ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರ ಬಜೆಟ್‌: ಕನಿಷ್ಠ ತೆರಿಗೆ, ಗರಿಷ್ಠ ಸುಧಾರಣೆ?

Last Updated 15 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ತ್ವರಿತಗತಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲ ವಲಯಗಳಿಗೂ ಅನು­ಕೂಲ­ವಾ­­ಗುವ ರೀತಿಯಲ್ಲಿ ಗರಿಷ್ಠ ಸುಧಾರಣಾ ಅಂಶ­ಗಳಿರುವ ಬಜೆಟ್‌ ಅನ್ನು ಈ ಬಾರಿ ಎಲ್ಲ ವರ್ಗದ ಜನರೂ ನಿರೀಕ್ಷಿಸುತ್ತಿದ್ದಾರೆ.

ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರ ಭಾರತ ಭೇಟಿ ನಂತರ ಇಂತಹ ಹಲವು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಅವರ ಭೇಟಿಯ ಫಲವಾಗಿ ದೇಶದ ಎಲ್ಲ ವಲಯಗಳ, ಅದರಲ್ಲೂ ವಿಶೇಷವಾಗಿ ಕೈಗಾರಿಕಾ ಉದ್ಯಮದ ಬೆಳ­ವಣಿಗೆಗೆ ಅಮೆರಿಕ ಬಹುದೊಡ್ಡ ಕೊಡುಗೆ ನೀಡಲಿದೆ ಎಂಬ ಆಶಾಭಾವ ಗರಿಗೆದರಿದೆ. ಇದಕ್ಕೆ ಪೂರಕವೆಂಬಂತೆ ಅನಾದಿ ಕಾಲದಿಂದ ದೇಶದಲ್ಲಿರುವ ಕೆಲವು ಸಾಂಪ್ರದಾಯಿಕ ತೆರಿಗೆ­ಗಳ ನೀತಿಯಲ್ಲಿ ಸುಧಾರಣೆ ಮತ್ತು ಬದಲಾವಣೆ ತರಬೇಕಾದ ಅಗತ್ಯ ಕಂಡುಬಂದಿದೆ. ಒಬಾಮ ಅವರ ಸಲಹೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ಫೆಬ್ರುವರಿ 28ರಂದು ಮಂಡನೆಯಾಗಲಿರುವ ಬಜೆಟ್‌ನತ್ತ ಹೊರಳಿದೆ.

ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರೂ ಸರಳ ತೆರಿಗೆ ನೀತಿಯ ಸುಳಿವು ನೀಡಿದ್ದಾರೆ. ಮುಂಬೈ ನಗರಕ್ಕೆ ಸಂಬಂಧಿಸಿ ಇತ್ತೀಚೆಗೆ ಉದ್ಯಮಿ­ಗಳೊಂದಿಗೆ ಏರ್ಪಡಿಸಿದ್ದ ವಿಡಿಯೊ ಕಾನ್ಫರೆನ್‌್ಸ­ನಲ್ಲಿ ಅವರು, ತೆರಿಗೆ ಸುಧಾರಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ತೆರಿಗೆ ನೀತಿಯನ್ನು ‘ಉದ್ಯಮ ಸ್ನೇಹಿ’ ಆಗಿಸುವ ಸಂಬಂಧ ಕೆಲವು ತಿಂಗಳಿನಿಂದ ಯೋಜನೆ ರೂಪಿಸಲಾಗುತ್ತಿದೆ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನ­ವಶ್ಯಕವಾಗಿ ಶೋಷಣೆ ಮಾಡಿ ತೆರಿಗೆ ಸಂಗ್ರಹಿಸು­ವುದಿಲ್ಲ ಎಂಬ ಭರವಸೆಯೂ ಸಚಿವ­ರಿಂದ ಹೂಡಿ­ಕೆ­ದಾರರಿಗೆ ಸಿಕ್ಕಿದೆ. ಇದರಿಂದ ಆಕರ್ಷಿತರಾದ ವಿದೇಶಿ ಹೂಡಿಕೆದಾರರು ಭಾರತದ ಮೂಲ­ಸೌಕರ್ಯ ವಲಯದತ್ತ ಹೆಚ್ಚು ಒಲವು ತೋರಿಸಿ­ದ್ದಾರೆ. ಈ ನಿಟ್ಟಿನಲ್ಲಿ ಮೂಲಸೌಕರ್ಯ ವಲಯ­ದಲ್ಲಿ ಹೂಡಿಕೆಗೆ ಅನುಕೂಲವಾಗುವಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಸಂದೇಶ ವಿದೇಶಿ ಹೂಡಿಕೆದಾರರಿಗೆ ರವಾನೆ­ಯಾಗಿದೆ. ಇದ­ರಿಂದ ಈ ಬಾರಿಯ ಬಜೆಟ್‌ನ ತೆರಿಗೆ ನೀತಿ­ಯಲ್ಲಿ ಸಾಕಷ್ಟು ಬದಲಾವ­ಣೆ­ಯಾಗ­ಲಿದೆ ಎಂಬ ನಂಬಿಕೆ ಮತ್ತಷ್ಟು ಬಲಗೊಂಡಿದೆ.

ಜಗತ್ತಿನ ವಿವಿಧ ದೇಶಗಳಿಗೆ ಭಾರತದ ತೆರಿಗೆಯನ್ನು ಹೋಲಿಸಿ ನೋಡಿದರೆ, ಚೀನಾದಲ್ಲಿ ಹೆಚ್ಚೆಂದರೆ ಕಾರ್ಪೊರೇಟ್ ವಲಯ ಶೇ 25ರಷ್ಟು ಮಾತ್ರ ತೆರಿಗೆ ನೀಡಬೇಕು. ರಷ್ಯಾ, ಆಸ್ಟ್ರೇಲಿಯ, ಹಾಂಕಾಂಗ್, ಮಲೇಷ್ಯಾ ಮತ್ತು ಸಿಂಗಪುರಗಳಿಗೆ ಹೋಲಿಸಿದರೆ ಭಾರತದಲ್ಲಿ ಕಾರ್ಪೊ­ರೇಟ್ ವಲಯದ ತೆರಿಗೆ ಭಾರ ಅಧಿಕ. ಇದನ್ನು ಹಿಂದಿನ ಹಣಕಾಸು ಸಚಿವ ಚಿದಂಬರಂ ಸಮ­ರ್ಥಿಸಿಕೊಂಡಿದ್ದರು. ಆದರೆ ಈಗ ಮೋದಿ ನೇತೃತ್ವದ ಸರ್ಕಾರದ 2015-16ನೇ ಸಾಲಿನ ಬಜೆಟ್‌ ಬಹು ನಿರೀಕ್ಷೆಗಳನ್ನು ಮೂಡಿಸಿರುವು­ದ­ರಿಂದ, ಅಧಿಕಾರಕ್ಕೆ ಬರುವ ಮುನ್ನ ನೀಡಿದ ಆಶ್ವಾಸನೆ ಮತ್ತು ಉದ್ಯಮಗಳ ಚೇತರಿಕೆಗೆ ಅದು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹಿಂದಿನ 10 ವರ್ಷ ಆಳ್ವಿಕೆ ನಡೆಸಿದ ಸರ್ಕಾರ ಯಥಾಸ್ಥಿತಿ ಕಾಪಾಡಿಕೊಂಡು ಬಂದಿತ್ತು. ಕೆಲವು ತಪ್ಪು ನಿರ್ಧಾರಗಳಿಂದ ದೇಶದ ಪ್ರಗತಿ ಸಾಧ್ಯ­ವಾಗದೆ ಸರ್ಕಾರ ಭ್ರಷ್ಟಾಚಾರದ ಪೋಷ­ಣೆ­ಯಲ್ಲಿ ಕಾಲಾವಧಿ ಪೂರ್ಣಗೊಳಿಸಿದ್ದು ಈಗ ಇತಿಹಾಸ. ಹೀಗಾಗಿ ಈಗಿನ ಎನ್‌ಡಿಎ ಸರ್ಕಾರ ಸೂಕ್ತ ಸುಧಾರಣಾ ಕ್ರಮಗಳ ಮೂಲಕ ಅಭಿ­ವೃದ್ಧಿ ಸಾಧಿಸುವ ಸಂಕಲ್ಪ ಹೊಂದಿದರಷ್ಟೇ ಸಾಲದು; ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕಾಗುತ್ತದೆ.

ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ನೆರವು ಅತ್ಯಗತ್ಯ. ಕಳೆದ ಕೆಲವು ವರ್ಷಗಳಿಂದ ದೇಶದ ಈ ವಲಯ ಮಂದಗತಿಯ ಬೆಳವಣಿಗೆಯನ್ನು ಕಾಣುತ್ತಿದೆ. ಈ ವಲಯದ ಚೇತರಿಕೆಗೆ ಹೆಚ್ಚಿನ ಬಂಡ­ವಾಳ ಹೂಡಿಕೆಯ ಅಗತ್ಯವಿದೆ. ಇದರ ಅಭಿ­ವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ರಾಜ್ಯ ಸರ್ಕಾ­ರ­ಗಳಿಗೆ ಅಗತ್ಯವಾದ ಬೆಂಬಲ ನೀಡುವು­ದಾಗಿ ಹೇಳಿ­ರುವುದು ಆಶಾದಾಯಕವಾಗಿದೆ. ಕಳೆದ ಕೆಲವು ತಿಂಗಳಿನಿಂದ ಕೇಂದ್ರ ಸರ್ಕಾರ ತೆರಿಗೆ ನೀತಿಯನ್ನು ‘ಹೂಡಿಕೆದಾರ ಸ್ನೇಹಿ’­ಯಾಗಿಸಲು ಈಗಾಗಲೇ ಕೆಲವು ಯೋಜನೆ­ಗಳನ್ನು ರೂಪಿಸಿದೆ. ಇದಕ್ಕೆ ರಾಜ್ಯ ಸರ್ಕಾರಗಳ ಸ್ಪಂದನ ಬಹು ಮುಖ್ಯ.

ವಿದ್ಯುತ್, ಇಂಧನ, ಮೂಲಸೌಕರ್ಯ, ರೈಲ್ವೆ ಮತ್ತು ಬಂದರು ವಲಯಗಳಲ್ಲಿನ ಸುಧಾರಣೆಗೆ ಆದ್ಯತೆ ಕೊಡುವುದರ ಜೊತೆಗೆ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚು ಮಾಡಬೇಕಾದ ಅವಶ್ಯ­ಕತೆಯಿದೆ. ಯೋಜನಾ ವೆಚ್ಚದಲ್ಲಿ ಶೇ 10­ರಷ್ಟನ್ನು ತಗ್ಗಿಸಿದರಷ್ಟೇ ಸಾಲದು. ಈಗಾಗಲೇ ಸಾಮಾನ್ಯರ ಮೇಲಿನ ತೆರಿಗೆ ಭಾರ ಅಧಿಕ­ವಾಗಿದೆ. ಅವಶ್ಯಕ ವಸ್ತುಗಳ ಬೆಲೆ ನಾಗಾಲೋಟ­ದಲ್ಲಿದೆ. ಆದ್ದರಿಂದ ಹೊರೆಯಾಗದ ರೀತಿಯಲ್ಲಿ ತೆರಿಗೆ ಸಂಗ್ರಹ ಮಾಡಬೇಕಾಗಿದೆ.

ಜಿಡಿಪಿ ಎರಡಂಕಿಯ ಪ್ರಗತಿ ಅಗತ್ಯವಾಗಿದೆ. ‘ಬಡತನ ರೇಖೆ ಪ್ರಮಾಣ ತಗ್ಗಿಸಲು ದೇಶದ ಒಟ್ಟಾರೆ ಆಂತರಿಕ ಉತ್ಪಾದನೆ (ಜಿಡಿಪಿ) ಶೇ 6.05ರಷ್ಟು, ಇಲ್ಲವೇ ಶೇ 8.5ರಷ್ಟಿದ್ದರೆ ಸಾಲದು. ಶೇ 10ರಿಂದ 11ರಷ್ಟು ಪ್ರಗತಿ ಇದ್ದರೆ ಮಾತ್ರ ಬಡತನ ತಗ್ಗಿಸಬಹುದು’ ಎಂಬ ಆರ್‌ಬಿಐ ಮಾಜಿ ಗವರ್ನರ್ ಸುಬ್ಬರಾವ್ ಅವರ ಅಭಿಪ್ರಾಯ ಸಮಯೋಚಿತವಾಗಿದೆ.

‘ಅನ್ನದಾತನ ಸಾಲ ಮನ್ನಾ ಸರಿಯಾದ ಕ್ರಮವಲ್ಲ’ ಎಂಬ ಆರ್‌ಬಿಐನ ಈಗಿನ ಗವರ್ನರ್ ಹೇಳಿಕೆಯನ್ನು ಕೇಂದ್ರ ಸರ್ಕಾರ ಮರುಪರಿಶೀಲನೆ ಮಾಡಬೇಕಾಗಿದೆ. ಏಕೆಂದರೆ ಕೃಷಿಕನ ಬದುಕು ಇಂದು ಅಭದ್ರವಾಗಿದೆ. ಇದು ಅಸಂಘಟಿತ ವಲಯ­ವಾಗಿರುವುದರಿಂದ ನಿಸರ್ಗದ ವೈಪರೀತ್ಯ­ಗಳಿಂದಾಗಿ ಕೃಷಿಕರನ್ನು ಯಾವಾಗಲೂ ಅಭದ್ರತೆ ಕಾಡುತ್ತದೆ. ಅವರ ಬಗೆಗಿನ ಸರ್ಕಾರದ ಬದ್ಧ ನಿಲುವುಗಳು ಆ ವಲಯದಲ್ಲಿ ಮುಂದುವರಿ­ಯುವ ಇಲ್ಲವೇ ನಿರ್ಗಮಿಸುವ ತೀರ್ಮಾನಗಳ ಮೇಲೆ ಪರಿಣಾಮ ಬೀರುತ್ತವೆ. ಹೀಗಾಗಿ ಈ ವಲಯದ ತಾತ್ಸಾರ ಸಲ್ಲದು.

ಜಾಗತಿಕ ಮಾರುಕಟ್ಟೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಪೂರೈಕೆಯಾಗುತ್ತಿರುವ ಕಚ್ಚಾ ತೈಲದ ದರ ಭಾರಿ ಇಳಿಕೆಯಾಗುತ್ತಿರುವ ಈ ಸಮಯ­ದಲ್ಲಿ ದೇಶದ ವಿವಿಧ ವಲಯಗಳು ಅಭಿವೃದ್ಧಿ ಹೊಂದಲು, ತೈಲ ಬೆಲೆ ಇಳಿಕೆಯ ಸದುಪ­ಯೋಗ ಮಾಡಿಕೊಳ್ಳಲು ಇದು ಸಕಾಲ. ಇಂದು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಅಗಾಧ ಪ್ರಮಾಣದಲ್ಲಿ ಕಚ್ಚಾ ತೈಲ ಪೂರೈಕೆ­ಯಾಗು­ತ್ತಿದೆ. ಇದರ ಪರಿಣಾಮವಾಗಿ ತೈಲ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಮೆರಿಕದ ಮಂದ ಆರ್ಥಿಕ ಪ್ರಗತಿ ಮತ್ತು ದಾಖಲೆ ಪ್ರಮಾಣದ ಕಚ್ಚಾ ತೈಲದ ಸಂಗ್ರಹ. ಬಳಕೆದಾರರಿಗೆ ಕನಿಷ್ಠ ಪ್ರಮಾಣದ ತೆರಿಗೆ ವಿಧಿಸಿ, ಬಜೆಟ್‌ನಲ್ಲಿ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ.

ಆರ್‌ಬಿಐನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯ ಪ್ರಕಟಣೆಯು ಈಗಾಗಲೇ ಮಧ್ಯಮ ವರ್ಗದ ಜನರ ಆಸೆಗೆ ತಣ್ಣೀರು ಎರ­ಚಿದೆ. ಸಾಲದ ಮೇಲಿನ ಸಮಾನ ಮಾಸಿಕ ಕಂತು ತಗ್ಗಲಿದೆ ಎಂಬ ಗ್ರಾಹಕರ ನಿರೀಕ್ಷೆ ಹುಸಿಯಾಗಿದೆ. ಬಡ್ಡಿ ದರದಲ್ಲಿ ಯಾವುದೇ ವ್ಯತ್ಯಾಸ ತರದೇ ಯಥಾಸ್ಥಿತಿ ಕಾಯ್ದುಕೊಳ್ಳ­ಲಾಗಿದೆ. ಹಣ­ದುಬ್ಬ­ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಉತ್ತಮ ವಾತಾ­ವರಣ ನಿರ್ಮಾಣವಾಗಬೇಕಿದೆ. ಸದ್ಯದ ಆರ್ಥಿ­ಕತೆ ಇನ್ನಷ್ಟು ಸುಧಾರಿಸಬೇಕಿದೆ.

ಜಾಗತಿಕವಾಗಿ ಬಲಾಢ್ಯ ದೇಶವಾಗಿ ಹೊರ­ಹೊಮ್ಮುತ್ತಿರುವ ಈ ಸಂದರ್ಭದಲ್ಲಿ ತಯಾ­ರಿಕಾ ರಂಗ ಸೇರಿದಂತೆ ವಿವಿಧ ವಲಯ­ಗಳಲ್ಲಿ ಬಂಡ­ವಾಳ ತೊಡಗಿಸಲು ವಿದೇಶಿ ಹೂಡಿಕೆ­ದಾರರು ಭಾರತಕ್ಕೆ ಬರಲು ತುದಿಗಾಲ ಮೇಲೆ ನಿಂತಿದ್ದಾರೆ. ಅವರೆಲ್ಲ ಸರ್ಕಾರದ ನೀತಿಗಳ ವಿಶ್ವಾಸಾರ್ಹತೆ ಮತ್ತು ಸ್ಥಿರತೆಯನ್ನು ನಿರೀಕ್ಷಿಸುತ್ತಿ­ದ್ದಾರೆ. ಹೀಗಾಗಿ ದೇಶದ ಕಾರ್ಪೊರೇಟ್ ವಲ­ಯದ ಮೇಲೆ ತೆರಿಗೆ ಭಾರ ಅಧಿಕವಾಗಿದೆ ಎಂಬ ವಾದ­ವನ್ನು ಸರ್ಕಾರ ಮರುಪರಿಶೀಲನೆ ಮಾಡ­ಬೇಕಾ­ಗುತ್ತದೆ. ವಿಜಯ ಕೇಳ್ಕರ್ ಸಮಿತಿ 2002­ರಲ್ಲಿ ನೀಡಿದ ವರದಿಯಲ್ಲಿ, ಕಾರ್ಪೊ­ರೇಟ್ ತೆರಿಗೆ ಶೇ 30ರಷ್ಟು ಇರಬಹುದೆಂದು ತಿಳಿಸಿರು­ವುದು ಇಲ್ಲಿ ಗಮನಾರ್ಹ.

ಸಾಮಾನ್ಯವಾಗಿ ಬಜೆಟ್‌ನಲ್ಲಿ ಸಂಭವನೀಯ ಆದಾಯ ಮತ್ತು ವೆಚ್ಚಗಳನ್ನು ಅಂದಾಜು ಮಾಡು­­ವುದು ಇಲ್ಲಿಯವರೆಗಿನ ಸಹಜ ಕಲ್ಪನೆ. ‘ಸರ್ಕಾರಗಳು ತೆರಿಗೆ ವಿಧಿಸಿದಾಗ ಜನರು ಅದನ್ನು ಕಟ್ಟುವ ಸಮಯದಲ್ಲಿ ಯಾವುದೇ ನೋವು ಮತ್ತು ವೇದನೆಗೆ ಒಳಗಾಗುವಂತೆ ಇರಬಾರದು’ ಎಂಬ ಆರ್ಥಿಕ ತಜ್ಞ ಡಾಲ್ಟನ್‌ ಅವರ ವಿವೇಚನೆಗೆ ಈ ಸ್ಥಿತಿ ವ್ಯತಿರಿಕ್ತವಾಗಿದೆ.

ಸದ್ಯದ ಅಧಿಕ ತೆರಿಗೆ ಭಾರದಿಂದ ಸಾಮಾನ್ಯ ಜನ ರೋಸಿದರೆ, ಸರ್ಕಾರ ಬಹು ಮುಖ್ಯವಾದ ಮೂಲಭೂತ ಅವಶ್ಯಕತೆಗಳನ್ನು ಒದಗಿಸದೆ ಜನ­ರನ್ನು ಮರೆತರೆ, ದೆಹಲಿ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಎಎಪಿ ಪೊರಕೆಯು ಒಂದೆಡೆ ಗುಡಿಸಿ ಗುಡ್ಡೆ ಹಾಕಿರುವ ವಿದ್ಯಮಾನ ಎಚ್ಚರಿಕೆಯ ಗಂಟೆಯಂತಿದೆ. ಅಲ್ಲದೆ, ಜರ್ಮನಿ ಕವಿ  ಬ್ರೆಕ್ಟ್ ಅಭಿಪ್ರಾಯ­ದಂತೆ ‘ತಪ್ಪುಗಳನ್ನೆಲ್ಲ ಮಾಡಿ ಮುಗಿಸಿದ ಮೇಲೆ ನಮ್ಮನ್ನು ಸ್ವಾಗತಿಸಲು ಕಾದು ಕುಳಿತಿರುತ್ತದೆ ಶೂನ್ಯ’.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT