ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಗಳ ಬಡಜನರ ವಸತಿ ಸವಾಲು

Last Updated 26 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಾರ್ವಜನಿಕ ಆಸ್ತಿಯನ್ನು ಅಕ್ರಮ­ವಾಗಿ ಒತ್ತುವರಿ ಮಾಡಿ­ಕೊಂಡಿದ್ದಾರೆ ಎಂಬ ದೂರಿನ ಮೇರೆಗೆ ಸರ್ಕಾರಗಳು ನಗರ ಪ್ರದೇಶ­ಗಳ ಕೊಳೆಗೇರಿ ನಿವಾಸಿಗಳ ಗುಡಿಸಲುಗಳನ್ನು ಬುಲ್ಡೋ­­ಜರ್‌ ಮೂಲಕ ಧ್ವಂಸಗೊಳಿಸಿ­ರುವ, ಇದನ್ನು ಪ್ರತಿಭಟಿಸಿದವರನ್ನು ಥಳಿಸಿರುವ, ಬಂಧಿಸಿ­ರುವ ಹಾಗೂ ಬಲವಂತವಾಗಿ ಅವರನ್ನು ತೆರವು­ಗೊಳಿಸಿರುವ ಸುದ್ದಿಯನ್ನು ಆಗಾಗ ಕೇಳುತ್ತಲೇ ಇರುತ್ತೇವೆ.

ಬಡವರ ಮೇಲೆ ತಮ್ಮ ಅಧಿಕಾರದ ದರ್ಪ ತೋರುವ ಸರ್ಕಾರಗಳು, ಸರ್ಕಾರಿ ಭೂಮಿ­ಯನ್ನು ಗುಳುಂ ಮಾಡುವ ಸಿರಿವಂತ ಲೂಟಿಕೋರರ ವಿಷಯದಲ್ಲಿ ಮೃದು ಧೋರಣೆ ತೋರುತ್ತವೆ. ಆಗ ಬುಲ್ಡೋಜರ್‌­ಗಳು ಬರುವುದಿಲ್ಲ, ಲಾಠಿ ಚಾರ್ಜ್‌ ನಡೆಯು­ವುದಿಲ್ಲ, ಯಾರ ಬಂಧನವೂ ಆಗುವುದಿಲ್ಲ. ಅಷ್ಟೇ ಏಕೆ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿ­ರುವ ಭೂಮಿಯ ಜಪ್ತಿಯೂ ನಡೆಯುವುದಿಲ್ಲ!

ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ, ಸಮುದಾಯದ ‘ಮುಂಚಿತ, ಅರಿತ ಒಪ್ಪಿಗೆ’ ಪಡೆಯದೆ  ಬಲವಂತವಾಗಿ ಒಕ್ಕಲೆಬ್ಬಿಸು­ವುದು, ಅವರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇರುವುದು ಅಪರಾಧ.  ಇದು ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯೂ ಹೌದು.
ಕೊಳೆಗೇರಿ ನಿವಾಸಿಗಳಿಗೆ ಮನೆಗಳನ್ನು ನಿರ್ಮಿ­ಸುವುದರ ಮೂಲಕ ದೇಶದ ನಗರಗಳನ್ನು ‘ಕೊಳೆಗೇರಿ ಮುಕ್ತ’­ಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2011ರಲ್ಲಿ ರಾಜೀವ್‌ ಆವಾಸ್‌ ಯೋಜನೆ (ಆರ್‌ಎವೈ) ಜಾರಿಗೆ ತಂದಿ­ದ್ದರೂ ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತ­ಗಳು ಕೊಳೆಗೇರಿ ನಿವಾಸಿಗಳನ್ನು ಬಲವಂತವಾಗಿ ಒಕ್ಕಲೆಬ್ಬಿಸುವ ಪ್ರಕರಣಗಳು ನಡೆಯು­ತ್ತಲೇ ಇವೆ.

ಈ ವಿಪರ್ಯಾಸ ನೋಡಿ. ದೇಶದಲ್ಲಿ ಶೇ 96ರಷ್ಟು  ಮನೆಗಳ ಬೇಡಿಕೆ ಇರುವುದು ಆರ್ಥಿಕ­­ವಾಗಿ ಹಿಂದುಳಿದ ವರ್ಗದ (ಇಡಬ್ಲ್ಯುಎಸ್‌) ಮತ್ತು ಕಡಿಮೆ ವರಮಾನ ಹೊಂದಿರುವ ಸಮು­ದಾಯಗಳಿಗೆ (ಎಲ್‌ಐಜಿ).  ಆದರೆ, ಬೆಂಗಳೂರಿ­ನಲ್ಲಿ ಗಗನದೆತ್ತರಕ್ಕೆ ಮುಖಮಾಡಿರುವ ಸಾವಿ­ರಾರು ಖಾಲಿ ಖಾಲಿ ಐಷಾರಾಮಿ ಫ್ಲ್ಯಾಟ್‌­ಗಳು ಈಗಾಗಲೇ ತಮ್ಮದೇ ಆದ ಮನೆಗಳನ್ನು ಹೊಂದಿ­ರುವ ಶ್ರೀಮಂತರ ಬಂಡವಾಳ ಹೂಡಿಕೆಯ ನಿರೀಕ್ಷೆ­ಯಲ್ಲಿವೆ!

ರಾಜೀವ್‌ ಆವಾಸ್‌ ಯೋಜನೆಯು ಜವಾ­ಹರ­­ಲಾಲ್‌ ನೆಹರೂ ರಾಷ್ಟ್ರೀಯ ನಗರ ಪುನರು­ಜ್ಜೀವನ ಅಭಿಯಾನದ (ಜೆ–ನರ್ಮ್‌) ಭಾಗ­ವಾಗಿದ್ದ ನಗರ ಪ್ರದೇಶದ ಬಡವರ ಮೂಲ ಸೇವೆಯ (ಬಿಎಸ್‌ಯುಪಿ) ಪರಿಷ್ಕೃತ ರೂಪ. ಜೆ–ನರ್ಮ್–ಬಿಎಸ್‌ಯುಪಿ ಯೋಜನೆಯ ಜಾರಿ­ಯಲ್ಲಿ ಆದ ಲೋಪಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಸರ್ಕಾರ ಕೆಲ ತಿದ್ದುಪಡಿ­ಗಳನ್ನು ಮಾಡಿ ರಾಜೀವ್‌ ಆವಾಸ್‌ ಯೋಜನೆ ಜಾರಿಗೊಳಿಸಿದೆ.

ನಗರ ಪ್ರದೇಶದ ಬಡವರು ಹೊಂದಿರುವ ಮನೆ ಹಾಗೂ ಭೂಮಿಯ ಮಾಲೀಕತ್ವಕ್ಕೆ ಕಾನೂನಿನ ಬಲ ಹಾಗೂ  ಒಕ್ಕಲೆಬ್ಬಿಸುವ ಭಯವಿಲ್ಲದೆ ಭದ್ರತೆಯಿಂದ ವಾಸಿಸುವ ಹಕ್ಕು  ನೀಡುವುದು,  ಯೋಜನೆಯ ಅನುಷ್ಠಾನದ ಬಗ್ಗೆ ಅವರೊಂದಿಗೆ ಸಮಾಲೋಚಿಸಿ  ಅವರ  ಸಹ­ಭಾಗಿತ್ವ ಪಡೆದುಕೊಳ್ಳುವುದು, ಅವರು ನೆಲೆಸಿ­ರುವ ಸ್ಥಳದಲ್ಲೇ ಮನೆಗಳ ಮರು ನಿರ್ಮಾಣ ಅಥವಾ ಅಭಿವೃದ್ಧಿ ಮಾಡುವುದು, ಸ್ಥಳಾಂತರ­ವನ್ನು ಅನಿವಾರ್ಯವಾದಲ್ಲಿ ಮಾತ್ರ ಮಾಡು­ವುದು ಹಾಗೂ  ಯಾವುದೇ ಸಂದರ್ಭ­ದಲ್ಲಿ ಅವರನ್ನು ಒಕ್ಕಲೆಬ್ಬಿಸದಂತೆ ನೋಡುವುದು. ಈ ಸಂಗತಿಗಳಿಗೆ ರಾಜೀವ್ ಆವಾಸ್‌ ಯೋಜನೆ­ಯಲ್ಲಿ ಮೊದಲ ಆದ್ಯತೆ ನೀಡಲಾಗಿದೆ.

ಬಡವರಿಗೆ ಮೀಸಲಿಡಲು ಭೂಮಿಯ ಕೊರತೆ ಇದೆ ಎಂಬ ರಾಜ್ಯ ಸರ್ಕಾರಗಳ ಕುಂಟು ನೆಪವನ್ನು ನಿಗ್ರಹಿಸುವುದ­ಕ್ಕಾಗಿಯೇ ಈ ಯೋಜನೆ­ಯಲ್ಲಿ ಹಲವು ನಿಯಮಗಳನ್ನು ರೂಪಿಸಲಾಗಿದೆ. ನಿಯಮಗಳ ಅನ್ವಯ, ಬಡವರಿಗೆ ಭೂಮಿ ಒದಗಿಸಲು ರಾಜ್ಯ ಸರ್ಕಾರ­ಗಳು ಭೂ ಸ್ವಾಧೀನ ಕಾಯ್ದೆಯನ್ನು ಬಳಸಬೇಕು. ಈ ಉದ್ದೇಶಕ್ಕಾಗಿ ಕಡ್ಡಾಯವಾಗಿ ಭೂ ಬ್ಯಾಂಕ್‌ ಸೃಷ್ಟಿಸಬೇಕು.  ಆರ್ಥಿಕ ಹಿಂದುಳಿದ ವರ್ಗದ ಮತ್ತು ಕಡಿಮೆ ವರಮಾನ ಹೊಂದಿರುವ ಸಮುದಾ­ಯದವರಿಗೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಮನೆ ನಿರ್ಮಾಣ ಯೋಜನೆಗಳ  ಜಾರಿ ಸಂದರ್ಭದಲ್ಲಿ ಭೂಮಿ  ಮೀಸಲಿರಿಸುವ ನಿಟ್ಟಿನಲ್ಲಿ ಕಾನೂನು ಜಾರಿಗೊಳಿಸ­ಬೇಕು.

ಕೊಳೆಗೇರಿ ನಿವಾಸಿಗಳಿಗೆ ಮಾಲೀಕತ್ವದ ಹಕ್ಕು ನೀಡಲು ಸರ್ಕಾರಗಳು ಹಿಂದೇಟು ಹಾಕುತ್ತಿರು­ವುದನ್ನು ಮನಗಂಡು, ಶಾಸನ ರಚಿಸಿ ಒತ್ತೆ ಇಡಬಹುದಾದ ಆಸ್ತಿ ಹಕ್ಕುಗಳನ್ನು ಅವರಿಗೆ ನೀಡುವಂತೆ ಸೂಚಿಸಲಾಗಿದೆ. ಇದರಲ್ಲಿ ಕೊಳೆ­ಗೇರಿ ನಿವಾಸಿಗಳ ಪ್ರಮುಖ ಬೇಡಿಕೆಯಾದ ‘ತುಂಡು ಭೂಮಿಯ ಹಕ್ಕು’ ಕೂಡ  ಸೇರಿದೆ.

ರಾಜೀವ್‌ ಆವಾಸ್‌ ಯೋಜನೆಯ ಪ್ರಮುಖ ಕೊರತೆ ಎಂದರೆ ಭವಿಷ್ಯದಲ್ಲಿ ನಗರಕ್ಕೆ ವಲಸೆ ಬರುವ ವಲಸಿಗರಿಗಾಗಿ ಮತ್ತು ಮುಂದಿನ ದಿನ­ಗಳಲ್ಲಿ ಕೊಳೆಗೇರಿಗಳು ಸೃಷ್ಟಿ ಆಗದಂತೆ ತಡೆ­ಗಟ್ಟಲು ನಗರ ಸಮಗ್ರ ಅಭಿವೃದ್ಧಿ  ಯೋಜನೆಯ ಮೂಲ ನಕ್ಷೆಯಲ್ಲಿ   ಭೂಮಿ ಮೀಸಲಿಡುವು­ದನ್ನು ಕಡ್ಡಾಯಗೊಳಿಸದೆ ಕೇವಲ ಐಚ್ಛಿಕ ಸುಧಾರಣೆಯಾಗಿ  ಇಟ್ಟಿರುವುದು.

ನಗರಗಳಿಗೆ ಕಿರು ಅವಧಿಗೆ ವಲಸೆ ಬರುವ­ವರಿಗಾಗಿ ‘ಸಾಮಾಜಿಕ ಬಾಡಿಗೆ ಮನೆಗಳ ನಿರ್ಮಾಣ’ಕ್ಕೆ  ಈ ಯೋಜನೆ­ಯಲ್ಲಿ ನಿರ್ದಿಷ್ಟ ನಿಯಮಗಳಿಲ್ಲ. ಈ ವಿಷಯದಲ್ಲಿ ಕೇಂದ್ರ ಸರ್ಕಾರವು ಬೇರೆ ದೇಶಗಳು ಜಾರಿಗೆ ತಂದಿರುವ ನಿಯಮಗಳನ್ನು ಅಳವಡಿಸಬಹುದಿತ್ತು. ವಿದೇ­ಶದ ಕೆಲವು ಸರ್ಕಾರಗಳು ಸಣ್ಣ ಅವಧಿಗೆ ನಗರಗಳಿಗೆ ವಲಸೆ ಬರುವ ಬಡವರು ನೀಡುವ ಮನೆ ಬಾಡಿ­ಗೆಗೆ ಸಬ್ಸಿಡಿ ನೀಡುತ್ತವೆ. ಇಂತಹ ಪ್ರಯತ್ನಗಳು ನಮ್ಮ ದೇಶದ ನಗರ ಪ್ರದೇಶದ ಬಡವರಿಗೆ ನೆರವಾಗುತ್ತಿತ್ತು. ಯೋಜನೆಯ ನ್ಯೂನತೆಗಳು ಒತ್ತಟ್ಟಿಗಿರಲಿ. ಅದರಲ್ಲಿನ ಉತ್ತಮ ಅಂಶಗಳು ಯಾವ ರೀತಿ ಜಾರಿಗೆ ಬಂದಿವೆ? ಉತ್ತರ ಹುಡುಕಿದಾಗ ಆಗುವುದು ನಿರಾಸೆ.

ಯೋಜನೆ ಕುರಿತಾಗಿ ಅಧಿಕಾರಿಗಳಲ್ಲಿ   ಜಾಗೃತಿ ಮೂಡಿಸಿದ್ದರೂ  ಕೊಳೆಗೇರಿ ನಿವಾಸಿ­ಗಳತ್ತ ರಾಜ್ಯ  ಸರ್ಕಾರಿ ಹಾಗೂ ಪಾಲಿಕೆಗಳ ಅಧಿಕಾರಿ­ಗಳು ತಮ್ಮ ಹಳೆಯ ನಿಷ್ಕರುಣ ವರ್ತನೆಯನ್ನೇ ತೋರುತ್ತಿದ್ದಾರೆ.  ಯೋಜನೆ­ಯು ಮುಖ್ಯವಾಗಿ  ಹೇಳಿರುವಂತೆ, ಅಧಿಕಾರಿ­ಗಳು  ಕೊಳೆಗೇರಿ ಸಮುದಾಯಗಳೊಂದಿಗೆ ಸಮಾ­ಲೋಚನೆ ನಡೆಸಿ ಅವರು ತಮ್ಮ ಅನಿಸಿಕೆ ಹೇಳಿಕೊಳ್ಳಲು ಅವಕಾಶ ಮಾಡಿಕೊಡುತ್ತಿಲ್ಲ. 

  ಜತೆಗೆ, ತಮ್ಮದೇ ಆದಂತಹ ವಸತಿ ನಿರ್ಮಾಣ ಯೋಜನೆ­ಯನ್ನು ರೂಪಿಸಲು ಅಲ್ಲಿನ ನಿವಾಸಿ­ಗಳಿಗೆ ಅವಕಾಶವನ್ನೂ ನೀಡುತ್ತಿಲ್ಲ. ರಾಜೀವ್‌ ಆವಾಸ್‌ ಯೋಜನೆಯ ಅಡಿಯಲ್ಲಿ ಆಸ್ತಿ ಹಕ್ಕುಗಳನ್ನು ನೀಡಲು ತಮಗೆ ಸಾಧ್ಯವಿಲ್ಲ ಎಂದು ಕೊಳೆಗೇರಿ ಜನರನ್ನು ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಯೋಜನೆ ಅಡಿಯಲ್ಲಿ ಜಿ+3 ಬಹು ಮಹಡಿ ಮನೆಗಳ ನಿರ್ಮಾಣಕ್ಕೆ ಸಮ್ಮತಿಸುವಂತೆಯೂ ಒತ್ತಾಯಿಸುತ್ತಿದ್ದಾರೆ.

ಇವೆಲ್ಲದರ ನಡುವೆ, ಕೊಳೆಗೇರಿ ನಿವಾಸಿಗಳ ಪರವಾಗಿ ಮತನಾಡುವ ವ್ಯಕ್ತಿಗಳು ಕೂಡ ಯೋಜನೆಯ ಮಾರ್ಗದರ್ಶಿ ಸೂತ್ರಗಳ ಕುರಿ­ತಾಗಿ ಬಡವರಿಗೆ ಸರಿಯಾದ ಮಾಹಿತಿ ನೀಡು­ತ್ತಿಲ್ಲ. ಅಧಿಕಾರಿಗಳ ರೀತಿಯಲ್ಲೇ ಇವರೂ ತಪ್ಪು ಮಾಹಿತಿ ನೀಡುತ್ತಿದ್ದಾರೆ ಮತ್ತು ಇದರಿಂದ ಯೋಜ­ನೆಯನ್ನು ನಿರಾಕರಿಸು­ವಂತೆ ಒತ್ತಾಯಿಸುತ್ತಿದ್ದಾರೆ.

ಇದನ್ನು ತಪ್ಪಿಸುವುದಕ್ಕಾಗಿ  ಯೋಜನೆಯ ನಿಯಮಗಳನ್ನು ಸ್ಥಳೀಯ ಭಾಷೆಗಳಲ್ಲಿ ಅದ­ರಲ್ಲೂ ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಭಾಷಾಂತ­ರಿಸ­ಬೇಕು. ಅದನ್ನು ಕೊಳೆಗೇರಿ ನಿವಾಸಿಗಳು ಸ್ವತಃ ಓದಿ ಅರ್ಥೈಸಿಕೊಂಡು ಯೋಜನೆ ಬೇಕು ಬೇಡ ಎಂಬ ಬಗ್ಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳು ವಂತೆ ಮಾಡಬೇಕು. ಆದರೆ  ಈಗ ಅವರು ಯೋಜನೆ ಬಗ್ಗೆ ತಮ್ಮ ಮುಖಂಡರು ಹಾಗೂ ಅಧಿಕಾರಿಗಳು ಏನು ಹೇಳುತ್ತಾರೊ ಅದನ್ನೇ ನಂಬಬೇಕಾಗಿದೆ.

ರಾಜೀವ್‌ ಆವಾಸ್‌ ಯೋಜನೆಯ ಹಿಂದೆ ನವ–ಉದಾರೀಕರಣದ ರಾಜಕೀಯ  ಇದೆ ಎಂಬುದು  ಕೊಳೆಗೇರಿ ನಿವಾಸಿಗಳ ಕೆಲ ಮುಖಂಡರ ಆರೋಪ. ನಿಜ ಹೇಳಬೇಕೆಂದರೆ, ಈ ಯೋಜನೆ ಕೊಳೆಗೇರಿ ನಿವಾಸಿಗಳ ಹೆಚ್ಚಿನ ಬೇಡಿಕೆಗಳನ್ನು ಪೂರೈಸುತ್ತದೆ. ಆದರೆ  ನಗರ ಬಡಜನರ ವಸತಿಗೆ ಸಾವಿರಾರು ಕೋಟಿ ರೂಪಾಯಿ ಲಭ್ಯವಾಗಬಹುದಾದ ಈ ಯೋಜ­ನೆಯ ಜಾರಿ  ಸಮರ್ಪಕ ರೀತಿಯಲ್ಲಿ ಆಗುತ್ತಿಲ್ಲ.

ದೇಶದ ವಿವಿಧ ನಗರಗಳ ಕೊಳೆಗೇರಿ ನಿವಾಸಿಗಳು ಆ ದಟ್ಟದರಿದ್ರ ಸ್ಥಿತಿಯಲ್ಲಿ ಜೀವಿ­ಸುವುದನ್ನು ಇನ್ನೂ ಮುಂದು­ವರಿಸ­ಬೇಕೆ? ಅವರಿಗೆ ಬೇಕಾಗಿರುವುದು  ಮನೆಗಳೋ? ಅಥವಾ ಸಿದ್ಧಾಂತಗಳೋ? ಈ ವಿಚಾರವನ್ನು ಮಾನವೀಯತೆ ದೃಷ್ಟಿಯಿಂದ ಯೋಚಿಸುವ ಅಗತ್ಯವಿದೆ.
-ಕಾತ್ಯಾಯಿನಿ ಚಾಮರಾಜ್‌ ,ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT