ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ವೈವಾಹಿಕ ಅತ್ಯಾಚಾರ – ಪವಿತ್ರ ಬಂಧಕ್ಕೆ ಅತ್ಯಾಚಾರ ಆರೋಪದ ನರಳಿಕೆ ಏಕೆ?

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದು ಸರಿಯಾದ ಕ್ರಮವೇ?
Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

‘ವಿವಾಹ’ ಎಂಬುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಹಾಗೂ ಸಂಬಂಧಗಳನ್ನು ಬೆಸೆಯುವ ಬಂಧ. ಇದು ಒಂದು ಗಂಡು ಹಾಗೂ ಹೆಣ್ಣಿನ ಜೀವನದಲ್ಲಿ ಪ್ರಮುಖವಾದ ಘಟ್ಟವಾಗಿದ್ದು, ಎರಡು ಜೀವಗಳಷ್ಟೇ ಅಲ್ಲದೇ, ಎರಡು ಕುಟುಂಬಗಳನ್ನೂ ಬೆಸೆಯುತ್ತದೆ. ವಿವಾಹದಪವಿತ್ರ ಸಂಬಂಧವು ಮುಂದಿನ ಪೀಳಿಗೆಯ ಭವಿಷ್ಯದ ಮೇಲೂ ಪ್ರಭಾವವನ್ನು ಬೀರುತ್ತದೆ. ವೈವಾಹಿಕ ಸಂಬಂಧಗಳು ಉತ್ತಮ ಸಮಾಜದ ರೂಪುಗೊಳ್ಳುವಿಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾಗಾಗಿ ಅದರ ಪಾವಿತ್ರ್ಯಕ್ಕೆ ಯಾವುದೇ ಧಕ್ಕೆಯಾಗದಂತಹ ಕಾನೂನುಗಳನ್ನು ನಮ್ಮಶಾಸಕಾಂಗವು ರೂಪಿಸುತ್ತಾ ಬಂದಿದೆ. ಆದರೆ ಕ್ರಮೇಣವಾಗಿ ವೈವಾಹಿಕ ಜೀವನದಲ್ಲಿಸಾಮರಸ್ಯದ ಕೊರತೆಯಿಂದಾಗಿ ದಂಪತಿಗಳು ವಿವಾಹ ವಿಚ್ಛೇದನ ಕೋರಿಯೋಅಥವಾ ಇನ್ನಾವುದೋ ದೂರನ್ನು ನೀಡುವುದರ ಮೂಲಕವೋ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಪರಿಣಾಮವಾಗಿ ವೈವಾಹಿಕ ಸಂಬಂಧಗಳು ತಮ್ಮ ಬೆಸುಗೆ ಹಾಗೂಪಾವಿತ್ರ್ಯವನ್ನು ಕಳೆದುಕೊಳ್ಳಲಾರಂಭಿಸಿವೆ.

ಇಂತಹುದೇ ಒಂದು ಅಪಾಯಕಾರಿ ಬೆಳವಣಿಗೆಯಲ್ಲಿ, ನಮ್ಮ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 375ರ ಅಡಿಯಲ್ಲಿ ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸಬೇಕೆಂದು ನೀಡಿರುವ ಆದೇಶ, ವೈವಾಹಿಕ ಜೀವನದ ಪಾವಿತ್ರ್ಯವನ್ನುಬುಡಮೇಲು ಮಾಡುವಂತಿದೆ. ಒಂದು ವೇಳೆ ಇಂತಹ ತಿದ್ದುಪಡಿಯಾದರೆ, ದಂಪತಿ ನಡುವಣಪವಿತ್ರವಾದ ದೈಹಿಕ ಸಂಬಂಧ ಅತ್ಯಾಚಾರವೆಂಬ ಆಪಾದನೆಯಿಂದ ನರಳಲಾರಂಭಿಸುತ್ತದೆ.ಮಹಿಳೆಯರ ಸಬಲೀಕರಣಕ್ಕಾಗಿಈಗಾಗಲೇ ರೂಪಿಸಿರುವ ಹಲವು ಕಾಯ್ದೆಗಳದುರುಪಯೋಗವಾಗುತ್ತಾ, ಪತಿ ಹಾಗೂ ಆತನ ಕುಟುಂಬದವರ ವಿರುದ್ಧ ಮಹಿಳೆಯರು ಸುಳ್ಳುಪ್ರಕರಣಗಳನ್ನು ದಾಖಲಿಸುವುದು ಹೆಚ್ಚಾಗಿದೆ. ದಾಂಪತ್ಯದಲ್ಲಿ ಉಂಟಾಗುವ ಸಣ್ಣ ಪುಟ್ಟಸಮಸ್ಯೆಗಳನ್ನೂ ತಮ್ಮಲ್ಲಿಯೇ ಬಗೆಹರಿಸಿಕೊಳ್ಳದೆ ಸಂಬಂಧಗಳನ್ನು ಕಡಿದುಕೊಳ್ಳಲು ದಂಪತಿಗಳು ಮುಂದಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈವಾಹಿಕ ಜೀವನದ ಭಾಗವಾಗಿ ದಂಪತಿಗಳನಡುವೆ ನೈಸರ್ಗಿಕವಾಗಿ ಏರ್ಪಡುವ ದೈಹಿಕ ಸಂಪರ್ಕವನ್ನು ಅತ್ಯಾಚಾರವೆಂದು ಬಿಂಬಿಸಿ ಗಂಡನಮೇಲೆ ಪ್ರಕರಣವನ್ನು ದಾಖಲಿಸಿದರೆ, ತಾನು ನಿರ್ದೋಷಿಯೆಂದು ತೋರಿಸಲು ಗಂಡನ ಬಳಿಯಾವುದೇ ಪುರಾವೆಗಳು ಇರುವುದಿಲ್ಲ. ನಾಲ್ಕು ಗೋಡೆಗಳ ಮಧ್ಯೆ, ಏರ್ಪಡುವ ಪವಿತ್ರ ಸಂಬಂಧಜಗತ್ತಿನ ಮುಂದೆ ಚರ್ಚೆಗೆ ಒಳಪಟ್ಟು, ಆರೋಪ ಪ್ರತ್ಯಾರೋಪಗಳ ನಡುವೆ ಇಬ್ಬರಮಾನಹಾನಿಯಾಗುತ್ತದೆ. ಮದುವೆ ಎಂಬುದು ಖಾಸಗಿ ಜೀವನಕ್ಕೆ ಸಂಬಂಧಪಟ್ಟಿದ್ದು,ಅಂತಹ ಸಂಬಂಧಗಳ ಮಧ್ಯೆ ಕಾನೂನಿನ ಹಸ್ತಕ್ಷೇಪ ಸರಿಯಲ್ಲ. ವಿವಾಹವೆನ್ನುವುದು ಗಂಡು ಹಾಗೂ ಹೆಣ್ಣು ಪರಸ್ಪರ ಒಪ್ಪಿ ತಮ್ಮನ್ನು ತೊಡಗಿಸಿಕೊಳ್ಳುವ ಬಂಧ. ಕಾನೂನಿನ ಚೌಕಟ್ಟಿನೊಳಗೆ ಇಂತಹ ಪವಿತ್ರವಾದ ಸಂಬಂಧವನ್ನು ಒಳಪಡಿಸಿದರೆ, ಪತ್ನಿಯು ತನ್ನ ಪತಿಯನ್ನು ಹೆದರಿಸಲು ಇದನ್ನು ಒಂದು ಅಸ್ತ್ರವನ್ನಾಗಿ ಬಳಸಬಹುದು.

ಇಲ್ಲಿಯವರೆಗೂ ಭಾರತ ದಂಡ ಸಂಹಿತೆಯ ಸೆಕ್ಷನ್‌ 375ರಡಿಯಲ್ಲಿ ದಂಪತಿಗಳ ನಡುವಿನದೈಹಿಕ ಸಂಬಂಧವನ್ನು ಅತ್ಯಾಚಾರದ ಪರಿಧಿಯೊಳಗೆ ತಂದಿಲ್ಲ. ಕಾನೂನನ್ನು ರೂಪಿಸಿದ ನಮ್ಮ ಶಾಸಕಾಂಗವು ವೈವಾಹಿಕ ಸಂಬಂಧಗಳನ್ನು ಶಿಥಿಲಗೊಳಿಸಬಾರದೆಂಬ ದೂರದೃಷ್ಟಿಯಿಂದಲೇಅಂತಹ ಕಾನೂನನ್ನು ರೂಪಿಸಿಲ್ಲ. ಇಂತಹ ತಿದ್ದುಪಡಿಯು ವೈವಾಹಿಕ ಸಂಬಂಧಗಳ ಮಧ್ಯೆ ಅತೀವವಾದ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಶಾಸಕಾಂಗವು ವಿಧಿಸಲು ಇಚ್ಛಿಸದ ಕಾನೂನನ್ನು ಅನುಷ್ಠಾನಗೊಳಿಸಲು ಯತ್ನಿಸುವ ನ್ಯಾಯಾಂಗದ ವಿಧಾನ ಶಾಸಕಾಂಗದ ಮೂಲ ಉದ್ದೇಶವನ್ನೇ ನಾಶಪಡಿಸುತ್ತದೆ.

ಪತಿಯ ವಿರುದ್ಧ ಪತ್ನಿಯು ಅತ್ಯಾಚಾರದ ಆರೋಪವನ್ನು ಹೊರಿಸಿದಾಗ ಅಂತಹ ಆರೋಪಗಳು ಪೂರ್ವಗ್ರಹದಿಂದ ಕೂಡಿದ್ದು, ಪತಿಯು ತನ್ನ ವಿರುದ್ಧದ ಆರೋಪವನ್ನು ಅಲ್ಲಗಳೆಯಲು ಯಾವುದೇ ಪುರಾವೆಯನ್ನು ಒದಗಿಸಲಾಗದೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಏಕೆಂದರೆ ಅದು ಗಂಡ ಹೆಂಡತಿಯ ನಡುವಿನ ಖಾಸಗಿತನಕ್ಕೆ ಒಳಪಟ್ಟಿರುತ್ತದೆ. ಇಂತಹ ಸಂದರ್ಭಗಳಲ್ಲಿ ಬೇರೆ ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ತಿಳಿಯುವಂತೆ ಪತ್ನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವುದರಮುಖಾಂತರ ಹಟಸಂಭೋಗ ನಡೆದಿರುವುದೆಂದು ಹೇಳಲಾಗುವುದಿಲ್ಲ. ಕಾರಣ, ಗಂಡ–ಹೆಂಡತಿ ಮಧ್ಯದ ಸಹಜ ಲೈಂಗಿಕ ಕ್ರಿಯೆಯನ್ನು ಪತ್ನಿಯು ವಿಕೃತಗೊಳಿಸಿ ಹೇಳಿಕೆ ಕೊಡುವಸಾಧ್ಯತೆಯಿರುತ್ತದೆ. ಒಂದು ವೇಳೆ ಗಂಡನೇ ತನ್ನ ಪತ್ನಿಯನ್ನು ಅಸಹಜವಾದ ಲೈಂಗಿಕ ಕ್ರಿಯೆಗೆ ಬಲವಂತಪಡಿಸಿದಲ್ಲಿ ಅದು ಶಿಕ್ಷಾರ್ಹ ಅಪರಾಧವೆಂದು ಐಪಿಸಿಯಲ್ಲಿ ಈಗಾಗಲೇ ಸೂಚಿಸಲಾಗಿದೆ.ಹಾಗಿರುವಾಗ ಸಹಜವಾದ ದಾಂಪತ್ಯ ಜೀವನದ ಭಾಗವಾಗಿ ನಡೆಯುವ ಕ್ರಿಯೆಯನ್ನು ಅತ್ಯಾಚಾರವೆಂದು ಆರೋಪಿಸಲು 375ನೇ ಸೆಕ್ಷನ್‌ಗೆ ತಿದ್ದುಪಡಿ ಮಾಡುವ ಅಗತ್ಯವಿಲ್ಲ.

ಒಂದು ವೇಳೆ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ಅವಳ ಮೇಲೆ ಲೈಂಗಿಕ ದೌರ್ಜನ್ಯವಾದಾಗ ಅಂತಹಪತಿಯಿಂದ ಆಕೆ ವಿವಾಹ ವಿಚ್ಛೇದನ ಪಡೆಯುವ ಪರ್ಯಾಯ ಮಾರ್ಗ ಕಾನೂನಿನಲ್ಲಿದೆ. ಅದಕ್ಕಾಗಿ 375ನೇ ಸೆಕ್ಷನ್‌ಗೆ ತಿದ್ದುಪಡಿ ತರುವ ಅಗತ್ಯವಿಲ್ಲ. ಇಂತಹ ತಿದ್ದುಪಡಿ ತಂದರೆ, ಪತಿಯು ತನ್ನ ಪತ್ನಿಯು ತನ್ನ ಮೇಲೆ ಅತ್ಯಾಚಾರದ ಆರೋಪ ಹೊರಿಸಿ ಶಿಕ್ಷೆಗೆಗುರಿಪಡಿಸಬಹುದೆಂಬ ಆಲೋಚನೆಯಲ್ಲೇ ತನ್ನ ಜೀವನವನ್ನು ಕಳೆಯಬೇಕಾಗುತ್ತದೆ, ಹಾಗೂಅನೈತಿಕ ಸಂಬಂಧಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿರುತ್ತದೆ.

ವಿವಾಹದ ಸಂದರ್ಭದಲ್ಲಿ ಪತಿ ಹಾಗೂ ಪತ್ನಿ ಪರಸ್ಪರ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸುವ ಪ್ರಮಾಣ ಮಾಡಿರುತ್ತಾರೆ. ಇದರ ಅರ್ಥ ಅವರ ನಡುವಿನ ದೈಹಿಕ ಸಂಬಂಧಕ್ಕೂ ಅನ್ವಯಿಸುತ್ತದೆ. ಹಾಗಾಗಿ ‘ಒಪ್ಪಿಗೆ’ಎನ್ನುವುದು ಪ್ರತಿ ಬಾರಿ ಇಲ್ಲಿ ಅನವಶ್ಯಕ. ಒಪ್ಪಿಗೆಯಿಲ್ಲದ ಲೈಂಗಿಕ ಕ್ರಿಯೆಯನ್ನು ಕಾನೂನಿನಡಿಯಲ್ಲಿ ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ. ಪತ್ನಿಯು ತನ್ನ ಪತಿಗೆ ಒಪ್ಪಿಗೆನೀಡಿರುವಳೋ ಇಲ್ಲವೋ ಎನ್ನುವುದನ್ನು ನಿರೂಪಿಸುವುದು ಕಷ್ಟ. ಹಾಗಾಗಿ ಆರೋಪವನ್ನು
ಸಾಬೀತುಪಡಿಸುವ ಹೊಣೆ ಪತಿ ಅಥವಾ ಪತ್ನಿಯ ಮೇಲೆ ಇರುತ್ತದೆ. ನಮ್ಮ ಶಾಸಕಾಂಗವು ವಿವಾಹದ ಹೆಸರಿನಲ್ಲಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯುವ ದಿಸೆಯಲ್ಲಿ ಭಾರ್ತೀಯ ದಂಡ ಸಂಹಿತೆಯಲ್ಲಿ 498 ಎ ಸೆಕ್ಷನ್‌ ಅಳವಡಿಸಿದ್ದಲ್ಲದೆ, ಕೌಟುಂಬಿಕ ದೌರ್ಜನ್ಯದಿಂದ
ಮಹಿಳೆಯರ ರಕ್ಷಣಾ ಕಾಯ್ದೆಯನ್ನು ರೂಪಿಸಿದೆ. ಮಹಿಳೆಯರು ಕುಟುಂಬದಲ್ಲಿ ಗಂಡನಾದಿಯಾಗಿ, ಇತರ ಸದಸ್ಯರು ನೀಡುವ ಯಾವುದೇ ಕಿರುಕುಳವನ್ನು ಸಹಿಸಿಕೊಳ್ಳದೆ, ಅವರನ್ನು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಇದರಲ್ಲಿ ಲೈಂಗಿಕ ದೌರ್ಜನ್ಯವೂ ಸೇರಿದ್ದು, ಪತ್ನಿಯು ಈ ಕಾಯ್ದೆಗಳಡಿಯಲ್ಲಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು.

ಹಾಗಿರುವಾಗ ಪತ್ನಿಯ ಇಚ್ಛೆಗೆ ವಿರುದ್ಧವಾಗಿ ನಡೆಸುವ ಲೈಂಗಿಕ ಕ್ರಿಯೆ ಅತ್ಯಾಚಾರವೆಂದು, ಶಿಕ್ಷಾರ್ಹ ಅಪರಾಧವೆಂದು ತಿದ್ದುಪಡಿಯಾದರೆ, ಇದರಿಂದ ಧನಾತ್ಮಕ ಪರಿಣಾಮಕ್ಕಿಂತ ಋಣಾತ್ಮಕ ಪರಿಣಾಮವೇ ಹೆಚ್ಚಾಗಿರುತ್ತವೆ. ಈಗಾಗಲೇ ವಿವಾಹದ ಮೇಲೆ ನಂಬಿಕೆಯಿಲ್ಲದೆ, ಲಿವ್ ಇನ್ ಮುಂತಾದಸಂಬಂಧಗಳ ಮೊರೆಹೋಗುತ್ತಿರುವ ಯುವ ಪೀಳಿಗೆಯು ಇನ್ನೂ ದಾರಿತಪ್ಪುವ ಸಾಧ್ಯತೆಗಳೇ ಹೆಚ್ಚಾಗುತ್ತವೆ.

ಕಾನೂನಿಗೆ ತಿದ್ದುಪಡಿ ತರುವ ಅಧಿಕಾರ ನ್ಯಾಯಾಂಗಕ್ಕೆ ಇರುವುದಿಲ್ಲ. ಹಾಗಾಗಿ ನ್ಯಾಯಾಂಗವು ನೀಡುವ ಇಂತಹ ಆದೇಶಗಳು ಸಮಾಜವನ್ನು ತಪ್ಪುದಾರಿಗೆ ತಳ್ಳುತ್ತವೆ. ನಮ್ಮ ಸಂವಿಧಾನವು ಮಹಿಳೆಯರಿಗೆ ಎಲ್ಲ ಹಕ್ಕುಗಳನ್ನು ನೀಡಿದೆ. ಲೈಂಗಿಕ ದೌರ್ಜನ್ಯದ ಆರೋಪದಡಿ ಪತಿಯನ್ನು ಶಿಕ್ಷಿಸಲು ಅವಕಾಶ ಕಲ್ಪಿಸಿದಲ್ಲಿ, ಸುಳ್ಳು ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಜನರಿಗೆ ಕಾನೂನಿನ ಮೇಲಿರುವ ನಂಬಿಕೆಯೇ ಹೊರಟುಹೋಗಬಹುದು. ನಮ್ಮ ಪೂರ್ವಜರು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ರೂಪಿಸಿದ ವಿವಾಹವೆಂಬ ಪ್ರಕ್ರಿಯೆ ತನ್ನ ಪಾವಿತ್ರ್ಯವನ್ನೇ ಕಳೆದುಕೊಳ್ಳುತ್ತದೆ. ಪರಸ್ಪರ ಶಿಕ್ಷೆಗೆ ಗುರಿಪಡಿಸುವುದೇ ಸಂಬಂಧಗಳ ಗುರಿಯಾಗುತ್ತದೆ. ತಂದೆ ತಾಯಿಯ ಪೋಷಣೆಯಿಲ್ಲದೆ, ಮಕ್ಕಳು ಮಾನಸಿಕವಾಗಿ ಕುಗ್ಗುವಂತಾಗುತ್ತದೆ. ಮನುಷ್ಯ ಸಂಬಂಧಗಳಿಗೆ ಯಾವುದೇ ಒತ್ತು ನೀಡದೇ ಯಾಂತ್ರಿಕ ಬದುಕಿಗೆ ಒಗ್ಗಿಕೊಳ್ಳುವ ಪ್ರಯತ್ನಪಡುತ್ತಾನೆ. ನ್ಯಾಯಾಂಗ ಹಾಗೂ ಶಾಸಕಾಂಗದ ಉದ್ದೇಶ, ಸಂಬಂಧಗಳನ್ನು ನಿಲ್ಲುವಂತೆ ಮಾಡುವುದೇ ಹೊರತು ಅವುಗಳನ್ನು
ಬೇರ್ಪಡಿಸುವುದಲ್ಲ. ಹಾಗಾಗಿ ಯಾವುದೇ ಕಾನೂನು ರೂಪಿತಗೊಂಡರೂ, ಅದರಿಂದ ಸಮಾಜಕ್ಕೆ ಒಳಿತಾಗಬೇಕು ಹಾಗೂ ಇತರರಿಗೆ ಮಾದರಿಯಾಗಬೇಕು. ಅಸಹಜವಾದ ಲೈಂಗಿಕ ಕ್ರಿಯೆಗೆ ಕಾನೂನಿನಡಿಯಲ್ಲಿ ಸೂಕ್ತವಾದ ಶಿಕ್ಷೆಯೂ ಇರುವಾಗ, ವೈವಾಹಿಕ ಸಂಬಂಧದ ಭಾಗವಾಗಿರುವ ನೈಸರ್ಗಿಕವಾದ ದೈಹಿಕ ಸಂಬಂಧವನ್ನು ಕಾನೂನಿನ ಚೌಕಟ್ಟಿಗೆ ತರುವುದು, ಖಾಸಗಿತನದಹಕ್ಕಿನ ಉಲ್ಲಂಘನೆಯಾಗುತ್ತದೆ; ಇದು ಕಾನೂನಿನ ದುರುಪಯೋಗಕ್ಕೆ ನಾಂದಿಯೂ ಆಗುತ್ತದೆ.

– ಹನುಮಂತರಾಯ

(ಲೇಖಕ: ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT