ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ವಾಸ್ತು, ವಾಸ್ತವ, ವೈರುಧ್ಯ

ಒಬ್ಬೊಬ್ಬ ವಾಸ್ತುತಜ್ಞರ ಸಲಹೆ ಒಂದೊಂದು ರೀತಿ ಇರುವುದೇಕೆ?
Last Updated 15 ನವೆಂಬರ್ 2021, 17:20 IST
ಅಕ್ಷರ ಗಾತ್ರ

ಮೊನ್ನೆ ಸಂಬಂಧಿಕರೊಬ್ಬರ ಮನೆಗೆ ಪೂಜೆಗೆ ಹೋಗಿದ್ದೆವು. ಮುಖ ತೊಳೆದು ರೆಡಿಯಾಗೋಣ ಎಂದು ನೋಡಿದರೆ, ಇಡೀ ಮನೆಯಲ್ಲಿ ಎಲ್ಲೆಲ್ಲೂ ಕನ್ನಡಿಯೇ ಕಾಣಲಿಲ್ಲ. ವಿಚಾರಿಸಿದರೆ, ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿ ಹೆಚ್ಚು ಇರಬಾರದಂತೆ, ಅದಕ್ಕೇ ಎಲ್ಲವನ್ನೂ ತೆಗೆಸಿಬಿಟ್ಟಿದ್ದೇವೆ ಅಂದರು. ಬಚ್ಚಲು ಮನೆಯ ಮುಂದೆ ಶೇವಿಂಗ್‍ಗಾಗಿ ಒಂದು ಸಣ್ಣ, ಮಸುಕಾದ ಕನ್ನಡಿ ತೂಗು ಹಾಕಿದ್ದರು. ಹಾಗೇ ರೆಡಿಯಾಗಿ, ಕೊನೆಗೆ ಕಾಂಪ್ಯಾಕ್ಟ್ ಪೌಡರ್ ಡಬ್ಬಿ ಒಳಗೆ ಇದ್ದ ಪುಟ್ಟ ಕನ್ನಡಿಯನ್ನು ಮಗಳಿಗೆ ಸರಿಯಾಗಿ ಹಿಡಿದುಕೊಳ್ಳಲು ಹೇಳಿ ಹೇಗೋ ಮೇಕಪ್ ಮಾಡಿಕೊಂಡಿದ್ದಾಯ್ತು. ಇನ್ನು ಮುಂದೆ ಮೇಕಪ್ ಕಿಟ್ ಜೊತೆ ಒಂದು ಕನ್ನಡಿ ಇಟ್ಟುಕೊಳ್ಳಲೇಬೇಕು ಎನ್ನುವ ಬುದ್ಧಿ ಬಂತು!

ನಮ್ಮ ಪಕ್ಕದ ಮನೆಯಲ್ಲಂತೂ ಹೊರಬಾಗಿಲು ತೆಗೆಯುತ್ತಿದ್ದಂತೆ ಆಳೆತ್ತರದ ಕನ್ನಡಿ. ಇಡೀ ಮನೆಯಲ್ಲಿ ಎಲ್ಲ ರೂಮಿನಲ್ಲೂ ದೊಡ್ಡ ದೊಡ್ಡ ಕನ್ನಡಿಗಳದೇ ಕಾರುಬಾರು. ಕನ್ನಡಿಯಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಅಂತ ವಾಸ್ತುವಿನವರು ಹೇಳಿದ್ದಾರಂತೆ. ಯಾರ ಮಾತು ನಂಬಬೇಕೋ ಯಾರ ಮಾತು ಬಿಡಬೇಕೋ ಗೊತ್ತೇ ಆಗದ ಪರಿಸ್ಥಿತಿ.

ಇನ್ನು ಕನ್ನಡಿ ಕಾಣದ ನೆಂಟರ ಮನೆಯಲ್ಲಿ ಎಲ್ಲಿ ಹುಡುಕಿದರೂ ಗೋಡೆ ಗಡಿಯಾರವೂ ಇರಲಿಲ್ಲ. ಟೈಮ್ ನೋಡಬೇಕೆಂದರೆ ಮೊಬೈಲ್‍ಗೇ ಮೊರೆ ಹೋಗಬೇಕಾಯ್ತು. ಗಡಿಯಾರಗಳು ಮನೆಯಲ್ಲಿ ಇರಬಾರದು ಅಂತ ವಾಸ್ತುವಿನವರು ಹೇಳಿದ್ದಕ್ಕೆ ಎಲ್ಲ ತೆಗೆದು ಶೆಲ್ಫ್ ಮೇಲೆ ಒಂದರ ಮೇಲೊಂದು ಮಲಗಿಸಿ ಇಟ್ಟಿದ್ದರು.

ಅಷ್ಟೇ ಅಲ್ಲ... ಈಶಾನ್ಯಕ್ಕೆ ಇಟ್ಟಿದ್ದ ಬಾಗಿಲು ಸರಿ ಇದೆ, ಆದರೆ ಪೂರ್ವಕ್ಕೆ ಇಟ್ಟಿದ್ದ ಬಾಗಿಲು ಮನೆಯ ಮಧ್ಯದಲ್ಲಿದೆ, ಹಾಗಾಗಿ ಅಲ್ಲಿಂದ ಓಡಾಡಬಾರದು ಎಂದು ಹೇಳಿದ್ದಕ್ಕೆ ಡೈನಿಂಗ್ ಹಾಲ್‍ನಲ್ಲಿ, ಧಾರಾಳವಾಗಿ ಗಾಳಿ, ಬೆಳಕು ಆಡುತ್ತಿದ್ದ ಬಾಗಿಲನ್ನು ಮುಚ್ಚಿಸಿಬಿಟ್ಟಿದ್ದರು. ಈಗ ಕೆಲಸದವಳಿಗೆ ಪಾತ್ರೆ ಕೊಡಬೇಕೆಂದರೂ ಮುಂದಿನ ಬಾಗಿಲಿನಿಂದಲೇ,
ಬಟ್ಟೆ ಒಗೆಯಬೇಕೆಂದರೂ ಅಲ್ಲಿಂದಲೇ ತೆಗೆದು ಕೊಂಡು ಹೋಗಬೇಕು. ಇದೇನಪ್ಪ ಕರ್ಮ, ಇದ್ದೂ ಇಲ್ಲದಂತಹ ಪರಿಸ್ಥಿತಿ ಅಂತ ನೋಡಿದವರಿಗೆ ಅನಿಸದಿರದು.

ಇದು ಯಾವುದೇ ಗಮಾರರು, ಅವಿದ್ಯಾವಂತರ ಮನೆಯ ಕಥೆಯಲ್ಲ, ಕ್ಲಾಸ್ ಒನ್ ಹುದ್ದೆಯಲ್ಲಿರುವ ಹಾಗೂ ಮನೆಮಂದಿಯೆಲ್ಲ ಸುಶಿಕ್ಷಿತರಿರುವ ಕುಟುಂಬ. ಅದರಲ್ಲೂ ಐದು ವರ್ಷದ ಕೆಳಗೆ ಪ್ರಸಿದ್ಧ ವಾಸ್ತುತಜ್ಞರನ್ನು ಹಿಡಿದು ನೂರು ಪ್ರತಿಶತ ವಾಸ್ತುಪ್ರಕಾರ ಕಟ್ಟಿಸಿದ ಮನೆಯದು. ಈಗ ಮತ್ತ್ಯಾರೋ ಹೊಸ ವಾಸ್ತುತಜ್ಞರನ್ನು ಕರೆಸಿದ್ದಕ್ಕೆ ಇಷ್ಟೆಲ್ಲ ರಂಪಾಟ.

ವಾಸ್ತು ಬಗೆಗಿನ ನಂಬಿಕೆಯು ನಂಬುವವರಿಗೆ ಬಿಟ್ಟದ್ದು. ಅದೇನಾದರೂ ಇರಲಿ, ವಾಸ್ತು ಎಂದ ಮೇಲೆ ಯಾರು ಹೇಳಿದರೂ ಒಂದೇ ರೀತಿ ಇರಬೇಕಲ್ಲವೇ? ಹೀಗೆ ಒಬ್ಬೊಬ್ಬ ವಾಸ್ತುತಜ್ಞ ಒಂದೊಂದು ರೀತಿ ಹೇಳಿದರೆ, ನಂಬುವವರ ಪಾಡೇನು? ಹಾಗೆಯೇ, ಕಟ್ಟಿಸುವವರೂ ಒಬ್ಬ ವಾಸ್ತುತಜ್ಞರನ್ನು ನಂಬಿ ಕಟ್ಟಿಸಿದ ಮೇಲೆ ಮತ್ತೆ ಯಾರೋ ಬಂದು ಹೇಳಿದರು ಅಂತ ಮನೆ ವಿನ್ಯಾಸ ಬದಲಿಸುತ್ತಲೇ ಹೋದರೆ ಅದಕ್ಕೆ ಅರ್ಥವುಂಟೇ?

ಮಕ್ಕಳಾಗದಿದ್ದಕ್ಕೂ ಹಣಕಾಸು, ಆರೋಗ್ಯ, ನಿರುದ್ಯೋಗ, ಸಾಂಸಾರಿಕ ಕಲಹ ಎಲ್ಲದಕ್ಕೂ ವಾಸ್ತುವಿನ ಜೊತೆಗೆ ತಳುಕು ಹಾಕುವುದು ಚಾಲ್ತಿಗೆ ಬಂದುಬಿಟ್ಟಿದೆ. ನಿವೇಶನ ಖರೀದಿಸಲೂ ವಾಸ್ತುವಿನ ಮೊರೆ ಹೋಗುತ್ತಾರೆ. ಅದರಲ್ಲೂ ಪಶ್ಚಿಮ ಹಾಗೂ ದಕ್ಷಿಣಕ್ಕೆ ಮುಖ ಮಾಡಿರುವ ಸೈಟುಗಳನ್ನು ಅಪಶಕುನವೆಂದು ಕಡಿಮೆ ಬೆಲೆ, ಉತ್ತರ ಹಾಗೂ ಪೂರ್ವಕ್ಕೆ ಮುಖ ಮಾಡಿರುವ ಸೈಟುಗಳಿಗೆ ಅತಿ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಯಾವುದಾದರೇನು ನಾವು ನಂಬುವುದಿಲ್ಲ ಅಂತಲೋ ಅಥವಾ ಹೇಗಿದ್ದರೂ ವಾಸ್ತು ಪ್ರಕಾರ ಕಟ್ಟಿಸಬಹುದು ಎಂಬ ಧೈರ್ಯದಿಂದ ಕಟ್ಟಿಸಿಕೊಂಡವರಿಗೂ ಸ್ನೇಹಿತರು, ಬಂಧು ಮಿತ್ರರೇ ‘ಅಯ್ಯೋ, ಯಾಕೆ ಈ ದಿಕ್ಕಿನ ಸೈಟು ತಗಂಡು ಮನೆ ಕಟ್ಟಿಸಿದ್ರಿ, ಇಷ್ಟೇ ಖರ್ಚು ಮಾಡಿದಿರಿ, ಇನ್ನೊಂದೈದಾರು ಲಕ್ಷಕ್ಕೆ ಯಾಕೆ ಮುಖ ನೋಡಿದ್ದು’ ಎಂದು ಅನುಕಂಪ ತೋರಿಸುತ್ತಿರುತ್ತಾರೆ. ಕಟ್ಟಡ ನಿರ್ಮಿಸುವ ಎಂಜಿನಿಯರುಗಳೂ ಈಗಿನ ಜನರ ವಾಸ್ತು ಹುಚ್ಚು ನೋಡಿ, ವಾಸ್ತುಪ್ರಕಾರವೇ ಮನೆ ಕಟ್ಟಿಸಿ ಕೊಡುತ್ತೇವೆ ಅಂತ ಜಾಹೀರಾತು ಕೊಟ್ಟಿರುತ್ತಾರೆ. ಹೊಲಗಳನ್ನೂ ದಿಕ್ಕು ನೋಡಿ ಕೊಳ್ಳುತ್ತಿದ್ದಾರೆಂದರೆ ವಾಸ್ತು ಗುಂಗಿನ ತೀವ್ರತೆ ಅರಿವಿಗೆ ಬಂದೀತು.

ಜೊತೆಗೆ ವಾಸ್ತು ಗಿಡ, ವಾಸ್ತು ಆಮೆ, ವಾಸ್ತು ಕುದುರೆ, ವಾಸ್ತು ಉಂಗುರ, ವಾಸ್ತು ಡಬ್ಬಿ ಎಂದೆಲ್ಲಾ ಪ್ರತಿದಿನ ಟಿ.ವಿಯಲ್ಲಿ ಗಂಟೆಗಟ್ಟಲೆ ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಲೇ ಇರುತ್ತವೆ. ಮನುಷ್ಯನ
ಮಾನಸಿಕ ದೌರ್ಬಲ್ಯವನ್ನು ಹಣವನ್ನಾಗಿ ಪರಿವರ್ತಿಸುವ ಸುಲಭ ವಿಧಾನವಾಗಿ ಪರಿಣಮಿಸಿದೆ ಈ ವಾಸ್ತು.

ಕುಟುಂಬದಲ್ಲಿ ಎಲ್ಲರ ಉತ್ತಮ ಆರೋಗ್ಯಕ್ಕಾಗಿ, ಗಾಳಿ, ಬೆಳಕು ಸರಿಯಾಗಿ ಹರಿದಾಡುವಂತಿದ್ದರೆ
ಅದೇ ಉತ್ತಮ ವಾಸ್ತು. ಅರ್ಧಂಬರ್ಧ ಕಲಿತವರ ಸಲಹೆಗೆ ಕಿವಿಗೊಡದಿರುವುದೇ ಉತ್ತಮ. ಇಲ್ಲವಾದಲ್ಲಿ ಮಾನಸಿಕ ಶಾಂತಿಯ ಜೊತೆ ಹಣವೂ
ಹಾಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT