ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಶಿಕ್ಷೆ, ಶಿಸ್ತುಕ್ರಮ ಮತ್ತು ಶಿಕ್ಷಣ

ಮಕ್ಕಳೊಂದಿಗೆ ಪ್ರೀತಿ, ಕಾಳಜಿ ಹಾಗೂ ಸಮಾಧಾನದಿಂದ ವ್ಯವಹರಿಸುತ್ತಾ ನಮ್ಮನ್ನು ನಾವು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕಾಗಿದೆ
Published 26 ಫೆಬ್ರುವರಿ 2024, 23:30 IST
Last Updated 26 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಧಾರವಾಡ ಜಿಲ್ಲೆಯ ಕಲಘಟಕಿ ತಾಲ್ಲೂಕಿನ ಸರ್ಕಾರಿ ಶಾಲೆಯೊಂದರ ಶಿಕ್ಷಕಿ ಮಕ್ಕಳಿಗೆ ಶಿಕ್ಷೆ ನೀಡಿದ ಸುದ್ದಿ (ಪ್ರ.ವಾ., ಫೆ. 20) ವರದಿಯಾಗಿದೆ. ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷೆ ನೀಡುವ ಸುದ್ದಿಗಳು ಆಗಾಗ್ಗೆ ಮಾಧ್ಯಮ ಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ದೈಹಿಕ ಶಿಕ್ಷೆ ನೀಡುವುದರಿಂದ ಮಕ್ಕಳಿಗೆ ಶಿಸ್ತು ಕಲಿಸಬಹುದು ಮತ್ತು ಒಳ್ಳೆಯ ಶಿಕ್ಷಣ ನೀಡಬಹುದು ಎಂದು ನಂಬುವ ಪೋಷಕರು ಹಾಗೂ ಶಿಕ್ಷಕರು ಜಗತ್ತಿನಾದ್ಯಂತ ಇದ್ದಾರೆ.

ಅಮೆರಿಕದ ಕೆಲವು ರಾಜ್ಯಗಳಲ್ಲಿನ ಸರ್ಕಾರಿ ಶಾಲೆಗಳಲ್ಲಿ ಹಾಗೂ ಮತ್ತೆ ಕೆಲವು ರಾಜ್ಯಗಳಲ್ಲಿನ ಖಾಸಗಿ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದು ಕಾನೂನುಸಮ್ಮತವಾಗಿದೆ. ದೇಶದ ಮೂರನೇ ಒಂದು ಭಾಗದಷ್ಟು ಪೋಷಕರು ತಮ್ಮ ಒಂದು ವರ್ಷದ ಒಳಗಿನ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುತ್ತಾರೆ ಎನ್ನಲಾಗಿದೆ. ಅಲ್ಲಿನ ಮಹಿಳೆಯೊಬ್ಬಳು ತನ್ನ ಮಕ್ಕಳಿಗೆ ಉಗ್ರವಾದ ದೈಹಿಕ ಶಿಕ್ಷೆ ನೀಡಿ, ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ತನ್ನ ಯುಟ್ಯೂಬ್‌ ಚಾನೆಲ್‌ನಲ್ಲಿ ಅಳವಡಿಸಿ, ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಸಮರ್ಥಿಸುವ ಸಂದೇಶಗಳನ್ನು ಅದರಲ್ಲಿ ಹಾಕುತ್ತಿದ್ದಳು. ಇತ್ತೀಚೆಗೆ ಅವಳನ್ನು ಬಂಧಿಸಿ 60 ವರ್ಷಗಳ ಬಂಧನದ ಶಿಕ್ಷೆ ನೀಡಲಾಗಿದೆ. ಮಕ್ಕಳಿಗೆ ಕಿರುಕುಳ, ತೊಂದರೆ ಆಗುತ್ತಿರುವ ಬಗ್ಗೆ ದೂರು ಬಂದರೆ ತಕ್ಷಣ ಶಿಸ್ತುಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಅಮೆರಿಕದಲ್ಲಿದೆ.

ಮಕ್ಕಳು ದೊಡ್ಡವರಂತೆ ಹಕ್ಕುಗಳನ್ನು ಹೊಂದಲು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಜಾಗತಿಕ ಒಡಂಬಡಿಕೆ ಯನ್ನು 1989ರಲ್ಲಿ ರೂಪಿಸಲಾಯಿತು. ಭಾರತವು 1992ರಲ್ಲಿ ಈ ಒಡಂಬಡಿಕೆಗೆ ಸಹಿ ಹಾಕಿದೆ. ವಿಶ್ವದ ಅಧಿಕ ರಾಷ್ಟ್ರಗಳು (194 ರಾಷ್ಟ್ರಗಳು) ಸಹಿ ಹಾಕಿದ ಒಡಂಬಡಿಕೆ ಎಂದರೆ ಅದು ಮಕ್ಕಳ ಹಕ್ಕುಗಳ ಜಾಗತಿಕ ಒಡಂಬಡಿಕೆಯಾಗಿದೆ. ಇದರ ಪ್ರಕಾರ, ಮಕ್ಕಳಿಗೆ 54 ಹಕ್ಕುಗಳನ್ನು ನೀಡಲಾಗಿದ್ದು, ಇವು ವಿಶೇಷ ಮಾನವ ಹಕ್ಕುಗಳಾಗಿವೆ. ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳುವುದು ಸೇರಿದಂತೆ ಅವರಿಗೆ ರಕ್ಷಣೆ, ಆರೈಕೆ ಒದಗಿಸುವುದು, ಅವರ ಅಭಿಪ್ರಾಯಗಳಿಗೆ ಮನ್ನಣೆ ನೀಡುವ ಅವಕಾಶಗಳನ್ನು ಕೊಡಲಾಗಿದೆ. ಈ ಮೂಲಕ, ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಮಕ್ಕಳನ್ನು ಗೌರವದಿಂದ ನಡೆಸಿಕೊಳ್ಳುವ ಹಾಗೂ ಅವರಿಗೆ ದೈಹಿಕ ಶಿಕ್ಷೆಯನ್ನು ನೀಡದೇ ಇರುವ ತೀರ್ಮಾನಕ್ಕೆ ಬಂದಿವೆ.

ಸ್ವೀಡನ್ ದೇಶವು ಮಕ್ಕಳಿಗೆ ದೈಹಿಕ ಶಿಕ್ಷೆಯನ್ನು ನಿಷೇಧಿಸಿದ ಮೊದಲ ರಾಷ್ಟ್ರವಾಗಿದೆ. ಕುಟುಂಬವೂ ಸೇರಿದಂತೆ ಎಲ್ಲೆಡೆ ಮಕ್ಕಳಿಗೆ ದೈಹಿಕ ಶಿಕ್ಷೆ ನೀಡುವುದನ್ನು ಈವರೆಗೆ 65 ರಾಷ್ಟ್ರಗಳು ನಿಷೇಧಿಸಿವೆ. 128 ರಾಷ್ಟ್ರಗಳಲ್ಲಿ ಮಕ್ಕಳಿಗೆ ಶಾಲೆಗಳಲ್ಲಿ ದೈಹಿಕ ಶಿಕ್ಷೆ ನೀಡುವುದನ್ನು ನಿಷೇಧಿಸಲಾಗಿದೆ.

ನಮ್ಮ ದೇಶದಲ್ಲಿನ ಶಾಲೆಗಳಲ್ಲಿ ದೈಹಿಕ ಶಿಕ್ಷೆಯನ್ನು ನಿಷೇಧಿಸಬೇಕೆಂದು ಸುಪ್ರೀಂ ಕೋರ್ಟ್‌ 2000ನೇ ಇಸವಿಯಲ್ಲಿ ತೀರ್ಪು ನೀಡಿತು. ಇದಾದ ನಂತರ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ– 2009ರ ಪ್ರಕಾರ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆಯನ್ನು ನಿಷೇಧಿಸಲಾಗಿದೆ. ಈ ಕಾಯ್ದೆಯ 17ನೇ ವಿಧಿಯ ಅನ್ವಯ ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆ ಮತ್ತು ಮಾನಸಿಕ ಕಿರುಕುಳ ನೀಡುವುದನ್ನು ನಿಷೇಧಿಸಲಾಗಿದೆ ಮತ್ತು ಇದನ್ನು ಉಲ್ಲಂಘಿಸುವವರಿಗೆ ಸೇವಾ ನಿಯಮಾವಳಿಗಳ ಅನುಸಾರವಾಗಿ ಶಿಕ್ಷೆ ನೀಡಬಹುದಾಗಿದೆ.

ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗವು ಶಾಲೆಗಳಲ್ಲಿ ಮಕ್ಕಳಿಗೆ ದೈಹಿಕ ಶಿಕ್ಷೆಯನ್ನು ನಿಷೇಧಿಸಿ ವಿಸ್ತೃತವಾದ ಮಾರ್ಗಸೂಚಿಯನ್ನು ಹೊರಡಿಸಿದೆ. ಅದರ ಅನುಸಾರ, ರಾಜ್ಯದಲ್ಲಿ ಡಿಎಸ್ಇಆರ್‌ಟಿ ನೇತೃತ್ವದಲ್ಲಿ ಒಂದು ತರಬೇತಿ ಮಾದರಿಯನ್ನು ರೂಪಿಸಿ ಶಿಕ್ಷಕರಿಗೆ ತರಬೇತಿ ಪ್ರಾರಂಭಿಸಲಾಗಿದೆ. ಶಿಕ್ಷಕರ ಸಭೆ, ತರಬೇತಿಗಳಲ್ಲಿ ಸಂವಾದ ಮಾಡುವಾಗ ಅನೇಕರು ಮಕ್ಕಳಿಗೆ ದೈಹಿಕ ಶಿಕ್ಷೆ ನೀಡದೇ ಇರುವುದು ಸಮ್ಮತವಲ್ಲ ಎಂದು ಬಲವಾಗಿ ಪ್ರತಿಪಾದಿಸುತ್ತಾರೆ. ಮಕ್ಕಳು ತಿಳಿಯದೆ ಮಾಡುವ ತಪ್ಪಿಗೂ ಕಾನೂನನ್ನು ಉಲ್ಲಂಘಿಸುವ ಅಪರಾಧಗಳಿಗೂ ಇರುವ ವ್ಯತ್ಯಾಸ ವನ್ನು ಅನೇಕರು ಗುರುತಿಸದೇ ಇರುವಂತೆ ಮಾತನಾಡುತ್ತಾರೆ.

ಮಕ್ಕಳಿಗೆ ದೈಹಿಕ ಶಿಕ್ಷೆ ನೀಡದೇ ಇದ್ದಲ್ಲಿ ಅವರನ್ನು ಸರಿದಾರಿಗೆ ತರುವುದು ಹೇಗೆ, ಅವರು ತೋರುವ ಅಶಿಸ್ತು, ಅವಿಧೇಯತೆಯನ್ನು ಸರಿಪಡಿಸುವುದು ಹೇಗೆ ಎಂಬ ಗೊಂದಲ ಅನೇಕರದ್ದಾಗಿರುತ್ತದೆ. ಮಕ್ಕಳು ಮಾಡುವ ಸಣ್ಣಪುಟ್ಟ ತಪ್ಪುಗಳನ್ನು ನಿರ್ಲಕ್ಷಿಸು ವುದು ಹಾಗೂ ಅವರು ಮಾಡುವ ಗಂಭೀರವಾದ ತಪ್ಪುಗಳನ್ನು ಸರಿಪಡಿಸಲು ಮನೋವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳುವ ಕುರಿತಂತೆ ಶಿಕ್ಷಕರಿಗೆ ಹೆಚ್ಚಿನ ಮಾಹಿತಿ, ತರಬೇತಿ ಅಗತ್ಯವಾಗಿದೆ. ಈ ಕುರಿತ ಎಲ್ಲ ವಿವರಗಳು ಡಿಎಸ್ಇಆರ್‌ಟಿ ರಚಿಸಿರುವ ತರಬೇತಿ ಸಂಚಿಕೆಯಲ್ಲಿ ಇವೆ. ತರಬೇತಿ ಮಾತ್ರದಿಂದ ಬದಲಾವಣೆ ಸಾಧ್ಯವಾಗದು. ಮಕ್ಕಳನ್ನು ಅರ್ಥ ಮಾಡಿಕೊಳ್ಳುವ ಬಗೆ ಹಾಗೂ ಅವರಿಗೆ ಶಿಕ್ಷಣ ನೀಡುವಲ್ಲಿ, ಶಿಸ್ತು ಮೂಡಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಇರುವ ಸಾಹಿತ್ಯವನ್ನು ಓದಿಕೊಂಡು ಚಿಂತನಶೀಲರಾಗುವುದು ಪರಿಹಾರವಾಗಬಲ್ಲದು. ಅವರೊಂದಿಗೆ ಒಡನಾಡುವಾಗ ಒಂದಷ್ಟು ಪ್ರೀತಿ, ಕಾಳಜಿ ಹಾಗೂ ಸಮಾಧಾನದಿಂದ ವ್ಯವಹರಿಸುತ್ತಾ ನಮ್ಮನ್ನು ನಾವು ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು. ಈ ರೀತಿಯ ನಿರಂತರ ಪ್ರಯೋಗಶೀಲತೆಯು ಮಕ್ಕಳಸ್ನೇಹಿ ಚಿಂತನೆಗಳನ್ನು ಗಟ್ಟಿಗೊಳಿಸಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT