ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಗಳ ಬಳಕೆ- ದುರ್ಬಳಕೆ- ಸದ್ಬಳಕೆ

Last Updated 8 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

‘ನಾನು ದಲಿತ, ದಲಿತ ನಾಯಕನಾಗಿ ಬೆಳೆಯುವುದನ್ನು ಸಹಿಸದ ಕೆಲವು ಶಕ್ತಿಗಳ ಪಿತೂರಿಗೆ ಬಲಿಯಾಗಿದ್ದೇನೆ’– ಇದು ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆನ್ನಲಾದ ಸಿ.ಡಿ. ಬಹಿರಂಗಗೊಂಡು ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾದಾಗ, ದೆಹಲಿಯ ಎಎಪಿ ಪಕ್ಷದ ಮುಖಂಡ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಜಿ ಸಚಿವ ಸಂದೀಪ್ ಕುಮಾರ್ ಅವರು ಹೇಳಿದ ಮಾತು.

ಯಡಿಯೂರಪ್ಪನವರ ವಿರುದ್ಧ ಸಮರ ಸಾರಿ ದೆಹಲಿಗೆ ಹೋದ ಕೆ.ಎಸ್.ಈಶ್ವರಪ್ಪನವರಿಗೆ ದೆಹಲಿಯ ಕಮಲ ನಾಯಕರು ‘ಯಡಿಯೂರಪ್ಪನವರ ಹಿಂದೆ ಬಲಿಷ್ಠವಾದ ಒಂದು ಸಮುದಾಯವಿದೆ (ಲಿಂಗಾಯತ). ನಿಮ್ಮ ಹಿಂದೆ ಯಾರಿದ್ದಾರೆ? ನಿಮ್ಮ ಸಮುದಾಯದ (ಕುರುಬ) ನಾಯಕತ್ವ ಸಿದ್ದರಾಮಯ್ಯನವರ ಕೈಯಲ್ಲಿದೆ. ನಿಮ್ಮ ಶಕ್ತಿ ಎಷ್ಟು?, ನಿಮ್ಮ ಬೆಂಬಲಕ್ಕೆ ನಿಲ್ಲುವ ವರ್ಗಗಳು ಯಾವುವು?’ ಎಂದು ಪ್ರಶ್ನಿಸಿದಾಗ ಈಶ್ವರಪ್ಪನವರಲ್ಲಿ ಯಾವುದೇ ಉತ್ತರವಿರಲಿಲ್ಲ. ನೇರವಾಗಿ ದೆಹಲಿಯಿಂದ ಬಂದ ಈಶ್ವರಪ್ಪ ‘ಹಿಂದ’ (ಹಿಂದುಳಿದ-ದಲಿತ) ನಾಯಕನಾಗಲು ರಾಯಣ್ಣ ಬ್ರಿಗೇಡ್ ಕಟ್ಟಿದರು.

ರಾಜ್ಯದಲ್ಲಿ ಪ್ರತಿವರ್ಷ ಮುಖಂಡರೊಬ್ಬರ ನೇತೃತ್ವದಲ್ಲಿ ಜಾತಿಯೊಂದಕ್ಕೆ ಸೇರಿದ ಬೃಹತ್ ಮಹಾಸಮ್ಮೇಳನ ನಡೆಸಲಾಗುತ್ತದೆ. ಆ ಸಮ್ಮೇಳನವನ್ನು ಗಮನಿಸಿದಾಗ ಒಂದು ಕ್ಷಣ ಅದು ಆ ಸಮಾಜದ ಸಮ್ಮೇಳನವೋ ಇಲ್ಲ ಕಾಂಗ್ರೆಸ್ ಪಕ್ಷದ ಸಮಾವೇಶವೋ ಎನಿಸುವಂತೆ ಸಮ್ಮೇಳನ ಪ್ರದೇಶದ ತುಂಬೆಲ್ಲಾ ದೆಹಲಿ ನಾಯಕರಿಂದ ಮೊದಲುಗೊಂಡು ರಾಜ್ಯ ಕಾಂಗ್ರೆಸ್‌ನ ಹಿರಿಯ-ಕಿರಿಯ ನಾಯಕರ ಬ್ಯಾನರ್‌ಗಳು, ಜೊತೆಗೆ ವೇದಿಕೆಯಲ್ಲಿ ಆ ಪಕ್ಷದ ನಾಯಕರೇ ಕಾಣಸಿಗುತ್ತಾರೆ.

ಕಾಂಗ್ರೆಸ್ ಪಕ್ಷಕ್ಕಾಗಿ ತನು-ಮನ-ಧನ ಎಲ್ಲವನ್ನೂ ಅರ್ಪಿಸಿ ದುಡಿಯುತ್ತಿರುವ ಆ ಮುಖಂಡರು ಒಂದು ಅರ್ಥದಲ್ಲಿ ಈ ಸಮ್ಮೇಳನಗಳ ಮೂಲಕ ತಮ್ಮ ಶಕ್ತಿಪ್ರದರ್ಶನ ಕೂಡ ಮಾಡುತ್ತಾರೆ. ಸಮ್ಮೇಳನದ ಪ್ರತಿ ಸಂದರ್ಭದಲ್ಲಿ ಎಲ್ಲಾ ಕಾಂಗ್ರೆಸ್ ನಾಯಕರು ಅವರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ ಮಾಡುವ ಘೋಷಣೆ ಮಾಡುತ್ತಾರೆ, ಹೋಗುತ್ತಾರೆ. ಮುಂದಿನ ವರ್ಷ ಮತ್ತೆ ಅದೇ ವೇದಿಕೆಯಲ್ಲಿ ಅದೇ ಘೋಷಣೆ. ನೆರೆದವರಿಂದ ಕೇಕೆ, ಚಪ್ಪಾಳೆ. ಕೊನೆಯದಾಗಿ ಭೋಜನ. ಸಮ್ಮೇಳನ ಮುಕ್ತಾಯ.

ಜಾತಿ ಸಮಾವೇಶಗಳೆಲ್ಲಾ ರಾಜಕಾರಣಿಗಳ ಕೃಪಾಪೋಷಿತವಾಗಿರುತ್ತವೆ. ಹೀಗಾಗಿ ಅಧಿಕಾರದಲ್ಲಿರುವ ಪಕ್ಷ ಯಾವುದೇ ಇರಬಹುದು, ಜಾತಿ ಸಮಾವೇಶಗಳಲ್ಲಿ ಬೇಡಿಕೆ ಮಾತ್ರ, ನಮ್ಮ ಸಮುದಾಯದ ಶಕ್ತಿ ಅಷ್ಟಿದೆ, ಇಷ್ಟಿದೆ, ಇಷ್ಟು ಮಂತ್ರಿ ಸ್ಥಾನಗಳನ್ನು ನೀಡಿ, ಇಷ್ಟು ನಿಗಮ-ಮಂಡಳಿಗಳನ್ನು ನೀಡಿ ಎಂದು ಒತ್ತಾಯಿಸುವುದೇ ಆಗಿರುತ್ತದೆ.

ಜಾತಿ ಸಮಾವೇಶಗಳು ಮೂಲಭೂತವಾಗಿ ಚಿಂತಿಸಬೇಕಿರುವುದು ಆ ಸಮುದಾಯಗಳ ಸಾಮಾಜಿಕ, ಆರ್ಥಿಕ  ಪ್ರಗತಿಯ ಬಗ್ಗೆ, ವಿದ್ಯಾರಂಗದಲ್ಲಿ ಅದು ಬೆಳೆದಿರುವ ಬಗ್ಗೆ, ಭವಿಷ್ಯದಲ್ಲಿ ಸಮುದಾಯದ ಒಟ್ಟಾರೆ ಸಾಮಾಜಿಕ ಬೆಳವಣಿಗೆ ಹೇಗಿರಬೇಕು ಎಂಬುದರ ಬಗ್ಗೆ. ಆದರೆ ಇವ್ಯಾವುವೂ ಅಲ್ಲಿ ಚರ್ಚೆಯಾಗುವುದಿಲ್ಲ. ಪಕ್ಷ ರಾಜಕೀಯ ಮತ್ತು ತಮ್ಮ ಸಂಘಟನೆಗಳ ಒಳರಾಜಕೀಯ ಇಷ್ಟೇ ಚರ್ಚಾ ವಸ್ತುಗಳಾಗಿರುತ್ತವೆ.

‘ದಲಿತರ ಕೈಗೆ ಬಂದೂಕು ಕೊಡಿ’ ಎಂದ ಕೆ.ಎಸ್‌.ಭಗವಾನ್‌ ಅವರಿಗೂ ಒಂದು ಜಾತಿಯಿದೆ, ವೀರಶೈವರನ್ನು ಕೋಮುವಾದಿಗಳೆಂದು ಜರೆದ ಚಂಪಾ ಅವರಿಗೂ ಒಂದು ಜಾತಿಯಿದೆ. ಈಶ್ವರಪ್ಪ, ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಇಲ್ಲಿ ಯಾರಿಗೆ ತಾನೇ ಜಾತಿ ಇಲ್ಲ? ಇಲ್ಲಿರುವ ಒಂದೊಂದು ಜಾತಿಯ ಜೊತೆಗೂ ಒಂದೊಂದು ಆಚಾರ-ವಿಚಾರ, ಆಹಾರ ಪದ್ಧತಿ, ಸಂಸ್ಕೃತಿ-ಸಂಪ್ರದಾಯಗಳಿವೆ.

ಇವುಗಳ ಬಗ್ಗೆ ಆಯಾ ಸಮುದಾಯದವರಿಗೆ ಅಭಿಮಾನವಿದೆ, ಇಂತಹ ಜಾತಿಗೆ ತಾವು ಸೇರಿದವರು ಎಂಬ ಹೆಮ್ಮೆ ಕೂಡ ಅವರಲ್ಲಿದೆ. ಭಾರತೀಯ ಎಂದೂ ತನ್ನ ಜಾತಿ ಪ್ರೇಮವನ್ನು ಮುಚ್ಚಿಡುವುದಿಲ್ಲ. ಪಿ.ವಿ.ಸಿಂಧು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಾಗ ಆಂಧ್ರ-ತೆಲಂಗಾಣದವರು ಹೆಚ್ಚಾಗಿ ಗೂಗಲ್‌ನಲ್ಲಿ ಹುಡುಕಿದ್ದು ಆಕೆ ಯಾವ ಜಾತಿಗೆ ಸೇರಿದವಳು ಎಂಬುದನ್ನು. ಇಂತಹ ವ್ಯವಸ್ಥೆಯಲ್ಲಿ ಜಾತಿಯನ್ನು ಬಿಟ್ಟು ನಾವು ಏನನ್ನೂ ಮಾಡಲು ಸಾಧ್ಯವಿಲ್ಲ.

ಜಾತಿ ಸಮ್ಮೇಳನ ನಡೆಸುವುದು ತಪ್ಪು ಎಂದು ಹೇಳಲಾಗದು. ನಾವೆಲ್ಲಾ  ಒಂದಲ್ಲ ಒಂದು ಜಾತಿಯೊಳಗೆ ಬಂಧಿಯಾಗಿರುವ ಜಾತಿ ಸಮ್ಮೇಳನ ಮಾಡುವುದು, ಜಾತಿಯಿಂದ ರಾಜಕೀಯ ಮಾಡುವುದು ಹೇಗೆ ತಾನೇ ತಪ್ಪಾಗುತ್ತದೆ? ಆದರೆ ಅಧಿಕಾರ ಸಿಕ್ಕ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಇಲ್ಲವೇ ಅದಕ್ಷತೆಯ ಕಾರಣ ಕೊಟ್ಟು ಅಧಿಕಾರ ಕಿತ್ತುಕೊಂಡಾಗ ತಕ್ಷಣ ಚಾಲನೆಗೆ ಬರುವ ಜಾತಿಯ ಅಸ್ತ್ರ ಹಾಗೂ ಅದರ ದೂರಗಾಮಿ ಪರಿಣಾಮ ಮಾತ್ರ ಅತ್ಯಂತ ಅಪಾಯಕಾರಿ.

ಗುಜರಾತಿನಲ್ಲಿ ರಾಜಕೀಯ, ಸಾಮಾಜಿಕ ಸೇರಿದಂತೆ ಯಾವುದೇ ಬಗೆಯ ಚಿಂತನೆಯಿಲ್ಲದ ಹಾರ್ದಿಕ್ ಪಟೇಲ್, ಪಟೇಲ್ ಸಮುದಾಯದ ನಾಯಕತ್ವ ವಹಿಸಿಕೊಂಡಿರುವುದು ಇರಬಹುದು, ಆಂಧ್ರದಲ್ಲಿ ಕಾಪು ಸಮುದಾಯವನ್ನು ಪ್ರಚೋದಿಸುತ್ತಿರುವ ಮುದ್ರಗಡ ಪದ್ಮನಾಭಂ ಆಗಿರಬಹುದು ಇವರೆಲ್ಲ ಜಾತಿ ದುರ್ಬಳಕೆಯಲ್ಲಿ ಅರಳಿದ ಹೊಸ ನಾಯಕತ್ವಗಳು. ಇಂತಹವರಿಂದ ಸಮುದಾಯಗಳಾಗಲಿ, ಜನಸಾಮಾನ್ಯರಾಗಲಿ ಪ್ರಚೋದನೆ ಹೊರತು ಬೇರೇನನ್ನು ತಾನೇ ನಿರೀಕ್ಷಿಸಲು ಸಾಧ್ಯ?

ಕೆ.ಎಸ್.ಭಗವಾನ್‌ ಅಂತಹವರನ್ನೇ ತೆಗೆದುಕೊಂಡರೆ ಅವರು ದಲಿತ ಸಮಾವೇಶಗಳಿಗೆ ಹೋಗುತ್ತಾರೆ. ಅಲ್ಲಿ ಪ್ರಸ್ತಾಪಿಸಲು ಬಹಳಷ್ಟು ವಿಷಯಗಳಿರುತ್ತವೆ. ಆದರೆ ಅವರು ಅಲ್ಲಿ ರಾಮನ ಹುಟ್ಟು, ಸೀತೆಯ ಪ್ರೇಮ ಪ್ರಕರಣ, ಭಗವದ್ಗೀತೆ ಸುಡಬೇಕು ಎಂಬ ಅಪ್ರಸುತ್ತ ವಿಷಯಗಳಿಂದ ವಿಷಯಾಂತರ ಮಾಡುತ್ತಾರೆ. ಅದೊಂದು ವಿವಾದವಾಗುತ್ತದೆ, ನೆರೆದವರಿಂದ ಒಂದಷ್ಟು ಕೇಕೆ, ಚಪ್ಪಾಳೆ ಸಿಗುತ್ತದೆ. ಇದರಿಂದ ದಲಿತರ ಸಮಸ್ಯೆಗಳು ಹಳಿ ತಪ್ಪಿ ಸಮಾಜದ ಇತರ ವರ್ಗಗಳ ನಂಬಿಕೆಗಳ ಮೇಲೆ ಅದೊಂದು ಗದಾಪ್ರಹಾರವಾಗಿ, ದಲಿತ, ದಲಿತೇತರರ ನಡುವೆ ಅಂತರವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ದಲಿತ ಸಮಾವೇಶಗಳು ನಡೆಯಬೇಕಾದದ್ದು ಪ್ರಸ್ತುತ ದಲಿತರು ಎದುರಿಸುತ್ತಿರುವ ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ, ಸಮಾನತೆ, ಸಾಮಾಜಿಕ ನ್ಯಾಯದ ಬಗ್ಗೆ, ಬ್ಯಾಕ್‌ಲಾಗ್ ಹುದ್ದೆ ಭರ್ತಿ, ಶಿಕ್ಷಣ, ಉದ್ಯೋಗ, ವ್ಯಾಪಾರ ಹೀಗೆ ವಿವಿಧೆಡೆ ದಲಿತರ ಪ್ರಾತಿನಿಧ್ಯವೇನು, ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ.  ಆದರೆ ಇವನ್ನು ಬಿಟ್ಟು ಬರೀ ಜಾತಿ ಪ್ರಚೋದನೆಗೆ ಹಲವರು ನಿಂತಿದ್ದಾರೆ.

ಸಮಾಜವೆಂದ ಮೇಲೆ ಹಲವು ಜಾತಿ-ಧರ್ಮದವರು ಒಟ್ಟಿಗೆ ವಾಸಿಸುತ್ತಾರೆ. ಇಲ್ಲಿ ಜಾತಿಗಳನ್ನು ಜೋಡಿಸುವವರು ಬೇಕಿದ್ದಾರೆ ಹೊರತು ಅವನ್ನು ಒಡೆಯುವವರಲ್ಲ. ಜಾತಿ ಮೀರಿದ ಮಾನವೀಯ ಮುಖಗಳು ನಮ್ಮಲ್ಲಿ ಅನೇಕವಿವೆ. ಹಾಗೇ ಮುಖವಾಡಗಳೂ ಇವೆ. ಮಾನವೀಯತೆ ಜಾತಿಗಳನ್ನು ಒಟ್ಟುಗೂಡಿಸುತ್ತದೆ. ಅದೇ ಮುಖವಾಡಗಳು ಜಾತಿಗಳ ಮಧ್ಯೆ ಅಂತರ ಹೆಚ್ಚಿಸುತ್ತವೆ. ಇದರ ಎಚ್ಚರ ಎಲ್ಲರಿಗೂ ಇರಬೇಕು. ಋಗ್ವೇದದ ಒಂದು ಮಂತ್ರ ಹೀಗೆ ಹೇಳುತ್ತದೆ:
‘ಅಜ್ಯೇಷ್ಠಾಸೋ ಅಕನಿಷ್ಠಾಸಃ ಏತೇ ಸಂ
ಭ್ರಾತರೋ ವಾವೃಧುಃ ಸೌಭಗಾಯ|’

(ಋಗ್ವೇದ 5.60.5)
ಅಂದರೆ, ಈ ಮಾನವರು ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರೂ ಅಲ್ಲ; ಪರಸ್ಪರ ಸಹೋದರರು. ಸೌಭಾಗ್ಯಕ್ಕಾಗಿ ಒಂದುಗೂಡಿ ಮುಂದುವರಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT