ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ರಹಿತ ಸಂವಿಧಾನ, ಮತ್ತೊಂದು ಪಠ್ಯ...!

Last Updated 17 ಜನವರಿ 2013, 19:59 IST
ಅಕ್ಷರ ಗಾತ್ರ

ಕೆಲವು ತಿಂಗಳುಗಳ ಹಿಂದೆ `ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಟೀಚರ್ಸ್‌ ಟ್ರೈನಿಂಗ್ ರಿಸರ್ಚ್ `ಅಡಿಯಲ್ಲಿ ರಾಜ್ಯದ ಪಾಲಿಟೆಕ್ನಿಕ್ ಕಾಲೇಜುಗಳ ಉಪನ್ಯಾಸಕರಿಗೆ ತರಬೇತಿ ನೀಡಲು ಸಂವಿಧಾನದ ಬಗ್ಗೆ ಕೈಪಿಡಿಯೊಂದನ್ನು ತರಲಾಗಿತ್ತು.

ಅದರಲ್ಲಿ  “.... ಭಾರತ ಸಂವಿಧಾನದ ಕರಡನ್ನು ಬಿ.ಎನ್.ರಾವ್ ಎಂಬ ಸಂವಿಧಾನ ರಚನಾ ಸಮಿತಿಯ ಅಡ್ವೆಸರಿ ಬ್ರಾಂಚ್‌ನ ಸದಸ್ಯರು ತಯಾರಿಸಿದರು. ಈ ಕರಡನ್ನು 21ನೇ ಆ. 1947 ರಂದು ಡಾ.ಬಿ.ಆರ್.ಅಂಬೇಡ್ಕರ್‌ರ ನೇತೃತ್ವದಲ್ಲಿ ರಚನೆಯಾದ ಕರಡು ಸಿದ್ಧತಾ ಸಭೆಯಲ್ಲಿ ಅಂಬೇಡ್ಕರ್‌ರವರು ಅದನ್ನು ಓದಿದರು....” ಎಂದು ಬರೆಯುವುದರ ಮೂಲಕ ವಿವಾದಕ್ಕೊಳಗಾಗಿತ್ತು. ಪ್ರತಿಭಟನೆಗಳ ನಂತರ ಕೈಪಿಡಿಯನ್ನು ವಾಪಸು ಪಡೆಯಲಾಯಿತು. ಇದೀಗ ಅಂತದ್ದೆ ಅಪರಾಧವನ್ನು ಒಂದು ವಿಶ್ವವಿದ್ಯಾಲಯವೇ ಮಾಡಿದೆ...!?

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ  ಪ್ರಥಮ ಬಿ.ಎ. ಮತ್ತು ಬಿ.ಕಾಂ. ಪದವಿಗಾಗಿ  `ಭಾರತ ಸಂವಿಧಾನ, ಮಾನವ ಹಕ್ಕುಗಳು ಮತ್ತು ಪರಿಸರ ಅಧ್ಯಯನ' ಎಂಬ ಸುಮಾರು 270 ಪುಟಗಳ ಸವಿಸ್ತಾರವಾದ ಪಠ್ಯದಲ್ಲಿ ಡಾ.ಅಂಬೇಡ್ಕರ್‌ರವರ ಹೆಸರನ್ನು ಯಾವುದೇ ವಿಭಾಗದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳದಂತೆ  ಎಚ್ಚರ  ವಹಿಸಿರುವುದು ಎಂತವರಿಗೂ ಈ ಪಠ್ಯ ರಚನಾಕಾರರ ಪೂರ್ವಗ್ರಹ ಕಣ್ಣಿಗೆ ಕಟ್ಟುವಂತೆ ಗೋಚರವಾಗುತ್ತದೆ.

   ಸಂವಿಧಾನದ ಉದ್ದೇಶಗಳು, ಪೀಠಿಕೆ, ಸಂವಿಧಾನದ ಅರ್ಥ, ಸಂವಿಧಾನದ ಮಹತ್ವ, ಭಾರತದ ಸಂವಿಧಾನದ ಬೆಳವಣಿಗೆ ಯಾವುದೇ ಅಧ್ಯಯನದಲ್ಲೂ ಅಂಬೇಡ್ಕರ್‌ರವರ ಹೆಸರು ಬಂದಿಲ್ಲ. ಪಠ್ಯ ರಚನಾಕಾರರು ಸಂವಿಧಾನ ರಚನಾ ಸಮಿತಿಯ ಸಭೆಗಳು ಎಂಬ ಪಟ್ಟಿಯನ್ನು ಕೊಟ್ಟು ಆ ಪಟ್ಟಿಯ ನಂತರ ಸಣ್ಣ ಅಕ್ಷರಗಳಲ್ಲಿ  `ಈ ಮೇಲಿನ ಎಲ್ಲಾ ಸಮಿತಿಗಳಲ್ಲಿ ಕರಡು ರಚನಾ ಸಮಿತಿ ಡಾ.ಅಂಬೇಡ್ಕರ್‌ರವರ ಅಧ್ಯಕ್ಷತೆಯಲ್ಲಿ ರಚಿಸಿದ್ದು ಪ್ರಮುಖವಾದುದ್ದು ಮತ್ತು ಉತ್ತಮ ಕೆಲಸವನ್ನು ಮಾಡಿತು' ಎಂದು ಯಾರಿಗೂ ಕಾಣದಂತೆ ಮಾಡಿರುವುದನ್ನು ಬಿಟ್ಟರೆ ಎಲ್ಲೂ ಬಾಬಾ ಸಾಹೇಬರ ಹೆಸರನ್ನು ನಮೂದಿಸದಂತೆ ಎಚ್ಚರವಹಿಸಿದೆ.
   ಇದರ ನಂತರ `ಸಂವಿಧಾನ ರಚನೆ'  ಎಂಬ ಅಧ್ಯಾಯದಲ್ಲಿ ಡಾ.ಅಂಬೇಡ್ಕರ್‌ರವರನ್ನು ಸ್ಮರಿಸಲೇಬೇಕಾದ ಅನಿವಾರ್ಯತೆ ಇದ್ದರೂ ಅದನ್ನು ಮರೆಮಾಚಿ ಈ ಕೆಳಗಿನಂತೆ ಬರೆಯಲಾಗಿದೆ.

   “ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿ ಡಾ.ರಾಜೇಂದ್ರ ಪ್ರಸಾದರವರನ್ನು ಆಯ್ಕೆ ಮಾಡಲಾಯಿತು. ಈ ಮುಂಚೆ ತಿಳಿಸಿದ ಹಲವಾರು ಸಮಿತಿಗಳ ದರಗಳ ಆಧಾರದ ಮೇಲೆ, ಸಂವಿಧಾನದ ಕರಡನ್ನು ಸಿದ್ಧಪಡಿಸಲಾಯಿತು. ಈ ಕರಡನ್ನು  ಕರಡು  ರಚನಾ ಸಮಿತಿ ಸಿದ್ಧಪಡಿಸಿತು.

   ಈ ರೀತಿ ಸಿದ್ಧಪಡಿಸಿದ ಸಂವಿಧಾನದ ಕರಡನ್ನು 1948ರ ಜನವರಿ 21ರಂದು ಸಂವಿಧಾನದ ರಚನಾ ಸಭೆಯ ಅಧ್ಯಕ್ಷರಿಗೆ ಒಪ್ಪಿಸಲಾಯಿತು. ಫೆಬ್ರವರಿ 26ರಂದು ಜನಾಭಿಪ್ರಾಯಕ್ಕೆ ಕರಡನ್ನು ಇಡಲಾಯಿತು. ಸಂವಿಧಾನದ ಕರಡನ್ನು 1948ರ ನವೆಂಬರ್, 5ರಂದು ಸಂವಿಧಾನದ ರಚನಾ ಸಭೆಯ ಮುಂದೆ ಮಂಡಿಸಲಾಯಿತು. ಸಭೆಯಲ್ಲಿ ದೀರ್ಘ ಚರ್ಚೆಯಾದ ನಂತರ, ಅಂಗೀಕಾರ ನೀಡಿ ಕರಡನ್ನು ಅನುಮೋದಿಸಲಾಯಿತು. ಇದಕ್ಕೆ ಬೇಕಾದಷ್ಟು ಬದಲಾವಣೆಗಳನ್ನು ಸಭೆ ಮಾಡಿತು. 1949ರ ನ. 26ರಂದು ಅಂತಿಮವಾಗಿ ಅಂಗೀಕೃತವಾಯಿತು.

ಹೀಗೆ, ಸಂವಿಧಾನ ರಚನಾ ಸಭೆ 2 ವರ್ಷ, 11 ತಿಂಗಳು, 8 ದಿನಗಳನ್ನು ತೆಗೆದುಕೊಂಡು ಸ್ವಾತಂತ್ರ್ಯ ಭಾರತಕ್ಕೆ ಹೊಸದಾದ ಮತ್ತು ತನ್ನದೇ ಆದ ಸಂವಿಧಾನವನ್ನು ಸಿದ್ಧಪಡಿಸಿತು. ಒಟ್ಟಾರೆ ಸಂವಿಧಾನ ರಚನಾ ಸಭೆ ಹನ್ನೊಂದು ಅಧಿವೇಶನಗಳನ್ನು 165, ದಿನಗಳಲ್ಲಿ ನಡೆಸಿ, ಅದರಲ್ಲಿ 114 ದಿನಗಳು ಕರಡು ಸಂವಿಧಾನವನ್ನು ಚರ್ಚಿಸಿ ಅಂತಿಮವಾಗಿ ಸಂವಿಧಾನದಲ್ಲಿ 395 ವಿಧಿಗಳು ಮತ್ತು 8 ಅನುಚ್ಛೇದಗಳನ್ನು ಹೊಂದಿತ್ತು. ಈ ಸಂವಿಧಾನ 1950ರ ಜ. 26 ರಂದು ಜಾರಿಗೆ ಬಂದಿತು”  ಎಂದು ಮುಂದುವರೆದು ಅಂತೆಯೇ ಸಂವಿಧಾನ ರಚನಾ ಸಭೆಯ ಸ್ಥಾನ ಎಂಬ ಅಧ್ಯಾಯದಲ್ಲಿಯೂ ಅಂಬೇಡ್ಕರ್‌ರವರ ಹೆಸರನ್ನು ಮರೆಮಾಚಿ ಈ ಕೆಳಗಿನಂತೆ ನೀಡಲಾಗಿದೆ.

“....ಕಾಂಗ್ರೆಸ್ ಸದಸ್ಯರೇ ಹೆಚ್ಚು ಇದ್ದ ಸಂವಿಧಾನ ರಚನಾ ಸಭೆಯಲ್ಲಿ ಕಾಂಗ್ರೆಸ್ಸಿನ ಪಾತ್ರವೂ ವಿಶೇಷವಾಗಿತ್ತು. ಕಾಂಗ್ರೆಸ್ಸಿನ ಪ್ರಮುಖ ವ್ಯಕ್ತಿಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಮಹಾ ಪುರುಷರೆಂದು ಪ್ರಸಿದ್ಧಿಯಾಗಿದ್ದ ಜವಹರಲಾಲ್ ನೆಹರೂ,ವಲ್ಲಭಬಾಯ್‌ಪಟೇಲ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಮೌಲಾನ ಅಬುಲ್ ಕಲಮ್ ಅಜಾದ್ ನಿರ್ವಹಿಸಿದ ಪಾತ್ರ ಅಮೂಲ್ಯ ಮತ್ತು ರಚನಾತ್ಮಕವಾಗಿತ್ತು. ಇವರೆಲ್ಲರೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೂ, ಮಂತ್ರಿಗಳೂ ಆಗಿದ್ದರಿಂದ ಸಂವಿಧಾನ ಸಭೆಯಲ್ಲಿ ಇವರ ಸಲಹೆಗಳಿಗೆ ಹೆಚ್ಚು ಪ್ರಾಶಸ್ತ್ಯ ದೊರೆಯುತ್ತಿತ್ತು.

ಇವರೆಲ್ಲರೂ ಸಂವಿಧಾನದ ರಚನೆಯಲ್ಲಿ ವಿಶೇಷ ಪ್ರಭಾವವನ್ನು ಬೀರಿರುವರು, ಇವರಲ್ಲದೆ ಇನ್ನೂ ಅನೇಕ ಮಂದಿ ತಮ್ಮ ಕೊಡುಗೆಯನ್ನು ನೀಡಿ ಸಂವಿಧಾನದ ರಚನೆಗೆ ಸಹಾಯ ಮಾಡಿದ್ದಾರೆ. ಎಚ್.ವಿ.ಕಾಮತ್, ಕೆ.ಸಂತಾನಂ, ಟಿ.ಟಿ.ಕೃಷ್ಣಮಾಚಾರಿ, ಕೆ.ಎಂ.ಮುನ್ಶಿ, ಡಾ.ಎಸ್.ರಾಧಾಕೃಷ್ಣನ್ ಮುಂತಾದ ಸದಸ್ಯರಾಗಿ, ಎ.ರಾಮಸ್ವಾಮಿ ಮೊದಲಿಯಾರ್, ಸಿ.ಪಿ.ರಾಮಸ್ವಾಮಿ ಅಯ್ಯರ್, ಕೆ.ಹನುಮಂತಯ್ಯ, ಎಸ್.ನಿಜಲಿಂಗಪ್ಪ ಮುಂತಾದ ಗಣ್ಯರು ಸಹ ಪ್ರತಿನಿಧಿಗಳಾಗಿ ಮುಖ್ಯ ಪಾತ್ರ ವಹಿಸಿರುವರು. ಅಲ್ಲದೆ, ಸಂವಿಧಾನ ರಚನಾ ಸಭೆಯಲ್ಲಿ  ಮಹಿಳಾ ಸದಸ್ಯರೂ ಸಹ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಹನ್ಸ್ ಮೆಹತ, ಸುಚೇತಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಸರೋಜಿನಿ ನಾಯ್ಡು ಮತ್ತು ರಾಜಕುಮಾರಿ ಅಮೃತಕೌರ್  ಎಂದು ಅಂಬೇಡ್ಕರ್‌ರವರನ್ನು ಹೊರತುಪಡಿಸಿ ಎಲ್ಲರ ಹೆಸರನ್ನು ಹೇಳಲಾಗಿದೆ.

   ಈ ಪಠ್ಯದ ಪಠ್ಯಕ್ರಮ ವಿನ್ಯಾಸ ಮತ್ತು ಸಂಪಾದಕ ಮಂಡಳಿಯಲ್ಲಿ  ವಿಶ್ವವಿದ್ಯಾಲಯದ ಕುಲಪತಿಗಳು ಮತ್ತು ಅಧ್ಯಕ್ಷರಾದ ಪ್ರೊ.ಕೆ.ಎಸ್.ರಂಗಪ್ಪ ಮತ್ತು ಡೀನ್ (ಶೈಕ್ಷಣಿಕ) ಮತ್ತು ಪ್ರೊ.ಎಸ್.ಎನ್. ವಿಕ್ರಮ್‌ರಾಜ್ ಅರಸುರವರಿದ್ದಾರೆ. ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಕೆ.ಜೆ.ಸುರೇಶ್ ಈ ಪಠ್ಯದ ವಿಷಯ ಸಂಯೋಜಕರಾಗಿದ್ದಾರೆ. ಅಂತೆಯೇ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಟಿ.ಡಿ.ದೇವೇಗೌಡ ಹಾಗೂ ಪರಿಸರ ವಿಜ್ಞಾನ ವಿಭಾಗದ ಅಧ್ಯಾಪಕರಾದ ಡಾ.ಟಿ.ಎಸ್. ಹರ್ಷ ಈ ಪಠ್ಯದ ಲೇಖಕರಾಗಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT