ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

370ನೇ ವಿಧಿ ಎಲ್ಲಾ ರಾಜ್ಯಗಳಿಗೂ ಬೇಕು

Last Updated 19 ಜೂನ್ 2014, 19:30 IST
ಅಕ್ಷರ ಗಾತ್ರ

ಜಮ್ಮು-–ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಭಾರತೀಯ ಸಂವಿಧಾನದ ೩೭೦ನೇ ವಿಧಿ ಬಗ್ಗೆ ಮುಕ್ತ ಚರ್ಚೆ ನಡೆಯಬೇಕು ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದನಿಯೆತ್ತಿದೆ. ೩೭೦ನೇ ವಿಧಿ ಪ್ರಕಾರ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂವಹನ­ದಂ­ತಹ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ಕೇಂದ್ರ ಸರ್ಕಾರಕ್ಕೆ ಈ ರಾಜ್ಯದಲ್ಲಿ ಕ್ರಮ ಕೈಗೊಳ್ಳಲು ಅಧಿಕಾರ ಇದೆ. ಇವುಗಳನ್ನು ಹೊರತು­ಪಡಿಸಿ,  ಕೇಂದ್ರದ  ತೀರ್ಮಾನಗಳು ಕರ್ನಾ­ಟಕ­ದಂತಹ ಉಳಿದ ರಾಜ್ಯಗಳಿಗೆ ನೇರ­ವಾಗಿ ಅನ್ವಯ ಆಗುವಂತೆ ಜಮ್ಮು–ಕಾಶ್ಮೀರಕ್ಕೆ ಅನ್ವಯಿಸುವುದಿಲ್ಲ.

ನಿಜಕ್ಕೂ ಎಲ್ಲ ರಾಜ್ಯಗಳಿಗೂ ಅನ್ವಯಿಸ­ಬೇಕಾದ ಈ ೩೭೦ನೇ ವಿಧಿಯಿಂದ ಜಮ್ಮು-–ಕಾಶ್ಮೀರದ ಅಭಿವೃದ್ಧಿಗೆ ತೊಂದರೆಯಾಗಿದೆ ಎಂಬ ಮಾತು ಬಿಜೆಪಿಯಿಂದ ಕೇಳಿಬರುತ್ತಿದೆ. ಏಕೆ? ಆರ್ಥಿಕ ಬೆಳವಣಿಗೆಗೂ ೩೭೦ನೇ ವಿಧಿಗೂ ಇರುವ ನಂಟಾದರೂ ಏನು?

ಜಮ್ಮು-–ಕಾಶ್ಮೀರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡ ೭೭ ಮತ್ತು ಹಿಂದೂಗಳ ಜನ­ಸಂಖ್ಯೆ ಶೇಕಡ ೧೧ರಷ್ಟಿದೆ. ಹಿಂದೂ ರಾಷ್ಟ್ರ­ವಾದಿಗಳಿಗೆ ಇದನ್ನು ಅರಗಿಸಿಕೊಳ್ಳ­ಲಾಗು­ವುದಿಲ್ಲ. ೩೭೦ನೇ ವಿಧಿಯಿಂದಾಗಿ ಭಾರ­ತದ ಇತರೆಡೆಗಳಿಂದ ಜನರು ವಲಸೆ ಹೋಗಿ ಆಸ್ತಿ ಮಾಡಿ­ಕೊಳ್ಳಲು ಅವಕಾಶ­ವಿಲ್ಲ ಎಂಬ ಪರಿಸ್ಥಿತಿ ಇರುವು­ದರಿಂದ ಈ ವಿಧಿ­ಯನ್ನು ಸಂಘ ಪರಿವಾರ­ದವರು ವಿರೋಧಿಸು­ವುದು ಅವರ ಮೂಲ ಸಿದ್ಧಾಂ­ತಕ್ಕೆ ಅನುಗುಣವಾಗಿಯೇ ಇದೆ. ಆದರೆ ಇದನ್ನೆಲ್ಲ ನೇರವಾಗಿ ಹೇಳುತ್ತಿಲ್ಲ, ಅಷ್ಟೆ.

ಹಾಗೆಯೇ, ೩೭೦ನೇ ವಿಧಿಗೂ ಪಾಕಿಸ್ತಾನ­ದಿಂದ ಹೊಮ್ಮುವ ಭಯೋತ್ಪಾದನೆಯ ನಿಯಂ­ತ್ರಣಕ್ಕೂ ನಂಟಿಲ್ಲ. ಮೇಲೆ ಹೇಳಿದಂತೆ ರಕ್ಷಣೆ ಈಗಲೂ ಕೇಂದ್ರ ಸರ್ಕಾರದ ಕೈಯಲ್ಲೇ ಇರು­ವುದರಿಂದ ಪಾಕಿಸ್ತಾನದ ಸಮಸ್ಯೆಯನ್ನು ಬಗೆ­ಹರಿಸಲು ಬೇಕಾದುದೆಲ್ಲವೂ ಅದರ ಕೈಯಲ್ಲಿದೆ. ಇರುವ ಅಧಿಕಾರವನ್ನು ಸರಿಯಾಗಿ ಬಳಸಿ­ಕೊಂಡರೆ ಸಾಕಷ್ಟೆ.

ಹಾಗಾದರೆ ಇನ್ನಾವ ನೆಪ­ವನ್ನು ಒಡ್ಡಿ ೩೭೦ನೇ ವಿಧಿಯನ್ನು ರದ್ದುಗೊಳಿಸ­ಬೇಕೆಂಬ ವಾದಕ್ಕೆ ಬೆಂಬಲ ತರಬಹುದು? ಜಮ್ಮು–ಕಾಶ್ಮೀರದಲ್ಲಿ ಭ್ರಷ್ಟಾಚಾರ ಬಹಳವಿದೆ ಎಂಬ ನೆಪವನ್ನು ಒಡ್ಡುವ ಪ್ರಯತ್ನ ಕೆಲವು ಕಡೆ ನಡೆದಿದೆ. ಆದರೆ ಬಿಜೆಪಿಯ ಕೆಲವು ನಾಯಕರ ಮೇಲೂ ಭ್ರಷ್ಟಾಚಾರದ ಆರೋಪಗಳಿರು­ವುದ­ರಿಂದ ಅದನ್ನು ಕೂಡ ಹೆಚ್ಚು ಬಳಸಿಕೊಳ್ಳಲು ಆಗುವುದಿಲ್ಲ.

ಆದ್ದರಿಂದಲೇ ಎಲ್ಲರನ್ನೂ ಮೋಡಿ ಮಾಡುವ ಅಭಿವೃದ್ಧಿ ಎಂಬ ಪದವನ್ನು ಬಳಸಲಾಗುತ್ತಿದೆ. ಜಮ್ಮು-–ಕಾಶ್ಮೀರ ಆರ್ಥಿಕವಾಗಿ ಹಿಂದುಳಿದಿದೆ ಎಂಬ ವಿಷಯವನ್ನು ಹಿಡಿದುಕೊಂಡು ೩೭೦ನೇ ವಿಧಿ­ಯನ್ನು ರದ್ದು ಮಾಡಬೇಕೆಂದು ವಾದಿಸಲು ಸಾಧ್ಯವಾದರೆ ಒಳ್ಳೆಯದಲ್ಲವೇ?

‘೩೭೦ನೇ ವಿಧಿಯನ್ನು ರದ್ದು ಮಾಡುವ ವಿಷಯದಲ್ಲಿ ಮುಖ್ಯವಾದವರೆಲ್ಲರೊಡನೆ ಚರ್ಚಿ­­ಸು­ತ್ತಿದ್ದೇವೆ’ ಎಂದು ಕೇಂದ್ರ ಸರ್ಕಾರ ಹೇಳು­ತ್ತಿದೆ. ಆದರೆ ಈ ಮುಖ್ಯವಾದವರು ಯಾರೆಂದು ರಾಜ್ಯದ ಮುಖ್ಯಮಂತ್ರಿಗೇ ಗೊತ್ತಿಲ್ಲ!

ನಿಮ್ಮ ಅಭಿವೃದ್ಧಿಗೆ ೩೭೦ನೇ ವಿಧಿಯೇ ಮುಳು­ವಾಗಿದೆ ಎಂದು ತೋರಿಸಲು ಸಾಧ್ಯ­ವಾದರೆ ಅದರಿಂದ ನೇರವಾಗಿ ಲಾಭ ಪಡೆದ ಕಾಶ್ಮೀರಿಗಳೇ ತಮ್ಮ ಅಣ್ಣತಮ್ಮಂದಿರು -ಅಕ್ಕತಂಗಿ­ಯರನ್ನು ಮರೆತು ಅದನ್ನು ರದ್ದುಮಾಡಿರೆಂದು ಮುಂದೆ ಬರು­ತ್ತಾರೆ! ಆದರೆ ಈ ಅಭಿವೃದ್ಧಿ ನಡೆಯು­ವುದಾದರೂ ಹೇಗೆ?

ಯೋಜನೆ ಕೊಂಚ ಹೀಗಿರಬಹುದು. ಅಭಿವೃದ್ಧಿ ತರುತ್ತವೆ ಎನ್ನಲಾದ  ಉದ್ಯಮಗಳು ಉತ್ತರ ಭಾರತದ ಮೇಲ್ಜಾತಿಗಳ ಹಿಡಿತದಲ್ಲಿವೆ. ಇವುಗಳನ್ನು ಬೆಂಬಲಿಸಿ, ವಿದ್ಯೆ ಹೆಚ್ಚಿಸುತ್ತೇವೆ, ಕೆಲಸ ಕೊಡುತ್ತೇವೆ ಮುಂತಾದ ಬೆಳವಣಿಗೆಯ ನೆಪಗಳನ್ನು ಮಾಡಿಕೊಂಡು, ಉತ್ತರಪ್ರದೇಶ, ಬಿಹಾರ ಮುಂತಾದ ಹೆಚ್ಚಿನ ಜನದಟ್ಟಣೆಯ ರಾಜ್ಯ­ಗಳಿಂದ ಹಿಂದೂಗಳನ್ನು ಜಮ್ಮು-– ಕಾಶ್ಮೀರಕ್ಕೆ ಹೋಗಿ ನೆಲೆಸುವಂತೆ ಮಾಡುವುದು. ಒಂದು ಕಡೆ ಅಭಿವೃದ್ಧಿ ನಡೆಯುತ್ತಿದೆ ಎಂದು  ಅಂಕಿ-­ಅಂಶಗಳನ್ನು ತೋರಿಸುವುದಕ್ಕೂ ನೆಲೆ­ಯಾ­ಯಿತು, ಮತ್ತೊಂದು ಕಡೆ ಒಳಗೊಳಗೇ ಹಿಂದಿ ನಾಡಿ­ನಿಂದ  ವಲಸೆಯೂ ಆಯಿತು. ಆದರೆ ಇದೆಲ್ಲ ನಡೆಯಬೇಕಾದರೆ ೩೭೦ನೇ ವಿಧಿ ರದ್ದಾಗಬೇಕು.

ಯಾರ ಅಭಿವೃದ್ಧಿ? ಎಂಬ ಪ್ರಶ್ನೆಯನ್ನು  ಎತ್ತ­ದಂತೆ ವಾದವನ್ನು ನಿರ್ದೇಶಿಸಲಾಗುತ್ತಿದೆ. ಈ  ಪ್ರಶ್ನೆ ಎದ್ದರೆ ವಲಸೆ ಬರುವ ಹಿಂದೂಗಳ ಅಭಿವೃದ್ಧಿ ಎಂಬ ಉತ್ತರ ಅದರೊಡನೆಯೇ ಬರುತ್ತದೆ! ಆಕಸ್ಮಿಕವಾಗಿ ಈ ಪ್ರಶ್ನೆಯನ್ನು ಯಾರಾದರೂ ಕೇಳಿದರೂ ಭಾರತೀಯರದು ಎಂದು­ಬಿಟ್ಟರೆ ಕೆಲಸ ಮುಗಿಯಿತು; ಮೇಲ್ಜಾತಿ ಹಿಂದೂಗಳದು ಎಂದು ಉತ್ತರಿಸಿದರೆ, ‘ನೀವೇ ಕೋಮು­ವಾದಿಗಳು, ಜಾತಿವಾದಿಗಳು. ನಮಗೆ ಭಾರತೀಯ­ರೆಲ್ಲ ಒಂದೇ’ ಎಂದು ಆರೋಪಿಸಿದರಾಯಿತು!

ಈ ಯೋಜನೆಯಿಂದ ಕಾಶ್ಮೀರಿಗಳಿಗೆ ಒಳಿತಾಗುತ್ತದೆ ಎಂದು  ಹೇಳಲಾಗುತ್ತಿದೆ. ಇವೆ­ಲ್ಲವೂ ಸಾಧ್ಯವಾಗಬೇಕಾದರೆ ೩೭೦ನೇ ವಿಧಿ­ಯನ್ನು ರದ್ದುಗೊಳಿಸಬೇಕು ಎಂಬ ವಾದ­ವನ್ನು ಇಡಲಾಗುತ್ತಿದೆ. ಆದರೆ ಈ ವಿಧಿಯೇನಾದರೂ ರದ್ದಾದರೆ ಕಾಶ್ಮೀರಿಗಳಿಗೇ ನಷ್ಟ.- ಮಿಕ್ಕವರಿಗೆಲ್ಲ ಲಾಭವೇ! ಈ ನಷ್ಟವಾಗಲಿ ಲಾಭವಾಗಲಿ ಬಹಳ ಬೇಗ ಆಗುವಂಥದ್ದಲ್ಲ. ಆದರೆ ಕಾರ್ಯಸೂಚಿ ಮುಂದಕ್ಕೆ ಸಾಗಬೇಕಷ್ಟೆ.

ಯಾರಿಗೂ ಗೊತ್ತಾಗ­ದಷ್ಟು ನಿಧಾನವಾಗಿ ಸಾಗಿ, ಯಾರೊಬ್ಬರನ್ನೂ ಈ ಕಾರ್ಯಸೂಚಿಗೆ ಜವಾಬ್ದಾರರನ್ನಾಗಿ ಬೊಟ್ಟು ಮಾಡಿ ತೋರಿಸಲು ಆಗದಂತೆ ಮಾಡಿ­ದರೆ ಇನ್ನೂ ಒಳ್ಳೆಯದು. ಎಲ್ಲರಿಗೂ ಒಳ್ಳೆಯ­ದಾಗುತ್ತಿದೆಯೆಂಬ ವಾತಾವರಣವನ್ನು ಸೃಷ್ಟಿಸಿದರೆ ಕೆಲಸ ಮುಗಿಯಿತು.

ವಾಸ್ತವವಾಗಿ ಭಾರತೀಯರೆಲ್ಲರ ಒಳಿತಿಗಾಗಿ ೩೭೦ನೇ ವಿಧಿಯನ್ನು ರದ್ದುಗೊಳಿಸುವುದಲ್ಲ, ಎಲ್ಲಾ ರಾಜ್ಯಗಳಿಗೂ ಅನ್ವಯಿಸುವಂತೆ ಮಾಡಿ ಅದನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಕರ್ನಾ­ಟಕದ ಮಟ್ಟಕ್ಕೆ ಹೇಳುವುದಾದರೆ,  ಉತ್ತರ ಭಾರತದ ಮೇಲ್ಜಾತಿಗಳು  ಇಲ್ಲಿಯ ನಗರಗಳಲ್ಲಿ ಉದ್ಯಮಗಳ ಮೇಲೆ ಹೆಚ್ಚು-ಕಡಿಮೆ ಸಂಪೂರ್ಣ ಹಿಡಿತ ಸಾಧಿಸಿವೆ. ಅವರ ಉದ್ಯಮಗಳಲ್ಲಿ ಕೆಲಸ ಮಾಡು­ವುದಕ್ಕೂ ಅಲ್ಲಿಂದಲೇ ಜನರು ವಲಸೆ ಬರುತ್ತಿದ್ದಾರೆ.

ಅವರು ಸ್ಥಳೀಯ ಭಾಷೆ ಮತ್ತು ಸಂಸ್ಕೃತಿ­ಯನ್ನು ಗೌರವಿಸಬೇಕು ಎಂಬ ಆಶಯ­ದಲ್ಲಿ ಅರ್ಥವೇ ಉಳಿದಿಲ್ಲ. ಇಲ್ಲಿ ಅಭಿವೃದ್ಧಿ­ಯಾಗು­ತ್ತಿದೆ, ಆದರೆ ಕನ್ನಡಿಗರ ಅಭಿವೃದ್ಧಿ ಆಗು­ತ್ತಿಲ್ಲ, ಬರೀ ಕರ್ನಾಟಕದ ಅಭಿವೃದ್ಧಿಯಾಗುತ್ತಿದೆ. ಎಲ್ಲರೂ ಭಾರತೀಯರೆಂಬ ಮೋಡಿಮಂತ್ರಕ್ಕೆ ಸಿಲುಕಿ ಕನ್ನಡಿಗರು ಉತ್ತರ ಭಾರತೀಯರಿಗೆ ತಮ್ಮದೆಲ್ಲವನ್ನೂ ನಿಧಾನವಾಗಿ ನೀಗುತ್ತಿದ್ದಾರೆ.

ಇದನ್ನೆಲ್ಲ ತಡೆಯಲು ಯಾವುದೇ ಸಾಂವಿಧಾನಿಕ ವಿಧಾನಗಳಿಲ್ಲ, ಉತ್ತೇಜಿಸಲು ಸಾಕಷ್ಟಿವೆ; ಆ ವಿಧಾನ­ಗಳನ್ನು ಅತ್ಯಂತ ಸಮರ್ಪಕವಾಗಿ ಬಳಸಿಕೊಳ್ಳಬಲ್ಲ ರಾಷ್ಟ್ರೀಯ ಪಕ್ಷವೂ ಸ್ಪಷ್ಟ ಬಹುಮತ­ದಿಂದ ಆಡಳಿತಕ್ಕೆ ಬಂದಿದೆ. ಸಂವಿ­ಧಾನದ ೩೭೦ನೇ ವಿಧಿ ನಮಗೂ ಅನ್ವಯಿಸು­ವಂತಾಗಬೇಕು ಎಂದು  ಕನ್ನಡಿಗರು ಅರಿತುಕೊಳ್ಳಬೇಕು, ಎಚ್ಚೆತ್ತುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT