ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಿಸ್ವಾಮ್ಯದ ಹಕ್ಕು ಪಡೆಯದಿದ್ದರೆ...

ಕೃತಿಕಾರರು ತಮ್ಮ ಹಕ್ಕುಗಳ ಬಗ್ಗೆ ಅರಿಯದಿದ್ದರೆ ತೊಂದರೆ ತಪ್ಪಿದ್ದಲ್ಲ
Last Updated 11 ನವೆಂಬರ್ 2015, 19:30 IST
ಅಕ್ಷರ ಗಾತ್ರ

ಸಾಹಿತ್ಯ ಲೋಕದಲ್ಲಿ ದಿನನಿತ್ಯ ನೂರಾರು ಕೃತಿಗಳು ಹೊರಬರುತ್ತಿವೆ. ಓದುಗರಿಲ್ಲ ಎಂಬ ಮಾತಿನ ನಡುವೆಯೇ ಸಾವಿರಾರು ಕೃತಿಗಳು ಮಾರುಕಟ್ಟೆ ಸೇರುತ್ತಿವೆ. ಆದರೆ ಲೇಖಕರು ತಮ್ಮ ಕೃತಿಗಳ ಮೂಲಕ ಬರವಣಿಗೆ ಹಕ್ಕನ್ನು ಎಷ್ಟರ ಮಟ್ಟಿಗೆ ಕಾಪಾಡಿಕೊಳ್ಳುತ್ತಿದ್ದಾರೆ?

ಸಿ.ಎನ್. ರಾಮಚಂದ್ರನ್‌ ಅವರ ಪತ್ರ (ವಾ.ವಾ., ನ. 4) ಓದಿದಾಗ ಕೃತಿಸ್ವಾಮ್ಯ ಅಥವಾ ಗ್ರಂಥದ ಹಕ್ಕುಗಳ ಬಗ್ಗೆ ಚರ್ಚಿಸಬೇಕೆನಿಸಿತು.  ಸಾಹಿತ್ಯ, ಸಂಗೀತ, ಸಿನಿಮಾ, ನಾಟಕ, ಶಬ್ದಗ್ರಹಣ, ಕಲೆ ಮತ್ತು ಛಾಯಾಚಿತ್ರಕ್ಕೆ ಸಂಬಂಧಿಸಿದಂತೆ ಕೃತಿಕಾರ ತನ್ನ ಬೌದ್ಧಿಕ ಆಸ್ತಿಯನ್ನು ಕಾಯ್ದುಕೊಳ್ಳುವಲ್ಲಿ ಕೃತಿಸ್ವಾಮ್ಯ ಸಹಾಯಕವಾಗಿದೆ. ಇಂಡಿಯನ್ ಕಾಪಿರೈಟ್ ಆ್ಯಕ್್ಟ 1957ರ ಮೂಲಕ ಭಾರತದಲ್ಲಿ ಕಾಪಿರೈಟ್ ಕಾನೂನನ್ನು ಬಳಸಲಾಗುತ್ತಿದೆ.

ಯಾವುದೇ ಒಬ್ಬ ಲೇಖಕ ಒಂದು ಕೃತಿಯನ್ನು ರಚಿಸುತ್ತಿದ್ದಂತೆಯೇ ಅವನಿಗೆ ತಂತಾನೇ ಆ ಕೃತಿಯ ಕೃತಿಸ್ವಾಮ್ಯ ದೊರೆಯುತ್ತದೆ. ಅಂದರೆ ಆ ಕೃತಿಯನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ, ಭಾಷಾಂತರಿಸುವ ಹಕ್ಕು ಕೃತಿಕಾರನದ್ದಾಗಿರುತ್ತದೆ. ತನ್ನ ಕೃತಿಯನ್ನು ಸಿನಿಮಾ, ಧಾರಾವಾಹಿ ಇತ್ಯಾದಿಗಳಿಗೆ ರೂಪಾಂತರಿಸುವ, ಯಾವ ಭಾಷೆಗಾದರೂ ಭಾಷಾಂತರಿಸಲು ಒಪ್ಪಿಗೆ ನೀಡುವ ಹಕ್ಕು ಆತನದ್ದಾಗಿರುತ್ತದೆ. ಇದಲ್ಲದೆ ಕೃತಿಕಾರರ ಒಪ್ಪಿಗೆ ಇಲ್ಲದೆ ಅವರ ಕೃತಿಯನ್ನು ಬೇರೆ ಕಡೆ ಬಳಸುವಂತಿಲ್ಲ.

ಕೃತಿಸ್ವಾಮ್ಯದ ಕಾಲಾವಧಿ ಲೇಖಕ ಬದುಕಿರುವವರೆಗೂ, ಸತ್ತ ನಂತರ ಅರವತ್ತು ವರ್ಷಗಳವರೆಗೂ ಇರುತ್ತದೆ. ನಂತರ ಅದು ಸಾರ್ವಜನಿಕರದ್ದಾಗುತ್ತದೆ. ಇದು ಸಂಗೀತ, ನಾಟಕ, ಕಲೆಗೂ ಸಂಬಂಧಿಸಿದೆ. ಕೃತಿಸ್ವಾಮ್ಯದಲ್ಲಿ ಆರ್ಥಿಕತೆ, ನೈತಿಕತೆ ಎರಡೂ ಮುಖ್ಯವಾಗುತ್ತವೆ. ಒಬ್ಬ ಲೇಖಕರ ಕಥೆ, ನಾಟಕ, ಕಾದಂಬರಿ ಅಥವಾ ಕವಿತೆಯನ್ನು ಯಾರಾದರೂ ತಮ್ಮ ಚಲನಚಿತ್ರಗಳಲ್ಲಿ, ಧಾರಾವಾಹಿಗಳಲ್ಲಿ ಬಳಸಿಕೊಂಡು ಹಣ ಸಂಪಾದಿಸಬಹುದು. ಆದರೆ ಕೃತಿಸ್ವಾಮ್ಯ ಇಲ್ಲದೆ ಇದ್ದಾಗ ಕೃತಿಕಾರರಿಗೆ ಆರ್ಥಿಕ ಸಹಾಯ ಸಿಗದಂತಾಗುತ್ತದೆ. ರಾಮಚಂದ್ರನ್‌ ಅವರ ಪ್ರಕರಣವನ್ನು ಗಮನಿಸಬಹುದು.

ಕೃತಿಕಾರರ ಹೆಸರು ಶಾಶ್ವತವಾಗಿ ಉಳಿಯಲು ಕೃತಿಸ್ವಾಮ್ಯದ ಹಕ್ಕು ಮುಖ್ಯವಾಗುತ್ತದೆ. ಉದಾಹರಣೆಗೆ ಒಬ್ಬ ಕವಿ ತಮ್ಮ ಕವನವನ್ನು ಯಾರಿಗೋ ಬಳಸಿಕೊಳ್ಳಲು ಅನುಮತಿ ನೀಡಿರುತ್ತಾರೆ ಎಂದುಕೊಳ್ಳಿ. ಅವರು ಆ ಕವಿಯ ಕವನದ ಮೂಲ ಆಶಯಕ್ಕೆ ಧಕ್ಕೆ ಬರುವಂತೆ ಬಳಸಿಕೊಂಡಿದ್ದೇ ಆದರೆ ಆ ಕವಿಯ ಹೆಸರು ಕೆಡುತ್ತದೆ. ಇದು ನೈತಿಕತೆಯ ಹಕ್ಕಿನ ಉಲ್ಲಂಘನೆಯಾಗುತ್ತದೆ.

ಕೆಲವು ವರ್ಷಗಳ ಹಿಂದೆ ಲೇಖಕ ಚೇತನ್ ಭಗತ್ ಅವರು ಬರೆದ ‘ಫೈವ್ ಪಾಯಿಂಟ್ ಸಮ್‌ಒನ್’ ಕೃತಿಯನ್ನು ‘ತ್ರೀ ಈಡಿಯಟ್ಸ್‌’ ಚಲನಚಿತ್ರದ ನಿರ್ಮಾಪಕರಿಗೆ ನೀಡಿದ್ದರು. ಚಿತ್ರ ಬಿಡುಗಡೆಯಾಗಿ  ಗಳಿಕೆಯ ದಾಖಲೆ ಮಾಡಿದಾಗ ನಿರ್ದೇಶಕರು ಚೇತನ್ ಭಗತ್‌ರ ಕಥೆಯ ಕೇವಲ ಶೇ 5ರಷ್ಟನ್ನು  ಬಳಸಿದ್ದಾಗಿ ಹೇಳಿದರೆ, ಭಗತ್ ಶೇ 75ರಷ್ಟು ಕಥೆ ತಮ್ಮದೇ ಎಂದರು. ಸಿನಿಮಾದ ಪ್ರಾರಂಭದಲ್ಲಿ ತಮ್ಮ ಹೆಸರನ್ನು ಸರಿಯಾಗಿ ತೋರಿಸಲಿಲ್ಲ ಎಂದು ಆಕ್ಷೇಪಿಸಿದರು.

ದೊಡ್ಡ ಜಟಾಪಟಿಗೆ ಕಾರಣವಾದ ಈ ಪ್ರಕರಣ ನೈತಿಕತೆಯ ಹಕ್ಕಿನ ಉಲ್ಲಂಘನೆಯ ಅಡಿಯಲ್ಲೇ ಬರುತ್ತದೆ. ತಮ್ಮ ಕಥೆಗೆ ಕೃತಿಕಾರರು ಸಂಭಾವನೆ ಪಡೆದಿದ್ದರೂ ಅವರ ಹೆಸರನ್ನು ಸರಿಯಾಗಿ ಬಳಸದಿದ್ದರೆ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಲೇಖಕರು ಕೃತಿಸ್ವಾಮ್ಯವನ್ನು ನೋಂದಾಯಿಸಬೇಕಾದುದು ಬಹಳ ಮುಖ್ಯ. ಮೊದಲೇ ಹೇಳಿದಂತೆ ಕೃತಿಕಾರ ಆಯಾ ಕೃತಿಯ ಹಕ್ಕುದಾರನಾಗುತ್ತಾನೆ. ಆದರೆ ಆ ಕೃತಿ ತಮ್ಮದೇ ಎಂದು ಸಮರ್ಥಿಸಲು ನೋಂದಣಿ ಅತ್ಯವಶ್ಯಕ. ಕೃತಿಸ್ವಾಮ್ಯದ ನೋಂದಣಿಯನ್ನು ಆನ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ.

ಕೆಲವೊಮ್ಮೆ ಎಷ್ಟೋ ಲೇಖಕರು ಪ್ರಕಾಶಕರಿಂದಲೇ ಮೋಸ ಹೋಗುವ ಸಾಧ್ಯತೆ ಇರುತ್ತದೆ. 500 ಪ್ರತಿಗಳೆಂದು, ಸಾವಿರ  ಪುಸ್ತಕಗಳನ್ನು ಪ್ರಕಟಿಸಿ ಹಣ ಮಾಡಿರುವ ಪ್ರಕಾಶಕರಿದ್ದಾರೆ. ಹಾಗೆಯೇ ‘ನಾವ್ಯಾವ ದೊಡ್ಡ ಲೇಖಕರು, ಇದೆಲ್ಲ ಬೇಕಾ’ ಎಂಬ ನಿರಾಸಕ್ತಿ ಹೊಂದಿರುವ ಹೊಸ ಲೇಖಕರೂ ಇದ್ದಾರೆ. ಕೆಲವೊಮ್ಮೆ ಪ್ರಕಾಶಕರ- ಲೇಖಕರ ನಡುವಿನ ಭಾವನಾತ್ಮಕ ಬೆಸುಗೆಯನ್ನು ದುರುಪಯೋಗ ಮಾಡಿಕೊಂಡಿರುವುದೂ ಇದೆ. ಈ ಎಲ್ಲ ಕಾರಣಗಳಿಂದ ಮುಂದಾಗುವ ಅನಾಹುತ ತಪ್ಪಿಸಲು ಮೊದಲೇ ಎಚ್ಚರಿಕೆ ವಹಿಸುವುದು ಕ್ಷೇಮ. ಇದರಿಂದ ನಂತರದ ವೈಮನಸ್ಯಗಳನ್ನು ತಡೆಯಬಹುದು.

ಪ್ರಕಾಶಕರಿಗೆ ಕೃತಿಕಾರರು ತಮ್ಮ ಹಸ್ತಪ್ರತಿಯನ್ನು ಕೊಡುವಾಗ ಕಾಪಿರೈಟ್ ಪರವಾನಗಿ ಒಪ್ಪಂದ ಮಾಡಿಕೊಳ್ಳಬೇಕು. ಮೊದಲ ಮುದ್ರಣದ ನಂತರ ಮುಂದಿನ ಮುದ್ರಣಗಳಿಗೆ ಅದೇ ಪ್ರಕಾಶಕರು ಬೇಕೇ ಬೇಡವೇ ಎಂಬ ಅಂಶ ಅದರಲ್ಲಿರಬೇಕು. ಯಾವ ಭಾಗದಲ್ಲಿ ಮುದ್ರಣದ ಹಕ್ಕನ್ನು ನೀಡುತ್ತಿದ್ದೇವೆ ಎಂಬುದನ್ನು ಗಮನಿಸಬೇಕು (ರಾಜ್ಯ, ರಾಷ್ಟ್ರ, ಖಂಡ). ಸಂಭಾವನೆಯನ್ನು ನಿರ್ಧರಿಸಬೇಕು. ಅನೇಕ ಸಲ ಕೃತಿಕಾರರು ತಮ್ಮ ಹಕ್ಕುಗಳನ್ನು ಪ್ರಕಾಶಕರ ಮಡಿಲಿಗೆ ಹಾಕಿ ತಮ್ಮ ಕೃತಿಗಳನ್ನು ಮತ್ತೆ ಮುದ್ರಣ ಮಾಡಿಕೊಳ್ಳಲಾಗದೆ ಒದ್ದಾಡುವುದನ್ನು ಕಾಣುತ್ತೇವೆ. ಹಾಗಾಗದಂತೆ ತಪ್ಪಿಸಲು ಈ ಒಪ್ಪಂದ ಅನುಕೂಲ ಮಾಡಿಕೊಡುತ್ತದೆ.

ಗೋಪ್ಯತೆಯನ್ನು, ನಂಬಿಕೆಯನ್ನು ಕಾಪಾಡಿಕೊಳ್ಳಬೇಕು. ಉದಾಹರಣೆಗೆ ನಿಮ್ಮ ಒಂದು ಕವನವನ್ನು ಯಾರಾದರೊಬ್ಬ ಸಂಗೀತ ನಿರ್ದೇಶಕನಿಗೆ ತೋರಿಸಲು ತೆಗೆದುಕೊಂಡು ಹೋಗಿರುತ್ತೀರಿ ಎಂದುಕೊಳ್ಳಿ. ಆತ ನಿಮ್ಮ ಕವನವನ್ನು ಕೇಳಿಸಿಕೊಂಡು, ನಂತರ ಇಷ್ಟವಾಗಲಿಲ್ಲ ಎಂದು ಕಳುಹಿಸಿ ಯಾವುದಾದರೂ ಒಂದು ಚಲನಚಿತ್ರದಲ್ಲಿ ಬಳಸಿಕೊಂಡಿದ್ದೇ ಆದರೆ ಅದು ನಿಮ್ಮ ಆರ್ಥಿಕತೆ ಹಾಗೂ ನೈತಿಕತೆಯ ಉಲ್ಲಂಘನೆ ಮಾಡಿದಂತಲ್ಲವೇ? ಆದ್ದರಿಂದ ಮೊದಲೇ ನೀವು ‘ಇದರ ಕಾಪಿರೈಟ್ ನನ್ನ ಬಳಿ ಇದೆ ಹಾಗೂ ನೀವು ಇದನ್ನು ಯಾರಲ್ಲೂ ಬಹಿರಂಗಪಡಿಸುವಂತಿಲ್ಲ’ ಎಂದು ಹೇಳಿಯೇ ನಿಮ್ಮ ಕೃತಿಯ ಬಗ್ಗೆ ಚರ್ಚಿಸಬೇಕು. ಇತ್ತೀಚೆಗೆ ಇಂತಹ ಪ್ರಕರಣಗಳು ಟಿ.ವಿ. ಧಾರಾವಾಹಿ ಕಥೆಗಳಲ್ಲಿ ಹೆಚ್ಚಾಗಿ ಸಂಭವಿಸುತ್ತಿವೆ.

ತಮ್ಮ ಕೃತಿಯಲ್ಲಿ ‘ಎಲ್ಲ ಹಕ್ಕುಗಳು ಲೇಖಕ’ರದ್ದು ಎಂದು ಪ್ರಕಟಿಸಿದ ಮಾತ್ರಕ್ಕೆ ಲೇಖಕರದ್ದಾಗುವುದಿಲ್ಲ. ನಿಮ್ಮದೇ ಹಕ್ಕು ಎನ್ನುವುದಕ್ಕೆ ದಾಖಲೆ ಏನು? ಯಾವ ದಾಖಲೆ ಪತ್ರ ನಿಮ್ಮಲ್ಲಿದೆ ಎನ್ನುವುದು ಮುಖ್ಯವಾಗುತ್ತದೆ. ಕಾಪಿರೈಟ್‌ನ ವಿನಾಯಿತಿಗಳು ಇಂತಿವೆ. ಯಾವುದೇ ಕೃತಿಯಲ್ಲಿನ ಸಣ್ಣ ಪ್ರಮಾಣವನ್ನು  ಬಳಸಿಕೊಳ್ಳಬಹುದು. ಉದಾಹರಣೆಗೆ ಸುಮಾರು 200 ಪುಟಗಳಲ್ಲಿ ಒಂದು ಪ್ಯಾರಾಗ್ರಾಫ್ ಬಳಸಿಕೊಳ್ಳಬಹುದು. ಚಲನಚಿತ್ರದ ತುಣುಕುಗಳನ್ನು ನಗೆಚಟಾಕಿ, ಅಣಕು ಪ್ರದರ್ಶನಕ್ಕೆ ಬಳಸಬಹುದು. ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಪ್ರತಿಯನ್ನು ದಿನಪತ್ರಿಕೆಯಲ್ಲಿ ಪ್ರಕಟಿಸಬಹುದು.

ಸಂಶೋಧನೆ, ಕಲಿಕೆ, ಉಪದೇಶಗಳಲ್ಲಿ ಯಾವುದು, ಯಾರದ್ದು ಎಂಬುದನ್ನು ತಿಳಿಸಿ ಅಳವಡಿಸಬಹುದು. ವೈಯಕ್ತಿಕ ಹಾಗೂ ಲಾಭದ ಅಪೇಕ್ಷೆಯಿಲ್ಲದಿದ್ದರೆ ಬಳಸಿಕೊಳ್ಳಬಹುದು. ಉದಾ ಹರಣೆಗೆ ನಾನು ಒಂದು ಟಿ-ಷರ್ಟ್‌ ಮೇಲೆ ಮಿಕ್ಕಿಮೌಸ್‌ ಅನ್ನು ಪೇಂಟ್ ಮಾಡಿಕೊಂಡು ಹಾಕಿಕೊಳ್ಳಬಹುದು ಅಥವಾ ಲಾಭದ ಉದ್ದೇಶವಿಲ್ಲದೆ ಯಾರಿಗಾದರೂ ಕೊಡಬಹುದು. ಅದನ್ನೇ ನೂರಾರು ಪ್ರಿಂಟ್ ಮಾಡಿ ಮಾರಿದ್ದೇ ಆದರೆ ಡಿಸ್ನಿ ಕಂಪೆನಿ ನನ್ನ ಮೇಲೆ ಕೇಸ್ ಹಾಕುತ್ತದೆ. ಈ ಅಂಶಗಳನ್ನು ಗಮನಿಸಿ ಲೇಖಕರು, ವರ್ಣಚಿತ್ರಕಾರರು, ಸಿನಿಮಾ, ಧಾರಾವಾಹಿ,  ನಾಟಕ, ಶಬ್ದಗ್ರಹಣ ನಿರ್ದೇಶಕರು, ಸಂಗೀತಗಾರರು ತಮ್ಮ ಬೌದ್ಧಿಕ ಹಕ್ಕುಗಳನ್ನು ಉಳಿಸಿಕೊಳ್ಳಬೇಕು.

ಪ್ರತಿಯೊಬ್ಬರಿಗೂ ತಮ್ಮದೇ ಆದ ಸೃಜನಶೀಲತೆ, ಕಲ್ಪನಾಶಕ್ತಿ, ಜಾಣ್ಮೆ ಇರುತ್ತದೆ. ಅದು ಅವರ ಕೃತಿಗಳಲ್ಲಿ ಪ್ರಕಟಗೊಂಡಿರುತ್ತದೆ. ಅವುಗಳನ್ನು ಕಾಪಾಡಿಕೊಳ್ಳುವ ಹಕ್ಕು ಆಯಾ ಲೇಖಕರದ್ದು. ನಂತರ ಪಶ್ಚಾತ್ತಾಪ ಪಡುವುದಕ್ಕಿಂತ ವಾಸ್ತವದ ಅರಿವಿನಲ್ಲಿ ಯೋಚಿಸಿದ್ದೇ ಆದರೆ ಕೃತಿಕಾರರಿಗೆ ಮನಸ್ಸು ನೋಯುವುದಿಲ್ಲ. ಆದರೆ ಇಂಥ ಪ್ರಕರಣಗಳಲ್ಲಿ ನಮ್ಮ ಲೇಖಕರು ಕ್ಷಮಯಾಧರಿತ್ರಿಯರಾಗುತ್ತಾರೆ. ಅದನ್ನು ಪಕ್ಕಕ್ಕಿಟ್ಟು, ತಮಗೆ ಅನ್ಯಾಯ ಮಾಡಿದವರಿಗೆ ಲೀಗಲ್ ನೋಟಿಸ್ ನೀಡುವ, ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿ ಹೋರಾಡುವ ಮೂಲಕ ಪಾಠ ಕಲಿಸಬೇಕಾಗಿದೆ. ಅದಕ್ಕೂ ಮುಂಚೆ ತಮ್ಮ ಮಡಿಲ ಕೂಸನ್ನು ಕಾನೂನಿನ ಅಡಿ ನೋಂದಾಯಿಸುವ ಮೂಲಕ ಕಾಪಾಡಿಕೊಳ್ಳಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT