ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಅಧಿಕಾರ ರಾಜಕಾರಣ ಮತ್ತು ಭಾಷಾ ಸೌಜನ್ಯ

ಸಾರ್ವಜನಿಕ ಬದುಕಿನಲ್ಲಿ ಎರಡು– ಮೂರು ದಶಕಗಳಿಂದ ನಾವು ಆಲಿಸುತ್ತಿರುವ ರಾಜಕೀಯ ಪರಿಭಾಷೆಯನ್ನು ಮರುಪರಿಷ್ಕರಣೆಗೆ ಒಳಪಡಿಸಬೇಕಿದೆ
Last Updated 17 ಜುಲೈ 2022, 18:30 IST
ಅಕ್ಷರ ಗಾತ್ರ

ಲೋಕಸಭಾ ಕಾರ್ಯಾಲಯವು ‘ಅಸಂಸದೀಯ ಅಭಿವ್ಯಕ್ತಿ’ಗಳಿಗೆ ಸಂಬಂಧಿಸಿದಂತೆ ಹೊಸದಾಗಿ ಈಚೆಗೆ ರೂಪಿಸಿರುವ ಕಿರು ಹೊತ್ತಗೆಯು ವಿವಾದ ಸೃಷ್ಟಿಸಿದೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಪದಗಳಿಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಇದರ ಹಿಂದೆ ಇರುವ ‘ರಾಜಕೀಯ’ವನ್ನು ಪಕ್ಕಕ್ಕೆ ಇಟ್ಟು, ನಮ್ಮ ಜನಪ್ರತಿನಿಧಿಗಳು ಪರಸ್ಪರ ದೋಷಾರೋಪದ ಸಂದರ್ಭದಲ್ಲಿ ಬಳಸುವ ಭಾಷೆ, ಪದಗಳ ಬಗೆಗೆ ಗಮನಹರಿಸಿದರೆ, ಅವು ಭವಿಷ್ಯದ ಪೀಳಿಗೆಗೆ ಯಾವ ರೀತಿಯಲ್ಲೂ ಮಾರ್ಗದರ್ಶಕವಾಗಿ ಇರುವುದಿಲ್ಲ ಎಂಬುದು ಮನದಟ್ಟಾಗುತ್ತದೆ.

1950-60ರ ದಶಕದ ಶಾಸನಸಭೆಗಳ ಕಲಾಪಗಳನ್ನೂ ಈ ಹಿಂದಿನ 30 ವರ್ಷಗಳ ಕಲಾಪಗಳನ್ನೂ ಹೋಲಿಸಿ ನೋಡಿದರೆ ಎರಡು ಅಂಶಗಳು ಸ್ಪಷ್ಟವಾಗುತ್ತವೆ. ಮೊದಲನೆಯದು, ಚುನಾಯಿತ ಪ್ರತಿನಿಧಿಗಳು ಸಾಂಸ್ಕೃತಿಕ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಕಳೆದುಕೊಂಡಿರುವುದು.
ಎರಡನೆಯದು, ಜನಪ್ರತಿನಿಧಿಗಳು ಬಳಸುವ ದೋಷಾರೋಪದ ಭಾಷೆ ಮತ್ತು ವಿಮರ್ಶಾತ್ಮಕ ಪರಿಭಾಷೆ ಎರಡೂ ತಮ್ಮ ಘನತೆಯನ್ನು ಕಳೆದುಕೊಂಡಿರುವುದು.

ಕಲಾಪಗಳಲ್ಲಿ ಭಾಷಾ ಸೌಜನ್ಯ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬೇಕಾದುದು ಅಪೇಕ್ಷಣೀಯ. ಆದರೆ ನಮ್ಮ ಸಂಸದರು ಮತ್ತು ಶಾಸಕರು ಇವುಗಳನ್ನು ಗಾಳಿಗೆ ತೂರಿ ಬಹಳ ವರ್ಷಗಳೇ ಆಗಿವೆ. ಪರಿಣಾಮವಾಗಿ ಕಲಾಪದ ಗುಣಮಟ್ಟ ಕುಸಿಯತೊಡಗಿದೆ. ಈ ಕುಸಿತಕ್ಕೆ ಪಕ್ಷ
ಭೇದವಿಲ್ಲದೆ ಎಲ್ಲರೂ ಕೊಡುಗೆ ನೀಡಿದ್ದಾರೆ.

ತಮ್ಮ 13 ದಿನಗಳ ಸರ್ಕಾರವು ಪತನವಾಗುತ್ತದೆ ಎಂಬ ಅರಿವಿದ್ದರೂ, ಸಂಸತ್ತಿನಲ್ಲಿ ವಿಶ್ವಾಸಮತ ಕೋರುವ ಸಂದರ್ಭದಲ್ಲಿ 1996ರ ಮೇ ತಿಂಗಳಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮಾಡಿದ ಸಂಸದೀಯ ಭಾಷಣವನ್ನು ಇಂದಿನ ಪ್ರತಿಯೊಬ್ಬ ಕಿರಿಯ ಸಂಸದ, ಶಾಸಕ ಒಮ್ಮೆಯಾದರೂ ಆಲಿಸುವುದು ಒಳಿತು. ಅಂದಿನ ಭಾಷಣದಲ್ಲಿ ವಾಜಪೇಯಿ ಅವರ ಟೀಕೆ, ವಿಮರ್ಶೆ, ಆರೋಪ ಮತ್ತು ರಾಜಕೀಯ ಪ್ರತ್ಯಾರೋಪಗಳನ್ನು ಸಹಜವೆಂದೇ ಪರಿಗಣಿಸಿ ಆಲಿಸಿದಾಗ, ಅವರ ಭಾಷಣದಲ್ಲಿದ್ದ ಸೌಜನ್ಯ, ಸಂಯಮ ಮತ್ತು ಭಾಷಾಶಿಸ್ತು ಸಾರ್ವಕಾಲಿಕ
ವಾಗಿ ಮಾನ್ಯತೆ ಪಡೆಯುವಂತಿದ್ದವು. ತಾವು ಅಧಿಕಾರ ಕಳೆದುಕೊಳ್ಳುವ ಹತಾಶೆಯನ್ನಾಗಲೀ ಆಕ್ರೋಶವನ್ನಾಗಲೀ ತೋರಗೊಡದೆ, ಪ್ರಜಾತಂತ್ರದ ಚೌಕಟ್ಟಿನಲ್ಲೇ ತಮ್ಮ ವಿರೋಧಿಗಳಿಗೆ ಪ್ರತ್ಯುತ್ತರ ನೀಡಿದ ವಾಜಪೇಯಿ ಅವರ ಈ ಭಾಷಣ ಎಲ್ಲರ ಮೆಚ್ಚುಗೆ ಗಳಿಸಿದ್ದಕ್ಕೆ ಕಾರಣವೆಂದರೆ, ಅವರ ಭಾಷೆಯಲ್ಲಿದ್ದ ಸಂಯಮ ಮತ್ತು ಸೌಜನ್ಯ.

ಬಹುಶಃ ಇದೇ ಸೌಜನ್ಯ ಮತ್ತು ಸಂಯಮವನ್ನು ನಮ್ಮ ಜನಪ್ರತಿನಿಧಿಗಳು ಕಾಪಾಡಿಕೊಂಡು ಬಂದಿದ್ದಲ್ಲಿ, ಅಸಂಸದೀಯ ಪದಗಳ ಪಟ್ಟಿಯನ್ನು ವರ್ಷದಿಂದ ವರ್ಷಕ್ಕೆ ಹಿಗ್ಗಿಸಬೇಕಾದ ಪ್ರಮೇಯ ಬರುತ್ತಿರಲಿಲ್ಲ. ಆದರೆ ಭಾರತದ ಅಧಿಕಾರ ರಾಜಕಾರಣದ ಪರಿಭಾಷೆಯು ಮನುಜ ಸಂವೇದನೆಯನ್ನೂ ಕಳೆದುಕೊಂಡಿರುವುದನ್ನು ಕಾಣುತ್ತಿದ್ದೇವೆ.

ಒಂದು ನಾಗರಿಕ ಸಮಾಜವಾಗಿ ನಾವು ನಿರ್ಬಂಧಿಸಬೇಕಿರುವುದು ಸಂಸದೀಯ ನೆಲೆಯ ಪರಿಭಾಷೆಯನ್ನಷ್ಟೇ ಅಲ್ಲ. ಸಾರ್ವಜನಿಕ ಬದುಕಿನಲ್ಲೂ ಎರಡು– ಮೂರು ದಶಕಗಳಿಂದ ನಾವು ಆಲಿಸುತ್ತಿರುವ ರಾಜಕೀಯ ಪರಿಭಾಷೆಯನ್ನೇ ಮರುಪರಿಷ್ಕರಣೆಗೆ ಒಳಪಡಿಸಬೇಕಿದೆ. ಸಮಾಜ ಸುಧಾರಣೆಯ ಕೂಗು, ಅಸ್ಮಿತೆಗಳ ಚೌಕಟ್ಟಿನಲ್ಲಿ ಬಂಧಿತವಾಗಿರುವ ಸಂದರ್ಭದಲ್ಲಿ ಆಧ್ಯಾತ್ಮಿಕ ಮಠಗಳೂ ಧಾರ್ಮಿಕ ಕೇಂದ್ರಗಳೂ ತಮ್ಮ ಸಾಮಾಜಿಕ ಹಾಗೂ ಸಾಮುದಾಯಿಕ ಹಿತಾಸಕ್ತಿಗಳನ್ನುಕಾಪಾಡಿಕೊಳ್ಳಲು ರಾಜಕೀಯ ವೇದಿಕೆಗಳನ್ನೇ ಚಿಮ್ಮುಹಲಗೆಯಂತೆ
ಬಳಸಿಕೊಳ್ಳುತ್ತಿವೆ. ಹಾಗಾಗಿಯೇ ಸುಧಾರಣೆಯ ಸ್ವರಗಳೂ ಕ್ಷೀಣಿಸುತ್ತಲೇ ಬರುತ್ತಿದ್ದು, ಸಾಂಸ್ಕೃತಿಕ ಪರಿಭಾಷೆಯೂ ಸಾಪೇಕ್ಷವಾಗುತ್ತಿದೆ.

ದ್ವೇಷ, ಈರ್ಷ್ಯೆ, ಮತ್ಸರ, ಹಿಂಸೆ, ಅಸಹನೆ ಇವೆಲ್ಲವನ್ನೂ ಇಂದಿನ ರಾಜಕೀಯ ನಾಯಕರ ಭಾಷಣಗಳಲ್ಲಿ, ಹೇಳಿಕೆಗಳಲ್ಲಿ ಮತ್ತು ಟ್ವೀಟ್‌ಗಳಲ್ಲಿ ವಿಪುಲವಾಗಿ ಕಾಣುತ್ತಲೇ ಬಂದಿದ್ದೇವೆ. ಸಾಮಾಜಿಕ ಮಾಧ್ಯಮಗಳಲ್ಲಿ ಯುವಪೀಳಿಗೆ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಗಮನಿಸಿದಾಗ, ನಮ್ಮ ಸಮಾಜವು ನಾಗರಿಕ ನಡೆಗಳಿಂದ ವಿಮುಖವಾಗುತ್ತಿದೆಯೇ ಸಂವೇದನಾಶೂನ್ಯವಾಗುತ್ತಿದೆಯೇಎಂಬ ಆತಂಕ ಮೂಡುತ್ತದೆ. ಸಾರ್ವಜನಿಕ ವಲಯವನ್ನು ಇನ್ನೂ ಹೆಚ್ಚು ಪ್ರಭಾವಿಸುವ ದೃಶ್ಯಮಾಧ್ಯಮಗಳನ್ನು, ಟಿ.ವಿ. ವಾಹಿನಿಗಳ ಧಾರಾವಾಹಿಗಳನ್ನು ಮತ್ತು ಸುದ್ದಿಮನೆಗಳ ನಿರೂಪಕರ ಮಾತಿನ ಶೈಲಿಯನ್ನು ಗಮನಿಸುತ್ತಾ ಹೋದರೆ, ಈ ಆತಂಕಗಳೇ ಆಘಾತಕ್ಕೆ ಎಡೆಮಾಡಿ ಕೊಡುತ್ತವೆ. ಈ ವಿಕೃತಿಯು ದಿನಗಳೆದಂತೆ ಹೆಚ್ಚಾ ಗುತ್ತಲೇ ಹೋಗುತ್ತಿದ್ದರೆ ರಾಜಕೀಯ ನಾಯಕರೂ ಅದರ ಭಾಗಶಃ ಹೊಣೆ ಹೊರಬೇಕಗುತ್ತದೆ.

ಸಮಾಜದ ಸ್ವಾಸ್ಥ್ಯ ಮತ್ತು ಮನುಜ ಸಂವೇದನೆಯನ್ನು ಭಂಗಗೊಳಿಸುವ ಯಾವುದೇ ಭಾಷೆ ಅಥವಾ ಪರಿಭಾಷೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಸಮಾಜ ನೀಡಬೇಕಿದೆ. ಹೀಗೆ ಅಧಿಕಾರಯುತವಾಗಿ ಆದೇಶಿಸಬೇಕಾದ ಒಂದು ಸಮಾಜವನ್ನು ರೂಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ.

ರಾಜಕೀಯ ನಾಯಕರು ಈ ದಿಸೆಯಲ್ಲಿ ಮುಂದಾಳತ್ವ ವಹಿಸುತ್ತಾರೆ ಎಂದು ಭಾವಿಸುವುದು ಉತ್ಪ್ರೇಕ್ಷೆಯಾಗುತ್ತದೆ. ಆದರೆ ನಾಗರಿಕತೆಯತ್ತ ಸಾಗುತ್ತಿರುವ ಒಂದು ಸಮಾಜ ಮತ್ತು ಈ ಸಮಾಜ ಮುಂದಾಳತ್ವ ವಹಿಸಲು ಬಯಸುವ ಯಾವುದೇ ಸಾಂಸ್ಕೃತಿಕ ವೇದಿಕೆಗಳು ಈ ದಿಸೆಯಲ್ಲಿ ಯೋಚಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT