ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಮೆಗಳ್ಳತನಕ್ಕೆ ಕಡಿವಾಣ

ಮಹಾನ್ ಚೇತನಗಳ ಹೆಸರಿನಲ್ಲಿ ರಜೆಗಳ ಬೇಕಾಬಿಟ್ಟಿ ಬಳಕೆ ಬೇಡ
Last Updated 14 ಮೇ 2015, 19:30 IST
ಅಕ್ಷರ ಗಾತ್ರ

ಬದುಕಿನ ಮಹತ್ವಪೂರ್ಣ ದಿನಾಚರಣೆಗಳ ಹಿನ್ನೆಲೆಯಲ್ಲಿ ನಮ್ಮ ರಾಷ್ಟ್ರ ಮತ್ತು ವಿವಿಧ ರಾಜ್ಯಗಳಲ್ಲಿ ನೀಡಲಾಗುವ ಸರ್ಕಾರಿ ರಜೆಗಳನ್ನು ನಿರ್ಲಜ್ಜ ಸ್ಥಿತಿಯ ಮೋಜು-ಮಸ್ತಿಗಳ ಮೂಲಕ ವಿವೇಚನಾರಹಿತವಾಗಿ ಕಳೆಯುತ್ತಾ ದುಡಿಮೆ ಗಳ್ಳತನದ ಸಾಕ್ಷಾತ್ ಪ್ರತೀಕಗಳಾಗುತ್ತಿರುವವರನ್ನು ನಾವು ಹೆಜ್ಜೆ ಹೆಜ್ಜೆಗೂ ಕಾಣುತ್ತಿದ್ದೇವೆ.

ಆದರೆ, ಕಾಯಕದ ಮಹತ್ವವನ್ನು ಸೂಕ್ಷ್ಮವಾಗಿ ಅರಿತಿದ್ದ ಮಹಾಪುರುಷ ಬಸವಣ್ಣನ ‘ಜಯಂತಿಗೆ ನೀಡುವ ರಜೆಯನ್ನು ಸರ್ಕಾರ ವಾಪಸ್ ಪಡೆಯಬೇಕು. ಪ್ರಜ್ಞಾವಂತ ನಾಗರಿಕರು, ಬುದ್ಧಿಜೀವಿಗಳು ಇದನ್ನು ಬೆಂಬಲಿಸಬೇಕು’ ಎಂದು ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅಂತರಂಗಪೂರ್ವಕವಾಗಿ ಈಚೆಗೆ ಒತ್ತಾಯಿಸಿರುವುದು ನಿಜಕ್ಕೂ ವಿವೇಚನಾಶೀಲವಾದ ಹೆಮ್ಮೆಯ ಸಂಗತಿ. ನಾಡಿನ ಮುಖ್ಯಮಂತ್ರಿ ಸಮ್ಮುಖದಲ್ಲಿ ಅಪಾರ ಜನಸಂದಣಿಯ ನಡುವೆ ಸಹಜವಾಗಿ ಮೂಡಿಬಂದಿರುವ ಈ ಸಂವೇದನಾಪೂರ್ಣ ಮನವಿಯನ್ನು ನಾವೆಲ್ಲಾ ಬುದ್ಧಿಪೂರ್ವಕವಾಗಿ ಬೆಂಬಲಿಸಬೇಕಾಗಿದೆ.

ಕಳೆದ ಡಿಸೆಂಬರ್ ಕೊನೆಯಲ್ಲಿ ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಜಿಲ್ಲೆಯ ಕುಪ್ಪಳಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ‘ಇನ್ನು ಮುಂದೆ ಈ ದಿನವನ್ನು ಕರ್ನಾಟಕ ಸರ್ಕಾರವು ರಜೆರಹಿತ ವೈಚಾರಿಕ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ’ ಎಂದು ಘೋಷಿಸಿದ್ದಾರೆ. ಹಾಗೆಯೇ ಈಚಿನ ಜನವರಿಯಲ್ಲಿ ಚಾಮರಾಜನಗರದ ಬಳಿ ನಡೆದ ಬೌದ್ಧ ಸಮ್ಮೇಳನದಲ್ಲಿ ಕೇಳಿ ಬಂದ ‘ಬುದ್ಧಪೂರ್ಣಿಮಾ ದಿನದ ಸರ್ಕಾರಿ ರಜೆಯ ಬೇಡಿಕೆ’ ಯನ್ನು ಸಾರಾಸಗಟಾಗಿ ತಿರಸ್ಕರಿಸಿದ ಮುಖ್ಯಮಂತ್ರಿ, ‘ಈ ಬಗೆಯ ರಜೆಗಳಿಗೆ ನಾನು ಸಮ್ಮತಿಸುವುದಿಲ್ಲ; ನಮ್ಮ ದಾರ್ಶನಿಕರಿಗೆ ಬೇಜವಾಬ್ದಾರಿಯ ಮೂಲಕ ನಾವು ಅಗೌರವ ತೋರುವುದು ಸೂಕ್ತವಲ್ಲ’ ಎಂದು ಖಚಿತವಾಗಿ ಹೇಳಿದ್ದಾರೆ. 

ಇಷ್ಟಲ್ಲದೆ ಹಿಂದಿದ್ದ ಸರ್ಕಾರವು ಕೆಲವರ್ಷ ಗಳ ಹಿಂದೆ ಕನಕ ಮತ್ತು ವಾಲ್ಮೀಕಿ ಜಯಂತಿಗೆ ಒಟ್ಟಿಗೆ ರಜೆ ಘೋಷಿಸಿದ ದಿನದಂದು ತೀರಾ ಆಕಸ್ಮಿಕವಾಗಿ ನಾನು ಇದೇ ಸಿದ್ದರಾಮಯ್ಯ ಅವರೊಡನೆ ಲೋಕಾಭಿರಾಮದ ಚರ್ಚೆಯಲ್ಲಿದ್ದೆ. ಆಗ ಅವರು ಮಾತಿನ ನಡುವೆ ‘ಈ ಬಗೆಯ ರಜೆಗಳು ನಮ್ಮನ್ನು ಸೋಮಾರಿತನದ ಕೊಳಕು ಕೊಳ್ಳಕ್ಕೆ ತಳ್ಳುತ್ತವಲ್ಲವೆ?’ ಎಂದು ಪ್ರತಿಕ್ರಿಯಿಸಿದ್ದರು. ಆದ್ದರಿಂದ ನಮ್ಮ ನಡುವೆಯೇ ತುಂಬಿತುಳುಕುತ್ತಿರುವ ಹೊಣೆಗೇಡಿತನದ ವಿರುದ್ಧ ಕಿಂಚಿತ್ತಾದರೂ ನಾವು ಎಚ್ಚೆತ್ತುಕೊಳ್ಳಲು ಇದು ಸಕಾಲವಾಗಿದೆ.

ಸಾವಿರಾರು ವರ್ಷಗಳ ಹೆಮ್ಮೆಯ ಸಾಂಸ್ಕೃತಿಕ ಮಹತ್ವವನ್ನು ಹೊಂದಿರುವ ನಮ್ಮ ಕನ್ನಡ ಪರಂಪರೆಯು ಮಾನವೀಯತೆ, ಜಾತ್ಯತೀತ ನಿಲುವುಗಳು ಮತ್ತು ಜನಪರ ಚಿಂತನೆಯ ಸಾಕಾರಕ್ಕಾಗಿ ಕಾಲಕಾಲಕ್ಕೆ ತೀವ್ರವಾಗಿ ಹಾರೈಸಿರುವುದನ್ನು ನಾವು ಸ್ಪಷ್ಟವಾಗಿ ಕಾಣುತ್ತಲೇ ಬಂದಿದ್ದೇವೆ. ಅಕ್ಷರಶಃ ಶ್ರಮಜೀವಿಗಳ ಋಣದ ಮಕ್ಕಳಾಗಿರುವ ನಾಡಿನ ಎಲ್ಲಾ ಅನುಕೂಲಕರ ಸ್ಥಿತಿಯ ಐಷಾರಾಮಿ ಜನವರ್ಗವು ಈ ಬಗ್ಗೆ ತೆರೆದ ಮನಸ್ಸಿನಿಂದ ಆಲೋಚಿಸಿ ಕ್ರಿಯಾಶೀಲವಾಗಬೇಕಾಗಿದೆ. ವಿಶ್ವದ ತೀರಾ ಹಿಂದುಳಿದ ರಾಷ್ಟ್ರಗಳಲ್ಲಿ ಒಂದಾಗಿರುವ ಮತ್ತು ಇಲ್ಲಿನ ಶ್ರೀಸಾಮಾನ್ಯನ ಮೂಲ ಸೌಕರ್ಯಗಳ ವಿಷಯದಲ್ಲಿ ಕಿಂಚಿತ್ತೂ ಕಾಳಜಿಯಿಲ್ಲದ ವಾತಾವರಣದಲ್ಲಿ ಬದುಕು ನೂಕುತ್ತಿರುವ ನಾವೆಲ್ಲ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಾಗಿದೆ.

ಈ ದಿಶೆಯಲ್ಲಿ ಸರ್ಕಾರಿ ರಜೆಗಳಿಗೆ ಸಾಧ್ಯವಾದಷ್ಟೂ ಕಡಿವಾಣ ಬೀಳಬೇಕು. ದುಡಿಯದೆ, ನಿರ್ಲಜ್ಜ ನಡೆಯಲ್ಲಿ ಹೇಗೆಂದರೆ ಹಾಗೆ ಒಟ್ಟು ಸಮಾಜದ ಬಗ್ಗೆ ಕನಿಷ್ಠ ತಿಳಿವಳಿಕೆ ಮತ್ತು ಹೊಣೆಗಾರಿಕೆ ಇಲ್ಲದೆ, ಕೇವಲ ತಿಂದುಂಡು ರೋಗಿಷ್ಠರಾಗಿ ಕಾಲನೂಕುವ ಮೆಣೆಗಾರಿಕೆಯ ಮತ್ತಿನ ಕ್ಷಣಗಳಿಗೆ ನಾವು ಮಂಗಳ ಹಾಡಬೇಕು. ದೃಢನಿರ್ಧಾರದ ಮೂಲಕ ಆ ಗಾಂಭೀರ್ಯದ ದಿನಗಳಿಗೆ ನಾವೆಲ್ಲಾ ಹಾರೈಸೋಣ. ಕರ್ನಾಟಕ ಸರ್ಕಾರ ಮೊದಲ ಹಂತದಲ್ಲಿ ಕಾಯಕನಿಷ್ಠೆಯ ಅಪ್ರತಿಮ ಮೇಧಾವಿ ಬಸವಣ್ಣನವರ ಜಯಂತಿಯ ದಿನದ ಸರ್ಕಾರಿ ರಜೆಯನ್ನು ಹಿಂಪಡೆಯುವ ದಿಟ್ಟ ಮತ್ತು ಸೂಕ್ತ ನಿರ್ಧಾರವನ್ನು ವಿವೇಚನಾಪೂರ್ಣ ಜನತೆಯ ಜೊತೆಗಿನ ಚರ್ಚೆ ಮತ್ತು ಒಪ್ಪಿಗೆಯ ಮೂಲಕ ಇದೀಗ ತೆಗೆದುಕೊಳ್ಳಬೇಕಾಗಿದೆ. ಇದೇ ಬಗೆಯ ಸದಭಿರುಚಿ, ವಿವೇಕ ಮತ್ತು ಜವಾಬ್ದಾರಿಯುತ ಆರೋಗ್ಯಕರ ತೀರ್ಮಾನವನ್ನು ನಾವು ನಾಳೆ ಕನಕ, ವಾಲ್ಮೀಕಿ ಮತ್ತಿತರ ದಾರ್ಶನಿಕರ ದಿನಾಚರಣೆಗಳಿಗೂ ವಿಸ್ತರಿಸಲು ಸಾಧ್ಯವಾಗಬಹುದೆಂದು ನಾನು ಆಶಾವಾದಿಯಾಗಿದ್ದೇನೆ.

ಭಾರತದಂತಹ ಕೋಟ್ಯಂತರ ಅವಕಾಶವಿಹೀನ ಶ್ರೀಸಾಮಾನ್ಯರ ಬದುಕು ಹಸನಾಗಬೇಕಾದರೆ ಎಲ್ಲಾ ಕ್ಷೇತ್ರಗಳಲ್ಲೂ ಅರ್ಪಣಾಮನೋಭಾವದ ಶ್ರಮಜೀವಿಗಳು ಕಟಿಬದ್ಧರಾಗಿ ತಮ್ಮ ದುಡಿಮೆ ಮತ್ತು ಸದಭಿರುಚಿಯ ಮೂಲಕ ಮಾದರಿಯಾಗುವಂತಹ ದಿನಗಳಿಗಾಗಿ ನಾವು ಹಾತೊರೆಯಬೇಕು. ಈ ದಿಕ್ಕಿನಲ್ಲಿ ಭಾರತದ ಸ್ವಾತಂತ್ರ್ಯ ಉತ್ಸವ, ಗಣರಾಜ್ಯ ದಿನಾಚರಣೆ ಮುಂತಾದ ರಾಷ್ಟ್ರೀಯ ಮಹತ್ವದ ಕೆಲವು ಹಬ್ಬಗಳಿಗೆ ಮಾತ್ರ ಸರ್ಕಾರಿ ರಜಾಸೌಲಭ್ಯ ನೀಡುವುದು ಸೂಕ್ತ. ಉಳಿದಂತೆ ಖಾಸಗಿಯಾದ ಧಾರ್ಮಿಕ ಹಿತಾಸಕ್ತಿಯ ಮಹತ್ವದ ದಿನಗಳಿಗೆ ಕೆಲವು ನಿರ್ಬಂಧಿತ ರಜೆಗಳು ಸಾಕು.

ಇದರಾಚೆಗೂ ಸಾಂದರ್ಭಿಕ ಮತ್ತಿತರ ಹಕ್ಕಿನ ರಜೆಗಳಂತೂ ಇದ್ದೇ ಇವೆ. ಹೀಗಾಗಿ ಮಾನವತೆಯ ಬಹುದೊಡ್ಡ ಹರಿಕಾರರಾಗಿ, ಲೋಕಕಲ್ಯಾಣಕ್ಕಾಗಿ ಅಹರ್ನಿಶಿ ದುಡಿದ ಮಹಾನ್ ಚೇತನಗಳ ಹೆಸರಿನಲ್ಲಿ ಸರ್ಕಾರಿ ರಜೆಗಳನ್ನು ಬೇಕಾಬಿಟ್ಟಿಯಾಗಿ ಅನುಭವಿಸುವ ಹೊಣೆಗೇಡಿತನ ನಿಲ್ಲಬೇಕು. ವಿವಿಧ  ಜಯಂತಿಗಳ ದಿನ ಒಂದೆರಡು ಗಂಟೆಗಳ ಕಾಲ, ಆ ಸಂದರ್ಭದ ನಿಜವಾದ ಮಹತ್ವವನ್ನು ಸಾರುವ, ಅರ್ಥಪೂರ್ಣ ಭಾಷಣ ಮತ್ತು ಮುಕ್ತಸಂವಾದವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT