ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ ಭಾರತಿ: ಸಮಗ್ರ ಇ-ವಾಙ್ಮಯ

ಜ್ಞಾನದ ಪ್ರಾಚೀನ ಕೊಂಡಿಗಳಿಂದ ಒಗ್ಗೂಡಿದ ಬೌದ್ಧಿಕ ಇತಿಹಾಸಕ್ಕೆ ಡಿಜಿಟಲ್‌ ಸ್ಪರ್ಶ
Last Updated 9 ಆಗಸ್ಟ್ 2015, 19:30 IST
ಅಕ್ಷರ ಗಾತ್ರ

ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪಿಎಚ್.ಡಿ. ಸಂಶೋಧನಾಕಾಂಕ್ಷಿಗಳಲ್ಲಿ ಅರ್ಹರನ್ನು ಆಯ್ಕೆ ಮಾಡಲು ಇತ್ತೀಚೆಗೆ ಮೌಖಿಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿತ್ತು. ಬಾಹ್ಯ ಪರೀಕ್ಷಕರಾಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ್‌ ವಿಸಾಜಿಯವರೂ ಸೇರಿದಂತೆ ನನ್ನ ಸಹೋದ್ಯೋಗಿಗಳು ಸಹ ಈ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. ಒಬ್ಬ  ಹೆಣ್ಣು ಮಗಳು ಮೌಖಿಕ ಪರೀಕ್ಷೆಗೆ ಬಂದಳು. ನಾವು ಆಕೆಯನ್ನು ‘ಯಾವ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಮ್ಮಾ’ ಎಂದು ಕೇಳಿದೆವು. ಆಕೆ ‘ಬೆಂಗಳೂರು ವಿಶ್ವವಿದ್ಯಾಲಯ’ ಅಂದಳು. ಆಗ ನಾನು ‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಜಿಎಸ್‌ಎಸ್ ಮೊದಲಾದ ಹಿರಿಯರೆಲ್ಲ ಸೇರಿ ಸಾಹಿತ್ಯ-ಸಂಶೋಧನೆಗೆ ಸಂಬಂಧಿಸಿದ ಒಂದು ಪತ್ರಿಕೆಯನ್ನು ಸಂಪಾದಿಸುತ್ತಿದ್ದರು. ಆ ಪತ್ರಿಕೆ ಯಾವುದಮ್ಮಾ ಅಂದೆ’. ಆಕೆ  ನಿಸ್ಸಂಕೋಚವಾಗಿ ‘ಚಂದಮಾಮಾ ಸರ್’ ಅಂದಳು.

ಸಂದರ್ಶನ ಮಾಡುತ್ತಿದ್ದ ನಾವೆಲ್ಲರೂ ಒಮ್ಮೆಗೇ ಮಿಡುಕಿ ಬಿದ್ದೆವು. ಇದೇನೂ ಬೌದ್ಧಿಕ ಪ್ರಶ್ನೆ ಆಗಿರಲಿಲ್ಲ. ಸಾಹಿತ್ಯದ ವಿದ್ಯಾರ್ಥಿಗೆ ತಿಳಿದಿರಬೇಕಾದ ಸಾಮಾನ್ಯ ಜ್ಞಾನದ ಪ್ರಶ್ನೆಯಾಗಿತ್ತು. ಆದರೆ ಈ ಉತ್ತರವು ಕನ್ನಡದ ಸಂಶೋಧನೆಯ ದಿಕ್ಸೂಚಿಯನ್ನು ಸೂಚಿಸುವಂತಿತ್ತು. ಯಾಕೆಂದರೆ ಈ ಉತ್ತರ ಕೊಟ್ಟ ಹೆಣ್ಣು ಮಗಳು ಎನ್‌ಇಟಿ/ ಜೆಆರ್‌ಎಫ್‌ನಂತಹ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವಳು.

ಕೇವಲ ನೂರು ವರ್ಷಗಳ ಹಿಂದೆ ಕನ್ನಡದ ಸಂಶೋಧನೆಯಾಗಲಿ/ ಅಧ್ಯಾಪನವಾಗಲಿ ಹೊಸದೊಂದು ಎತ್ತರವನ್ನೇ ಏರಿತ್ತು. ಕಾಲ-ದೇಶಗಳ ನೂರೆಂಟು ಮಿತಿಗಳ ನಡುವೆಯೂ ಆ ಕಾಲದ ಗೋವಿಂದ ಪೈಗಳಾಗಲಿ, ಮುಳಿಯ ತಿಮ್ಮಪ್ಪಯ್ಯನವರಾಗಲಿ, ಸೇಡಿಯಾಪು ಕೃಷ್ಣ ಭಟ್ಟರಾಗಲಿ ಸಂಶೋಧನೆಗೆ ಸಂಬಂಧಿಸಿ ಉನ್ನತವಾದ ಮಾದರಿಯೊಂದನ್ನು ನಮ್ಮ ಮುಂದೆ ಕಟ್ಟಿ ಹೋಗಿದ್ದರು. ಅವು ನಿಜಕ್ಕೂ ಘನವಾಗಿ ಇದ್ದವು. ಆದರೆ ಇವತ್ತು ನಮ್ಮ ಕನ್ನಡದ ಸಂಶೋಧನೆ ‘ಕಾದಂಬರಿಗಳಲ್ಲಿ ಕಾಮ- ಒಂದು ಅಧ್ಯಯನ’, ‘ಕಾದಂಬರಿಗಳಲ್ಲಿ ಪ್ರೇಮ-ಒಂದು ಅಧ್ಯಯನ’, ‘ತರೀಕೆರೆ ಗ್ರಾಮದ ಗ್ರಾಮದೇವತೆಗಳು- ಒಂದು ಅಧ್ಯಯನ’, ‘ಊರುಕೆರೆ ಗ್ರಾಮದ ನೀರುನಾಯಿಗಳು- ಒಂದು ಅಧ್ಯಯನ’ ಎಂಬಿತ್ಯಾದಿ ವಿಷಯಗಳ ಮೇಲೆ ನಡೆಯುತ್ತಿದೆ.

ಈ ಹಿಂದೆ ಯಾವತ್ತೂ ಕನ್ನಡದ ಬೌದ್ಧಿಕತೆ ಇಷ್ಟೊಂದು ಕಳಪೆಯಾಗಿರಲಿಲ್ಲ. 20ನೇ  ಶತಮಾನದ ಆರಂಭ ಕಾಲದಿಂದ ನೋಡುವುದಿದ್ದರೂ ಕರ್ನಾಟಕ ಎಂಬ ಈ ನಾಡು  ದೇಶದೊಳಗಿನ ಪ್ರದೇಶವಾಗಿ ವಸಾಹತು ಆಳ್ವಿಕೆಯ ಜೊತೆಗೆ ನಡೆಸಿದ ಸಾಂಸ್ಕೃತಿಕ ಅನುಸಂಧಾನದ ಮೂಲಕ ಹೊಸಬಗೆಯ ಬೌದ್ಧಿಕತೆಯನ್ನು ಕನ್ನಡದಲ್ಲಿ ನಿರ್ಮಿಸಿತ್ತು. ಅರ್ಥಾತ್ ಕರ್ನಾಟಕದ ಬೌದ್ಧಿಕತೆ ಹೊಸರೂಪದಲ್ಲಿ ಮೈಪಡೆದಿತ್ತು. ಸಮಾಜದ ಮುಂಚೂಣಿಯಲ್ಲಿದ್ದ ಆ ಕಾಲದ ವಿದ್ವಾಂಸರು ಬೌದ್ಧಿಕವಾಗಿ ಅನೇಕ ಬಗೆಯ ಕ್ರಿಯಾಚರಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೊಸಬಗೆಯ ಯೋಚನಾಕ್ರಮವೊಂದು ದಕ್ಕಿದ್ದರಿಂದ ಹೊಸ ಬಗೆಯ ಬರವಣಿಗೆಯ ಶೈಲಿಯೂ ಆ ಕಾಲದಲ್ಲಿ ಬರೆಯುತ್ತಿದ್ದ ಎಲ್ಲ ದೇಶ ಭಾಷೆಗಳ ಲೇಖಕರಲ್ಲಿ/ ಸಂಶೋಧಕರಲ್ಲಿ  ಕಾಣಿಸಿಕೊಂಡಿತ್ತು.

ಸಾಹಿತ್ಯ ಮಾತ್ರವಲ್ಲದೆ ಅನೇಕ ಬಗೆಯ ಸಾಮಾಜಿಕ/ ಆಧ್ಯಾತ್ಮಿಕ ಮತ್ತು ತಾತ್ವಿಕ ವಿದ್ಯಮಾನಗಳ ಬಗ್ಗೆ ಹೊಸಬಗೆಯ ವ್ಯಾಖ್ಯಾನಗಳು, ಐತಿಹಾಸಿಕ ಮೂಲ-ಚೂಲಗಳ ಕುರಿತ ವಿಶ್ಲೇಷಣೆಗಳು ಆ ಸಂದರ್ಭದಲ್ಲಿ ಬಂದವು. ಇವುಗಳನ್ನು ವ್ರತನಿಷ್ಠೆಯಂತೆ ನಿರ್ವಹಿಸಿದ ಈ ಎಲ್ಲ ನಮ್ಮ ಹಿರಿಯರಿಗೆ ವಸಾಹತು ಆಳ್ವಿಕೆಯ ಮೂಲಕ ಪ್ರದತ್ತವಾದ ಇಂಗ್ಲಿಷ್ ಭಾಷೆಯ ತಿಳಿವಳಿಕೆಯೊಂದಿಗೆ ದೇಶದ ಬೌದ್ಧಿಕ ಪರಂಪರೆಯ ಹಿನ್ನೆಲೆಯೂ ಅಗಾಧವಾಗಿ ಇತ್ತು. ಕನ್ನಡದ ಈ ಬೌದ್ಧಿಕ ಪರಂಪರೆಗೆ ಅನೇಕ ಮಿತಿಗಳಿದ್ದಿರಬಹುದು ಅಥವಾ ಈ ಪರಂಪರೆ ನಮ್ಮ ಸಾಮಾಜಿಕ ಪ್ರತಿಷೇಧಗಳೊಂದಿಗೆ, ಹತ್ತು ಹಲವು ಅಪಸವ್ಯಗಳೊಂದಿಗೆ ಕೂಡಿದ್ದಿರಬಹುದು. ಆದರೂ ಅಂಥ ಒಂದು ಹಿನ್ನೆಲೆ, ಪರಂಪರೆ ನಮ್ಮಲ್ಲಿತ್ತು ಎನ್ನುವುದು ಇಲ್ಲಿ ಗಮನಾರ್ಹ.

ಪೂರ್ವ ಮತ್ತು ಪಶ್ಚಿಮಗಳ ಬೌದ್ಧಿಕ ಮುಖಾಮುಖಿಯಿಂದ ರೂಪುಗೊಂಡ ಆ ಕಾಲದ ಭಾರತದ ಬುದ್ಧಿಜೀವಿ ವರ್ಗ ಭಾರತದಲ್ಲಿ ಒಂದು ಹೊಸ ಬಗೆಯ ಬೌದ್ಧಿಕ ಸಂಸ್ಕೃತಿಯನ್ನು ತಮ್ಮ ಸಂಶೋಧನೆಗಳಿಂದ, ವಿದ್ವತ್ ಚಟುವಟಿಕೆಗಳಿಂದ ರೂಪಿಸಿತು. ಅವರು ಪ್ರಕಟಿಸಿದ ಪುಸ್ತಕಗಳು, ಲೇಖನಗಳು, ಆರಂಭಿಸಿದ ನಿಯತಕಾಲಿಕಗಳ ಅಧ್ಯಯನದ ಮೂಲಕ ನಾವು ಆಧುನಿಕ ಕರ್ನಾಟಕದ ವೈಚಾರಿಕ ಇತಿಹಾಸದ ನಕಾಶೆಯನ್ನು ಮರುರಚಿಸಬಹುದಾಗಿದೆ. ಎಲ್ಲ ಬಗೆಯ ಜ್ಞಾನಶಿಸ್ತುಗಳಿಗೂ ತತ್ಪೂರ್ವದ ಜ್ಞಾನದ ಪ್ರಾಚೀನ ಕೊಂಡಿಗಳು ಸಿಗುವ ಅಗತ್ಯ ಇದೆ.

ಮಾನವಿಕವಾಗಲಿ, ಸಮಾಜ ವಿಜ್ಞಾನವಾಗಲಿ ತಕ್ಷಣದಲ್ಲಿ ಮಾಡಬೇಕಾದ ಕೆಲಸವೆಂದರೆ ತಮ್ಮ ತಮ್ಮ ಕ್ಷೇತ್ರಗಳ ಪೂರ್ವೇತಿಹಾಸವನ್ನು ಒಟ್ಟುಗೂಡಿಸುವುದೇ ಆಗಿದೆ.  ಆದರೆ ಅಂತಹ  ಮಹತ್ವದ ಭಾಷಿಕ ಶರೀರ ಅನೇಕಾನೇಕ ಕಡೆ ಅಸ್ತವ್ಯಸ್ತವಾಗಿ ಹರಡಿಕೊಂಡಿದೆ.  ಅವೆಲ್ಲವನ್ನೂ ಒಗ್ಗೂಡಿಸಿ ಅದಕ್ಕೊಂದು ಡಿಜಿಟಲ್ ಸ್ಪರ್ಶ ಕೊಟ್ಟು ಅಂತರ್ಜಾಲದ ಮೂಲಕ ಕನ್ನಡಿಗರ ಮುಕ್ತ ಬಳಕೆಗೆ, ಸಂಶೋಧನಾರ್ಥಿಗಳ ವಿಶೇಷ ಬಳಕೆಗೆ ಅವಕಾಶ ಮಾಡಿಕೊಡುವಂಥ ಒಂದು ಮಹತ್ವದ ಯೋಜನೆ ‘ಆಕರ ಭಾರತಿ’ ಎಂಬ ಹೆಸರಿನಲ್ಲಿ ಮೈಸೂರಿನಲ್ಲಿ ಇದೀಗ ನಡೆಯುತ್ತಿದೆ.

‘ಆಕರ ಭಾರತಿ’ಯ ಕನಸನ್ನು ಕಂಡು ಕನ್ನಡದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮಿಸಿದವರಲ್ಲಿ ಮೊದಲಿಗರೆಂದರೆ ಮೈಸೂರಿನ ಜಯಚಾಮರಾಜೇಂದ್ರ ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ ಗಣಿತದ ಪ್ರಾಧ್ಯಾಪಕರಾಗಿರುವ ಪ್ರೊಫೆಸರ್ ಸಿ.ಎಸ್.ಯೋಗಾನಂದರು. ಇವರ ಜೊತೆಗೆ ಶ್ರೀರಂಗ ಡಿಜಿಟಲ್ ಟೆಕ್ನಾಲಜೀಸ್ ಸಂಸ್ಥೆಯವರು. ಇವರು ಮೊದಲಿನಿಂದಲೂ ಹಲವಾರು ಪುಸ್ತಕಗಳನ್ನು ಡಿಜಿಟಲೀಕರಣ ಮಾಡುತ್ತಾ, ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಬೆಳೆಸುತ್ತಿರುವವರು.

ಇದೇ ಸಮಯದಲ್ಲಿ ಬೆಂಗಳೂರಿನ ಸಂಸ್ಕೃತಿ-ಸಮಾಜ ಅಧ್ಯಯನ ಕೇಂದ್ರದಲ್ಲಿ, ‘ರೀಜನಲ್ ಲಾಂಗ್ವೇಜ್ ರಿಸೋರ್ಸಸ್’ ಎನ್ನುವ ಯೋಜನೆಯಡಿ ಡಾ.ತೇಜಸ್ವಿನಿ ನಿರಂಜನ ಮತ್ತು ಡಾ. ಅಶ್ವಿನ್ ಕುಮಾರ್  ಶೈಕ್ಷಣಿಕ ಉದ್ದೇಶದಿಂದ ಇಂತಹ ಯೋಜನೆಯನ್ನು ರೂಪಿಸುತ್ತಿದ್ದರು. ಇವರ ಜೊತೆಗೆ ಮೈಸೂರಿನ ಮುಕ್ತ ವಿ.ವಿ.ಯ ಪ್ರಾಧ್ಯಾಪಕರಾದ ಡಾ. ಪೃಥ್ವಿದತ್ತ ಚಂದ್ರಶೋಭಿಯವರೂ ಸೇರಿಕೊಂಡರು. ಇವರಿಗೆ ಆರ್ಥಿಕ ಸಹಾಯ ಮಾಡುತ್ತಿರುವವರು ಪುದುಚೇರಿಯ ಶ್ರೀ ಅರಬಿಂದೋ ಸೊಸೈಟಿ ಮತ್ತು ಎಚ್‌.ಪಿ. ಸಂಸ್ಥೆ. ಸಮಾನ ಆಸಕ್ತಿಯ ಇಷ್ಟೂ ಮಂದಿ ಒಟ್ಟು ಸೇರಿದಾಗ ‘ಆಕರ ಭಾರತಿ’ ಯೋಜನೆ ವೇಗ ಪಡೆದುಕೊಂಡಿತು ಮತ್ತು ಇದರ ಇನ್ನಷ್ಟು ಹೊಸ ಸಾಧ್ಯತೆಗಳು ತೆರೆದುಕೊಂಡವು.

ಹಲವು ಭಾಗಗಳಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಈ ಡಿಜಿಟಲ್ ಆರ್ಕೈವ್ಸ್ ಯೋಜನೆಯಲ್ಲಿ ಮೊದಲಿಗೆ ಕನ್ನಡದ 20ನೇ ಶತಮಾನದ ಎಲ್ಲ ಪ್ರಮುಖ ಕೃತಿಗಳು ಮತ್ತು ‘ಸಾಕ್ಷಿ’, ‘ಋಜುವಾತು’, ‘ಶೂದ್ರ’, ‘ನೀನಾಸಂ ಮಾತುಕತೆ’, ‘ಸಂವಾದ’, ‘ಅರಿವು-ಬರಹ’, ‘ಗ್ರಂಥಲೋಕ’ ಇತ್ಯಾದಿ ಸಾಹಿತ್ಕಕ-ಸಾಂಸ್ಕೃತಿಕ ನಿಯತಕಾಲಿಕಗಳು ಸೇರಲಿವೆ. ಎರಡನೆಯ ಹಂತದಲ್ಲಿ ಕನ್ನಡದ ಆರಂಭದಲ್ಲಿ ಚಿಂತನೆ ನಡೆಸಿದ ಮಂಜೇಶ್ವರ ಗೋವಿಂದ ಪೈ, ತಿ.ತಾ.ಶರ್ಮ, ಸೇಡಿಯಾಪು ಕೃಷ್ಣ ಭಟ್ಟ, ಫ.ಗು ಹಳಕಟ್ಟಿ, ಶಂಬಾ ಜೋಷಿ, ಆಲೂರು ವೆಂಕಟರಾಯ, ಹರ್ಡೇಕರ್ ಮಂಜಪ್ಪ, ಡಿವಿಜಿ, ಎನ್.ಎಸ್.ರಾಜಪುರೋಹಿತ ಮುಂತಾದ ಹಲವು ಚಿಂತಕರ ಸಮಗ್ರ ಬರಹಗಳು ಕೂಡಿಕೊಳ್ಳಲಿವೆ.

‘ಆಕರ ಭಾರತಿ’ ನಡೆಸುವ ಡಿಜಿಟಲೀಕರಣ ಎಂದರೆ ಪಠ್ಯದ ಸ್ಕ್ಯಾನಿಂಗ್ ಅಷ್ಟೇ ಅಲ್ಲ, ಪಠ್ಯವೊಂದನ್ನು ಯಂತ್ರದ ಮೂಲಕ ನಾಗರಿಕ ಉದ್ದೇಶಗಳ ಬಳಕೆಗೆ ಸಿದ್ಧಮಾಡುವುದು ಇದರ ಮುಖ್ಯ ಉದ್ದೇಶ. ‘ಆಕರ ಭಾರತಿ’ಯ ಸಮಗ್ರ ಇ-ವಾಙ್ಮಯದಲ್ಲಿ  ‘ಹುಡುಕು’ವ ಅವಕಾಶ ಇರುವುದರಿಂದ ಆಸಕ್ತರಿಗೆ ಬೇಕಾದ ಯಾವ ಪಠ್ಯವನ್ನಾದರೂ ಅವರು ಶೋಧಿಸಬಹುದಾಗಿದೆ. ಹಾಗೆಯೇ ಯಾವ ಸ್ವರೂಪಕ್ಕೂ (ಫಾರ್ಮ್ಯಾಟ್) ಇದನ್ನು ಬದಲಾಯಿಸಬಹುದಾಗಿದೆ. ಒಟ್ಟಿನಲ್ಲಿ ‘ಆಕರಭಾರತಿ’ಯ ಈ ಡಿಜಿಟಲೀಕರಣದಲ್ಲಿ ಹಲವು ರೀತಿಗಳಿಂದ ಒಂದು ಪುಸ್ತಕವನ್ನು ಪ್ರವೇಶಿಸಬಹುದಾಗಿದೆ. ಒಟ್ಟಿನಲ್ಲಿ ಕನ್ನಡದ ಸಮಸ್ತ ಬೌದ್ಧಿಕ ವಾಗ್ವಾದ ಈ ಯೋಜನೆಯ ಮೂಲಕ ಒಂದು ಪೂರ್ಣಪ್ರಮಾಣದ ಇ-ಬುಕ್ ಆಗಿ ಓದುಗರ ಕೈವಶ ಆಗುತ್ತದೆ.

ಕನ್ನಡದ ‘ಆಕರ ಭಾರತಿ’ ಯೋಜನೆ ಮಾದರಿಯಲ್ಲಿ ಭಾರತದಲ್ಲಿ ಈಗಾಗಲೇ ಕೆಲವು ಯೋಜನೆಗಳು ಪ್ರಗತಿಯಲ್ಲಿವೆ. ಬಂಗಾಳಿಯಲ್ಲಿ ರವೀಂದ್ರನಾಥ ಟ್ಯಾಗೋರರ ಸಮಗ್ರ ಸಾಹಿತ್ಯವನ್ನು ‘ಬಿಚಿತ್ರ’ ಎನ್ನುವ ಯೋಜನೆಯಡಿ ಜಾಧವಪುರ ವಿ.ವಿ.ಯ ಸ್ಕೂಲ್ ಆಫ್ ಕಲ್ಚರಲ್ ಟೆಕ್ಸ್ಟ್‌ ಅಂಡ್ ರೆಕಾರ್ಡ್ಸ್‌ ವಿಭಾಗದವರು ಡಿಜಿಟಲೀಕರಣ ಮಾಡುತ್ತಿದ್ದಾರೆ. ಹಾಗೆಯೇ, ಜಿ.ಎನ್.ದೇವಿಯವರ ನೇತೃತ್ವದ ಭಾಷಾ ಸಂಶೋಧನಾ ಕೇಂದ್ರವು ವಡೋದರದಲ್ಲಿ, ಐಐಎಸ್‌ಸಿಯವರು ಬೆಂಗಳೂರಿನ ಸಿ-ಡ್ಯಾಕ್ ಯೋಜನೆಯಲ್ಲಿ ಡಿಜಿಟಲೀಕರಣ ಮತ್ತು ಆರ್ಕೈವ್‌ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಬ್ರಿಟಿಷ್ ಲೈಬ್ರರಿ, ಲಂಡನ್‌ನಲ್ಲೂ ಮೇವಾರ್ ರಾಮಾಯಣ, ಚೆನ್ನೈನ ರೋಜಾ ಮುತ್ತಯ್ಯ ಗ್ರಂಥಾಲಯದಲ್ಲೂ ಆಧುನಿಕ ಸಾಹಿತ್ಯದ ಡಿಜಿಟಲೀಕರಣ ನಡೆಯುತ್ತಿದೆ. ಬಾಸೆಲ್ ಮಿಷನ್‌ನ ಮಂಗಳೂರು ಕೇಂದ್ರದಲ್ಲೂ ಈ ಕೆಲಸ ನಡೆಯುತ್ತಿದೆ. ಆದರೆ ಅದು ಸ್ಕ್ಯಾನ್ ಮಾಡಿದ ಪಿಡಿಎಫ್ ಪ್ರತಿಯಂತಿದೆಯೇ ಹೊರತು ‘ಆಕರ ಭಾರತಿ’ ರೂಪಿಸುತ್ತಿರುವ ಇ-ಬುಕ್ ಮಾದರಿಯಲ್ಲಿಲ್ಲ.  

‘ಆಕರ ಭಾರತಿ’ ಯೋಜನೆಯ ಮೂಲ ಉದ್ದೇಶವೇ ಕನ್ನಡದಲ್ಲಿ ಹೊಸ ಬಗೆಯ ಸಂಶೋಧನಾ ಸಂಸ್ಕೃತಿಯೊಂದನ್ನು ಹುಟ್ಟು ಹಾಕಲು ನೆರವಾಗುವುದು. ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದಂತೆ, ಕನ್ನಡದಲ್ಲಿ ನಡೆಯುತ್ತಿರುವ ಸಂಶೋಧನೆ ಚಿಂತಾಜನಕ ಸ್ಥಿತಿಯಲ್ಲಿರುವ ಈ ಕಾಲದಲ್ಲಿ ಹೊಸ ಬಗೆ ಸಂಶೋಧನೆಗೆ ಪೂರಕವಾದ ವಾತಾವರಣನಿರ್ಮಾಣವಾಗಬೇಕಿದೆ. ಇವತ್ತಿಗೂ ಕನ್ನಡದ ಶ್ರೇಷ್ಠ ಸಂಶೋಧನೆಗಳೆಂದು ನಾವು ಹಿರೀಕರ ಹಲವು ಕೃತಿಗಳನ್ನು ಉದಾಹರಣೆಯಾಗಿ ಕೊಡುತ್ತೇವೆ ಹೊರತು ಸರೀಕರ ಕೆಲ ಕೃತಿಗಳನ್ನು ಹೆಸರಿಸುವುದೂ ನಮಗೆ ಕಷ್ಟವಾಗಿಬಿಟ್ಟಿದೆ.

‘ಆಕರ ಭಾರತಿ’ ಒದಗಿಸುವ ಎಲ್ಲ ವೆಬ್ ಸಂಪನ್ಮೂಲಗಳೂ ಇನ್ನು ಕೆಲವೇ ಕೆಲವು ತಿಂಗಳಲ್ಲಿ ಜನರಲ್ ಪಬ್ಲಿಕ್ ಲೈಸೆನ್ಸ್ ಅಡಿಯಲ್ಲಿ ಸಾರ್ವಜನಿಕರಿಗೆ ಮುಕ್ತವಾಗಿರುತ್ತವೆ. ಆದರೆ ಬೌದ್ಧಿಕ ಸಂಪನ್ಮೂಲಗಳು ಕೇವಲ ಲಭ್ಯವಿದ್ದರೆ ಸಾಲದು. ಅವು ವಿಶ್ವವಿದ್ಯಾಲಯಗಳಲ್ಲಿ ಪಠ್ಯಕ್ರಮದ ಭಾಗವಾಗಬೇಕು. ಪ್ರಾಧ್ಯಾಪಕರು ಮತ್ತು ಪಿಎಚ್‌.ಡಿ ಸಂಶೋಧಕರು ಈಗಿನ ‘.......: ಒಂದು ಅಧ್ಯಯನ’ ಎಂಬೀ ಸಿದ್ಧ ಮಾದರಿಯ ಸಂಶೋಧನಾ ಸಮಸ್ಯೆಗಳನ್ನು ಬಿಟ್ಟು, ಇಲ್ಲಿರುವ ಸಂಪನ್ಮೂಲಗಳನ್ನು ಆಧರಿಸಿ ಹೊಸ ಪ್ರಶ್ನೆಗಳನ್ನು ಎತ್ತಬೇಕು. ಅವು ಹೊಸ ಚರ್ಚೆಗಳಿಗೆ, ಸಂಶೋಧನೆಗಳಿಗೆ ದಾರಿ ಮಾಡಬೇಕು. ಆ ಸಂಶೋಧನೆಗಳು ಪಠ್ಯಕ್ರಮದ ಭಾಗವಾಗಬೇಕು.

ಜ್ಞಾನವನ್ನು ಅದರ ಎಲ್ಲ ಓರೆಕೋರೆಗಳೊಂದಿಗೆ ಕಲಿಸುವುದು, ಆ ಜ್ಞಾನವನ್ನು ಸಾಮಾಜಿಕ ವಾಸ್ತವಗಳ ಜೊತೆಗಿಟ್ಟು ನೋಡುವುದು, ಹೊಸ ಪ್ರಶ್ನೆಗಳನ್ನು ಕೇಳುವುದು ಮತ್ತು ಹೊಸ ತಲೆಮಾರಿನ ವಿದ್ಯಾರ್ಥಿಗಳನ್ನು ಇಂತಹ ಜ್ಞಾನ ನಿರ್ಮಾಣ ಕಾರ್ಯದಲ್ಲಿ ತೊಡಗಿಸುವುದು ಉನ್ನತ ಶಿಕ್ಷಣ ಸಂಸ್ಥೆಗಳ ಧ್ಯೇಯವಾಗಬೇಕಿದೆ. ‘ಆಕರ ಭಾರತಿ’ಯ ಕೆಲಸ ಇಂಥ ಜ್ಞಾನ ನಿರ್ಮಾಣದ ಕೆಲಸಕ್ಕೆ ಪೂರಕವಾಗಿ ನಿಲ್ಲುವುದು. ಈ ಬಗೆಯ ಕೆಲಸಗಳಿಂದಲೇ ಕನ್ನಡ ಕಟ್ಟಲು ಸಾಧ್ಯ ಎನ್ನುವುದನ್ನು ನಾವು ಇನ್ನಾದರೂ ತಿಳಿದುಕೊಳ್ಳಬೇಕಾಗಿದೆ.  

‘ಆಕರ ಭಾರತಿ’ಯ ಈ ಯೋಜನೆಯನ್ನು ಭಾರತದ ಎಲ್ಲ ದೇಶೀ ಭಾಷೆಗಳಿಗೂ ಮುಂದೆ ವಿಸ್ತರಿಸಬಹುದಾಗಿದೆ. ಆದರೆ ಇಲ್ಲಿ ತಂತ್ರಜ್ಞಾನದ ಹಲವಾರು ತೊಡಕುಗಳಿವೆ. ನಾವು ರೂಪಿಸಿದ ತಂತ್ರಾಂಶ ನಮ್ಮ ನೆರೆರಾಜ್ಯದವರ ಯಂತ್ರದಲ್ಲಿ ಕೆಲಸ ಮಾಡುವುದಿಲ್ಲ. ಅವರ ಯಂತ್ರಾಂಶ ನಮ್ಮ ತಂತ್ರಾಂಶಕ್ಕೆ ಹೊಂದುವುದಿಲ್ಲ ಎನ್ನುವಂತಹ ಸಮಸ್ಯೆಗಳು ಇವೆ. ಇದು ಹೊಸದಾಗಿ ಡಿಜಿಟಲ್ ಮಾಧ್ಯಮಕ್ಕೆ ಬರುತ್ತಿರುವ ಭಾಷೆಗಳಿಗಿರುವ ತೊಡಕು. ಇದನ್ನು ಇಂಟರ್-ಆಪರೆಬಿಲಿಟಿ ಎನ್ನುತ್ತಾರೆ. ಇದನ್ನು ಮುಂದಿನ ದಿನಗಳಲ್ಲಿ ನಿವಾರಿಸಬೇಕಿದೆ, ಮತ್ತಿದು ದೀರ್ಘಕಾಲೀನ ಯೋಜನೆಯಾಗಿದೆ. ವಿಶ್ವವಿದ್ಯಾಲಯವೊಂದು ಇದರ ಹೊಣೆಯನ್ನು ಹೊತ್ತರೆ ಇದು ಸಾಧಿಸಲು ಅಸಾಧ್ಯವಾದ ಸಂಗತಿಯೇನಲ್ಲ. ಆದರೆ ಬಹಳ ಮುಖ್ಯವಾದ ಸಂಗತಿಯೆಂದರೆ, ಕನ್ನಡದಲ್ಲೇ ಮಾಡಿ ಮುಗಿಸಲು ಬೆಟ್ಟದಷ್ಟು ಕೆಲಸವಿದೆ.

-ಲೇಖಕ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ,
ತುಮಕೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT