ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪೇಮೆಂಟ್ಸ್ ಬ್ಯಾಂಕ್– ಎಷ್ಟು ಪ್ರಸ್ತುತ?

ಹಣಕಾಸಿನ ಒಳಗೊಳ್ಳುವಿಕೆಯನ್ನು ಈ ಬ್ಯಾಂಕ್‌ಗಳು ಎಷ್ಟರಮಟ್ಟಿಗೆ ಸಾಧ್ಯವಾಗಿಸಿವೆ ಎಂಬುದು ಪರಿಶೀಲನೆಗೆ ಅರ್ಹವಾದುದು
Published 14 ಏಪ್ರಿಲ್ 2024, 19:18 IST
Last Updated 14 ಏಪ್ರಿಲ್ 2024, 19:18 IST
ಅಕ್ಷರ ಗಾತ್ರ

ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ತನ್ನ ಬಹುತೇಕ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಬ್ಯಾಂಕ್ ಮತ್ತೆ ತನ್ನ ಎಲ್ಲ ಸೇವೆಗಳನ್ನು ಆರಂಭಿಸುವಂತೆ ಆಗುತ್ತದೆಯೇ ಎಂಬುದು ಖಚಿತವಿಲ್ಲ. ಈ ಪೇಮೆಂಟ್ಸ್‌ ಬ್ಯಾಂಕ್‌ಗೆ ನೀಡಿರುವ ಪರವಾನಗಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಿಂದಕ್ಕೆ ಪಡೆಯುತ್ತದೆಯೇ, ಆ ಮೂಲಕ ಈ ಬ್ಯಾಂಕ್‌ನ ಬಾಗಿಲು ಶಾಶ್ವತವಾಗಿ ಮುಚ್ಚುವುದೇ? ಈ ಪ್ರಶ್ನೆಗೂ ಸದ್ಯಕ್ಕೆ ಉತ್ತರ ಇಲ್ಲ.

ಸಾಲ ನೀಡುವ ಅಧಿಕಾರ ಇಲ್ಲದ ಪೇಮೆಂಟ್ಸ್‌ ಬ್ಯಾಂಕ್‌ಗಳನ್ನು ಆರಂಭಿಸಲು ಆರ್‌ಬಿಐ ಮುಂದಾಗಿದ್ದು ಏಕೆ? ವಲಸೆ ಕಾರ್ಮಿಕರಿಗೆ, ಕಡಿಮೆ ವರಮಾನ ಇರುವ ಕುಟುಂಬಗಳಿಗೆ, ಸಣ್ಣ ಉದ್ದಿಮೆಗಳಿಗೆ ಹಾಗೂ ಅಸಂಘಟಿತ ವಲಯದ ಸಂಸ್ಥೆಗಳಿಗೆ ಕಿರು ಉಳಿತಾಯ ಖಾತೆ ಸೇವೆಗಳನ್ನು ಒದಗಿಸುವ ಉದ್ದೇಶವು ಪೇಮೆಂಟ್ಸ್‌ ಬ್ಯಾಂಕ್‌ ಸ್ಥಾಪನೆಯ ಹಿಂದೆ ಇದೆ ಎಂಬ ಮಾತನ್ನು ಆರ್‌ಬಿಐ ಹಿಂದಿನ ದಶಕದಲ್ಲಿ ಹೊರಡಿಸಿದ್ದ ಕರಡು ಮಾರ್ಗಸೂಚಿಯಲ್ಲಿ ಹೇಳಲಾಗಿತ್ತು. ಆ ಸಂದರ್ಭದಲ್ಲಿ ಜನಧನ ಯೋಜನೆಯು ಇನ್ನೂ ಜಾರಿಗೆ ಬಂದಿರಲಿಲ್ಲ. ಪೇಮೆಂಟ್ಸ್‌ ಬ್ಯಾಂಕ್‌ಗಳನ್ನು ಶುರುಮಾಡಿದ್ದರ ಹಿಂದೆ ಇದ್ದ ‘ಹಣಕಾಸಿನ ಒಳಗೊಳ್ಳುವಿಕೆ’ಯ ಉದ್ದೇಶವನ್ನು ಜನಧನ ಖಾತೆಗಳೇ ಹೆಚ್ಚು ಪರಿಣಾಮಕಾರಿಯಾಗಿ ಈಡೇರಿಸಬಲ್ಲವು.

ಪೇಮೆಂಟ್ಸ್‌ ಬ್ಯಾಂಕ್‌ಗಳು ಸಾಲ ನೀಡಲು ಅವಕಾಶ ಇಲ್ಲದುದರ ಪರಿಣಾಮವಾಗಿ, ಈ ಬ್ಯಾಂಕ್‌ಗಳ ಗ್ರಾಹಕರಿಗೆ ಸಿಗುವ ಹಣಕಾಸು ಸೇವೆಗಳ ಸಂಖ್ಯೆ ಬಹಳ ಸೀಮಿತ. ₹ 2 ಲಕ್ಷದ ಮಿತಿಗೆ ಒಳಪಟ್ಟು ಠೇವಣಿ ಇರಿಸುವ ಅವಕಾಶ, ಆನ್‌ಲೈನ್‌ ಅಥವಾ ಭೌತಿಕ ಸ್ವರೂಪದ ಡೆಬಿಟ್ ಕಾರ್ಡ್‌ ಪಡೆಯುವ ಅವಕಾಶ, ಬೇರೆ ಬೇರೆ ಪಾವತಿ ಸೇವೆಗಳನ್ನು ಪಡೆದುಕೊಳ್ಳುವ ಅವಕಾಶ ಹಾಗೂ ಹಣದ ವರ್ಗಾವಣೆ ಮತ್ತಿತರ ಕೆಲವು ಸೇವೆಗಳು ಮಾತ್ರ ಪೇಮೆಂಟ್ಸ್‌ ಬ್ಯಾಂಕ್‌ಗಳ ಮೂಲಕ ಸಿಗುತ್ತವೆ. ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಸೇವೆಯು ವ್ಯಾಪಕವಾಗಿ ಬಳಕೆಗೆ ಬಂದ ನಂತರದಲ್ಲಿ, ಸಣ್ಣ ಮೊತ್ತದ ಹಣ ವರ್ಗಾವಣೆ ಹಾಗೂ ದಿನನಿತ್ಯದ ಬಿಲ್‌ ಪಾವತಿಗಳಿಗೆ ಗ್ರಾಹಕರಿಗೆ ಪೇಮೆಂಟ್ಸ್‌ ಬ್ಯಾಂಕ್‌ ಖಾತೆ ಅನಿವಾರ್ಯವೇನೂ ಅಲ್ಲ. ಯುಪಿಐ ಕಾರಣದಿಂದಾಗಿ ಜನಧನ ಬ್ಯಾಂಕ್ ಖಾತೆಗಳು ಸೇರಿದಂತೆ ಯಾವುದೇ ಬ್ಯಾಂಕ್ ಖಾತೆಯಿಂದ ಪಾವತಿಗಳು ಹಾಗೂ ಹಣ ವರ್ಗಾವಣೆ ಸಲೀಸಾಗಿದೆ. ಇದು ಪೇಮೆಂಟ್ಸ್‌ ಬ್ಯಾಂಕ್‌ ಎಂಬ ಪ್ರತ್ಯೇಕ ವರ್ಗದ ಬ್ಯಾಂಕ್‌ಗಳ ಅಗತ್ಯವನ್ನೇ ಪ್ರಶ್ನಿಸಬಲ್ಲದು.

ಸಾಲ ಸೌಲಭ್ಯ ಸಿಗದೇ ಇರುವುದು ಪೇಮೆಂಟ್ಸ್‌ ಬ್ಯಾಂಕ್‌ಗಳ ಬಹುದೊಡ್ಡ ಮಿತಿ. ಕಡಿಮೆ ವರಮಾನ ಹೊಂದಿರುವವರಿಗೆ, ಸಣ್ಣ ಉದ್ದಿಮೆಗಳಿಗೆ ಹಣಕಾಸಿನ ಒಳಗೊಳ್ಳುವಿಕೆಯ ವಿಚಾರವಾಗಿ ವಾಸ್ತವದಲ್ಲಿ ಇರುವ ಸಮಸ್ಯೆ ಖಾತೆ ತೆರೆಯುವುದಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲ; ಬದಲಿಗೆ, ಅಗತ್ಯ ಸಂದರ್ಭಗಳಲ್ಲಿ ಸಾಲವನ್ನು ಪಡೆಯುವಲ್ಲಿ ಅವರಿಗೆ ಹೆಚ್ಚಿನ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಪರಿಹರಿಸುವ ವಿಚಾರದಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ಗಳಿಂದ ಯಾವುದೇ ನೆರವು ಸಿಗದು. ಕನಿಷ್ಠ ಪಕ್ಷ ಒಂದು ಕ್ರೆಡಿಟ್ ಕಾರ್ಡ್ ಸೌಲಭ್ಯ ಅಥವಾ ಅಡಮಾನ ಸಾಲದ ಸೌಲಭ್ಯ ಕೂಡ ಈ ಬ್ಯಾಂಕ್‌ಗಳಿಂದ ಸಿಗುವುದಿಲ್ಲ. ಹೀಗಿರುವಾಗ, ಹಣಕಾಸಿನ ಒಳಗೊಳ್ಳುವಿಕೆಯನ್ನು
ಪೇಮೆಂಟ್ಸ್‌ ಬ್ಯಾಂಕ್‌ಗಳು ಎಷ್ಟರಮಟ್ಟಿಗೆ ಸಾಧ್ಯವಾಗಿ ಸಿವೆ ಎಂಬುದು ಪರಿಶೀಲನೆಗೆ ಅರ್ಹವಾಗುತ್ತದೆ. ಅಸಂಘಟಿತ ವಲಯದವರಿಗೆ ಸಾಲ ಒದಗಿಸುವ ಕೆಲಸವನ್ನು ಅಥವಾ ಸಣ್ಣ ಉದ್ಯಮ ವಲಯಕ್ಕೆ ಅಗತ್ಯ ಹಣಕಾಸಿನ ನೆರವು ಒದಗಿಸುವ ಕೆಲಸವನ್ನು ಸ್ಥಳೀಯ ಮಟ್ಟದಲ್ಲಿ ಸಹಕಾರ ಸಂಘಗಳು ಬಹುಕಾಲದಿಂದ ಮಾಡುತ್ತಾ ಬಂದಿವೆ ಎಂಬುದು ಇಲ್ಲಿ ಗಮನಾರ್ಹ.

ಪೇಮೆಂಟ್ಸ್‌ ಬ್ಯಾಂಕ್‌ಗಳು ಸಾಂಪ್ರದಾಯಿಕ ಬ್ಯಾಂಕ್‌ಗಳಂತೆ ಶಾಖೆಗಳ ಮೂಲಕ ಸೇವೆಗಳನ್ನು ಒದಗಿಸುವುದಿಲ್ಲ. ಅವುಗಳ ಸೇವೆ ಲಭ್ಯವಾಗುವುದು ಮೊಬೈಲ್‌ ಆ್ಯಪ್‌ಗಳ ಮೂಲಕ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಪೇಮೆಂಟ್ಸ್‌ ಬ್ಯಾಂಕ್‌ಗಳ ಸೇವಾ ಕೇಂದ್ರಗಳು ಇವೆಯಾದರೂ, ಅವು ಸಾಂಪ್ರದಾಯಿಕ ಬ್ಯಾಂಕ್‌ ಶಾಖೆಗಳ ಮಾದರಿಯಲ್ಲಿ ಇರುವುದಿಲ್ಲ. ಪೇಮೆಂಟ್ಸ್‌ ಬ್ಯಾಂಕ್‌ಗಳು ಹಣಕಾಸಿನ
ಒಳಗೊಳ್ಳುವಿಕೆಯ ಭಾಗವಾಗಿ ಯಾರಿಗೆ ಹೆಚ್ಚು ಸೇವೆ ಒದಗಿಸಲು ಬಯಸುತ್ತವೆಯೋ, ಆ ವರ್ಗದ ಜನರು ಸಂಪೂರ್ಣವಾಗಿ ಡಿಜಿಟಲ್ ವೇದಿಕೆಗಳ ಮೂಲಕವೇ ಬ್ಯಾಂಕಿಂಗ್ ಸೇವೆಗಳನ್ನು ಬಳಸಲು ಮುಂದಾಗಬೇಕು. ಅಲ್ಲದೆ, ಅವರು ಉತ್ತಮ ಇಂಟರ್ನೆಟ್ ಸಂಪರ್ಕವನ್ನು ಒದಗಿಸಬಲ್ಲ ಸ್ಮಾರ್ಟ್‌ಫೋನ್‌ ಹೊಂದಿರುವುದು ಅಗತ್ಯ. ಇದೇ ಕೆಲಸವನ್ನು ಕಿರು ಹಣಕಾಸು ಬ್ಯಾಂಕ್‌ಗಳು (ಸ್ಮಾಲ್‌ ಫೈನಾನ್ಸ್ ಬ್ಯಾಂಕ್‌) ಕೂಡ ಹೆಚ್ಚು ದಕ್ಷವಾಗಿ ನಿರ್ವಹಿಸಬಲ್ಲವು. ಅಲ್ಲದೆ, ಈ ಬಗೆಯ ಬ್ಯಾಂಕ್‌ಗಳು ಕೂಡ ಪೇಮೆಂಟ್ಸ್‌ ಬ್ಯಾಂಕ್‌ಗಳು ಗುರಿಯಾಗಿಸಿಕೊಂಡಿರುವ ಸಮುದಾಯವನ್ನೇ ಹೆಚ್ಚು ಕೇಂದ್ರೀಕರಿಸಿಕೊಂಡು ಸೇವೆ ಒದಗಿಸುವುದಾಗಿ ಹೇಳುತ್ತಿವೆ. ಪಾವತಿ ಸೇವೆ ಹಾಗೂ ಉಳಿತಾಯ ಖಾತೆ ಸೇವೆ ಮಾತ್ರವೇ ಅಲ್ಲದೆ ಇವು ಸಾಲ ಸೌಲಭ್ಯವನ್ನೂ ಒದಗಿಸಬಲ್ಲವು.

ಆರಂಭದಲ್ಲಿ ಒಟ್ಟು 11 ಸಂಸ್ಥೆಗಳಿಗೆ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಪರವಾನಗಿ ನೀಡಲಾಗಿತ್ತು. ಈಗ ಅವುಗಳ ಪೈಕಿ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಗಳ ಸಂಖ್ಯೆ ಆರು ಮಾತ್ರ. ಇವುಗಳಲ್ಲಿ ಹೆಚ್ಚಿನವು ಷೇರುಪೇಟೆಯಲ್ಲಿ ನೋಂದಾಯಿತವಾಗಿಲ್ಲ. ಇವುಗಳ ಬೆಳವಣಿಗೆಯಲ್ಲಿ ಪಾಲು ಹೊಂದುವ ಅವಕಾಶ
ಸಾರ್ವಜನಿಕರಿಗೆ ಇಲ್ಲ. ಪೇಮೆಂಟ್ಸ್‌ ಬ್ಯಾಂಕ್‌ಗಳು ಈಗಿನ ಸ್ವರೂಪದಲ್ಲೇ ಮುಂದುವರಿಯುವುದಾದರೆ, ಈ ಎಲ್ಲ ಮಿತಿಗಳು ಅವುಗಳ ಬೆಳವಣಿಗೆ ಸಾಧ್ಯತೆಯ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT