ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿ ದೀಪದ ಬೆಳಕು...

ಹೆಣ್ಣೊಬ್ಬಳ ಒಡಲಾಳದ ದನಿ
Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

‘ಬೆಲ್ಲಿ ಡಾನ್ಸ್‌ ನೋಡ್ತಿ?’ ಅಂತ ನನ್ನ ಗಂಡ ಕೇಳ್ದಾಗ, ಕಣ್ಣುಹಿಗ್ಗಿಸಿ, ಸಿಟ್ಟೆಲ್ಲ ಅದರೊಳಗ ತೋರಿಸಿ, ಬ್ಯಾಡ ಅಂತ ಹೇಳಿದ್ದೆ.
‘ಯಾಕ ನೋಡೂದಿಲ್ಲ? ನೋಡಲ್ಲಾ’ ಎಂದಿನ್ಹಂಗ, ನನ್ನ ಸಿಟ್ಟಿಗೇನೂ ಬೆಲೀನೇ ಇಲ್ಲಾ ಅನ್ನೂಹಂಗ, ಮತ್ತ ಕೇಳಿದ.
‘ನಂಗದು ಸೇರಾಂಗಿಲ್ಲ. ಹೊಟ್ಟಿ, ಎದಿ ಕುಣಸೂ ಡಾನ್ಸ್‌ ಅದು’ ಅಂದೆ.

‘ಬಾಲಿವುಡ್‌ ಬೆಲ್ಲಿ ಡಾನ್ಸ್‌ ಅಲ್ಲ ಇದು. ಖರೇನೆ ಬೆಲ್ಲಿ ಡಾನ್ಸು, ಒಮ್ಮೆ ಹಂಗಂದ್ರೇನಂತ ಓದಿ ನೋಡು. ಆಮ್ಯಾಲೆ ನೀನೇ ಅದನ್ನ ಖುಷಿಯಿಂದ ನೋಡ್ತಿ’ ಅಂದ.

ನನಗೇ ಮನವರಿಕಿ ಆಗೂತನಾನೂ ನಾ ಏನೂ ಒಪ್ಪೂದಿಲ್ಲ. ಅದು ಅಂವಗ ಭಾಳ ಛೊಲೊ ಗೊತ್ತದ. ಇಂಥಾ ಸಂದರ್ಭದೊಳಗ ಏನೂ ಸಾಧಸಾಕ ಹೋಗಲಾರದೆ, ನಿರ್ಧಾರ ನನಗೇ ಬಿಡುವ ಜಾಣ ಅಂವ.

ಸರಿ, ಹುಡುಕಾಟ ಶುರು ಆಯಿತು. ಅನುಬಿಸ್‌ ಅನ್ನವ್ರು ವಿಶ್ವಸಂಸ್ಥೆಯ ಡಾನ್ಸ್‌ ಕೌನ್ಸಿಲ್‌ನ ಸದಸ್ಯೆ ಬೆಂಗಳೂರೊಳಗ ಅನುಬಿಸ್‌ ನಿರ್ವಾಣ ಅಂತ ಸಂಸ್ಥೆ ಶುರು ಮಾಡಿ, ಬೆಲ್ಲಿ ಡಾನ್ಸ್‌ ಕಲಸ್ತಾರ. ಅವರ ಹತ್ರ ಈ ನೃತ್ಯದ ಬಗ್ಗೆ ಕೇಳಿದೆ...

ತುಸು ಸಿಟ್ಟಿನಿಂದಲೇ ಮಾತಾಡಾಕ ಸುರು ಮಾಡಿದ್ರು. ಅವರಿಗೆ ಬಾಲಿವುಡ್‌ ಸಿನಿಮಾದ ಮ್ಯಾಲೆ ಒಂದಷ್ಟು ಸಿಟ್ಟು, ಜೊತಿಗೆ ಒಂದೀಟೇ ಪ್ರೀತಿ.
ಹಿಂದಿ ಸಿನಿಮಾ ನೃತ್ಯವನ್ನು ಜನಪ್ರಿಯ ಮಾಡಿತು ಖರೆ. ಆದರ ಬರೇ ಐಟಂ ಹಾಡು ಅನ್ನೂ ಹಂಗ ಅನ್ನೂದು ಅವರ ಅಸಮಾಧಾನ ಆಗಿತ್ತು.
ಬಯ್ಯೂದೆಲ್ಲ ಮುಗದ ಮ್ಯಾಲೆ ತಮ್ಮ ನೃತ್ಯದ ಬಗ್ಗೆ ಹೇಳಾಕ ಶುರು ಮಾಡಿದ್ರು.

‘ಬೆಲ್ಲಿ ಡಾನ್ಸು, ಭೂಮಿಗೆ ಸಮರ್ಪಿತ. ಭೂಮಿಯೊಂದಿಗೆ ಸಂಪರ್ಕ ಸಾಧಿಸುವ ಕಳ್ಳುಬಳ್ಳಿ ಅದು. ಅದಕ್ಕೇ ನಾವ್ಯಾರೂ ಕಾಲಿಗೇನೂ ಧರಿಸದೇ ಡಾನ್ಸ್‌ ಮಾಡ್ತೀವಿ. (ಕಾಲಿಗಷ್ಟೇನಾ? ಅನ್ನೂ ಪ್ರಶ್ನೆ ಮನಸಿನಾಗ ಬಂದಿತ್ತು. ಇನ್ನು ಕೆಣಕೂದು ಬ್ಯಾಡ ಅಂತ ಸುಮ್ನಾಗಿದ್ದೆ) ಹೆಣ್ಮಕ್ಕಳಷ್ಟೇ ಈ ಡಾನ್ಸ್‌ ಮಾಡೂದು. ಯಾಕಂದ್ರ ಭೂಮಿಯೂ ಹೆಣ್ಣು. ಭೂಮಿಯ ಸರ್ವ ಚೇತನಗಳನ್ನೂ ನಮ್ಮೊಳಗ ಆವಾಹನೆ ಮಾಡಿಕೊಳ್ಳುವುದೇ ಈ ನೃತ್ಯ. ಒಮ್ಮೆ ಕಣ್ಮುಚ್ಚಿ ನಿಮ್ಮನ್ನೇ ನೀವು ಭೂಮಿ ಅಂದ್ಕೋರಿ. ನಿಮ್ಮೊಳಗ ಪಂಚ ಮಹಾಭೂತಗಳನ್ನೂ ಅನುಭವಿಸಿರಿ. ನೀರು, ನದಿಯ ಚಲನೆ, ಅದರ ಲಾಲಿತ್ಯ, ಸಮುದ್ರದ ಉಬ್ಬರವಿಳಿತ, ಪರ್ವತ ಕಣಿವೆಯೊಳಗ ಹಾದು ಬರುವ ಗಾಳಿ, ನೆನಪು ಮಾಡ್ಕೋರಿ... ನಿಮ್ಮ ಮನಸಿನೊಳಗ ಬರುವ ಎಲ್ಲಾ ವಿಚಾರನೂ ಹೊರಗ ನೂಕಿ ಬರೇ ಈ ಗಾಳಿ ಸಂಚಾರ ಅನುಭವಿಸಿರಿ... ನಿಮ್ಮ ಮೈ, ಕೈ ಸಂದಿಯೊಳಗ ಆ ಕುಳಿರ್ಗಾಳಿಯ ಚಲನೆ ಅನುಭವ ಆಗ್ತದ. ಈಗ ಇಡೀ ಧ್ಯಾನ ಇನ್ನೊಂದಿಷ್ಟು ಆಳಕ್ಕ ತೊಗೊಂಡು ಹೋಗೂನು. ಹೊರಗ ಅನುಭವಿಸುತ್ತಿದ್ದದ್ದು, ನಿಮ್ಮೊಳಗೇ ಭೂಮಿಯ ಚೇತನ ಬಂದ್ಹಂಗ ಆಗಲಿ. ಇಡೀ ಸೃಷ್ಟಿಯ ಚೈತನ್ಯ ಅದು.

ಇಂದ್ರಿಯಗಳ ಮೇಲೆ ನಿಗ್ರಹ ಇರಲಿ. ದೇಹ ಗಾಳಿಯೊಳಗ ತೇಲಲಿ. ನಿಮ್ಮ ದೇಹ ಚೇತನಗಳೆರಡರ ನಡುವಿನ ಲಯ, ರಾಗ, ಈ ನೃತ್ಯ.
ಈಗ ಹೇಳ್ರಿ, ಬಾಲಿವುಡ್‌ನೋರು ಇದರ ಚೈತನ್ಯವನ್ನು ಹೊರ ದೂಡಿ ಬರೇ ರಾಗವನ್ನು ತೋರಿಸ್ಯಾರ. ಹಿಂಗಾಗಿ ಭಾಳ ಮಂದಿಗೆ ಬೆಲ್ಲಿ ಡಾನ್ಸ್‌ ಬಗ್ಗೆ ಅಕ್ಕರಾಸ್ಥೆಗಿಂತ ಕುತೂಹಲನೇ ಹೆಚ್ಚದ. ಅಸಹನೀಯ ಕುಲುಕಾಟ ಅಂತನೇ ಅನಸ್ತದ. ಆದ್ರ ನದಿ ಚಲನೆ, ಜುಳುಜುಳು ನೀರಿನ ಹರಿವು, ಕಣಿವೆಯೊಳಗಿನ ಚಿಲುಮೆ ಇವೆಲ್ಲವನ್ನೂ ನೀವು ಪ್ರತಿಬಿಂಬಿಸುವಂತಾದ್ರ... ಎಷ್ಟು ಛಂದ ಅಲ್ಲ, ಆ ಅಸೀಮ ಸಂತಸ ನಿಮ್ಮದಾಗ್ತದ. ಆದ್ರ ಅವೇ ನೀವಾದ್ರ...? ಆಗ ಪರಮಾನಂದ.

ಹಿಂಗ ಪೃಥೆ ಮತ್ತು ಪೃಥ್ವಿ ಒಂದಾಗುವ ಕ್ಷಣ ಅದು. ಆ ಅದಮ್ಯ ಸಂತಸವನ್ನು ನೃತ್ಯಾಂಗನೆಯ ಪ್ರತಿ ಚಲನೆಯೊಳಗೂ ಕಾಣ್ತೀರಿ’ ಅಂತ ಹೇಳಿ ಸುಮ್ನಾದರು.
ಅಲ್ಲೀತನಾನೂ ಬೆಲ್ಲಿ ಡಾನ್ಸ್‌ ಕಡೆ ಕಣ್ಣು ನೆಟ್ಟು ನೋಡಾಕ ಒಲ್ಲೆ ಅನಸ್ತಿತ್ತು. ಆದ್ರ ಆಮ್ಯಾಲೆ ಅವರು ಹೆಜ್ಜಿ ಹಾಕೂಮುಂದ, ಅವರು ಕಾಣಲೇ ಇಲ್ಲ. ಅವರು ಹೇಳಿದ ನದಿ, ಕಣಿವೆ, ಗಾಳಿ, ನದಿ ನಿನಾದ, ಇವೇ ವಿಜ್ರಂಭಿಸ್ತಾವ. ಅದೇ ನೃತ್ಯ. ನೋಟ ಬ್ಯಾರೆ ಆಗಿತ್ತು.

ಅರಿವು ಇಲ್ದಾಗ, ಅಸಹನೀಯ, ಅಸಹ್ಯ  ಮತ್ತ ಅಶ್ಲೀಲ ಅನಸೂದು ಸಹಜ. ಆದ್ರ ಆ ಬಗ್ಗೆ ತಿಳಿದಾಗ ಯಾವ ಭಾವವೂ ಬರೂ ದಿಲ್ಲ. ತಿಳಿವು ಎಲ್ಲಾನೂ ತಿಳಿ ಮಾಡ್ತದ.

ಹಿಂಗೇ ಇಡೀ ಭೂದೇವಿಯನ್ನೇ ಮನೀಗೆ ಕರದು ಪೂಜಾ ಮಾಡೂ ಪದ್ಧತಿ ಬೀದರ್‌, ಗುಲ್ಬರ್ಗಾ ಕಡೆ ಅದ. ‘ಘಟ್ಟಾ ಸ್ಥಾಪನೆ’ ಅಂತ ಅದಕ್ಕ ಕರೀತಾರ.
ನಮ್ಮನಿಯೊಳಗ ಈ ಪದ್ಧತಿ ಇರಲಿಲ್ಲ. ಆದ್ರ ನಮ್ಮಮ್ಮನ ಗೆಳತಿ ಸುಮಾ ತಡಕಲ್‌ ಅವರ ಮನ್ಯಾಗ ಒಂಬತ್ತು ದಿನದ ಘಟ್ಟ ಇರ್ತಿತ್ತು. ಅಂದ್ರ ಮನಿಯೊಳಗ ಹೊಲದ ಮಣ್ಣು ತಂದು, ದೇವರ ಜಗಲಿ ಮ್ಯಾಲೆ ಹರವಿ, ಒಂಬತ್ತು ಬಗೆಯ ಧಾನ್ಯ ಅದರೊಳಗ ಹಾಕೋರು. ಒಂಬತ್ತು ದಿನದೊಳಗ ಎರಡು ಮೂರು ಗೇಣೆತ್ತರ ಆ ಸಸಿ ಬೆಳಿಯೂವು. ದೇವರ ಜಗಲಿ ಮ್ಯಾಲೆ ಒಂದು ತೊಟ್ಟಲಾ ಮಾಡಿ ಅವಕ್ಕ ಒಂದೊಂದೇ ತಿಂಡಿ ಕಟ್ಟೋರು. ಚಕ್ಕುಲಿ, ದಾಣಿ, ಅನಾರಸ್‌ ಹಿಂಗ... ಬೆಳಿ ಆ ಮಾಡೆ ಮುಟ್ಟಿದ್ರ ಆ ವರ್ಷ ಸಮೃದ್ಧ ಅಂತ ಅಂದ್ಕೊಳ್ಳೂದು ನಂಬಿಕಿ.

ಈ ಒಂಬತ್ತೂ ದಿವಸ ಘಟ್ಟ ಸ್ಥಾಪನೆ ಜೊತಿಗೆ ದೀಪಾ ಹಾಕೂದು ಅಂತ ಇನ್ನೊಂದು ಪೂಜಾ ಪದ್ಧತಿ ಐತಿ. ಮೂರು, ಐದು, ಏಳು, ಒಂಬತ್ತು ದಿನಾನೂ ದೇವರ ಮುಂದಿನ ದೀಪ ಶಾಂತ ಆಗಲಾರದ್ಹಂಗ ನೋಡ್ಕೊಬೇಕು. ದೊಡ್ಡ ಹಣತಿಯೊಳಗ, ಇಷ್ಟುದ್ದದ ಬತ್ತಿ ಮಾಡಿಟ್ಟಿರ್ತಾರ. ಯಾವುದೇ ಕಾರಣಕ್ಕೂ ಶಾಂತ ಆಗಾಕ ಬಿಡೂದೇ ಇಲ್ಲ. ನವಮಿ ದಿನಾ ಬಂಧು ಬಳಗಕ್ಕ ಊಟಕ್ಕ ಕರೀತಾರ. ಅದು ಅಲ್ಲಿಯ ಪದ್ಧತಿ.

ಮನ್ಯಾಗ್ಯಾಕ ಸಸಿ ಬೆಳೀಬೇಕು? ಹಬ್ಬ ಆದ ಮ್ಯಾಲೆ ಅವನ್ನೇನು ಮಾಡ್ತಾರ? ‘ನಾವುಣ್ಣುವ ಪ್ರತಿ ಕಾಳು ಬೆಳ್ಯಾಕ ಹಗಲೂ ರಾತ್ರಿ ಅನ್ನದಾತ ಎಷ್ಟು ಕಷ್ಟ ಪಟ್ಟಾನಂತ ತಿಳಿಯೂದು ಬ್ಯಾಡ? ತಾಟಿಗೆ ಹಾಕಿದ ಒಂದೊಂದು ಅಗುಳೂ ಬಿಡಲಾರದೆ ಉಣ್ಣೂದು ರೈತನ ಶ್ರಮಕ್ಕ, ಭೂಮಿಗೆ ತೋರಿಸುವ ಗೌರವ ಅದು.  ಭೂತಾಯಿಗೆ, ರೈತನಿಗೆ ಧನ್ಯವಾದ ಹೇಳುವ ಬಗಿ ಅದು. ಆಮ್ಯಾಲೆ ಹೊಲಕ್ಕೇ ಹೋಗ್ತಾವ ಈ ಮಣ್ಣು, ಈ ಬಗಿ ಎಲ್ಲಾ..’ ಅಂತ ಸುಮಕ್ಕ ಹೇಳೋರು. ತುಟಿಗೆ ತುಟಿ ಹತ್ಲಾರದಷ್ಟು ಅವಸರದಿಂದ ಸುಮಕ್ಕ ಮಾತಾಡ್ತಿದ್ರ, ತಡಕಲ್‌ ಕಾಕಾ, ‘ಊಟಕ್ಕ ಕೊಡು ಮೊದಲ. ಹಿಂದಾಡೆ ಮಾತಾಡೂನಂತ. ಹಸದ ಹೊಟ್ಟೀಲೆ ದೇವರು ಮೆಚ್ಚೂದಿಲ್ಲ. ‘ಪೆಹಲೆ ಪೇಠೋಬಾ, ಫಿರ್‌ ವಿಠೋಬಾ’ ಅನ್ನೋರು.

ಸುಮಕ್ಕ ಹೋಳಗಿ ಹಂಚಿನ ಕಡೆ ಹೋದ್ರ, ನಮ್ಮ ಪ್ರಶ್ನೆ ತಡಕಲ್‌ ಕಾಕಾರ ಕಡೆ ನುಗ್ತಿದ್ವು. ‘ಕಾಕಾರಿ, ದೀಪಾ ಯಾಕ ಹಚ್ಚಿಡಬೇಕು?
‘ಆಶ್ವಯುಜ ಮಾಸದಿಂದ ರಾತ್ರಿ ದೊಡ್ಡುವು ಆಗ್ತಾವ. ಅದಕ್ಕ ಹಿಂದಕಿನೋರು ದೀಪಾ ಹಚ್ಚುವ ಪದ್ಧತಿ ಶುರು ಮಾಡಿದ್ರು. ಕಾರ್ತೀಕದಾಗ ದೀಪೋತ್ಸವ ಮಾಡೂಹಂಗ. ಆದ್ರ ಎಚ್ಚರಿದ್ದು ಕಾಯೂದು, ನಮ್ಮ ಮನಸು ಮತ್ತು ಬದುಕಿಗೆ ಸಂಬಂಧ ಪಟ್ಟಿದ್ದು. ದೀಪ ದೇವರನ್ನು ಸಂಕೇತಿಸ್ತದ. ಕತ್ಲು ಸೈತಾನ ಅಥವಾ ರಾಕ್ಷಸರನ್ನ. ಅಸುರ ಶಕ್ತಿ ಹೆಚ್ಚಾಗಿ ಮನಸಿನೊಳಗ ತಮಸ್ಸು ಹುಟ್ಟಲಾರದ ಹಂಗ ಎಚ್ಚರ ವಹಿಸಬೇಕು. ಎಚ್ಚರದ ದೀಪ ಮುಡಸಬೇಕು. ದೇವತ್ವದ ದೀಪ ಆರದ್ಹಂಗ ನೋಡ್ಕೋಬೇಕು ಅನ್ನೂದು ದೀಪಾ ಹಾಕುವ ಆಶಯ’ ಅಂತ ಹೇಳೂದ್ರೊಳಗ ಸುಮಕ್ಕ ‘ಹೋಳಗಿ ಥಣ್ಣಗ ಆಗ್ತಾವ. ಪೋರಿಗಿ ಅಧ್ಯಾತ್ಮ ಹೇಳಬ್ಯಾಡ್ರಿ’ ಅನ್ನೋರು.

ಆ ಬೆಳಕು, ಅರಿವಿನ ಬೆಳಕು, ನಮ್ಮೊಳಗ ಹುಟ್ಟಿದ್ರ, ದೀಪಾವಳಿಯ ದೀಪಗಳ ಸಾಲು ನಮ್ಮನ್ನ, ನಮ್ಮತನವನ್ನೇ ಬೆಳಗ್ತಾವ. ಅರಿವಿನ ಕುಡಿ ದೀಪ ಬೆಳಕು ಹಂಚ್ತದ. ಅಜ್ಞಾನದ ಕಿಡಿ ನಮ್ಮನ್ನೇ ಸುಡ್ತದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT