ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಅಮಲಿನ ಅಪಾಯ

Last Updated 18 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಧಾರ್ಮಿಕ ಸೌಹಾರ್ದದ ನೆಲದಲ್ಲಿ ಕೋಮು ಧ್ರುವೀಕರಣ ತಲುಪಿರುವ ಅಪಾಯಕಾರಿ ಹಂತಕ್ಕೆ, ಆಮಂತ್ರಣ ಪತ್ರಿಕೆಯ ಗಲಾಟೆ ಜ್ವಲಂತ ನಿದರ್ಶನ.

ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ಈಗಿನ ಕರ್ನಾಟಕ ಕರಾವಳಿಯ ತುಳುನಾಡನ್ನು ಎರಡು ರಾಜ್ಯಗಳಾಗಿ ವಿಂಗಡಿಸಲಾಗಿತ್ತು. ದಕ್ಷಿಣ ಭಾಗದಲ್ಲಿ ಮಂಗಳೂರು ರಾಜ್ಯ ಇದ್ದರೆ, ಉತ್ತರ ಭಾಗದಲ್ಲಿ ಬಾರ್ಕೂರು ರಾಜ್ಯವಿತ್ತು. ಆಡಳಿತವನ್ನು ನೋಡಿಕೊಳ್ಳುವುದಕ್ಕೆ ಪ್ರತಿ ರಾಜ್ಯಕ್ಕೆ ಒಬ್ಬ ರಾಜ್ಯಪಾಲನನ್ನು ನೇಮಕ ಮಾಡಲಾಗುತ್ತಿತ್ತು. ಆತನನ್ನು ಒಡೆಯ ಎಂದು ಕರೆಯುತ್ತಿದ್ದರು.

ಅದು ವಿಜಯನಗರದ ಅರಸ ದೇವರಸನ ಆಳ್ವಿಕೆಯ ಕಾಲ. ಮಂಗಳೂರು ರಾಜ್ಯದ ಮಂಗಳೂರಿನ ಕೊಡಿಯಾಲಬೈಲು ಎಂಬಲ್ಲಿ 1419ನೇ ಇಸವಿಯಲ್ಲಿ ಘಟನೆಯೊಂದು ನಡೆಯುತ್ತದೆ. ಮಂಗಳೂರಿನ ಆಗಿನ ರಾಜ್ಯಪಾಲ ತಿಮ್ಮಣ್ಣ ಒಡೆಯ ಎಂಬಾತ ಆಗ ಮಂಗಳೂರಿನಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತಿದ್ದ ನಖರ ಹಂಜಮಾನ ಎಂಬ ಮುಸ್ಲಿಂ ಸಂಸ್ಥೆಯ ಮೇಲೆ ಅದ್ಯಾವುದೋ ಕಾರಣಕ್ಕೆ ಸೇನಾ ದಾಳಿ ನಡೆಸುತ್ತಾನೆ. ಅದರ ವ್ಯಾಪ್ತಿಯಲ್ಲಿದ್ದ ಕೆಲವು ಗ್ರಾಮಗಳನ್ನು ನಾಶಪಡಿಸುತ್ತಾನೆ. 5 ಮಸೀದಿಗಳನ್ನು ಸಂಪೂರ್ಣ ಧ್ವಂಸಗೊಳಿಸುತ್ತಾನೆ.

ಇದು ವಿಜಯನಗರದ ರಾಜ ದೇವರಾಯನ ಗಮನಕ್ಕೆ ಬರುತ್ತದೆ. ಸುದ್ದಿ ಸಿಕ್ಕ ತಕ್ಷಣ ಆತ ದಾಳಿ ನಿಲ್ಲಿಸುವಂತೆ ರಾಜ್ಯಪಾಲನಿಗೆ ಆದೇಶಿಸುತ್ತಾನೆ ಮಾತ್ರವಲ್ಲ, ಹಂಜಮಾನದವರಿಗೆ ಸೂಕ್ತ ಪರಿಹಾರ ಕೊಟ್ಟು ಅವರ ಒಕ್ಕಲುತನವನ್ನು ಮರಳಿಸಬೇಕೆಂದೂ ಆಜ್ಞಾಪಿಸುತ್ತಾನೆ. ಅಲ್ಲದೆ, ಘಟನೆಯ ತನಿಖೆಗಾಗಿ ಚೌಟರು, ಬಂಗರು, ಅಜಲರು ಮೊದಲಾದ ಸ್ಥಳೀಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸುತ್ತಾನೆ. ಆ ಸಮಿತಿ ತನಿಖೆ ನಡೆಸಿ ರಾಜ್ಯಪಾಲ ಅಪರಾಧ ಮಾಡಿದ್ದಾನೆ ಎಂದು ತೀರ್ಮಾನಿಸುತ್ತದೆ.

ಕೂಡಲೇ ತಿಮ್ಮಣ್ಣ ಒಡೆಯನಿಗೆ ಮಸೀದಿಗಳ ದುರಸ್ತಿ ಮತ್ತು ಹಾನಿಗೊಳಗಾದ ಹಳ್ಳಿಗಳ ಪುನರುಜ್ಜೀವನಕ್ಕೆ ಫಲವತ್ತಾದ ಭೂಮಿಯನ್ನು ದಾನ ನೀಡಬೇಕೆಂದು ರಾಜ ಆದೇಶಿಸುತ್ತಾನೆ. ತಿಮ್ಮಣ್ಣ ಒಡೆಯ ಮರುಮಾತಾಡದೆ ರಾಜಾಜ್ಞೆಯನ್ನು ಪರಿಪಾಲಿಸುತ್ತಾನೆ. ಆತ ಇದೇ ರೀತಿ ಮತ್ತೊಮ್ಮೆ ದಾಳಿ ನಡೆಸಿದರೆ ಆತನಿಗೆ ‘ಕಾಶಿಯಲ್ಲಿ ಸಾವಿರ ಗೋವುಗಳನ್ನು ಕೊಂದ ಪಾಪ ಅಂಟಿಕೊಳ್ಳುತ್ತದೆ’ ಎಂಬ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ಶಿಲಾಶಾಸನದಲ್ಲಿ ಉಲ್ಲೇಖವಾಗಿದೆ (ಬಾರ್ಕೂರು ಉದಯ ಅವರ ‘ಇತಿಹಾಸದ ಶೋಧ ಗತದ ಹುಡುಕಾಟ’ ಕೃತಿ).
ಇನ್ನೊಂದು ಘಟನೆ ನಡೆಯುವುದು ಬಾರ್ಕೂರು ರಾಜ್ಯದ ಕೋಟೇಶ್ವರದಲ್ಲಿ.

1549-51ರ ಸುಮಾರಿಗೆ ಸದಾಶಿವರಾಯನ ಆಡಳಿತಾವಧಿಯಲ್ಲಿ. ಆಗ ಏಕದಳ್ ಖಾನ್ ಒಡೆಯ ಎಂಬ ಮುಸ್ಲಿಂ ವ್ಯಕ್ತಿ ಬಾರ್ಕೂರು ರಾಜ್ಯದ ರಾಜ್ಯಪಾಲನಾಗಿದ್ದ. ಒಮ್ಮೆ ಎಂದಿನಂತೆ ಕೋಟೇಶ್ವರದ ಕೋಟಿಲಿಂಗೇಶ್ವರ ಮಂದಿರದ ವಾರ್ಷಿಕ ಕುಡಿ ಉತ್ಸವ ನಡೆಯುತ್ತಾ ಇದ್ದಾಗ, ಯಾವುದೋ ಕಾರಣಕ್ಕಾಗಿ ಬ್ರಾಹ್ಮಣರು ಮತ್ತು ಶೂದ್ರರ ನಡುವೆ ತೀವ್ರ ಸ್ವರೂಪದ ಸಂಘರ್ಷ ಏರ್ಪಡುತ್ತದೆ. ಸಂಘರ್ಷ ಯಾವ ಸ್ವರೂಪವನ್ನು ಪಡೆದುಕೊಳ್ಳುತ್ತದೆ ಎಂದರೆ ಹಲವು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಗೋವುಗಳ ಹತ್ಯೆಯೂ ನಡೆಯುತ್ತದೆ.

ಅಪವಿತ್ರಗೊಂಡ ಹಿನ್ನೆಲೆಯಲ್ಲಿ ದೇವಾಲಯವನ್ನು ಮುಚ್ಚಲಾಗುತ್ತದೆ. ಹೀಗೆ ಸುಮಾರು 6 ತಿಂಗಳ ಕಾಲ ಮುಚ್ಚಿದ್ದ ಮಂದಿರವನ್ನು ಮತ್ತೆ ತೆರೆಸಿ ಯಥಾಪ್ರಕಾರ ಪೂಜೆ ಪುನಸ್ಕಾರ ಪುನರಾರಂಭವಾಗುವಂತೆ ಮಾಡಿದವನು ಏಕದಳ್‌ ಖಾನ್ ಒಡೆಯ. ಅವನು ಸರ್ಕಾರದ ವತಿಯಿಂದ ದೇವಳವನ್ನು ಶುದ್ಧೀಕರಿಸುತ್ತಾನೆ ಮಾತ್ರವಲ್ಲ, ಮಂದಿರಕ್ಕೆ ಭೂಮಿಯನ್ನೂ ದಾನವಾಗಿ ನೀಡುತ್ತಾನೆ.

ಇದು ತುಳುನಾಡಿನ ಮೂಲ ಪರಂಪರೆ. ಹಲವು ಶತಮಾನಗಳ ಹಿಂದಿನಿಂದಲೂ ಇಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಜನ ಸೌಹಾರ್ದದಿಂದ ಬಾಳುತ್ತಿದ್ದರು. ತುಳುನಾಡನ್ನು ಮುಖ್ಯವಾಗಿ ಆಳಿದ ರಾಜವಂಶಗಳಾದ ಆಳುಪರು, ಹೊಯ್ಸಳರು ಮತ್ತು ವಿಜಯನಗರದವರ ಆಡಳಿತದಲ್ಲಿ ರಾಜಧರ್ಮವನ್ನು ಚಾಚೂ ತಪ್ಪದೆ ಪರಿಪಾಲಿಸಲಾಗುತ್ತಿತ್ತು. ಸರ್ವಧರ್ಮೀಯರನ್ನೂ ಗೌರವದಿಂದ ಕಾಣಲಾಗುತ್ತಿತ್ತು. ತುಳುನಾಡಿನ ಪ್ರಭುತ್ವಗಳು ಮತ್ತು ಅವುಗಳ ಸ್ಥಳೀಯ ಪ್ರತಿನಿಧಿಗಳು ಕೋಮು ಸಾಮರಸ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು ಮಾತ್ರವಲ್ಲ, ಸೌಹಾರ್ದದ ಬದುಕನ್ನು ಖಾತರಿಪಡಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುತ್ತಿದ್ದರು. 

ಕೋಮು ಸೌಹಾರ್ದ ಮತ್ತು ರಾಜಧರ್ಮ ಪರಿಪಾಲನೆಯ ಇಂಥ ಮಹೋನ್ನತ ಇತಿಹಾಸ ಹೊಂದಿರುವ ಈ ತುಳುನಾಡಿನ ಪುತ್ತೂರು ಎಂಬಲ್ಲಿ, ಅದೂ ಪ್ರಜಾಪ್ರಭುತ್ವ ಯುಗದಲ್ಲಿ, ಈಗ ಬಹು ದೊಡ್ಡದೊಂದು ಹೋರಾಟ ನಡೆಯುತ್ತಿದೆ. ಆ ಹೋರಾಟ ನಡೆಯುತ್ತಿರುವುದು ಬೇಸಿಗೆಯ ದಿನಗಳಲ್ಲಿ ಜನ ಅನುಭವಿಸುತ್ತಿರುವ ನೀರಿನ ಬವಣೆ ನೀಗಿಸುವುದನ್ನೋ, ಹದಗೆಟ್ಟಿರುವ ರಸ್ತೆಗಳ ಸುಧಾರಣೆಯನ್ನೋ ಅಥವಾ ಸರ್ವಜನ ಹಿತಾಸಕ್ತಿಯ ಇನ್ಯಾವುದೋ ವಿಷಯವನ್ನು ಆಗ್ರಹಿಸಿಯಲ್ಲ.

ಬದಲಾಗಿ, ಸರ್ಕಾರದ ಪ್ರತಿನಿಧಿಯಾಗಿರುವ (ಅರ್ಥಾತ್ ನಮ್ಮೆಲ್ಲರ ಪ್ರತಿನಿಧಿಯಾಗಿರುವ) ಜಿಲ್ಲಾಧಿಕಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ ಎನ್ನುವ ಏಕೈಕ ಕಾರಣಕ್ಕೆ, ಮುಜರಾಯಿ ಇಲಾಖೆಗೆ ಸೇರಿದ ಹಿಂದೂ ದೇವಸ್ಥಾನವೊಂದರ ಜಾತ್ರೆಯ ಅಮಂತ್ರಣ ಪತ್ರಿಕೆಯಲ್ಲಿ ಅವರ ಹೆಸರು ಹಾಕಕೂಡದು ಎಂಬುದಕ್ಕಾಗಿ! ಆಲಿಭೂತ, ಬಬ್ಬರ್ಯ ಮೊದಲಾದ ಮುಸ್ಲಿಂ ದೈವಗಳನ್ನು ಇಂದಿಗೂ ಹಿಂದೂಗಳು ಆರಾಧಿಸುವ ನೆಲವಿದು. ಹಿಂದೂಗಳ ಪವಿತ್ರ ಆರಾಧನಾ ಕೇಂದ್ರವಾಗಿರುವ, ಬಪ್ಪ ಬ್ಯಾರಿ ನಿರ್ಮಿಸಿದ ಬಪ್ಪನಾಡು ದೇವಸ್ಥಾನ ಇರುವ ನಾಡು ಇದು.

ಇಂತಹ ಧಾರ್ಮಿಕ ಸೌಹಾರ್ದದ ವಿಶಿಷ್ಟ ನೆಲದಲ್ಲಿ ಕೋಮು ಧ್ರುವೀಕರಣ ಈ ಭಾಗದಲ್ಲಿ ಎಂತಹ ಅಪಾಯಕಾರಿ ಹಂತವನ್ನು ತಲುಪಿದೆ ಮತ್ತು ಕೋಮು ಅಮಲನ್ನು ತಲೆಗೇರಿಸಿಕೊಂಡ ಮಂದಿ ಹೇಗೆ ದೇಶದ ಸಂವಿಧಾನವನ್ನು ಅವಮಾನಿಸುವ ಮಟ್ಟವನ್ನು ತಲುಪುತ್ತಿದ್ದಾರೆ ಎನ್ನುವುದಕ್ಕೆ ಈ ಆಮಂತ್ರಣ ಪತ್ರಿಕೆಯ ಗಲಾಟೆ ಒಂದು ಜ್ವಲಂತ ನಿದರ್ಶನ. 

ಇವತ್ತು ಪುತ್ತೂರು ಮಹಾಲಿಂಗೇಶ್ವರ ದೇವಳದ ಜಾತ್ರೆಯ ಆಮಂತ್ರಣ ಪತ್ರಿಕೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಜಿಲ್ಲಾಧಿಕಾರಿಯವರ ಹೆಸರನ್ನು ಮುದ್ರಿಸಿರುವುದಕ್ಕೆ ಆಕಾಶ ಭೂಮಿ ಒಂದು ಮಾಡುತ್ತಿರುವ ತಥಾಕಥಿತ ಸಂಸ್ಕೃತಿ ರಕ್ಷಕರು ನಮ್ಮ ನಾಡಿನ ನೈಜ ಪರಂಪರೆಯನ್ನು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಅವರಿಗೆ ಬೇಗನೇ ಜ್ಞಾನೋದಯವಾಗಲಿ ಎಂದು ಆಶಿಸೋಣ. ಸಬ್ ಕೋ ಸನ್ಮತಿ ದೇ ಭಗವಾನ್ ಎಂದು ಪ್ರಾರ್ಥಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT