ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿನ ಮುಂದ ಜೀವನ ಅಪ್ಗೊಂತ...

ಹೆಣ್ಣೊಬ್ಬಳ ಒಡಲಾಳದ ದನಿ
Last Updated 3 ಜನವರಿ 2015, 19:30 IST
ಅಕ್ಷರ ಗಾತ್ರ

ನಾಳೆ ಸೋಮವಾರ...
ಎದಿ ಧಡಧಡಧಡ ಓಡ್ತದ. ಉಸಿರು ಅಲ್ಲಲ್ಲೆ ಕಟ್ತದ. ಕಣ್ಣಾಲಿ ತುಂಬ್ತಾವ. ಗಂಟಲುಬ್ಬಿ ಬರ್ತದ. ಹೌದು ಇಂಥವೇ ಸೋಮವಾರ ಅವು... ಒಂದು ಎರಡೂವರಿ ವರ್ಷದ ಮಗಳು ತನ್ನ ಅಪ್ಪನನ್ನ ಕಳಕೊಂಡಿದ್ದು. ಇಂಥದ್ದೇ ಒಂದು ಸೋಮವಾರ ನಮ್ಮ ಕೂಸಿನಂಥ ಹುಡುಗ, ತನ್ನ ಕೂಸಿನ್ನ ಕಳಕೊಂಡಿದ್ದು.

ಸೋಮವಾರ...
ಹೆಂಗಿರಬೇಕು ಅವರ ಜೀವನದಾಗ ಸೋಮವಾರ ಬಂದ್ರ?  ‘ಅಪ್ಪಾ... ತಾಚಿ’ ಅನ್ನುವ ಎರಡುವರಿ ವರ್ಷದ ಕೂಸು... ಮಲಕೊಂಡ ಮಗ ಎದ್ದುಗಿದ್ದಾನು ಅಂತ ಧ್ವನಿಕಳಕೊಂಡ ಅಪ್ಪ... ಕಣ್ಮುಚ್ಚಿದ್ರ ಸಾಕು, ಇವೆರಡೂ ಮುಖ ಕಣ್ಮುಂದ ಬರ್ತಾವ.

ಹೊಟ್ಯಾಗ ಕತ್ತರಿ ಆಡಿಸಿದ ಅನುಭವ. ಆ ಇಬ್ಬರೂ ತಾಯಂದಿರ ಸಂಕಟ... ಒಂದು ತಾನೇ ಅಪ್ಪ ಆಗಬೇಕು. ಒಳಗಿನಿಂದ ಗಟ್ಟಿಯಾಗಬೇಕು. ಒಳಗೊಳಗೇ ಒಂಟಿತನ ಹೃದಯ ಬಗದು ತಿಂತದ. ಆದ್ರ ಮಗುವಿಗೆ ಜಂಟಿ ಪ್ರೀತಿ ಕೊಡಲೇಬೇಕು. ಒತ್ತೊತ್ತಿ ಬರುವ ಅಳುವ ನುಂಗಕೊಂತ ಪಪ್ಪನ ಕತಿ ಹೇಳಬೇಕು.
ಇನ್ನೊಂದು ಕಡೆ, ಕರುಳು ಕತ್ತರಿಸಿ ಹೋದ ಸಂಕಟದ ಜೊತಿಗೆ, ಗಂಡನ ಕಣ್ಣೀರು ಸಹಿಸದ ಅಸಹಾಯಕತನ. ಯಾರು ಯಾರಿಗಿಲ್ಲಿ ಸಮಾಧಾನ ಮಾಡಬೇಕು? ಕಣ್ಣೀರು ಬತ್ತಿ, ನೆತ್ತರ ಸುಟ್ರೂ ಬೂದಿಯಾಗದ ಬೆಂಕಿ ಅದು.

ಜೀವ ಶಾಶ್ವತ ಅಲ್ಲ. ಸಾವು ಮಾತ್ರ ಶಾಶ್ವತ ಅಂತಾರ ಹಿರ್‌್ಯಾರು..
ಒಂದು ಸಾವು ಸತ್ತವರಿಗೆ ಮಾತ್ರ ಸಾವಲ್ಲ. ಸತ್ತೋರು, ಇನ್ನೊಂದು ಜೀವನಕ್ಕ ಹೋಗಿರ್ತಾರ. ಇದ್ದೋರಿಗೊಂದು ಸಾವು ಕೊಟ್ಟು.
ಎಲ್ಲಾ ಸಾವುಗಳೂ ನೋವು ಕೊಡ್ತಾವ. ಅಗಲಿಕೆ ಯಾರಿಗೂ ಬ್ಯಾಡಾಗಿರ್ತದ. ಆದ್ರ ಕೆಲವೊಂದು ಅನ್ಯಾಯದ ಸಾವು ಬೇಕಾದವರ ಜೀವದೊಂದಿಗೆ ಅವರ ಜೊತಿಗಿದ್ದೋರ ಜೀವನಾನೂ ನುಂಗಿ ನೀರು ಕುಡೀತಾವ.

ಸಾವು ಶೀತಲ ಅಂತಾರ. ತನ್ನುಡೆಯೊಳಗ ಬೆಂಕಿ ಕಟ್ಗೊಂಡೇ ಬರ್ತದ. ಎಷ್ಟು ಮಂದಿಯ ಪ್ರೀತಿ ಕಣ್ಗಾವಲಿದ್ದರೂ ಅಲ್ಲಲ್ಲೇ ಹೊಂಚ ಹಾಕ್ತದ. ತನ್ನ ಕಡೆ ಸೆಳೀತದ. ಎಳೀತದ. ಯವಾಗ ನಾವು ಅದಕ್ಕ ನೆಪಾ ಕೊಡ್ತೀವೋ... ನಮ್ಮನ್ನೇ ನೆನಪು ಮಾಡಿ ಕರಕೊಂಡು ಹೊಂಟೇ ಬಿಡ್ತದ...

ನಂಗಂತೂ ಈ ಸಾವಿನ ಬಗ್ಗೆ ಯವಾಗಲೂ ಒಂಥರಾ ಸೆಳತ. ಆದ್ರ ಸಾಯೂ ಮುಂದ, ನಮ್ಮ ಹೆತ್ತವರು ಹಿಂದಿರಬಾರದು. ಯಾಕಂದ್ರ ಅವರಿಗೆ ಅದನ್ನ ತಡಕೊಳ್ಳೂದು ಆಗಾಂಗಿಲ್ಲ ಅವರ ಆಯಸ್ಸಿನೊಳಗ ಒಂದಷ್ಟು ವರ್ಷ ನಾವೆಳಕೊಂಡು ಹೊಂಟಬಿಡ್ತೀವಿ. ನಾವು ಹೆತ್ತ ಮಕ್ಕಳು ಮುಂದಿರಬಾರದು. ಯಾಕಂದ್ರ ಅವು ನಮ್ಮನ್ನೇ ನಂಬಿ ಬಂದಿರ್ತಾವ. ಅವಕ್ಕೂ ಮಕ್ಕಳಾಗಿ ಅವರನ್ನ ಜೋಪಾನ ಮಾಡೂವಷ್ಟರೆ ದೊಡ್ಡೋರಾಗಿರಬೇಕು. (ಮನಷಾನ ಆಸಿ ಎಷ್ಟು ದೊಡ್ಡೂ ಅಲ್ಲ?)

ನಾವು ಬಯಸಿದಾಗ ನಮ್ಮನ್ನ ಕರಕೊಂಡು ಹೋಗಾಕ ಸಾವೇನು ನಮ್ಮ ಮಗ್ಗಲಮನಿ ಮಿತ್ರ ಅಂದ್ಕೊಂಡೀರೇನ್ರೀ? ಅದರ ಮರ್ಜಿ... ಅದಕ್ಕ ಬೇಕಾದವರು, ಅದಕ್ಕ ಬೇಕಾದಾಗ ಕರಕೊಂಡು ಹೋಗ್ತದ. ಎಂಥಾ ಸಿಕಂದರ್..!

ಏನಿದು, ಹೊಸಾ ವರ್ಷದ ಹೊಸ್ತಲಾ ದಾಟಿ ಬಂದು ಎರಡುದಿನಾ ಕಳದಿಲ್ಲ, ಸಾವಿನ ಮಾತು, ಸರಿ ಅಕಡೆ ಅಂತ ಅನ್ನಸಬಹುದು. ಆದ್ರ ಈ ವರ್ಷದ ಉಡೆಯೊಳಗ ಅವರಿಬ್ಬರ ಮನ್ಯಾಗ ಬರೇ ನೆನಪು ಉಳದು ಹೋಗ್ಯಾವ. ಸತ್ತೋರು ಇದ್ದೋರ ಹೊಟ್ಯಾಗ ಅಂತಾರ. ನಿಮಗೆಲ್ಲ ಈ ವರ್ಷ ಹರ್ಷ ತರಲಿ. ಆದ್ರ ಇಂಥೋರ ಮನ್ಯಾಗ, ಮನಸಿನಾಗ ಒಂದೀಟರೆ ಸಮಾಧಾನ ತರಲಿ. ಇಷ್ಟಕ್ಕೂ ‘ಇಂದವರ್... ನಾಳೆ ನಾವ್’ ಅನ್ನೂದಂತೂ ಖರೇನೆ. ನಾವಿದ್ದಲ್ಲಿ ಅವರು ಬರಾಕಾಗೂದಿಲ್ಲ. ಅವರಿದ್ದಲ್ಲಿ ನಾವು ಹೋಗೂತನಾ ತಡಕೋಬೇಕು ಅಷ್ಟೆ. ಕವಿ ಗುರುದೇವ ರವೀಂದ್ರನಾಥ ಟ್ಯಾಗೋರ್‌ ಹೇಳೂಹಂಗ, ‘ಪ್ರೀತಿ ಅವರ ನೆನಪಿನೊಳಗ ಕರಗಿ ಹೋಗಲಿ. ನೋವು ಹಾಡಾಗಲಿ...’ ಆಗ ನಮ್ಮನ್ನ ಬಿಟ್ಟು ಹೋದೋರೂ ಶಾಂತರಾಗಬಹುದು.  

ಡಿಸೆಂಬರ್ ಬಂದ್ರ ಸಾಕು, ಮನಸು ಥರಗುಡ್ತದ. ಥಣ್ಣನ ಥಂಡಿಗೆ ಮೈ ನಡುಗಿದ್ರ, ಇಂಥ ಸಾವಿನ ಸುದ್ದಿ ಮನಸು ನಡಗೂಹಂಗ ಮಾಡ್ತಾವ. ಯಾರು ಯಾರಿಗೂ ಸಮಾಧಾನ ಮಾಡುವ ಮಾತು ಸೈತ ಮಣ್ಣಾಗುವ ಕಾಲ ಅದು. ಗಿಡಾ ಸೈತ ಹೂ, ಎಲಿ ಕಳಕೊಂಡು ಬರಡಾಗುವ ಸಮಯ ಇದು.

ಬೇಕಾದೋರಿಗೆ ಕಳಕೊಂಡಾಗ ಬದುಕು ಬರಡಾಗ್ತದ. ನೆನಪು ಮಾತ್ರ ಹಸರಾಗ್ತ ಹೋಗ್ತಾವ... ಎಂಥಾ ವಿಚಿತ್ರ ಇದು. ಆದ್ರ ಕಾಲ ಸುಮ್ನಿರೂದಿಲ್ಲ. ನೋವು ಕಡಿಮಿ ಮಾಡದಿದ್ರೂ, ಮರಸದಿದ್ರೂ, ತೀವ್ರತೆ ಕಡಿಮಿ ಮಾಡ್ತದ. ಒಣಗಿದ ಮರ ಮತ್ತ ಚಿಗರೂಹಂಗ ಜೀವನ ಮುಂದ ಸಾಗ್ತದ. ಹಂಗೇ ವಾರಗಳೂ ಬರ್ತಾವ ಹೋಗ್ತಾವ. ಯಾಕಂದ್ರ ಯಾರನ್ನೂ ಕಸಿಯದ ವಾರ ಯಾವುದೂ ಇಲ್ಲ. ಕಾಲ ಮುಂದ ಸರೀತದ.

ಹೇಳ್ಕೊಂತ ಹೋದ್ರ, ಹೇಳಬೇಕಾದ ಮಾತು ಮರತೀತು. ನಾವು, ನೀವು... ದಿನಾ ಬೆಳಕ ಹರದ್ರ, ನಾವು ಅಗ್ದಿ ಶಾಶ್ವತ. ನಮಗೇನೂ ಆಗಾಂಗೇ ಇಲ್ಲ. ಏನಾದ್ರೂ ನಮ್ಮನಿ ಸುದ್ದಿ ಅಲ್ಲ ಅಂತ ಬಿಂದಾಸ್ ಇರ್ತೀವಿ. ಆದ್ರ ಒಂತುಸು ಎಚ್ಚರಾಗಾಕ ಬೇಕು. ನಮ್ಮ ಆರೋಗ್ಯದ ಕಡೆ ನಾವೇ ಗಮನ ಕೊಡಬೇಕು. ಹೆಣ್ಮಕ್ಕಳಂತೂ ಡಾಕ್ಟರ್‌ ಹತ್ರ ಹೋಗೂದು ಅಂದ್ರ ಗುಬ್ಬಕ್ಕ ಕಾಗಕ್ಕನ ಕತಿ ನೆನಪಾಗ್ತದ ನಂಗ. ಕಾಗಕ್ಕ, ‘ಗುಬ್ಬೀ ಗುಬ್ಬೀ ಬಾಗಲಾ ತಗಿ’ ಅಂದ್ರ ಸಾಕು, ತಡಿ, ನನ್ನ ಮಕ್ಕಳಿಗೆ ಸ್ನಾನ ಮಾಡಸಬೇಕು. ಅಡಗಿ ಮಾಡಬೇಕು. ಊಟಾ ಮಾಡಸಬೇಕು, ಮಲಗಸಬೇಕು. ದೇವರ ತೊಳೀಬೇಕು. ಪೂಜಾ ಮಾಡಬೇಕು. ಗಂಡಗ ಊಟಕ್ಕ ಹಾಕಬೇಕು.. ಇಂಥಾವೇ ಹತ್ತುಲ್ಲ ಹನ್ನೊಂದು ನೆಪಾ ಒಡ್ಡಿ ಹಿಂಜರೀತೀವಿ. ನಾವು ಒಂದೊಂದೇ ನೆಪ ಮುಂದ ಮಾಡ್ದಾಗಲೂ ಸಾವು ಹಲ್ಗಿಂಜಕೊಂಡು ನಮ್ಮ ಕಡೆ ಹೆಜ್ಜಿ ಹಾಕ್ತದ. ಇಂಥದ್ದೇ ಮರೆವು ಎಷ್ಟು ಮಂದಿಗೆ ಗಬಕ್ಕನೆ ಕಸಗೊಂಡಿಲ್ಲ? ಹೆಣ್ಮಕ್ಕಳಿಗೆ ಬರುವ ಕೆಲವೊಂದು ಬ್ಯಾನಿಗಳಂತೂ ಇಂಥ ನಿರ್ಲಕ್ಷ್ಯ, ಅಲಕ್ಷ್ಯದಿಂದಲೇ ನಮ್ಮನ್ನ ಆವರಿಸಿಕೊಂಡು ಬಿಡ್ತಾವ.

ಇವೊತ್ತು, ಈ ಕ್ಷಣ ಕೊನೀದು ಅನ್ನೂಹಂಗೆ ಬದುಕಿಬಿಡಬೇಕು. ಯಾರ ಬಗ್ಗೆನೂ ದೂರು ಇಲ್ಲದೇ... ಯಾರ ಜೊತಿನೂ ಮುನಿಸು ಇಲ್ಲದೇ.. ಯಾರಿಗೆ ಗೊತ್ತು? ಸಾವು ಯಾರ ಮಗ್ಗಲ್ಕ, ಯಾರಿಗೆ ಹೊಂಚು ಹಾಕ್ಕೊಂತ ನಿಂತದಂತ? ಇರೂವಷ್ಟು ದಿನಾ ಸಾವಿಗೂ ಈಗ ಬ್ಯಾಡಬಿಡು, ಇನ್ನೊಮ್ಮೆ ಬರೂನು ಅನ್ನೂಹಂಗ ಬದುಕೂನು. ಈ ದಿನಾ... ಈ ಕ್ಷಣಾ... ಯಾಕಂದ್ರ ನಿನ್ನೆ ಸತ್ತು ಹೋಗೇದ. ನಾಳೆ ಇನ್ನಾ ಹುಟ್ಟೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT