ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳು ಉದ್ಯೋಗಗಳು ಮತ್ತು ಅಸ್ಪೃಶ್ಯತೆ

ಸಂಗತ
Last Updated 3 ನವೆಂಬರ್ 2016, 19:30 IST
ಅಕ್ಷರ ಗಾತ್ರ
ಎರಡು ಕೈ ಸೇರಿದರೆ ಚಪ್ಪಾಳೆ. ಹಾಗೆಯೇ ಎರಡು ಸಮುದಾಯಗಳು ಸೇರಿದರೆ ಅಸ್ಪೃಶ್ಯತಾಚರಣೆ! ಹೌದು, ಅಸ್ಪೃಶ್ಯತಾಚರಣೆ ಒಂದು ಮಗ್ಗುಲ ಸಮಸ್ಯೆಯಲ್ಲ. ಎರಡು ಆಯಾಮಗಳಲ್ಲೂ ಉಂಟಾಗಿದೆ. ಒಂದು ಆಯಾಮ ಸವರ್ಣೀಯರಾದರೆ ಮತ್ತೊಂದು ಆಯಾಮ ಸ್ವತಃ ‘ಅಸ್ಪೃಶ್ಯ’ ಸಮುದಾಯಗಳೇ ಆಗಿವೆ.
 
ಉದಾಹರಣೆಗೆ ಮೇಲಧಿಕಾರಿಯೊಬ್ಬ ತನ್ನ ಕೆಳ ಹಂತದ ನೌಕರನನ್ನು ಸಹಜವಾಗಿ ಕೀಳಾಗಿ ಕಾಣುತ್ತಾನೆ. ಆತ ಕಸ ಗುಡಿಸುತ್ತಿದ್ದರೆ ಮೇಲಧಿಕಾರಿ ತನ್ನ ಸಹಜ ದರ್ಪ ತೋರುತ್ತಾನೆ. ಅಸ್ಪೃಶ್ಯತೆಯೂ ಹಾಗೆಯೆ. ಒಂದು ಸಮುದಾಯ ಸದಾ ಕೀಳು ಕೆಲಸ ಮಾಡುತ್ತಿದ್ದರೆ ಈಗಾಗಲೇ ಅದಕ್ಕಿಂತ ಉನ್ನತ ಎಂದು ಗುರುತಿಸಿಕೊಂಡಿರುವ ಸಮುದಾಯ ಆ ಸಮುದಾಯವನ್ನು ಮೇಲಾಗಿ ಕಾಣಲು ಸಾಧ್ಯವೇ? ಇಲ್ಲ. 
 
ಸಮಾಜದಲ್ಲಿ ಕೀಳು ಕೆಲಸಗಳೂ ಇವೆ, ಮೇಲು ಕೆಲಸಗಳೂ ಇವೆ. ಉದಾಹರಣೆಗೆ ಅಮೆರಿಕದಲ್ಲಾದರೋ ಚರ್ಮದ ಬಣ್ಣದ ಆಧಾರದ ಮೇಲೆ ಮೇಲು-ಕೀಳು ಎನ್ನಲಾಯಿತು. ಆದರೆ ಭಾರತದಲ್ಲಿ? ವ್ಯಕ್ತಿ ಅಥವಾ ಆತನ ಸಮುದಾಯ ಮಾಡುವ ಕೆಲಸದ ಮೇಲೆ ಮೇಲು-ಕೀಳು ಎನ್ನಲಾಯಿತು.
 
ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟಿದ್ದು ಈ ಮೂಲ ಕಾರಣಕ್ಕೆ. ಉದ್ಯೋಗದಲ್ಲಿ, ಉದ್ಯೋಗ ಮಾಡುವವರ ಆಧಾರದಲ್ಲಿ ಮೇಲು-ಕೀಳು ಎಂದ ಅದರ ತಾತ್ವಿಕತೆಯ ಕಾರಣಕ್ಕೆ.
 
ಇರಬಹುದು, ಪೂಜೆ ಮಾಡುವುದು, ವ್ಯಾಪಾರ ಮಾಡುವುದು, ಯುದ್ಧ ಮಾಡುವುದು, ಸೇವೆ ಮಾಡುವುದು-ಹೀಗೆ ನಾಲ್ಕೈದು ಕೆಲಸಗಳನ್ನು ಮುಂದಿಟ್ಟು ಮನು ಜಾತಿಗಳನ್ನು ಸೃಷ್ಟಿಸಿದ. ಆದರೆ ಸ್ಪರ್ಧಾ ಪ್ರಪಂಚ ಈ ಆಧಾರದ ತಾರತಮ್ಯವನ್ನು ಎಲ್ಲ ಕೆಲಸಗಳಿಗೂ ವಿಸ್ತರಿಸಿತು. ಯಾವ ಮಟ್ಟಕ್ಕೆ ಅಂದರೆ ಒಂದೊಂದು ಕೆಲಸಕ್ಕೂ ಒಂದೊಂದು ಜಾತಿ ಅನ್ನುವಂತೆ! ಒಟ್ಟಾರೆ ವಿವಿಧ ಕೆಲಸಗಳಿಂದ ವಿವಿಧ ಜಾತಿಗಳು ಸೃಷ್ಟಿಯಾದವು.
 
ಹಾಗೆಯೇ ವಿವಿಧ ಜಾತಿಗಳಿಂದ ವಿವಿಧ ಕೆಲಸಗಳೂ ಸೃಷ್ಟಿಯಾದವು. ಕೆಲಸ- ಜಾತಿ, ಜಾತಿ- ಕೆಲಸ... ಹೀಗೆ ಮಾಡುವ ಕೆಲಸದ ಆಧಾರದ ಮೇಲೆ ಜಾತಿ ಪದ್ಧತಿ ಗಟ್ಟಿಯಾಗುತ್ತಾ ಹೋಯಿತು. ಆಶ್ಚರ್ಯವೆಂದರೆ ಕಾಲಾಂತರದಲ್ಲಿ ಸೃಷ್ಟಿಯಾದ ಹೊಸ ಕೆಲಸಗಳೂ ನಿರ್ದಿಷ್ಟ ಜಾತಿಗೆ ಎನ್ನುವಂತೆ ಮಾಡಲಾಯಿತು.
 
ಉದಾಹರಣೆಗೆ, ಹಿಂದೆ ಬಹಿರ್ದೆಸೆಗೆ ಮನುಷ್ಯ ಬಯಲು ಪ್ರದೇಶಗಳಿಗೆ ಹೋಗುತ್ತಿದ್ದ. ಆಗ ಶೌಚಾಲಯಗಳು ಇರಲಿಲ್ಲ. ಆದರೆ ಶೌಚಾಲಯ ವ್ಯವಸ್ಥೆ ಬಂದಂತೆ ಅದನ್ನು ಶುಚಿಗೊಳಿಸುವ ಕೆಲಸವನ್ನು ದಲಿತರ ತಲೆಗೆ ಕಟ್ಟಲಾಯಿತು. ಅಂದರೆ ಈ  ಉದ್ಯೋಗ ಈಚೆಗಿನದು  ಎಂಬುದು ಅರಿವಾಗುತ್ತದೆ. ಹಾಗೆಯೇ ಚಮ್ಮಾರಿಕೆಯೂ ಅದಕ್ಕಿಂತ ಸ್ವಲ್ಪ ಹಿಂದಿನದ್ದೆಂದು ಇತಿಹಾಸ ಅಧ್ಯಯನದಿಂದ  ತಿಳಿಯುತ್ತದೆ.
 
ಇಲ್ಲಿ ದಲಿತರ ಮೇಲೆ ಕೆಲವು ಉದ್ಯೋಗಗಳನ್ನು ಹೇರಲಾಗಿದೆ ಎಂಬುದು ಅರಿವಾಗುತ್ತದೆ. ಹಾಗೆಯೇ ಅಂತಹ ಉದ್ಯೋಗಗಳು ಕೀಳು ಅಥವಾ ಗಲೀಜು ಆದ್ದರಿಂದ ಅಸ್ಪೃಶ್ಯತೆಯ ಡಿಗ್ರಿ ಕೂಡ ಏರುತ್ತಾ ಬಂದಿದೆ.
 
ಹೀಗಿರುವಾಗ ಈ ಡಿಗ್ರಿಯನ್ನು ಇಳಿಸಿದರೆ ಅಸ್ಪೃಶ್ಯತೆ ಇಳಿಯುತ್ತದೆ ಎಂಬುದಂತೂ ಸತ್ಯ. ಹಾಗಿದ್ದರೆ ಆ ಡಿಗ್ರಿಯನ್ನು ಇಳಿಸುವವರು ಯಾರು?  ಸವರ್ಣೀಯರತ್ತ ಒಂದು ಬೆರಳು ತೋರಿಸಬಹುದು. ಆದರೆ ಇನ್ನುಳಿದ ನಾಲ್ಕು ಬೆರಳುಗಳು ‘ಅಸ್ಪೃಶ್ಯ’ ಸಮುದಾಯಗಳತ್ತಲೇ ತೋರಿಸುತ್ತವೆ! ಹೌದು, ಹೊರೆಯನ್ನು ಹೇರುವವರು ಇರಬಹುದು.
 
ಆದರೆ ಬೇಡ ಎಂದು ನಿರಾಕರಿಸುವ, ಹೊರೆ ಯಿಂದ ತಪ್ಪಿಸಿಕೊಳ್ಳುವ ಅವಕಾಶ ಸಂಬಂಧಿತ ಸಮುದಾ ಯಗಳಿಗೆ ಇತ್ತು. ಈಗಲೂ ಇದೆ. ಈ ಕಾರಣಕ್ಕೆ ಯಾವ ಉದ್ಯೋಗಗಳನ್ನು ಕೀಳು ಎಂದು ಸಮಾಜ ದೂರವಿಟ್ಟಿದೆಯೋ, ಗುರುತಿಸಿದೆಯೋ ಅಂತಹ ಉದ್ಯೋಗಗ ಳಿಂದ ಅವು ದೂರ ಉಳಿಯಬೇಕಾದ, ಉದ್ಯೋಗ ಬದಲಿಸಬೇಕಾದ ಅಗತ್ಯವಿದೆ. ಅಂದಹಾಗೆ ಹೀಗೆ ಬದಲಿಸಬಾರದು ಎಂಬ ಆಸೆ ಶೋಷಿತ ಸಮುದಾಯದ ಜನರಲ್ಲಿ ಇದೆ ಎಂದೇ? ಖಂಡಿತ ಇಲ್ಲ.
 
ಈ ಸಂಬಂಧ ವೈಯಕ್ತಿಕ ಘಟನೆಯೊಂದನ್ನು ದಾಖಲಿಸುವುದಾದರೆ, ಕೆಲ ದಿನಗಳ ಹಿಂದೆ ಒಂದು ಬೆಳಿಗ್ಗೆ ಹೊರಗೆ ಹೊರಟಾಗ ರಸ್ತೆಯಲ್ಲಿ ತಳ್ಳುವ ಗಾಡಿಗೆ ಬೀದಿಯ ಕಸ ತುಂಬುತ್ತಿದ್ದ ಮಹಿಳಾ ಪೌರಕಾರ್ಮಿಕರೊಬ್ಬರನ್ನು ಮಾತನಾಡಿಸಿದೆ. ‘ಅಮ್ಮಾ, ಯಾಕೆ ನೀವೇ ಈ ಕೆಲಸ ಮಾಡಬೇಕು? ಇಂಥ ಗಲೀಜು ಕೆಲಸವನ್ನು ನೀವೊಬ್ಬರೇ ಯಾಕೆ ತುಂಬಬೇಕು? ಬೇರೆ ಜಾತಿಯವರು ಮಾಡಲಿ ಬಿಡಿ’ ಎಂದೆ.
 
ಅದಕ್ಕೆ ಅವರು ‘ಏನ್ ಮಾಡೋದು ಸ್ವಾಮಿ, ನಮಗೆ ಬರೋದು ಇದೊಂದೇ ಕೆಲಸ ಅಂತ ಎಲ್ಲರೂ ಹೇಳ್ತವರೆ. ನಾವು ಮತ್ತು ನಮ್ಮ ಜಾತಿಯವರು ಇದನ್ನೇ ಮಾಡಬೇಕು ಅಂತ  ಎಲ್ಲರೂ ಅನ್ತಾರೆ’ ಎಂದರು. ಅದಕ್ಕೆ ನಾನು ‘ಯಾರು ಹಾಗೆ ಅನ್ನೋರು? ಮೊದಲು ಈ ಕೆಲಸ ಬಿಡಿ. ಬೇರೆ ಉದ್ಯೋಗ ಮಾಡಿ. ಮನೆ ಕೆಲಸ ಮಾಡಿ, ಕೂಲಿ ಕೆಲಸ ಮಾಡಿ.
 
ನಿಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಈ ಕೆಲಸಕ್ಕೆ ಹಚ್ಚಬೇಡಿ’ ಅಂದೆ. ಅದಕ್ಕೆ ಅವರು ‘ಇಲ್ಲ ಸ್ವಾಮಿ, ನಮ್ಮ ಮಕ್ಕಳನ್ನು ಓದಿಸುತ್ತಿದ್ದೇವೆ. ಈ ಕೆಲಸಕ್ಕೆ ಹಾಕುವುದಿಲ್ಲ’ ಎಂದರು. ಸಂಬಂಧಿತ ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ನಾವು ವಿಫಲರಾಗಿದ್ದೇವೆ ಎಂಬುದು ಈ ಸಂದರ್ಭದಲ್ಲಿ ನನ್ನ ಅರಿವಿಗೆ ಬಂತು.
 
ಯಾಕೆಂದರೆ ಅವರಿಗೆ ಇನ್ನೊಬ್ಬರು ಅಥವಾ ಸಮಾಜ ಹಾಗೆ ಹೇಳುವುದರಿಂದ, ಹಾಗೆ ಅಂದುಕೊಳ್ಳುವುದರಿಂದ ನಾವು ಇದೇ ಕೆಲಸ ಮಾಡಬೇಕು ಎಂಬ ನಂಬಿಕೆ ಇದೆ ಮತ್ತು ಆ ನಂಬಿಕೆ ಅವರನ್ನು ಆ ಉದ್ಯೋಗಕ್ಕೆ ಕಟ್ಟಿಹಾಕಿದೆ! ಬದಲಿಗೆ ಅವರಿಗೆ ಅದು ಸುಳ್ಳು, ಯಾರೂ ಇಂತಹದ್ದೇ ಉದ್ಯೋಗ ಮಾಡಬೇಕು ಎಂಬ ನಿಯಮವಿಲ್ಲ ಎಂದು ಅರಿವು ಮೂಡಿಸಿದರೆ?
 
ಮುಂದಿನ ತಲೆಮಾರಿಗಾದರೂ ಇಂತಹ ಹೀನ ಕೆಲಸ ಆಧಾರಿತ, ಉದ್ಯೋಗ ಆಧಾರಿತ ಜಾತಿ ವ್ಯವಸ್ಥೆ ತೊಲಗುತ್ತದೆ, ಒಮ್ಮೆ ಇಂತಹ ಜಾತಿಗೆ ಇಂತಹ ಉದ್ಯೋಗ, ಇಂತಹ ಉದ್ಯೋಗಕ್ಕೆ ಇಂಥ ಜಾತಿ ಎಂಬುದು ತೊಲಗಿದರೆ ಅಸ್ಪೃಶ್ಯತೆ ಆಚರಿಸುವ ಸಂದರ್ಭಗಳೇ ಕಡಿಮೆಯಾಗುತ್ತವೆ.
 
ಯಾಕೆಂದರೆ ಸತ್ತ ದನದ ಚರ್ಮ ತೆಗೆಯುವವರ ಮೇಲಿನ ದೌರ್ಜನ್ಯ, ‘ಹೇ! ಟಾಯ್ಲೆಟ್ ಸರಿಯಾಗಿ ತೊಳಿ’ ಎಂಬ ದೌರ್ಜನ್ಯ, ಚಪ್ಪಲಿ ಹೊಲಿಯುವವನ ಮುಂದೆ ಕಾಲಲ್ಲೇ ಚಪ್ಪಲಿ ಒಗೆಯುವ ದೌರ್ಜನ್ಯ-ಅದು, ಸರ್ಕಾರಿ ಉದ್ಯೋಗಗಳಲ್ಲಿರುವ ದಲಿತರ ಮೇಲೆ ನಡೆಯುವ ದೌರ್ಜನ್ಯದ ನೂರು ಪಟ್ಟು ಇರುತ್ತದೆ. ಅಪಮಾನದ ಪರಿಮಾಣವೂ ಅಷ್ಟೆ. ದೌರ್ಜನ್ಯ ತಡೆ ಕಾಯ್ದೆ  ಇರಬಹುದು.
 
ಆದರೆ ಕೀಳು ಉದ್ಯೋಗಗಳಿಂದ ತಪ್ಪಿಸಿಕೊಳ್ಳದೆ, ದೌರ್ಜನ್ಯ ದೌರ್ಜನ್ಯ ಎನ್ನುತ್ತಿದ್ದರೆ ಖಂಡಿತ ಅಂತಹ ನೂರು ಕಾಯ್ದೆಗಳು ಕೂಡ ಏನೇನೂ ಮಾಡಲಾರವು. ರೋಗಾಣುಗಳಿರುವ ವಾತಾವರಣದಲ್ಲಿ ಬದುಕುತ್ತ ರೋಗ ಬರಿಸಿಕೊಂಡು ಪದೇ ಪದೇ ಡಾಕ್ಟರ್ ಬಳಿ ಹೋದರೆ ಏನು ಪ್ರಯೋಜನ? ಬದಲಿಗೆ ರೋಗದ ವಾತಾವರಣದಿಂದ ದೂರ ಉಳಿದರೆ ಕಾಯಿಲೆಯೂ ನಿಧಾನಕ್ಕೆ ವಾಸಿಯಾಗುತ್ತದೆ, ಪದೇಪದೇ ತಗಲುವ ಸಾಧ್ಯತೆಯೂ ಕಮ್ಮಿಯಾಗುತ್ತದೆ.
 
ಈ ನಿಟ್ಟಿನಲ್ಲಿ ಅಸ್ಪೃಶ್ಯತೆ ಎಂಬ ರೋಗ ಕಮ್ಮಿಯಾಗಲಿ, ಕೀಳು ಉದ್ಯೋಗಗಳಿಂದ ಶೋಷಿತ ಸಮುದಾಯಗಳು ದೂರ ಉಳಿದು ಅಂಥ ಸಾಮಾಜಿಕ ರೋಗ ಪದೇಪದೇ ತಗಲುವುದರಿಂದ ತಪ್ಪಿಸಿಕೊಳ್ಳಲಿ, ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ ಬಹು ಮುಖ್ಯ ಜವಾಬ್ದಾರಿಯನ್ನು ಸ್ವತಃ ಅಸ್ಪೃಶ್ಯ ಸಮುದಾಯಗಳೇ ಅರಿಯಲಿ ಎಂಬುದೇ ಸದ್ಯದ ಕಳಕಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT