ಚರ
ಅವರಿಗಿರಬೇಕಾಗುತ್ತದೆ.

ಒಂದು ವಸ್ತುನಿಷ್ಠ ಚರ್ಚೆಯನ್ನು ಮುಂದುವರಿಸು ವಲ್ಲಿ ವಿಫಲರಾದಾಗ ಅಥವಾ ನಮ್ಮ ಮಾತುಗಳಲ್ಲಿ ನಮಗೇ ನಂಬಿಕೆ ಇಲ್ಲದೇ ಹೋದಾಗ ನಾವು ಬೈಗುಳ, ಅವಹೇಳನದ ಮಾತುಗಳನ್ನಾಡಲು ಪ್ರಾರಂಭಿಸುತ್ತೇವೆ. ತಮ್ಮನ್ನು ತಾವು ಪ್ರಾಮಾಣಿಕರ ನೆಲೆಯಲ್ಲಿ ನಿಲ್ಲಿಸಿಕೊಂಡು ವಿರೋಧ ಪಕ್ಷಗಳ ನಾಯಕರ ಭ್ರಷ್ಟಾಚಾರವನ್ನು ಟೀಕಿಸುವವರು, ತಮ್ಮನ್ನು ತಾವು ಸೆಕ್ಯುಲರ್‌ ಎಂದು ಕರೆದುಕೊಂಡು ಅಲ್ಪಸಂಖ್ಯಾತರನ್ನು ಓಲೈಸುವ ರಾಜಕಾರಣ ಮಾಡುವವರು ಅಂತಿಮವಾಗಿ ಬೈಗುಳದಲ್ಲಿ ಪರ್ಯವಸಾನವಾಗುವರು. ನಮ್ಮ ಮಾತುಗಳಲ್ಲಿನ ಸುಳ್ಳು, ಸೋಗಲಾಡಿತನಗಳು ನಮ್ಮ ಅಂತಃಸಾಕ್ಷಿಯನ್ನು ಬಾಧಿಸದೇ ಬಿಡುವುದಿಲ್ಲ. ಆ ಬಾಧೆಯನ್ನು ಹೊರ ಹಾಕಲು ನಾವು ನಮಗರಿವಿಲ್ಲದೆಯೇ ಬೈಗುಳಕ್ಕೆ ಮೊರೆ ಹೋಗಿ ಹಗುರವಾಗುತ್ತೇವೆ. ಅನ್ಯರನ್ನು ಬೈಯ್ಯುವಾಗ ನಾವು ನಮ್ಮ ವೈಫಲ್ಯ, ಕೊಳಕುತನವನ್ನು ಮರೆಮಾಚಲು ಪ್ರಯತ್ನಿಸುತ್ತೇವೆ. ಬೈಗುಳ ಒಂದು ಬಗೆಯ ಆತ್ಮರಕ್ಷಣಾ ತಂತ್ರವೂ ಆಗಿದೆ.

ಕೆಲವೊಮ್ಮೆ ನಮ್ಮ ಸಾಮರ್ಥ್ಯ- ದೌರ್ಬಲ್ಯಗಳೇನು ಎಂಬುದು ನಮಗೆ ಗೋಚರಿಸದಿರಬಹುದು. ಆದರೆ ಹೊರಜಗತ್ತಿಗೆ ಅವು ಚೆನ್ನಾಗಿ ಕಾಣಿಸುತ್ತಿರುತ್ತವೆ. ಎಷ್ಟೋ ಸಲ ನಮ್ಮನ್ನು ಟೀಕಿಸುವವರು ನಮ್ಮ ಆ ದೌರ್ಬಲ್ಯವನ್ನು ಕಂಡೇ ಟೀಕಿಸಿರುತ್ತಾರೆ. ನಮಗೆ ಕಾಣಿಸದ ಸತ್ಯ ಅವರಿಗೆ ಕಂಡು ಅವರು ಅದನ್ನು ನಮಗೆ ಕಂಡರಿಸುವಾಗ ನಾವು ಅವರಿಗೆ ಕೃತಜ್ಞರಾಗಬೇಕಲ್ಲದೇ ಅವರಿಗೆ ಪ್ರತಿ ಬೈಗುಳ ನೀಡಬಾರದು ಎಂಬ ವಿವೇಕವನ್ನು ನಮ್ಮ ರಾಜಕಾರಣಿಗಳು ಬೆಳೆಸಿಕೊಳ್ಳಬೇಕಾಗಿದೆ.

ಮನುಷ್ಯ ತನ್ನ ಸಾಮರ್ಥ್ಯದ ಮಿತಿ- ಎಲ್ಲೆಗಳನ್ನ ರಿತು ಬದುಕಬೇಕಾಗುತ್ತದೆ ಮತ್ತು ಆ ಎಲ್ಲೆಯನ್ನು ನಿರಂತರವಾಗಿ ವಿಸ್ತರಿಸಿಕೊಳ್ಳಲು ತನ್ನಿಡೀ ಬದುಕನ್ನು ಮುಡಿಪಾಗಿಡಬೇಕಾಗುತ್ತದೆ. ಆ ಮಿತಿಯನ್ನು ಮರೆತಾಗ ಅವನಲ್ಲಿ ಅಹಂಕಾರ ಮೂಡುತ್ತದೆ. ಆಧ್ಯಾತ್ಮಿಕ ವಿಕಾಸಕ್ಕೆ ಅಹಂಕಾರ ಬಹುದೊಡ್ಡ ಅಡಚಣೆಯಾಗಿದೆ ಎಂದು ಜಗತ್ತಿನ ಎಲ್ಲ ಧರ್ಮಗಳೂ ಸಾರುವುದು ಈ ಹಿನ್ನೆಲೆಯಲ್ಲೇ. ಆತ್ಮದ ವಿಕಾಸ, ವಿಸ್ತರಣೆಗಳು ಹಾಗಿರಲಿ ಇಲ್ಲದ ಸಾಮರ್ಥ್ಯವನ್ನು ಉಂಟೆಂದು ಅನ್ಯರಿಗೆ ರುಜುವಾತು ಮಾಡಲು ಹೊರಡುವುದು ಸಹ ಮನೋರೋಗದ ಮತ್ತೊಂದು ಲಕ್ಷಣವಾಗಿದೆ. ಹೀಗೆ ಇಲ್ಲದ ಸಾಮರ್ಥ್ಯವನ್ನು ಎತ್ತಿ ಹಿಡಿಯಲು ಪ್ರಯತ್ನಿಸುವಾಗಲೂ ನಾವು ನಿಂದನೆ, ಬೈಗುಳ, ಅವಹೇಳನಗಳಿಗೆ ಮೊರೆ ಹೋಗುವುದುಂಟು.

ನಮ್ಮ ನಾಯಕರು ಅವಹೇಳನದ ಮಾತುಗಳನ್ನಾ ಡುವಾಗ ಸಭಿಕರು, ಅನುಯಾಯಿಗಳು ಚಪ್ಪಾಳೆ ತಟ್ಟ ಬಹುದು. ಆದರೆ ಅದನ್ನು ಶ್ಲಾಘನೆ ಎಂದು ಭಾವಿಸಿದರೆ ಅದು ಮೂರ್ಖತನವಾಗುತ್ತದೆ. ಹಿಂದಿಯಲ್ಲಿ ‘ಕುಣಿಯು ತ್ತಿರುವ ನವಿಲಿಗೆ ತಾನು ತನ್ನ ಬೆತ್ತಲೆ ಅಂಗಗಳನ್ನು ಜಗತ್ತಿಗೆ ಪ್ರದರ್ಶಿಸುತ್ತಿದ್ದೇನೆ ಎಂದು ಗೊತ್ತಿರುವುದಿಲ್ಲ’ ಎಂಬರ್ಥದ ಗಾದೆ ಮಾತಿದೆ. ಬೈಗುಳಗಳ ಮೂಲಕ ತನ್ನ ಒಣಪ್ರತಿಷ್ಠೆಯನ್ನು ಕಾಪಾಡಿಕೊಳ್ಳುವವನು ಸಹ ತನ್ನ ಖಾಲಿತನವನ್ನು ಜಗತ್ತಿಗೆ ತೋರಿಸುತ್ತ, ಲೋಕದ ಜನರಿಗೆ ಬಿಟ್ಟಿ ಮನರಂಜನೆ ನೀಡುತ್ತಿರುತ್ತಾನೆ. ಇಂಥವರನ್ನು ಕಂಡೇ ಘಟ್ಟಿವಾಳಯ್ಯ ‘ಭಾಷೆಯೆಂಬುದು ನಗೆಗೆಡೆಯಾಯಿತ್ತು’ ಎಂಬ ವಚನವನ್ನು ನುಡಿದಿರಬೇಕು.

-ಡಾ.ಟಿ.ಎನ್‌.ವಾಸುದೇವಮೂರ್ತಿ

ಲೇಖಕ: ಸಹಾಯಕ ಪ್ರಾಧ್ಯಾಪಕ,
ಜ್ಯೋತಿನಿವಾಸ್‌ ಕಾಲೇಜ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT