ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಕ್ಕನಷ್ಟು ಜಾಣೆಯಲ್ಲ ಇವಳು...

ಪರೀಕ್ಷಾ ಅಂಕಗಳು ಮಕ್ಕಳ ಸಾಮರ್ಥ್ಯದ ಅಳತೆಗೋಲುಗಳಲ್ಲ
Published 26 ಏಪ್ರಿಲ್ 2023, 20:33 IST
Last Updated 26 ಏಪ್ರಿಲ್ 2023, 20:33 IST
ಅಕ್ಷರ ಗಾತ್ರ

ಪರಿಚಿತರೊಬ್ಬರು ಇತ್ತೀಚೆಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ನನ್ನನ್ನು ಭೇಟಿಯಾದಾಗ, ಐದನೇ ತರಗತಿ ಓದುತ್ತಿರುವ ಅವರ ದೊಡ್ಡ ಮಗಳನ್ನು ಪರಿಚಯಿಸುತ್ತಾ ‘ಇವಳು ಬಹಳ ಜಾಣೆ, 96 ಪರ್ಸೆಂಟ್‌ ಮಾರ್ಕ್ಸ್‌ ಪಡೆದಿದ್ದಾಳೆ’ ಎಂದರು. ಮೂರನೇ ತರಗತಿ ಓದುತ್ತಿರುವ ತಮ್ಮ ಇನ್ನೊಬ್ಬ ಮಗಳನ್ನು ಪರಿಚಯಿಸುತ್ತಾ ‘ಅಕ್ಕನಷ್ಟು ಜಾಣೆಯಲ್ಲ ಇವಳು. ಕಡಿಮೆ ಮಾರ್ಕ್ಸ್‌ ತಗೊಂಡಿದ್ದಾಳೆ’ ಎಂದರು. ಮಕ್ಕಳನ್ನು ಹೋಲಿಕೆ ಮಾಡಬೇಡಿ ಎಂದು ಅವರಿಗೆ ಹೇಳುವುದು ಹೇಗೆ ಎಂದು ಯೋಚಿಸುತ್ತಿರುವಾಗಲೇ, ಕಿರಿ ಮಗಳ ಕಣ್ಣಾಲಿಗಳು ತುಂಬಿಬಂದು, ಒಂದೆರಡು ಹನಿ ಕಣ್ಣೀರು ಜಾರಿ ನೆಲ ತಾಕಿದವು.

ಆಗ ನಾನು, ಮಕ್ಕಳ ಮನಸ್ಸು ಸೂಕ್ಷ್ಮವಾಗಿರುತ್ತದೆ, ಅವರನ್ನು ಅಂಕಗಳ ಆಧಾರದ ಮೇಲೆ ಹೋಲಿಸಿ, ಅವಮಾನಿಸುವುದು ಬೇಡ ಎಂದು ಮನವಿ ಮಾಡಿದೆ. ದುಃಖಿತಳಾಗಿದ್ದ ಬಾಲಕಿಗೆ ಒಂದಷ್ಟು ಸಮಾಧಾನದ ಮಾತುಗಳನ್ನಾಡಿದೆ.

ಪರೀಕ್ಷೆ ಮುಗಿದು ಫಲಿತಾಂಶ ಪ್ರಕಟವಾಗುವ ಸಂದರ್ಭದಲ್ಲಿ, ಮಕ್ಕಳು ಪಡೆದ ಅಂಕಗಳ ಆಧಾರದ ಮೇಲೆ ಅವರನ್ನು ಹೊಗಳುವುದು, ಇತರ ಮಕ್ಕಳೊಂದಿಗೆ ಅವರನ್ನು ಹೋಲಿಸಿ ಹೀಯಾಳಿಸುವುದು, ತೆಗಳುವುದನ್ನು ಪೋಷಕರು ಹಾಗೂ ಕೆಲ ಶಿಕ್ಷಕರು ತಮಗರಿವಿಲ್ಲದೇ ‘ಸಹಜ’ ಎಂಬಂತೆ ಮಾಡುತ್ತಾರೆ. ಇದನ್ನು ಮಕ್ಕಳ ಒಳ್ಳೆಯದಕ್ಕಾಗಿಯೇ ತಾವು ಮಾಡುತ್ತಿದ್ದೇವೆ ಎಂದು ಅನೇಕರು ನಂಬುತ್ತಾರೆ ಹಾಗೂ ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ಈ ರೀತಿ ಮಾಡುವುದರಿಂದ ಮಕ್ಕಳು ಮುಂದಿನ ತರಗತಿಗಳಲ್ಲಿ ತಮ್ಮ ಅಂಕ ಗಳಿಕೆಯ ಸಾಮರ್ಥ್ಯವನ್ನು ಉತ್ತಮಪಡಿಸಿಕೊಳ್ಳುತ್ತಾರೆ ಎಂಬ ನಿಲುವು ಅನೇಕರದ್ದಾಗಿರುತ್ತದೆ.

ಮೊನ್ನೆ ಬಂದ ದ್ವಿತೀಯ ಪಿಯು ಫಲಿತಾಂಶದಲ್ಲಿ ಶೇ 95ಕ್ಕೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಅನೇಕ ಪೋಷಕರು, ಇನ್ನೊಂದಷ್ಟು ಅಂಕ ಬರಬೇಕಿತ್ತು ಎಂದು ಹಲುಬುವುದನ್ನು ಗಮನಿಸಿದ್ದೇನೆ. ನನ್ನ ಪರಿಚಿತ ಶಿಕ್ಷಕರೊಬ್ಬರು ಅವರ ಶಾಲೆಯಲ್ಲಿ ನಡೆದ ಪ್ರಕರಣವನ್ನು ನನ್ನೊಂದಿಗೆ ಹಂಚಿಕೊಂಡರು. ಒಂದನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಯ ಪೋಷಕರೊಬ್ಬರು ತಮ್ಮ ಮಗಳು ಎಷ್ಟು ಅಂಕ ತೆಗೆದರೂ ಸಮಾಧಾನವಿಲ್ಲದಂತೆ ವರ್ತಿಸುವುದರ ಜೊತೆಗೆ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಇತರ ವಿದ್ಯಾರ್ಥಿಗಳ ಉತ್ತರಪತ್ರಿಕೆಗಳನ್ನು ತೋರಿಸಲು ಪಟ್ಟುಹಿಡಿಯುತ್ತಾರೆ. ಅತ್ಯುತ್ತಮ ಅಂಕ ಪಡೆಯುವ ಆ ಬಾಲಕಿಯು ‘ನನ್ನ ಅಮ್ಮನಿಗೆ ಎಷ್ಟು ಅಂಕ ತೆಗೆದರೂ ಸಂತೋಷವಿಲ್ಲ’ ಎಂದು ಶಿಕ್ಷಕರ ಹತ್ತಿರ ಬೇಸರ ತೋಡಿಕೊಂಡಿದ್ದಾಳೆ.

ಮಕ್ಕಳನ್ನು ತಮ್ಮ ಓರಗೆಯ ಇತರ ಮಕ್ಕಳೊಂದಿಗೆ ಹೋಲಿಸುವುದರಿಂದ ಅವರಲ್ಲಿ ಆತಂಕ ಹಾಗೂ ಒತ್ತಡ ಉಂಟಾಗುತ್ತವೆ. ಮಕ್ಕಳ ಆತ್ಮಗೌರವಕ್ಕೆ ಕುಂದುಂಟಾಗುತ್ತದೆ. ಅಂಕಗಳು ಮಕ್ಕಳ ಸಾಮರ್ಥ್ಯದ ಅಳತೆಗೋಲುಗಳಲ್ಲ. ಕಡಿಮೆ ಅಂಕಗಳನ್ನು ಗಳಿಸಿ, ಪರೀಕ್ಷೆಯಲ್ಲಿ ಪಾಸಾದ ಅನೇಕರು ತಮ್ಮ ಭವಿಷ್ಯದ ಜೀವನವನ್ನು ಉತ್ತಮವಾಗಿ ಕಟ್ಟಿಕೊಂಡ ಅನೇಕ ಉದಾಹರಣೆಗಳಿವೆ. ಅಂಕಗಳಿಗೆ ವಿಪರೀತ ಪ್ರಾಶಸ್ತ್ಯ ಕೊಡುವುದರಿಂದ ನೈಜ ಕಲಿಕೆಯ ಆನಂದದಿಂದ ಮಕ್ಕಳು ವಂಚಿತರಾಗುವ ಅಪಾಯವಿರುತ್ತದೆ.

ಅಂಕ ಗಳಿಸಲು ವಿದ್ಯಾರ್ಥಿಗಳು ಕಂಠಪಾಠದ ಮೊರೆ ಹೋಗುತ್ತಾರೆ. ಓದಿ, ನೆನಪಿನಲ್ಲಿ ಇಟ್ಟುಕೊಂಡು ಪರೀಕ್ಷೆ ಬರೆದು, ಹೆಚ್ಚು ಅಂಕ ಪಡೆದಲ್ಲಿ ತನ್ನ ಕೆಲಸ ಮುಗಿಯುತು ಎಂಬ ಭಾವನೆ ಮಕ್ಕಳಲ್ಲಿ ಬರುವ ಸಾಧ್ಯತೆ ಇರುತ್ತದೆ. ಶಿಕ್ಷಕರೂ ಅಂಕ ಗಳಿಸುವ ವಿವಿಧ ರೀತಿಯ ತಂತ್ರಗಳನ್ನು ಮಕ್ಕಳಿಗೆ ಕಲಿಸಿಕೊಡುವುದರಲ್ಲಿ ತಮ್ಮ ಶ್ರಮ, ಸಮಯ ವಿನಿಯೋಗಿಸುವ ಕಾರಣ, ಮಕ್ಕಳಿಗೆ ಕಲಿಕೆಯ ನಿಜ ಆನಂದದ ರುಚಿಯನ್ನು ತೋರ್ಪಡಿಸಲು ಅವರಿಗೆ ಸಾಧ್ಯವಾಗುವುದಿಲ್ಲ.

ಅಂಕಗಳಿಗೆ ಅತಿ ಹೆಚ್ಚು ಒತ್ತು ನೀಡುವ ಶಿಕ್ಷಣ ವ್ಯವಸ್ಥೆಯಿಂದ ಮಕ್ಕಳ ವ್ಯಕ್ತಿತ್ವದ ವಿಕಾಸಕ್ಕೆ ಧಕ್ಕೆಯಾಗುತ್ತದೆ. ಅತಿ ಹೆಚ್ಚು ಅಂಕಗಳನ್ನು ಗಳಿಸುವುದು ಮಾತ್ರ ಮನ್ನಣೆ, ಪ್ರಶಂಸೆಗೆ ದಾರಿ ಎಂದು ಎಲ್ಲರೂ ಭಾವಿಸತೊಡಗಿದರೆ ಕಲೆ, ಕ್ರೀಡೆ, ಸಂಗೀತ, ನೃತ್ಯ, ನಾಟಕದಂತಹ ಸೃಜನಶೀಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವವರು ದೊರೆಯದೇ ಸಮಾಜವು ಬಡ ಹಾಗೂ ಕಳಾಹೀನವಾಗುತ್ತದೆ. ಅಂಕ ಗಳಿಕೆಯನ್ನು ನಿರ್ಲಕ್ಷಿಸಲಾಗದು. ಆದಾಗ್ಯೂ ಒಂದೊಂದು ಅಂಕವನ್ನೂ ನೆಪವಾಗಿರಿಸಿಕೊಂಡು, ಇತರ ಮಕ್ಕಳೊಂದಿಗೆ ಹೋಲಿಸುತ್ತಾ ಅವರ ಮನನೋಯಿಸಬಾರದೆಂಬ ತಿಳಿವಳಿಕೆಯನ್ನು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೆ ನೀಡಲು ಇದು ಸಕಾಲ.

ಜೀವನದ ಸವಾಲುಗಳಿಗೆ ಮಕ್ಕಳನ್ನು ಸಜ್ಜುಗೊಳಿಸಲು ಪುಸ್ತಕಗಳ ಜೊತೆಗೆ ಜೀವನಾನುಭವ ಹಾಗೂ ಕೌಶಲ ಅಗತ್ಯ. ಈ ದಿಸೆಯಲ್ಲಿ ಮಕ್ಕಳು ತಯಾರಾಗಬೇಕೆಂದಲ್ಲಿ ಅಂಕ ಪ್ರಧಾನ ವ್ಯವಸ್ಥೆಯಿಂದ ಜೀವನಕೌಶಲ ಕೇಂದ್ರಿತವಾದ ಶಿಕ್ಷಣ ರೂಪಿಸುವೆಡೆಗೆ ಪೋಷಕರನ್ನು ಜಾಗೃತಗೊಳಿಸಬೇಕಾದ ಅವಶ್ಯಕತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT