ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ನಮ್‌ ಮಾಮ ಗ್ರೇಟು!

Published 29 ಏಪ್ರಿಲ್ 2024, 1:30 IST
Last Updated 29 ಏಪ್ರಿಲ್ 2024, 1:30 IST
ಅಕ್ಷರ ಗಾತ್ರ

‘ಬೆಂಗಳೂರಿಗೆ ಈ ಸಲನೂ ಕನಿಷ್ಠ ಮತದಾನದ ಕಿರೀಟ ಸಿಕ್ಕೈತಿ. ಈ ವ್ಯಾಪ್ತಿಯ ಮೂರು ಎಂ.ಪಿ. ಕ್ಷೇತ್ರದಾಗೂ ಕಡಿಮೆ ಮತದಾನ’ ಎಂದೆ ಬೇಸರದಿಂದ.

‘ಐ.ಟಿ ನಗರಿ ಮಣ್ಣುಮಸಿ ಅಂತೆಲ್ಲ ಹಾರಾಡ್ತೀ ರಲ್ಲ, ಈಗ ಗೊತ್ತಾತೇನ್‌ ನಿಮ್ಮ ಅಸಲಿಯತ್ತು. ಅದೇ ನೋಡು… ಈ ಹುಡುಗಿ ಲಂಡನ್ನಿಂದ ಮಂಡ್ಯಕ್ಕೆ ವೋಟು ಮಾಡಕ್ಕೆ ಅಂತನೇ ಬಂದಾಳಂತೆ’ ಬೆಕ್ಕಣ್ಣ ಹೆಮ್ಮೆಯಿಂದ ಸುದ್ದಿ ಓದಿತು.

‘ಮಂಡ್ಯದ ಎನ್‌ಆರ್‌ಐಗಳು ಭಾಳ ಮಂದಿ ಹಿಂಗೆ ವೋಟ್‌ ಮಾಡಕ್ಕೆ ಅಂತನೇ ವಾಪಸು ಬಂದಿರಬಕು, ಅದಕ್ಕೇ ಮಂಡ್ಯದಾಗೆ ಶೇ 81 ಮತದಾನ ಆಗೈತಿ’ ಎಂದೆ.

‘ಏನಿಲ್ಲ... ನಮ್‌ ಕುಮಾರಣ್ಣ ತೆಲಿಮ್ಯಾಗೆ ಕಮಲ ಹೊತ್ತುಕೊಂಡು ಪ್ರಚಾರ ಮಾಡಿದ್ದಕ್ಕೆ ಅಲ್ಲಿ ಮತದಾನ ಅಷ್ಟು ಪ್ರಮಾಣದಲ್ಲಿ ಆಗೈತಿ!’ ಬೆಕ್ಕಣ್ಣ ಮೀಸೆ ತಿರುವಿತು.

‘ಮಂಡ್ಯದ ಮಂದಿ ಶಾಣ್ಯಾರು, ಮತದಾನ ಮಾಡ್ಯಾರೆ. ಅದ್ರಾಗೆ ಕುಮಾರಣ್ಣನ ಕರಾಮತ್ತು ಏನೈತಲೇ?’

‘ಚುನಾವಣೆದಾಗೆ ಗೆದ್ದು ಕೃಷಿ ಮಂತ್ರಿಯಾಗಿ, ಮೋದಿಮಾಮನ ಜೋಡಿ ಸೇರಿ ರೈತರ ಸೇವಾ ಮಾಡತೀನಿ ಅಂತ ಮಾತು ಕೊಟ್ಟಿದ್ದಕ್ಕೆ ಭಾಳ ಮಂದಿ ಮತದಾನ ಮಾಡ್ಯಾರೆ’ ಬೆಕ್ಕಣ್ಣ ಉಲಿಯಿತು.

‘ಅಲ್ಲಲೇ… ಕರುನಾಡಿಂದ ಅಷ್ಟೊಂದು ಮಂದಿ ಲೋಕಸಭೆಗೆ, ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ರೂ ನಮಗೆ ಬರ ಪರಿಹಾರ ಕೊಡಿಸಲಿಲ್ಲ. ನಿರ್ಮಲಕ್ಕನ್ನ ಎರಡು ಸಲ ಇಲ್ಲಿಂದನೇ ರಾಜ್ಯಸಭೆಗೆ ಕಳಿಸಿದ್ರೂ ಏನೂ ಉಪಯೋಗಿಲ್ಲ. ಇನ್ನು ರೈತರಿಗೆ ಕುಮಾರಣ್ಣ-ಮೋದಿಮಾಮನ ಜೋಡಿ ಸೇವೆಯೊಂದು ಬಾಕಿ ಉಳಿದೈತಿ’.

‘ನೀ ಸುಮ್‌ಸುಮ್ನೆ ಹಂಗಿಸಬ್ಯಾಡ. ಚುನಾವಣೆ ನೀತಿ ಸಂಹಿತೆ ಜಾರಿಲಿದ್ರೂ ಮೋದಿಮಾಮ ಕರ್ನಾಟಕಕ್ಕೆ ಈಗ ಸುಮಾರು ಮೂರೂವರೆ ಸಾವಿರ ಕೋಟಿ ಬರ ಪರಿಹಾರದ ರೊಕ್ಕ ಕೊಟ್ಟಿಲ್ಲೇನ್?‌’

‘ಅವರು ತಮ್ಮ ಕಿಸೆದಾಗಿಂದ ತೆಗೆದು ಕೊಟ್ಟಾರೇನು? ಸುಪ್ರೀಂ ಕೋರ್ಟು ಚಲೋತ್ನಾಗೆ ಚಾಟಿ ಬೀಸಿದ ಮ್ಯಾಗೆ ಕೊಟ್ಟಾರೆ. ಇಷ್ಟಾಗಿ, ನಾವು ಕೇಳಿದ್ದರಲ್ಲಿ ಕಾಲುಭಾಗನೂ ಕೊಟ್ಟಿಲ್ಲ’.

‘ಕೋರ್ಟು ಹೇಳಿದ್ದನ್ನು ಒಪ್ಯಾರೆ ಅಂದ್ರೆ ನಮ್ ಮೋದಿಮಾಮ ಎಷ್ಟ್‌ ಗ್ರೇಟು ಹೌದಿಲ್ಲೋ’ ಬೆಕ್ಕಣ್ಣನ ವಿತಂಡವಾದಕ್ಕೆ ನಾನು ಬೆಪ್ಪಾದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT