ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಚ ಹರಿತವಾಗಲಿ ಹೂಬಾಣ

Last Updated 18 ನವೆಂಬರ್ 2015, 19:30 IST
ಅಕ್ಷರ ಗಾತ್ರ

ದೇವನೂರ ಮಹಾದೇವ ತಮಗೆ ಒಲಿದು ಬಂದಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದಾರೆ. ಈ ಮೂಲಕ ಅಸಹಿಷ್ಣುತೆಯ ವಿರುದ್ಧ ಎದ್ದ ಸಾಹಿತ್ಯ ವಲಯದ ದನಿಗೆ ತಮ್ಮ ದನಿಯನ್ನೂ ಸೇರಿಸಿ ಇಮ್ಮಡಿಗೊಳಿಸಿದ್ದಾರೆ.

ದೇವನೂರ ಈ ನಾಡಿನ ಸಾಕ್ಷಿ ಪ್ರಜ್ಞೆ, ದಲಿತ ಚಳವಳಿಯ ಪ್ರಮುಖ ರೂವಾರಿ, ಸಾಹಿತ್ಯ ಲೋಕದ ಬೆಚ್ಚನೆಯ ಕತೆಗಾರ ಎಲ್ಲವೂ ಆಗಿದ್ದಾರೆ. ಅವರ ಮಾತಿಗಷ್ಟೇ ಅಲ್ಲ ಬರವಣಿಗೆಗೂ ವ್ಯಾಪಕ ದೃಷ್ಟಿಕೋನವಿದೆ. ಅವರು ನಾಡಿನ ಹಲವು ಆತಂಕಗಳಿಗೆ ನಿರಂತರ ಪ್ರತಿಕ್ರಿಯೆಯಾಗಿದ್ದಾರೆ.

ಕರ್ನಾಟಕದಲ್ಲಿ ಸಮಾನ ಶಿಕ್ಷಣದ ಪ್ರಮುಖ ಧ್ವನಿಯಲ್ಲಿ ದೇವನೂರರ ಧ್ವನಿ ಮಹತ್ವದ್ದು. ಎಲ್ಲರನ್ನೂ ಒಗ್ಗೂಡಿಸಿಕೊಂಡೇ ಹೋರಾಟದ ಹಣತೆ ಹಚ್ಚಬೇಕು ಎನ್ನುವ ಅವರು ಸಮಕಾಲೀನ ರಾಜಕೀಯ ನೆಲೆಯನ್ನು ವಿಶ್ಲೇಷಿಸಿ ಹೊಸ ದಿಕ್ಕು ನೀಡಬಲ್ಲ ದೃಢಚಿತ್ತದವರು.

ರಾಜ್ಯದಲ್ಲಿ ಕೆಲವರಾದರೂ ಕತೆಗಾರರಾಗಬೇಕೆಂದುಕೊಂಡರೆ ದೇವನೂರರ ಕತೆ ಓದದಿದ್ದರೆ ಅಪೂರ್ಣತೆ ಪ್ರಶ್ನೆ ಕಾಡಲು ಪ್ರಾರಂಭಿಸುತ್ತದೆ. ಇಂದಿಗೂ ದೇವನೂರರ ಬರವಣಿಗೆಯನ್ನು ಕಾಯುತ್ತಾ  ಕುಳಿತಿರುವ ಒಂದು ಗಂಭೀರ ಓದುವ ವರ್ಗವಿದೆ. ಇದಕ್ಕೆ ‘ಎದೆಗೆ ಬಿದ್ದ ಅಕ್ಷರ’ ಕೃತಿಗೆ ಬಂದ ಅಭೂತಪೂರ್ವ ಪ್ರತಿಕ್ರಿಯೆಯೇ ಸಾಕ್ಷಿ. ಈ ಹಿಂದೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿಯನ್ನು ಕನ್ನಡ ನಾಡು ನುಡಿ ಹಿನ್ನೆಲೆಯಲ್ಲಿ ತಿರಸ್ಕರಿಸಿ ಕರ್ನಾಟಕದಲ್ಲಿ ಮಾತೃಭಾಷೆ ಮತ್ತು ಸಮಾನ ಶಿಕ್ಷಣದ ಬಗ್ಗೆ ದೊಡ್ಡ ಚರ್ಚೆಯನ್ನೇ ಅವರು ಹುಟ್ಟುಹಾಕಿದ್ದರು.

ಇಷ್ಟೆಲ್ಲ ಧೀಮಂತಿಕೆ ಉಳ್ಳ ದೇವನೂರರು ಇತ್ತೀಚಿನ ಅಸಹಿಷ್ಣುತೆಗೆ ಬೇಸತ್ತು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿರುವುದು ಇವತ್ತಿನ ನಡೆಯಲ್ಲಿ ಬಹುಮುಖ್ಯವಾದುದು. ದಾದ್ರಿ ಘಟನೆ ಮತ್ತು ಕಲಬುರ್ಗಿ ಅವರ ಕೊಲೆ ಹಿನ್ನೆಲೆ ಯಲ್ಲಿ ಈ ಒಂದು ನಿರ್ಣಯಕ್ಕೆ ಇನ್ನಿತರರಂತೆ ದೇವನೂರರೂ ಬಂದಿದ್ದಾರೆ. ಆತ್ಮಾವಲೋಕನದ ಪ್ರಶ್ನೆಯನ್ನು ಆಳುವ ವರ್ಗಕ್ಕಿಟ್ಟು ‘ಯಾವುದೇ ಆಳುವಿಕೆಯು ಸಂವೇದನಾಶೀಲವಾಗಲು ಹಾಗೂ ಸಮಾಜಮುಖಿಯಾಗಲು ಲೇಖಕ, ಕಲಾವಿದ, ಪ್ರಜ್ಞಾವಂತರು ಸರ್ಕಾರಕ್ಕೆ ಅಂಕುಶದಂತೆ ಇರಬೇಕು ಎಂದು ನಂಬಿಕೊಂಡಿರುವ ನಾನು, ಇತ್ತೀಚಿನ ಅಸಹಿಷ್ಣುತೆಗಾಗಿ ಪ್ರಶಸ್ತಿ ಹಿಂದಿರುಗಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇಲ್ಲಿ ಬಹುಮುಖ್ಯವಾಗಿ ಕಾಡುವ ಪ್ರಶ್ನೆ ಎಂದರೆ, ದಾದ್ರಿ ಘಟನೆ ಸಂದರ್ಭದಲ್ಲೇ ಹಾಡಹಗಲೇ ಉತ್ತರ ಪ್ರದೇಶದಲ್ಲಿ 90ರ ಆಸುಪಾಸಿನ ವ್ಯಕ್ತಿಯನ್ನು ದೇವಸ್ಥಾನ ಪ್ರವೇಶಿಸಿದನೆಂಬ ಕಾರಣ ಒಡ್ಡಿ ಬೆಂಕಿ ಹಚ್ಚಿ ಕೊಲ್ಲಲಾಯಿತು. ಅದೇ ರಾಜ್ಯದಲ್ಲಿ ದೂರು ಕೊಡಲು ಹೋದ ದಲಿತ ಮಹಿಳೆ ಮತ್ತು ಆಕೆಯ ಗಂಡನನ್ನು ನಡುಬೀದಿಯಲ್ಲಿ ಬೆತ್ತಲೆಗೊಳಿಸಲಾಯಿತು. ಇತ್ತೀಚೆಗೆ ಜಾತಿಯ ಕ್ರೌರ್ಯಕ್ಕೆ ಎರಡು ಎಳೆಜೀವಗಳು ಬೆಂಕಿಯಲ್ಲಿ ಬೆಂದುಹೋದವು. ಅಷ್ಟೇ ಯಾಕೆ ದೇವನೂರರ ತವರು ಜಿಲ್ಲೆಯಲ್ಲೇ ದಲಿತರ ಸರಣಿ ಕೊಲೆಗಳು ನಡೆದುಹೋಗಿವೆ. ಕಂಬಾಲಪಲ್ಲಿ ಮತ್ತು ನಾಗಲಾಪಲ್ಲಿಯಂತಹ ಭೀಕರ ಕೊಲೆಗಳಿಗೆ ಇಂದಿಗೂ ನ್ಯಾಯ ಮರೀಚಿಕೆಯಾಗಿದೆ. ಇವೆಲ್ಲವುಗಳ ವಿರುದ್ಧ ಕನಿಷ್ಠ ಸೌಜನ್ಯಕ್ಕಾದರೂ ತಮ್ಮ ಪ್ರಶಸ್ತಿ ವಾಪಸಾತಿಯಲ್ಲಿ ಬಹುತೇಕರು ಉಲ್ಲೇಖಿಸಲಿಲ್ಲ.

ದಾದ್ರಿಯಂತಹ ಘಟನೆಯ ಬಗ್ಗೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಸುಮ್ಮನಿರುವುದು ಮಹಾಪರಾಧ ಹಾಗೂ ಎತ್ತರದ ದನಿಯಲ್ಲಿ ಧಿಕ್ಕರಿಸಬೇಕಿರುವುದು ಪ್ರತಿ ನಾಗರಿಕನ ಕರ್ತವ್ಯವೂ ಹೌದು. ಆದರೆ ಈ ಘಟನೆಗೆ ಹೊಂದಿಕೊಂಡಂತೆ ನಡೆದ ದಲಿತರ ಮೇಲಿನ ದೌರ್ಜನ್ಯಗಳನ್ನು ಕನಿಷ್ಠ ಉಲ್ಲೇಖಿಸುವ ಕೆಲಸವನ್ನಾದರೂ ಮಾಡಬಹುದಿತ್ತಲ್ಲವೇ? ಇದನ್ನು ಮನಃಪೂರ್ವಕವಾಗಿ ಕೇಳಿಕೊಳ್ಳಬೇಕಿರುವುದು ಇಂದಿನ ದಿನಮಾನಗಳಲ್ಲಿ ಬಹುಮುಖ್ಯವಲ್ಲವೇ? ಇದಕ್ಕೆ ಬಲ್ಲವರೇ ಉತ್ತರಿಸಬೇಕು. ಇದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುತ್ತಿರುವುದಕ್ಕೆ ಪ್ರಮುಖ ಕಾರಣ, ದೇವನೂರರಾದರೂ ಇದನ್ನು ಉಲ್ಲೇಖಿಸಬಹುದಿತ್ತಲ್ಲ ಎಂಬುದು.

ದಲಿತರ ಮೇಲೆ ದೌರ್ಜನ್ಯ ಆದಾಗ ದೇವನೂರರು ಕಡ್ಡಾಯವಾಗಿ ವಿರೋಧಿಸಬೇಕೆಂಬ ಹಂಬಲವೂ ಇಲ್ಲಿನದಲ್ಲ ಅಥವಾ ಇದಕ್ಕೆ ದಲಿತರಾದ ದೇವನೂರರ ಪ್ರತಿಕ್ರಿಯೆ ಬಹಳ ಮುಖ್ಯ ಇನ್ನಿತರರ ಪ್ರತಿಕ್ರಿಯೆ ಗೌಣ ಎಂಬ ಉದ್ಧಟತನದ ಮಾನದಂಡವೂ ಇಲ್ಲಿನದಲ್ಲ. ಆದರೆ ದಲಿತರ ಕೊಲೆಯ ಅಂಶವೂ ಇದರಲ್ಲಿ ಉಲ್ಲೇಖಗೊಂಡಿದ್ದರೆ ಅದರ ತೀವ್ರತೆಯ ಕೆಚ್ಚು ಇನ್ನಷ್ಟು ಹೆಚ್ಚುತ್ತಿತ್ತೇನೊ! ಹಿಂದೆ ಕೂಡ ಬದನವಾಳುವಿನಲ್ಲಿ ನಡೆದ ಸುಸ್ಥಿರ ಬದುಕಿನ ಸಮಾವೇಶಕ್ಕೆ ಸಾಕ್ಷಿಯಾಗಿದ್ದ ಬಹುತೇಕರಲ್ಲಿ, ಮೊದಲು ನಡೆದಿದ್ದ ದಲಿತರ ಭೀಕರ ಕ್ರೌರ್ಯ ಕುರಿತ ತಲ್ಲಣವೇ ಇರಲಿಲ್ಲ. ಅದರಲ್ಲಿ ದೇವನೂರರೂ ಒಬ್ಬರು.

ಅವರೇ ಹೇಳುವಂತೆ ‘ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ ನಾಳೆ ಫಲ ಕೊಡುತ್ತವೆ’. ಈ ಹಿನ್ನೆಲೆಯಲ್ಲಿಯೇ ದೇವನೂರರು ತಮ್ಮ ಪ್ರಶಸ್ತಿ ವಾಪಸಾತಿ ಪ್ರಕ್ರಿಯೆಯಲ್ಲಿ ದಲಿತರ ಕಗ್ಗೊಲೆಯ ಕಾರಣವನ್ನೂ ಉಲ್ಲೇಖಿಸಿದ್ದರೆ ಇನ್ನಿತರರಿಗೆ ಇದು ಬಹುಮುಖ್ಯ ಸ್ಫೂರ್ತಿಯಾಗಿ ಖಂಡಿತವಾಗಿಯೂ ಕೆಲಸ ಮಾಡುತ್ತಿತ್ತು. ದಲಿತ ಚಳವಳಿ ಕಟ್ಟಲು ಪ್ರಮುಖ ಕಾರಣಕರ್ತರಾದ, ದಲಿತರ ಭಿನ್ನ ಮಜಲುಗಳನ್ನು ಸಾಹಿತ್ಯದಲ್ಲಿ ಹಿಡಿದಿಟ್ಟ ದೇವನೂರರಿಂದ ಅಪೇಕ್ಷಿಸಬಹುದಾದದ್ದು ಇಷ್ಟನ್ನೇ ಹೊರತು ಬೇರೇನನ್ನೂ ಅಲ್ಲ.

ದೇವನೂರರೊಬ್ಬರಲ್ಲೇ ಅಲ್ಲ. ಇಂದು ಪ್ರಶಸ್ತಿ ಹಿಂದಿರುಗಿಸಿರುವ ಬಹುತೇಕರಲ್ಲಿ ಈ ಅಂಶ ಗೌಣವಾಗಿದೆ. ಇದನ್ನು ನೋಡಿದರೆ ದಲಿತರ ಕಗ್ಗೊಲೆಯನ್ನು ಸಾಮಾನ್ಯವೆಂಬಂತೆ ‘ಅದು ಇದ್ದದ್ದೇ ಬಿಡು’ ಎಂದು ನೋಡುವ ದೃಷ್ಟಿಕೋನವೇನಾದರೂ ಇಂದಿಗೂ ಬೀಡು ಬಿಟ್ಟಿದೆಯೇನೋ ಎಂಬ ಅನುಮಾನ ಕಾಡಲು ಶುರುವಾಗುತ್ತದೆ.

ಈ ಅಂಶವನ್ನು ಮುಂದಿಟ್ಟು ಸಾಹಿತ್ಯ ಲೋಕದ ದಿಗ್ಗಜರನ್ನು ಸಂಶಯಿಸುವ ಧ್ಯೇಯ ಖಂಡಿತಾ ಇಲ್ಲಿಲ್ಲ. ಆದರೆ ಪರಿಗಣಿಸಿದ್ದರೆ ಈ ದೇಶದಲ್ಲಿ ಹುಳುಗಳ ರೀತಿಯಲ್ಲಿ ಸಾಯುತ್ತಿರುವ ದಲಿತರ ಬದುಕಿಗೆ ಒಂದಿಷ್ಟು ಧೈರ್ಯದ ಕೆಚ್ಚನ್ನಾದರೂ ನೀಡಬಹುದಿತ್ತೇನೊ (ಇದು ದೇಶದಲ್ಲಿ ಸಹಿಷ್ಣುತೆ ಇದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕೆಲವರಂತೆ ಈ ಸಾಹಿತಿಗಳೂ ಆ ಘಟನೆಗೆ ಪ್ರತಿಕ್ರಿಯಿಸಬೇಕಿತ್ತು, ಈ ಘಟನೆಗೆ ಪ್ರತಿಕ್ರಿಯಿಸಬೇಕಿತ್ತು ಎನ್ನುವ ಧೋರಣೆ ಖಂಡಿತಾ ಅಲ್ಲ).

ಈ ಆಶಯವನ್ನು ಯಾವ ರಾಜಕಾರಣಿಗಳಿಂದಲೂ ಅಪೇಕ್ಷಿಸಲು ಸಾಧ್ಯವಿಲ್ಲ, ಸಾಹಿತಿಗಳಿಂದ ಮಾತ್ರ ಅಪೇಕ್ಷಿಸಲು ಸಾಧ್ಯ. ಏಕೆಂದರೆ ರಾಜಕಾರಣಿಗಳು ಇಂತಹ ಅಸಹಿಷ್ಣುತೆ ಬಗೆಗಿನ ತಮ್ಮ ನಿಲುವನ್ನು ಈಗಾಗಲೇ ಹರಕುಬಾಯಿಯಲ್ಲಿ ಹರಿಯಬಿಟ್ಟಿದ್ದಾರೆ. ಕೆಲವರಿಗೆ ವಿದೇಶಿ ಬಂಡವಾಳ ಹೂಡಿಕೆಗೆ ಇದು ಹಿನ್ನಡೆಯಾಗಿ ಕಂಡರೆ, ಇನ್ನು ಕೆಲವರಿಗೆ ಇದು ಸೈದ್ಧಾಂತಿಕ ಅಸಹಿಷ್ಣುತೆ. ಇಂತಹವರ ಬಳಿ ದಲಿತರ ನೈಜ ಕೊಲೆಗಳ ಬಗ್ಗೆ ಹೇಳಿದರೆ ಏನೂ ಪ್ರಯೋಜನ ಆಗದು.

ಸಮಾಜದ ಮುಖವಾಣಿಯಂತಿರುವ ಸಮಾಜಮುಖಿ ಸಾಹಿತಿಗಳಾದರೂ ಇತ್ತ ಗಮನ ಹರಿಸಿದರೆ ಅಸಹಿಷ್ಣುತೆಯ ಇನ್ನೊಂದು ಪದರು ಬಿಚ್ಚಿಕೊಳ್ಳಲು ಪ್ರಾರಂಭಿಸುತ್ತದೆ. ಈ ಹಿನ್ನೆಲೆಯಲ್ಲೇ ಹೇಳಿದ್ದು, ದೇವನೂರರೆಂಬ ಹೂಬಾಣ ದಲಿತರ ನಿತ್ಯ ಕೊಲೆಯ ವಿರುದ್ಧವಾಗಿಯಾದರೂ ಕೊಂಚ ಹರಿತವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT