ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ಪ್ರತಿಭಟನೆಯ ಯುಗ

ನೈತಿಕ ಸಂವಾದ ಸಾಧ್ಯವಾಗದ ಪ್ರತಿಭಟನೆಗಳಿಂದ ಉತ್ತೇಜಕ ಪರಿಹಾರ ದುರ್ಲಭ
Last Updated 25 ಜನವರಿ 2016, 19:30 IST
ಅಕ್ಷರ ಗಾತ್ರ

‘ದಿ ಗಾರ್ಡಿಯನ್’ ಪತ್ರಿಕೆಯ ಜಾಲತಾಣಕ್ಕೆ ಹೋದರೆ, ‘ಪ್ರತಿಭಟನೆ’ ಹೆಸರಿನ ವಿಭಾಗವನ್ನೇ ಈಗಿನ ದಿನಗಳಲ್ಲಿ ನೀವು ಕಾಣಬಲ್ಲಿರಿ. ಅಂದರೆ, ಬೆಳಗಿನ ಕಾಫಿಯ ಜೊತೆಗೆ ಬಿಸಿ ಸುದ್ದಿ, ಹವಾಮಾನ, ಆಟೋಟಗಳ ಜೊತೆಗೆ ಪ್ರತಿಭಟನೆಯ ವರದಿಗಳೂ ನಿಮಗೆ ಸಿಗುತ್ತವೆ. ಆ ವಿಭಾಗದಲ್ಲಿ ನಾನು ಕಂಡ ಕೆಲವು ವರದಿಗಳಲ್ಲಿ ‘2016ರಲ್ಲಿ ಬೀದಿ ಪ್ರತಿಭಟನೆ ಮಾಡುವವರಿಗೆ 5 ಹೊಸ ವಿಚಾರಗಳು’, ‘ಡೊನಾಲ್ಡ್‌ ಟ್ರಂಪ್‌ರ ಬಹಿರಂಗ ಸಭೆಯಲ್ಲಿ ಮೌನ ಪ್ರತಿಭಟನೆ ಮಾಡಿದ ಮುಸ್ಲಿಂ  ಮಹಿಳೆಯ ಉಚ್ಚಾಟನೆ’, ‘ಪ್ರತಿಭಟನೆಯ ಯುಗದಲ್ಲಿ ನಾವಿದ್ದೇವೆ’ ಎಂಬಂತಹ, ಈಗಿನ ಸ್ಥಿತಿಯನ್ನು ಸೂಕ್ತವಾಗಿ ಪ್ರತಿನಿಧಿಸುವ ತಲೆಬರಹಗಳು ಕಾಣಸಿಕ್ಕವು.

ಪ್ರತಿಭಟನೆಯ ಯುಗದಲ್ಲಿ ನಾವಿರುವುದು ಅಕ್ಷರಶಃ ನಿಜ. ಈ ವಾರವಷ್ಟೇ ಜರ್ಮನಿಯ ಏಂಜೆಲಾ ಮರ್ಕೆಲ್ ಬಹುದೊಡ್ಡ ಪ್ರತಿಭಟನೆ ಎದುರಿಸಿದರು. ‘ಅರಬ್‌ ವಲಸಿಗರೇ ಕಲೋನ್‌ನಲ್ಲಿ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಬಹುತೇಕ ಕಾರಣರಾಗಿದ್ದಾರೆ’ ಎಂದು ಮರ್ಕೆಲ್‌ ಅವರ ನ್ಯಾಯಾಂಗ ಸಚಿವರು ಘೋಷಿಸಿದ ಬಳಿಕ ಭಾರಿ ಪ್ರತಿಭಟನೆಗಳು ನಡೆದಿವೆ. ಇವರು ನಿರಾಶ್ರಿತರ ಬಗೆಗಿನ ಮರ್ಕೆಲ್‌ ಅವರ ಉದಾರ ನೀತಿಯಿಂದಾಗಿ ಒಳಬಂದವರು.

ಅಮೆರಿಕದ ಬಂದೂಕು ಕಾನೂನಿಗೊಂದು ಪರಿಹಾರ ಕಂಡುಹಿಡಿಯಬೇಕೆಂಬ ವಿಚಾರದಲ್ಲಿ ತಮ್ಮ ಮತ್ತು ಇತರ ಅನೇಕರ ಆಕ್ರೋಶವನ್ನು ಹೊರಹಾಕುವಾಗ ಅಧ್ಯಕ್ಷ ಬರಾಕ್ ಒಬಾಮ ನಿಜವಾಗಿ ಅತ್ತೇಬಿಟ್ಟರು. ಅಳುವುದು ಒಂದು ರೀತಿಯಲ್ಲಿ ಅವರ ಅನನ್ಯ ಪ್ರತಿಭಟನೆಯೇ ಆಗಿತ್ತು. ನನ್ನ ದೃಷ್ಟಿಯಲ್ಲಿ, ಭೂಮಂಡಲದ ಮೂರು ದೊಡ್ಡ ಶಕ್ತಿಗಳಾದ ಜಾಗತೀಕರಣ, ಮೂರ್‌ನ ನಿಯಮ ಮತ್ತು ಪ್ರಕೃತಿಮಾತೆ ಎಲ್ಲವೂ ವೇಗವರ್ಧನೆಗೊಂಡಿರುವುದು ಪ್ರತಿಭಟನೆಯ ಯುಗವನ್ನು ಹುಟ್ಟುಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ವೇಗವರ್ಧನೆಯಿಂದ ಹುಟ್ಟಿದ ಹಾನಿಕಾರಕ ಯಂತ್ರವು ಶಕ್ತಿಶಾಲಿ ರಾಷ್ಟ್ರಗಳನ್ನು ಮತ್ತು ಮಧ್ಯಮವರ್ಗವನ್ನು ಒತ್ತಡಕ್ಕೆ ಸಿಲುಕಿಸಿದೆಯಲ್ಲದೆ ದುರ್ಬಲರನ್ನು ದೂಳೀಪಟ ಮಾಡುತ್ತಿದೆ.

ಸ್ಮಾರ್ಟ್‌ಫೋನ್ ಹೊಂದಿರುವ ಪ್ರತಿಯೊಬ್ಬರೂ ಈಗ ವರದಿಗಾರರು, ಸುದ್ದಿ ಛಾಯಾಗ್ರಾಹಕರು ಮತ್ತು ಸಾಕ್ಷ್ಯಚಿತ್ರ ನಿರ್ಮಾಪಕರಾಗುತ್ತಿದ್ದಾರೆ. ವಿಶ್ವದಾದ್ಯಂತ ಇಷ್ಟೊಂದು ಬಗೆಯ ಪ್ರತಿಭಟನೆಗಳು ನಡೆಯುತ್ತಿರುವಾಗ, ಎಲ್ಲ ದಿನಪತ್ರಿಕೆಗಳಲ್ಲೂ ಪ್ರತಿಭಟನೆಗಳ ಪ್ರಕಟಣೆಗೆ ಪ್ರತ್ಯೇಕ ವಿಭಾಗ ಇಲ್ಲದಿರುವುದೇ ಅಚ್ಚರಿದಾಯಕ.

ಈ ಪ್ರತಿಭಟನಾ ಯುಗದ ಬಗ್ಗೆ ‘ಹೌ’ (ಹೇಗೆ?) ಪುಸ್ತಕದ ಕರ್ತೃ ಹಾಗೂ ನಾಯಕತ್ವ ಮತ್ತು ನೈತಿಕ ಸಂಸ್ಕೃತಿಯನ್ನು ರೂಪಿಸಿಕೊಳ್ಳುವ ಬಗ್ಗೆ ಜಗತ್ತಿನಾದ್ಯಂತ ಕಂಪೆನಿಗಳಿಗೆ ಸಲಹೆ ಕೊಡುವ ಎಲ್‌.ಆರ್‌.ಎನ್‌.ನ ಸಿಇಒ ಡವ್‌ ಸೀಡ್ಮನ್ ಅವರ ಅಭಿಪ್ರಾಯ ಕೇಳಿದೆ. ‘ಎಲ್ಲೆಡೆ ಜನ ನೈತಿಕವಾಗಿ ಕೆರಳಿರುವಂತೆ ಕಾಣುತ್ತದೆ’ ಎಂದು ಅವರು ಹೇಳಿದರು. ನಿಜ, ಪೊಲೀಸರ ದೌರ್ಜನ್ಯ, ಪ್ಯಾರಿಸ್‌ನ ಥಿಯೇಟರೊಂದರ ಕಿಟಕಿಗಳಿಂದ ಭಯೋತ್ಪಾದನೆಯ ಸಂತ್ರಸ್ತರು ಜಿಗಿಯುವ ದೃಶ್ಯದ ತುಣುಕುಗಳು, ಹ್ಯಾಕರ್‌ಗಳು ಬಹಿರಂಗಪಡಿಸಿದ ಕಾರ್ಪೊರೇಟ್‌ ಜಗತ್ತಿನ ಜನಾಂಗೀಯ ದ್ವೇಷದ, ಲಿಂಗ ತಾರತಮ್ಯದ ಇ–ಮೇಲ್‌ಗಳು ನಮ್ಮೆದುರು ಬಹಿರಂಗಗೊಳ್ಳುತ್ತಿವೆ.

ಇವನ್ನೆಲ್ಲ ಕಂಡವರು ಉದ್ರಿಕ್ತರಾಗದೆ ಇರಲು ಹೇಗೆ ಸಾಧ್ಯ? ಇದಕ್ಕೆ ಪೂರಕವಾಗಿ ಕೆಳಗಿನ ಉದಾಹರಣೆಯನ್ನು ನೀಡುತ್ತಾರೆ ಸೀಡ್ಮನ್‌: ‘ಮಿನ್ನೆಸೋಟಾದ ದಂತವೈದ್ಯನೊಬ್ಬ ಜಿಂಬಾಬ್ವೆಯ ರಾಷ್ಟ್ರೀಯ ಉದ್ಯಾನದಲ್ಲಿ ಬೇಟೆಯಾಡಲು ಹಣ ಕಟ್ಟಿ ಸಿಸಿಲ ಎಂಬ ಸಿಂಹವೊಂದನ್ನು ಗುಂಡುಹಾರಿಸಿ ಕೊಲ್ಲುತ್ತಾನೆ. ಈ ವಿಷಯ ಜಗತ್ತಿನಾದ್ಯಂತ ಗೊತ್ತಾಗಿ, ಆತನ ಕೃತ್ಯದ ವಿರುದ್ಧ ಟ್ವಿಟರ್‌ ಮತ್ತು ಫೇಸ್‌ಬುಕ್‌ನಲ್ಲಿ ನೈತಿಕ ಆಕ್ರೋಶ ಸುನಾಮಿ ಅಲೆಯಂತೆ ಹರಿದುಬರುತ್ತದೆ.

ಇದರ ಪರಿಣಾಮವಾಗಿ ದಂತ ವೈದ್ಯಕೀಯ ವೃತ್ತಿಯಿಂದಲೇ ಅವನನ್ನು ಹೊರಗಿಡಲು  ಯತ್ನಿಸುವ ಕೆಲವರು, ವಾಣಿಜ್ಯ ವಿಮರ್ಶೆಯ ತಾಣ ‘ಯೆಲ್ಪ್‌’ನಲ್ಲಿ ಆತನ ಬಗ್ಗೆ ನಕಾರಾತ್ಮಕವಾಗಿ ಬರೆಯತ್ತಾರೆ. ಫ್ಲಾರಿಡಾದ ಅವನ ಮನೆಯ ಮೇಲೆ ‘ಸಿಂಹವನ್ನು ಕೊಂದವ’ ಎಂದು ಬಣ್ಣದಲ್ಲಿ ಬರೆಯುತ್ತಾರೆ. ಬೇಟೆ ಪ್ರಾಣಿಗಳನ್ನು ಕೊಂಡೊಯ್ಯುವ ತನ್ನ ನೀತಿಯನ್ನು ಬದಲಿಸಬೇಕೆಂದು ಡೆಲ್ಟಾ ಏರ್‌ಲೈನ್ಸ್‌ ಅನ್ನು ಆಗ್ರಹಿಸಿ ‘ಚೇಂಜ್ ಡಾಟ್‌ ಆರ್ಗ್‌’ನಲ್ಲಿ ಒಂದೇ ದಿನ 4 ಲಕ್ಷ ಜನ ಸಹಿ ಹಾಕುತ್ತಾರೆ.

ಡೆಲ್ಟಾ ಈ ಬೇಡಿಕೆಯನ್ನು ಮನ್ನಿಸುತ್ತದಲ್ಲದೆ ಇತರ ವಿಮಾನಯಾನ ಸಂಸ್ಥೆಗಳೂ ಹಾಗೆಯೇ ಮಾಡುತ್ತವೆ. ಇದಾದ ನಂತರ, ಜಿಂಬಾಬ್ವೆಯ ಪ್ರವಾಸೋದ್ಯಮಕ್ಕೆ ತಮ್ಮದೇ ಕಾಣಿಕೆ ನೀಡುವ ಬೇಟೆಗಾರರು ತಮ್ಮ ವಿರುದ್ಧ ತಾರತಮ್ಯ ಎಸಗಲಾಗುತ್ತಿದೆ ಎಂದು ದೂರಿ ಈ ಪ್ರತಿಭಟನೆಗಳ ವಿರುದ್ಧವೇ ಪ್ರತಿಭಟನೆ ನಡೆಸುತ್ತಾರೆ. ಹೀಗೆ ನಾವು ನೈತಿಕವಾಗಿ ಆಕ್ರೋಶಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ಸೀಡ್ಮನ್. ಪೊಲೀಸ್‌ ಇಲಾಖೆ ಅಥವಾ ವಿದ್ಯಾಲಯಗಳ ವಿದ್ಯಾರ್ಥಿ ಸಂಘಗಳಲ್ಲಿ ಜನಾಂಗೀಯ ದ್ವೇಷ ನೆಲೆಗೊಂಡಿರುವುದು ನಿಜ. ಇದನ್ನು ದೀರ್ಘಕಾಲದಿಂದ ಸಹಿಸಿಕೊಂಡೇ ಬಂದಿದ್ದೇವೆ. ಇದರ ಬಗ್ಗೆ ಈಗ ಎದೆತಟ್ಟಿ ಮಾತಾಡುತ್ತಿದ್ದೇವೆಂಬುದು ಸಮಾಜದ ಆರೋಗ್ಯದ ಲಕ್ಷಣ.

ಆದರೆ ಯಾವಾಗ ನೈತಿಕ ಪ್ರಚೋದನೆಯು ನೈತಿಕ ಆಕ್ರೋಶವಾಗಿ ವ್ಯಕ್ತವಾಗುವುದೋ ಆಗ ಅದು ‘ವಸ್ತುಸ್ಥಿತಿಯನ್ನು ಮತ್ತು ಗಂಭೀರ ಸಂವಾದವನ್ನು ಪ್ರೋತ್ಸಾಹಿಸುತ್ತದೆ ಅಥವಾ ಹೊಸಕಿಹಾಕುತ್ತದೆ’ ಎಂಬ ಮಾತನ್ನು ಅವರು ಸೇರಿಸುತ್ತಾರೆ. ಇದಲ್ಲದೆ, ‘ನೈತಿಕ ಸಂವಾದವನ್ನು ಬಿಟ್ಟ ನೈತಿಕ ಆಕ್ರೋಶವು ಮೌನಸಮ್ಮತಿಯನ್ನು ಸೃಷ್ಟಿಸುವ ಸಂಭವವೇ ಹೆಚ್ಚಾಗಿರುತ್ತದೆ ಹೊರತು ಉತ್ತೇಜಕ ಪರಿಹಾರವನ್ನಲ್ಲ’ ಎನ್ನುತ್ತಾರೆ.

ಅದು ವಿಶ್ವಾಸಾರ್ಹವಲ್ಲದ ರೀತಿಯಲ್ಲಿ ಕ್ಷಮೆ ಕೋರುವ ಸದ್ಯದ ಸಾಂಕ್ರಾಮಿಕ ರೋಗವನ್ನು ಉತ್ತೇಜಿಸಲೂಬಹುದು. ಏಕೆಂದರೆ ಒತ್ತಡದಲ್ಲಿ ಪಡೆದುಕೊಂಡ ಕ್ಷಮೆಯು ತಪ್ಪು ತಿದ್ದಿಕೊಳ್ಳದ ಮಗುವೊಂದಕ್ಕೆ ‘ಸುಮ್ಮನೆ ನೀನು ತಪ್ಪಾಯ್ತು ಎಂದುಬಿಡು ಸಾಕು’ ಎನ್ನುತ್ತಾ ಅದರಿಂದ ಹೇಳಿಕೆ ಕೊಡಿಸಿದಂತೆ. ಆದರೆ, ನೈತಿಕ ಜಗಳಗಳನ್ನು ಪರಿಹರಿಸಲು ನಮಗೆ ಬೇಕಿರುವುದು ಸರಿಯಾದ ದೃಷ್ಟಿಕೋನ, ವಿಷಯಗಳ ಸಂಪೂರ್ಣ ತಿಳಿವಳಿಕೆ ಮತ್ತು ಅರ್ಥಗರ್ಭಿತ ಹೊಳಹುಗಳನ್ನು ತೋರಿಸುವ ಶಕ್ತಿ. ಇದನ್ನು ಸಾಧಿಸಲು ಜನ ಒಂದು ಕ್ಷಣ ನಿಂತು ತಾವು ಮಾಡುತ್ತಿರುವುದರ ಬಗ್ಗೆ ಯೋಚಿಸುವಂತೆ ಪ್ರೋತ್ಸಾಹಿಸುವ ಧೈರ್ಯವುಳ್ಳ, ಪರರ ಬಗ್ಗೆ ಮಿಡಿಯುವ ತಾದಾತ್ಮ್ಯವುಳ್ಳ ನಾಯಕರು ಬೇಕಾಗಿದೆ.

ಟ್ವಿಟರ್‌ನ 140 ತುಂಡಕ್ಷರಗಳ ಮೂಲಕ ಕೂಗಾಡುವುದನ್ನು ಬಿಟ್ಟು ಜನ ತಮ್ಮ ನೈತಿಕ ಆಕ್ರೋಶವನ್ನು ಆಳವಾದ, ಪ್ರಾಮಾಣಿಕವಾದ ಸಂವಾದದತ್ತ ಹರಿಸುವಂತೆ ಮಾಡಬೇಕಿದೆ. ‘ಹಾಗೆ ಮಾಡಲು ನಿಜಕ್ಕೂ ಸಾಧ್ಯವಾದರೆ, ನಾವು ಮತ್ತೆ ಶ್ರೇಷ್ಠ ಮಾನವರಾಗಲು ಸಾಧ್ಯ. ಏಕೆಂದರೆ ಆ ಮೂಲಕ ನಾವು ಹೆಚ್ಚು ಪರಿಪೂರ್ಣವಾದ ಅಖಂಡ ಮಾರ್ಗದತ್ತ ಮತ್ತೆ ಹೊರಳುತ್ತೇವೆ’ ಎಂದು ಹೇಳುತ್ತಾ ಸೀಡ್ಮನ್ ಮಾತು ಮುಗಿಸಿದರು.

ದಿ ನ್ಯೂಯಾರ್ಕ್‌ ಟೈಮ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT