ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರೀಕ್ಷೆ ನಿರಾಸೆಗಳ ನಡುವೆ

ಹೆಣ್ಣೊಬ್ಬಳ ಒಡಲಾಳದ ದನಿ
Last Updated 11 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

‘ಉಮರ್‌ ಭರ್‌ ಗಾಲಿಬ್‌ ಯಹಿ ಭೂಲ್‌ ಕರತಾ ರಹಾ, ಧೂಲ್‌ ಚೆಹರೆ ಪೆ ಥಿ, ಔರ್‌ ಆಯಿನಾ ಸಾಫ್‌ ಕರತಾ ರಹಾ...’ (ಜೀವನ ಪೂರ್ತಿ ಗಾಲಿಬ್‌ ಅದದೇ ತಪ್ಪು ಮಾಡ್ತಿದ್ದ. ಮುಖದ ಮೇಲೆ ದೂಳಿದ್ದರೂ, ಕನ್ನಡಿ ಸ್ವಚ್ಛ ಮಾಡುತ್ತಲೇ ಇದ್ದ)
ಕಣ್ಣೀರು ಗಲ್ಲಕ್ಕಿಳಿಯೂ ಮೊದಲೇ ಈ ಸಾಲು ನೆನಪು ಮಾಡ್ಕೋತೀನಿ. ಕಣ್ಣಿಗೊಂದು ಒಡ್ಡು ಕಟ್ದಂಗ, ನೀರು ಅಲ್ಲೇ ತೇಲತಾವ. ಯಾಕಂದ್ರ ಪ್ರತಿಸಲೇನೂ ಅವವೇ ನಿರೀಕ್ಷೆ, ಅವವೇ ತಪ್ಪು.

ಪ್ರತಿ ಸಂಬಂಧದೊಳಗೂ ಒಂದಷ್ಟು ನಿರೀಕ್ಷೆಗಳಿರ್ತಾವ. ಜೊತಿಗೆ ನಿರಾಸೆನೂ ಕಟ್ಗೊಂಡಿರ್ತಾವ.
‘ಸಮಾಧಾನದಿಂದ ಇರಬೇಕಂದ್ರ ನಿರೀಕ್ಷೆನೆ ಇಟ್ಗೊಬಾರದು. ಆಹಹಾ... ಎಷ್ಟು ಸರಳ ಸೂತ್ರ ಇದು. ಆದ್ರ ನಿರೀಕ್ಷೆನ ಇಟ್ಕೊಳ್ಳಿಲ್ಲಾ ಅಂತಂದ್ರ ಅದು ಸಂಬಂಧರೆ ಹೆಂಗಾಗ್ತದ? ನಮಗ ಮಂದಿಯಿಂದ ಏನೂ ನಿರೀಕ್ಷೆ ಇರೂದಿಲ್ಲ. ಹಂಗಾದ್ರ ಪ್ರತಿಯೊಬ್ಬರ ಜೊತಿಗೂ ಮಂದೀಹಂಗೇ ಇರಾಕ ಆಗ್ತದೇನು?

ಕೂಡಿ ಅದೇವಿ. ಜೋಡಿ ಅದೇವಿ. ಏನರೆ ಕೇಳ್ದಾಗಲೆಲ್ಲ, ನಿರೀಕ್ಷೆ ಇಟ್ಕೊಬ್ಯಾಡ, ನಿರೀಕ್ಷೆ ಇಟ್ಕೊಬ್ಯಾಡಾ... ಅಂತಂದ್ರ ಏನರ್ಥ? ಮಂದಿ ಹಂಗ ಬದುಕೂದರೆ ಹೆಂಗ?

ಭಾಳ ವರ್ಷದ ಮ್ಯಾಲೆ ಗೆಳತಿ ಫೋನು ಮಾಡಿದ್ಲು. ಮಾತಾಡಾಕ ವಿಷಯ ಭಾಳ ಇದ್ವು. ಅಕೀನ ಫೋನು ಮಾಡಿದ್ರಿಂದ, ಮಾತಾಡುವ ಪೂರ್ಣ ಹಕ್ಕು ಅಕೀದೆ ಅನ್ನೂಹಂಗ ಮಾತಾಡ್ತಿದ್ಲು.

‘ಅಲ್ಲಾ, ನೀ  ದುಡೀತಿ, ನೀ ಖರ್ಚು ಮಾಡು... ನನ್ನನ್ನೇನು ಕೇಳ್ತಿ ಅಂತ ಮೊದಲು ಅಂದಾಗ ಭಾಳ ಧಾರಾಳಿ ನನ್ನ ಗಂಡ ಅಂತ ಖುಷಿ ಆಗಿತ್ತು ನೋಡು. ಆದ್ರ ತೀರ, ಎಲ್ಲಾದಕ್ಕೂ ಇದೇ ಉತ್ರ ಕೊಟ್ರ ಹೆಂಗ? ಮನೀಗೆ ಒಂದು ಹೊಸಾ ಟೀವಿ ತೊಗೊಳ್ಳೂನು? ಹೊಸಾ ಮನೀನ ತೊಗೊಳ್ಳೂನು? ಮನೀಗೊಂದಿಷ್ಟು ಚಮಚೆ ತೊಗೊಳ್ಳೂನು? ಯಾವುದಕ್ಕರೆ ಹೂಂ, ಇಲ್ಲಾ ಬ್ಯಾಡಾ.. ಏನರೆ ಹೇಳಬೇಕು. ನೀ ದುಡೀತಿ, ನೀನ ಖರ್ಚು ಮಾಡು ಅಂದ್ರೇನು? ಇಬ್ಬರೂ ಕೂಡಿ ಇಲ್ಲೇನು?

ಸಣ್ಣದಿರಲಿ, ದೊಡ್ಡದಿರಲಿ... ಅವರೂ ಪಾಲ್ಗೊಳ್ಳೂದು ಎಷ್ಟು ಖುಷಿ ಕೊಡ್ತದ. ಅದನ್ನೇ ಸಂಸಾರ ಅಂತಾರ ಹೌದಿಲ್ಲೊ? ಕೂಡುವ ಮುಂದಷ್ಟೇ ನಾ ಅದೀನಿ. ಆಮ್ಯಾಲೆ ನಾನು ಕಳಕೊಂಡೇನಿ ಅನ್ನೂದು ಒಂಥರಾ ಪಲಾಯನ ವಾದ ಅಲ್ಲೇನು?

ಈ ಗಂಡಸ್ರಿಗೆ ದುಡಿಯೂ ಹುಕಿ ಇಷ್ಟ್ಯಾಕ ಇರ್ತದ? ಆ ಭರದೊಳಗ ಯಾರಿಗೆ ದುಡಿಯಾಕ್ಹತ್ತೀವಿ ಅನ್ನೂದ ಮರೀತಾರಲ್ಲ, ಆಮ್ಯಾಲೆ ದುಡದಿದ್ದೆಲ್ಲ ಇಟ್ಗೊಂಡರೇ ಏನು ಮಾಡ್ತಾರ? ಮದಿವಿ ಆಗಿ ಹತ್ತು ವರ್ಷ ಆಗಾಕ ಬಂತು. ಈಗೀಗ ಮನೀಗೆ, ಮನೀ ಮಂದೀಗೆ, ಕಡೀಕ ನನಗೂ ಸೈತ ಏನೂ ತೊಗೊಳಲ್ಲಾಗೀನಿ. ಅಂವನಾಗೇ ಕೊಡಸಲಿ ಅಂತ ಕಾಯಾಕ್ಹತ್ತೀನಿ. ಮೊದಲು ಹುಡುಗುತನ ಅನಸ್ತಿತ್ತು. ಆಮ್ಯಾಲೆ ಇದು ಅಲಕ್ಷ್ಯ ಅನ್ನಸ್ತಿತ್ತು. ಆಮ್ಯಾಲ್ಯಾಮ್ಯಾಲೆ ಇಂವಾ ಜಿಬ್ಬ ಖೋಡಿ ಅಂತನೂ ಅನಸ್ತು. ಹೋಗಲಿ ಬಿಡು, ಇಂವಗ ರೋಮ್ಯಾಂಟಿಕ್‌ಅಗೆ ಇರಾಕ ಬರೂದಿಲ್ಲ ಅಂತನೂ ಅನ್ನಸ್ತು. ಕಡೀಕ ಹಿಂಗ್ಯಾಕ ನಿರೀಕ್ಷೆ ಇಟ್ಕೊತೀನಿ ಅಂತ ಸಿಟ್ಟು ಬಂತು. ಅಂವನ ಮ್ಯಾಲೆ ಅಲ್ಲ. ನನ್ನ ಮ್ಯಾಲೆ ಬಂತು. ಏನು ಮಾಡೂದು ಬಿಡು, ಒಂದೇ ಸಮಾಧಾನ ಅಂದ್ರ ಈಗಲೂ ಇಬ್ರೂ ಒಟ್ಗೇ ಅದೀವಿ ನೋಡು...’ ಅಂತ ಜೋರೆಗೆ ನಕ್ಕು ಫೋನ್‌ ಇಟ್ಲು.

ಇದಕ್ಕಿಂತ ಭಿನ್ನ ಕತಿ ಇನ್ನೊಬ್ಬ ಗೆಳತೀದು. ಅರ್ಧ ಲಕ್ಷಕ್ಕಿಂತ ಹೆಚ್ಗಿ ಸಂಬಳಾ ತೊಗೊತಿದ್ರೂ, ಬಸ್‌ ಮಿಸ್‌ ಆದ್ರ ಆಟೋಕ್ಕ ಮನೀಗೆ ಹೋಗಾಕೂ ಗಂಡನ ಅನುಮತಿ ಕೇಳಬೇಕಾಗಿತ್ತು. ಮಕ್ಳಿಗೆ ಹಣ್ಣು ತೊಗೊಂಡ್ರ, ಛೊಲೊ ಬಟ್ಟಿ ತೊಗೊಬೇಕಂದ್ರ, ಛೊಲೊ ಸಾಲೀಗೆ ಕಳಸಬೇಕಂದ್ರೂ ಗಂಡನ ಕಡೆ ನೋಡಬೇಕಾಗ್ತಿತ್ತು. ಮಕ್ಕಳು ಏನರೆ ತಿನ್ನಾಕ ಕೇಳಿದ್ರೂ ಜರೀತಿದ್ದ. ‘ತಿನ್ನಾಕ ಹುಟ್ಟೀರೇನಲೆ’ ಅಂತ...

ನಾವಿದ್ದಂಗ ನಮ್ಮ ಮಕ್ಕಳು ಇರೂದು ಬ್ಯಾಡ, ಇನ್ನಷ್ಟು ಛಂದ ಬೆಳೀಲಿ ಅಂತ ಅಕಿ. ನಾವು ಕಷ್ಟ ಪಟ್ಟು ಬೆಳದೀವಿ ಅಂತನೇ ರೊಕ್ಕದ್‌ ಕಿಮ್ಮತ್‌ ಗೊತ್ತದ. ನಾವೇನು ಸರ್ಕಾರಿ ಸಾಲ್ಯಾಗ ಕಲತು ಮುಂದ ಬಂದಿಲ್ಲೇನು? ಖಟಕ್‌ ರೊಟ್ಟಿ ಖಾರಬ್ಯಾಳಿ ಉಂಡು ಗಟ್ಟಿ ಆಗಿಲ್ಲೇನು? ಗೋಡಂಬಿ, ಬದಾಮಿ ತಿಂದ್ರೇನೆ ಶಾಣೆ ಆಗ್ತಾರ, ಗಟ್ಟಿ ಆಗ್ತಾರ ಅಂತೀಯೇನು’ ಅಂತ ಗಂಡ ಬೈಯ್ಯಾಕ ನಿಂದರ್ತಾನಂತ.  ಮನೀ ಶಾಂತಿ ಕದಡೂದು ಬ್ಯಾಡಂತ ಇಕಿನೂ ವಾದ ಮಾಡಾಕ ಹೋಗೂದಿಲ್ಲ. ಈ ಎರಡೂ ಅತಿರೇಕಗಳ ನಡೂನೂ ಒಂದು ಸಾಮ್ಯ ಅದ. ಅದು ಪಾಲ್ಗೊಳ್ಳುವಿಕೆ ಇಲ್ಲದೇ ಇರೂದು. ಗಳಸೂದು ಯಾರಿಗೆ, ಯಾಕ? ಅದರಿಂದ ಖುಷಿ ಖರೀದಿಸಬಹುದೇನು ಅನ್ನುವ ವಿವೇಚನೆ ಇಲ್ಲದೇ ಇರುವ ಗಳಿಕೆಯ ಹುಮ್ಮಸ್ಸು.

ಇದು ಇಬ್ಬರು ಓದಿ, ಬರದು ಕಲತೋರ ಕತಿ ಆಯ್ತು. ನಮ್ಮನ್ಯಾಗ ಕೆಲಸಾ ಮಾಡಕ್ಕಿ ಗಂಡ, ಮನೀಗೆ ಬಂದು ಕಿರಿಕಿರಿ ಮಾಡ್ತಿದ್ದ. ‘ದುಡದಿದ್ದ ಎಲ್ಲಾ ತಿನ್ನಾಕ ಹಾಕ್ತಾಳ. ಏನೇನೂ ಉಳಸೂದಿಲ್ಲ. ಉಂಡು ತಿಂದು ಅರಾಮಿದ್ರ, ಮಗಳಿಗೆ ಏನು ಮಾಡೂನು? ನಾಳೆ ಏನು ಕೊಡೂನು? ಏನು ಇರಲಿಲ್ಲಂದ್ರ ಯಾರು ಕಟ್ಕೋತಾರ?’

‘ಒಬ್ಬಕಿ ಮಗಳದಾಳ. ಛೊಲೊ ಸಾಲೀಗೆ ಹಾಕೂನು. ಛೊಲೊ ಉಣ್ಣಾಕ ಕೊಡೂನು. ಅಕೀಗೆ ಗಟ್ಟಿ ಮಾಡೂನು. ನಮ್ಮ ಆಸ್ತಿ ನೋಡಿ, ಕಟಗೊಳ್ಳಂವಾ ಅಕೀಗೇನು ಖುಷಿ ಕೊಡ್ತಾನ? ಛಂದಗೆ ನೋಡ್ಕೊಂತಾನ? ಅಕಿ ಮದ್ಲ ಛಂದಗೆ ಇರಬೇಕು. ಮುಂದಿಂದು ಯಾರ ಕಂಡಾರ? ಉಪಾಸ, ವನವಾಸ ಹೆಣ್ಣಿನ ಜನ್ಮಕ್ಕ ತಪ್ಪಿದ್ದಲ್ಲ. ನಮ್ಮನ್ಯಾಗ ಇರೂತನಾ ಉಂಡು, ಉಟ್ಟು ಅರಾಮ ಇರಲಿ. ಆಸ್ತಿ ಮಾಡಿ ಏನು ತೊಗೊಂಡು ಹೋಗೂದದ? ಸತ್ರ ಬಟ್ಟಿ ಚೂರ ಸೈತ ಬರೂದಿಲ್ಲ ನಮ್ಮ ಕೂಡ... ಇರೂತನಾ ಛಂದಗೆ ಉಂಡು ತಿಂದು ಗಟ್ಟಿ ಇರಬೇಕು. ಉಣ್ಣಾಕ ತಿನ್ನಾಕ ಕೊರತಿ ಮಾಡಕೊಂಡು, ದಿನಾ ಸಾಯೂದ್ರ ಬದಲು, ಉಂಡು ತಿಂದು, ಗಟ್ಟಿ ಇರೂನು’.

ಇವರಿಬ್ಬರ ಜಗಳ ಗಲ್ಲಕ್ಕ ಕೈ ಇಟ್ಟು ಕೇಳ್ತಿದ್ದೆ. ಅಂವಾನೂ ಖರೆ, ಅಕೀನೂ ಖರೆ. ರೊಕ್ಕ ಒಂದೇ ಖೊಟ್ಟಿ. ಅದೊಂದೇ ಸುಳ್ಳು. ‘ಇಂವಾ ಎಲ್ಲಾ ರೊಕ್ಕಾನೂ ಬಡ್ಡೀಗೆ ಕೊಡ್ತೀನಿ ಅಂತಾನ. ಬಡ್ಡೀ ಏನರೆ ತಿನ್ನಾಕ ಬರ್ತದ? ಅಸಲು ಆರೋಗ್ಯ ಛೊಲೊ ಇರಬೇಕು. ಅಡಗಿ ಮಾಡಿ ಹಾಕೂಮುಂದ ಎಲ್ಲಾ ಛೊಲೊ ಐತಿ ಅಂತ ಉಂಡೇಳುವ ಬದಲು ಎಲ್ಲಾದಕ್ಕೂ ಹೆಸರಿಡ್ತಾನ. ತಾಟನಾಗ ಪಲ್ಯ, ಚಟ್ನಿ ರುಚಿ ನೋಡಿ ಹೇಳಪ್ಪಾ ಅಂದ್ರ, ಉಳ್ಳಾಗಡ್ಡಿ ನಲ್ವತ್ತು ರುಪಾಯಿ ಕೆ.ಜಿ. ಬಳ್ಳೊಳ್ಳಿ ನೂರು ರುಪಾಯಿ ಕೆಜಿ ಅಂತಾನ. ರುಚಿ ಬದಲಿಗೆ, ರೊಕ್ಕಾನೇ ಕಾಣ್ತದಲ್ಲಕ್ಕ, ಇಂವಗ..’

ಅಕೀ ಹಂಗೇ ಹೇಳುಮುಂದ ಅಂವಾ ಮಾತ್ರ, ‘ಇಕೀ ಹಣೆಬರಹನೇ ಇಷ್ಟು. ಮಾತೇ ಮುಗ್ಯಾಂಗಿಲ್ಲ’ ಅಂತಂದ. ಮೊದಲಿನ ಇಬ್ಬರು ಗೆಳತ್ಯಾರ ಮನಿಯೋರು, ನಮ್ಮು ಸುದೀರ್ಘ ದೂರುಗಳನ್ನು ಕೇಳಿನೂ... ‘ನಿಮ್ದಿದು ಮುಗೀಲಾರ್ದ ಕತಿ’ ಅಂದಿದ್ದರು. ಈ ಮೂವರು ಗಂಡಸರ ಪ್ರತಿಕ್ರಿಯೆ ಮಾತ್ರ ‘ಸೇಮ್‌  ಟು ಸೇಮ್‌, ಡಿಟ್ಟೊ ಡಿಟ್ಟೊ’ ಇದ್ದಿದ್ದು ಅಗ್ದಿ ಖರೆ.

ಯಾಕಂದ್ರ ಇವರು ಯಾರೂ ಹೆಂಡತಿಯ ಮಾತನ್ನು ಮನಸಿಗೆ ತೊಗೊಳ್ಳದೇ ಇದ್ದೋರು. 
ಎಲ್ಲಾ ಕಡೆನೂ ಅಸಮಾಧಾನ ತರೂದು ರೊಕ್ಕದ ವಿಷಯ. ಎಲ್ಲಾ ಕಡೆನೂ  ಸಿಟ್ಟಿಗೆ ಬರೂದು ಇದೇ ಪಾಲ್ಗೊಳ್ಳುವಿಕೆಯ ಕೊರತೆ. ಇಷ್ಟೆಲ್ಲ ದೂರು ಇದ್ರೂ ಅವರನ್ನು ಬಿಟ್ಟು ವಿಚಾರ ಮಾಡುವ ಸಂಗ್ತಿ ಮಾತ್ರ ತ್ರಾಸ ಕೊಡುವಂಥದ್ದು. ಯಾಕಂದ್ರ ಅದು ರೊಕ್ಕಾ ಮೀರಿದ ಬಂಧನ. ಮತ್ತದೇ ನಿರಾಸೆಗಳನ್ನು ಬೆನ್ನಿಗೆ ಹೊತ್ತು ನಿರೀಕ್ಷೆಗಳೊಡನೆ ದಿನದ ಬೆಳಕು ಕಾಣ್ತಾವ. ಯಾಕಂದ್ರ ಅದೇ ಬಾಂಧವ್ಯ. ಗಾಲಿಬ್‌ನ್ಹಂಗ ನಮ್ಮ ಕನ್ನಡಿ ಸ್ವಚ್ಛ ಮಾಡೂದೇನು ಬಿಡಾಂಗಿಲ್ಲ. ದೂಳು ನಮ್ಮೊಳಗೇ ಇದ್ರೂನು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT