ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಟ್ ಗೊಂದಲದಲ್ಲಿ ಸಹಕಾರಿ ಸಂಘ ಸಂಸ್ಥೆಗಳು

Last Updated 13 ಮೇ 2013, 19:59 IST
ಅಕ್ಷರ ಗಾತ್ರ

ದೇಶದಲ್ಲಿ ಸಹಕಾರಿ ಚಳವಳಿಯು ಸಾಕಷ್ಟು ಯಶ ಕಂಡಿದ್ದು, ಕಾಲ ಕಾಲಕ್ಕೆ ಸಹಕಾರಿ ಕಾಯ್ದೆ ತಿದ್ದುಪಡಿಯಾಗುತ್ತಾ ಬಂದಿದೆ. ಸಹಕಾರ ಸಂಘ ಸಂಸ್ಥೆಗಳಿಗೆ ಸ್ವಾಯತ್ತತೆ ನೀಡಿ, ಪ್ರಜಾಸತ್ತಾತ್ಮಕ ಹತೋಟಿ ಹೊಂದುವ ಮೂಲಕ ವೃತ್ತಿ ಪರ ನಿರ್ವಹಣೆಗೆ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ಮಾಡಿದ್ದು, ಅದನ್ನು  ಸಂವಿಧಾನ (97ನೇ ತಿದ್ದುಪಡಿ) ಅಧಿನಿಯಮ 2011' ಎಂದು ಕರೆಲಾಗಿದೆ. ರಾಜ್ಯ ಸರ್ಕಾರವೂ, `ಕರ್ನಾಟಕ ಸಹಕಾರಿ ಸಂಘಗಳ ಕಾಯ್ದೆ 1959ಕ್ಕೆ ತಿದ್ದುಪಡಿ ತಂದಿದೆ.

ತಿದ್ದುಪಡಿಗೊಂಡ ಕಾಯ್ದೆ 1959ರ ಕಲಂ 63(1)ರ ಅನ್ವಯ, ಪ್ರತಿ  ಸಹಕಾರ ಸಂಘವು ತನ್ನ ಲೆಕ್ಕ ಪತ್ರಗಳನ್ನು ಸನ್ನದು ಲೆಕ್ಕಪರಿಶೋಧಕರ ಸಂಸ್ಥೆ ಅಥವಾ ಸನ್ನದು ಲೆಕ್ಕಪರಿಶೋಧಕರ ಪಟ್ಟಿಯಲ್ಲಿರುವ ಯಾರಾದರೊಬ್ಬರನ್ನು ಸಹಕಾರ ಸಂಘದ ಸರ್ವಸದಸ್ಯರ ಸಭೆಯಲ್ಲಿ ನೇಮಕ ಮಾಡಿಕೊಂಡು ಸೆಪ್ಟಂಬರ್ 1ರ ಒಳಗೆ ಲೆಕ್ಕ ಪರಿಶೋಧನೆ ಮಾಡಿಸಬೇಕು.

ಕಾಯ್ದೆ ಪ್ರಕಾರ, ಲೆಕ್ಕಪರಿಶೋಧಕರ ನೇಮಕದ ಅಧಿಕಾರ ಸರ್ವ ಸದಸ್ಯರ ಸಭೆಗೆ ಇರುವುದರಿಂದ 2012-13ನೇ ಸಾಲಿನ ಲೆಕ್ಕಪತ್ರ ಪರಿಶೀಲನೆ ಮಾಡಿಸಲು ಉಂಟಾಗುವ ತೊಡಕು ನಿವಾರಣೆ ಮಾಡಲು, 2013ರ ಏಪ್ರಿಲ್ 15ರಂದು ಸರ್ಕಾರ ಆದೇಶ ಹೊರಡಿಸಿ, 2012-13ನೇ ಸಾಲಿನ ಲೆಕ್ಕ ಪತ್ರ ಪರಿಶೀಲನೆ ಮಾಡಿಸಲು, ಲೆಕ್ಕ ಪರಿಶೋಧಕರನ್ನು ನೇಮಕ ಮಾಡಿಕೊಳ್ಳಲು ಆಡಳಿತ ಮಂಡಳಿಗೆ ಅಧಿಕಾರ ನೀಡಿದೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರಿಂದ ಅನುಮೋದನೆಗೊಂಡಿರುವ ಸನ್ನದು ಲೆಕ್ಕ ಪರಿಶೋಧನಾ ಸಂಸ್ಥೆ ಅಥವಾ ಸನ್ನದು ಲೆಕ್ಕಪರಿಶೋಧಕರ ಪಟ್ಟಿಯಲ್ಲಿರುವವರನ್ನು10ಕ್ಕೆ ಮೀರದಂತೆ ಆಯ್ಕೆ ಮಾಡಿ ಆ ಪಟ್ಟಿಯಲ್ಲಿರುವ ಯಾರಾದರೊಬ್ಬರನ್ನು ಆಯ್ಕೆ ಮಾಡಿ ನೇಮಕ ಮಾಡಿಕೊಳ್ಳಬಹುದಾಗಿದೆ. ಆರ್ಥಿಕ ವರ್ಷ ಮುಗಿದ 30 ದಿನಗಳ ಒಳಗಾಗಿ ಪ್ರತಿ ಸಹಕಾರ ಸಂಘಕ್ಕೆ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರು ಪತ್ರ ಕಳುಹಿಸಬೇಕು. ಈ ನಿರ್ಬಂಧವೇ ಈಗ ಸಾಕಷ್ಟು ಗೊಂದಲ ಸೃಷ್ಟಿಸಿದೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಎಲ್ಲಾ ಸಹಕಾರ ಸಂಘಗಳಿಗೆ ಪತ್ರ ಬರೆದು ಪ್ರತಿ ಸಹಕಾರ ಸಂಘಕ್ಕೆ ಮೂವರು ಲೆಕ್ಕಪರಿಶೋಧಕರನ್ನು ಸೂಚಿಸಿ, ಆ ಮೂವರಲ್ಲಿ ಒಬ್ಬರನ್ನು ಲೆಕ್ಕ ಪರಿಶೋಧನೆಗೆ 15 ದಿನಗಳ ಒಳಗಾಗಿ ನೇಮಕ ಮಾಡಿಕೊಂಡು, ನೇಮಕ ಮಾಡಿಕೊಂಡ ಬಗ್ಗೆ ಇಲಾಖೆಗೆ ಮಾಹಿತಿ ನೀಡಲು ಸೂಚಿಸಿರುತ್ತಾರೆ. ಈ ಪತ್ರಕ್ಕೆ ಸ್ಪಂದಿಸಿ ಪತ್ರದಲ್ಲಿ ಸೂಚಿಸಿರುವ ಮೂವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಇಲಾಖೆಗೆ ಮಾಹಿತಿ ನೀಡಿರುವ ಸಹಕಾರ ಸಂಘಗಳು ಬೆರಳೆಣಿಕೆಯಷ್ಟು ಮಾತ್ರ.

ಬಹುತೇಕ ಸಹಕಾರಿಗಳ ವಾದ ಏನೆಂದರೆ, ಈ ನಿರ್ಬಂಧವು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ. ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ಅನುಮೋದಿಸಿದ ಪಟ್ಟಿಯಲ್ಲಿರುವ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡಿಕೊಂಡು, ಲೆಕ್ಕ ಪರಿಶೋಧನೆ ಮಾಡಿಸಲು ಮುಕ್ತ ಅವಕಾಶ ಸಹಕಾರ ಸಂಘಗಳಿಗೆ ಇರಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದಾರೆ.

ಇದೇ ವಿಚಾರದಲ್ಲಿ ದಾವಣಗೆರೆ ಹರಿಹರ ಕೇಂದ್ರ ಸಹಕಾರ ಸಗಟು ಮಾರಾಟ ಅಂಗಡಿ ನಿಯಮಿತವು ಹೈಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಲೆಕ್ಕ ಪರಿಶೋಧಕರ ನೇಮಕಕ್ಕೆ ಇಲಾಖೆ ಕೇವಲ ಮೂವರು ಲೆಕ್ಕ ಪರಿಶೋಧಕರ ಹೆಸರನ್ನು ಸೂಚಿಸಿ ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಸೂಚಿಸಿರುವುದು ಸರಿಯಲ್ಲ ಎಂದು ತನ್ನ ವಾದ ಮಂಡಿಸಿತು.

ವಾದ ಆಲಿಸಿದ ನ್ಯಾಯಮೂರ್ತಿಗಳು ದಾವೆದಾರ ದಾವಣಗೆರೆ ಹರಿಹರ ಕೇಂದ್ರ ಸಹಕಾರ ಸಗಟು ಮಾರಾಟ ಅಂಗಡಿ ನಿಯಮಿತಕ್ಕೆ ಅನ್ವಯವಾಗುವಂತೆ ಮಧ್ಯಂತರ ಆದೇಶ ನೀಡಿ 2013ರ ಸೆಪ್ಟೆಂಬರ್ 1ರ ಒಳಗಾಗಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ನಿರ್ದೇಶಕರಿಂದ ಅನುಮೋದನೆಗೊಂಡಿರುವ ಪಟ್ಟಿಯಲ್ಲಿರುವ ಯಾವುದೇ ಚಾರ್ಟರ್ಡ್ ಅಕೌಂಟೆಂಟ್ ಅವರಿಂದ ಲೆಕ್ಕ ಪರಿಶೋಧನೆ ಮಾಡಿಸಿಕೊಳ್ಳಲು ಅವಕಾಶ ನೀಡಿದ್ದಾರೆ.

ಈ ಆದೇಶ ವೈಯಕ್ತಿಕ ನೆಲೆಗಟ್ಟಿನಲ್ಲಿ ಆಗಿದ್ದು, ಸಾರ್ವತ್ರೀಕರಣಗೊಂಡಿಲ್ಲ. ರಾಜ್ಯದಲ್ಲಿ ಸುಮಾರು 36 ಸಾವಿರ ಸಹಕಾರ ಸಂಘ ಸಂಸ್ಥೆಗಳಿವೆ. ಎಲ್ಲರೂ ದಾವೆ ಹೂಡಿ ನ್ಯಾಯ ಕೇಳಲು ಸಾಧ್ಯವಾಗದ ಮಾತು. ಜತೆಗೆ, ಇಲಾಖಾ ಸೂಚನೆಯನ್ನು ನಿರ್ಲಕ್ಷಿಸುವಂತೆಯೂ ಇಲ್ಲ. ಇಂತಹ ಗೊಂದಲದಲ್ಲಿ ಸಹಕಾರ ಸಂಘ ಸಂಸ್ಥೆಗಳು ಸಿಲುಕಿವೆ. ಸಹಕಾರಿ ಸಂಘ ಸಂಸ್ಥೆಗಳ ಈ ಗೊಂದಲ ನಿವಾರಣೆಗೆ ರಾಜ್ಯ  ಸರ್ಕಾರ ಹಾಗೂ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ನಿರ್ದೇಶಕರು ತುರ್ತಾಗಿ ಮುಂದಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT