ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಗತೀಕರಣ: ಒಂದು ಸವಾಲು, ಒಂದು ಅವಕಾಶ

ಪೂರ್ವಗ್ರಹದ ನಿಲುವು ತ್ಯಜಿಸಿ ವಸ್ತುನಿಷ್ಠ ನಿಲುವು ತಳೆಯುವುದು ಇಂದಿನ ಅಗತ್ಯ
Last Updated 1 ಏಪ್ರಿಲ್ 2016, 19:35 IST
ಅಕ್ಷರ ಗಾತ್ರ

ಭಾರತದಲ್ಲಿ ಜಾಗತೀಕರಣದ ಪ್ರಕ್ರಿಯೆ ಪ್ರಾರಂಭವಾಗಿ ಇಪ್ಪತ್ತೈದು ವರ್ಷಗಳು ಕಳೆದಿವೆ. ಜಾಗತೀಕರಣದ ಪ್ರಕ್ರಿಯೆ 20ನೇ ಶತಮಾನದ ಉತ್ತರಾರ್ಧದಲ್ಲಿ ಅತ್ಯಂತ ಪ್ರಬಲವಾಗಿ ಮೂಡಿಬಂದಿದೆ ಹಾಗೂ 21ನೇ ಶತಮಾನದಲ್ಲಿ ಇನ್ನೂ ಪ್ರಬಲವಾಗುವ ಲಕ್ಷಣಗಳಿವೆ ಎನ್ನುತ್ತದೆ ಅಂತರ ರಾಷ್ಟ್ರೀಯ ಸಮಾಜವಾದಿ ಸಂಘಟನೆ. ಭಾರತದಲ್ಲಿ ‘ವಸುಧೈವ ಕುಟುಂಬಕಂ’ ಎಂಬ ಪರಿಕಲ್ಪನೆ ಆರಾಧ್ಯವಾಗಿದ್ದರೂ ಇಲ್ಲಿ ಜಾಗತೀಕರಣವನ್ನು ವಿರೋಧಿಸುವ ಪರಂಪರೆಯೂ ಇದೆ. ಮೆಣಸಿನಕಾಯಿ ಹೊರದೇಶದಿಂದ ಬಂದದ್ದು ಎಂಬ ಕಾರಣದಿಂದಾಗಿ ಭಾರತದಲ್ಲಿ ಇಂದಿಗೂ ಅದನ್ನು ಬಳಸದಿರುವ ಜನರಿದ್ದಾರೆ. ಆದರೂ ಜಾಗತೀಕರಣ ಇಂದು ಒಂದು ವಾಸ್ತವಿಕತೆಯಾಗಿದೆ. ಜಾಗತೀಕರಣದ ಪ್ರಕ್ರಿಯೆಯನ್ನು ಹಿಂದಕ್ಕೆ ತಿರುಗಿಸುವುದು ಅಸಾಧ್ಯ ಎನಿಸುತ್ತಿದೆ. ಬಹಳಷ್ಟು ಜನ, ಅದರಲ್ಲೂ ಯುವಜನರು ಜಾಗತೀಕರಣದ ಬಗ್ಗೆ ಸಹಾನುಭೂತಿಯ ನಿಲುವನ್ನು ತಳೆದಿದ್ದಾರೆ.

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿರುವ ಸಮಾಜವಾದಿ ಚಿಂತಕ ಪ್ರೊ. ಲಿಸ್ಲಿ ಸ್ಕ್ಲೇರ್ ನಿರ್ವಚಿಸಿರುವಂತೆ, ‘ಸಾರ್ವತ್ರಿಕ ಜಾಗತೀಕರಣ’ದೊಂದಿಗೆ (generic) ‘ಬಂಡವಾಳದ ಜಾಗತೀಕರಣ’ವನ್ನು ಗೊಂದಲಿಸಿಕೊಂಡು, ಬೇರೆ ಥರದ ಜಾಗತೀಕರಣಗಳು ಇರಬಹುದೆನ್ನುವುದನ್ನು ಮರೆತು ಬಹಳಷ್ಟು ಮಂದಿ ಜಾಗತೀಕರಣವನ್ನು ವಿರೋಧಿಸುತ್ತಾರೆ. ಜಗತ್ತಿನ ವಿವಿಧ ಭಾಗಗಳ ಜನ ಜಾಗತೀಕರಣವನ್ನು ವಿರೋಧಿಸುತ್ತಿರುವುದರಿಂದ ಅಮರ್ತ್ಯ ಸೇನ್ ಈ ವಿರೋಧವನ್ನೂ ‘ಅತ್ಯಂತ ಜಾಗತೀಕರಣವಾದ ವಿರೋಧ’ ಎನ್ನುತ್ತಾರೆ.

ಜಾಗತೀಕರಣ ಎಂದರೆ  ‘ಜಾಗತಿಕ ಅಭಿಪ್ರಾಯಗಳು, ಉತ್ಪಾದನೆಗಳು, ವಿಚಾರಗಳು ಹಾಗೂ ಸಂಸ್ಕೃತಿಯ ಇನ್ನಿತರ ಅಂಶಗಳ ಆದಾನಪ್ರದಾನದಿಂದುಂಟಾಗುವ ಅಂತರರಾಷ್ಟ್ರೀಯ ಏಕೀಕರಣದ ಪ್ರಕ್ರಿಯೆ’ ಎಂದು ನಿರ್ವಚಿಸಲಾಗಿದೆ. ಅರ್ಥಶಾಸ್ತ್ರಜ್ಞ ಟೆಕಿಸ್ ಫೊಟೊಪೊಲಸ್ ಅವರು ಸಾರ್ವತ್ರಿಕ ಜಾಗತೀಕರಣವನ್ನು ಹೀಗೆ ವಿಂಗಡಿಸಿದ್ದಾರೆ:  ದೇಶಗಳ ಗಡಿಗಳನ್ನು ದಾಟಿದ ವಸ್ತುಗಳು, ಬಂಡವಾಳ ಹಾಗೂ ಶ್ರಮದ ಮಾರುಕಟ್ಟೆಗಳ ಸಂಘಟನೆ – ‘ಆರ್ಥಿಕ ಜಾಗತೀಕರಣ’;  ದೇಶಗಳನ್ನು ಮೀರಿದ ರಾಜಕೀಯ ಸಂಘಟನೆಗಳ ಬೆಳವಣಿಗೆ ಹಾಗೂ ರಾಷ್ಟ್ರಗಳ ನಿರ್ಬಲೀಕರಣ– ‘ರಾಜಕೀಯ ಜಾಗತೀಕರಣ’;  ‘ ಸಂಸ್ಕೃತಿಗಳ ಜಾಗತಿಕ ಮಿಶ್ರಣ–  ‘ಸಾಂಸ್ಕೃತಿಕ ಜಾಗತೀಕರಣ’ ಇತ್ಯಾದಿ.

‘ಜಗತ್ತಿನ ಕಾರ್ಮಿಕರೇ ಒಂದಾಗಿ’ ಎಂದು ಕಾರ್ಲ್ ಮಾರ್ಕ್ಸ್ ಹೇಳಿದ್ದು ಕಾರ್ಮಿಕ ವರ್ಗದ ಜಾಗತೀಕರಣಕ್ಕೆ ಆತ ನೀಡಿದ ಕರೆಯೇ ಆಗಿತ್ತು. ಮಾರ್ಕ್ಸ್ ಹಾಗೂ ಇತರರು ಸೇರಿ ರಚಿಸಿದ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯಿಂದ ಮೊದಲುಗೊಂಡು ಎರಡನೆಯ ಮಹಾಯುದ್ಧದ ನಂತರ ರಚಿಸಲಾದ  ವಿಶ್ವಸಂಸ್ಥೆ ಹಾಗೂ ಯುರೋಪಿಯನ್ ಯೂನಿಯನ್‌ಗಳು ರಾಜಕೀಯ ಜಾಗತೀಕರಣದ ಉದಾಹರಣೆಗಳೆ. ರಾಜಕೀಯ ಜಾಗತೀಕರಣವು ರಾಷ್ಟ್ರಗಳ ಸಾರ್ವಭೌಮತ್ವದ ತಿರುಳನ್ನೇ ಬದಲಾಯಿಸುತ್ತಿದೆ. ಪ್ರಾದೇಶಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಸಾರ್ವಭೌಮತ್ವವನ್ನು ಬಿಟ್ಟುಕೊಡದಿದ್ದರೂ ಅದನ್ನು ಹಂಚಿಕೊಳ್ಳಲಾಗುತ್ತಿದೆ ಹಾಗೂ ಮಾನವ ಹಕ್ಕುಗಳ ರಕ್ಷಣೆಗಾಗಿ ಇತರ ದೇಶಗಳಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಸಾರ್ವಭೌಮತ್ವವನ್ನು ದುರ್ಬಲಗೊಳಿಸಲಾಗುತ್ತಿದೆ.

ಜಗತ್ತಿನ ವಿವಿಧ ಸಮಾಜಗಳು ನಿಧಾನವಾಗಿ ವಿವಿಧ ಜನಾಂಗ, ಧರ್ಮ, ಭಾಷೆ ಹಾಗೂ ಸಂಸ್ಕೃತಿಗಳ ಮಿಶ್ರಣವಾಗಿ ಪರಿಣಮಿಸುತ್ತಿವೆ. ಭಾರತದಲ್ಲಿ ಬಹಳ ಹಿಂದಿನಿಂದಲೇ ಕಾರ್ಯರೂಪದಲ್ಲಿದ್ದ ಬಹುಸಂಸ್ಕೃತಿವಾದ ಹಾಗೂ ಬಹುಭಾಷಾವಾದಗಳು ಇಂದು ಜಾಗತೀಕರಣದಿಂದಾಗಿ ಯುರೋಪಿನಲ್ಲಿ ಹಾಗೂ ಪಶ್ಚಿಮದ ಇತರ ದೇಶಗಳಲ್ಲಿ  ವಾಸ್ತವವಾಗುತ್ತಿವೆ. ಈ ವಿವಿಧ ಜನಾಂಗ, ಧರ್ಮಗಳು, ಭಾಷೆಗಳು ಹಾಗೂ ಸಂಸ್ಕೃತಿಗಳು ಬಹಳ ಕಾಲ ಪ್ರತ್ಯೇಕವಾಗಿ ಉಳಿಯಲಾರವು. ಕಾಲಕ್ರಮೇಣ ಏಕೀಕರಣದ ಪ್ರಕ್ರಿಯೆ ವಿವಿಧ ಸಮಾಜಗಳನ್ನು ಆವರಿಸಲಿದೆ. ಸಂಸ್ಕೃತಿಯ ಕ್ಷೇತ್ರದಲ್ಲಿ ಚೀನಾ ದೇಶದ ರಾಜಕೀಯ ಮುಖಂಡರು ಮಾವೋತ್ಸೆ ತುಂಗ್ ಧರಿಸುತ್ತಿದ್ದ ಕೋಟನ್ನು ಬಿಟ್ಟು ಯುರೋಪಿನ ಕೋಟನ್ನು ಧರಿಸಲು ಪ್ರಾರಂಭ ಮಾಡಿದುದರಿಂದ ಪ್ರಾರಂಭ ಮಾಡಿ ಪಾಶ್ಚಿಮಾತ್ಯ ಹಾಗೂ ಪೌರ್ವಾತ್ಯ ಸಂಗೀತಗಳ ಮಿಶ್ರತಳಿಯ ಆವಿರ್ಭಾವದವರೆಗೆ ಈ ಏಕೀಕರಣದ ಪ್ರಕ್ರಿಯೆ ಸ್ಪಷ್ಟವಾಗಿ ಕಂಡುಬರುತ್ತಿದೆ.

ಜಗತ್ತಿನ ಮೂಲೆಮೂಲೆಗಳಲ್ಲಿರುವ ಗಣಕಯಂತ್ರಗಳನ್ನು ಜೋಡಿಸುವ ಕೆಲಸ ಮಾಡುವ ಅಂತರ್ಜಾಲ ಜಾಗತೀಕರಣದ ಉತ್ಪಾದನೆಯೂ ಹೌದು, ಉತ್ತೇಜಕವೂ ಹೌದು. ಇಂದು ಜಗತ್ತಿನ ಜನಸಂಖ್ಯೆಯ ಸುಮಾರು 20 ಪ್ರತಿಶತ ಜನ ಅಂತರ್ಜಾಲವನ್ನು ಬಳಸುತ್ತಿದ್ದಾರೆ. ದಿನವೊಂದಕ್ಕೆ 10 ಕೋಟಿ ಜನ ಗೂಗಲ್ ಹುಡುಕುಯಂತ್ರವನ್ನು ಬಳಸುತ್ತಾರೆ. ಜಗತ್ತಿನ ಎಲ್ಲ ಸಂಗೀತಗಳನ್ನು ಜಗತ್ತಿನ ಎಲ್ಲ ಮೂಲೆಗಳಿಗೂ ಹರಡುತ್ತಿರುವ ಯೂ ಟ್ಯೂಬ್‌ ಅನ್ನು ಪ್ರತಿದಿನ 20 ಕೋಟಿ ಜನ ಆಲಿಸುತ್ತಿದ್ದಾರೆ.

ಜಾಗತೀಕರಣದ ಒಂದು ಭಾಗ ಮಾತ್ರವಾದ ಆರ್ಥಿಕ ಜಾಗತೀಕರಣವನ್ನು, ಅದರಲ್ಲೂ ಬಹುರಾಷ್ಟ್ರೀಯ ಕಂಪೆನಿಗಳ ಬೆಳವಣಿಗೆಯೊಂದಿಗೆ ಹಿಂದುಳಿದ ದೇಶಗಳಲ್ಲಿ ಮುಂದುವರಿದ ದೇಶಗಳು ಹೂಡುತ್ತಿರುವ ಬಂಡವಾಳದೊಂದಿಗೆ ತಳಕು ಹಾಕಿ ಇಡೀ ಜಾಗತೀಕರಣವನ್ನೇ ಖಂಡಿಸಲಾಗುತ್ತಿದೆ. ವಿಶೇಷವಾಗಿ ಭಾರತದಲ್ಲಿ, ಈಸ್ಟ್  ಇಂಡಿಯಾ ಕಂಪೆನಿ ಇಡೀ ರಾಷ್ಟ್ರವನ್ನೇ ಕಬಳಿಸಿದ ಇತಿಹಾಸ ಇದೆ. ಹೀಗಾಗಿ ಜಾಗತೀಕರಣದ ಪ್ರಕ್ರಿಯೆಯಲ್ಲಿ ಇದು ಮರುಕಳಿಸಬಹುದೆಂಬ ಬಗ್ಗೆ ಹಲವರಿಗಿರುವ ಭೀತಿ ಜಾಗತೀಕರಣದ ವಿರೋಧಕ್ಕೆ  ಕಾರಣವಾಗಿದೆ.

ಇಂದು ಜಾಗತೀಕರಣದಿಂದಾಗಿ ವಿದೇಶಿ ಕಂಪೆನಿಗಳು ಭಾರತದಲ್ಲಿ ತಮ್ಮ ಬಂಡವಾಳವನ್ನು ಹೂಡಿ, ಬರುವ ಲಾಭವನ್ನು ತಮ್ಮ ದೇಶಗಳಿಗೆ ರವಾನಿಸುತ್ತಿವೆ ಎಂದು ವಾದಿಸಲಾಗುತ್ತಿದೆ. ವಿಪರ್ಯಾಸವೆಂದರೆ ಈ ಪ್ರಕ್ರಿಯೆಯನ್ನು, ತಮ್ಮನ್ನು ಅಂತರ ರಾಷ್ಟ್ರವಾದಿಗಳೆಂದುಕೊಳ್ಳುವ ಕಮ್ಯುನಿಸ್ಟರು ವಿರೋಧಿಸುತ್ತಿದ್ದು, ತಮ್ಮನ್ನು ರಾಷ್ಟ್ರವಾದಿಗಳೆಂದುಕೊಳ್ಳುವ ಕೋಮುವಾದಿಗಳು ಬೆಂಬಲಿಸುತ್ತಿದ್ದಾರೆ. ಆದರೆ ಬರೀ ವಿದೇಶಿ ಕಂಪೆನಿಗಳು ಭಾರತವನ್ನು ಆಕ್ರಮಿಸುತ್ತಿಲ್ಲ. ಭಾರತದ ಕಂಪೆನಿಗಳೂ ವಿದೇಶಗಳನ್ನು ಆಕ್ರಮಿಸುತ್ತಿವೆ. ಇತ್ತೀಚೆಗೆ ಭಾರತದ ಟಾಟಾ ಕಂಪೆನಿಯು ಇಂಗ್ಲೆಂಡಿನ ಕೋರಸ್ ಕಂಪೆನಿಯನ್ನು ಖರೀದಿಸಿತು. ಫ್ರಾನ್ಸ್‌ನ ಸಂಸತ್ತಿನಲ್ಲಿ  ಆ ದೇಶದ ಪ್ರಧಾನಿ ಜಾಗತಿಕ ಉಕ್ಕಿನ ದೊರೆ ಭಾರತದ ಲಕ್ಷ್ಮಿ ಮಿತ್ತಲ್ ಅವರ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಇವರು ವಿದೇಶಗಳಲ್ಲಿ ಬರುವ ಲಾಭವನ್ನು ಭಾರತಕ್ಕೆ ರವಾನಿಸುತ್ತಿಲ್ಲವೇ?

ಆದರೆ ಈ ಬಂಡವಾಳ ಹೂಡುವಿಕೆಯ ಆಯಾಮವನ್ನು ಹೊರತುಪಡಿಸಿ ಜಾಗತೀಕರಣದ ಇತರೆ ಆರ್ಥಿಕ ಆಯಾಮಗಳ ಬಗ್ಗೆಯೂ ಒತ್ತು ಕೊಡಬೇಕಾಗಿದೆ. ಜಗತ್ತಿನ ಎಲ್ಲೆಡೆ ಕಾರ್ಮಿಕರ ಮುಕ್ತ ಚಲನೆಗೂ ನಾವು ಒತ್ತು ಕೊಡಬೇಕು, ಉತ್ತಮ ಬದುಕನ್ನು ಹುಡುಕಿಕೊಂಡು ಕಾರ್ಮಿಕರು ಜಗತ್ತಿನ ಯಾವ ಮೂಲೆಗಾದರೂ ವಲಸೆ ಹೋಗುವ ಸ್ವಾತಂತ್ರ್ಯವನ್ನು ಪಡೆದಿರಬೇಕು ಎಂದು ಸಮಾಜವಾದಿ ಅಂತರರಾಷ್ಟ್ರೀಯ ಸಂಘಟನೆ ಹೇಳುತ್ತದೆ. ಬಂಡವಾಳ ಹೆಚ್ಚಿಗೆ ಇರುವ ದೇಶಗಳಿಂದ ಬಂಡವಾಳ  ಕಡಿಮೆ ಇರುವ ದೇಶಗಳಿಗೆ ಹೇಗೆ ಅದು ಹರಿದು ಬರುತ್ತಿದೆಯೋ ಹಾಗೆಯೇ ಶ್ರಮಶಕ್ತಿ ಹೆಚ್ಚಿಗೆ ಇರುವ ದೇಶಗಳಿಂದ ಶ್ರಮಶಕ್ತಿ  ಕಡಿಮೆ ಇರುವ ದೇಶಗಳಿಗೆ ಕೂಡ ಅದು ಹರಿದು ಬರುತ್ತಿದೆ. ಭಾರತದಲ್ಲಿ ಇಂದು ಲಕ್ಷಾಂತರ ಯುವಕರು ವಿದೇಶಗಳ ಕಾಲ್ ಸೆಂಟರ್‌ಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಲಕ್ಷಾಂತರ ಭಾರತೀಯರು ವಿದೇಶಗಳಲ್ಲಿ ದುಡಿದು ಕೋಟ್ಯಂತರ ಡಾಲರ್‌ಗಳನ್ನು ಭಾರತಕ್ಕೆ ಕಳುಹಿಸುತ್ತಿದ್ದಾರೆ.

ದುಬೈ ಜನಸಂಖ್ಯೆಯಲ್ಲಿ ಪ್ರತಿಶತ 85ರಷ್ಟು ಜನ ವಿದೇಶದಿಂದ ವಲಸೆ ಬಂದವರಾಗಿದ್ದಾರೆ. ಕೇರಳದ ಪ್ರತಿಶತ 10ರಷ್ಟು ಜನ ವಿದೇಶಗಳಲ್ಲಿ ದುಡಿಯುತ್ತಿದ್ದಾರೆ. 2010-11ರಲ್ಲಿ ₹ 3.72 ಲಕ್ಷ ಕೋಟಿ ಹಾಗೂ 2011-12ರಲ್ಲಿ ₹ 4.42 ಲಕ್ಷ ಕೋಟಿಯನ್ನು ಈ ಜನ ಭಾರತಕ್ಕೆ ಕಳುಹಿಸಿದ್ದಾರೆ. 2000 ಹಾಗೂ 2010ರ ನಡುವೆ 1.40 ಕೋಟಿ  ಜನರು ಅಮೆರಿಕೆಗೆ ವಲಸೆ ಹೋಗಿದ್ದಾರೆ. 2009ರಲ್ಲಿ ಅಮೆರಿಕದಿಂದ ಹೊರಗಿನ ದೇಶಗಳಿಗೆ ಈ ಜನ ₹ 27.73 ಲಕ್ಷ ಕೋಟಿಯನ್ನು ಕಳುಹಿಸಿದ್ದರು. ಇವರಲ್ಲಿ 19.20 ಕೋಟಿ ಕಾರ್ಮಿಕರು ₹ 21.84 ಲಕ್ಷ ಕೋಟಿಯನ್ನು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕಳುಹಿಸಿದ್ದರು. ಹೊರದೇಶಕ್ಕೆ ಹೋಗಲು ವೀಸಾ ಅವಶ್ಯಕತೆ ಇರುವಾಗಲೇ ಶ್ರಮದ ಜಾಗತೀಕರಣದ ಪ್ರಕ್ರಿಯೆ ಇಷ್ಟೊಂದು ಪ್ರಭಾವಶಾಲಿಯಾಗಿರುವಾಗ ಮುಕ್ತ ಗಡಿಗಳ ಜಾಗತೀಕರಣ ಕಾರ್ಯರೂಪಕ್ಕೆ ಬಂದರೆ ಇನ್ನೆಷ್ಟು ಪ್ರಭಾವಶಾಲಿಯಾಗಬಹುದು?

ಶ್ರಮದ ಜಾಗತೀಕರಣದಿಂದ ಹೇಗೆ ಸಮಾನತೆ ಉಂಟಾಗಬಹುದು ಎನ್ನುವುದಕ್ಕೆ ಯುರೋಪಿಯನ್ ಯೂನಿಯನ್ ಒಂದು ಉದಾಹರಣೆಯಾಗಿದೆ. ಕಮ್ಯುನಿಸ್ಟರ ಆಡಳಿತದಲ್ಲಿ ಪೂರ್ವ ಯುರೋಪಿನ ದೇಶಗಳು ಆರ್ಥಿಕವಾಗಿ ಪಶ್ಚಿಮ ಯುರೋಪಿನ ದೇಶಗಳಿಗಿಂತ ಹಿಂದುಳಿದಿದ್ದವು. ಇಂದು ಈ ಪೂರ್ವ ಯುರೋಪಿನ ಹಲವಾರು ದೇಶಗಳು ಯುರೋಪಿಯನ್ ಯೂನಿಯನ್‌ನ ಸದಸ್ಯ ರಾಷ್ಟ್ರಗಳಾಗಿವೆ. ಯುರೋಪಿಯನ್ ಯೂನಿಯನ್‌ನ ದೇಶಗಳಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಇರುವುದರಿಂದ, ಪೂರ್ವ ಯುರೋಪಿನ ದೇಶಗಳಿಂದ
ಲಕ್ಷಾಂತರ ಕಾರ್ಮಿಕರು ಪಶ್ಚಿಮ ಯುರೋಪಿನ ದೇಶಗಳಿಗೆ ವಲಸೆ ಬರುತ್ತಿದ್ದಾರೆ. ಇವರು ಪಶ್ಚಿಮ ಯುರೋಪಿನ ದೇಶಗಳ ಕಾರ್ಮಿಕರಿಗಿಂತ ಕಡಿಮೆ ಕೂಲಿಗೆ ಕೆಲಸ ಮಾಡಲು ಸಿದ್ಧರಿರುವುದರಿಂದ ಇದು ಪಶ್ಚಿಮ ಯುರೋಪಿನ ದೇಶಗಳ ಕಾರ್ಮಿಕರಿಗೆ ಸಮಸ್ಯೆಯನ್ನುಂಟು ಮಾಡುತ್ತಿದೆ. ಈ ಬೆಳವಣಿಗೆ ಶ್ರಮದ ಜಾಗತೀಕರಣದ ಪ್ರಕ್ರಿಯೆ ಹೇಗೆ ಬಡ ದೇಶಗಳ ಪರವಾಗಿ ಕೆಲಸ ಮಾಡಬಹುದು ಎನ್ನುವುದಕ್ಕೆ ಉದಾಹರಣೆಯಾಗಿದೆ.  

ರಾಜ್ಯ ವ್ಯವಸ್ಥೆ ಇದುವರೆಗೆ ಆಕ್ರಮಿಸಿಕೊಂಡಿದ್ದ ಸ್ಥಾನವನ್ನು ಇಂದು ಬಹುರಾಷ್ಟ್ರೀಯ ಕಂಪೆನಿಗಳು ಆಕ್ರಮಿಸಿಕೊಳ್ಳುತ್ತಿರುವುದರಿಂದ ರಾಜ್ಯ ವ್ಯವಸ್ಥೆಗಳು ಸಂಕುಚಿತಗೊಳ್ಳುತ್ತಿವೆ. ಹಿಂದೆ ರಾಜ್ಯ ವ್ಯವಸ್ಥೆಗಳನ್ನು ಜನತಾಂತ್ರಿಕ ವಿಧಾನಕ್ಕೆ ಒಳಪಡಿಸಿದಂತೆ ಇಂದು ಬಹುರಾಷ್ಟ್ರೀಯ ಕಂಪೆನಿಗಳನ್ನು ಜನತಾಂತ್ರಿಕ ವಿಧಾನಕ್ಕೆ ಒಳಪಡಿಸಬೇಕಾಗಿದೆ. ಸಾರ್ವತ್ರಿಕ ಜಾಗತೀಕರಣ ಬಂಡವಾಳವಾದಿ ಜಾಗತೀಕರಣವಾಗಿ ಅಭಿವ್ಯಕ್ತವಾಗುತ್ತಿದೆ. ಈ ಬಂಡವಾಳವಾದಿ ಜಾಗತೀಕರಣದಿಂದ ಸಮಾಜವಾದಿ ಜಾಗತೀಕರಣಕ್ಕೆ ಸ್ಥಿತ್ಯಂತರ ಹೊಂದಲು ಇರುವ ಒಂದೇ ಒಂದು ದಾರಿ ಎಂದರೆ ಜನತಾಂತ್ರಿಕ ಪ್ರಕ್ರಿಯೆ. ಈ ಪ್ರಕ್ರಿಯೆಯಲ್ಲಿ ಜನತಂತ್ರದ ಬಂಡವಾಳವಾದಿ ಸ್ವರೂಪವೂ ಸಮಾಜವಾದಿ ಜನತಂತ್ರವಾಗಿ ಪರಿವರ್ತಿತವಾಗುತ್ತದೆ ಎನ್ನುತ್ತಾರೆ
ಪ್ರೊ.ಸ್ಕ್ಲೇರ್.

ಈ ಸಮಾಜವಾದಿ ಜಾಗತೀಕರಣದ ಸ್ವರೂಪವನ್ನು ವಿವರಿಸಲೂ ಸ್ಕ್ಲೇರ್ ಪ್ರಯತ್ನಿಸುತ್ತಾರೆ. ಉತ್ಪಾದಕರು ಹಾಗೂ ಅನುಭೋಗದಾರರ ಸಹಕಾರಿ ಸಂಘಟನೆಗಳು ಜಾಗತಿಕವಾಗಿ ಪರಸ್ಪರ ಸಂಪರ್ಕವನ್ನು ಸಾಧಿಸುವ ಮೂಲಕ ಸಮಾಜವಾದಿ ಜಾಗತೀಕರಣವನ್ನು ಸಾಧಿಸಬಹುದಾಗಿ ಅವರು ವಾದಿಸುತ್ತಾರೆ. ಈ ಬಗ್ಗೆ ಅವರು,  1995ರಲ್ಲಿ ಪ್ರಾರಂಭವಾಗಿ ಇಂದು 92 ದೇಶಗಳ 245 ಸಹಕಾರಿ ಫೆಡರೇಶನ್‌ಗಳ 100 ಕೋಟಿಗಿಂತ ಹೆಚ್ಚು ಸದಸ್ಯರನ್ನು ಹೊಂದಿರುವ ಅಂತರ ರಾಷ್ಟ್ರೀಯ ಸಹಕಾರಿ ಸಂಘಟನೆಯನ್ನು ಉದಾಹರಿಸುತ್ತಾರೆ. ಇದರಲ್ಲಿ ಭಾರತದ 24 ಕೋಟಿ ಜನರ ಸದಸ್ಯತ್ವ ಹೊಂದಿರುವ 12 ರಾಷ್ಟ್ರೀಯ ಸಹಕಾರಿ ಫೆಡರೇಶನ್‌ಗಳೂ ಸೇರಿವೆ.

ಜನಸಾಮಾನ್ಯರ ಹಿತಾಸಕ್ತಿಗಳನ್ನು ಕಾಪಾಡುವ ದೃಷ್ಟಿಯಿಂದ ಬಂಡವಾಳವಾದಿ ಜಾಗತೀಕರಣದ ವಿರೋಧಾಭಾಸಗಳನ್ನು ನಿವಾರಿಸಲು ಸಾರ್ವತ್ರಿಕ ಜಾಗತೀಕರಣದ ಕ್ರಿಯಾಶೀಲತೆಯನ್ನು ಹಾಗೂ ಅದು ನೀಡುವ ಅವಕಾಶಗಳನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೆ ಸಮಾಜವಾದಿ ಜಾಗತೀಕರಣವನ್ನು ಯಶಸ್ವಿಯಾಗಿ ರೂಪಿಸಲು ಅವುಗಳನ್ನು ಬಳಸಿಕೊಳ್ಳಬೇಕು. ‘ನನ್ನ ದೃಷ್ಟಿಯಲ್ಲಿ ಇದು ನಿಧಾನಕ್ಕೆ, ಈಗ ಬಂಡವಾಳವಾದಿ ಜಾಗತೀಕರಣದ ಪ್ರಕ್ರಿಯೆಯನ್ನು ಮುನ್ನಡೆಸುತ್ತಿರುವ ಬಹುರಾಷ್ಟ್ರೀಯ ಬಂಡವಾಳವಾದಿ ವರ್ಗ ಮಾಡುತ್ತಿರುವ ರಾಜ್ಯ ವ್ಯವಸ್ಥೆಯ ಜವಾಬ್ದಾರಿಗಳ ಖಾಸಗೀಕರಣದ ಮೂಲಕವಲ್ಲ, ಸಣ್ಣದರಿಂದ ಆರಂಭಿಸಿ ದೊಡ್ಡ ಹಾಗೂ ಬಹುರಾಷ್ಟ್ರೀಯ ಉತ್ಪಾದಕ, ಅನುಭೋಗದಾರರ ಸಹಕಾರ ಸಂಘಗಳ ಮೂಲಕ ರಾಜ್ಯ ವ್ಯವಸ್ಥೆ ಉದುರಿಹೋಗುವಂತೆ ಮಾಡುತ್ತದೆ’ ಎನ್ನುತ್ತಾರೆ ಸ್ಕ್ಲೇರ್. 

ಜಾಗತೀಕರಣವನ್ನು ಸಾರಾಸಗಟಾಗಿ ವಿರೋಧಿಸುವುದು ಎಂದರೆ ಹೇನಿಗೆ ಹೆದರಿ ಉಟ್ಟಿರುವ ಬಟ್ಟೆಯನ್ನೇ ಕಳಚಿದಂತಾದೀತು. ಕಾಲ ಹಾಗೂ ಭರತಗಳು ಯಾರಿಗಾಗಿಯೂ ಕಾಯುವುದಿಲ್ಲ ಎಂಬುದು ಗಾದೆ. ಜಾಗತೀಕರಣಕ್ಕೆ ಕುರುಡು ವಿರೋಧವನ್ನು ವ್ಯಕ್ತಪಡಿಸುವ ಬದಲು ಜನಸಮುದಾಯದ ಒಳಿತಿಗಾಗಿ, ನಮ್ಮ ಸಂವಿಧಾನದಲ್ಲಿ ಹೇಳಿರುವ ಮೌಲ್ಯಗಳಾದ ಸ್ವಾತಂತ್ರ್ಯ, ಸಮಾನತೆ ಹಾಗೂ ಸಹೋದರ ಭಾವವನ್ನು ಹೆಚ್ಚಿಸುವತ್ತ ಕೆಲಸ ಮಾಡುವಂತೆ ಅದರಲ್ಲಿ ಬದಲಾವಣೆಗಳನ್ನು ತರುವುದೇ ಸೂಕ್ತ. ಜಾಗತೀಕರಣದ ಬಗ್ಗೆ ಪೂರ್ವನಿರ್ಧಾರಿತ ನಿಲುವುಗಳನ್ನು ತ್ಯಜಿಸಿ ಸಹಾನುಭೂತಿಪರ ವಸ್ತುನಿಷ್ಠ ನಿಲುವನ್ನು ತಳೆಯುವುದು ಇಂದಿನ ಅವಶ್ಯಕತೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT