ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಜಾದಿ ಕೊಡುವವರು ಯಾರು?

Last Updated 25 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆಜಾದಿ ಎಂಬ ಪದ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡಿದಂತೆ ಹಿಂದೆಂದೂ ಮಾಡಿರಲಿಲ್ಲ. ಜೆಎನ್‌ಯುನಿಂದ ಮೊದಲುಗೊಂಡು ಮೊನ್ನೆ ಬೆಂಗಳೂರಿನಲ್ಲಿ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆ ಆಯೋಜಿಸಿದ್ದ ವಿವಾದಿತ ಚರ್ಚಾ ಕಾರ್ಯಕ್ರಮದವರೆಗೆ ಎಲ್ಲಾ ಕಡೆ ಈ ಆಜಾದಿ ಪದಪ್ರಯೋಗ ನಡೆಯುತ್ತಲೇ ಬಂದಿದೆ. ಆಜಾದಿ ಎಂದರೆ ಸ್ವಾತಂತ್ರ್ಯ ಅಥವಾ ನೈಜ ಅರ್ಥದಲ್ಲಿ ಬಿಡುಗಡೆ. ಆದರೆ ಯಾವುದರಿಂದ ಬಿಡುಗಡೆ ಬೇಕು? ಯಾರಿಗೆ ಬೇಕು? ಯಾಕೆ ಬೇಕು? ಉತ್ತರ ಮಾತ್ರ ಯಾರಲ್ಲೂ ಇಲ್ಲ.

ಎಲ್ಲರಿಗೂ ಆಜಾದಿ ಬೇಕು, ಬಡತನದಿಂದ, ನಿರುದ್ಯೋಗದಿಂದ, ಭಯದ ವಾತಾವರಣದಿಂದ, ಅಸಮಾನತೆಯಿಂದ. ಆದರೆ ನೀಡುವವರು ಯಾರು? ಎಲ್ಲರೂ ಅವರವರ ಭಾವನೆಗೆ, ವಿಚಾರಕ್ಕೆ ತಕ್ಕಂತೆ ಅವರವರ ಸ್ವಾತಂತ್ರ್ಯದ ದಾರಿಯನ್ನು ಹುಡುಕುತ್ತಿದ್ದಾರೆ.

ರಾಜಕೀಯ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹೀಗೆ ಹಲವು ಸ್ವಾತಂತ್ರ್ಯಗಳಿಗೋಸ್ಕರ ನಿತ್ಯ ಒಂದಲ್ಲ ಒಂದು ಕಡೆ ಯಾರೋ ಒಬ್ಬರು ಧ್ವನಿ ಏರಿಸುತ್ತಲೇ ಬಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯ ಸೇರಿದಂತೆ ಒಟ್ಟಾರೆ ಇಲ್ಲಿ ಎಲ್ಲರಿಗೂ ಒಂದಲ್ಲ ಒಂದು ಸ್ವಾತಂತ್ರ್ಯವಂತೂ ಬೇಕೇಬೇಕು. ನಿಜಕ್ಕೂ ಈ ಆಜಾದಿ ಎಂದರೇನು? ನನ್ನ ಮೇಲೆ ಮತ್ತೊಬ್ಬರು ಅಧಿಕಾರ ಚಲಾಯಿಸುವುದನ್ನು ವಿರೋಧಿಸುವುದು ಹಾಗೇ ನನ್ನ ಮೇಲೆ ನಾನೇ ಸಂಪೂರ್ಣ ನಿಯಂತ್ರಣ ಹೊಂದುವುದೇ ಆಜಾದಿ ಅರ್ಥಾತ್ ಸ್ವಾತಂತ್ರ್ಯ. ಸರ್ಕಾರ ಒಂದು ಅಧಿಕಾರ. ಅದರ ಬಳಿ ಕಾನೂನು, ಪೊಲೀಸು, ಸೇನೆ ಎಲ್ಲವೂ ಇರುತ್ತವೆ. ಇವನ್ನು ಉಪಯೋಗಿಸಿಕೊಂಡು ಅದು ವ್ಯವಸ್ಥೆಯನ್ನು ನಡೆಸುತ್ತದೆ.

ಇವೆಲ್ಲ ನಾವೇ ನಮ್ಮ ಸುರಕ್ಷತೆಗಾಗಿ ಸೃಷ್ಟಿಸಿಕೊಂಡ ಅಧಿಕಾರಗಳು. ನಮ್ಮ ಆಸ್ತಿಪಾಸ್ತಿ, ಪ್ರಾಣ, ಮಾನದ ರಕ್ಷಣೆ ಎಲ್ಲ ಏಕವ್ಯಕ್ತಿಯಿಂದ ಸಾಧ್ಯವಿಲ್ಲ. ಅದಕ್ಕಾಗಿಯೆ ಸಾಮೂಹಿಕ ಹೊಣೆಗಾರಿಕೆ ರೂಪದಲ್ಲಿ ಒಂದಷ್ಟು ಹಕ್ಕುಗಳು, ಅಧಿಕಾರವನ್ನು ಕೆಲವರಿಗೆ ಕೊಟ್ಟು ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತಿದ್ದೇವೆ. ಅನೇಕ ಶತಮಾನಗಳ ಅವಧಿಯಲ್ಲಿ ಕಾನೂನಿನ ವ್ಯವಸ್ಥೆ ಸೃಷ್ಟಿಸಿಕೊಂಡಿದ್ದೇವೆ. ಇದರ ಎಲ್ಲೆ ಮೀರಿದರೆ ದೇಶದ್ರೋಹವೆಂದು ವ್ಯಾಖ್ಯಾನಿಸುತ್ತಾರೆ.

ಪ್ರತಿಯೊಬ್ಬರೂ ಸ್ವಾತಂತ್ರ್ಯ ಅಪೇಕ್ಷಿಸುತ್ತಾರೆ. ಅದು ಮುಕ್ತವಾಗಿರಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲಕ್ಕೂ ಒಂದು ಮಿತಿ ಇರುತ್ತದೆ. ಎಲ್ಲೆ ಮೀರಿದ ಸ್ವಾತಂತ್ರ್ಯ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ನನ್ನ ಸ್ವಾತಂತ್ರ್ಯ ಮತ್ತೊಬ್ಬರ ಅಭಿವ್ಯಕ್ತಿ ಸ್ವಾತಂತ್ರ್ಯ ಕಿತ್ತುಕೊಳ್ಳುವುದಲ್ಲ. ನಾನು ನಡೆದದ್ದೇ ಸರಿ, ನಿನ್ನದು ತಪ್ಪು ಎಂದು ನಿರ್ಧರಿಸುವುದಲ್ಲ. ಸ್ವಾತಂತ್ರ್ಯವೆಂದರೆ ಸಮಾಜದಲ್ಲಿನ ಅಸಮಾನತೆ, ದಬ್ಬಾಳಿಕೆ, ದೌರ್ಜನ್ಯಗಳನ್ನು ಮುಕ್ತವಾಗಿ ವಿಮರ್ಶಿಸುವ ಸಾಧನ.  

ಇಲ್ಲಿ ಪ್ರತಿಯೊಬ್ಬರಿಗೂ ಒಂದಷ್ಟು ನಂಬಿಕೆಗಳಿವೆ, ಬದುಕಿನ ಮಾರ್ಗ, ವಿಧಾನಗಳು, ಆದರ್ಶಗಳಿವೆ. ಇವನ್ನೆಲ್ಲ ಪ್ರಶ್ನಿಸುವುದೇ ಸ್ವಾತಂತ್ರ್ಯವಾಗಿಬಿಟ್ಟರೆ ಅದು ಸಮಾಜದೊಳಗಿನ ಅಂತರ್ಯುದ್ಧಕ್ಕೆ ಪ್ರೇರೇಪಿಸುತ್ತದೆ. ಎಡಪಂಥೀಯ, ಬಲಪಂಥೀಯ, ಸಮಾಜವಾದ ಹೀಗೆ ಅನೇಕ ತರದ ಸಿದ್ಧಾಂತಗಳಿವೆ. ಹೀಗಾಗಿ ನಾವು ಯಾವ ವಾದಕ್ಕೆ ಮನ್ನಣೆ ನೀಡುತ್ತೇವೋ ಅದೇ ನಮಗೆ ಸರಿ ಮತ್ತು ಅದನ್ನೇ ಎಲ್ಲರೂ ಒಪ್ಪಬೇಕೆಂದು ಅಪೇಕ್ಷಿಸುತ್ತೇವೆ. ಇದನ್ನು ಪ್ರಶ್ನಿಸಿದರೆ ದೇಶದ್ರೋಹಿಗಳು, ಮನುವಾದಿಗಳು, ಪುರೋಹಿತಶಾಹಿಗಳು,  ಬಂಡವಾಳ ಶಾಹಿಗಳೆಂದು ಹಣೆಪಟ್ಟಿ ಕಟ್ಟಿಬಿಡುತ್ತೇವೆ. ಏಕೆಂದರೆ ನಮಗೆ ಸ್ವಾತಂತ್ರ್ಯವಿದೆ, ನಮಗೆ ಏನಾದರೂ ಹೇಳುವ ಆಜಾದಿ ಇದೆ ಅದಕ್ಕೆ. ವಾಸ್ತವ ಏನೆಂದರೆ ಪ್ರಜಾಪ್ರಭುತ್ವ, ಕಮ್ಯುನಿಸ್ಟ್, ಸಮಾಜವಾದ ಹೀಗೆ ಯಾವುದೇ ರಾಜ್ಯವಾಗಿರಲಿ ಅಲ್ಲಿನ ಶ್ರೀಸಾಮಾನ್ಯ ಹೇಗೆ ವರ್ತಿಸಬೇಕು ಎಂಬ ಬಗ್ಗೆ ರಾಜ್ಯಾಧಿಕಾರಕ್ಕೆ (ಸರ್ಕಾರಕ್ಕೆ) ತನ್ನದೇ ಆದ ವಿಚಾರಗಳಿರುತ್ತವೆ.

ದೇಶವೇ ಅತ್ಯಂತ ಮುಖ್ಯವಾದದ್ದು, ನಾನು ಯಾವ ದೇಶದಲ್ಲಿ ವಾಸಿಸುತ್ತಿದ್ದರೆ ಆ ದೇಶದ ಅಧಿಕೃತ ವಿಚಾರ, ಪ್ರಣಾಳಿಕೆಗೆ ತಕ್ಕಂತೆ ಬದುಕಬೇಕಾಗುತ್ತದೆ.
ಸ್ವಾತಂತ್ರ್ಯದ ಸಂಘರ್ಷ ಶುರುವಾಗುವುದೇ ಇಲ್ಲಿ. ಅತಿಯಾದ ಎಡಪಂಥೀಯ, ನಿರಂಕುಶವಾದದ ಭಾರಕ್ಕೆ ನಲುಗಿ ಅನೇಕ ದೇಶಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದ್ದು ಇತಿಹಾಸದಿಂದ ತಿಳಿದು ಬರುವ ನಗ್ನಸತ್ಯ. ಯಾವುದೇ ಸಿದ್ಧಾಂತದ ಅತಿಯಾದ ಭಾರವನ್ನು ವ್ಯವಸ್ಥೆ (ಪ್ರಜೆಗಳು) ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ಪೊಲೀಸರ ಅಧಿಕಾರ, ಕಾನೂನಿನ ಅಧಿಕಾರ, ಸಂಪ್ರದಾಯದ ಅಧಿಕಾರ ಯಾವುದೇ ಇರಬಹುದು, ಪ್ರತಿರೋಧಕ್ಕೆ ದಾರಿ ಮಾಡುತ್ತದೆ. ಬೇಕು-ಬೇಡ, ಮಾಡಬೇಕು-ಮಾಡಬಾರದು ಎಂಬ ವಿಧಿ ನಿಷೇಧಗಳ ಗೋಡೆಗಳೇ ಹೆಚ್ಚು ಹೆಚ್ಚು ಸ್ವಾತಂತ್ರ್ಯದ ಹಕ್ಕಿಗೆ ಪ್ರಚೋದಿಸುತ್ತವೆ. ಸಮಾಜವೆಂದರೆ ಕೆಲವು ನಿಯಮ, ಕೆಲವು ನಿಬಂಧನೆ, ಕೆಲವು ಮೌಲ್ಯ ಮತ್ತು ಪರಂಪರೆಗಳ ಸಮೂಹ. ಇಲ್ಲಿ ಶೋಷಣೆ, ದಬ್ಬಾಳಿಕೆಯಿಂದ ಪ್ರತಿಯೊಬ್ಬರಿಗೂ ಆಜಾದಿ ಬೇಕು.

ಅಂತಸ್ತಿನ ಏಣಿ ಏರಿ ಮೇಲಕ್ಕೆ ಬರುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಆದರೆ ದುರಾಸೆಯುಳ್ಳವರು (ಭ್ರಷ್ಟರು), ಕುತಂತ್ರಿಗಳು (ರಾಜಕಾರಣಿಗಳು) ಶೋಷಣೆ ಮಾಡುತ್ತಾ ಮೇಲೆ ಬರುವುದಕ್ಕೆ ಸಮಾಜವೇ ಅವಕಾಶ ಮಾಡಿಕೊಟ್ಟಿದೆ. ಅದಕ್ಕಾಗಿ ಇಲ್ಲಿ ಪ್ರತಿಯೊಬ್ಬರೂ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಜನರನ್ನು ಪ್ರಚೋದಿಸುತ್ತಿದ್ದಾರೆ. ಒಬ್ಬರು ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದರೆ, ಮತ್ತೊಬ್ಬರು ಅಯ್ಯೋ ಎಲ್ಲಾದರೂ ಊಂಟೆ, ಸ್ವರ್ಗಕ್ಕೆ ಹೋದಂತೆ ಎನ್ನುತ್ತಿದ್ದಾರೆ. ಆದರೆ ನಮ್ಮಲ್ಲಿರುವ ನರಕ, ಸ್ವರ್ಗಗಳೆರಡೂ ನಮಗೆ ಕಾಣದಾಗಿವೆ. ನಮ್ಮಲ್ಲಿ ಬಡತನವಿದೆ, ನಿರುದ್ಯೋಗವಿದೆ, ಶೋಷಣೆ, ದಬ್ಬಾಳಿಕೆಗಳ ಮಧ್ಯೆ ಬದುಕಿನ ಬಂಡಿ ನಡೆಯುತ್ತಿದೆ. ಆದರೆ ಇಂಥ ವಿಚಾರಗಳ ಬಗ್ಗೆ ನಾವೆಲ್ಲ ಮೌನವಾಗಿದ್ದೇವೆ. ನಮಗೆಲ್ಲಾ ಆಜಾದಿ, ಸ್ವಾತಂತ್ರ್ಯದಂಥ ದೊಡ್ಡ ದೊಡ್ಡ ಪದಗಳು ಮಾತ್ರ ಗೊತ್ತು. ಅವನ್ನು ಬಳಸಿ ಅಧಿಕಾರದ ಮಾರ್ಗ ಹುಡುಕುತ್ತಿದ್ದೇವೆ.

ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಮಾಡುವ ಕೆಲಸಗಳು ಸಮಾಜದ ಇತರ ವರ್ಗಗಳ ಮೇಲೆ ಉಂಟು ಮಾಡುವ ಪರಿಣಾಮಗಳನ್ನು ಗ್ರಹಿಸಬೇಕು. ಇಲ್ಲದೇ ಹೋದರೆ ಅದು ವಿವೇಕರಹಿತ ಕ್ರಿಯೆಯಾಗುತ್ತದೆ. ನನ್ನ ಆಜಾದಿ, ನನ್ನ ಸ್ವಾತಂತ್ರ್ಯ ಮತ್ತೊಬ್ಬರ ನಂಬಿಕೆಗಳನ್ನು ಪ್ರಶ್ನಿಸುವುದಲ್ಲ. ಬದಲಾಗಿ ನನ್ನ ವಿಚಾರಗಳನ್ನು ಸಮಾಜಮುಕ್ತವಾಗಿಸುವುದು. ನನ್ನ, ನನ್ನ ಪ್ರಶ್ನೆಗಳನ್ನು ಸಮಾಜದ ಮುಂದೆ ತೆರೆದಿಟ್ಟುಕೊಳ್ಳುವ ಕ್ರಿಯೆ ಬೇರೆ, ನಾನು ನನ್ನ ಪ್ರಶ್ನೆಗಳ ಮೂಲಕ ಮತ್ತೊಬ್ಬರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವುದು ಬೇರೆ. ಒಂದು ಕ್ರಿಯೆಗೆ ಸಹಜವಾಗಿ ಒಂದು ಪ್ರತಿಕ್ರಿಯೆ ಇರುತ್ತದೆ.

ಇದನ್ನು ಸರಿಯಾಗಿ ಗ್ರಹಿಸಿಯೇ ಉದ್ದೇಶಪೂರ್ವಕವಾಗಿ ಒಂದು ವಿಚಾರದ ಪರ-ವಿರುದ್ಧ ಎಂಬ ಹೆಸರಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವುದು, ಹೋರಾಟಗಳನ್ನು ಹಮ್ಮಿಕೊಳ್ಳುವುದು ನಡೆಯುತ್ತಿದೆ. ಇಲ್ಲಿ ಎಲ್ಲರಿಗೂ ತಮ್ಮ ಇರುವಿಕೆ ಅಥವಾ ಅಸ್ತಿತ್ವ ಸಾಬೀತುಪಡಿಸಿಕೊಳ್ಳುವ ಅನಿವಾರ್ಯ ಹಿಂದಿಗಿಂತ ಇಂದು ಹೆಚ್ಚಾಗಿದೆ. ಹೊಣೆಗಾರಿಕೆ ಇಲ್ಲದ ಹೋರಾಟಗಳು, ಸೈದ್ಧಾಂತಿಕ ಸಂಘರ್ಷಗಳ ಮೂಲಕ ಜನಸಾಮಾನ್ಯರನ್ನು ಪ್ರಚೋದಿಸುತ್ತಿರುವ ಇವರಿಗೆಲ್ಲಾ ಅವರು ಯಂತ್ರಗಳಂತೆ ಕಾಣುತ್ತಿದ್ದಾರೆ. ತಮ್ಮ ತಮ್ಮ ಸಿದ್ಧಾಂತಗಳಿಗೆ ತಕ್ಕಂತೆ ಈ ಯಂತ್ರಗಳು ವರ್ತಿಸಬೇಕೆಂದು ಇವರೆಲ್ಲ ಬಯಸುತ್ತಿದ್ದಾರೆ. ಒಟ್ಟಾರೆ ಇಲ್ಲಿ ಅಂತಿಮ ಬಲಿಪಶುಗಳು ಮಾತ್ರ ಯಾವುದಕ್ಕೂ ಸಂಬಂಧವಿಲ್ಲದ ಜನಸಾಮಾನ್ಯರು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT