ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೃತೀಯ ರಂಗದ ರಾಜಕಾರಣದ ಸುತ್ತಮುತ್ತ...

ಅಕ್ಷರ ಗಾತ್ರ

ಹದಿನಾರನೆಯ ಲೋಕಸಭೆಗಾಗಿ ಜರುಗಬೇಕಿರುವ ಸಾರ್ವತ್ರಿಕ ಚುನಾವಣೆ ಇನ್ನು ಕೆಲವು ತಿಂಗಳುಗಳ ಅಂತರದಲ್ಲಿದೆ. ಈ ಹಿನ್ನೆಲೆಯಲ್ಲಿ ಪುನಃ ತೃತೀಯ ರಂಗದ ರಚನೆಯ ಸುದ್ದಿಗಳು ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ನಿಜ, ನಮ್ಮ ರಾಷ್ಟ್ರದ ರಾಜಕಾರಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರತುಪಡಿಸಿ, ತೃತೀಯ ಶಕ್ತಿ ಪರ್ಯಾಯವಾಗಿ, ಸಕಾರಾತ್ಮಕವಾಗಿ ಹೊರಹೊಮ್ಮಲು ಸಾಕಷ್ಟು ಅವಕಾಶಗಳಿವೆ.

ಪ್ರಸ್ತುತ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ, ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು, ಬಿಜು ಜನತಾದಳದ ನವೀನ್ ಪಟ್ನಾಯಕ್ ಇತ್ಯಾದಿ ಪ್ರಾದೇಶಿಕ ಪಕ್ಷಗಳ ಧುರೀಣರು `ಫೆಡರಲ್ ಫ್ರಂಟ್' ಎಂಬ ಹೆಸರಿನಲ್ಲಿ ತೃತೀಯ ರಂಗವನ್ನು ರಚಿಸಲು ಉತ್ಸುಕರಾಗಿದ್ದಾರೆ. ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಜೆಡಿಯುನ ನಿತೀಶ್ ಕುಮಾರ್ ಸಹ ಈ ಹಾದಿಯಲ್ಲೇ ಸಾಗುವ ಸೂಚನೆಗಳು ಕಂಡು ಬರುತ್ತಿವೆ. ಆದರೆ ಹಿಂದೆ ತೃತೀಯ ರಂಗದ ಪ್ರಯೋಗದಲ್ಲಿ ಸೂತ್ರಧಾರಿ ಪಾತ್ರವಹಿಸಿದ ಎಡಪಕ್ಷಗಳು ತಣ್ಣಗಿವೆ. ಇದು ಗಮನಿಸಬೇಕಾದ ಅಂಶ.

ತೃತೀಯ ರಂಗದ ನಡೆಯನ್ನು ಅವಲೋಕಿಸಿದರೆ, ಅದು ಅಷ್ಟೇನೂ ಯಶಸ್ವಿಯಾಗಿಲ್ಲ ಎಂದೇ  ಹೇಳಬಹುದು. ಹದಿನೇಳು ವರ್ಷಗಳ ಹಿಂದೆ ದೇವೇಗೌಡ ನೇತೃತ್ವದ `ಯುನೈಟೆಡ್ ಫ್ರಂಟ್' ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅದಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿತ್ತು. ಆದರೆ  ಅದು ಉಳಿದಿದ್ದು ಅಲ್ಪಾವಧಿ ಮಾತ್ರ. 2009ರಲ್ಲಿ ಜರುಗಿದ ಚುನಾವಣೆಯ ಸಂದರ್ಭದಲ್ಲಿ ತೃತೀಯ ರಂಗ ಅಸ್ತಿತ್ವದಲ್ಲಿತ್ತು. ಆದರೆ ಅದರ ಪ್ರದರ್ಶನ ಆಶಾದಾಯಕವಾಗಿರಲಿಲ್ಲ. ಹಿಂದಿಗಿಂತಲೂ ಅದು ಕಡಿಮೆ ಸೀಟುಗಳನ್ನು ಪಡೆಯಿತು.

ಮೊದಲ ಬಾರಿ ತೃತೀಯ ರಂಗ ರಚನೆಯಾದಾಗ, ಅದರ ಬಗೆಗೆ ಹಲವರು ಭರವಸೆಯನ್ನಿಟ್ಟುಕೊಂಡಿದ್ದರು. ಕನಸುಗಳು ಇದ್ದವು. ಆದರೆ ಅವು ಸಾಕಾರಗೊಳ್ಳಲಿಲ್ಲ. ಇದಕ್ಕೆ ಹಲವು ಕಾರಣಗಳಿವೆ. 2009ರ ಚುನಾವಣೆಯ ಮುನ್ನ ರಚನೆಗೊಂಡ ತೃತೀಯ ರಂಗದ ರೂಪುರೇಷೆಗಳನ್ನು ವಿಶ್ಲೇಷಣಾ ಒರೆಗಲ್ಲಿಗೆ ಒಳಪಡಿಸಿದಾಗ ಈ ಕೆಳಕಂಡ ಅಂಶಗಳು ಕಂಡು ಬರುತ್ತವೆ.

- ತೃತೀಯ ರಂಗವೆಂಬುದು ಒಂದು ತತ್‌ಪೂರ್ವ ವ್ಯವಸ್ಥೆ ಎಂಬಂತೆ ಗೋಚರಿಸುತ್ತಿತ್ತು. ಅಂದರೆ ಅದು ಚುನಾವಣೆಯನ್ನು ಎದುರಿಸಲು ಮಾತ್ರ ಕಟ್ಟಿದ, ಸೀಮಿತ ಉದ್ದೇಶದ ಜಂಟಿ ಕಾರ್ಯಕಲಾಪಗಳಿರುವ ತಾತ್ಕಾಲಿಕ ವ್ಯವಸ್ಥೆಯೇನೋ ಎಂಬ ಭಾವನೆಯನ್ನು ಅನೇಕ ಜನರಲ್ಲಿ ಮೂಡಿಸಿತ್ತು.

- ಅದರ ಪ್ರಾಥಮಿಕ ಬಾಧಕ ಅಂಶವಾಗಿದ್ದುದು ಕಾಂಗ್ರೆಸ್ಸಿನ ವಿರೋಧ. ಆದರೆ ಇದು ಕೂಡ (ಈ ರಂಗದ ಬಹುತೇಕ ಪಕ್ಷಗಳಿಗೆ) ಅನಿಶ್ಚಿತತೆಯ ಆಯಾಮವನ್ನು ಹೊಂದಿತ್ತು. ಬಿಜೆಪಿಯನ್ನು ಅಂತಹ ಪಕ್ಷಗಳು ವಿರೋಧಿಸುತ್ತಿದ್ದರೂ, ಎಡಪಕ್ಷಗಳನ್ನು ಹೊರತುಪಡಿಸಿ, ಅವು ಅದರೊಡನೆ ಹಿಂದೆ ಸಖ್ಯವನ್ನು ಹೊಂದಿದ್ದವು. ಒಮ್ಮೆ  ತೃತೀಯ ರಂಗದ ಸಂಚಾಲಕರಾಗಿದ್ದ ತೆಲುಗು ದೇಶಂನ ಚಂದ್ರಬಾಬು ನಾಯ್ಡು ತಮ್ಮ ಪಕ್ಷದ ರಾಜಕೀಯ ಲಾಭಕ್ಕಾಗಿ ಎನ್‌ಡಿಎ ಜೊತೆ ಕೈಜೋಡಿಸಿದ್ದನ್ನು ಸ್ಮರಿಸಬಹುದು.

- ತೃತೀಯ ರಂಗದ ಅಂಗಪಕ್ಷಗಳಲ್ಲಿ ಎಡಪಕ್ಷಗಳನ್ನು ಹೊರತುಪಡಿಸಿ, ಯಾವುದೇ ರೀತಿಯ ಸೈದ್ಧಾಂತಿಕ ನಿಲುವುಗಳ ಮತ್ತು ನೀತಿಗಳ ಸುಸಂಬದ್ಧತೆಯಿರಲಿಲ್ಲ. ಅಣ್ಣಾ ಡಿಎಂಕೆಯ ಪ್ರಣಾಳಿಕೆಯಲ್ಲಿ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಮತ್ತು ಸೇತುಸಮುದ್ರದ ರಕ್ಷಣೆಯ ಪ್ರಸ್ತಾಪವಿತ್ತು. ತೆಲುಗುದೇಶಂ ಪಕ್ಷ ಅನೂಚಾನವಾಗಿ ವಿಶ್ವಬ್ಯಾಂಕ್‌ನ ಆರ್ಥಿಕ ಸುಧಾರಣೆಗಳನ್ನು ಎತ್ತಿ ಹಿಡಿಯುತ್ತಾ ಬಂದಿತ್ತು. (ಈಗಲೂ ಆ ಪಕ್ಷದ ಧೋರಣೆ ಇದೇ ಆಗಿದೆ). ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷ ಪ್ರತ್ಯೇಕ ತೆಲಂಗಾಣ ರಾಜ್ಯದ ಸ್ಥಾಪನೆಯ ಅಜೆಂಡಾ ಹೊಂದಿತ್ತು. ಸಿಪಿಎಂ ಪಕ್ಷ ಸಂಯುಕ್ತ ಆಂಧ್ರ ಪ್ರದೇಶಕ್ಕೆ ಬದ್ಧವಾಗಿತ್ತು. ಮರುಮಲರ್ಚಿ ಡಿಎಂಕೆ (ಎಂಡಿಎಂಕೆ.) ಎಲ್‌ಟಿಟಿಇ ಪರವಾಗಿತ್ತು. ಆದರೆ ಅಂತಹ ನಿಲುವನ್ನು ತೃತೀಯ ರಂಗದ ಇತರ ಪಕ್ಷಗಳು ಹೊಂದಿರಲಿಲ್ಲ.

- ಎಡಪಕ್ಷಗಳನ್ನು ಹೊರತುಪಡಿಸಿ, ಈ ರಂಗದ ಎಲ್ಲ ಪಕ್ಷಗಳು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೇರುವ ಆಯ್ಕೆಯ ಬಾಗಿಲನ್ನು ತೆರೆದುಕೊಂಡೇ ಇದ್ದವು.

1980ರಲ್ಲಿ ಜನತಾ ಪಕ್ಷ ಅಧಿಕಾರವನ್ನು ಕಳೆದುಕೊಂಡಿತು. ಅನಂತರದ ಅವಧಿಯಲ್ಲಿ, ಪ್ರಾದೇಶಿಕ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗಳ ಹಿತಾಸಕ್ತಿಗಳನ್ನು ಒಗ್ಗೂಡಿಸುವ ಸಲುವಾಗಿ ಕೆಲವು ಪಕ್ಷಗಳು ಕಾಂಗ್ರೆಸ್ಸಿನ ಪ್ರಾಬಲ್ಯದ ವಿರುದ್ಧ ಸೆಡ್ಡುಹೊಡೆದವು. ಈ ಪ್ರಕ್ರಿಯೆಗೆ ಎರಡು ಸಾಮಾಜಿಕ ಸ್ತರಗಳು ಬಲ ನೀಡಿದವು - (1) ಪ್ರಾಂತೀಯ ಮಟ್ಟದ ಪ್ರಬಲ ಜಾತಿಗಳ ನೇತೃತ್ವವಿದ್ದ ರೈತಾಪಿವರ್ಗ ಮತ್ತು (2) ಮಧ್ಯಮವರ್ಗಗಳ ವೃತ್ತಿಪರರು, ವ್ಯಾಪಾರಸ್ಥರು ಮತ್ತು ಉದ್ಯಮಪತಿಗಳನ್ನು ಒಳಗೊಂಡ ನಗರ ಪ್ರದೇಶಗಳ ಜನವರ್ಗ.

ಇವೆರಡೂ ವರ್ಗಗಳು, ರಾಜಕೀಯ ಅಧಿಕಾರ ಮತ್ತು ಆರ್ಥಿಕ ಸಂಪನ್ಮೂಲಗಳ ಮೇಲೆ ತಮ್ಮ ಹಿಡಿತವನ್ನು ಸ್ಥಾಪಿಸಲು ದೊಡ್ಡ ಉದ್ಯಮಪತಿಗಳು ಮತ್ತು ಮೆಟ್ರೊಪಾಲಿಟನ್ ಮಧ್ಯಮ ವರ್ಗದವರ ವಿರುದ್ಧ ಸೆಣಸಾಟದಲ್ಲಿ ತೊಡಗಿದವು.  ಒಕ್ಕೂಟ ವ್ಯವಸ್ಥೆ (ಫೆಡರಲಿಸಮ್), ಪ್ರಜಾಸತ್ತಾತ್ಮಕ ಸುಧಾರಣೆಗಳು ಮತ್ತು ಆರ್ಥಿಕ ಪುನರ್ವಿತರಣದಂತಹ ನೀತಿಗಳ ರಾಜಕೀಯ ಕಾರ್ಯಸೂಚಿಯಲ್ಲಿ ಈ ಸೆಣಸಾಟ ಪ್ರತಿಫಲನವನ್ನು ಕಂಡಿತು. ಇದು ಆ ವರ್ಗಗಳ ಏಕತೆಗೆ, ಸುಸಂಗತತೆ ಮತ್ತು ಪುಷ್ಟಿಯನ್ನು ನೀಡಿತು.

ಅಲ್ಲದೆ, ಕಾಂಗ್ರೆಸ್ಸಿನ ಏಕಪಕ್ಷದ ಸ್ವಾಮ್ಯಕ್ಕೆ ಇತಿಶ್ರೀ ಹಾಡಿತು. ಹೀಗೆ ಭಾರತದ ರಾಜಕಾರಣವನ್ನು ಮತ್ತಷ್ಟು ಪ್ರಜಾಪ್ರಭುತ್ವೀಕರಿಸಿತು. ಈ ಬೆಳವಣಿಗೆಗಳಿಂದ 1989ರಲ್ಲಿ ಕಾಂಗ್ರೆಸ್ ಪರಾಭವಗೊಂಡು ಜನತಾ ದಳದ ವಿ. ಪಿ. ಸಿಂಗ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಇದು ಕೂಡ ಒಂದರ್ಥದಲ್ಲಿ, ತೃತೀಯ ರಂಗದ ಕೊಡುಗೆ ಎಂದು ಪರಿಗಣಿಸಬಹುದು.

ಆದರೆ 1990ರ ನಂತರದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣದ ಅವಧಿಯಲ್ಲಿ ಪ್ರಾದೇಶಿಕ ಪಕ್ಷಗಳು, ಕಾಂಗ್ರೆಸ್ ಮತ್ತು ಬಿಜೆಪಿಯ ನೀತಿಗಳ ನೆರಳಲ್ಲೇ ಮುನ್ನಡೆದವು. ತಮಿಳುನಾಡಿನ ದ್ರಾವಿಡ ಪಕ್ಷಗಳು, ಕರ್ನಾಟಕದ ಜೆಡಿ (ಎಸ್), ಆಂಧ್ರ ಪ್ರದೇಶದ ತೆಲುಗು ದೇಶಂ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ, ಮಹಾರಾಷ್ಟ್ರದ ಎನ್‌ಸಿಪಿ, ಒಡಿಶಾದ ಬಿಜು ಜನತಾ ದಳ, ಜಾರ್ಖಂಡ್‌ನ ಜಾರ್ಖಂಡ್ ಮುಕ್ತಿ ಮೋರ್ಚಾ, ಬಿಹಾರದ  ಜೆ.ಡಿ.(ಯು), ಉತ್ತರ ಪ್ರದೇಶದ ಸಮಾಜವಾದಿ ಮತ್ತು ಬಹುಜನ ಸಮಾಜ ಪಕ್ಷಗಳು ಅಧಿಕಾರದಲ್ಲಿದ್ದ ಅವಧಿಯಲ್ಲಿ, ತಮ್ಮ ತಮ್ಮ ರಾಜ್ಯಗಳಲ್ಲಿನ ಮಾನವ ಮತ್ತು ನಿಸರ್ಗದ ಸಂಪನ್ಮೂಲಗಳನ್ನು ಅತ್ಯಂತ ಹೇಯ ರೀತಿಯಲ್ಲಿ ಸುಲಿಗೆ ಮಾಡಲು ವಿಪುಲ ಅವಕಾಶಗಳನ್ನು ಒದಗಿಸಿದವು. ಇದಕ್ಕಾಗಿ ಜನರನ್ನು ಒಟ್ಟು ಮಾಡಲು, ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಅಂಧಾಭಿಮಾನದ ವಿವಿಧ ರೂಪಗಳನ್ನು ಬಳಸಲಾಯಿತು.

ಈ ಬೆಳವಣಿಗೆಯ ಪ್ರೇರಕಶಕ್ತಿಯಾಗಿರುವವರು ಗ್ರಾಮೀಣ ಪ್ರದೇಶಗಳ ಶ್ರೀಮಂತ ರೈತರು. ಇವರಿಗೆ ಕೃಷಿಯನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ವಾಣಿಜ್ಯೀಕರಣಕ್ಕೆ ಒಳಪಡಿಸುವ ಆಕಾಂಕ್ಷೆಗಳಿವೆ. ಗ್ರಾಮೀಣ ಪ್ರದೇಶಗಳ ಬಂಡವಾಳಿಗರಾಗಿ ಪರಿವರ್ತನೆಗೊಂಡು ತಮ್ಮ ಯಾಜಮಾನ್ಯವನ್ನು ನಿರಂತರವಾಗಿ ಮುಂದುವರೆಸುವ ಆಶಯಗಳನ್ನು ಅವರು ಹೊಂದಿದ್ದಾರೆ. ಇಂತಹವರ ಬೆಂಬಲವಿರುವ ಅನೇಕ ಪ್ರಾದೇಶಿಕ ಪಕ್ಷಗಳು ಆರ್ಥಿಕ ಸುಧಾರಣೆಗಳ ದೊಡ್ಡ ವಕ್ತಾರರಂತೆ ವರ್ತಿಸುವುದರಲ್ಲಿ ಅಚ್ಚರಿಯೇನಿದೆ? ಆದುದರಿಂದ ಇಂತಹ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಸಹಜ ಮಿತ್ರಪಕ್ಷಗಳೆಂದು ಅರ್ಥೈಸಬಹುದು.

ಇಂತಹ ಪ್ರಾದೇಶಿಕ ಪಕ್ಷಗಳ ಪರಿವರ್ತಿತ ಕಾರ್ಯಸೂಚಿಯಲ್ಲಿ, ರ‌್ಯಾಡಿಕಲ್ ಅಥವಾ ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಸ್ಥಳವಿದೆಯೆ? ಹೆಚ್ಚಿನ ಸಂದರ್ಭಗಳಲ್ಲಿ ಕೇವಲ ಅಧಿಕಾರಗ್ರಹಣವನ್ನಷ್ಟೇ ಗುರಿಯಾಗಿ ಹೊಂದಿರುವ ಈ ಪ್ರಾದೇಶಿಕ ಪಕ್ಷಗಳ ಜೊತೆ ಸೈದ್ಧಾಂತಿಕ ಸ್ಥಿರತೆ ಹೊಂದಿರುವ ಎಡಪಕ್ಷಗಳು ಹೇಗೆ ಸಾಗುತ್ತವೆ ಎಂಬುದೂ ನಮ್ಮ ಮುಂದಿರುವ ಗಹನ ರಾಜಕೀಯ ಪ್ರಶ್ನೆಗಳಲ್ಲಿ ಒಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT