ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಡಿಗೆ ತಾಯ್ತನವೂ ಸಂಬಂಧಗಳ ಸಿಕ್ಕುಗಳೂ

ಪೋಷಕತ್ವ ಸೇರಿದಂತೆ ಸಾಮಾಜಿಕ ಸಂಸ್ಥೆಗಳು, ನೈತಿಕತೆ, ಧಾರ್ಮಿಕ ಸೂತ್ರಗಳಲ್ಲೂ ಪರಿವರ್ತನೆಯ ಗಾಳಿ
Last Updated 3 ನವೆಂಬರ್ 2015, 19:51 IST
ಅಕ್ಷರ ಗಾತ್ರ

ಬಾಡಿಗೆ ತಾಯ್ತನ ಪರಿಕಲ್ಪನೆ ಸಮಾಜದಲ್ಲಿ ಜನಪ್ರಿಯವಾಗುತ್ತಿದೆ. ಈ  ಕಾರಣದಿಂದಾಗಿ ಕುಟುಂಬದ ಸ್ವರೂಪ, ಸಂಯೋಜನೆ ಹಾಗೂ ಕೌಟುಂಬಿಕ ಸಂಬಂಧಗಳಲ್ಲಿ ಬದಲಾವಣೆ ಮತ್ತು ರೂಪಾಂತರಗಳಾಗುತ್ತಿವೆ. ಪೋಷಕತ್ವ ಸೇರಿದಂತೆ ಸಾಮಾಜಿಕ ಸಂಸ್ಥೆಗಳು, ನೈತಿಕತೆ, ಧಾರ್ಮಿಕ ಸೂತ್ರಗಳಲ್ಲೂ ಪರಿವರ್ತನೆಯ ಗಾಳಿ ಬೀಸುತ್ತಿದೆ.

ಬಾಡಿಗೆ ತಾಯ್ತನದಲ್ಲಿ ಕೃತಕ ಸಂತಾನಾಭಿವೃದ್ಧಿ ತಂತ್ರಜ್ಞಾನ ಬಳಕೆಯಾಗುತ್ತದೆ. ಪ್ರಯೋಗಾಲಯದಲ್ಲಿ ಫಲಿಸಿದ ಭ್ರೂಣಗಳನ್ನು ಸ್ತ್ರೀ ಗರ್ಭಕೋಶಕ್ಕೆ ಸೇರಿಸುವುದು ಈ ತಂತ್ರಜ್ಞಾನದ ಮೂಲ ಪರಿಕಲ್ಪನೆ. ಸಂತಾನಾಭಿವೃದ್ಧಿ ಸಾಮರ್ಥ್ಯವಿಲ್ಲದ ದಂಪತಿಗೆ ಕುಟುಂಬ ರೂಪಿಸಲು, ಪೋಷಕತ್ವ ಪಡೆಯಲು ಈ ವಿಧಾನ ಬಳಕೆಯಾಗುತ್ತಿದೆ. ಈ ತಂತ್ರಜ್ಞಾನವನ್ನು ಜಗತ್ತಿನೆಲ್ಲೆಡೆ, ಪ್ರವರ್ಧಮಾನಕ್ಕೆ ಬರುತ್ತಿರುವ ಕುಟುಂಬ ರೂಪಿಸುವ ಬದಲಿ ವಿಧಾನ ಎಂದು ಗುರುತಿಸಲಾಗಿದೆ.

ಬೇರೆ ಯಾವುದೇ ವಿಧಾನದಿಂದ ಸಂತಾನಾಭಿವೃದ್ಧಿ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಗೆ ತಲುಪಿರುವ; ಒಂಟಿ ಬದುಕು ಅಪ್ಪಿಕೊಂಡ ಅವಿವಾಹಿತರು, ಇಷ್ಟಪಟ್ಟು ಜೊತೆಯಲ್ಲಿರುವ ಸಲಿಂಗಿಗಳು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರುವವರು, ಖಾಸಗಿ ಒಕ್ಕೂಟದ ವ್ಯವಸ್ಥೆಗೆ ಒಳಪಟ್ಟವರಿಗೆ (ಸಿವಿಲ್ ಯೂನಿಯನ್ ರಿಲೇಷನ್ಸ್‌) ತಮ್ಮದೇ ಜೈವಿಕ ಸಂಬಂಧದ ಮಗು ಪಡೆಯಲು ಬಾಡಿಗೆ ತಾಯ್ತನವು ಮೊದಲ ಬಾರಿಗೆ ಅವಕಾಶ ಮಾಡಿಕೊಟ್ಟಿತು.

ಇದರಿಂದಾಗಿ ಇಬ್ಬರು ತಂದೆಯರೇ ಅಥವಾ ಇಬ್ಬರು ತಾಯಿಯರೇ ಇರುವ, ಕೇವಲ ತಾಯಿ ಅಥವಾ ಕೇವಲ ತಂದೆಯಷ್ಟೇ ಇರುವ ಹೊಸ ರೀತಿಯ ಕುಟುಂಬಗಳು ರೂಪುಗೊಂಡವು. ಸಾಂಪ್ರದಾಯಿಕವಾಗಿ ತಾಯಿ– ತಂದೆ– ಮಗು ಅಥವಾ ಮಕ್ಕಳು ಇರುತ್ತಿದ್ದ ಹೆರ ಲಿಂಗಿಗಳ ಕುಟುಂಬದ ಪರಿಕಲ್ಪನೆಗೆ ವಿರುದ್ಧವಾದ ಕುಟುಂಬ ಇದಾಗಿತ್ತು.

ಬಾಡಿಗೆ ತಾಯ್ತನವು ಇಂಥ ಗುಂಪುಗಳ ಪಾಲಿಗೆ ಸಂತಾನಾಭಿವೃದ್ಧಿ ಮತ್ತು ಕುಟುಂಬ ರಚಿಸಿಕೊಳ್ಳುವ ಹಕ್ಕು ಚಲಾಯಿಸಲು ಇರುವ ಏಕೈಕ ಆಶಾಕಿರಣ. ಕೇಂದ್ರ ಸರ್ಕಾರವು 2012ರ ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆಯುವ ಅವಕಾಶವನ್ನು ಭಿನ್ನ ಲಿಂಗಿ ದಂಪತಿಗೆ ಮಾತ್ರ ನೀಡಿದೆ. ಸಲಿಂಗ ಸಂಬಂಧಕ್ಕೆ ಇದ್ದ ‘ಅಪರಾಧ’ ಎಂಬ ಹಣೆಪಟ್ಟಿಯನ್ನು ಸರ್ಕಾರ ತೆಗೆದು ಹಾಕಿದೆ.

ಆದರೆಇಂಥ ಸಂಬಂಧಗಳಿಗೆ ಈವರೆಗೆ ಕಾನೂನಿನ ಮಾನ್ಯತೆ ಸಿಕ್ಕಿಲ್ಲ. ಬಾಡಿಗೆ ತಾಯ್ತನವು ತನ್ನ ಮೂಲ ಸ್ವರೂಪದಲ್ಲಿಯೇ, ಕುಟುಂಬದ ಆಚೆಗಿನ ಮೂರನೇ ವ್ಯಕ್ತಿಯನ್ನು ಒಳಗೊಂಡಿದೆ. ಅಂಡಾಣು ದಾನಿಗಳು, ಬಾಡಿಗೆ ತಾಯಂದಿರು ಅಥವಾ ಗರ್ಭ ಹೊರುವ ಮಹಿಳೆಯರು ಈ ಪರಿಕಲ್ಪನೆಯಲ್ಲಿ ಇದ್ದಾರೆ. ಈ ವಿಧಾನದಲ್ಲಿ ಜನಿಸಿದ ಮಗುವಿನ ತಾಯ್ತನ ಮೂವರು ಮಹಿಳೆಯರ ನಡುವೆ ಹಂಚಿ ಹೋಗುತ್ತದೆ.

ಅಂಡಾಣು ದಾನ ಮಾಡುವ ಜೈವಿಕ ತಾಯಿ, ಗರ್ಭ ಹೊರುವ ಬಾಡಿಗೆ ತಾಯಿ, ಮಗುವನ್ನು ಬೆಳೆಸುವ ಮೂರೂ ಮಹಿಳೆಯರು ಮಗುವನ್ನು ವಶಕ್ಕೆ ಪಡೆಯುವ, ಬೆಳೆಸುವ ಹಕ್ಕು ಚಲಾಯಿಸಬಹುದಾಗಿದೆ. ಇದು ಜೈವಿಕ ಪೋಷಕತ್ವದ ಪರಿಕಲ್ಪನೆಯನ್ನು ಮತ್ತು ತಾಯಿ– ತಂದೆ– ಮಕ್ಕಳ ಸಂಬಂಧವನ್ನು ಹಾಳು ಮಾಡುತ್ತದೆ. ಬಾಡಿಗೆ ತಾಯಿ ಜನ್ಮಕೊಟ್ಟ ಮಗುವನ್ನು ಸಂಪೂರ್ಣವಾಗಿ ವಿವಾಹೇತರ ಸಂಬಂಧದಿಂದ ಜನಿಸಿದ ಮಗು ಎಂದು ಹೇಳಲೂ ಆಗುವುದಿಲ್ಲ.

ಅನಾಮಿಕ ದಾನಿ ನೀಡಿದ ಅಂಡಾಣುವಿನಿಂದ ಜನಿಸಿದ ಮಗುವು ಪೋಷಕರಲ್ಲಿ ಇಬ್ಬರ ಪೈಕಿ ಒಬ್ಬರೊಂದಿಗೆ ಮಾತ್ರ ಜೈವಿಕ ಸಂಬಂಧ ಹೊಂದಿರುತ್ತದೆ. ಈ ಸ್ಥಿತಿಯು ಮಗುವಿಗೆ ಅದರ ಅಸ್ತಿತ್ವದ ಬಗ್ಗೆಯೇ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ. ಇದು ಮಾನಸಿಕ ಗೊಂದಲಗಳಿಗೂ ಕಾರಣವಾಗಬಹುದು. ಬಾಡಿಗೆ ತಾಯ್ತನದಲ್ಲಿ ಪೋಷಕತ್ವ ಎನ್ನುವುದು ವ್ಯಾವಹಾರಿಕ– ಕಾನೂನುಬದ್ಧ ಒಪ್ಪಂದ ಮತ್ತು ಮೂರನೇ ವ್ಯಕ್ತಿಯನ್ನು ಒಳಗೊಂಡ ವೈದ್ಯಕೀಯ ಪ್ರಕ್ರಿಯೆಯಷ್ಟೇ ಆಗುತ್ತದೆ.

ಮದುವೆಯ ಪವಿತ್ರ ಬಂಧನದಿಂದ ರೂಪುಗೊಂಡ ಕುಟುಂಬಕ್ಕೆ ಮಗು ಹೆರುವ ಪ್ರಕ್ರಿಯೆ ಸೀಮಿತವಾಗಿ ಉಳಿಯುವುದಿಲ್ಲ. ಈ ಎಲ್ಲ ಬೆಳವಣಿಗೆಗಳೂ ಸಾಮಾಜಿಕ ಸಂಸ್ಥೆಗಳಲ್ಲಿ ಪ್ರಾಥಮಿಕ ಮೂಲ ಸಂಸ್ಥೆ ಎನಿಸಿಕೊಂಡಿರುವ ಕುಟುಂಬದ ಸ್ಥಿರತೆ ಮತ್ತು ಬಂಧಕ್ಕೆ ಧಕ್ಕೆಯುಂಟು ಮಾಡುತ್ತದೆ. ಇದು ಅಸ್ತಿತ್ವದಲ್ಲಿರುವ ಸಾಮಾಜಿಕ– ನ್ಯಾಯಿಕ ಪರಿಭಾಷೆಗಳನ್ನು ಬದಲಿಸುತ್ತದೆ. ಮಗುವಿಗೆ ಜನ್ಮ ನೀಡುವ ಮಹಿಳೆಯನ್ನು ಈವರೆಗೆ, ಅದರ ತಾಯಿಯನ್ನಾಗಿ ಎಲ್ಲ ಆಯಾಮದಿಂದಲೂ ಒಪ್ಪಿಕೊಳ್ಳಲಾಗುತ್ತಿತ್ತು.

ಜೈವಿಕ ಅಥವಾ ದೈಹಿಕ ತಾಯಿಯನ್ನು ಪ್ರತ್ಯೇಕವಾಗಿ ನೋಡುವ ಕಲ್ಪನೆ ಇರಲಿಲ್ಲ. ‘ತಾಯಿ ಎನ್ನುವುದು ಸತ್ಯ– ತಂದೆ ಎನ್ನುವುದು ನಂಬಿಕೆ’ ಎಂಬ ಪುರಾತನ ಹೇಳಿಕೆಯನ್ನು ಭಾರತೀಯ ಸಾಕ್ಷ್ಯ ಕಾಯ್ದೆಯ 112ನೇ ಸೆಕ್ಷನ್‌ ಕೂಡಾ  ಪುಷ್ಟೀಕರಿಸುತ್ತದೆ. ಆದರೆ ಮೊದಲ ಬಾರಿಗೆ ಬಾಡಿಗೆ ತಾಯ್ತನವು ತಾಯ್ತನವನ್ನೂ ಪ್ರಶ್ನಾರ್ಹಗೊಳಿಸಿದೆ. ಬಾಡಿಗೆ ತಾಯ್ತನವು ನೈತಿಕವಾಗಿಯೂ ಗಟ್ಟಿ ನೆಲೆ ಹೊಂದಿಲ್ಲ. ಇದರಲ್ಲಿ ಮಹಿಳೆಯ ಸಂತಾನಾಭಿವೃದ್ಧಿ ಸಾಮರ್ಥ್ಯವು ವಾಣಿಜ್ಯದ ಉದ್ದೇಶಕ್ಕೆ ಬಳಕೆಯಾಗುತ್ತದೆ. ಗುತ್ತಿಗೆ ಕರಾರುಗಳು ಮತ್ತು ನಿಯಮಗಳನ್ನು ಹೇರುವ ಮೂಲಕ ಮಾನವ ಹಕ್ಕು ಮತ್ತು ಗೌರವಕ್ಕೆ ಧಕ್ಕೆ ಉಂಟಾಗುತ್ತಿದೆ.

ಈ ಪ್ರಕ್ರಿಯೆಯಲ್ಲಿ ಬಾಡಿಗೆ ತಾಯಿ ಮತ್ತು ಬಾಡಿಗೆ ಮಗು ಸರಕುಗಳಂತೆ ಪರಿಭಾವಿಸಲ್ಪಡುತ್ತಾರೆ. ಅವರನ್ನು ವಿನಿಮಯಕ್ಕೆ ಅರ್ಹವಾದ ವಾಣಿಜ್ಯ ಸರಕುಗಳಂತೆ ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಬಾಡಿಗೆ ತಾಯ್ತನವನ್ನು ಕೆಲವು ಬಾರಿ ವೇಶ್ಯಾವಾಟಿಕೆಯೊಂದಿಗೆ ಹೋಲಿಸಲಾಗುತ್ತದೆ. ಸಾಮಾಜಿಕ ಕಳಂಕವೂ ಅದರ ಮೇಲಿದೆ. ಇದೇ ಕಾರಣಗಳಿಂದಾಗಿ ಬಾಡಿಗೆ ತಾಯ್ತನಕ್ಕೆ ಧಾರ್ಮಿಕ ಸಮ್ಮತಿ ಸಿಕ್ಕಿಲ್ಲ. ಹಲವು ಧಾರ್ಮಿಕ ಮುಖಂಡರು ಇದನ್ನು ದೇವರ ಇಚ್ಛೆಗೆ ವಿರುದ್ಧವಾದುದು ಎಂದು ‘ಫತ್ವಾ’ ಹೊರಡಿಸುವ ಮೂಲಕ ನಿಷೇಧಿಸಿದ್ದಾರೆ, ವಿವಾಹ ಬಾಹಿರ ಸಂಬಂಧಗಳಿಗೆ ಹೋಲಿಸಿದ್ದಾರೆ.

ಕೆಲ ಜನಪ್ರಿಯ ವ್ಯಕ್ತಿಗಳು ದೈಹಿಕವಾಗಿ ಸಮರ್ಥರಿದ್ದರೂ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಲು ಯತ್ನಿಸುವುದು ಸಮಾಜದ ಗಮನ ಸೆಳೆಯುತ್ತಿದೆ. ಇಂಥ ಬೆಳವಣಿಗೆಗಳ ಹಿನ್ನೆಲೆ ಪರಿಶೀಲಿಸಿದಾಗ, ಬಹುತೇಕ ಸಂದರ್ಭಗಳಲ್ಲಿ ದೈಹಿಕ ಸಾಮರ್ಥ್ಯಕ್ಕಿಂತಲೂ– ಉದ್ಯೋಗದಲ್ಲಿ ಮುನ್ನಡೆ ಸಾಧಿಸುವುದು ಅಥವಾ ಇತರ ಕಾರಣಗಳೇ ಪ್ರಧಾನವಾಗಿ ಗೋಚರಿಸುತ್ತವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು 2005ರಲ್ಲಿ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳು ಮತ್ತು 2010ರಲ್ಲಿ ಜಾರಿಯಾದ ಕೃತಕ ಗರ್ಭಧಾರಣೆ ಕಾಯ್ದೆಗಳು ದಂಪತಿಯಲ್ಲಿ ಸಂತಾನೋತ್ಪತ್ತಿ ಸಮಸ್ಯೆ ಇರುವುದು ನಿರ್ದೇಶಿತ ವೈದ್ಯಕೀಯ ಪರೀಕ್ಷೆಗಳ ನಂತರ ಸಾಬೀತಾದರೆ ಮಾತ್ರ ಬಾಡಿಗೆ ತಾಯಿ ಮೂಲಕ ಮಗು ಪಡೆಯಲು ಅವಕಾಶ ನೀಡುತ್ತದೆ.

ಆದರೆ,  ಹಿಂದಿ ಮತ್ತು ದಕ್ಷಿಣ ಭಾರತದ ಅನೇಕ ಸೆಲೆಬ್ರಿಟಿಗಳು ಎರಡನೇ ಮದುವೆಯಾದಾಗ ತಮ್ಮದೇ  ಎರಡನೇ ಅಥವಾ ಮೂರನೇ ಮಗುವನ್ನು ಬಾಡಿಗೆ ತಾಯಂದಿರ ಮೂಲಕ ಪಡೆಯುತ್ತಿದ್ದಾರೆ. ಈ ವಿದ್ಯಮಾನ ಸಮಾಜದ ಮೇಲೆ ವಿಶೇಷ ಪರಿಣಾಮ ಬೀರುತ್ತಿದೆ. ಬಾಡಿಗೆ ತಾಯಿಯ ಮೂಲಕ ಮಗು ಪಡೆಯುವುದು ವೈಯಕ್ತಿಕ ಆಯ್ಕೆ ಎಂಬ ಅನಿಸಿಕೆ ಸಮಾಜದಲ್ಲಿ ಮೂಡುತ್ತಿದೆ. ತಾಯ್ತನ ಅಥವಾ ಗರ್ಭಧಾರಣೆಯನ್ನು ಬಡ ಮಹಿಳೆಯರ ಪಾಲಿಗೆ ವ್ಯಾಪಾರದ ಮೂಲವಾಗಿಸಿರುವುದು ಬಾಡಿಗೆ ತಾಯ್ತನದೊಂದಿಗೆ ತಳಕು ಹಾಕಿಕೊಂಡಿರುವ ಮತ್ತೊಂದು ಮುಖ್ಯ ವಿಷಯ. ಬಾಡಿಗೆ ತಾಯ್ತನವನ್ನು ಜನರು ‘ಗರ್ಭಕೋಶ ಬಾಡಿಗೆಗೆ ಕೊಡುವ ವ್ಯವಹಾರ’ ಎಂದೇ ಕರೆಯುತ್ತಾರೆ.

ಪ್ರಚಲಿತ ಸಾಮಾಜಿಕ ವ್ಯವಸ್ಥೆ, ಕಾನೂನುಗಳು ಮತ್ತು ನೈತಿಕತೆಯನ್ನು ಈ ಪದ್ಧತಿ ಅಲುಗಾಡಿಸುತ್ತಿದೆ. ಸಮಾಜದಲ್ಲಿರುವ ಶ್ರೀಮಂತ– ಬಡವ ತಾರತಮ್ಯವನ್ನು ಅಥವಾ ಆರ್ಥಿಕ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಸೇವೆ ಪಡೆದುಕೊಳ್ಳುವಷ್ಟು ಬಲಾಢ್ಯವಾಗಿರುವ ಶ್ರೀಮಂತ ಮಹಿಳೆಯರ ಮಗು ಹೊರುವ ಕೆಲಸಕ್ಕಷ್ಟೇ ಬಡ ಮಹಿಳೆ ಸೀಮಿತವಾಗಬೇಕಾಗುತ್ತದೆ. ಇಲ್ಲಿ ಪಾತ್ರಗಳ ಅದಲು– ಬದಲು ಸಾಧ್ಯವೇ ಆಗುವುದಿಲ್ಲ.

ಬಾಡಿಗೆ ತಾಯ್ತನವು ನಗರಗಳಲ್ಲಿ ಬಂಜೆತನ ನಿವಾರಣೆ ಆಸ್ಪತ್ರೆಗಳ ಸಂಖ್ಯಾಸ್ಫೋಟಕ್ಕೂ ಕಾರಣವಾಗಿದೆ. ಇವು ಸಂತಾನೋತ್ಪತ್ತಿ ಪ್ರವಾಸೋದ್ಯಮ, ಗರ್ಭಧಾರಣೆಯ ಹೊರಗುತ್ತಿಗೆ, ಸಂತಾನೋತ್ಪತ್ತಿಗೆ ಕಾರ್ಮಿಕರನ್ನು ಹುಡುಕಿಕೊಡುವ ತಾಣಗಳಾಗುತ್ತಿವೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಂಡಾಣು ದಾನಿ ಅಥವಾ ಬಾಡಿಗೆ ತಾಯಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಆದರೆ ಹಣದ ಆಸೆಗೆ ನಗರ ಪ್ರದೇಶಗಳಲ್ಲಿರುವ 20ರ ಸಮೀಪದ ಚಿಕ್ಕ ಪ್ರಾಯದ ಮಹಿಳೆಯರು ಅಂಡಾಣು ದಾನ ಮಾಡಲು, ಬಾಡಿಗೆ ತಾಯಿಯಾಗಲು ಮುಂದೆ ಬರುತ್ತಿದ್ದಾರೆ.

ಹೆಚ್ಚುತ್ತಿರುವ ಬಾಡಿಗೆ ತಾಯ್ತನ ಪ್ರವೃತ್ತಿಯು ಅನಾಥ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಗೂ ಹೊಡೆತ ಕೊಡುತ್ತದೆ. ದತ್ತು ಪ್ರಕ್ರಿಯೆಯಲ್ಲಿ ಈಗಾಗಲೇ ಜನಿಸಿರುವ ಮಕ್ಕಳಿಗೆ ಪೋಷಕರು, ಕುಟುಂಬದ ಬೆಂಬಲ ದೊರಕುತ್ತದೆ. ಇದಕ್ಕೆ ಸಮಾಜ ಕಲ್ಯಾಣದ ಆಯಾಮವೂ ಇದೆ. ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ ಈವರೆಗೆ ಜಾರಿಯಾಗಿಲ್ಲ. ಹೀಗಾಗಿ ಬಾಡಿಗೆ ತಾಯ್ತನದ ತಂತ್ರಜ್ಞಾನವನ್ನು ಮಗುವಿನ ಲಿಂಗ ನಿರ್ಧಾರಕ್ಕೆ ಬಳಸುವ ಅಪಾಯ ಇದೆ.

ಇದರ ಜೊತೆಗೆ ಬಾಡಿಗೆ ತಾಯಂದಿರಾಗಲು– ಅಂಡಾಣು ದಾನಿಗಳಾಗಲು ಮಹಿಳೆಯರ ಮೇಲೆ ಒತ್ತಡ ಹೇರುವುದು, ನಗರ ಪ್ರದೇಶದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಗ್ರಾಮೀಣ ಪ್ರದೇಶದಿಂದ ಮಹಿಳೆಯರನ್ನು ಕರೆತರುವ ಮಧ್ಯವರ್ತಿಗಳು ಅವರನ್ನು ಸಂತಾನೋತ್ಪತ್ತಿ ಕಾರ್ಯಕ್ಕೆ ದೂಡುವುದು, ಮಹಿಳೆಯರ ಕಳ್ಳಸಾಗಣೆ ಹೆಚ್ಚಳವಾಗುವ ಅಪಾಯವೂ ಇದೆ. ವಿಶ್ವದಲ್ಲಿ ಅತಿ ಹೆಚ್ಚು ನವಜಾತ ಶಿಶು ಮರಣ ಪ್ರಮಾಣ ಇರುವ, ಮಹಿಳೆಯ ಅರ್ಥಿಕ– ಸಾಮಾಜಿಕ ಸ್ಥಾನಮಾನ ತಳಮಟ್ಟದಲ್ಲಿ ಇರುವ ನಮ್ಮ ದೇಶದಲ್ಲಿ ಈ ಬೆಳವಣಿಗೆಯು ಅನೇಕ ಉತ್ತರವಿಲ್ಲದ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.

ಸುಪ್ರೀಂ ಕೋರ್ಟ್‌ ಬಾಡಿಗೆ ತಾಯ್ತನವನ್ನು ಕಾನೂನುಬದ್ಧ ಎಂದು ಘೋಷಿಸಿದೆ. ಇದು ಸಾಮಾಜಿಕ– ಕಾನೂನು ವಿಚಾರಗಳನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ. ಬಾಡಿಗೆ ತಾಯ್ತನ ನಿಯಂತ್ರಣಕ್ಕೆ ತಕ್ಷಣ ಕಾನೂನು ಜಾರಿಯಾಗಬೇಕು. ಮಾತ್ರವಲ್ಲ, ಕಾನೂನಿನ ನಿಯಂತ್ರಣದಲ್ಲಿ, ಸಾಮಾಜಿಕವಾಗಿ ಮತ್ತು ನೈತಿಕವಾಗಿ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವುದು ತಪ್ಪು ಅಲ್ಲ ಎನ್ನುವಂಥ ವಾತಾವರಣ ನಿರ್ಮಾಣವಾಗಬೇಕಿದೆ.

ಲೇಖಕಿ ಸಂಶೋಧನಾ ವಿದ್ಯಾರ್ಥಿ, ನ್ಯಾಷನಲ್ ಲಾ ಸ್ಕೂಲ್‌ ಆಫ್‌ ಇಂಡಿಯಾ ಯೂನಿವರ್ಸಿಟಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT