ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಷಣೆ ಮುಂದುವರಿಕೆಗೆ ಪ್ರತಿಭೆಯ ನೆಪ

ಶೋಷಣೆ ಮುಂದುವರಿಕೆಗೆ ಪ್ರತಿಭೆಯ ನೆಪ
Last Updated 12 ಸೆಪ್ಟೆಂಬರ್ 2015, 5:55 IST
ಅಕ್ಷರ ಗಾತ್ರ

ಅದೇ ದೃಶ್ಯ ಭಾರತದಲ್ಲಿ ಮತ್ತೆ ಪುನರಾವರ್ತನೆಯಾಗುತ್ತಿದೆ: ಬಹು ದೀರ್ಘ ಕಾಲದಿಂದ ಮೇಲ್ವರ್ಗ ಅನುಭವಿಸುತ್ತಿದ್ದ ಸಲವತ್ತುಗಳನ್ನು ಸೃಷ್ಟಿಸಿದ್ದ ಅನ್ಯಾಯದ ವ್ಯವಸ್ಥೆ, ಮೀಸಲಾತಿಯ ಚಿಂತನೆ ಮತ್ತು ಅದರ ಸೀಮಿತವಾದ ಅನುಷ್ಠಾನದಿಂದಾಗಿ ಬೆದರಿಕೆ ಅನುಭವಿಸುವಂತಾಗಿದೆ. ಈವರೆಗೆ ಶೋಷಣೆಗೆ ಒಳಗಾಗಿದ್ದ ಜನರು ತಮ್ಮ ಹಕ್ಕುಗಳನ್ನು ದೃಢವಾಗಿ ಕೇಳತೊಡಗಿದ್ದರಿಂದ ಸಮಾಜದಲ್ಲಿ ಪ್ರತಿಯೊಂದು ಸೌಲಭ್ಯವನ್ನೂ ಅನುಭವಿಸುತ್ತಿದ್ದ ಜನರು ಅಸುರಕ್ಷಿತ ಭಾವ ಅನುಭವಿಸತೊಡಗಿದ್ದಾರೆ.

ಭಾರತದಲ್ಲಿ  ಬಹುಸಂಖ್ಯೆಯ ಜನರನ್ನು ದಮನಿಸಿದಂತಹ ಘೋರ ಜಾತಿ ವ್ಯವಸ್ಥೆಯ ಸುದೀರ್ಘ ಇತಿಹಾಸವಿದೆ. ಈ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೋಷಣೆಗೆ ಒಳಗಾದವರಲ್ಲಿ ಕೆಲವು ಜನರಿಗೆ ತಮಗಿಂತ ಹೆಚ್ಚಿನ ಸವಲತ್ತುಗಳು ಸಿಗುತ್ತಿವೆ ಎಂಬ ನೋವು ಮೇಲುಜಾತಿಯವರನ್ನು  ಕಾಡತೊಡಗಿದೆ.

ಬಹು ದೀರ್ಘ ಕಾಲ ಹಲವು ಮಂದಿಗೆ ಅನ್ಯಾಯ ಎಸಗಿದ್ದೇವೆ, ಅವರ ಆತ್ಮಗೌರವವನ್ನು ಕಸಿದಿದ್ದೇವೆ, ತಾವು ಕೀಳು ಎಂದು ಅವರಿಗೇ ಅನಿಸುವಂತೆ ಮಾಡಿದ್ದೇವೆ, ಕೀಳರಿಮೆಗೆ ತಳ್ಳಲಾದ ಕಾರಣಕ್ಕೆ ಜೀವನಪರ್ಯಂತ ಅವರು ನೋವು ಅನುಭವಿಸಿದ್ದಾರೆ ಎಂಬುದನ್ನು ಜಾತಿಯಿಂದ ಮತ್ತು ಆ ಮೂಲಕ ಪಡೆದ ವರ್ಗದ ಸ್ಥಾನಮಾನದಿಂದ ಎಲ್ಲ ಸೌಲಭ್ಯಗಳನ್ನು ಪಡೆದವರು ಮನವರಿಕೆ ಮಾಡಿಕೊಳ್ಳಬೇಕು. ಆದರೆ ಇದು  ಆಶಾವಾದಿ ಚಿಂತನೆ ಮಾತ್ರ. ಅಧಿಕಾರ, ಸಂಪತ್ತು ಮತ್ತು ಸೌಲಭ್ಯಗಳನ್ನು ಯಾರಾದರೂ ಸುಮ್ಮನೆ ಬಿಟ್ಟುಕೊಡುವುದಕ್ಕೆ ಸಾಧ್ಯವೇ? ತಾವು ಮೇಲು ಎಂಬ ಸ್ಥಾನವನ್ನು ಉಳಿಸಿಕೊಳ್ಳಲು ಅವರು ತಮ್ಮೆಲ್ಲ ಶಕ್ತಿ ಉಪಯೋಗಿಸಿ ಹೋರಾಡುತ್ತಾರೆ.

ನ್ಯಾಯ ಬೇಕು ಎಂದು ಕೇಳುವವರಿಗೆ ಬುದ್ಧಿಶಕ್ತಿ, ಸಾಮರ್ಥ್ಯಗಳೆಲ್ಲವೂ ಸೇರಿರುವ ‘ಪ್ರತಿಭೆ’ ಇಲ್ಲ ಎಂದು ಅಪಪ್ರಚಾರ ನಡೆಸುತ್ತಾರೆ. ಈ ಮೇಲ್ವರ್ಗದ ಅತ್ಯಂತ ಬುದ್ಧಿವಂತರು ಕನಿಷ್ಠ ಮಟ್ಟದ ತಾರತಮ್ಯಕ್ಕೆ ಒಳಗಾದಾಗ ತಮ್ಮ ಒಳಗನ್ನು ನೋಡಿಕೊಂಡರೆ ಶೋಷಿತ ಜನರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವುದಕ್ಕೆ ಸಾಧ್ಯ ಇದೆ. ಉಳಿದವರು ಮಾತ್ರ ತಮಗೆ ಅನ್ಯಾಯವಾಗಿದೆ ಎಂಬ ಭಾವವನ್ನು ಹೊಂದುವುದಲ್ಲದೆ, ಸರ್ಕಾರ, ಉದ್ಯಮ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ತಮಗೆ ಇರುವ ಎಲ್ಲ ಸಂಪರ್ಕಗಳನ್ನು ಬಳಸಿ ತಮ್ಮ ಸೌಲಭ್ಯಗಳನ್ನು ಉಳಿಸಿಕೊಳ್ಳಲು ಹೋರಾಡುತ್ತಾರೆ.

ಹಾರ್ದಿಕ್ ಪಟೇಲ್ ಎಂಬ 22 ವರ್ಷದ ಯುವಕನ ನೇತೃತ್ವದಲ್ಲಿ ಗುಜರಾತ್‌ನಲ್ಲಿ ನಡೆದ ಪಟೇಲ್ ಸಮುದಾಯದ ಪ್ರತಿಭಟನೆ ಈ ಸಂದೇಶವನ್ನೇ ನೀಡಿದೆ. ಅತ್ಯಂತ ಸಮೃದ್ಧ ಪಟೇಲ್ ಸಮುದಾಯವನ್ನು ಮೀಸಲಾತಿ ಅರ್ಹತೆ ಇರುವ ಸಮುದಾಯಗಳ ಪಟ್ಟಿಯಲ್ಲಿ ಸೇರಿಸಬೇಕು ಅಥವಾ ಪ್ರತಿಭೆಯನ್ನು ಮಾತ್ರ ಪರಿಗಣಿಸಬೇಕು, ಅಂದರೆ ಮೀಸಲಾತಿಯನ್ನು ರದ್ದು ಮಾಡಬೇಕು ಎಂಬುದು ಇಲ್ಲಿರುವ ತರ್ಕ. 

ಇದು ನಾಯಿಮರಿ ತಿನ್ನುವ ಆಹಾರದಲ್ಲಿ ತನಗೆ ಪಾಲು ನೀಡಬೇಕು ಅಥವಾ ನಾಯಿಮರಿ ತಿನ್ನಲೇಬಾರದು ಎಂದು ಸಿಂಹವು ಬೆದರಿಸಿದಂತೆ. ಸಂಕ್ಷಿಪ್ತವಾಗಿ ಇದರ ಅರ್ಥ ಏನೆಂದರೆ, ಪ್ರಬಲರು ಮತ್ತು ದುರ್ಬಲರ ನಡುವಣ  ಅಸಮಾನ ಸಾಮಾಜಿಕ ಸಮೀಕರಣವನ್ನು ಸರಿಪಡಿಸಬಾರದು; ದಮನಿತರು ಸಶಕ್ತರಾಗಬಾರದು; ತಲೆಮಾರುಗಳಿಂದ ಬಹುಸಂಖ್ಯಾತ ಜನರ ಮೇಲೆ ಅಲ್ಪಸಂಖ್ಯಾತ ಸಣ್ಣ ವರ್ಗವೊಂದು ನಡೆಸಿಕೊಂಡು ಬಂದಿರುವ ಅನ್ಯಾಯ ಯಾವುದೇ ಅಡೆ ತಡೆ ಇಲ್ಲದೆ ಮುಂದುವರಿಯಬೇಕು. ಜಾತಿ ಶ್ರೇಣೀಕರಣ ಇಂದಿಗೂ ಮುಂದುವರಿಯುತ್ತಿದ್ದರೂ ಮೇಲ್ಜಾತಿಯ ಜನರು ಅದಕ್ಕೆ ವ್ಯತಿರಿಕ್ತವಾದ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ; ‘ಪ್ರತಿಭೆ’ಯನ್ನು ತ್ಯಾಗ ಮಾಡಲಾಗುತ್ತಿದೆ ಎಂದು ಹೇಳುವ ಮೂಲಕ ಅವರು ಮೀಸಲಾತಿಯನ್ನು ಪ್ರಶ್ನಿಸುತ್ತಿರುವುದು ಅಸಭ್ಯವೇ ಆಗಿದ್ದು, ಚಿಂತಿಸುವ ಪ್ರತಿಯೊಬ್ಬರಿಗೂ ಮಾಡುವ ಅವಮಾನ ಅದು.

ಪ್ರತಿಭಾವಂತರು ಎಂದು ಹೇಳಲಾಗುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳಿಗೆ ಸೇರಲು ‘ಡೊನೇಷನ್’ ಅಥವಾ ‘ಮ್ಯಾನೇಜ್‌ಮೆಂಟ್ ಸೀಟು’ ಎಂಬ ಹೆಸರುಗಳಲ್ಲಿ ಲಕ್ಷಗಟ್ಟಲೆ ಅಥವಾ ಕೋಟಿಗಟ್ಟಲೆ ರೂಪಾಯಿ ನೀಡುವುದು ತಪ್ಪಲ್ಲ ಎಂದು ಅವರು ವಾದಿಸುತ್ತಾರೆ. ಆದರೆ ದುರ್ಬಲ ಜಾತಿಯಿಂದ ಬಂದ ವಿದ್ಯಾರ್ಥಿಯೊಬ್ಬನಿಗೆ ಕಡಿಮೆ ಅಂಕಗಳಿಗೆ ಸೀಟು ನೀಡಿದರೆ ಜಗತ್ತೇ ಮುಳುಗಿ ಹೋಯಿತು ಎಂಬಂತೆ ವರ್ತಿಸುತ್ತಾರೆ. ದೇಶ ಹಾಳಾಗಿ ಹೋಯಿತು, ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ‘ಬುದ್ಧಿಮತ್ತೆ’ ಬಳಸಿಕೊಳ್ಳಬೇಕಾದರೆ ವಿದೇಶಗಳಿಗೆ ಹೋಗಬೇಕಾಗುತ್ತದೆ ಮತ್ತು ‘ಪ್ರತಿಭಾವಂತ’ ಯುವಕರಿಗೆ ತಾರತಮ್ಯದ ಹೆಸರಿನಲ್ಲಿ ನೋವು ನೀಡಲಾಗುತ್ತದೆ ಮತ್ತು ಇದು ಅನ್ಯಾಯದ ಪರಮಾವಧಿ ಎಂದು ಕೂಗಾಡಲಾಗುತ್ತದೆ.

ಜಾತಿಯ ಹೆಸರು ನಿಂದನೆಯಾಗಿರುವ ನಮ್ಮ ಸಮಾಜದಲ್ಲಿ ಸುಶಿಕ್ಷಿತ ಅಥವಾ ಎರಡನೇ ತಲೆಮಾರಿನ ಶಿಕ್ಷಿತ ಯಾವ ಒಬಿಸಿ, ಎಸ್‌ಸಿ, ಎಸ್‌ಟಿ ವ್ಯಕ್ತಿ ತನ್ನ ಜಾತಿಯನ್ನು ಹೇಳಿಕೊಳ್ಳಬಲ್ಲ? ವ್ಯಕ್ತಿಯು ಎಷ್ಟೇ ಸುಶಿಕ್ಷಿತನಾಗಲಿ, ಎಷ್ಟೇ ಉನ್ನತ ಹುದ್ದೆಯಲ್ಲಿರಲಿ ಕೆಳ ಜಾತಿಯ ಸ್ಥಿತಿಗತಿ ಅವರನ್ನು ಹಿಂಬಾಲಿಸುತ್ತಲೇ ಇರುತ್ತದೆ. ಜಾತಿ ಎಂಬುದು ಕೆಳ ಜಾತಿಯ ಜನರು ಜೀವಿಸುವ ಮತ್ತು ಪ್ರತಿ ದಿನವೂ ಅನುಭವಿಸುವ ಒಂದು ವಾಸ್ತವವಾಗಿದೆ. ಹುಟ್ಟಿನ ಜಾತಿಯಿಂದಾಗಿ ತಮಗೆ ಅಂಟಿಕೊಂಡಿರುವ ‘ಕೀಳು’, ‘ಕೊಳಕು’ ಮತ್ತು ‘ಅನರ್ಹ’ ಮುಂತಾದ ನಿಂದನೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮ ಮಕ್ಕಳನ್ನು ಹುಟ್ಟೂರಿನ ಶಾಲೆಗೆ ಕಳುಹಿಸದೆ ದೇಶದ ಇನ್ನೊಂದು ಭಾಗದಲ್ಲಿನ ಶಾಲೆಗೆ ಕಳುಹಿಸಿದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರು ನನಗೆ ಗೊತ್ತು. ಆದರೆ ಆ ಮಕ್ಕಳು ಅಲ್ಲಿಯೂ ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ.

ಅವರ ಹುಟ್ಟೂರಿನ ವ್ಯಕ್ತಿಯೊಬ್ಬರು ಅವರನ್ನು ಅಲ್ಲಿ ಗುರುತಿಸಿ, ಎಲ್ಲರ ಎದುರಿನಲ್ಲಿಯೇ ಊರಿನಲ್ಲಿ ಅವರು ಹರಿಜನಕೇರಿಯಲ್ಲಿ ವಾಸಿಸುವುದಲ್ಲವೇ ಎಂದು ಪ್ರಶ್ನಿಸಿದ್ದರು. ಹಿಂದಿನ ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದ ಮಹಿಳೆಯೊಬ್ಬರು ತಮ್ಮ ಮನೆ ಕೆಲಸಕ್ಕೆ ಯಾರೂ ಸಿಗುತ್ತಿಲ್ಲ ಎಂದು ದೂರಿದ್ದರು. ಯಾಕೆಂದರೆ ಕೆಲಸ ಕೇಳಿಕೊಂಡು ಬರುವವರೆಲ್ಲರೂ ಸಚಿವೆಗಿಂತ ಜಾತಿ ಶ್ರೇಣೀಕರಣದಲ್ಲಿ ಮೇಲಿನವರಾಗಿದ್ದರು. ತಮ್ಮದೇ ಜಾತಿಯವರನ್ನು ಮನೆ ಕೆಲಸಕ್ಕೆ ಇರಿಸಿಕೊಳ್ಳೋಣವೆಂದರೆ, ಅಸಮಾನ ಸ್ಥಾನದಲ್ಲಿ ಸಮಾನ ಜಾತಿಯವರ ಮನೆಯಲ್ಲಿ ಕೆಲಸ ಮಾಡಿ ಸಾಮಾಜಿಕ ಅವಮಾನಕ್ಕೆ ಒಳಗಾಗಲು ಯಾರೂ ಸಿದ್ಧರಿಲ್ಲ ಎಂಬುದು ಅವರ ಸಮಸ್ಯೆಯಾಗಿತ್ತು.

ವ್ಯಕ್ತಿಯ ಮೌಲ್ಯವನ್ನು ಅವರ ಜಾತಿಯ ಆಧಾರದಲ್ಲಿಯೇ ಹಣೆಪಟ್ಟಿ ಕಟ್ಟುವ ಅಥವಾ ನಿರ್ಧರಿಸುವ ಇಂತಹ ಅಸಂಖ್ಯ ಉದಾಹರಣೆಗಳಿವೆ. ನನ್ನ ಅಧ್ಯಯನವೊಂದಕ್ಕೆ ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿ ನಾನು ನಾಲ್ವರು ಯುವಕರನ್ನು ಭೇಟಿಯಾದೆ. ಅವರೆಲ್ಲರೂ ಅಲೆಮಾರಿ ಜನಾಂಗಕ್ಕೆ ಸೇರಿದವರಾಗಿದ್ದು, ಎಲ್ಲರೂ ಪದವಿ ಅಥವಾ ಪಿಯುಸಿ ಉತ್ತೀರ್ಣರಾಗಿರುವವರು. ಈ ಎಲ್ಲ ನಾಲ್ವರು ಯುವಕರಿಗೆ ಸಮಾಜದಲ್ಲಿ ತಮ್ಮ ಸ್ಥಿತಿಯ ಬಗ್ಗೆ ಅತ್ಯಂತ ಸ್ಪಷ್ಟವಾದ ಅರಿವಿತ್ತು ಮತ್ತು ಶಿಕ್ಷಣದ ಮೂಲಕ ಮಾತ್ರ ಇದೆಲ್ಲವನ್ನೂ ಮೀರಿ ನಿಲ್ಲಲು ಸಾಧ್ಯ ಎಂದು ಅವರು ನಂಬಿದ್ದರು.

ಈ ನಾಲ್ವರಲ್ಲಿ ಕಾಯಂ ಕೆಲಸ ಇದ್ದ ಇಬ್ಬರು ತಮ್ಮ ಒಡಹುಟ್ಟಿದವರ ವಿಶೇಷವಾಗಿ ಸಹೋದರರ ಶಿಕ್ಷಣಕ್ಕೆ ಹಣ ನೀಡುತ್ತಿದ್ದರು. ಶಾಲೆಗೆ ಹೋಗುವ ಬದಲು ಮಕ್ಕಳನ್ನು ಯಾವುದಾದರೂ ಕೆಲಸಕ್ಕೆ ಕಳಿಸಲು ಹೆತ್ತವರು ಇಷ್ಟಪಡುತ್ತಿದ್ದರೂ ಅದನ್ನು ವಿರೋಧಿಸಿ ಸಹೋದರರಿಗೆ ಇವರು ಹಣ ನೀಡುತ್ತಿದ್ದರು. ಶಾಲೆಗೆ ಹೋದರೆ ಅದು ಸರ್ಕಾರಿ ಶಾಲೆಯೇ ಆದರೂ ಒಂದು ತಲೆಮಾರಿನ ಬದಲಾವಣೆ ಉಂಟಾಗುತ್ತದೆ ಎಂದು ಮಧು ವಿವರಿಸಿದರು. ‘ಶಾಲೆ ಎಂದರೆ ಏನೆಂದು ನೋಡಲಿ, ಅದು ಏನೆಂದು ಅರ್ಥ ಮಾಡಿಕೊಳ್ಳಲಿ ಮತ್ತು ಅದು ತರಬಹುದಾದ ಬದಲಾವಣೆಯನ್ನು ಅರಿತುಕೊಳ್ಳಲಿ’ ಎಂದು ಅವರು ಹೇಳಿದರು.

ಬಿ.ಕಾಂ. ಪದವಿ ಹೊಂದಿರುವ ಉಮೇಶ್ ಜೀವನೋಪಾಯಕ್ಕಾಗಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ತಮ್ಮ ಗೆಳೆಯನ ಹಾಗೆ ಸಿ.ಎ. ಮಾಡುವ ಕನಸು ಇರಿಸಿಕೊಂಡಿರುವ ಅವರು, ‘ಎಲ್ಲ ಕಷ್ಟಗಳನ್ನೂ ಎದುರಿಸಿ ಶಿಕ್ಷಣ ಪಡೆಯುವ ಯುವಕರಿಗೆ ಕೆಲಸ ಎಲ್ಲಿದೆ’ ಎಂದು ಪ್ರಶ್ನಿಸುತ್ತಾರೆ. ನಗರ ಪ್ರದೇಶದಲ್ಲಿರುವ ಅವರ ಸಮುದಾಯದ ಶಿಕ್ಷಣ ಪಡೆದ ಹೆಚ್ಚಿನ ಯುವಕರು ಚಾಲಕರಾಗಿದ್ದಾರೆ. ಜಾತಿಯ ಕಾರಣದಿಂದಾಗಿ ಇತರರ ವ್ಯಂಗ್ಯ ಮತ್ತು ಗೇಲಿಗೆ ತಾವು ಗುರಿಯಾಗುತ್ತಿದ್ದೇವೆ ಎಂದು ಅವರು ಹೇಳಿದರು. ಹಾಗಾಗಿಯೇ ಈ ಜಾತಿಯಲ್ಲಿ ಹುಟ್ಟಿದ್ದಕ್ಕಾಗಿ ಅವರು ತಮ್ಮನ್ನೇ ಶಪಿಸಿಕೊಳ್ಳುತ್ತಿದ್ದಾರೆ.

ದೂರ ಪ್ರಯಾಣಕ್ಕೆ ತಮ್ಮ ಕ್ಯಾಬ್‌ನಲ್ಲಿ ಹೋಗುವ ಜನರೊಂದಿಗಿನ ತಮ್ಮ ಅನುಭವವನ್ನು ಚಾಲಕ ನಾಗೇಶ್ ಬಿಚ್ಚಿಟ್ಟರು. ಜಾತಿ ಬಗ್ಗೆ ಸತ್ಯ ಹೇಳಿದರೆ ಅವರು ಅಂತರ ಕಾಯ್ದುಕೊಳ್ಳುತ್ತಾರೆ. ಊಟದ ಸಂದರ್ಭದಲ್ಲಿ ನೂರು ರೂಪಾಯಿ ಕೊಟ್ಟು ಬೇರೆ ಹೋಟೆಲ್‌ನಲ್ಲಿ ಅಥವಾ ದೂರದ ಟೇಬಲ್‌ನಲ್ಲಿ ಊಟ ಮಾಡುವಂತೆ ಹೇಳುತ್ತಾರೆ. ಮೇಲ್ಜಾತಿ ಎಂದು ಹೇಳಿಕೊಂಡರೆ ತಮ್ಮದೇ ಟೇಬಲ್‌ನಲ್ಲಿ ಕುಳಿತು ಊಟ ಮಾಡುತ್ತಾರೆ, ಅವರೊಂದಿಗೆ ಆಹಾರ ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ ಎಂದು ನಾಗೇಶ್ ಹೇಳಿದರು.

ನಗರ ಜೀವನಕ್ಕೆ ತೆರೆದುಕೊಂಡ ಕಾರಣಕ್ಕೆ ಸಂಸ್ಕೃತದ ಹೆಸರುಗಳನ್ನು ಇರಿಸಿಕೊಂಡಿದ್ದೀರಾ ಎಂಬ ಪ್ರಶ್ನೆಗೆ, ತಮ್ಮ ಅಸ್ತಿತ್ವವನ್ನು ಮರು ರೂಪಿಸಲು ಶಾಲಾ ಶಿಕ್ಷಕರೊಬ್ಬರು ನೆರವಾಗಿರುವುದನ್ನು ಅವರು ನೆನಪಿಸಿಕೊಂಡರು. ಜೀವನಪರ್ಯಂತ ಕೆಳಜಾತಿಯವರು ಎಂಬ ಹಣೆಪಟ್ಟಿ ಕಟ್ಟಿಕೊಳ್ಳುವುದನ್ನು ತಪ್ಪಿಸಿಕೊಳ್ಳುವುದಕ್ಕೆ ತಮ್ಮ ಸಾಂಪ್ರದಾಯಿಕ ಹೆಸರುಗಳನ್ನು ಬಿಟ್ಟು ಬಿಡುವಂತೆ ಎಲ್ಲಯ್ಯ ಎಂಬ ಶಿಕ್ಷಕರು ಈ ಹುಡುಗರ ಮನವೊಲಿಸಿದ್ದರು. ಊರ ದೇವರ ಹೆಸರು ಹೊತ್ತಿದ್ದ ‘ಎಲ್ಲಯ್ಯ’ ಆ ಹೆಸರಿನ ಕಾರಣಕ್ಕೇ ಅನುಭವಿಸಿದ್ದ ಸಂಕಷ್ಟಗಳಿಂದಾಗಿ ಹುಡುಗರ ಹೆಸರು ಬದಲಾಯಿಸಿದ್ದರು.

ಹಾಗಾಗಿ ಮಾಧವಯ್ಯ ಎಂಬ ಹೆಸರು ‘ಮಧು’ ಆಯಿತು, ಮಲ್ಲೇಶ ಮಹೇಶನಾದರೆ, ನಾಗರಾಜು ‘ನಾಗೇಶ’ ಮತ್ತು ಉಶಯ್ಯ ‘ಉಮೇಶ’ನಾದರು. ಜಾತಿ ಮತ್ತು ಜಾತಿ ಆಧಾರದಲ್ಲಿ ನಡೆಯುವ ತಾರತಮ್ಯದ ಕತೆಗಳು ಹೀಗಿರುತ್ತವೆ. ‘ಕೆಳ’ ಜಾತಿಯವರು ಎಂಬ ಕಾರಣಕ್ಕೆ ಸರ್ಕಾರದ ಹಿರಿಯ ಅಧಿಕಾರಿಗಳು ಬಲಿಪಶುಗಳಾದ ಉದಾಹರಣೆಗಳು ಅಸಂಖ್ಯ ಇವೆ. ವೈದ್ಯರಿಗೆ ಅಪಮಾನ ಮಾಡಿರುವುದು, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ಲಕ್ಷ್ಮಿದೇವಿಗೆ ಮೈಲಿಗೆಯಾಗುತ್ತದೆ ಎಂಬ ಕಾರಣಕ್ಕೆ ನಗದು ನಿರ್ವಹಣೆ ಕೆಲಸ ಮಾಡದಂತೆ ತಡೆದಿರುವ ಘಟನೆಗಳು ಇವೆ.

‘ಕೆಳ’ ಜಾತಿಯ ಕಳಂಕ ಸಾವಿನಲ್ಲಿಯೂ ಅನುಸರಿಸಿಕೊಂಡು ಬರುತ್ತದೆ. ತೆಲಂಗಾಣದ ನಲ್ಗೊಂಡ ಜಿಲ್ಲೆಯ ಬಿಚ್ಚಮೊಲು (ಭಿಕ್ಷುಕ ಜಾತಿ) ಜಾತಿಯ ಜನರು ಯಾವ ಮಟ್ಟದ ಅಸ್ಪೃಶ್ಯತೆ ಎದುರಿಸುತ್ತಿದ್ದಾರೆ ಎಂದರೆ ಅವರಿಗೆ ಸತ್ತವರನ್ನು ಹೂಳುವುದಕ್ಕೂ ಜಾಗ ಇಲ್ಲ. ಕೆಲವು ತಿಂಗಳ ಹಿಂದೆ ವೃದ್ಧರೊಬ್ಬರು ಮೃತಪಟ್ಟಾಗ ಬೇರೆ ಯಾವ ಜಾತಿಯವರೂ ತಮ್ಮ ಸ್ಮಶಾನದಲ್ಲಿ ಶವವನ್ನು ಹೂಳುವುದಕ್ಕೆ ಅವಕಾಶ ನೀಡಲಿಲ್ಲ. ಹಾಗಾಗಿ  ಹರಿವ ತೊರೆಯಲ್ಲಿ ಹೂಳಬೇಕಾಯಿತು. ‘ಕೆಳ’ ಜಾತಿಯ ಜನರಿಗೆ ಜೀವಿಸಿರುವಾಗಲಾಗಲಿ, ಸತ್ತಾಗಲಾಗಲಿ ಗೌರವ ದೊರೆಯುವುದೇ ಇಲ್ಲ.

ಸ್ಥಿತಿವಂತರು ಮತ್ತು ಮೀಸಲಾತಿ ಮೂಲಕ ಉದ್ಯೋಗ ಮತ್ತು ಶಿಕ್ಷಣ ಪಡೆದವರು ತಮ್ಮ ಮಕ್ಕಳಿಗೆ ಮೀಸಲಾತಿಯ ಸೌಲಭ್ಯವನ್ನು  ಪಡೆದುಕೊಳ್ಳಬಾರದು ಎಂಬ ವಾದ ಮೀಸಲಾತಿಯ ಮೂಲ ಪರಿಕಲ್ಪನೆಯನ್ನೇ ನಿರಾಕರಿಸಿ ದಾರಿತಪ್ಪಿಸುವಂತಹುದಾಗಿದೆ. ಮೊದಲನೆಯದಾಗಿ, ಕಳೆದ ಕೆಲವು ದಶಕಗಳಲ್ಲಿ ಮೀಸಲಾತಿಯಿಂದ ಪ್ರಯೋಜನ ಪಡೆದ ವಿವಿಧ ಜಾತಿಗಳ ಶೇಕಡಾವಾರು ಪ್ರಮಾಣ ಎಷ್ಟು? ಎರಡನೆಯದಾಗಿ, ಎಷ್ಟು ಜನರು ಐ.ಎ.ಎಸ್. ಆಗಿದ್ದಾರೆ, ಐಟಟಿಗಳು, ವಿಶ್ವವಿದ್ಯಾಲಯಗಳಿಗೆ ಸೇರಿಕೊಂಡಿದ್ದಾರೆ? ಹಿಂದುಳಿದ ಜಾತಿಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳವರು ಸೇರಿ ದೇಶದ ಜನಸಂಖ್ಯೆಯ ಸುಮಾರು ಶೇ 60ರಿಂದ 75ರಷ್ಟಿದ್ದಾರೆ. ಆದರೆ ಈ ಹುದ್ದೆಗಳಲ್ಲಿ ಅವರ ಪಾಲು ಬಹಳ ಚಿಕ್ಕದು.

ಹಾಗಿರುವಾಗ ಈ ಸಣ್ಣ ಸಂಖ್ಯೆಯ ಫಲಾನುಭವಿಗಳು ಪಡೆದುಕೊಳ್ಳುವ ಸಣ್ಣ ಲಾಭವನ್ನು ತ್ಯಜಿಸುವಂತೆ ಯಾಕೆ ಅವರನ್ನು ಕೇಳಬೇಕು? ಈಗಿನ ಮೇಲ್ಜಾತಿ ಜನರ ಪೂರ್ವಜರಿಗೆ ತರಬೇತಿ ನೀಡಿದ ಆಗಿನ ವಸಾಹತುಶಾಹಿ ದೊರೆಗಳು ಬಹಳ ಚೆನ್ನಾಗಿಯೇ ಕಲಿಸಿದ್ದಾರೆ. ಹಾರ್ದಿಕ್ ಪಟೇಲ್‌ರಂಥವರು ಮತ್ತು ಅವರ ಅದೃಶ್ಯ ಬೆಂಬಲಿಗರು ‘ಕೆಳ’ ಜಾತಿಯವರಲ್ಲಿಯೇ ಇರುವ ಸ್ವಲ್ಪ ಸ್ಥಿತಿವಂತರು ಮತ್ತು ಇನ್ನೂ ಹಿಂದುಳಿದೇ ಇರುವ ಇತರರ ನಡುವೆ ಸಂಘರ್ಷ ಉಂಟು ಮಾಡಲು ಶ್ರಮಿಸುತ್ತಿದ್ದಾರೆ. ಈ ರೀತಿ ಒಡೆದು ಆಳುವ ನೀತಿ ಮೂಲಕ ತಮ್ಮ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿಯ ಏಕಸ್ವಾಮ್ಯಕ್ಕೆ ಶೋಷಿತರಿಂದ ಎದುರಾಗಬಹುದಾದ ತೊಂದರೆಯನ್ನು ಮೊಳಕೆಯಲ್ಲಿಯೇ ಚಿವುಟಲು ಅವರು ಬಯಸುತ್ತಿದ್ದಾರೆ.

ಲೇಖಕಿ ‘ಇತರ ಹಿಂದುಳಿದ ವರ್ಗಗಳು: ಸಶಕ್ತೀಕರಣ’ಕುರಿತಾದ ಐಸಿಎಸ್‍ಎಸ್‍ಆರ್ ಯೋಜನೆಯಲ್ಲಿಹಿರಿಯ ಸಂಶೋಧನಾ ಫೆಲೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT