ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಸಮೀಕ್ಷೆ: ಮುಂದಿನ ಹಾದಿ ಏನು?

Last Updated 13 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಚುನಾವಣಾ ಸಮೀಕ್ಷೆಗಳನ್ನು ನಿಷೇಧಿ ಸುವುದಕ್ಕೆ ಸಂಬಂಧಿಸಿದ ಪ್ರಸ್ತಾಪದ ಸುತ್ತ ನಡೆಯುತ್ತಿರುವ ಈಗಿನ ಚರ್ಚೆ ಒಂದು ಬಗೆಯಲ್ಲಿ ಸಮೀಕ್ಷೆಗಳಲ್ಲಿ ಪಾರದರ್ಶಕತೆ ಯನ್ನು ತರುವುದಕ್ಕೆ ನಿರೀಕ್ಷಿಸದೇ ಸಿಕ್ಕ ಅವಕಾಶ ದಂತೆ ಕಾಣಿಸುತ್ತಿದೆ.ಮೇಲ್ನೋಟಕ್ಕೆ ಈಗ ನಡೆಯುತ್ತಿರುವ ಚರ್ಚೆಯಲ್ಲಿ ತಾರ್ಕಿಕತೆಯನ್ನು ಹೊರತುಪಡಿಸಿದ ಬೇರೆಲ್ಲವೂ ಕಾಣಿಸುತ್ತಿದೆ.

ಚುನಾವಣಾ ಸಮೀಕ್ಷೆಗಳ ಪರ ಮತ್ತು ವಿರೋಧ ವಾಗಿ ಅದೇ ಹಳಸಲು ವಾದಗಳನ್ನು ಮಂಡಿಸ ಲಾಗುತ್ತಿದೆ. ಇವು ಮುಂದಿನ ಕೆಲವು ವಾರಗಳು ಮತ್ತು ತಿಂಗಳಲ್ಲಿ ನಡೆಯಲಿರುವ ಚುನಾವಣೆ ಗಳಲ್ಲಿ ಯಾರಿಗೆ ಈ ಸಮೀಕ್ಷೆಗಳು ಲಾಭ ತಂದು ಕೊಡಬಹುದು ಎಂಬುದನ್ನೇ ಹೆಚ್ಚು ದೃಷ್ಟಿ ಯಲ್ಲಿಟ್ಟುಕೊಂಡಿವೆ. ಆದರೂ ಈ ರಾಜಕೀಯ ನಿಲವುಗಳು ಸಮೀಕ್ಷೆಗಳ ವಿಷಯದಲ್ಲಿ ಅಗತ್ಯ ವಾಗಿರುವ ವಿವೇಕಯುತ ನೀತಿ ನಿರೂಪಣಾತ್ಮಕ ಮಧ್ಯಪ್ರವೇಶದ ಹಾದಿಯೊಂದನ್ನು ತೆರೆದಿವೆ.

ಈ ಮಧ್ಯಪ್ರವೇಶ ಮೂರು ಮೂಲಭೂತ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊದಲನೆಯದಾಗಿ ಸಾರ್ವಜನಿಕ ಅಭಿಪ್ರಾಯ ವನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅನಿವಾರ್ಯ ಎಂಬುದನ್ನು ಮನಗಾಣಬೇಕು. ಚುನಾವಣೆಗಳು ಕೇವಲ ಖಾಸಗಿ ಸಂಗತಿಯಲ್ಲ. ಇತರರು ಏನು ಯೋಚಿಸುತ್ತಿದ್ದಾರೆ ಎಂಬುದನ್ನು ಅರಿಯುವುದು ಪ್ರತಿಯೊಬ್ಬ ಮತದಾರನ ಅಗತ್ಯ.

ಈ ವಿಷಯದಲ್ಲಿ ಸಮೀಕ್ಷೆಗಳನ್ನು ಆಧಾರವಾಗಿಟ್ಟು ಕೊಂಡು ಜನರ ನಿಲವುಗಳನ್ನು ಅಂದಾಜಿಸುವ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಭಿಪ್ರಾಯ ಮಂಡನೆಗೆ ಅವಕಾಶಗಳನ್ನು ಕಂಡುಕೊಂಡಿರುವ ಸಣ್ಣ ಸಂಖ್ಯೆಯ ಪ್ರತಿಷ್ಠಿತರು ತಮ್ಮ ಅಭಿಪ್ರಾಯಗಳನ್ನೇ ಸಾರ್ವತ್ರಿಕ ಅಭಿ ಪ್ರಾಯವೆಂಬ ಭಾವ ಬರುವಂತೆ ವ್ಯಕ್ತಪಡಿಸುವ ಅಸಮಾನ ಸ್ಥಿತಿ ಭಾರತದಲ್ಲಿದೆ. ಈ ದೃಷ್ಟಿಯಲ್ಲಿ ನೋಡಿದಾಗ ವೈಜ್ಞಾನಿಕ ವಿಧಾನದಲ್ಲಿ ನಡೆಸ ಲಾಗುವ ಮಾದರಿ ಸಮೀಕ್ಷೆಗಳು ಕೆಲಮಟ್ಟಿ ಗಾದರೂ ಬಡವರ ಮತ್ತು ಅಭಿಪ್ರಾಯಗಳನ್ನು ದಾಖಲಿಸುವ ಶಕ್ತಿಯಿಲ್ಲದ ವರ್ಗದ ಅನಿಸಿಕೆ ಗಳನ್ನು ಹೊರತರುತ್ತವೆ.

ಈ ಎಲ್ಲವನ್ನೂ ಒಟ್ಟಾಗಿ ಪರಿಗಣಿಸಿದಾಗ ಸಮೀಕ್ಷೆಗಳು ಜನಾಭಿ ಪ್ರಾಯದ ಗಣನೆಗೆ ಉಳಿದೆಲ್ಲಾ ವಿಧಾನಗಳಿಗಿಂತ ಉತ್ತಮ ಎನಿಸುತ್ತದೆ. ಆದ್ದರಿಂದಲೇ ಈ ಮಾಹಿತಿ ರಾಜಕಾರಣಿಗಳಿಗೆ, ಮಾಧ್ಯಮಗಳಿಗೆ ಮತ್ತು ಜನರಿಗೂ ಅಗತ್ಯ. ಹಾಗಾಗಿ ಚುನಾವಣೆ ಯಲ್ಲಿ ನಡೆಯುವ ಸ್ಪರ್ಧೆಯ ಜಾಡನ್ನು ಕಂಡು ಕೊಳ್ಳುವುದಕ್ಕಾಗಿ ಸಮೀಕ್ಷೆಗಳು ಮುಂದೆಯೂ ಉಳಿದುಕೊಳ್ಳುತ್ತವೆ.

ಎರಡನೆಯದಾಗಿ ಚುನಾವಣೆಯಲ್ಲಿ ನಡೆ ಯುವ ಸ್ಪರ್ಧೆಯನ್ನು ಕಡಿಮೆ ತಪ್ಪುಗಳೊಂದಿಗೆ ಅಂದಾಜಿಸಬಹುದಾದ ಏಕೈಕ ವಿಧಾನವಾಗಿ ನಮಗಿರುವುದು ಮಾದರಿಗಳನ್ನು ಆಧಾರ ವಾಗಿಟ್ಟುಕೊಂಡ ಸಮೀಕ್ಷೆ. ಆದ್ದರಿಂದಲೇ ಇದರ ಫಲಿತಾಂಶಗಳನ್ನು ಬಹಿರಂಗಪಡಿಸುವುದು ಸ್ಪರ್ಧೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗೆಂದು ಸಮೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದ ಮಾತ್ರಕ್ಕೆ ಚುನಾವಣೆಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ.

ಹಾಗೆಯೇ ಸಮೀಕ್ಷೆಯೊಂದರಲ್ಲಿ ಕಳಪೆ ಸಾಧನೆ ತೋರಿದ ಮಾತ್ರಕ್ಕೆ ಚುನಾವಣಾ ಭವಿಷ್ಯವೂ ಇಲ್ಲದಂತಾಗುವುದಿಲ್ಲ. ಆದರೂ ಸಮೀಕ್ಷಾ ಫಲಿತಾಂಶಗಳು ಸಣ್ಣ ಮಟ್ಟಿಗೆ ಆದರೆ ಬಹಳ ನಿರ್ಣಾಯಕವಾಗಿ ಪರಿಣಾಮ ಬೀರು ತ್ತವೆ. ಇದಕ್ಕೆ ಸಂಬಂಧಿಸಿದಂತೆ ಖಡಾಖಂಡಿತ ವಾದ ಅಭಿಪ್ರಾಯವನ್ನು ಹೇಳುವ ಯಾವುದೇ ಸಂಶೋಧನೆ ನಮ್ಮ ಮುಂದಿಲ್ಲ. ಸದ್ಯ ನಮ್ಮ ಮುಂದಿರುವ ಮಾಹಿತಿಗಳನ್ನು ಪರಿಗಣಿಸಿದರೆ ಸಮೀಕ್ಷಾ ಫಲಿತಾಂಶಗಳು ಸಣ್ಣ ಮಟ್ಟಿಗೆ ‘ಗೆದ್ದೆತ್ತಿನ ಬಾಲ ಹಿಡಿಯುವ ಪರಿಣಾಮ’ವನ್ನು ಸೃಷ್ಟಿಸುತ್ತವೆ ಎನ್ನಬಹುದು.

ಅಂದರೆ ಸಮೀಕ್ಷಾ ಫಲಿತಾಂಶಗಳು ಯಾವ ಪಕ್ಷಕ್ಕೆ ಹೆಚ್ಚು ಸ್ಥಾನ ಗಳು ದೊರೆಯುತ್ತವೆ ಎಂದು ಹೇಳುತ್ತವೆಯೋ ಆ ಪಕ್ಷ ಡೋಲಾಯಮಾನ ಸ್ಥಿತಿಯಲ್ಲಿರುವ ಕೆಲ ಮತದಾರರ ಬೆಂಬಲ ಪಡೆಯಬಹುದು. ಅತ್ಯಂತ ತುರುಸಿನ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಇದು ನಿರ್ಣಾಯಕ ಪಾತ್ರ ವಹಿಸಬಹುದು. ಸಮೀಕ್ಷೆಗಳ ಫಲಿತಾಂಶ ಮತದಾರನಿಗಿಂತ ಪಕ್ಷದ ಕಾರ್ಯಕರ್ತರನ್ನು ಮತ್ತು ಬೆಂಬಲಿಗ ರನ್ನು ಹೆಚ್ಚು ಪ್ರಭಾವಿಸುತ್ತದೆ.

ಸಮೀಕ್ಷೆಯ ಧನಾತ್ಮಕ ಫಲಿತಾಂಶ ಇವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದು ಪ್ರಚಾರ ಕಾರ್ಯದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗು ತ್ತದೆ. ಸಮೀಕ್ಷಾ ಫಲಿತಾಂಶಗಳನ್ನು ಒಟ್ಟಾರೆ ಯಾಗಿ ನಿರಾಕರಿಸುವ ರಾಜಕೀಯ ಪಕ್ಷಗಳ ನೀತಿ ತಮ್ಮ ಉದ್ವಿಗ್ನತೆಯನ್ನು ಮುಚ್ಚಿಡುವ ತಪ್ಪಾದ ಮಾರ್ಗವಷ್ಟೇ.

ಕೊನೆಯದಾಗಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಭಾರತದಲ್ಲಿ ಚುನಾ ವಣಾ ಸಮೀಕ್ಷೆಗಳು ಅತ್ಯುನ್ನತ ಸ್ತರದ ವೃತ್ತಿ ಪರತೆ ಮತ್ತು ನಿಷ್ಪಕ್ಷಪಾತ ನಿಲವುಗಳನ್ನು ತೋರಿಸಿಲ್ಲ. ಇಲ್ಲಿರುವ ಸಮಸ್ಯೆ ಸಮೀಕ್ಷೆ ಆಧಾ ರಿತ ಅಂದಾಜುಗಳು ತಪ್ಪಾಗಿರುವುದಷ್ಟೇ ಅಲ್ಲ.

ಹಾಗೆ ನೋಡಿದರೆ ಈ ವಿಷಯದಲ್ಲಿ ಭಾರತೀಯ ಸಮೀಕ್ಷೆಗಳು ಒಳ್ಳೆಯ ಸಾಧನೆಯನ್ನೇ ತೋರಿವೆ. ಮತಗಟ್ಟೆ ಸಮೀಕ್ಷೆ ಮತ್ತು ಚುನಾವಣೋತ್ತರ ಸಮೀಕ್ಷೆಗಳನ್ನು ಆಧಾರವಾಗಿಟ್ಟುಕೊಂಡ ಅಂದಾಜುಗಳು ಚುನಾವಣಾಪೂರ್ವ ಸಮೀಕ್ಷೆ ಗಳ ಅಂದಾಜಿಗಿಂತ ಹೆಚ್ಚು ನಿಖರವಾಗಿವೆ. ಹಾಗೆಯೇ ಎಲ್ಲಾ  ಬಗೆಯ ಸಮೀಕ್ಷೆಗಳೂ ಚುನಾವಣಾ ಫಲಿತಾಂಶ ಕುರಿತ ಡ್ರಾಯಿಂಗ್ ರೂಮ್ ಲೆಕ್ಕಾಚಾರಗಳು ಮತ್ತು ನವ ಮಾಧ್ಯಮದ ಚರ್ಚೆಗಳಿಗಿಂತ ಉತ್ತಮವಾದ ಅಂದಾಜುಗಳನ್ನೇ ಒದಗಿಸಿವೆ.

ಪಾರದರ್ಶಕತೆ ಮತ್ತು ವೃತ್ತಿಪರತೆಯ ತೀವ್ರ ಕೊರತೆ ಸಮೀಕ್ಷೆಗಳ ನಿಜವಾದ ಸಮಸ್ಯೆ. ಇದಕ್ಕೆ ಕೆಲವೇ ಕೆಲವು ಅಪವಾದಗಳಿವೆ.  ಸಮೀಕ್ಷೆಗಳು ಏನನ್ನು ಹೇಳಬಲ್ಲವು  ಅಥವಾ ಏನನ್ನು ಹೇಳ ಲಾರವು  ಎಂಬುದರ ಕುರಿತಂತೆ ಜನಸಾಮಾನ್ಯ ರಿಗೆ ದುರದೃಷ್ಟವಶಾತ್  ಬಹಳ ಕಡಿಮೆ ತಿಳಿ ವಳಿಕೆ ಇದೆ. ಮಾಧ್ಯಮಗಳು ಕೂಡಾ ಜನ ಸಾಮಾನ್ಯರಿಗಿಂತ ಭಿನ್ನವಲ್ಲ.

ಹಾಗೆಯೇ ಸಮೀಕ್ಷ ಕರು ತಮ್ಮ ಅಳತೆ ಮೀರಿದ ತೀರ್ಮಾನಗಳನ್ನು ಕೊಡುತ್ತಾರೆ. ಅನೇಕ ಬಾರಿ ಇದು ಮಾಟ–-ಮಂತ್ರಗಳಷ್ಟೇ ನಿಖರವಾಗಿರುತ್ತದೆ! ಪರಿಣಾಮ ವಾಗಿ ವೃತ್ತಿಪರ ಪ್ರಯತ್ನಗಳು ಮತ್ತು ಪುಂಡು ಸಮೀಕ್ಷೆಗಳ ನಡುವಣ ವ್ಯತ್ಯಾಸವೇ ಇಲ್ಲ ದಂತಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಪುಂಡು ಸಮೀಕ್ಷೆಗಳ ಪ್ರಮಾಣವೂ ಹೆಚ್ಚಿದೆ. ಇವುಗಳಲ್ಲಿ ಕೆಲವಂತೂ –ಅದೃಷ್ಟವಶಾತ್ ಇವುಗಳ ಸಂಖ್ಯೆ ಬಹಳ ಕಡಿಮೆ– ಒಂದು ಕೋಣೆಯಲ್ಲೋ ಸ್ಟುಡಿಯೋದಲ್ಲೋ ಕುಳಿತು ತಯಾರಿಸಿದವು.

ಕಾಂಗ್ರೆಸ್ ಮತ್ತು ಬಿಎಸ್‌ಪಿಯ ಉದ್ದೇಶ ಗಳು ಏನೇ ಇದ್ದರೂ ಚುನಾವಣಾ ಸಮೀಕ್ಷೆಗಳ ವಿಷಯದಲ್ಲಿ ಒಂದು ನೀತಿ ನಿರೂಪಣಾತ್ಮಕ ಮಧ್ಯಪ್ರವೇಶದ ಅಗತ್ಯವಿದೆ ಎಂಬುದಂತೂ ನಿಜ. ಯಾವುದು ಸರಿಯಾದ ಮತ್ತು ಪರಿಣಾಮಕಾರಿ ಯಾದ ಮಧ್ಯಪ್ರವೇಶ ಎಂಬುದು ಇಲ್ಲಿರುವ ನಿಜವಾದ ಸಮಸ್ಯೆ.

ಚುನಾವಣಾಪೂರ್ವ ಸಮೀಕ್ಷೆಗಳನ್ನು ನಿಷೇಧಿ ಸುವುದು ನೆಗಡಿ ಬಂತೆಂದು ಮೂಗನ್ನು ಕೊಯ್ದು ಬಿಡುವಂಥ ಪರಿಹಾರ. ಸಮೀಕ್ಷಾ ಫಲಿತಾಂಶ ಗಳನ್ನು ಪ್ರಕಟಿಸುವುದಕ್ಕೆ ಮತದಾನಕ್ಕೆ ಮುಂಚಿನ ನಲವತ್ತೆಂಟು ಗಂಟೆಗಳ ಅವಧಿಯಿಂದ ಆರಂಭಿಸಿ ಮತದಾನ ಅಂತ್ಯಗೊಳ್ಳುವ ತನಕದ ನಿಷೇಧ ಈಗಾಗಲೇ ಇದೆ. ಇದು ನ್ಯಾಯ ಸಮ್ಮತವಾದ ನಿಷೇಧ. ಇದರಿಂದ ಸಮೀಕ್ಷಾ ಫಲಿತಾಂಶಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆ ಯಲು ಸಾಧ್ಯ.

ಇಡೀ ಚುನಾವಣಾ ಪ್ರಚಾರದ ಅವಧಿಯಲ್ಲಿ ಸಮೀಕ್ಷೆಗಳಿಗೆ ನಿಷೇಧ ಹೇರಿದರೆ ನ್ಯಾಯಾಲಯ ಅದನ್ನು ಅಸಿಂಧುಗೊಳಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ; ಇದು ಸಮೀಕ್ಷೆಗಳ ಫಲಿತಾಂಶವನ್ನು ಕಾಳಸಂತೆಯಲ್ಲಿ ಪಡೆದು ಕೊಳ್ಳುವ ಪ್ರವೃತ್ತಿಗೂ ಕಾರಣವಾಗಬಹುದು. ಹಾಗೆಯೇ ಪಾರದರ್ಶಕ ಮತ್ತು ಉತ್ತರ ದಾಯಿತ್ವವಿರುವ ಸಮೀಕ್ಷೆಗಳ ಸ್ಥಳವನ್ನು ವದಂತಿಗಳು ಆಕ್ರಮಿಸಿಕೊಳ್ಳಬಹುದು.

ನಿಷೇಧ ಎಂಬುದು ಯಾವಾಗಲೂ ಕೊನೆಯ ಅಸ್ತ್ರವಾಗಿ ಬಳಕೆಯಾಗಬೇಕು. ಉಳಿದೆಲ್ಲಾ ಪ್ರಯತ್ನಗಳೂ ವಿಫಲವಾದ ನಂತರವಷ್ಟೇ ಈ ಆಯ್ಕೆಯನ್ನು ಬಳಸಿಕೊಳ್ಳಬೇಕು. ಸದ್ಯ ನಮಗೆ ಬೇಕಿರುವುದು ಚುನಾವಣೆಗೆ ಸಂಬಂಧಿಸಿದ ಸಮೀಕ್ಷೆಗಳಿಗೊಂದು ನಿಯಂತ್ರಣ ವ್ಯವಸ್ಥೆ. ಇದರಲ್ಲಿ ನೀತಿ ಸಂಹಿತೆ, ಕಡ್ಡಾಯ ಬಹಿರಂಗ ಪಡಿಸುವಿಕೆಗಳು ಮತ್ತು ಅಗತ್ಯವಿದ್ದಾಗ ಸ್ವತಂತ್ರ ಸಂಸ್ಥೆಯೊಂದರಿಂದ ತನಿಖೆಯ ಅವಕಾಶಗಳಿರ ಬೇಕು. ಈ ಬಗೆಯ ನಿಯಂತ್ರಣ ವ್ಯವಸ್ಥೆಗಳು ನಮಗಿಂತ ಹಳೆಯ ಅನೇಕ ಪ್ರಜಾಪ್ರಭುತ್ವ ವ್ಯವಸ್ಥೆಗಳಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿವೆ.

ಚುನಾವಣಾ ಸಮೀಕ್ಷೆಗಳನ್ನು ಸಾರಾ ಸಗಟಾಗಿ ನಿಷೇಧಿಸದೆ ಅವುಗಳನ್ನು ನಿಯಂತ್ರಿಸು ವುದಕ್ಕಾಗಿ ಇಲ್ಲೊಂದು ಸಲಹೆ ಇದೆ. ಎಲ್ಲಾ ಚುನಾವಣಾ ಸಂಬಂಧಿ ಸಮೀಕ್ಷೆಗಳು ಅಥವಾ ಎಲ್ಲಾ ಬಗೆಯ ಸಮೀಕ್ಷೆಗಳೂ ಈ ಕೆಳಗಿನ ಸಂಗತಿಗಳನ್ನು ಬಹಿರಂಗವಾಗಿ ಪ್ರಕಟಿಸಬೇಕು: ಸಮೀಕ್ಷೆಯನ್ನು ನಡೆಸುವ ಸಂಸ್ಥೆಯ ಮಾಲೀಕತ್ವ ಮತ್ತು ಈ ಕ್ಷೇತ್ರದಲ್ಲಿರುವ ಅದರ ಅನುಭವ, ಸಮೀಕ್ಷೆಯ ಪ್ರಾಯೋಜಕರ ವಿವರಗಳು, ಮಾದರಿಗಳ ಬಗೆ, ಮಾದರಿಗಳ ಗಾತ್ರ ಮತ್ತು ಮಾದರಿಗಳನ್ನು ಆರಿಸಿಕೊಳ್ಳಲು ಬಳಸಿದ ತಂತ್ರ; ಹೀಗೆ ಆರಿಸಿದ ಮಾದರಿಗಳ ಸಾಮಾಜಿಕ ಹಿನ್ನೆಲೆ; ಎಲ್ಲಿ, ಯಾವಾಗ ಮತ್ತು ಹೇಗೆ ಸಂದರ್ಶನ ಗಳನ್ನು ನಡೆಸಲಾಯಿತು; ಪ್ರಶ್ನೆಗಳನ್ನು ಕೇಳಿದ ಕ್ರಮದಲ್ಲಿ ಅವುಗಳ ಯಥಾ ಪಠ್ಯ; ಸಮೀಕ್ಷೆ ಯಲ್ಲಿ ವಿವಿಧ ಪ್ರಶ್ನೆಗಳಿಗೆ ದೊರೆತ ಉತ್ತರಗಳ ಪ್ರಮಾಣ ಮತ್ತು ಇವುಗಳನ್ನು ಹೇಗೆ ಮತಗಳ ಪ್ರಮಾಣದ ಅಂದಾಜು ಮತ್ತು ಸ್ಥಾನಗಳ ಅಂದಾಜು ಸಂಖ್ಯೆಯಾಗಿ ಹೇಗೆ ಪರಿವರ್ತಿಸಲಾಯಿತು ಎಂಬ ವಿವರಗಳು.

ಸ್ವಯಂ ಪ್ರೇರಿತವಾಗಿ ಬಹಿರಂಗಪಡಿಸುವ ಈ ಮಾಹಿತಿಗಳ ಜೊತೆಗೆ ಸಮೀಕ್ಷೆ ನಡೆಸುವ ಸಂಸ್ಥೆ ಗಳು ಇನ್ನೂ ಕೆಲವು ಹೆಚ್ಚುವರಿ ಮಾಹಿತಿಗಳನ್ನು ಅಗತ್ಯ ಬಂದ ಸಂದರ್ಭಗಳಲ್ಲಿ ಒದಗಿಸಬೇಕು. ನಿರ್ಣಾಯಕ ಅಂಶಗಳಿಗೆ ಸಂಬಂಧಿಸಿದ ಕೋಷ್ಟಕ ಗಳನ್ನು ಒದಗಿಸುವುದು ಎರಡನೇ ಹಂತದಲ್ಲಿ ಬಹಿರಂಗಪಡಿಸಬೇಕಾದ ಮಾಹಿತಿಗಳಲ್ಲಿ ಸೇರಿ ರುತ್ತದೆ. ಹಾಗೆಯೇ ಸಮೀಕ್ಷೆಯ ಫಲಿತಾಂಶ ಕುರಿತಂತೆ ಒಂದು ವಿವಾದ ಅಥವಾ ತಕರಾರು ಬಂದಾಗ ಸಮೀಕ್ಷೆಯನ್ನು ನಡೆಸಿದ ಸಂಸ್ಥೆ ತನ್ನ ಸಮೀಕ್ಷೆಯ ಮೂಲ ದತ್ತಾಂಶಗಳನ್ನು ತಜ್ಞ ಸಮಿತಿಯ ಗೌಪ್ಯ ಪರಿಶೀಲನೆಗೆ ಒದಗಿಸಬೇಕು. ಈ ನಿಯಮಗಳನ್ನು ಮೀರುವವರ ವಿರುದ್ಧ ನಿರ್ಬಂಧ ಮತ್ತು ದಂಡನೆಯ ಕ್ರಮಗಳಿರಬೇಕು.

ಈ ನಿಯಮಗಳನ್ನು ಯಾರು ರೂಪಿಸಿ ಜಾರಿಗೆ ತರುತ್ತಾರೆ? ಸಮೀಕ್ಷಾ ಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳು ಸ್ವಯಂ ನಿಯಂತ್ರಣವನ್ನು ಪಾಲಿಸುವುದು ಉತ್ತಮ. ನ್ಯೂಸ್ ಬ್ರಾಡ್‌ ಕಾಸ್ಟರ್ಸ್ ಅಸೋಸಿಯೇಷನ್ ಅಥವಾ ಪ್ರೆಸ್ ಕೌನ್ಸಿಲ್‌ನಂಥ ಸಂಸ್ಥೆಗಳು ಇಂಥದ್ದೊಂದು ಉಪಕ್ರಮಕ್ಕೆ ಮುಂದಾಗಬಹುದು. ಅವುಗಳು ಮಾಡದಿದ್ದರೆ ಚುನಾವಣಾ ಆಯೋಗವೇ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದು.

ಇಲ್ಲಿ ಬಹುಮುಖ್ಯ ಅಂಶವೊಂದನ್ನು ಗಮನ ದಲ್ಲಿಟ್ಟುಕೊಳ್ಳಬೇಕು. ಸಮೀಕ್ಷೆಗಳ ಉತ್ತರ ದಾಯಿತ್ವವನ್ನು ಖಾತರಿಪಡಿಸಲು ರೂಪಿಸಲಾಗಿ ರುವ ಸಕ್ಷಮ ಪ್ರಾಧಿಕಾರ ಕೈಗೊಂಡ ಕ್ರಮದ ಫಲವಾಗಿ ಪಾರದರ್ಶಕತೆ ಬರುವುದಕ್ಕಿಂತ ಸಮೀಕ್ಷಾ ಸಂಸ್ಥೆಗಳೇ ಸ್ವಯಂ ಪ್ರೇರಣೆಯಿಂದ ಮಾಹಿತಿಯನ್ನು ಬಹಿರಂಗಪಡಿಸುವ ವ್ಯವಸ್ಥೆ ಯೊಂದು ರೂಢಿಗೆ ಬರಬೇಕು.

ಇಂಥದ್ದೊಂದು ವ್ಯವಸ್ಥೆ ರೂಪುಗೊಂಡರೆ ಸಾರ್ವಜನಿಕರಿಗೆ ಪುಂಡು ಸಮೀಕ್ಷೆಗಳು ಮತ್ತು ವೃತ್ತಿಪರ ಸಮೀಕ್ಷೆ ಗಳ ನಡುವಣ ವ್ಯತ್ಯಾಸ ಗುರುತಿಸಲು ಸಾಧ್ಯ ವಾಗುತ್ತದೆ. ವೃತ್ತಿಪರ  ಪ್ರಯತ್ನಗಳನ್ನು ಪ್ರೋತ್ಸಾಹಿಸುವುದೂ ಸುಲಭವಾಗುತ್ತದೆ. ಇದು ಪ್ರಜಾಸತ್ತಾತ್ಮಕ ರಾಜಕೀಯ ಸಂಸ್ಕೃತಿಯ  ಮಟ್ಟಿಗೆ ಒಂದು ಮುಖ್ಯ ಹೆಜ್ಜೆಯಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಸಮೀಕ್ಷೆಗಳ ಮೂಲಕ ಸಂಗ್ರಹಿಸಲಾಗುವ ಸಾರ್ವಜನಿಕ ಅಭಿಪ್ರಾಯ ಬಹಳ ಅಮೂಲ್ಯವಾದುದು. ಇದನ್ನು ಕೇವಲ ರಾಜಕಾರಣಿಗಳಿಗೆ ಮತ್ತು ಸಮೀಕ್ಷಕರಿಗೆ ಬಿಟ್ಟುಬಿಡಲು ಸಾಧ್ಯವಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT