ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾರತ ಮಾತೆ’ಯನ್ನು ರಕ್ಷಿಸೋಣ

ನಾವು ಕಟ್ಟಬೇಕಾದ ಭಾರತ ಎಂಥದ್ದು? ಏಕರೂಪೀ ಭಾರತವನ್ನು ನಿರ್ಮಿಸಬೇಕೇ?
Last Updated 19 ಫೆಬ್ರುವರಿ 2016, 19:32 IST
ಅಕ್ಷರ ಗಾತ್ರ

ಎರಡು ದಶಕಗಳ ಹಿಂದಿನ ಘಟನೆಯಿದು. ಆಗಿನ್ನೂ ಮೊಬೈಲ್‌ಗಳು ಬಂದಿರಲಿಲ್ಲ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿದ್ದ ನನ್ನ ಹಾಸ್ಟೆಲ್‌ಗೆ ಸಮೀಪವಿದ್ದ ಗಂಗಾ ಡಾಬಾ ಬಳಿಯ ಟೆಲಿಫೋನ್ ಬೂತ್‌ನಿಂದ ಮನೆಗೆ ಫೋನ್ ಮಾಡಿದೆ. ಫೋನ್ ಎತ್ತಿಕೊಂಡ ಅಪ್ಪ ಕುಶಲ ವಿಚಾರಣೆಯ ನಂತರ ಸಹಜ ಧ್ವನಿಯಲ್ಲೇ ‘ನಿನ್ನ ಪಾಸ್‌ಪೋರ್ಟ್ ಎನ್‌ಕ್ವೈರಿ ಮುಗಿಯಿತು’ ಎಂದರು.

ಪಾಸ್‌ಪೋರ್ಟ್‌ಗೆ ಅರ್ಜಿಯನ್ನೇ ಸಲ್ಲಿಸದಿದ್ದ ನನಗೆ ಅಪ್ಪ ಏನು ಹೇಳುತ್ತಿದ್ದಾರೆ ಎಂಬುದು ತಕ್ಷಣಕ್ಕೆ ಅರ್ಥವೇ ಆಗಲಿಲ್ಲ. ನಿಧಾನಕ್ಕೆ ಅವರೇನು ಹೇಳುತ್ತಿದ್ದಾರೆ ಎಂಬುದು ಗೊತ್ತಾಯಿತು. ನಾನವರಿಗೆ ಸತ್ಯ ಏನು ಎಂಬುದನ್ನು ತಿಳಿಸಿದೆ. ಈ ನಡುವಿನ ಸ್ವಲ್ಪ ಹೊತ್ತು ನಮ್ಮಿಬ್ಬರ ನಡುವೆ ಇದ್ದದ್ದು ಮೌನ. ನಡೆದದ್ದೇನು ಎಂಬುದು ಈ ಮೌನದಲ್ಲೇ ಇಬ್ಬರಿಗೂ ಅರ್ಥವಾಗಿತ್ತು. ಆಮೇಲೆ ನಡೆದದ್ದೇನು ಎಂದು ವಿವರಿಸಿದರು. ಅವರು ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಕೃಷಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲೇ ಇದ್ದ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್  ಬಂದಿದ್ದರಂತೆ. ಅಪ್ಪನ ಜೊತೆ ಟೀ ಕುಡಿಯುತ್ತಾ ‘ಮಗಳೇನು ಮಾಡುತ್ತಿದ್ದಾಳೆ, ಮುಂದೆ ಯಾವ ಕೆಲಸಕ್ಕೆ ಸೇರಬೇಕು ಎಂದುಕೊಂಡಿದ್ದಾಳೆ, ಅವಳ ರಾಜಕೀಯ ಆಸಕ್ತಿಗಳೇನು’ ಇತ್ಯಾದಿಗಳನ್ನೇ ವಿಚಾರಿಸಿಕೊಂಡರಂತೆ! ಅಪ್ಪ ಗಲಿಬಿಲಿಗೊಂಡಂತೇನೂ ಇರಲಿಲ್ಲ. ಆದರೂ ‘ಅಲ್ಲಿ ಎಲ್ಲ ಸರಿಯಾಗಿದೆ ಅಂದುಕೊಂಡಿದ್ದೇನೆ’ ಎಂದರು. ನಾನು ‘ಏನೂ ಭಯ ಬೇಡ. ನಾನಿಲ್ಲಿ ಚೆನ್ನಾಗಿದ್ದೇನೆ ಎಂದು ಅಮ್ಮನಿಗೂ ಹೇಳಿಬಿಡಿ’ ಅಂದೆ.

ಆಮೇಲೆ ಏನೂ ಆಗಲಿಲ್ಲ– ಅಲ್ಲಿಯ ತನಕ ನಾನೇನು ಮಾಡುತ್ತಿದ್ದೆನೋ ಅವುಗಳನ್ನೇ ಮುಂದುವರಿಸಿದೆ. ನನ್ನ ಸಂಶೋಧನಾ ವಿಷಯಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚು ತೊಡಗಿಸಿಕೊಂಡೆ. ಇದರ ಜೊತೆಯಲ್ಲಿ ಗೆಳೆಯರ ಜೊತೆಗೆ, ಪ್ರಾಧ್ಯಾಪಕರ ಜೊತೆಗೆ ಮತ್ತು ವಿಶ್ವವಿದ್ಯಾಲಯವನ್ನು ಸಂದರ್ಶಿಸಲು ವಿಶ್ವದ ಹಲವೆಡೆಗಳಿಂದ ಬರುತ್ತಿದ್ದ ವಿದ್ವಾಂಸರು ಮತ್ತು ವಿದ್ಯಾರ್ಥಿಗಳ ಜೊತೆಗೆ ನಡೆಸುವ ಚರ್ಚೆಗಳೂ ಮುಂದುವರಿದವು. ಈ ಚರ್ಚೆಯಲ್ಲಿ ಪ್ರಸ್ತಾಪವಾಗದ ವಿಚಾರಗಳೇ ಇರಲಿಲ್ಲ. ಭೂಮಿಯ ಮೇಲಿನ ಸಕಲೆಂಟು ವಿಚಾರಗಳನ್ನೂ ನಾವು ಚರ್ಚಿಸುತ್ತಿದ್ದೆವು. ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವ ಕ್ರಿಯೆಯೂ ಮುಂದುವರಿಯಿತು. ಯಾವುದೆಲ್ಲಾ ಅನಾಗರಿಕ, ಅಸಾಂವಿಧಾನಿಕ ಅಥವಾ ಅನ್ಯಾಯ ಎಂಬಂತೆ ಕಾಣಿಸುತ್ತಿದ್ದವೋ ಅವುಗಳ ವಿರುದ್ಧ ನಾವು ಪ್ರತಿಭಟಿಸುತ್ತಿದ್ದೆವು. ತಿಯಾನ್ಮೆನ್ ವೃತ್ತದಲ್ಲಿ ನಡೆದ ವಿದ್ಯಾರ್ಥಿಗಳ ನರಮೇಧ, ನರ್ಮದಾ ಕಣಿವೆಯಿಂದ ಗಿರಿಜನರನ್ನು ಒಕ್ಕಲೆಬ್ಬಿಸುವ ಸರ್ಕಾರದ ಪ್ರಯತ್ನ, ಬಾಬರಿ ಮಸೀದಿ ಧ್ವಂಸ, ನಮ್ಮ ವಿಶ್ವವಿದ್ಯಾಲಯದ ಆವರಣದಿಂದ ಕಟ್ಟಡ ಕಾರ್ಮಿಕರನ್ನು ಒಕ್ಕಲೆಬ್ಬಿಸಿದ್ದು ಹೀಗೆ ನಮ್ಮ ಪ್ರತಿಭಟನೆಗಳ ವ್ಯಾಪ್ತಿಯೂ ದೊಡ್ಡದಿತ್ತು. ಪೊಲೀಸರು ನಮ್ಮನ್ನೂ ಥಳಿಸಿದ್ದರು. ಕೆಲವೊಮ್ಮೆ ಬಂಧಿಸಿಯೂ ಇದ್ದರು. ಆದರೆ ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟಿದ್ದರು.

ಇವೆಲ್ಲವೂ ನಡೆದದ್ದು ಕ್ಯಾಂಪಸ್‌ನ ಹೊರಗೆ. ನನ್ನ ಏಳು ವರ್ಷದ ಜೆಎನ್‌ಯು ಬದುಕಿನಲ್ಲಿ ಒಮ್ಮೆಯೂ ಪೊಲೀಸರು ಕ್ಯಾಂಪಸ್ ಒಳಗೆ ಬಲ ಪ್ರಯೋಗ ಮಾಡಿರಲಿಲ್ಲ. ಮಂಡಲ್ ಆಯೋಗದ ಪರ ಮತ್ತು ವಿರೋಧಿ ಚಳವಳಿಗಳು ತಾರಕಕ್ಕೇರಿದ್ದ ಹೊತ್ತಿನಲ್ಲೂ ಕ್ಯಾಂಪಸ್ ಒಳಗೆ ಪೊಲೀಸರು ಶಕ್ತಿ ಪ್ರದರ್ಶಿಸಲು ಮುಂದಾಗಿರಲಿಲ್ಲ. ಜೆಎನ್‌ಯುನ ಹೊರಗಿದ್ದವರು ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದಾಗ ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಮೀಸಲಾತಿಯ ಪ್ರಸ್ತುತತೆಯನ್ನು ಚರ್ಚಿಸುವುದಕ್ಕಾಗಿ ಹಲವು ಉಪನ್ಯಾಸಗಳನ್ನು ಏರ್ಪಡಿಸಿತ್ತು. ಇಲ್ಲಿ ಮೀಸಲಾತಿಯ ಪರ ಮತ್ತು ವಿರುದ್ಧ ಚರ್ಚೆಗಳಲ್ಲಿ ನಾವೆಲ್ಲರೂ ಕ್ರಿಯಾಶೀಲರಾಗಿದ್ದೆವು. ವಿ.ವಿ. ಸಾಮಾನ್ಯ ಸಭೆಯಲ್ಲಿ ವಿದ್ಯಾರ್ಥಿ ಸಂಘದ ನಿರ್ಣಯವೊಂದಕ್ಕೆ ಸೋಲಾದಾಗ ಅದು ರಾಜೀನಾಮೆಯನ್ನೂ ಕೊಟ್ಟು ಹೊರಬಂದಿತ್ತು. ಇದು ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಿಗಿದ್ದ ಬದ್ಧತೆಯ ದ್ಯೋತಕವಾಗಿತ್ತು.

ಇದು ಜೆಎನ್‌ಯುನ ನಿತ್ಯದ ಬದುಕಿನ ವಿವರಗಳಷ್ಟೇ. ನಾನು ಯಾವುದೇ ಸಂಘಟನೆಯ ನಾಯಕತ್ವದ ಸ್ಥಾನದಲ್ಲಿರಲಿಲ್ಲ. ಹೋರಾಟಗಾರ್ತಿಯೆಂಬ ಹಣೆಪಟ್ಟಿ ಹಚ್ಚಬಹುದಾದ ಗುಣಗಳೂ ನನ್ನವಾಗಿರಲಿಲ್ಲ. ಅಷ್ಟೇಕೆ ನಾನು ಯಾವುದೇ ರಾಜಕೀಯ ಪಕ್ಷದ ಸದಸ್ಯಳೂ ಆಗಿರಲಿಲ್ಲ. ಆದರೂ ದೆಹಲಿ ಪೊಲೀಸರು ನನ್ನ ಬಗ್ಗೆಯೂ ಕಡತವೊಂದನ್ನು ನಿರ್ವಹಿಸುವ ಅಗತ್ಯವಿದೆ ಎಂದು ಭಾವಿಸಿದ್ದರು. ಅದಕ್ಕಾಗಿಯೇ ಅವರು ನನ್ನ ಮನೆಯವರೆಗೂ ಹೋಗಿ ಅಪ್ಪನ ಬಳಿ ಮಾತನಾಡಿದ್ದರು. ಹೀಗೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಿಗಾ ಇರಿಸುವುದು ಬಹಳ ಹಿಂದಿನಿಂದಲೇ ನಡೆಯುತ್ತಿದೆ. ಆಗಿನ ಸರ್ಕಾರಗಳಿಗೆ ಈಗಿನ ಸರ್ಕಾರಕ್ಕಿರುವಷ್ಟು ಅಭದ್ರತೆ ಇರಲಿಲ್ಲವಾದ್ದರಿಂದ ವಿದ್ಯಾರ್ಥಿಗಳನ್ನು ಹೆದರಿಸುವುದಕ್ಕೆ ಪೊಲೀಸ್ ಬಲವನ್ನು ಬಳಸುತ್ತಿರಲಿಲ್ಲ. ಅಥವಾ ಉದ್ರೇಕಕಾರಿ ‘ರಾಷ್ಟ್ರೀಯತೆಯ’ ಕರೆಗಳನ್ನೂ ನೀಡಿ ತಮ್ಮ ಅಭದ್ರತೆಯನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಅದೃಷ್ಟವಶಾತ್ ಆಗ ತಂತ್ರಜ್ಞಾನ  ನಮ್ಮ ಬದುಕನ್ನು ಈಗಿನಷ್ಟು ಆವರಿಸಿಕೊಂಡಿರಲಿಲ್ಲ. ಅದರಿಂದಾಗಿ ನಾವು ಮಾಡಿದ್ದೆಲ್ಲಾ ಈಗಿನಂತೆ ರಾಷ್ಟ್ರೀಯ ಟಿ.ವಿ. ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿರಲಿಲ್ಲ.

‘ಫೋಟೊಶಾಪ್’ ಬಳಸಿ ಸೃಷ್ಟಿಸಲಾದ ಚಿತ್ರಗಳ ಬಳಕೆಯೂ ಆಗ ಇರಲಿಲ್ಲ. ಕೊನೆಗೊಮ್ಮೆ ನಾನು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದಾಗ ಸ್ಪೆಷಲ್ ಬ್ರ್ಯಾಂಚ್‌ನ ಮೂಲಕವೇ ನನ್ನ ಹಿನ್ನೆಲೆಯ ಪರಿಶೀಲನೆ ನಡೆಯಿತು. ಈ ಔಪಚಾರಿಕತೆಯನ್ನು ನಿರ್ವಹಿಸಿದ ಪೊಲೀಸ್ ಅಧಿಕಾರಿ ತಮಾಷೆಯಾಗಿ ಕೇಳಿದ್ದ ಪ್ರಶ್ನೆ ಹೀಗಿತ್ತು– “ಎಲ್ಲಾ ‘ಪ್ರತಿಭಾವಂತ’ ವಿದ್ಯಾರ್ಥಿಗಳ ಬಗ್ಗೆಯೂ ನಮ್ಮ ಇಲಾಖೆಯಲ್ಲಿ ಕಡತವೊಂದಿರುತ್ತದೆಯಲ್ಲಾ...?”.

ಜೆಎನ್‌ಯು ವಿದ್ಯಾರ್ಥಿಗಳು ಕಲಿಯುವ ಮೌಲ್ಯಗಳಿಗೂ ಪೊಲೀಸರು ಕಡತಗಳನ್ನು ನಿರ್ವಹಿಸುವುದಕ್ಕೂ ಸಂಬಂಧವಿರಬಹುದೇನೋ. ಏಕೆಂದರೆ ಇಲ್ಲಿ ವಿದ್ಯಾರ್ಥಿಗಳು ಸಮಾನತೆಯ ಕುರಿತು, ಭಾರತದ ವೈವಿಧ್ಯತೆಯ ಕುರಿತು ಹಾಗೆಯೇ ನ್ಯಾಯವೆಂಬುದು ಹೇಗೆ ನ್ಯಾಯಬದ್ಧವಾಗಿರಬೇಕು ಎಂಬುದರ ಕುರಿತ ಪಾಠಗಳನ್ನು ಕಲಿಯುತ್ತಾರೆ. ಇದು ಕೇವಲ ವಿಶ್ವವಿದ್ಯಾಲಯದ ತರಗತಿಯೊಳಗೆ ಕಲಿಯುವ ಪಾಠವಷ್ಟೇ ಅಲ್ಲ.  ತರಗತಿಯ ಹೊರಗೆಯೂ ಕಲಿಯುವಂಥ ವಾತಾವರಣ ಇಲ್ಲಿದೆ. ಇದರಿಂದಾಗಿಯೇ ನಾವು ಹೊಸ ಪರಿಕಲ್ಪನೆಗಳನ್ನು ಶೋಧಿಸುವುದಕ್ಕೆ ಮುಂದಾದೆವು. ಭಿನ್ನಮತವನ್ನು ಗೌರವಿಸುವುದನ್ನು ಕಲಿತೆವು. ಸುತ್ತಲಿನ ವಿದ್ಯಮಾನಗಳ ಕುರಿತು–ಇವುಗಳಲ್ಲಿ ಕ್ಯಾಂಪಸ್‌ನ ಒಳಗಿನ ಬೆಳವಣಿಗೆಗಳಿಂದ ಆರಂಭಿಸಿ ವಿಶ್ವದ ಯಾವುದೋ ಮೂಲೆಯಲ್ಲಿ ನಡೆಯುವ ತನಕದ ಎಲ್ಲಾ ತರಹದ ವಿದ್ಯಮಾನಗಳೂ ಇರುತ್ತಿದ್ದವು– ಅದಕ್ಕೆ ಪ್ರತಿಕ್ರಿಯಿಸುವುದಕ್ಕೂ ಮುಂದಾಗುತ್ತಿದ್ದೆವು.

ಈ ಎಲ್ಲಾ ಕಾರಣಗಳಿಂದಾಗಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಂಧನ ಮತ್ತು ಅದರ ನಂತರದ ಪ್ರತಿಕ್ರಿಯೆಗಳು ನನ್ನಂಥವರ ಮನಸ್ಸನ್ನು ಕಲಕಿವೆ. ವಿದ್ಯಾರ್ಥಿಗಳನ್ನು ಹತ್ತಿಕ್ಕುವ ಕ್ರಿಯೆ ‘ಭಾರತ ಮಾತೆ’ಯ ಹೆಸರಿನಲ್ಲಿ ನಡೆಯುತ್ತಿರುವುದು ಇನ್ನೂ ನೋವಿನ ಸಂಗತಿ. ನನ್ನ ಮನಸ್ಸಿನಲ್ಲಿರುವ ಹಾಗೆಯೇ ಬಹುತೇಕ ಭಾರತೀಯರ ಮನಸ್ಸಿನಲ್ಲಿರುವ ಭಾರತ ಮಾತೆಯ ಬಿಂಬಕ್ಕೂ ಮಹಿಳಾ ಪತ್ರಕರ್ತರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ನ್ಯಾಯಾಲಯದ ಆವರಣದಲ್ಲಿ ‘ಅಪರಿಚಿತ ಗಂಡಸರು’ ಥಳಿಸುವ ಭಾರತಕ್ಕೂ ಸಂಬಂಧವಿಲ್ಲ. ಈ ‘ಅಪರಿಚಿತರು’ ಈಗ ಬಹಳ ‘ಪರಿಚಿತ’ವಾಗಿರುವ  ನಿರಾಯುಧನೂ ಏಕಾಂಗಿಯೂ ಆಗಿರುವ ಕನ್ಹಯ್ಯಾ ಕುಮಾರ್‌ಗೆ ಥಳಿಸುವುದನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಿರುವುದನ್ನು ನನ್ನ ಪರಿಕಲ್ಪನೆಯ ಭಾರತ ಮಾತೆ ಒಪ್ಪಲಾರಳು. ಭಾರತ ಮಾತೆ ಇದನ್ನೆಲ್ಲಾ ಕಂಡು ಸಾಂತ್ವನದ ಹಾದಿಗಳೇ ಮುಚ್ಚಿರುವ ಅಸಹಾಯಕಳಂತೆ ಬಿಕ್ಕಿ ಬಿಕ್ಕಿ ಅಳುತ್ತಿರಬಹುದು.

ತನ್ನ ಹೆಸರನ್ನು ಪ್ರತಿಕ್ಷಣವೂ ದುರುಪಯೋಗ ಪಡಿಸಿಕೊಳ್ಳುತ್ತಿರುವ ಸ್ಥಿತಿಗೆ ಭಾರತ ಮಾತೆ ಹೇಗೆ ಪ್ರತಿಕ್ರಿಯಿಸಬಹುದು? ಬಹುಶಃ ಆಕೆ ಬೆಗುಸರಾಯ್‌ನ ಅಂಗನವಾಡಿ ಕಾರ್ಯಕರ್ತೆಯ ಸ್ಥಿತಿಯನ್ನು ಕಂಡು ಅಳುತ್ತಿರಬಹುದು. ತನಗೆ ದೊರೆಯುವ ಸಂಬಳದಲ್ಲಿ ಪಾರ್ಶ್ವವಾಯು ಪೀಡಿತ ಗಂಡನನ್ನು ನೋಡಿಕೊಳ್ಳುತ್ತಾ ಬದುಕುತ್ತಿದ್ದ ಈಕೆಯ ಮಗ ಕನ್ಹಯ್ಯಾ ಕುಮಾರ್‌ ಮೇಲೆ ಪ್ರಭುತ್ವ ದೇಶದ್ರೋಹದ ಆರೋಪ ಹೊರಿಸಿ ಜೈಲಿಗೆ ಕಳುಹಿಸಿರುವ ಈ ಸಂದರ್ಭದಲ್ಲಿ ಭಾರತ ಮಾತೆ ಸಂಭ್ರಮಿಸಲು ಸಾಧ್ಯವೇ? ಪ್ರಭುತ್ವದ ಪೀಡನೆಯನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ಯುವತಿಯರನ್ನು ವೇಶ್ಯೆಯರೆಂದು ಕರೆಯಲು ತನ್ನ ಹೆಸರನ್ನು ಬಳಸಿಕೊಂಡದ್ದನ್ನು ಭಾರತ ಮಾತೆ ಅದು ಹೇಗೆ ತಾನೆ ಸಹಿಸಿಕೊಂಡಾಳು. ಕೇವಲ ಘೋಷಣೆಯನ್ನಷ್ಟೇ ಕೂಗಿದ, ಯಾವುದೇ ಹಿಂಸಾತ್ಮಕ ಕ್ರಿಯೆಗಳಲ್ಲಿ ತೊಡಗದ ಆದರೆ ದೇಶದ್ರೋಹದ ಆರೋಪವನ್ನು ಹೊತ್ತಿರುವ ಕಿರಿಯರಿಗಾಗಿಯೂ ಭಾರತ ಮಾತೆ ಕಣ್ಣೀರಿಡುತ್ತಿರಬಹುದು. ‘ದೇಶದ್ರೋಹ’ದ ವಿರುದ್ಧದ ಕಾಯ್ದೆಯನ್ನು ರೂಪಿಸಿದ್ದೇ ಭಾರತ ಮಾತೆಯ ರಕ್ಷಣೆಗಾಗಿ ಹೋರಾಡುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಹಣಿಯುವುದಕ್ಕಾಗಿ ಎಂಬ ಐತಿಹಾಸಿಕ ಸತ್ಯವನ್ನು ಅರಿತ ಭಾರತ ಮಾತೆ ಅದು ಹೇಗೆ ದುಃಖಿಸದೇ ಇರಲು ಸಾಧ್ಯ?

ರಾಜದ್ರೋಹ ಕಾಯ್ದೆಯನ್ನು ರೂಪಿಸಿದ್ದ ವಸಾಹತುಶಾಹಿ ಪ್ರಭುತ್ವಗಳೇ ಇಂದು ಆ ಪರಿಕಲ್ಪನೆಯಿಂದಲೇ ದೂರ ಉಳಿದಿವೆ. ಕನಿಷ್ಠ ತಮ್ಮ ಪೌರರ ಮೇಲೆ ಇಂಥ ಕಾಯ್ದೆಗಳನ್ನು ಬಳಸುವುದಿಲ್ಲ. ನಾನು ಕೆಲಕಾಲ ಲಂಡನ್‌ನಲ್ಲಿ ವಾಸಿಸಿದ್ದವಳು. ಯಾವ ಪ್ರಚೋದನೆಯೂ ಇಲ್ಲದೆ ಪ್ಯಾಲೆಸ್ಟೀನ್‌ನ ಜನವಸತಿಯ ಮೇಲೆ ಬಾಂಬ್ ದಾಳಿ ನಡೆಸಿ ಮಕ್ಕಳೂ ಸೇರಿದಂತೆ ಸಾಮಾನ್ಯ ಜನರನ್ನು ಕೊಂದ ಕೃತ್ಯವನ್ನು ಖಂಡಿಸಿ ಸುಮಾರು ಐದು ಕಿಲೊಮೀಟರ್ ಉದ್ದದ ಮಾನವ ಸರಪಳಿ ರಚಿಸಿ ನಡೆಸಿದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿದ್ದೆ. ಇದರಲ್ಲಿ ಬಹುತೇಕ ಬ್ರಿಟಿಷ್‌ ಪೌರರಿದ್ದರಾದರೂ ನನ್ನಂತೆ ಇತರ ರಾಷ್ಟ್ರಗಳ ಪೌರರೂ ದೊಡ್ಡ ಸಂಖ್ಯೆಯಲ್ಲೇ ಇದ್ದರು. ಪ್ರತಿಭಟನೆಯಲ್ಲಿ ಯುನೈಟೆಡ್ ಕಿಂಗ್‌ಡಂ ವಿರೋಧಿ ಘೋಷಣೆಗಳು ಗಮನಾರ್ಹ ಸಂಖ್ಯೆಯಲ್ಲೇ ಕೇಳಿಬಂದವು.

ಪೊಲೀಸರು ಯಾರ ಮೇಲೂ ಬೆರಳೆತ್ತುವ ಧೈರ್ಯ ಕೂಡಾ ಮಾಡಲಿಲ್ಲ. ಈಗ ನಾವು ಬಳಸುತ್ತಿರುವ ‘ರಾಷ್ಟ್ರೀಯತೆ’ಯ ಮಾನದಂಡವನ್ನು ಅಮೆರಿಕವೂ ತನ್ನ ಪೌರರ ಮೇಲೆ ಬಳಸಲು ಹೊರಟಿದ್ದರೆ ನೋಮ್ ಚೋಮ್‌ಸ್ಕಿಯವರ ದೇಹ ಹಲವು ತುಂಡುಗಳಾಗಿ ಹೋಗಿರಬೇಕಾಗಿತ್ತು. ಅಮೆರಿಕ ಯಾವತ್ತೂ ಇಬ್ಬಗೆಯ ನೀತಿಗಳನ್ನು ಹೊಂದಿರುವ ದೇಶ. ತನ್ನ ನಾಗರಿಕರಿಗೆ ಅನ್ವಯಿಸುವುದನ್ನು ಅದು ಇತರರಿಗೆ ಅನ್ವಯಿಸುವುದಿಲ್ಲ. ನಾವು ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದೇವೆ. ನಮ್ಮದೇ ದೇಶದ ಪೌರರಿಗೂ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಿದ್ದೇವೆ. ಒಂದು ನೀತಿ ‘ಪ್ರಮಾಣೀಕೃತ’ ರಾಷ್ಟ್ರೀಯವಾದಿಗಳಿಗೆ. ಮತ್ತೊಂದು ಕನ್ಹಯ್ಯಾ ಮತ್ತು ನಮ್ಮಂಥವರಿಗೆ.

ಈಗ ನಡೆಯುತ್ತಿರುವ ಸಮರ ‘ಭಾರತವನ್ನು ಕಟ್ಟುವ’ ಮತ್ತು ‘ಭಾರತವನ್ನು ಒಡೆಯುವ’ ಪರಿಕಲ್ಪನೆಗಳ ಮಧ್ಯೆ. ನಾವು ಕಟ್ಟಬೇಕಾದ ಭಾರತ ಎಂಥದ್ದು? ಹೆಚ್ಚು ಮಾನವೀಯವಾಗಿರುವ, ಸಮಾನತೆಯನ್ನು ಪ್ರತಿಪಾದಿಸುವ, ಪ್ರಜಾಸತ್ತಾತ್ಮಕತೆಯನ್ನು ಖಾತರಿಪಡಿಸುವ ಭಾರತವನ್ನು ನಿರ್ಮಿಸಬೇಕಾಗಿದೆ. ಎಲ್ಲಾ ಧಾರ್ಮಿಕ ನಂಬಿಕೆಗಳ, ಎಲ್ಲಾ ಭಾಷೆಗಳ ಮತ್ತು ಎಲ್ಲಾ ಬಣ್ಣಗಳ ಜನರೂ ತಮ್ಮ ದೃಷ್ಟಿಕೋನಗಳಲ್ಲಿ, ನಿಲುವುಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಭಿನ್ನವಾಗಿದ್ದುಕೊಂಡೂ ಒಟ್ಟಾಗಿ ಬದುಕಬಹುದಾದ ಭಾರತವನ್ನು ಕಟ್ಟಬೇಕೇ ಅಥವಾ ಬಲವಂತ ಮತ್ತು ದಬ್ಬಾಳಿಕೆಗಳ ಬಳಸಿ ಎಲ್ಲಾ ಭಿನ್ನತೆಗಳನ್ನು ಅಳಿಸಿ ಹಾಕಿದ ಏಕರೂಪೀ ಭಾರತವನ್ನು ನಿರ್ಮಿಸಬೇಕೇ?

ಏನನ್ನಾದರೂ ಕಟ್ಟಬೇಕಿದ್ದರೆ ನಾವು ಹೃದಯಗಳನ್ನು ಗೆಲ್ಲಬೇಕಾಗುತ್ತದೆ. ವಿದ್ವಾಂಸರನ್ನೂ ವಿದ್ಯಾರ್ಥಿಗಳನ್ನೂ ಮೂರ್ಖರಂತೆ ನಡೆಸಿಕೊಂಡರೆ, ಭಿನ್ನಮತದ ಧ್ವನಿಗಳನ್ನು ಹೊಸಕಿ ಹಾಕಲು ಹೊರಟರೆ ಭಾರತ ಒಡೆದು ಚೂರಾಗುತ್ತದೆಯೇ ಹೊರತು ಯಾರೋ ಕೆಲವರು ಒಂದೆರಡು ಭಾರತ ವಿರೋಧಿ ಘೋಷಣೆಗಳು ಕೂಗಿದಾಗಲಲ್ಲ. ಭಾರತದ ಭಿನ್ನ ಪ್ರದೇಶಗಳಿಂದ ಬಂದ, ತಮ್ಮ ಕಲಿಕೆಯಲ್ಲಿ ಅತ್ಯುನ್ನತ ಗುಣಮಟ್ಟ ಸಾಬೀತು ಮಾಡಿರುವ ಈ ಯುವಜನರೇಕೆ ಈ ಬಗೆಯ ಘೋಷಣೆಗಳನ್ನು ಕೂಗುತ್ತಾರೆ ಎಂಬುದರ ಬಗ್ಗೆ ನಾವು ಚಿಂತಿಸಿ ಕಾರ್ಯಪ್ರವೃತ್ತರಾಗಬೇಕಿದೆ. ನಾವು ಅವರ ಹೃದಯ ಮತ್ತು ಮನಸ್ಸುಗಳನ್ನು ಗೆದ್ದು ಭಾರತವನ್ನು ಕಟ್ಟಬೇಕಾಗಿದೆ. ಆ ಮೂಲಕ ಭಾರತ ನಮ್ಮ ಒಲವಿನ ಭಾರತ ಮಾತೆಯನ್ನು ರಕ್ಷಿಸಬೇಕಾಗಿದೆ.

(ಲೇಖಕಿ ಜೆಎನ್‌ಯುನ ಹಳೆಯ ವಿದ್ಯಾರ್ಥಿ. ಈಗ ಬೆಂಗಳೂರಿನಲ್ಲಿರುವ ಸ್ವತಂತ್ರ ಸಂಶೋಧನಾ ಸಂಸ್ಥೆಯೊಂದರ ಮುಖ್ಯಸ್ಥೆ. ಇಲ್ಲಿರುವುದು ಅವರ ವೈಯಕ್ತಿಕ ಅಭಿಪ್ರಾಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT