ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರಕ್ಕೆ ನೀರೋ? ಕೊಳೆನೀರೋ?

ಬಹಳ ಹಸಿದವರಿಗೆ, ಬಾಯಾರಿದವರಿಗೆ ಏನೂ ಕೊಟ್ಟರೂ ನುಂಗುತ್ತಾರೆ, ಕುಡಿಯುತ್ತಾರೆ ಎಂಬ ಧೋರಣೆ ಸರಿಯಲ್ಲ
Last Updated 30 ಜುಲೈ 2018, 19:30 IST
ಅಕ್ಷರ ಗಾತ್ರ

ಹೆಚ್ಚುತ್ತಿರುವ ನೀರಿನ ಕೊರತೆಯ ಸಮಸ್ಯೆಗೆ, ನೀರಿನ ಸಮಗ್ರ ನಿರ್ವಹಣೆಯೇ ಪರಿಹಾರ ಮತ್ತು ಬಳಸಿದ ನೀರನ್ನು ಶುದ್ಧೀಕರಿಸಿ ಮರು ಬಳಕೆ ಮಾಡುವುದು ಕೂಡ ಒಂದು ಪ್ರಮುಖ ದಾರಿಯೆಂಬುದೇನೋ ನಿಜ. ಆದರೆ ಕೊಳಚೆ ನೀರನ್ನು ಎಷ್ಟರ ಮಟ್ಟಿಗೆ ಶುದ್ಧೀಕರಿಸಿ ಯಾವುದಕ್ಕೆ ಬಳಸಬಹುದು ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಚಾರ.

ಬೆಂಗಳೂರು ನಗರದ ಕೋರಮಂಗಲ - ಚಲ್ಲಘಟ್ಟ ಕಣಿವೆಯಲ್ಲಿ ಹರಿಯುವ ಕೊಳಚೆ ನೀರನ್ನು ಶುದ್ಧೀಕರಿಸಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 134 ಕೆರೆಗಳಿಗೆ ಹರಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ಅನುಷ್ಠಾನ ಆಗಿದೆ. ನೀರಿನ ಶುದ್ಧೀಕರಣದ ಗುಣಮಟ್ಟ, ಅದರ ಪರಿಣಾಮಗಳ ಬಗ್ಗೆ ಯೋಜನೆಯ ಆರಂಭದಲ್ಲೇ ಅಲ್ಲಿನ ಜನರು ಅನುಮಾನ ವ್ಯಕ್ತಪಡಿಸಿದ್ದರೂ ಯೋಜನೆಗೆ ಸಂಬಂಧಪಟ್ಟ ಯಾರೊಬ್ಬರೂ ಜನರಿಗೆ ವೈಜ್ಞಾನಿಕ ವಿವರಣೆಗಳನ್ನು ನೀಡಲಿಲ್ಲ. ಯೋಜನೆಯನ್ನು ಕುರಿತ ಮಾಹಿತಿಯನ್ನು ಕೊಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದವರಿಗೂ ಡಿಪಿಆರ್‌ನ ಎರಡನೇ ಭಾಗವಾದ ಖರ್ಚಿನ ವಿವರ ನೀಡಲಾಯಿತೇ ವಿನಾ ಯೋಜನೆಯ ವಿವರಗಳನ್ನು ಕೊಟ್ಟಿಲ್ಲ.

ಯೋಜನೆಯು ಕಾರ್ಯಾರಂಭ ಮಾಡಿ, ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ ಕೆರೆಗೆ ಬೆಂಗಳೂರಿನ ನೀರು ಹರಿದು ಬಂದಕ್ಷಣ ಜನಪ್ರತಿನಿಧಿಗಳು ಆನಂದಭಾಷ್ಪ ಸುರಿಸಿದ್ದರು. ಇದಾಗಿ ಕೆಲವೇ ದಿನಗಳಲ್ಲಿ ಅಲ್ಲಿನ ನೀರಿನಲ್ಲಿ ನೊರೆ ಎದ್ದಿದೆ. ಕೆರೆಯಲ್ಲಿದ್ದ ಜಲಚರಗಳು ಸತ್ತು ಬಿದ್ದಿವೆ. ‘ಇದು ಬೆಳ್ಳಂದೂರಿನ ಕೊಳಚೆ ನೊರೆಯನ್ನು ಕೋಲಾರಕ್ಕೆ ವರ್ಗಾಯಿಸುವ ಯೋಜನೆಯೇ’ ಎಂದು ಜನರು ಕೇಳುವಂತಾಗಿದೆ. ಏಕೆ ಹೀಗಾಯಿತೆಂದು ವಿವರಣೆ ನೀಡಬೇಕಾಗಿದ್ದ ಅಧಿಕಾರಿಗಳು, ‘ಇದು ಮಳೆ ಬಂದಾಗ ಶುದ್ಧೀಕರಣ ಘಟಕಕ್ಕೆ ಕೊಳಚೆ ನೀರು ಹರಿದು, ಅಲ್ಲಿಂದ ಪಂಪ್ ಆಗಿ ಸಂಭವಿಸಿದ ಅಚಾತುರ್ಯ’ ಎಂದು ಹೇಳಿ ಜಾರಿಕೊಂಡಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಕೈಗೆತ್ತಿಕೊಳ್ಳುವ ಯಾವುದೇ ಯೋಜನೆಗೆ ಸಾರ್ವಜನಿಕರ ಸಮ್ಮತಿ ಅನಿವಾರ್ಯ. ಯೋಜನೆಗೆ ವಿರೋಧ ವ್ಯಕ್ತಪಡಿಸುವವರು ಸಣ್ಣ ಸಂಖ್ಯೆಯಲ್ಲಿ ಇದ್ದರೂ ಅವರ ವಿರೋಧಕ್ಕೆ ಕಾರಣಗಳನ್ನು ಪರಿಶೀಲಿಸಿ ಸೂಕ್ತ ಉತ್ತರ ನೀಡಿಯೇ ಮುಂದುವರಿಯಬೇಕು. ನೀರು, ಕಾಡು ಮುಂತಾದ ನೈಸರ್ಗಿಕ ಸಂಪನ್ಮೂಲಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೊದಲು ಪರಿಸರ ಪರಿಣಾಮ ಅಧ್ಯಯನ (ಎನ್ವಿರಾನ್‍ಮೆಂಟ್ ಇಂಪ್ಯಾಕ್ಟ್ ಅಸೆಸ್‌ಮೆಂಟ್) ಮಾಡಬೇಕು ಮತ್ತು ಕೇಂದ್ರ ಪರಿಸರ ಸಚಿವಾಲಯದಿಂದ ಒಪ್ಪಿಗೆ ಪಡೆಯಬೇಕು. ಆದರೆ ಕುಡಿಯುವ ನೀರಿನ ಯೋಜನೆಯಾಗಿದ್ದರೆ ಪರಿಸರ ಸಚಿವಾಲಯದ ಒಪ್ಪಿಗೆಯ ಅಗತ್ಯವಿಲ್ಲ. ರಾಜ್ಯ ಸರ್ಕಾರವು ಕೆ.ಸಿ. ವ್ಯಾಲಿ ಯೋಜನೆಯ ಪ್ರಚಾರಕ್ಕೆ ಬಳಸಿದ ಸಾಕ್ಷ್ಯಚಿತ್ರದಲ್ಲಿ ‘ಇದು ಕೃಷಿ ನೀರಾವರಿ ಯೋಜನೆ’ ಎಂದೇ ಹೇಳಿದೆ. ಎತ್ತಿನಹೊಳೆ ಯೋಜನೆ ವಿಚಾರದಲ್ಲಿಯೂ ಸರ್ಕಾರವು ಸಾರ್ವಜನಿಕರನ್ನು ಗೊಂದಲದಲ್ಲಿಟ್ಟಿದೆ.

ಕರ್ನಾಟಕ ರಾಜ್ಯ ಸರ್ಕಾರವೇ ವಿಜಯಪುರ ಜಿಲ್ಲೆಯ ನಾರಾಯಣಪುರ ಅಣೆಕಟ್ಟೆಯಿಂದ ನೀರೆತ್ತಿ, ಅಣೆಕಟ್ಟೆಯಿಂದ ನೇರ ನೀರಾವರಿಯಾಗದ ಎತ್ತರದ ಜಮೀನುಗಳಿಗೆ ಹನಿ ನೀರಾವರಿ ಮಾಡುವ ರಾಮಥಾಲ್ ಮರೋಳ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇದು ಯಾವುದೇ ರೀತಿಯಲ್ಲೂ ಪರಿಸರಕ್ಕೆ ಧಕ್ಕೆ ಆಗುವ ಯೋಜನೆ ಅಲ್ಲ. ಈ ಯೋಜನೆಯಲ್ಲಿ ಜಮೀನು ಸ್ವಾಧೀನದ ಪ್ರಶ್ನೆಯೂ ಇಲ್ಲ. ಹನಿ ನೀರಾವರಿ ಮಾಡುವುದರಿಂದ ನೀರಿನ ಉಳಿತಾಯವಾಗಲಿದೆ. ಇಂತಹ ಯೋಜನೆಗೇ ಪರಿಸರ ಪರಿಣಾಮ ಆಧ್ಯಯನ ಮಾಡಿ, ಪರಿಸರ ಸಚಿವಾಲಯದಿಂದ ಅನುಮತಿ ಪಡೆದಿರುವಾಗ, ಒಂದು ಬೃಹತ್ ನಗರದ ಕೊಳಚೆ ನೀರನ್ನು ಭಾಗಶಃ ಶುದ್ಧೀಕರಣ ಮಾಡಿ ಕೆರೆಗಳಿಗೆ ಬಿಟ್ಟು ಅಂತರ್ಜಲ ಹೆಚ್ಚಿಸಿ, ಕೃಷಿಗೂ ಕುಡಿಯವುದಕ್ಕೂ ಬಳಸುವ ಉದ್ದೇಶವಿರುವ ಯೋಜನೆಗೆ ಪರಿಸರ ಪರಿಣಾಮಗಳ ಅಧ್ಯಯನದ ಅಗತ್ಯವಿಲ್ಲವೇ? ಎರಡು ಪ್ರಮುಖ ನದಿಗಳ ಜಲಾನಯನಗಳ ಸ್ವರೂಪವನ್ನೇ ಬದಲಾಯಿಸುವ ಇಂತಹ ಯೋಜನೆಯನ್ನು ಕೇಂದ್ರದ ಪರಿಸರ ಸಚಿವಾಲಯದ ನದಿ, ಕಣಿವೆ ಮತ್ತು ಜಲವಿದ್ಯುತ್ ತಜ್ಞರ ಸಮಿತಿಯು ಪರಿಶೀಲಿಸಲೇಬೇಕಿತ್ತು.

ರಾಮಥಾಲ್ ಯೋಜನೆಯಲ್ಲಿ ರೈತರಿಗೆ ನೀರಿನ ಕರ ವಿಧಿಸಲಾಗುತ್ತಿದ್ದು, ಐದು ವರ್ಷಗಳ ನಂತರ ನೀರು ಬಳಕೆದಾರರ ಸಂಘಗಳ ಮೂಲಕ ರೈತರೇ ಈ ಯೋಜನೆಯ ನಿರ್ವಹಣೆ ಮಾಡಿಕೊಂಡು ಹೋಗಬೇಕಾಗುತ್ತದೆ. ಆದರೆ ಕೆ.ಸಿ. ವ್ಯಾಲಿ ಯೋಜನೆಯಲ್ಲಿ 4.40 ಕೋಟಿ ಲೀಟರ್ ನೀರು ಚಿಂತಾಮಣಿ- ಕೋಲಾರಗಳ ಕೆರೆಯಿಂದ ಕೆರೆಗೆ ಹರಿದುಹೋಗಿ ಅಂತರ್ಜಲ ಹೆಚ್ಚುತ್ತದೆ ಎಂಬ ಹೇಳಿಕೆ ಇದೆಯೇ ಹೊರತು, ಕೊಳವೆ ಬಾವಿಗಳಿಂದ ಬರುವ ನೀರಿನ ಪ್ರಮಾಣ, ಅದರ ಗುಣಮಟ್ಟದ ಬಗೆಗಾಗಲಿ, ನೀರಿನ ಬಳಕೆ, ನಿರ್ವಹಣೆ, ಬರುವ ಆದಾಯಗಳ ವಿವರವಾಗಲಿ ಇಲ್ಲ. ‘ಕೆರೆಯಲ್ಲಿ ನೀರಿದ್ದರೆ ಅನುಕೂಲ ಅಲ್ಲವೇ’ ಎಂದು ಯಾರಾದರೂ ಹೇಳಬಹುದಾದರೂ ಯೋಜನೆ ರೂಪಿಸುವವರು ಯೋಜನೆಯ ಖರ್ಚು ಮತ್ತು ಆದಾಯ ಎರಡನ್ನೂ ವಿವರಿಸಬೇಕಲ್ಲವೇ!?

ಜನವಿರೋಧ ಹಾಗೂ ತಾಂತ್ರಿಕ ಮತ್ತು ಕಾನೂನಿನ ತೊಡಕು ಬಂದಿರುವುದರಿಂದ ಸದ್ಯಕ್ಕೆ ನೀರು ಸರಬರಾಜು ನಿಂತಿದೆ. 1280 ಕೋಟಿ ರೂಪಾಯಿಗಳ ಈ ದೊಡ್ಡಯೋಜನೆಯ ಪರಿಣಾಮಗಳ ಬಗ್ಗೆ ಮೊದಲೇ ಅಧ್ಯಯನ ನಡೆಸದೆ, ‘ದುಷ್ಪರಿಣಾಮ ಇದೆ’ ಎಂದು ಮುಂದೆ ಎಂದಾದರೂ ಸಾಬೀತಾದರೆ ಈ ಯೋಜನೆಯನ್ನು ಏನು ಮಾಡುವುದು? ಆಗಿರುವ ಆರ್ಥಿಕ ನಷ್ಟ ಹಾಗೂ ಮುಂದೆ ಆಗಬಹುದಾದ ನೈಸರ್ಗಿಕ ನಷ್ಟಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡುವುದು? ಒಂದು ಯೋಜನೆಯಿಂದ ಅನುಕೂಲ ಆಗದಿದ್ದರೂ ಪರವಾಗಿಲ್ಲ ಅನಾಹುತ ಆಗಬಾರದು. ತೊಂದರೆ ಆಗುವುದಿಲ್ಲ ಎಂಬುದನ್ನು ಖಾತರಿಪಡಿಸುವ ಜವಾಬ್ದಾರಿ ಸರ್ಕಾರದ ಮುಖ್ಯಸ್ಥರಿಗೆ, ಅಧಿಕಾರಿಗಳಿಗೆ ಇರಬೇಕು.

‘ಎಲ್ಲರಿಗೂ ಒಳ್ಳೆಯದಾಗುತ್ತದೆ’ ಎಂದು ಯಾರೋ ಕೆಲವರು ಅವರ ಪಾಡಿಗೆ ಅವರು ತೀರ್ಮಾನಿಸಬಾರದು. ಸಾರ್ವಜನಿಕರು, ತಜ್ಞರ ನಡುವೆ ಚರ್ಚೆ, ವಿಚಾರ ವಿನಿಮಯ ನಡೆಯಬೇಕು, ವಿಮರ್ಶೆಯಾಗಬೇಕು. ಆಮೇಲೆಯೇ ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕು. ಬರಗಾಲ ಬಂದರೆ ಕೆಲವರಿಗೆ ಅದು ಸುಗ್ಗಿಯಾಗುತ್ತದೆ. ಬಹಳ ಹಸಿದವರಿಗೆ, ಬಾಯಾರಿದವರಿಗೆ ಏನೂ ಕೊಟ್ಟರೂ ನುಂಗುತ್ತಾರೆ, ಕುಡಿಯುತ್ತಾರೆ ಎಂಬ ಧೋರಣೆ ಸರಿಯಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT