ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜನರ ಕೈಗೆ ಅಧಿಕಾರ’: ಭರವಸೆ ಏನಾಯಿತು?

ಅಧಿಕಾರಶಾಹಿ ಹಾಗೂ ಸರ್ಕಾರದ ಹಿಡಿತಕ್ಕೆ ಸಿಲುಕಲಿವೆಯೇ ಸ್ಥಳೀಯ ಸರ್ಕಾರಗಳು?
Last Updated 6 ಜುಲೈ 2015, 19:30 IST
ಅಕ್ಷರ ಗಾತ್ರ

ವಿಕೇಂದ್ರೀಕರಣದ ಬಗ್ಗೆ ಆಸ್ಥೆಯಿರುವ ವ್ಯಕ್ತಿಗಳು, ಚಿಂತಕರು, ಸಂಘಟಕರೆಲ್ಲಾ ಪಾಲ್ಗೊಂಡಿದ್ದಂತಹ ಚಿಂತಕರ ಸಭೆಯೊಂದನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ನೇತೃತ್ವದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದ ಗದ್ದುಗೆ ಏರಿದ ಹೊಸದರಲ್ಲಿ ನಡೆಸಲಾಗಿತ್ತು. 

‘ಜನರ ಕೈಗೆ ಅಧಿಕಾರ’ ಎನ್ನುವ ಘೋಷಣೆಯೊಂದಿಗೆ ನಡೆದ ಆ ಸಭೆಯಲ್ಲಿ ಸ್ವಯಂ ಮುಖ್ಯಮಂತ್ರಿಗಳೂ

ಭಾಗವಹಿಸಿದ್ದರು. ಗ್ರಾಮೀಣ ಕರ್ನಾಟಕದ ಬಗ್ಗೆ  ಸರ್ಕಾರಕ್ಕೆ ಕಾಳಜಿ ಇದೆ ಎನ್ನುವ ಭರವಸೆಯನ್ನು ಆ ಸಭೆ ಮೂಡಿಸಿತ್ತು. ಆರಂಭದಲ್ಲಿ ತೋರಿದ ಈ ಉತ್ಸಾಹ, ಭರವಸೆಗಳು ನಿಜವಾಗಬೇಕಾದರೆ ಗ್ರಾಮೀಣ ಕರ್ನಾಟಕದಲ್ಲಿ ಸರ್ಕಾರ ಕ್ರಿಯಾಶೀಲವಾಗಿ ಆಡಳಿತ ನಡೆಸಬೇಕಾದುದು ಮಹತ್ವದ್ದು.

ಈ ಬುನಾದಿ ಸದೃಢವಾಗದೇ, ಕ್ರಿಯಾಶೀಲವಾಗದೇ ‘ಜನರ ಕೈಗೆ ಅಧಿಕಾರ’ ಎನ್ನುವುದಕ್ಕೆ ಅರ್ಥವಿರುವುದಿಲ್ಲ. ಈ ಮಾತು ಉಳಿಸಿಕೊಳ್ಳಲು ಈಗೊಂದು ಸದವಕಾಶ ರಾಜ್ಯದಲ್ಲಿ ಎದ್ದು ಕಾಣುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆ ನಂತರ ರಾಜ್ಯದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಹೊಸ ಸರ್ಕಾರಗಳು ರಚನೆಯಾಗಿವೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ತಮ್ಮ ಪ್ರತಿನಿಧಿಗಳನ್ನಾಗಿ ರಾಜ್ಯದ ಜನರು ಆಯ್ಕೆ ಮಾಡಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರು ನೇರ ಭಾಗವಹಿಸಿ ತೀರ್ಮಾನಗಳನ್ನು ಕೈಗೊಳ್ಳುವ ಏಕೈಕ ಸ್ಥಳ ಎಂದರೆ ಗ್ರಾಮ ಸಭೆ. ಅದು ಸಂಘಟನೆಗೊಳ್ಳಲು ವೇದಿಕೆ ಸಿದ್ಧವಾಗುತ್ತಿದೆ. ಆಯ್ಕೆಯಾದವರಲ್ಲಿ ಶೇ 50ರಷ್ಟು ಮಂದಿ ಮಹಿಳೆಯರು, ಲಕ್ಷದಲ್ಲಿ ಅರ್ಧದಷ್ಟು ಜನರು ಉತ್ಸಾಹಿ ಯುವಜನರು ಹಾಗೂ ಹೊಸಬರು.

ಇವರಲ್ಲಿ ಉತ್ಸಾಹವಿದೆ. ಏನನ್ನಾದರೂ ಸಾಧಿಸಬೇಕೆನ್ನುವ ಛಲವಿದೆ.  ಇಂತಹವರು ಪ್ರತಿ ಗ್ರಾಮಸಭೆಗೆ ಬಲ, ಉತ್ಸಾಹ ತುಂಬಬೇಕಿದೆ. ಇದಕ್ಕಾಗಿ ಏನು ಮಾಡಬೇಕೆಂಬ ಬಗ್ಗೆ  ಸಮಗ್ರ ಅಧ್ಯಯನ ನಡೆಸಿರುವ  ಸಮಿತಿಯ ವರದಿ ಸರ್ಕಾರದಲ್ಲಿದೆ. ಈ ಸ್ಥಳೀಯ ಸರ್ಕಾರಗಳಲ್ಲಿ ಸಂವಿಧಾನಾತ್ಮಕವಾಗಿ ಜನ ನೇರ ಭಾಗವಹಿಸಲು ಅವಕಾಶ ಲಭ್ಯವಾಗಿದೆ.

ಮಹಿಳೆಯರು ಸೇರಿದಂತೆ ಪರಿಶಿಷ್ಟ ಜಾತಿ– ಪಂಗಡ ಮುಂತಾದ ಅಂಚಿಗೆ ಒತ್ತರಿಸಲ್ಪಟ್ಟ ಜನರಿಗೆ ಗ್ರಾಮಸಭೆ ವೇದಿಕೆಯಾಗಲಿದೆ. ಸ್ವತಃ ತಾವೇ ತಮ್ಮ ತಮ್ಮ ಕೇರಿ, ಹಳ್ಳಿಯ ಬಗ್ಗೆ ಚರ್ಚಿಸುತ್ತಾ ತಮ್ಮ ಕನಸಿನ ಕರ್ನಾಟಕಕ್ಕೆ ಯೋಜನೆ ರೂಪಿಸುವ ಸಮಯ ಇದಾಗಿದೆ. ಇದಕ್ಕೆ ಇಂಬು ನೀಡುವಂತೆ ಮಾರ್ಗದರ್ಶನ ನೀಡಬಹುದಾದ ರಮೇಶಕುಮಾರ್ ನೇತೃತ್ವದ ಸಮಿತಿಯ ವರದಿ ಸರ್ಕಾರದ ಕೈ ಸೇರಿ ಏಳು ತಿಂಗಳಾಗಿದ್ದು ಕಾಯಿದೆ ರೂಪ ಪಡೆಯಲು ಕಾಯುತ್ತಿದೆ.

ಇಂತಹ ಸಂದರ್ಭದಲ್ಲಿ ಸ್ಥಳೀಯ ಸರ್ಕಾರಗಳ ಯೋಜನೆ ಪ್ರಕ್ರಿಯೆಗೆ ಚಾಲನೆ ನೀಡಲು ಹಾಗೂ ಜಿಲ್ಲಾ ಯೋಜನಾ ಸಮಿತಿಯನ್ನು ಕ್ರಿಯಾಶೀಲವಾಗಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ‘ಜಾರಿ ಪಡೆ’ಯನ್ನು ರಚನೆ ಮಾಡಲಾಗಿದೆ. ಆ ಮೂಲಕ ‘ಜಿಲ್ಲಾ ಯೋಜನಾ ಸಮಿತಿ’ಯನ್ನು ಕ್ರಿಯಾಶೀಲವಾಗಿಸುವ ಪ್ರಯತ್ನ ಮಾಡಲಾಗಿದೆ. ಇದೊಂದು ಹೊಸ ಬೆಳವಣಿಗೆ ಎಂದು ಹೇಳಬಹುದು. ಈ ಹೊಸ ಬೆಳವಣಿಗೆಯಿಂದ ವಿಕೇಂದ್ರೀಕರಣದ ಬಗ್ಗೆ ಭರವಸೆಯನ್ನು ಇಟ್ಟುಕೊಂಡವರಿಗೆ ಹಲವಾರು ಆತಂಕಗಳು ಕಾಡುತ್ತವೆ.  ಪಂಚಾಯತ್ ರಾಜ್ ವ್ಯವಸ್ಥೆಗೆ ಕಾಯಕಲ್ಪ ನೀಡಲು  ಸಮಗ್ರ ವರದಿಯನ್ನು ಸರ್ಕಾರ ಪಡೆದುಕೊಂಡಿದೆ.

ಆ ವರದಿ ರಾಜ್ಯದಾದ್ಯಂತ ವಿಸ್ತೃತವಾಗಿ ಚರ್ಚೆಯಾಗಿ ಅದನ್ನು ಸಮಗ್ರವಾಗಿ ಅನುಷ್ಠಾನಗೊಳಿಸಬೇಕೆಂಬ ಅಭಿಪ್ರಾಯವು ವಿಕೇಂದ್ರೀಕರಣದ ಬಗ್ಗೆ ಬದ್ಧತೆ ಇರುವ ಜನರಿಂದ ಮೂಡಿದೆ. ಸರ್ಕಾರವು ಅದನ್ನು ಜಾರಿಗೆ ತರುವ ಭರವಸೆಯನ್ನೂ ನೀಡಿದೆ. ಆದರೆ ದುರದೃಷ್ಟವಶಾತ್ ಆ ವರದಿಯ ಸಮಗ್ರ ಅನುಷ್ಠಾನದ ಸಾಧ್ಯತೆ ಕಡಿಮೆಯಾಗುವಂತೆ ತೋರುತ್ತಿದೆ. 

ರಮೇಶಕುಮಾರ್ ನೇತೃತ್ವದ ಸಮಿತಿ ವರದಿ ಸಲ್ಲಿಸಿ ಹಲವು ತಿಂಗಳು ಕಳೆದರೂ ಕಾಯಿದೆಯ ಸಮಗ್ರ ತಿದ್ದುಪಡಿ ಬಗ್ಗೆ ಈವರೆಗೆ ಭರವಸೆಗಳು ಮಾತ್ರ ಉಳಿದುಕೊಂಡಿವೆ. ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಮೊದಲು ಚುನಾವಣೆಗೆ ಸಂಬಂಧಪಟ್ಟ ಸಲಹೆಗಳನ್ನು ಅಳವಡಿಸಲು ಕಾಯಿದೆಗೆ ತಿದ್ದುಪಡಿ ಮಾಡುತ್ತೇವೆಂದು, ವರದಿಯಲ್ಲಿ ಉಲ್ಲೇಖಿಸಿದ ಕೇವಲ ಮೂರು ವಿಷಯಗಳನ್ನು ಮಾತ್ರ ಅನುಷ್ಠಾನಗೊಳಿಸಲಾಯಿತು ಅಷ್ಟೆ. ಉಳಿದ 85 ವಿಷಯಗಳಿಗೆ ಸಂಬಂಧಿಸಿದ ತಿದ್ದುಪಡಿ ಯಾವಾಗ ಎನ್ನುವುದು ತಿಳಿದಿಲ್ಲ.

ಈ ನಡುವೆ, ಗ್ರಾಮ ಪಂಚಾಯಿತಿಗಳು ಯೋಜನೆ ತಯಾರಿಯ ಬಹುಮುಖ್ಯ ಹಂತದಲ್ಲಿರುವಾಗ ಹೊಸದೊಂದು ‘ಜಾರಿ ಪಡೆ’ ಸೃಷ್ಟಿಯಾಗಿರುವುದು ಆತಂಕಕಾರಿ. ಯೋಜನೆ ರಚನೆಯ ಬಗ್ಗೆ ರಮೇಶಕುಮಾರ್ ಸಮಿತಿಯ ವರದಿ, ವಿವರವಾಗಿ ಒಂದು ಅಧ್ಯಾಯವನ್ನೇ ರಚಿಸಿ ಮಹತ್ತರ ಸಲಹೆಗಳನ್ನು ನೀಡಿದೆ. ಅದರಲ್ಲಿ ಮುಖ್ಯವಾಗಿ ಮೂರು ಹಂತಗಳಲ್ಲಿ ಯೋಜನೆಯನ್ನು ಕ್ರೋಡೀಕರಿಸುವ ವ್ಯವಸ್ಥೆಯ ಕುರಿತು ಸಲಹೆ ಮಾಡಲಾಗಿದೆ. ಈಗಿರುವ ಜಿಲ್ಲಾ ಮಟ್ಟದ ಯೋಜನಾ ಸಮಿತಿಯನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿಸುವುದು, ಗ್ರಾಮ ಸಭೆ, ವಾರ್ಡ್‌ ಸಭೆ ಮತ್ತು ತಾಲ್ಲೂಕು ಮಟ್ಟದಲ್ಲಿ ಯೋಜನಾ ಸಮಿತಿ ರಚಿಸುವುದಲ್ಲದೆ ರಾಜ್ಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ವಿಕೇಂದ್ರೀಕೃತ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಯ ರಚನೆಯ ಬಗ್ಗೆ ರಮೇಶಕುಮಾರ್ ಸಮಿತಿಯ ವರದಿಯಲ್ಲಿ ಸಲಹೆ ನೀಡಲಾಗಿದೆ.

ಆದರೆ ಈ ಸಲಹೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಈ ‘ಜಾರಿ ಪಡೆ’ಯನ್ನು ಸರ್ಕಾರ ರಚಿಸಿರುವುದು ಆಶ್ಚರ್ಯ ಹಾಗೂ ಆತಂಕ ಉಂಟು ಮಾಡಿದೆ. ತಳಮಟ್ಟದಲ್ಲಿ ಅಂದರೆ, ವಾರ್ಡ್ ಮತ್ತು ಗ್ರಾಮ ಮಟ್ಟದಲ್ಲಿ ಜನಭಾಗವಹಿಸುವಿಕೆಯ ಮೂಲಕ ಅದರಲ್ಲೂ ಮಹಿಳೆಯರು, ಅಂಚಿಗೊತ್ತರಿಸಲ್ಪಟ್ಟವರು ಮತ್ತು ಮಕ್ಕಳು ಸಕ್ರಿಯವಾಗಿ ಭಾಗವಹಿಸಿ ಯೋಜನೆಗಳನ್ನು ವೈಜ್ಞಾನಿಕವಾಗಿ ಹೇಗೆ ತಯಾರಿಸಬಹುದು ಎನ್ನುವ  ಬಗ್ಗೆ ಕಾರ್ಯಸಾಧ್ಯ ಸಲಹೆಗಳನ್ನು ನೀಡಲಾಗಿದೆ.
ಹಾಗೆಯೇ ಹೊಸ ಗ್ರಾಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಅದು ತನ್ನ ಗ್ರಾಮದ ಎಲ್ಲಾ ಜನರನ್ನು ಸೇರಿಸಿಕೊಂಡು ಐದು ವರ್ಷದ ಯೋಜನೆಯನ್ನು ತಯಾರಿಸಬೇಕೆಂಬ ಸಲಹೆಯನ್ನು ನೀಡಲಾಗಿದೆ.  ಐದು ವರ್ಷವಿರುವ ಒಂದು ಗ್ರಾಮ ಸರ್ಕಾರ ತನಗೆ ಕಾರ್ಯಸಾಧ್ಯವಾಗುವ ಐದು ವರ್ಷದ ಕ್ರಿಯಾ ಯೋಜನೆಯನ್ನು ರೂಪಿಸಿಕೊಳ್ಳಬೇಕು. 

ಹೀಗೆ ಪ್ರತಿಯೊಂದು ಗ್ರಾಮ ಪಂಚಾಯಿತಿಯೂ ತಯಾರಿಸಿದ ಯೋಜನೆಯನ್ನು ತಾಲ್ಲೂಕು ಮಟ್ಟದ ಯೋಜನಾ ಸಮಿತಿ ಕ್ರೋಡೀಕರಿಸಿ ಅದನ್ನು ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಯೋಜನಾ ಸಮಿತಿಗೆ ನೀಡುವ ಬಗ್ಗೆ ರಮೇಶಕುಮಾರ್ ಸಮಿತಿಯ ವರದಿಯಲ್ಲಿ ಸಲಹೆಗಳಿವೆ. ಸ್ಥಳೀಯ ಮಟ್ಟದಲ್ಲಿ ಮಾಡಿದ ಯೋಜನೆಗಳ ಆದ್ಯತೆಗಳನ್ನು ಮೇಲಿನ ಹಂತದಲ್ಲಿ ಯಾವುದೇ ರೀತಿ ಬದಲಾಯಿಸದೆ ಅವುಗಳನ್ನು ಕೇವಲ ಕ್ರೋಡೀಕರಿಸಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಯೋಜನೆಗಳಾಗಿ ರೂಪಿಸಬೇಕೆಂದೂ ಸಲಹೆ ನೀಡಲಾಗಿದೆ.

ಈ ಮೂಲಕ ಮೂರು ಹಂತದ ಸ್ಥಳೀಯ ಸರ್ಕಾರಗಳನ್ನು ಗ್ರಾಮಸಭೆಗೆ ಅಂದರೆ ಜನರಿಗೆ ಉತ್ತರದಾಯಿಗಳನ್ನಾಗಿಸುವ ಪ್ರಯತ್ನದ ಸಲಹೆಗಳಿವೆ. ಹೀಗೆ ಜನರ ಆಶೋತ್ತರಗಳನ್ನು ಪರಿಪೂರ್ಣಗೊಳಿಸುವ ಮತ್ತು ಜನರಿಗೆ ಉತ್ತರದಾಯಿಗಳಾಗಿ ಸ್ಥಳೀಯ ಸರ್ಕಾರಗಳನ್ನು ಕಾರ್ಯಪ್ರವೃತ್ತವಾಗಿಸುವಂತಹ ಸಮಿತಿಯ ಸಲಹೆಗಳನ್ನು ಸರ್ಕಾರ ಗಮನಿಸಿದಂತಿಲ್ಲ. ಯೋಜನಾ ಸಮಿತಿಯ ಕಾರ್ಯವಿಧಾನಗಳ ಬಗ್ಗೆ ಈಗ ಈ ಹೊಸ ‘ಜಾರಿ ಪಡೆ’ಗೆ ನೀಡಿರುವ ಕಾರ್ಯಸೂಚಿ ಹಾಗೂ ಯೋಜನೆ ತಯಾರಿಕೆಗೆ ನೀಡಿದ ಸಲಹೆಗಳ ಪಟ್ಟಿಯನ್ನು ಅವಲೋಕಿಸಿದಲ್ಲಿ, ಇದು ಇನ್ನಷ್ಟು ಅಧಿಕಾರಶಾಹಿ ಮತ್ತು ಸರ್ಕಾರದ ಹಿಡಿತಕ್ಕೆ ಸ್ಥಳೀಯ ಸರ್ಕಾರಗಳನ್ನು ಸಿಲುಕಿಸುವಂತಿದೆ.

ಅಂದರೆ ಇನ್ನೊಂದು ಮಾತಲ್ಲಿ ಹೇಳುವುದಾದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಏಜೆಂಟರಂತೆ ಅಥವಾ ಕೆಲಸದಾಳುಗಳಂತೆ ಸ್ಥಳೀಯ ಸರ್ಕಾರಗಳನ್ನು ಪರಿಭಾವಿಸುವಂತಿದೆ. ಹೀಗೆ ಮಾಡುವುದರಿಂದ ಕೇಂದ್ರೀಕೃತ ವ್ಯವಸ್ಥೆ ಮತ್ತು ಅಧಿಕಾರಿಶಾಹಿ ವ್ಯವಸ್ಥೆ ಬಲಗೊಳ್ಳುತ್ತದೆಯೇ ವಿನಾ ಸ್ಥಳೀಯ ಸರ್ಕಾರಗಳು ಬಲಗೊಳ್ಳುವುದಿಲ್ಲ. 

ಉದಾಹರಣೆಗೆ, ಪ್ರಮುಖ ಸೂಚಿಗಳ ಅಡಿಯಲ್ಲಿ, ಸಂವಿಧಾನದತ್ತ 29 ವಲಯ ಅಥವಾ ವಿಷಯಗಳು, ಸ್ಥಳೀಯ ಸರ್ಕಾರದ ಜವಾಬ್ದಾರಿಗಳಾಗಿ  ಸಂಪೂರ್ಣವಾಗಿ ಹಸ್ತಾಂತರಗೊಳ್ಳಬೇಕಿದೆ. ಆದರೆ ಈ ‘ಜಾರಿ ಪಡೆ’ಯ ಸೂಚಿಯಲ್ಲಿ ಕೇವಲ 8 ವಲಯಗಳನ್ನು ಮಾತ್ರ ಪ್ರಮುಖ ಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ  ಸರ್ಕಾರದ ಅಧಿಕಾರಿಗಳು ಮತ್ತು ಇಲಾಖೆಗಳ ಜವಾಬ್ದಾರಿ ಮತ್ತು ಕೆಲಸಗಳನ್ನು ಗ್ರಾಮಸಭೆ ಮತ್ತು ಸ್ಥಳೀಯ ಸರ್ಕಾರದ ಮೇಲೆ ಹೊರಿಸಿದಂತಿದೆ.

ಈ ‘ಜಾರಿ ಪಡೆ’ಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಲಯಗಳಿಗೆ ಸಂಬಂಧಿಸಿದಂತೆ ನೀಡಿರುವ   ಕರ್ತವ್ಯಗಳನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಬಹಳಷ್ಟು ಸಲಹೆಗಳು ಇಲಾಖಾ ಸಿಬ್ಬಂದಿ ಮತ್ತು ಇಲಾಖೆಗಳು ಮಾಡಬೇಕಾದ ಕರ್ತವ್ಯಗಳಾಗಿವೆ. ನಿಜ ಹೇಳಬೇಕೆಂದರೆ ತಮ್ಮ ಗ್ರಾಮಕ್ಕೆ ಸಂಬಂಧಪಟ್ಟಂತೆ ಅಂಗನವಾಡಿ ಕಾರ್ಯಕ್ರಮದ ಇಡೀ ಯೋಜನೆ ರೂಪಿಸುವ ಜವಾಬ್ದಾರಿ ಗ್ರಾಮಸಭೆ ಮತ್ತು ಗ್ರಾಮ ಪಂಚಾಯಿತಿಗಳಿಗೆ ಇರುತ್ತದೆ.

ಉದಾಹರಣೆಗೆ, ಪಂಚಾಯಿತಿ ಪರಿಧಿಯಲ್ಲಿ  ಎಷ್ಟು ಅಂಗನವಾಡಿಗಳ ಅಗತ್ಯವಿದೆ, ಬೇಡಿಕೆ ಇದೆ, ಎಲ್ಲೆಲ್ಲಿ ಅಂಗನವಾಡಿಗಳ ಸ್ಥಾಪನೆಯಾಗಬೇಕು, ಮಕ್ಕಳ ಅಭಿವೃದ್ಧಿಗೆ ಏನೆಲ್ಲಾ ಮಾಡಬೇಕು, ಮಕ್ಕಳು ಮಹಿಳೆಯರಿಗೆ ಏನೆಲ್ಲಾ ಸಮಸ್ಯೆಗಳಿವೆ ಮತ್ತು ಅದರ ಪರಿಹಾರಕ್ಕೆ ಏನೆಲ್ಲಾ ಕ್ರಮಗಳನ್ನು ಯೋಜಿಸಬೇಕು, ಅಪೌಷ್ಟಿಕತೆ ನಿವಾರಣೆಗೆ ತೆಗೆದುಕೊಳ್ಳಬೇಕಾದ ಪ್ರಮುಖ ಕ್ರಮಗಳು– ಹೀಗೆ ತಂತಮ್ಮ ಪಂಚಾಯಿತಿಗೆ ಸಂಬಂಧಪಟ್ಟ ಸಮಗ್ರ ಯೋಜನೆ ತಯಾರಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಗಳದ್ದಾಗಿರುತ್ತದೆ.

ಮತ್ತು ಇದನ್ನು ಸಂಪೂರ್ಣವಾಗಿ ಅನುಷ್ಠಾನ ಮಾಡುವ ಮತ್ತು ಅದಕ್ಕೆ ಅಗತ್ಯವಿರುವ ಸಂಪನ್ಮೂಲಗಳನ್ನು ಪಡೆಯುವ ಮತ್ತು ಅದನ್ನು ಆಚರಣೆಗೆ ತರುವ ಸಿಬ್ಬಂದಿ ಮೇಲೆ ಮೇಲ್ವಿಚಾರಣೆ ನಡೆಸುವ ಜವಾಬ್ದಾರಿ ಸ್ಥಳೀಯ ಸರ್ಕಾರದ್ದಾಗಿರುತ್ತದೆ, ಆದರೆ ಈ ಪ್ರಮುಖ ಸೂಚಿಯಲ್ಲಿನ ಸಲಹೆಗಳ ಬಗ್ಗೆ ಸರ್ಕಾರ ಒಂದಿನಿತೂ ಗಮನ ನೀಡಿದಂತೆ ಕಂಡುಬರುವುದಿಲ್ಲ. ರಮೇಶಕುಮಾರ್ ವರದಿಯಲ್ಲಿ ನೀಡಿದ ಯಾವುದೇ ಸಲಹೆಗಳನ್ನು ಈ ಜಾರಿ ಪಡೆ ರಚಿಸುವಾಗ ಗಮನಿಸಿದಂತಿಲ್ಲ. 

ಈ ‘ಜಾರಿ ಪಡೆ’ ರಚನೆ ಹಾಗೆಯೇ ಹೋಬಳಿ ಮಟ್ಟದಲ್ಲಿ ಆರ್.ಡಿ.ಒ. ಎನ್ನುವ ಅಧಿಕಾರ ಕೇಂದ್ರ ಸ್ಥಾಪನೆಯು ನಿಜ ಗ್ರಾಮ ಸ್ವರಾಜ್ಯದತ್ತ ನಡೆಯುವ ದಾರಿಯಲ್ಲಿ ಸರ್ಕಾರ ಎಡವಿರುವುದಕ್ಕೆ ಪ್ರತೀಕ. ಅಥವಾ ಸರ್ಕಾರದ ಆಶಯ ಜನರಿಗೆ ಅಧಿಕಾರ ಕೊಡುವುದಕ್ಕಿಂತ ಇನ್ನಷ್ಟು ಕೇಂದ್ರೀಕರಣವೇ ಮುಖ್ಯವಾಗಿರುವಂತೆ ತೋರುತ್ತದೆ. ಅಧಿಕಾರಶಾಹಿಯ ಬಲವರ್ಧನೆ, ಶಾಸಕರ, ಮಂತ್ರಿಗಳ ತುಷ್ಟೀಕರಣಕ್ಕೆ ಹೆಚ್ಚು ಆಸಕ್ತಿ ಈ ಸರ್ಕಾರಕ್ಕೆ ಇದ್ದಂತೆ ಅನ್ನಿಸುತ್ತಿದೆ.

ನಮಗೆ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. ನಿಜಕ್ಕೂ ರಮೇಶಕುಮಾರ್ ವರದಿ ಬಗ್ಗೆ ಸರ್ಕಾರದ ನಿಲುವೇನು? ಗ್ರಾಮ ಸ್ವರಾಜ್ಯದತ್ತ ನಡೆಯಲು ಹಾಗೂ ಸ್ಥಳೀಯ ಸರ್ಕಾರಗಳನ್ನು ಬಲಿಷ್ಠಗೊಳಿಸುವ ವಿಚಾರದಲ್ಲಿ  ಸರ್ಕಾರದ ಆಶಯಗಳಾದರೂ ಏನು? ‘ಜನರ ಕೈಗೆ ಅಧಿಕಾರ’ ಎನ್ನುವುದು ನಮ್ಮ ಹಿಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಕನಸು.  ರಾಜ್ಯದ ನಜೀರ್‌ಸಾಬ್ ಮತ್ತು ಎಂ.ವೈ. ಘೋರ್ಪಡೆಯಂತಹ ನಾಯಕರು ಹಾಕಿಕೊಟ್ಟ ಮೇಲ್ಪಂಕ್ತಿಯ ಮೂಲಕ ವಿಕೇಂದ್ರೀಕರಣದಲ್ಲಿ ಉನ್ನತ ಪರಂಪರೆಯನ್ನು ಸೃಷ್ಟಿಸಿದ ಕರ್ನಾಟಕ ಮತ್ತು ಇವರೆಲ್ಲರಿಂದ ಸ್ಫೂರ್ತಿಗೊಂಡಿದೆ ಎನ್ನುವ ಈಗಿನ ಈ ರಾಜ್ಯ  ಸರ್ಕಾರ ಏನು ಮಾಡುತ್ತಿದೆ ಎನ್ನುವುದು ಸದ್ಯದ ಪ್ರಶ್ನೆ.

‘ಬಿ.ಬಿ.ಎಂ.ಪಿ ವ್ಯಾಪ್ತಿ ಅತಿದೊಡ್ಡದಾಯ್ತು. ಅದನ್ನು ವಿಭಜಿಸಿ ವಿಕೇಂದ್ರೀಕರಣ ನಡೆಸಬೇಕು. ಆ ಮೂಲಕ ಜನರಿಗೆ ಹತ್ತಿರ ಆಗಬೇಕು’ ಎಂದೆಲ್ಲಾ ಹೇಳಿ, ಏನೆಲ್ಲಾ ತಾಕಲಾಟ, ಹೋರಾಟ, ರೋಷಾವೇಶ ಪ್ರದರ್ಶಿಸಿ ತರಾತುರಿಯಲ್ಲಿ ಮಸೂದೆ ರಚಿಸಿ ಕಾಯಿದೆ ಮಾಡಲು ಹೊರಟ ಸರ್ಕಾರ ತನ್ನ ಮಡಿಲಲ್ಲೇ ಏಳು ತಿಂಗಳಿಂದ ಬಿದ್ದುಕೊಂಡಿರುವ ವರದಿಯ ಬಗ್ಗೆ ಮೌನವಹಿಸಿ ಈಗ ಒಂದೊಂದೆ ಸರ್ಕಾರದ ಆಜ್ಞೆ, ಸುತ್ತೋಲೆಗಳ ಮೂಲಕ ಸ್ಥಳೀಯ ಸರ್ಕಾರದ ಮೇಲೆ ಸವಾರಿ ಮಾಡಲು ಹೊರಟಿದೆ ಎನ್ನುವ ಅನುಮಾನ ನಮ್ಮನ್ನು ಕಾಡುತ್ತಿದೆ. ಸಂವಿಧಾನದತ್ತವಾದ ತಮ್ಮ ಜವಾಬ್ದಾರಿ ಹಾಗೂ ಹಕ್ಕುಗಳನ್ನು ಪಡೆಯಲು ತಾವೇ ಆಯ್ಕೆ ಮಾಡಿದ ಸರ್ಕಾರದೊಡನೆ ಹೋರಾಟ ನಡೆಸ ಬೇಕಾದ ಅನಿವಾರ್ಯವನ್ನು ಈ ಸರ್ಕಾರಗಳು ಸೃಷ್ಟಿಸುತ್ತಿವೆಯೇ?
 
ಲೇಖಕ ಪ್ರಧಾನ ಕಾರ್ಯದರ್ಶಿ, ಗ್ರಾಮ ಪಂಚಾಯಿತಿ ಹಕ್ಕೊತ್ತಾಯ ಆಂದೋಲನ
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT