ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಲೋ ಉಡುಪಿ: ಭರವಸೆ, ಆತಂಕ...

ಸಂಚಲನ ಸೃಷ್ಟಿಸಿರುವ ಈ ಜಾಥಾ ಕರ್ನಾಟಕದ ಮಟ್ಟಿಗೆ ಹೊಸ ಬೆಳವಣಿಗೆಯೇ ಸರಿ
Last Updated 4 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ತರುಣರ ಪಡೆಯೊಂದು ಎದ್ದು ಕುಳಿತಿದೆ. ಗುಜರಾತಿನ ಊನಾ ಹೋರಾಟದಿಂದ ಪ್ರೇರೇಪಿತಗೊಂಡು ‘ಚಲೋ ಉಡುಪಿ’ ಹೋರಾಟವನ್ನು ಕೈಗೆತ್ತಿಕೊಂಡಿದೆ.ತನ್ನ ಎಂದಿನ ಹೋರಾಟಗಳಿಗಿಂತ ಭಿನ್ನವಾಗಿ ಹೊಸ ಹಾದಿಯ ಹುಡುಕಾಟದಲ್ಲಿ ಮುನ್ನುಗ್ಗುತ್ತಿದೆ. 

ಕಳೆದ ಕೆಲವು ತಿಂಗಳ ಹಿಂದೆ ನಡೆದ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ, ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲಿನ ದೇಶದ್ರೋಹದ ಆರೋಪ, ಮದ್ರಾಸ್‌ನ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್‌ ಮೇಲೆ ನಿಷೇಧ, ಹೈದರಾಬಾದ್ ಯೂನಿವರ್ಸಿಟಿಯ ದಲಿತ ಯುವಕರ ಅಮಾನತು ಇವೆಲ್ಲ ಪ್ರಗತಿಪರ ದಲಿತ ಯುವಕರ ನಿದ್ದೆಯನ್ನು ಕೆಡಿಸಿದ್ದವು. ಇದರೊಂದಿಗೆ ಇಡೀ ವ್ಯವಸ್ಥೆಯ ಲೋಪದೋಷವನ್ನು ಎತ್ತಿ ತೋರಿಸಿದ್ದವು.  ಬಹುರೂಪಿ ಭಾರತವನ್ನು ಏಕರೂಪಿಗೊಳಿಸುವವರ ಸಂಚನ್ನೂ ಬಯಲು ಮಾಡಿದ್ದವು.

ಇದು ಇಡೀ ದೇಶದ ದಲಿತ ಮತ್ತು ಕೆಲವು ದಮನಿತ ಯುವಕರ ಒಳಗೆ ಏನಾದರೂ ಮಾಡಲೇಬೇಕೆನ್ನುವ ತುಡಿತವನ್ನು ತಂದಿತು. ಇವರ ಕಿಚ್ಚಿಗೆ ತುಪ್ಪ ಸುರಿದಂತೆ ದೇಶದುದ್ದಕ್ಕೂ ದಲಿತರು, ಅಲ್ಪಸಂಖ್ಯಾತರ ಮೇಲೆ ಗೋಮಾಂಸದ ವಿಚಾರವಾಗಿ ಹಲ್ಲೆಗಳಾದವು. ಈ ಘಟನೆಗಳು ನೊಂದವರು ಒಂದಾಗಲು ಅಪ್ರತ್ಯಕ್ಷವಾಗಿ ಪ್ರೇರಣೆ ಒದಗಿಸಿದವು. ಇದಕ್ಕೆ ಮೊದಲ ಪ್ರತಿಕ್ರಿಯೆಯೆಂಬಂತೆ ಊನಾದಲ್ಲಿ ದಲಿತರು ಬಂಡೆದ್ದರು. ‘ಸತ್ತ ದನವನ್ನು ವಿಲೇವಾರಿ ಮಾಡುವುದಿಲ್ಲ’ ಎನ್ನುವ ಮೂಲಕ ಅಸಹಕಾರ ಚಳವಳಿಯನ್ನು ಕೈಗೊಂಡರು.

ಕೆಲವೇ ದಶಕಗಳ ಹಿಂದೆ ದಲಿತ ಸಂಘರ್ಷ ಸಮಿತಿ ‘ಕೊಟ್ಟಿದ್ದು ಸಾಕು ಹೆಂಡ ಕೋಳಿ, ದಲಿತರು ನಿಂತಿದ್ದಾರೆ ಭೂಮಿ ಕೇಳಿ’ ಎಂದು ಹೋರಾಟ ರೂಪಿಸಿ ಹತ್ತಾರು ಕಡೆ ಯಶಸ್ಸನ್ನೂ ಸಾಧಿಸಿತ್ತು. ಇದಕ್ಕೆ ಎಡಪಂಥೀಯರು, ಪ್ರಗತಿಪರರು, ದಲಿತಪರ ಕಾಳಜಿ ಉಳ್ಳವರೆಲ್ಲರ ಹಿತಾಸಕ್ತಿ ಹೋರಾಟಕ್ಕೊಂದು ತೀವ್ರತೆಯನ್ನು ತಂದಿತ್ತು. 80ರ ದಶಕದಲ್ಲಿ ಕಾರಂಚೇಡು, ಬೆಲ್ಚಿ, ಪಿಪ್ರಾ, ಕಿಲ್ವನ್ವೇಣಿ ಮುಂತಾದೆಡೆ ಭಾರತದ ಉದ್ದಕ್ಕೂ ನಡೆದ ಕೊಲೆ ಸುಲಿಗೆಗಳಿಗೆ ದನಿಯಾಗಿ ಪ್ರತಿಭಟನೆಯ ಕಾವನ್ನು ಹೆಚ್ಚಿಸಿತ್ತು.

ಅಂದು ಸಮಿತಿಯ ಸದಸ್ಯರು ಜನರ ಬಳಿ ನಿಲ್ಲುತ್ತಿದ್ದ ಪರಿ ಇವತ್ತಿಗೂ ಆದರ್ಶಪ್ರಾಯವಾಗೇ ಇದೆ. ಇದು ಮರುಕಳಿಸಿದೆಯೇನೋ ಎಂಬಂತೆ ಮತ್ತೆ ಇಂತಹ ಎಲ್ಲ ಶಕ್ತಿಗಳು ಒಗ್ಗೂಡುವುದರ ಮೂಲಕ ‘ಚಲೋ ಉಡುಪಿ’ ಸಮಾವೇಶಕ್ಕೊಂದು ಶಕ್ತಿ ತುಂಬಲು ಮುಂದಾಗಿವೆ. ಇದು ‘ಅಂಬೇಡ್ಕರ್’ ಅವರನ್ನು ನೆಪ ಮಾತ್ರಕ್ಕೆ ಜಪಿಸುತ್ತಿರುವವರಿಗೆ ತಿರುಗೇಟು ನೀಡಿದಂತೆ ಭಾಸವಾಗುತ್ತಿದೆ.

ಗುಜರಾತ್‌ನ ದಲಿತರು ಊನಾದಲ್ಲಿ ಚಳವಳಿಯನ್ನು ಪ್ರಾರಂಭಿಸಿದ್ದಕ್ಕೆ ಒಂದು ಸಾಮಾಜಿಕ ಹಿನ್ನೆಲೆಯಿದೆ. ಹಾಗೆಯೇ ಕರ್ನಾಟಕದಲ್ಲಿ ಉಡುಪಿ ಕೇಂದ್ರೀಕೃತ ಹೋರಾಟ ರೂಪಿಸುತ್ತಿರುವುದಕ್ಕೂ ಒಂದು ಐತಿಹಾಸಿಕ ಮಹತ್ವವಿದೆ. ಉಡುಪಿ ಸುತ್ತ ನಡೆದ ದಲಿತ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಭಾರತದ ಇನ್ನೊಂದು ಮುಖವನ್ನು ಎತ್ತಿ ತೋರಿಸಿವೆ.

ಈ ಹೋರಾಟವು ಅಂಬೇಡ್ಕರ್‌ರ  125ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದು. ಜಾಗತೀಕರಣ, ಉದಾರೀಕರಣ, ಖಾಸಗೀಕರಣವೆಂಬ ತ್ರಿಕರಣಗಳಲ್ಲಿ ಕಳೆದುಹೋಗಿದ್ದ ದಲಿತ ಮಧ್ಯಮ ವರ್ಗ ಇದರ ವಿರುದ್ಧ ನಿಲ್ಲುವ ಬದಲು ಇದನ್ನೇ ಆರಾಧಿಸುತ್ತಾ ಸಾಗಿ ಬಂದಿದೆ. ಆದರೆ ಇಂದು ಇದೇ ತ್ರಿಕರಣಗಳು ಉಂಟುಮಾಡಿದ ಸಾಮಾಜಿಕ ದಮನವನ್ನು ದಲಿತ ಯುವ ಮನಸ್ಸುಗಳು ಅರ್ಥಮಾಡಿಕೊಂಡು ಹೋರಾಟಕ್ಕೆ ಸಜ್ಜಾಗಿವೆ.

ಇದರ ಜೊತೆಗೆ ದಲಿತ ಮಧ್ಯಮ ವರ್ಗದ ಹಾದಿಯಾಗಿ ದಮನಿತ ಮತ್ತು ಅಲ್ಪಸಂಖ್ಯಾತ ಮಧ್ಯಮ ವರ್ಗವೂ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯವನ್ನು ಈ ಬೆಳವಣಿಗೆ ತೋರಿಸುತ್ತಿದೆ.  ಈ ಹೋರಾಟವು ಹಲವು ಸಾಧ್ಯತೆಗಳನ್ನು ಇಂದಿನ ಕರ್ನಾಟಕದ ರಾಜಕೀಯ ನೆಲೆಯಲ್ಲಿ ಹುಟ್ಟುಹಾಕಿದೆ. ಈ ಸಾಧ್ಯತೆಗಳು ಮುಂದೆಯೂ ಪ್ರಬಲವಾಗಿ ನಿಲ್ಲಬೇಕು. ದಲಿತ ದಮನಿತ ಸಮುದಾಯಗಳು ನೀಲಿ ಬಾವುಟದಡಿ ಸೇರಿರುವುದು ಐತಿಹಾಸಿಕ ಮಹತ್ವವನ್ನೇ ಈ ಚಳವಳಿಗೆ ತಂದುಕೊಡುವ ಸಂದರ್ಭವಿದೆ.

ಸಾವಿರಾರು ಜನ ಸೇರುವ ನಿರೀಕ್ಷೆಯಿಂದ ಹೊರಟಿರುವ ಈ ಜಾಥಾ ಕರ್ನಾಟಕದ ಮಟ್ಟಿಗೆ ಒಂದು ಹೊಸ ಬೆಳವಣಿಗೆಯೇ ಸರಿ. ಇದು ದಲಿತರ ನಾಯಕತ್ವದಲ್ಲಿ ನಡೆಯುತ್ತಿದೆಯಾದರೂ ದಲಿತೇತರ ಯುವ ಮನಸ್ಸುಗಳ ಅಪಾರ ಕಾಳಜಿ ಇದರ ಸುತ್ತ ಸುತ್ತುವರಿದಿದೆ. ಈಗಾಗಲೇ ಜೆಎನ್‌ಯು ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್, ದಲಿತ್ ಸ್ಟೂಡೆಂಟ್ ಯೂನಿಯನ್, ಬಹುಜನ ವಿದ್ಯಾರ್ಥಿ ಒಕ್ಕೂಟ, ಸಾಮಾಜಿಕ ನ್ಯಾಯಕ್ಕಾಗಿ ಐಕ್ಯ ಒಕ್ಕೂಟ ಮುಂತಾದವು ವಿದ್ಯಾರ್ಥಿ ಯೂನಿಯನ್ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿವೆ.

ಈ ಸಮಾವೇಶವೂ ಇಂಥದ್ದೊಂದು ನಿರ್ಣಾಯಕ ಪಾತ್ರ ವಹಿಸಬೇಕು. ಇದು ಸಮಾವೇಶಕ್ಕಷ್ಟೇ ಸೀಮಿತವಾಗದೆ ಮುಂದೆ ಇದರ ಪರಿಧಿ ವಿಸ್ತರಿಸಬೇಕು. ಆಗ ದೇಶದಲ್ಲಿ ಬಹುದೊಡ್ಡ ರಾಜಕೀಯ ಏಕತೆಯನ್ನೂ ಸಾಮಾಜಿಕ ಸಾಮರಸ್ಯವನ್ನೂ ಪಡೆದುಕೊಳ್ಳುವ ಹಾದಿ ನಿಚ್ಚಳವಾಗುತ್ತದೆ. ಒಂದು ವೇಳೆ ಜಾಥಾಕ್ಕಷ್ಟೇ ಸೀಮಿತವಾದರೆ ಅದು ಮುಂದಿನ ಯಾವ ಬದಲಾವಣೆಗೂ ಕೊಡುಗೆ ನೀಡಲಾರದು. ಭೂಮಿ, ಅವಕಾಶ, ಅಧಿಕಾರ ಈ ಮೂರನ್ನೂ ದಲಿತ, ದಮನಿತ ಮತ್ತು ಅಲ್ಪಸಂಖ್ಯಾತರೆಡೆಗೆ ಕೊಂಡೊಯ್ಯುವ ದಿಟ್ಟ ನಿಲುವನ್ನು ಸಮಾವೇಶ ಕೈಗೊಂಡಿದ್ದೇ ಆದರೆ ರಾಜ್ಯದ ಇತಿಹಾಸದಲ್ಲಿ ಒಂದು ದೊಡ್ಡ ಹೆಗ್ಗುರುತನ್ನೇ ಉಳಿಸಬಲ್ಲ ಶಕ್ತಿ ಇದಕ್ಕೆ ಬಂದೊದಗುತ್ತದೆ.

ಪರ್ಯಾಯ ರಾಜಕಾರಣ ಕುರಿತಾದ ಬಹುದೊಡ್ಡ ಚರ್ಚೆ ಕರ್ನಾಟಕದಲ್ಲಿ ನಡೆಯುತ್ತಿದೆ. ಈ ಸಮಾವೇಶವೂ ಒಂದು ರೀತಿಯಲ್ಲಿ ಪರ್ಯಾಯ ರಾಜಕಾರಣ ಕುರಿತಾದ ಸಣ್ಣ ಸೂಕ್ಷ್ಮವನ್ನು ಹೊರಹಾಕುವ ನಿಟ್ಟಿನಲ್ಲಿ ಸಾಗುತ್ತಿದೆ. ಸಮಾವೇಶದ ನಂತರದ ಆತ್ಮವಿಮರ್ಶೆ ಮತ್ತು ವಿಮರ್ಶೆ ಆಧರಿಸಿದ ಉನ್ನತ ಏಕತೆ ರಾಜ್ಯದ ಒಳಗೆ ಒಂದು ಸ್ಪಷ್ಟ ಗುರಿಯ ಕಡೆ ಸಾಗಲು ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ದಲಿತರ ನೈಜ ಸಮಸ್ಯೆಗಳನ್ನು ಇಂತಹ ಸಮಾವೇಶಗಳು ದೂರ ತಳ್ಳುವ ಅಪಾಯಗಳೂ ಇರುತ್ತವೆ.

ಇದರ ಬಗ್ಗೆ ಸಂಘಟನಾಕಾರರು ಕಾಳಜಿ ವಹಿಸಬೇಕು. ಇಡೀ ಸಮಾವೇಶದಲ್ಲಿ ಆಹಾರದ ವಿಷಯವೇ ಮತ್ತೆ ಮತ್ತೆ ಪ್ರತಿಧ್ವನಿಗೊಂಡರೆ ದಲಿತರ ಹಸಿವು, ಅವಮಾನ, ಭೂಮಿ ಪ್ರಶ್ನೆಗಳು ಹಿನ್ನೆಲೆಗೆ ಸರಿದುಬಿಡುತ್ತವೆ. ಆಗ ಸಮಾವೇಶವು ಮತ್ತದೇ ಹಳೆಯ ಜಾಡಿಗೆ ಹೊರಳಿ ಯಾರದೋ ಕೈಗೊಂಬೆಯಾಗಿ ಕುಣಿಯಲು ಪ್ರಾರಂಭಿಸುತ್ತದೆ. ಇದರ ಬಗ್ಗೆ ಎಚ್ಚರ ಅತ್ಯಗತ್ಯ.

ಪ್ರಗತಿಪರರಲ್ಲಿ ಅಂಬೇಡ್ಕರ್‌ವಾದಿಗಳ ಬಗ್ಗೆ ಇರುವ ಒಂದು ರೀತಿಯ ಮಡಿವಂತಿಕೆ ಮತ್ತು ದಲಿತರ ಶೋಷಿತ ನೆಲೆಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಲ್ಲಿನ ಅಸ್ಪೃಶ್ಯತೆ ಈ ಸಮಾವೇಶದ ಮೂಲಕವಾದರೂ ದೂರ ಸರಿಯಲಿ. ಈ ಏಕತೆ ಯಾವುದೋ ರಾಜಕೀಯ ಪಕ್ಷದ ನೆಲೆಯ ದಾಳವಾಗಬಾರದು. ಇದರ ಬದಲು ಅನನ್ಯತೆ ಮತ್ತು ಸ್ವಾಭಿಮಾನದ ಬದುಕಿನ ಪ್ರಶ್ನೆಯನ್ನು ಮುಂಚೂಣಿಯಲ್ಲಿ ನಿಲ್ಲಿಸಬೇಕು ಹಾಗೂ ಈ ನಿಟ್ಟಿನಲ್ಲಿ ಯೋಚಿಸುವಂತಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT