ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ವೃದ್ಧಾಪ್ಯ! ಹೊಸ ಪೀಳಿಗೆ ಎಲ್ಲಿದೆ?

Last Updated 23 ಮೇ 2017, 19:30 IST
ಅಕ್ಷರ ಗಾತ್ರ
ಒಬ್ಬ ವೃದ್ಧ, ಮೊಮ್ಮಕ್ಕಳನ್ನು ಹತ್ತಿರ ಕರೆದು ತನ್ನ ಸುತ್ತ ಕೂರಿಸಿಕೊಂಡು ಕಥೆ ಹೇಳುತ್ತಿದ್ದ. ಅವರೆಲ್ಲಾ ಉತ್ಸಾಹದಿಂದ ಕೇಳಿ ರೋಮಾಂಚನಗೊಳ್ಳುತ್ತಿದ್ದರು. ಆ ವೃದ್ಧನ ಬದುಕಿನಲ್ಲಿ ಅಂತಹ ಅನುಭವಗಳಿದ್ದುವು. ಆತನ ಬಾಲ್ಯದ ಸವಾಲುಗಳು, ಯೌವನದ ಗೆಲುವುಗಳು ಮತ್ತು ಪ್ರೌಢ ಪ್ರಾಯದ ಸಾಧನೆಗಳನ್ನು ಹೇಳುತ್ತಿದ್ದ.
 
ಆತನ ಮಾತಿನ ಸಾರಾಂಶ ಈ ಕೆಳಗಿನಂತಿತ್ತು. ಬಾಲ್ಯದಲ್ಲಿ ಮನೆ ತುಂಬ ಜನರಿದ್ದರು, ಹಿರಿಯರು-ಕಿರಿಯರು ಸೇರಿ ದುಡಿಯುತ್ತಿದ್ದರು, ಸಮೀಪದಲ್ಲೇ ಕಾಡು– ಬೆಟ್ಟಗಳಿದ್ದವು,   ಪ್ರಾಣಿಗಳನ್ನು ಪಳಗಿಸಿಕೊಂಡು ಕೆಲಸಕ್ಕೆ ಉಪಯೋಗಿಸುತ್ತಿದ್ದರು, ಪ್ರತಿಯೊಬ್ಬನಿಗೂ ದಿನದಿನವೂ ತಮ್ಮ ಸಾಧನೆಯ ವಿವರಣೆ ನೀಡುವ ಸಂದರ್ಭ ಸಂಜೆ ಎಲ್ಲರೂ ಒಟ್ಟಾಗಿ ಕುಳಿತಾಗ ಸಿಗುತ್ತಿತ್ತು.
 
ಯೌವನ ಬಂದಾಗ ಹೊಸ ಜವಾಬ್ದಾರಿಗಳು ಬಂದುವು. ಮನೆಯಲ್ಲೇ ಕೆಲವು ಕೆಲಸಗಳಿಗೆ ನಾಯಕತ್ವ ಸಿಗುತ್ತಿತ್ತು. ಸಣ್ಣವರನ್ನು ಸೇರಿಸಿಕೊಂಡು ಕೆಲಸ ಮಾಡುವುದೇ ಮಜಾ. ಪ್ರೌಢಾವಸ್ಥೆ  ಬಂದಾಗ ಕೆಲವು ನಿರ್ಣಾಯಕ ಹೊಣೆಗಳು ಸಿಗುತ್ತಿದ್ದುವು. ಅವುಗಳನ್ನು ಸಮರ್ಥವಾಗಿ ನಿಭಾಯಿಸಿದ್ದರಿಂದ ಈಗ ನಾವು ಈ ಮಟ್ಟಕ್ಕೆ ಬಂದಿದ್ದೇವೆ. ಮನೆಯ ಹತ್ತಿರಕ್ಕೆ ಹುಲಿ ಬರುತ್ತಿತ್ತು, ಜಾನುವಾರುಗಳನ್ನು ತಿನ್ನುತ್ತಿತ್ತು... ಹೀಗೆಲ್ಲ ವಿವರಗಳನ್ನು ಹೇಳುವಾಗ ಮಕ್ಕಳು ಅವಾಕ್ಕಾಗಿ ‘ಹೌದೇ...’ ಎನ್ನುತ್ತ ಕೇಳುತ್ತಿದ್ದರು.
 
 ಈ ಹೊತ್ತಿಗೆ ಆ ಮಕ್ಕಳ ಡ್ಯಾಡಿ ಅಲ್ಲಿಗೆ ಬಂದರು. ‘ಅಜ್ಜನ ಪಟ್ಟಾಂಗ ಕೇಳುತ್ತ ಕುಳಿತಿದ್ದೀರಿ. ನಿಮ್ಮ ಹೋಂ ವರ್ಕ್ ಆಗಿದೆಯಾ?’ ಎಂದು ಕೇಳಿದರು. ‘ನಾನೂ ಅದನ್ನೇ ಆಗಿನಿಂದ ಬಡಬಡಿಸುತ್ತಿದ್ದೇನೆ. ಯಾರೂ ಕಿವಿಯೇ ಕೊಡುತ್ತಿಲ್ಲ’ ಎಂದು ಒಳಗಿಂದ ಅಮ್ಮ ದನಿಗೂಡಿಸಿದಳು. ಅಪ್ಪನ ಭಯದಿಂದ ಮಕ್ಕಳು ಎದ್ದರು. ಕಾಲೆಳೆದುಕೊಂಡು ಬ್ಯಾಗ್‌ಗಳ ಬಳಿ ಹೋದರು. ಅಜ್ಜನ ಕತೆಗೆ ಬ್ರೇಕ್ ಬಿತ್ತು.
 
ಕನ್ನಡವೂ ಈ ಅಜ್ಜನಂತೆ ಈಗ ವೃದ್ಧಾಪ್ಯಕ್ಕೆ ಕಾಲಿಟ್ಟಿದೆ. ಅದು ತನ್ನ ಕತೆ ಹೇಳುತ್ತಿದೆ. ಆದರೆ ಕೇಳುವವರಿಲ್ಲ. ಕನ್ನಡವು ಆಡುಭಾಷೆಯಾಗಿ ಪ್ರಚಲಿತವಿದ್ದಾಗ ಅದರಲ್ಲಿದ್ದ ಜಾನಪದ ಹಾಡುಗಳು, ಕತೆಗಳು. ಎದುರ್ಕತೆಗಳು, ಒಗಟುಗಳು, ಕಾವ್ಯಗಳು, ಆಶು ನಾಟಕಗಳು, ಕುಣಿತಗಳು ಮುಂತಾಗಿ ಮನಸ್ಸಿಗೆ ಮುದ ನೀಡುವ ಸಾಹಿತ್ಯ ಸೃಜನಶೀಲವಾಗಿ ನಿರ್ಮಾಣವಾಗಿತ್ತು. ಇನ್ನೂ ಬರವಣಿಗೆಗೇರದ ಸಾಹಿತ್ಯ ಕನ್ನಡದಲ್ಲಿತ್ತು.
 
ಅದೊಂದು ಕನ್ನಡ ಸಾಹಿತ್ಯದ ಸುಂದರ ಬಾಲ್ಯ ಎನ್ನಬಹುದು. ಹುಟ್ಟಿದ ಸಾಹಿತ್ಯವೆಲ್ಲವೂ ಪೀಳಿಗೆಗಳಲ್ಲಿ ಮೌಖಿಕವಾಗಿ ಸಾಗಿ ಬಂದಿತ್ತು. ಅಂದಿನ ವಚನ ಸಾಹಿತ್ಯ, ದಾಸರ ಕೀರ್ತನೆಗಳು ಹಾಗೂ ಪಂಪ, ರನ್ನ, ಜನ್ನ, ರಾಘವಾಂಕ ಮುಂತಾದವರು ರಚಿಸಿದ ಕಾವ್ಯಗಳ ಕಾಲವು ಕನ್ನಡದ ಯೌವನದ ಯುಗವಾಗಿತ್ತು. ಆ ಕಾಲದ ಜನಸಾಮಾನ್ಯರಲ್ಲಿ ಈ ಕಾವ್ಯಗಳು ಬಾಯ್ದೆರೆಯಾಗಿ ಹರಿದು ಬಂದಿದ್ದುವು. ಅವು ಮುದ್ರಣಗೊಂಡು ವಿದ್ವಾಂಸರ ಹಾಗೂ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳನ್ನು ಸೇರುವುದರೊಂದಿಗೆ ಕನ್ನಡದ ಪ್ರೌಢಕಾಲ ಆರಂಭವಾಗಿತ್ತು.
 
ಅನೌಪಚಾರಿಕ ಶಿಕ್ಷಣ ವ್ಯವಸ್ಥೆಯಲ್ಲಿಯೂ ಅಂದರೆ ಮನೆ ಪಾಠದ ಶಾಲೆಗಳಲ್ಲಿಯೂ ಕನ್ನಡದ ಕಲಿಕೆ ನಡೆಯುತ್ತಿತ್ತು. ಸುಮಾರು ನೂರಿನ್ನೂರು ವರ್ಷಗಳಿಂದ ಔಪಚಾರಿಕ ಶಿಕ್ಷಣದಲ್ಲಿ ಕನ್ನಡವೇ ಮಾಧ್ಯಮವಾಗಿತ್ತು. ಆರ್.ಕೆ. ನಾರಾಯಣರ ಕಾದಂಬರಿಗಳಲ್ಲಿ ಸಿಗುವ ಸಾಮಾಜಿಕ ಚಿತ್ರಣದಲ್ಲಿ ತಮಿಳು, ತೆಲುಗು, ಮರಾಠಿ ಮುಂತಾಗಿ ವಲಸಿಗರ ಮಕ್ಕಳೂ ಕನ್ನಡದಲ್ಲೇ ಕಲಿಯುತ್ತಿದ್ದರು. ಈಗ 83ರ ಹರೆಯದ ಪ್ರೊ. ಸಿ.ಎನ್.ಆರ್. ರಾವ್ ಅವರನ್ನು ಅವರ ತಂದೆ ಸೇರಿಸಿದ್ದು ಕನ್ನಡ ಮಾಧ್ಯಮ ಶಾಲೆಗೇ. ಅಂದರೆ ಅಷ್ಟೊತ್ತಿಗೆ ಕನ್ನಡ ಮಾಧ್ಯಮದ ಶಾಲೆಗಳು ಗಟ್ಟಿಗೊಂಡಿದ್ದುವು. 
 
ಇನ್ನು, ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮವಿದ್ದರೂ ಸಮರ್ಥ ಕನ್ನಡ ಪಂಡಿತರೂ ಇದ್ದರು. ಪರಿಸರದ ಭಾಷೆಯಾಗಿದ್ದ ಕನ್ನಡದ ಸವಿ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಗೆ ಸಿಗುತ್ತಿತ್ತು. ಹೀಗೆ ಶಿಕ್ಷಣ ಕ್ಷೇತ್ರದಲ್ಲಿ ಓದಿನ ಮೂಲಕ ವಿಸ್ತರಣೆಗೊಂಡು ಕನ್ನಡ ಸಾಹಿತ್ಯವು ಹಳೆಗನ್ನಡದಿಂದ ಹೊಸಗನ್ನಡಕ್ಕೆ ಹೊರಳಿ, ನವ್ಯ, ನವ್ಯೋತ್ತರ, ಬಂಡಾಯ ಹೀಗೆ ಪ್ರೌಢಿಮೆ  ಮೆರೆಯಿತು.
 
ಇಂಗ್ಲಿಷ್ ಸಾಹಿತ್ಯದ ಓದಿನ ಮೂಲಕ ಜಗತ್ತಿನ ಸಾಹಿತ್ಯಕ್ಕೆ ಬಾಗಿಲು ತೆರೆದು ನುಗ್ಗಿದ ಸಾಹಿತಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧವಾಗಿಸಿದರು. ಹಾಗಾಗಿಯೇ ವಿಶಾಲ ಭಾರತದ ಪುರಾಣಗಳು, ಜನಪದ ಸಾಹಿತ್ಯ, ವೈಚಾರಿಕ ಸಾಹಿತ್ಯ, ಇತಿಹಾಸ, ಸಮಾಜಶಾಸ್ತ್ರಗಳು ಕನ್ನಡದಲ್ಲಿ ಬೆಳಕು ಕಂಡವು. 
 
ಆಧುನಿಕ ಸಂತರಾದ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಅರವಿಂದ, ರವೀಂದ್ರ, ನಾರಾಯಣಗುರು, ತಿರುನಾಳ್ ಮುಂತಾದವರ ಬೋಧನೆಗಳು, ರಾಜಾರಾಮ್ ಮೋಹನ್‌ರಾಯ್, ದಯಾನಂದ ಸರಸ್ವತಿ, ತಿಲಕ್, ಗಾಂಧೀಜಿ, ಅಂಬೇಡ್ಕರ್, ಜ್ಯೋತಿಬಾ ಫುಲೆ ಅವರ ಸುಧಾರಣಾ ಚಿಂತನೆಗಳೂ, ಭಾರತದ ಸ್ವಾತಂತ್ರ್ಯ ಹೋರಾಟ ಚರಿತ್ರೆಯೂ, ಸಾಮಾಜಿಕ ಬದಲಾವಣೆಯ ವಿಚಾರಗಳೂ ವಿಪುಲವಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಕಾಶಿಸಿದವು. 
 
ಹೀಗೆ ಸಮೃದ್ಧಗೊಳ್ಳುತ್ತ ಸಾಗಿದ ಕನ್ನಡದ ವಿಕಸನ ಈಗ ಪ್ರೌಢಾವಸ್ಥೆಯಿಂದ ವೃದ್ಧಾಪ್ಯದ ಸ್ತಬ್ಧತೆಯೆಡೆಗೆ ಹೊರಳಿದೆ. ‘ಕನ್ನಡ ಇದೆಯೋ’ ಎಂದರೆ ಇದೆ, ‘ಇಲ್ಲವೋ?’ ಎಂದರೂ ಇದೆಯೆಂದೇ ಹೇಳುತ್ತಿದ್ದೇವೆ. ಆದರೆ ಅದರ ತಳಪಾಯ ದುರ್ಬಲವಾಗಿದೆ. ಇದಕ್ಕೆ ಅನೇಕ ನಿದರ್ಶನಗಳು ಸಿಗುತ್ತಿವೆ. 
ಶಿಕ್ಷಣವು ಭಾಷೆಯ ಮೂಲಕ ಜ್ಞಾನವನ್ನೂ, ವ್ಯಕ್ತಿತ್ವ ವಿಕಸನವನ್ನೂ, ಸಾಂಸ್ಕೃತಿಕ ಪ್ರಜ್ಞೆಯನ್ನೂ, ಸಾಮಾಜಿಕ ಹೊಣೆಗಾರಿಕೆಯನ್ನೂ ವಿದ್ಯಾರ್ಥಿಗಳಲ್ಲಿ ಬೆಳೆಸುವ ಪ್ರಕ್ರಿಯೆ.  
 
ಈಗ ಕಲಿಕೆಯು ಉದ್ಯೋಗ ಮತ್ತು ಧನ ಸಂಪಾದನೆಗಾಗಿ ಮಾತ್ರ ಎಂತಾಗಿದೆ. ಅದಕ್ಕಾಗಿ ಕಲಿವ ಮಾಧ್ಯಮದ ಭಾಷೆಯನ್ನು ಬದಲಿಸಬೇಕೆಂಬ ಆಲೋಚನೆ ಬಂದಿದೆ. ಅಂದರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಷ್ಟೇ ಧನಾಢ್ಯರಾಗಿ ಬದುಕುವ ಅವಕಾಶ ಪಡೆಯುತ್ತಾರೆಂಬ ವದಂತಿ  ಹಬ್ಬಿದೆ. ಇದನ್ನು ಸುಳ್ಳೆಂದು ಯಾರೇ ಹೇಳಿದರೂ ನಂಬುವ ಸ್ಥಿತಿಯಲ್ಲಿ ಜನ ಇಲ್ಲ. ಅಂತಹ ಮನೋಧರ್ಮ ವ್ಯಾಪಿಸುವುದರ ಹಿಂದೆ ಜನಸಾಮಾನ್ಯರಿಗೆ ಸಿಕ್ಕುವ ಮಾದರಿಗಳು ಯಾರು?
 
ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿರುವ ಸರ್ಕಾರಿ ಶಾಲೆ– ಕಾಲೇಜುಗಳ ಶಿಕ್ಷಕರು, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಹಾಗೂ ಇತರ ಸರ್ಕಾರಿ ಅಧಿಕಾರಿಗಳು, ವ್ಯಾಪಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ನಾಯಕರು, ಕನ್ನಡ ಪ್ರಾಧ್ಯಾಪಕರು, ಸಾಹಿತಿಗಳು, ಕನ್ನಡಪರ ಸಂಘಟನೆಗಳ ಮುಂದಾಳುಗಳು ಹಾಗೂ ಸಾಹಿತ್ಯ ಪರಿಷತ್ತಿನ ವಿವಿಧ ಘಟಕಗಳ ಪದಾಧಿಕಾರಿಗಳು. ಇವರೆಲ್ಲ ಸಮಾಜದ ಶಿಕ್ಷಿತ ಹಾಗೂ ಉನ್ನತ ವರ್ಗದವರು. ಇವರೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಬಗ್ಗೆ ಅವಿಶ್ವಾಸ ತೋರಿರುವಾಗ ಸಾಮಾನ್ಯ ಜನರಿಗೆ ಕನ್ನಡದ ಮೇಲೆ ವಿಶ್ವಾಸ ಬಂದೀತೇ? 
 
ಈಗ ಪ್ರಶ್ನೆ ಏನೆಂದರೆ ಕನ್ನಡದ ಪರ ನಿಲ್ಲುವವರು ಯಾರಿದ್ದಾರೆ? ಹೊಸ ಪೀಳಿಗೆ ಸಿದ್ಧವಾಗಿದೆಯೇ? ಈ ತಿಂಗಳ  17 ರಂದು ನಮ್ಮ ಶಿಕ್ಷಣ ಮಂತ್ರಿಗಳು ಆರನೇ ತರಗತಿಯಿಂದಲೇ ಇಂಗ್ಲಿಷ್ ಮಾಧ್ಯಮವನ್ನು ಸರ್ಕಾರಿ ಶಾಲೆಗಳಲ್ಲಿ ಆರಂಭಿಸಲಾಗುವುದು ಎಂದಾಗ ‘ಇದು ಸರಿಯಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ ಸಿದ್ಧರಾಮಯ್ಯ ಮತ್ತು ಈ ಹಿಂದೆ ಅಧ್ಯಕ್ಷರಾಗಿದ್ದ ಡಾ. ಎಲ್. ಹನುಮಂತಯ್ಯ ಅವರನ್ನು ಬಿಟ್ಟು ಮತ್ಯಾರು ಹೇಳಿದರು?

ಹಿರಿಯ ಸಾಹಿತಿಗಳೆಲ್ಲರೂ ಮೌನಕ್ಕೆ ಶರಣಾದರಲ್ಲ? ‘ಪ್ರಶಸ್ತಿ ವಾಪಸಿ’ ಸಾಹಿತಿಗಳು ಹೊಸ ಪ್ರಶಸ್ತಿಗಳನ್ನು ಪಡೆಯುವ ಸಂಭ್ರಮದಲ್ಲಿದ್ದಾರೆಯೇ ಹೊರತು ಈ ಬಗ್ಗೆ ತುಟಿಪಿಟಕ್ಕೆಂದ ಸುದ್ದಿಯೇ ಇಲ್ಲ! ಈಗ ಆರನೇ ತರಗತಿಯಿಂದ ಎಂದಿದ್ದು ಮುಂದಿನ ವರ್ಷ ಒಂದನೇ ತರಗತಿಗೆಂದಾಗಲೂ ಇವರ ಕತೆ ಇದೇ ಅಲ್ಲವೇ? ಹೀಗಾದರೆ ಕನ್ನಡವು ವೃದ್ಧಾಪ್ಯವನ್ನು ತಲುಪಿದೆ ಎಂದೇ ಅರ್ಥವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT