ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಭರವಸೆಯ ಬೆಳಕು ನೀಡೋಣ

Published 8 ಸೆಪ್ಟೆಂಬರ್ 2023, 19:36 IST
Last Updated 8 ಸೆಪ್ಟೆಂಬರ್ 2023, 19:36 IST
ಅಕ್ಷರ ಗಾತ್ರ

ಸಮಾಜವನ್ನು ಕಾಡುತ್ತಿರುವ ಪಿಡುಗುಗಳಲ್ಲಿ ಪ್ರಚಲಿತ ಹೆಚ್ಚಾಗುತ್ತಿರುವುದು ಆತ್ಮಹತ್ಯೆ ಮತ್ತು ಆತ್ಮಹತ್ಯೆ ಪ್ರಯತ್ನದ ಪ್ರಕರಣಗಳು. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಆತ್ಮಹತ್ಯೆಯಿಂದ ಪ್ರತಿವರ್ಷ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅಸುನೀಗುತ್ತಾರೆ. ಅದಕ್ಕಿಂತ ಇಪ್ಪತ್ತು ಪಟ್ಟು ಹೆಚ್ಚು ಮಂದಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಆತ್ಮಹತ್ಯೆ ಕುರಿತು ಆಲೋಚಿಸುವವರು ಇಪ್ಪತ್ತೈದು ಪಟ್ಟು ಹೆಚ್ಚು ಮಂದಿ. ಅದರಲ್ಲಿಯೂ ಹದಿನೈದರಿಂದ ಇಪ್ಪತ್ತೊಂಬತ್ತು ವರ್ಷದೊಳಗಿನವರು ಈ ಪಿಡುಗಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ.

ಒಂದು ಕಾಲದಲ್ಲಿ ಆತ್ಮಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುವವರನ್ನು ಅಪರಾಧಿಗಳು ಎಂದು ಪರಿಗಣಿಸಲಾಗುತ್ತಿತ್ತು. ‘ಆತ್ಮಹತ್ಯೆ ಮತ್ತು ಆತ್ಮಹತ್ಯೆಯ ಪ್ರಯತ್ನವನ್ನು ಅಪರಾಧವೆಂದು ಪರಿಗಣಿಸಬಾರದು. ಅದಕ್ಕೆ ಮಾನಸಿಕ ಕ್ಷೋಭೆಯೇ ಕಾರಣ. ಅಂಥವರಿಗೆ ಆಪ್ತ ಸಲಹೆ ನೀಡಬೇಕು. ಆ ಮೂಲಕ ಅವರು ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಕೆಲ ವರ್ಷಗಳ ಹಿಂದೆ ತೀರ್ಪು ನೀಡಿತು. ಆತ್ಮಹತ್ಯೆ ಮತ್ತು ಪ್ರಯತ್ನವು ಒಂದು ಕಳಂಕ ಎಂಬ ಭಾವನೆ ಈಗ ಉಳಿದಿಲ್ಲ.

ಇಂತಹ ಪ್ರಕರಣಗಳು ಸಂತ್ರಸ್ತ ವ್ಯಕ್ತಿಯ ಕುಟುಂಬ ಮತ್ತು ಸಮಾಜದ ಮೇಲೂ ಭೀಕರ ಪರಿಣಾಮವನ್ನು ಉಂಟುಮಾಡುತ್ತವೆ. ಮನೋವೈದ್ಯಕೀಯದಲ್ಲಿ ಆಳವಾದ ಸಂಶೋಧನೆಗಳು ನಡೆದು, ಆತ್ಮಹತ್ಯೆಗೆ ಕಾರಣಗಳನ್ನು ನಮ್ಮ ಮುಂದೆ ತೆರೆದಿಟ್ಟಿವೆ. ಆತ್ಮಹತ್ಯೆಗೆ ಕಾರಣಗಳನ್ನು ಅಧ್ಯಯನ ಮಾಡಿದವರಲ್ಲಿ ಎಮಿಲ್ ಡರ್ಕೀಮ್ ಎಂಬ ಸಮಾಜ ವಿಜ್ಞಾನಿ ಮೊದಲಿಗರು. ಅವರು ಸಮಾಜದಲ್ಲಿ ಸ್ವಾರ್ಥಪರ, ಪರೋಪಕಾರಿ, ಕಟ್ಟುಪಾಡಿಲ್ಲದವರು ಎಂಬ ಮೂರು ವಿಧದ ವ್ಯಕ್ತಿಗಳನ್ನು ಗುರುತಿಸಿದರು. ಅವರಲ್ಲಿ ಸ್ವಾರ್ಥಪರ ಮತ್ತು ಕಟ್ಟುಪಾಡಿಲ್ಲದವರು ಆತ್ಮಹತ್ಯೆಗೆ ಬಲಿಯಾಗುವವರಲ್ಲಿ ಸೇರಿದ್ದಾರೆ ಎಂದು ಪ್ರತಿಪಾದಿಸಿದರು. ನಂತರದಲ್ಲಿ ನಡೆದ ಅಧ್ಯಯನಗಳು ಆತ್ಮಹತ್ಯೆಗೆ ಅವರವರ ಮನಃಸ್ಥಿತಿಯೇ ಕಾರಣ ಎಂಬುದನ್ನು ಸಾಬೀತುಪಡಿಸಿವೆ.

ದೇಶದಲ್ಲಿ ಆತ್ಮಹತ್ಯೆ ಮತ್ತು ಆತ್ಮಹತ್ಯೆಗೆ ಪ್ರಯತ್ನಿಸುವವರ ಸಂಖ್ಯೆ ಹದಿನೈದರಿಂದ ಇಪ್ಪತ್ತೈದು ವರ್ಷದ ಒಳಗಿನವರಲ್ಲಿ ಪ್ರತಿ ಸಾವಿರಕ್ಕೆ 38. ಹರೆಯದವರು ಹಾಗೂ ಯುವಕರಲ್ಲಿ ಈ ಪ್ರಕರಣಗಳು ಅಧಿಕವಾಗಿರಲು ಹಲವಾರು ಕಾರಣಗಳಿವೆ. ಹರೆಯ ಎಂಬುದು ಸಂಕ್ರಮಣದ ಕಾಲ. ದೈಹಿಕ ಬದಲಾವಣೆಗಳು, ಮನೋವಿಕಾಸ ಹರೆಯದವರಲ್ಲಿ ಹಲವಾರು ಸಂದೇಹಗಳನ್ನುಂಟು ಮಾಡುತ್ತವೆ. ‘ತನ್ನತನ’ವನ್ನು ಕಂಡುಕೊಳ್ಳುವ ತವಕ, ಇವುಗಳ ಕುರಿತು ಪುಟಿದೇಳುವ ಪ್ರಶ್ನೆಗಳು ಅವರನ್ನು ಒತ್ತಡಕ್ಕೆ ಈಡು ಮಾಡುತ್ತವೆ. ಆಗ, ಯಾರ ಹತ್ತಿರವಾದರೂ ಕೇಳಬೇಕು, ಯಾರಾದರೂ ತನ್ನ ಸಂದೇಹಗಳನ್ನು ಪರಿಹರಿಸಬೇಕು ಎಂದು ಹರೆಯದ ಮನಸ್ಸು ಹಾತೊರೆಯುತ್ತದೆ. ಇದಕ್ಕೆ ಪೋಷಕರು ಸ್ಪಂದಿಸಿ, ಅವರ ಸಂಶಯಗಳನ್ನು ಪರಿಹರಿಸಿದಾಗ ಮನಸ್ಸು ನಿರಾಳಗೊಳ್ಳುತ್ತದೆ. ಕುಟುಂಬದ ಸದಸ್ಯರ ಅತಿಯಾದ ನಿರೀಕ್ಷೆ, ಪುನಃ ಪುನಃ ಅವರು ಮಾಡುವ ಟೀಕೆ ಟಿಪ್ಪಣಿಗಳು ಹರೆಯದ, ಅಪಕ್ವವಾದ ಮನಸ್ಸನ್ನು ಗಾಸಿಗೊಳಿಸುತ್ತವೆ. ಶೈಕ್ಷಣಿಕವಾಗಿ ಪೋಷಕರ ಅತಿಯಾದ ನಿರೀಕ್ಷೆ, ಪ್ರೀತಿ ಪ್ರೇಮದ ಕಾರಣಗಳೂ ಇರುತ್ತವೆ.

ಹರೆಯದವರು ಇಂತಹ ಸವಾಲುಗಳನ್ನು ಎದುರಿಸಿ ಪರಿಹಾರವನ್ನು ಕಂಡುಕೊಳ್ಳಲು ಹಲವು ಅಂಶಗಳು ಪೂರಕ ಎಂಬುದನ್ನು ಸಮಾಜ ಅರಿತರೆ ಒಳ್ಳೆಯದು. ಹಿತವಾದ ಕೌಟುಂಬಿಕ ವಾತಾವರಣ, ಸಾಮರಸ್ಯದಿಂದ ಕೂಡಿದ ಕುಟುಂಬ ಮತ್ತು ಪೋಷಕ- ಮಕ್ಕಳ ನಡುವೆ ಆತ್ಮೀಯ ಬಾಂಧವ್ಯ ಹರೆಯದವರ ಒತ್ತಡವನ್ನು ಕಡಿಮೆ ಮಾಡುತ್ತವೆ. ಮಕ್ಕಳ ಅನಿಸಿಕೆಗಳನ್ನು ಪೋಷಕರು ಸಂಯಮದಿಂದ ಆಲಿಸಿ, ಅವಕ್ಕೆ ಸ್ಪಂದಿಸಿದಾಗ ಮಕ್ಕಳಲ್ಲಿ ಪೋಷಕರ ಕುರಿತು ಆತ್ಮೀಯ ಭಾವನೆ ಉಂಟಾಗುತ್ತದೆ.

ಮಕ್ಕಳ ಭಾವನೆಗಳಿಗೆ ಆತ್ಮೀಯವಾಗಿ ಸ್ಪಂದಿಸಿ, ಸಕಾರಾತ್ಮಕವಾಗಿ ಮಾರ್ಗದರ್ಶನ ಮಾಡಬೇಕು. ಇವು ಹರೆಯದವರು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆಯುವುದಕ್ಕೆ ಪೂರಕ. ಬಾಲ್ಯದಿಂದಲೇ ಮಕ್ಕಳಲ್ಲಿ ಸಂಗೀತಾಭ್ಯಾಸ, ಪುಸ್ತಕಗಳನ್ನು ಓದುವುದು, ಆಟ, ನೃತ್ಯದಂತಹ ಕೆಲವು ಹವ್ಯಾಸಗಳನ್ನು ರೂಢಿಸಬೇಕು. ಆತ್ಮೀಯ ಸ್ನೇಹಿತರು ಹರೆಯದ ಮನಸ್ಸನ್ನು ಸಮಸ್ಥಿತಿಯಲ್ಲಿಡಲು ಸಹಾಯಕ.

ಆತ್ಮಹತ್ಯೆಗೆ ಪ್ರಯತ್ನಿಸುವ ಹರೆಯದವರು ತಮ್ಮ ಭಾವನೆಗಳನ್ನು ಹಲವಾರು ವಿಧದಲ್ಲಿ ಹಂಚಿಕೊಳ್ಳುತ್ತಾರೆ. ಅವನ್ನು ಗಮನಿಸಬೇಕು. ಅಂಥವರು ತಮ್ಮ ದೈನಂದಿನ ಕೆಲಸಗಳಲ್ಲಿ ನಿರಾಸಕ್ತಿ, ಒಂಟಿತನ ಅನುಭವಿಸುತ್ತಾರೆ. ಮದ್ಯ, ಮಾದಕ ವಸ್ತುಗಳಿಗೆ ಮೊರೆ ಹೋಗಬಹುದು. ಓದಿನಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ. ಯಾರಾದರೂ ಹೊಗಳಿದರೆ ಅದಕ್ಕೆ ಸ್ಪಂದಿಸುವುದಿಲ್ಲ. ಅವರ ವರ್ತನೆಗಳು ಕೆಲವು ವೇಳೆ ನಿಗೂಢ ಎನಿಸಬಹುದು. ಕೆಲವೊಮ್ಮೆ ಆತ್ಮಹತ್ಯೆ ಕುರಿತು ಮಾತನಾಡುತ್ತಿರುತ್ತಾರೆ.

ಸಾಮಾಜಿಕ ಪಿಡುಗಾದ ಆತ್ಮಹತ್ಯೆಯ ಕುರಿತು ಸಮಾಜದಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಯಂತೆ ಪ್ರತಿವರ್ಷ ಸೆಪ್ಟೆಂಬರ್ ಹತ್ತರಂದು ಆತ್ಮಹತ್ಯೆ ತಡೆ ದಿನವನ್ನು ಆಚರಿಸಲಾಗುತ್ತದೆ. ಆತ್ಮಹತ್ಯೆಯನ್ನು ತಡೆಯುವುದು ಸಮಾಜದ ಎಲ್ಲರ ಕರ್ತವ್ಯ. ಅವರು ಸ್ನೇಹಿತರಿರಬಹುದು, ಪಕ್ಕದ ಮನೆಯವರಿರಬಹುದು, ಯಾರಾದರೂ ಆತ್ಮಹತ್ಯೆಯ ಕುರಿತು ಮಾತನಾಡುತ್ತಿದ್ದರೆ, ಖಿನ್ನವದನರಾಗಿ ಒಂಟಿಯಾಗಿದ್ದರೆ ಅಂತಹವರನ್ನು ಮಾತನಾಡಿಸಿ, ಅವರ ಅಹವಾಲುಗಳನ್ನು ಆಲಿಸಿ ಸ್ಪಂದಿಸಬೇಕು. ಭವಿಷ್ಯ ಉಜ್ವಲ ಎಂಬುದನ್ನು ಮನದಟ್ಟಾಗುವಂತೆ ಅವರಿಗೆ ವಿವರಿಸಬೇಕು. ಹೀಗೆ ಸಮಾಜದ ಪ್ರತಿಯೊಬ್ಬರೂ ಇದನ್ನು ಆಸಕ್ತಿಯಿಂದ ಆಚರಣೆಗೆ ತಂದಾಗ ಅಮೂಲ್ಯವಾದ ಜೀವವನ್ನು ಉಳಿಸಬಹುದು.

ಲೇಖಕ: ಮನೋವೈದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT