ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೋಕಿಯೊದಲ್ಲಿ ಪದಕಗಳ ಗುರಿ...

ಗೆದ್ದ ಎತ್ತಿನ ವೈಭವೀಕರಣಕ್ಕಿಂತ ಮುಂದಿನ ಸವಾಲಿನ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆಯಲ್ಲವೇ?
Last Updated 24 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಭಾರತಕ್ಕೆ 30ನೇ ಪದಕದ ಸಂಭ್ರಮ. ಇನ್ನು ಸರಿಯಾಗಿ ನಾಲ್ಕು ವರ್ಷಗಳ ನಂತರ ಅಂದರೆ 2020ರಲ್ಲಿ ಟೋಕಿಯೊದಲ್ಲಿ ಒಲಿಂಪಿಕ್ಸ್‌ಗೆ ತೆರೆಬೀಳುವ ಹೊತ್ತಿಗೆ ಇಂಥದೊಂದು  ತಲೆಬರಹವನ್ನು ನಮ್ಮ ಪತ್ರಿಕೆಗಳಲ್ಲಿ ಓದಲು ನಾನು ಉತ್ಸುಕನಾಗಿದ್ದೇನೆ. ನೀವು? ಆಸೆ ಅತಿಯಾಯಿತೆ? ಇರಲಿ. ಒಂಚೂರು ವಸ್ತುಸ್ಥಿತಿ ನೋಡೋಣ. 

ನಮ್ಮ ಅಲ್ಪತೃಪ್ತಿಗೆ ರಿಯೊದಲ್ಲಿ ಸರಿಯಾದ ಬೆಲೆಯನ್ನೇ ತೆತ್ತಿದ್ದೇವೆ ಎನ್ನದೇ ವಿಧಿಯಿಲ್ಲ. ಒಲಿಂಪಿಕ್ಸ್ ಮುಗಿದು ಎರಡು ದಿನಗಳ ನಂತರವೂ ನಮ್ಮ ದೇಶದ ಕ್ರೀಡಾ ಸಚಿವಾಲಯಕ್ಕೆ, ಕ್ರೀಡೆಯನ್ನೇ ತಮ್ಮ ಏಕಮೇವ ಧ್ಯೇಯವನ್ನಾಗಿಸಿಕೊಂಡಿರುವ ಕೋಟ್ಯಂತರ ರೂಪಾಯಿಗಳ ‘ವ್ಯವಹಾರ’ ಹೊಂದಿರುವ ಅನೇಕಾನೇಕ ಸಂಸ್ಥೆಗಳಿಗೆ  ಮುಜುಗರ ಎನ್ನುವುದು ಕಿಂಚಿತ್ತೂ ಆಗದಿರುವುದನ್ನು ನೋಡಿದರೆ, 2020ರಲ್ಲಿ ಟೋಕಿಯೊದಲ್ಲೂ ನಾವು ಇದೇ ಅವಮಾನವನ್ನು ಮತ್ತೆ ಅನುಭವಿಸಲಿದ್ದೇವೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ.

ಎಲ್ಲವೂ ಸರಿಯಾಗಿದ್ದರೆ, ಇಂತಹ ಅವಮಾನಕ್ಕೆ ಅನೇಕ ತಲೆಗಳು ಉರುಳಬೇಕಿತ್ತು. ಆದರೆ, ಅದಾವುದೂ ನಡೆಯುವುದಿಲ್ಲ ಎಂಬುದು ಸ್ಪಷ್ಟ. ಇಲ್ಲದಿದ್ದರೆ, ಮುಂದಿನ ಒಲಿಂಪಿಕ್ಸ್‌ನಲ್ಲಿ ನಾವು ಹೇಗೆ ಪದಕಗಳ ಬೇಟೆಯಾಡುತ್ತೇವೆ, ಎಷ್ಟು ಪದಕ ಪಡೆಯುತ್ತೇವೆ ಎಂಬ ಸ್ಪಷ್ಟ ಗುರಿ ಅನಾವರಣಗೊಳ್ಳಬೇಕಿತ್ತು. ಕ್ರೀಡಾ ಸಚಿವಾಲಯದಲ್ಲಿ ಎದೆಬಡಿತಗಳು ಹೆಚ್ಚಾಗಬೇಕಿತ್ತು. ಅದಾವುದೂ ಆಗುತ್ತಿರುವ ಸೂಚನೆಗಳೇ ಇಲ್ಲ.

ಇದರ ಬದಲಾಗಿ ಪದಕ ಗೆದ್ದ ಇಬ್ಬರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿ, ಸುಮಾರು ₹ 20 ಕೋಟಿಗಳಷ್ಟು ಹಣ ಅವರತ್ತ ಹರಿಸಲು ಹೊರಟಿದ್ದೇವೆ. ಅವರ ಸಾಧನೆ ಮೆಚ್ಚತಕ್ಕದ್ದೇ. ಆದರೆ ಗೆದ್ದ ಎತ್ತಿನ ವೈಭವೀಕರಣಕ್ಕಿಂತ ದೇಶದ ಮುಂದಿನ ಸವಾಲಿನ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆಯಲ್ಲವೆ?

ವಿದ್ಯಮಾನಗಳನ್ನು ಗಮನಿಸಿದರೆ, ಒಂದು ಮಾತು ಸ್ಪಷ್ಟವಿದೆ. ಸರ್ಕಾರ ಮತ್ತು ಅದರ ಅಂಗಸಂಸ್ಥೆಗಳಿಗೆ ಒಲಿಂಪಿಕ್ಸ್‌ನಲ್ಲಿ ಪದಕ ತರುವ ಇಚ್ಛಾಶಕ್ತಿ ಮತ್ತು ಸಾಮರ್ಥ್ಯ ಎರಡೂ ಇಲ್ಲ. ಒಂದಾದ ನಂತರ ಒಂದು ಒಲಿಂಪಿಕ್ಸ್‌ನಲ್ಲಿ ನಮ್ಮ ಸಾಮೂಹಿಕ ವೈಫಲ್ಯವನ್ನು ನೋಡಿಯೂ ಇದನ್ನು ಮನಗಾಣದಿದ್ದರೆ, ಮುಂದೆಯೂ ನಿರಾಶೆ ಕಟ್ಟಿಟ್ಟ ಬುತ್ತಿ.

ಕ್ರೀಡೆಯಲ್ಲಿನ ಹೊಲಸು ರಾಜಕೀಯ, ಲಂಚಗುಳಿತನ, ಅಧಿಕಾರಕ್ಕಾಗಿ ಬಡಿದಾಟ, ಸಂಬಂಧಿಕರ ಏಳ್ಗೆಗಾಗಿ ಹೊಡೆದಾಟ, ದೂರದೃಷ್ಟಿಯ ಕೊರತೆ, ಜಡ್ಡುಗಟ್ಟಿದ ನಾಯಕತ್ವ ಇವನ್ನೆಲ್ಲ ನೋಡಿಯೂ ಅವುಗಳ ಮೇಲೆ ಭರವಸೆ ಇಟ್ಟುಕೊಂಡರೆ, ನಮ್ಮನ್ನು ನಾವೇ ಮತ್ತೆ ಮತ್ತೆ ಮೂರ್ಖರನ್ನಾಗಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

ಟೋಕಿಯೊದಲ್ಲಿ ನಾವೇನಾದರೂ ವಿಶೇಷ ಸಾಧನೆ ಮಾಡಬೇಕೆಂತಿದ್ದರೆ, ಪರ್ಯಾಯಗಳತ್ತ ನೋಡಬೇಕು. ಹಾಗಾದರೆ ಏನು ಮಾಡಬಹುದು? ಸರ್ಕಾರದ ಹಸ್ತಕ್ಷೇಪ ಎಳ್ಳಷ್ಟೂ ಇಲ್ಲದ ಸಂಸ್ಥೆಯೊಂದನ್ನು ಖಾಸಗಿ ರಂಗದ ದಿಗ್ಗಜರೆಲ್ಲ ಸೇರಿ ಸೃಷ್ಟಿಸಬೇಕು. ಸೂಪರ್‍ 30ರ ಮಾದರಿ ಅಳವಡಿಸಿಕೊಳ್ಳಬಹುದು.

ಒಬ್ಬ ಖಾಸಗಿ ವ್ಯಕ್ತಿ 30 ಪ್ರತಿಭಾವಂತರನ್ನು ಆಯ್ದು ತರಬೇತುಗೊಳಿಸಿ ಅವರೆಲ್ಲ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ಯಶಸ್ವಿಯಾಗುವಂತೆ ನೋಡಿಕೊಳ್ಳುವುದು ಸಾಧ್ಯವಾಗುವುದಾದರೆ, ದೇಶದ ಖಾಸಗಿ ರಂಗದವರೆಲ್ಲ ಸೇರಿ ಭಾರತ ಒಲಿಂಪಿಕ್ಸ್‌ನಲ್ಲಿ 30 ಪದಕಗಳನ್ನು ಪಡೆಯುವಂತೆ ಮಾಡುವುದು ಅಸಾಧ್ಯವೆ? ಸ್ವಲ್ಪ ಆಶಾವಾದಿಯಾಗಿ ಯೋಚಿಸಿದರೆ, ಟೋಕಿಯೊದಲ್ಲಿ 30 ಪದಕ, 2024ರಲ್ಲಿ 60 ಪದಕ ಸಂಪಾದಿಸುವ ಗುರಿ ಇಟ್ಟು ಮುನ್ನಡೆಯಬೇಕು.

ಇಂತಹ ಕಾರ್ಯಕ್ರಮಕ್ಕೆ ರಾಷ್ಟ್ರದ ಪ್ರಧಾನಿಯ ಆಸರೆ ಸಿಕ್ಕರೆ, ಉಳಿದೆಲ್ಲ ಸರ್ಕಾರಿ ಸಂಸ್ಥೆಗಳು ಸಹಕರಿಸುವ ಸಾಧ್ಯತೆ ಇದೆ. ಇಂತಹ ಯೋಜನೆಯನ್ನು ಸರ್ಕಾರಿ ಸಂಸ್ಥೆಗಳು ವಿರೋಧಿಸುವುದು ಮಾತ್ರವಲ್ಲ, ಅದನ್ನು ವಿಫಲಗೊಳಿಸಲು ಸಕಲ ಪ್ರಯತ್ನಗಳನ್ನೂ ಮಾಡುತ್ತವೆ ಎಂಬುದು ಸರ್ವವಿಧಿತ. ಈ ಅರಿವು ಇರಬೇಕು ಜೊತೆಗೆ ಅದನ್ನು ನಿಭಾಯಿಸುವುದು ಸಾಧ್ಯವಾಗಬೇಕು. ಹಾಗೆಂದೇ ದೂರದೃಷ್ಟಿಯುಳ್ಳ, ಸಮರ್ಥ, ಕಸಬುದಾರ ನಾಯಕನೊಬ್ಬನನ್ನು ಈ ಕೆಲಸಕ್ಕೆ ಹುಡುಕಬೇಕು.

ಸರ್ಕಾರದೊಡನೆ ಸೂಕ್ತ ಒಪ್ಪಂದ ಮಾಡಿಕೊಂಡೇ ಖಾಸಗಿ ರಂಗ ಈ ಕೆಲಸಕ್ಕೆ ಕೈಹಾಕಬೇಕು. ಸರ್ಕಾರಿ ಕ್ರೀಡಾಂಗಣಗಳು, ಇತರ ಸೌಕರ್ಯಗಳ ಸೂಕ್ತ ಬಳಕೆಗೆ ಅವಕಾಶ ಇರಬೇಕು. ಇಂತಹ ಖಾಸಗಿ ತರಬೇತು ಸಂಸ್ಥೆ ಸ್ವಲ್ಪ ಶಕ್ತಿಶಾಲಿಯಾಗಿ ಇರಬೇಕಾಗುತ್ತದೆ.

ಗಣನೀಯ ಸಾಧನೆ ಮಾಡಿರದ ಸ್ಪರ್ಧಾಳುಗಳನ್ನು ಒಲಿಂಪಿಕ್ಸ್ ಸ್ಪರ್ಧೆಗೆ ಕಳುಹಿಸದಿರುವ ಅಧಿಕಾರ ಅದಕ್ಕೆ ಇರಬೇಕು. ಇಲ್ಲಿ ರಾಜಕೀಯ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಕೇವಲ ಪ್ರತಿಭೆ ಮತ್ತು ಸಾಮರ್ಥ್ಯ ಅಳತೆಗೋಲಾಗಬೇಕು. ಅಲ್ಪತೃಪ್ತಿಯ ಕರಾಳ ಕೋಟೆಯಿಂದ ಹೊರಗೆ ಬರಬೇಕು. ಇಲ್ಲಿನ ಸ್ಪರ್ಧಾಳು ತಾನು ಭಾಗವಹಿಸುವ ಪ್ರತಿಯೊಂದು ಸ್ಪರ್ಧೆಯಲ್ಲಿ, ತಾನು ಜಾಗತಿಕ ಮಟ್ಟದ ಹೋಲಿಕೆಯಲ್ಲಿ ಎಲ್ಲಿದ್ದೇನೆ ಎಂಬುದನ್ನು ಮನಗಂಡು ತಾನು ಸಾಧಿಸಬೇಕಾದದ್ದು ಎಷ್ಟಿದೆ ಎಂದು ಅರಿತು ಮುಂದೆ ಸಾಗುವಂತಾಗಬೇಕು. ಇಲ್ಲದಿದ್ದರೆ, ನಾವು ರಾಷ್ಟ್ರೀಯ ದಾಖಲೆಗಳನ್ನಷ್ಟೆ ಮಾಡಿಕೊಂಡು ಕೂತಿರಬೇಕಾಗುತ್ತದೆ.

ದೇಶಕ್ಕೆ ಒಲಿಂಪಿಕ್ಸ್ ಪದಕ ಬರಬೇಕೆಂದು ಹರಸುವ ಜನರು, ಧನಿಕರು ಇದಕ್ಕೆ ಮುಕ್ತವಾಗಿ ಕೊಡುಗೆ ಕೊಡಬೇಕು. ಪದಕ ಬರದಿದ್ದಕ್ಕೆ ಸರ್ಕಾರವನ್ನು, ಸ್ಪರ್ಧಿಗಳನ್ನು ಬಯ್ಯುವವರು ತಮ್ಮ ಕ್ರೀಡಾ ಮನೋಭಾವ, ಪದಕಪ್ರೀತಿಯನ್ನು ದೇಣಿಗೆಯ ಮೂಲಕ ಬಹಿರಂಗಪಡಿಸಲಿ ಬಿಡಿ. ಪದಕ ಗೆದ್ದವರಿಗೆ ಕೋಟಿಕೋಟಿ ಕೊಡುವಷ್ಟು ಉದ್ದ ಕೈ ಇರುವವರು ಈ ಯೋಜನೆಗೂ ಕೈ ಜೋಡಿಸಲಿ. ಪ್ರತಿ ರಾಜ್ಯ ಸರ್ಕಾರ ತನ್ನ ಕ್ರೀಡಾ ಬದ್ಧತೆಯನ್ನು ಉದಾರವಾಗಿ ತೋರಿಸಲಿ.

ಇತರ ದೇಶಗಳಲ್ಲಿ ಹೇಗೆ ಕ್ರೀಡೆಯನ್ನು ನಿಭಾಯಿಸುತ್ತಾರೆ, ಹೇಗೆ ಸಣ್ಣಸಣ್ಣ ದೇಶಗಳು ನಮಗಿಂತ ಹೆಚ್ಚಿನ ಸಾಧನೆ ಮಾಡುತ್ತವೆ ಎಂಬುದನ್ನು ಗಮನಿಸಿ, ಹೊಸ ವ್ಯವಸ್ಥೆಯನ್ನು ಜಾರಿಗೆ ತರುವುದು ಹೊಸ ಪ್ರಯೋಗದ ಮೊದಲ ಗುರಿಯಾಗಬಹುದು.

ಒಟ್ಟಿನಲ್ಲಿ ಒಲಿಂಪಿಕ್ಸ್ ಪದಕಪಟ್ಟಿಯಲ್ಲಿ ನಮ್ಮ ದೇಶ ಹೆಮ್ಮೆಯ ಸ್ಥಾನ ಪಡೆಯುವಂತಾಗಬೇಕು ಎಂಬುದೇ ಎಲ್ಲರ ಹರಕೆ. ಇಂದಿನಿಂದ ಮೂರನೇ ಒಲಿಂಪಿಕ್ಸ್‌ನಲ್ಲಿ ಪದಕ ಪಡೆಯಬಲ್ಲ ಪ್ರತಿಭೆಗಳನ್ನು ಎಳೆಯದರಲ್ಲೇ ಹುಡುಕಿ ತರಬೇತುಗೊಳಿಸಿ, 2028ರಲ್ಲಿ ಪದಕಗಳ ಶತಕ ಹೊಡೆಯುವ ಕನಸು ಕಂಡು ನನಸುಗೊಳಿಸಬೇಕು.ಅಂತರರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ನಿಯಮಿಸಿಕೊಳ್ಳುವ ಶಕ್ತಿ ಹೊಸ ಪರ್ಯಾಯ ವ್ಯವಸ್ಥೆಗೆ ಇರಬೇಕು.

2008ರಲ್ಲಿ ಶೂಟರ್‌ ಅಭಿನವ್‌ ಬಿಂದ್ರಾ ಅವರು ಸ್ವರ್ಣ ಪದಕ ಪಡೆದಾಗ ನಾವು ಅನುಭವಿಸಿದ ಪುಳಕ ಮತ್ತೆ ನಮ್ಮ ಅನುಭವಕ್ಕೆ ಬರಬೇಕಾದರೆ, ಹೊಸ ಬಗೆಯ ಮಾರ್ಗಗಳನ್ನು ಹುಡುಕಬೇಕು. ಮತ್ತೆ ಮತ್ತೆ ಒಲಿಂಪಿಕ್ಸ್ ಪದಕ ಕೊಡುವಾಗ, ಅಲ್ಲಿ ನಮ್ಮ ರಾಷ್ಟ್ರಗೀತೆ ಜನಗಣಮನ ಮೊಳಗುವಂತಾಗಬೇಕಾದರೆ, ನಮ್ಮ ರಾಷ್ಟ್ರಧ್ವಜ ಇತರೆಲ್ಲರಿಗಿಂತ ಅಲ್ಲಿ ಮತ್ತೆ ಮತ್ತೆ ಮೇಲೆ ಹಾರಬೇಕೆಂತಾದರೆ, ಈಗಿನ ಕ್ರೀಡಾ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯಾಗಬೇಕು ಇಲ್ಲವೇ ಖಾಸಗಿ ವಲಯ ಇದರ ಮುಂದಾಳತ್ವ ವಹಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಮೊದನೆಯದು ಅಸಾಧ್ಯವೆನಿಸುವಂತಿದೆ. ಎರಡನೆಯದು ಪ್ರಯೋಗಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT